Rain Harvest: ಮಳೆನೀರು ಕೊಯ್ಲು ಅಳವಡಿಕೆಗೆ ಹೊಸ ತಂತ್ರಜ್ಞಾನ, ಅಂತರ್ಜಲ ವೃದ್ಧಿಗೆ ಜಲಮಂಡಳಿ ಮಾಸ್ಟರ್ ಪ್ಲ್ಯಾನ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಾಂಕ್ರೀಟಿಕರಣ ಜಾಸ್ತಿ ಆಗುತ್ತಿದೆ. ಜನಸಂಖ್ಯೆ ಹೆಚ್ಚಾದಂತೆಲ್ಲ, ಕುಡಿಯುವ ನೀರಿನ ಬಳಕೆ ಹೆಚ್ಚಾಗುತ್ತಿದೆ. ಆದರೆ ಅಂತರ್ಜಲ ಕಡಿಮೆ ಆಗುವ ಜೊತೆಗೆ ಮಳೆ ನೀರು ಇಂಗುವಂತೆ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಮಳೆನೀರು ಕೊಯ್ಲು ಕಡ್ಡಾಯವಿದ್ದರೂ ಸಹಿತ ಅದೆಷ್ಟೋ ಕಟ್ಟಡಗಳಿಗೆ ಮಳೆ ನೀರು ಕೊಯ್ಲು ಇಲ್ಲ. ಇದೀಗ ಗ್ರಾಹಕರು ಯಾರಾದರೂ ಮಳೆ ನೀರು ಕೊಯ್ಲು ಅಳವಡಿಕೆಗೆ ಮುಂದಾದರೆ ಅಂಥಹ ಮನೆಗಳಿಗೆ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಮಡಿ ಮಂಂಡಳಿ (BWSSB) ಅಧ್ಯಕ್ಷ ಡಾ.ರಾಮ್. ಪ್ರಸಾತ್ ಮನೋಹರ್ ಶುಭಸುದ್ದಿ ನೀಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 2026ರ ಮುಂಗಾರು ಋತುವಿನಲ್ಲಿ ಮಳೆ ಕಡಿಮೆ ಅಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಹಾಗೂ ಮೇಲ್ಮೈ ನೀರಿನ ಮೇಲಿನ ಅವಲಂಬನೆ ತಗ್ಗಿಸಲು ಬೆಂಗಳೂರು ಜಲಮಂಡಳಿಯು ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನಲ್ಲಿ ಮಳೆನೀರು ಕೊಯ್ಲು ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಿದೆ. ಈ ಮೂಲಕ ನಗರದಲ್ಲಿ ಅಂತರ್ಜಲ ಹೆಚ್ಚಿಸಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ.

ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಗ್ರಾಹಕರು ತಮ್ಮ ಕಟ್ಟಡಗಳಲ್ಲಿ ಅಳವಡಿಸಿಕೊಳ್ಳುವವರಿದ್ದರೆ ಜಲಮಂಡಳಿಯೇ ಖುದ್ದಾಗಿ ಅತ್ಯಾಧುನಿಕ ಹಾಗೂ ವಿನೂತನ ತಂತ್ರಜ್ಞಾನದ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲು ನೆರೆವಾಗುತ್ತೇವೆ, ಅದು ಹೇಗೆ ಎಂದು ಅಧ್ಯಕ್ಷರು ಶನಿವಾರ ವಿವರಿಸಿದರು.
ಕಡಿಮೆ ಜಾಗದಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಸುಲಭ
ಕೆಲವರು ಕಡಿಮೆ ಜಾಗವಿದೆ ಅಂತಲೂ ಅಥವಾ ಜಾಗದ ಕೊರತೆ ಇದೆ ಅಂತಲೂ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಅಂತಹ ಮನೆಗಳಿಗೆ ಅತ್ಯಂತ ಕಡಿಮೆ ಜಾಗದಲ್ಲಿ ಅಳವಡಿಸಬಹುದಾದ ಹೊಸ '3rd Generation' ತಂತ್ರಜ್ಞಾನ ಪರಿಚಯಿಸಲಾಗುತ್ತಿದೆ. ಇದು ಕಾವೇರಿ ನೀರು ಹಾಗೂ ಅಂತರ್ಜಲದ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆಗೊಳಿಸಲಿದೆ. ಈ ತಂತ್ರಜ್ಞಾನದಡಿ ಹೊಸ ರೀತಿಯ ಫಿಲ್ಟರ್ ಅಳವಡಿಸಿ ಇಂಗು ಗುಂಡಿಯ ವ್ಯವಸ್ಥೆ ಮಾಡಿಕೊಡಲಾಗುತ್ತದೆ.
ನೂತನ ಫಿಲ್ಟರ್ ನ ಕೆಲಸ, ವೈಶಿಷ್ಟ್ಯಗಳು
* ಇದರಲ್ಲಿ ಆಂಟಿ-ಚೋಕ್ (anti-choke) ನೇಯ್ಗೆಯನ್ನು ಹೊಂದಿರುವ SS316 ಮೆಶ್ ಅನ್ನು ಅಳವಡಿಸಲಾಗಿದೆ.
* ಫಿಲ್ಟರ್ ನ ಒಳಗಿರುವ ಸ್ಟ್ರೀಮ್ ಲೈನರ್ (Streamliner) ವಿನ್ಯಾಸವು ಒಳಬರುವ ನೀರಿನ ವೇಗವನ್ನು ಗರಿಷ್ಠಗೊಳಿಸುತ್ತದೆ.
* ಕೇವಲ ಗುರುತ್ವಾಕರ್ಷಣೆಯ (gravity) ಶಕ್ತಿಯನ್ನು ಬಳಸಿಕೊಂಡು 60 ಮೈಕ್ರಾನ್ ಮೆಶ್ ನಲ್ಲಿ ಶೇ.90 ಕ್ಕಿಂತ ಹೆಚ್ಚು ನೀರನ್ನು ಮರುಪಡೆಯುವ (recovery rate) ಅದ್ಭುತ ಸಾಮರ್ಥ್ಯವನ್ನು ಇದು ಹೊಂದಿದೆ.
* ಇದರಲ್ಲಿರುವ ರೆಗ್ಯುಲೇಟರಿ ಸಿಸ್ಟಮ್ (Regulatory system) ಮತ್ತು ಆಟೋಮ್ಯಾಟಿಕ್ ವಿಂಡೋ (automatic window) ಒಟ್ಟಾಗಿ ಕೆಲಸ ಮಾಡಲಿದೆ. ನೀರಿನಲ್ಲಿರುವ ಎಷ್ಟೇ ದೊಡ್ಡ ಗಾತ್ರದ ತ್ಯಾಜ್ಯವಿದ್ದರೂ ಅದನ್ನು ತಕ್ಷಣವೇ ಹೊರಹಾಕಿ ಅತ್ಯಂತ ಶುದ್ಧ ನೀರನ್ನು ಒದಗಿಸುತ್ತದೆ.

ಗ್ರಾಹಕರಿಗೆ ದುಪ್ಪಟ್ಟು ಲಾಭ, ಹೇಗೆ?
ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಕಾರಣಕ್ಕಾಗಿ ನಗರದ ಅನೇಕ ಗ್ರಾಹಕರು ಜಲಮಂಡಳಿಗೆ ಪ್ರತಿ ತಿಂಗಳು ದಂಡ ಪಾವತಿಸುತ್ತಿದ್ದಾರೆ. ಜಲಮಂಡಳಿಯು ಈ ದಂಡದ ರೂಪದಲ್ಲಿಯೇ ಪ್ರತಿ ತಿಂಗಳು ಸುಮಾರು 3 ಕೋಟಿ ರೂಪಾಯಿಗಳಷ್ಟು ಆದಾಯ ಸಂಗ್ರಹಿಸುತ್ತಿದೆ. ಗ್ರಾಹಕರಿಗೆ ಅನುಕೂಲವಾಗಬೇಕು ಹಾಗೂ ಮಳೆ ನೀರಿನ ಸದ್ಬಳಕೆಯಾಗಬೇಕು ಎಂಬ ಸದುದ್ದೇಶದಿಂದ ಈ ಹೊಸ ಯೋಜನೆಯನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದರು.
ಗ್ರಾಹಕರು ಇಚ್ಛಿಸಿದರೆ ಅವರ ಕಟ್ಟಡಗಳಿಗೆ ಜಲಮಂಡಳಿಯೇ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಲಿದೆ. ಇದಕ್ಕಾಗಿ ತಗಲುವ ವೆಚ್ಚವನ್ನು ಗ್ರಾಹಕರು ಪ್ರತಿ ತಿಂಗಳು ಪಾವತಿಸುವ ಪೆನಾಲ್ಟಿ ಮೊತ್ತದ ರೂಪದಲ್ಲೇ ಹಂತ ಹಂತವಾಗಿ ವಸೂಲಿ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಕಾಲಕ್ರಮೇಣ ಗ್ರಾಹಕರಿಗೆ ದಂಡ ಕಟ್ಟುವ ಕಿರಿಕಿರಿ ತಪ್ಪುವುದರ ಜೊತೆಗೆ, ಮಾಸಿಕ ನೀರಿನ ಬಿಲ್ ಪ್ರಮಾಣವೂ ಗಣನೀಯವಾಗಿ ಕಡಿಮೆಯಾಗಲಿದೆ.
ಪ್ರಾಯೋಗಿಕ ಯೋಜನೆ ಯಶಸ್ವಿ
ಈ ವಿನೂತನ ತಂತ್ರಜ್ಞಾನ ಸಹಿತ ಮಳೆನೀರು ಕೊಯ್ಲು ಪದ್ಧತಿಯನ್ನು ಈಗಾಗಲೇ ಪ್ರಾಯೋಗಿಕವಾಗಿ (ಪೈಲಟ್ ಪ್ರಾಜೆಕ್ಟ್) 75 ಕಡೆಗಳಲ್ಲಿ ಅಳವಡಿಸಲಾಗಿದೆ. ಅತ್ಯುತ್ತಮ ಗುಣಮಟ್ಟದ ನೀರು ಲಭ್ಯವಾಗುತ್ತಿರುವುದು ದೃಢಪಟ್ಟಿದೆ. ಇಂದು ಭುವನೇಶ್ವರಿ ನಗರದ ಕಟ್ಟಡವೊಂದರಲ್ಲಿ ಅಳವಡಿಸಿರುವ ಮಳೆನೀರು ಕೊಯ್ಲು ಪದ್ಧತಿಯನ್ನು ಬೆಂಗಳೂರು ಜಲಮಂಡಳಿ ಅಧ್ಯಕ್ಷರು ಖುದ್ದು ಪರೀಕ್ಷಿಸಿದರು. ಇದರ ಯಶಸ್ಸಿನ ಆಧಾರದ ಮೇಲೆ, ಈವರೆಗೂ ಮಳೆನೀರು ಕೊಯ್ಲು ಅಳವಡಿಸಿಕೊಳ್ಳದ ಕಟ್ಟಡಗಳಿಗೆ ಇದನ್ನು ವಿಸ್ತರಿಸುವ ಬೃಹತ್ ಅಭಿಯಾನಕ್ಕೆ ಜಲಮಂಡಳಿ ಸಿದ್ಧತೆ ನಡೆಸಿದೆ.
ಅನುಭವ ಹಂಚಿಕೊಂಡ ನಿವಾಸಿ
ಹೊಸ ಪದ್ಧತಿಯ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ನಗರದ ನಿವಾಸಿ ಅಶ್ವಥ್ ಅವರು ತಮ್ಮ ಅನುಭವ ಹಂಚಿಕೊಂಡರು. "ಜಲಮಂಡಳಿಯ ಈ ಕಾರ್ಯತತ್ಪರತೆ ತುಂಬಾ ಸ್ವಾಗತಾರ್ಹ. ತಾಂತ್ರಿಕವಾಗಿ ಹಾಗೂ ವಿಜ್ಞಾನದ ಸಹಾಯದಿಂದ ಮಳೆನೀರನ್ನು ನೇರವಾಗಿ ಉಪಯೋಗಿಸಲು 'ಮೂರನೇ ತಲೆಮಾಡಿನ ಮಳೆ ನೀರು ಫಿಲ್ಟರ್' (3rd generation Rainwater filters) ಬಂದಿದೆ. ನಾನು ಖುದ್ದು ಲ್ಯಾಬ್ ಟೆಸ್ಟ್ (lab test) ಮಾಡಿಸಿದ್ದೇನೆ. ಫಿಲ್ಟರ್ ಆದ ಮಳೆನೀರು ನಲ್ಲಿ ಹಾಗೂ ಕೊಳದ ನೀರಿಗಿಂತ ಪರಿಶುದ್ಧವಾಗಿದೆ. ಈ ನೀರನ್ನು ಹೆಚ್ಚಿಗೆ ಸಂಗ್ರಹಿಸಲು ಹೊಸ ಸಂಪ್ (Sump) ಮಾಡಲಿದ್ದೇನೆ. ಮಳೆನೀರನ್ನು ಮರುಬಳಕೆ ಮಾಡುವುದರಿಂದ ನಮ್ಮ ಕಾವೇರಿ ನೀರಿನ ಬಿಲ್ ಕೂಡ ಕಡಿಮೆಯಾಗುತ್ತಿದೆ ಎಂದು ಅವರು ಖಷಿ ಹಂಚಿಕೊಂಡರು.
ಈ ಮಹತ್ವಾಕಾಂಕ್ಷಿ ಯೋಜನೆಯ ಅನುಷ್ಠಾನದ ಕುರಿತು ಮುಂಬರುವ ಜಲಮಂಡಳಿಯ ಆಡಳಿತ ಮಂಡಳಿ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಾ. ರಾಮ್ ಪ್ರಸಾತ್ ಮನೋಹರ್ ಅವರು ಸ್ಪಷ್ಟಪಡಿಸಿದ್ದಾರೆ.














Click it and Unblock the Notifications