ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓ ದೇವರೇ, ಗುಲಾಬಿ ತೋಟದಲ್ಲಿನ ಮುಳ್ಳುಗಳ ಬಚ್ಚಿಡು...

By Staff
|
Google Oneindia Kannada News


ಇದು ನಿರಂತರ... ಇದೇನು ಕ್ರೌರ್ಯವೋ, ಹಿಂಸೆಯೋ, ಮುಳ್ಳುಗಳೋ? ಆದರೆ ಅವನ ಪಾಲಿಗದು ಹಕ್ಕು... ಅವಳು ಬಿಕ್ಕುತ್ತ, ಕಂಬನಿಯಿಲ್ಲದೆ ಪ್ರತಿದಿನ ತಲೆದಿಂಬನ್ನು ತೊಯ್ಯಿಸುತ್ತಲೇ ಇರುತ್ತಾಳೆ... ಕಾಲ ಬದಲಾದಂತೆ ಕೌಟುಂಬಿಕ ಹಿಂಸೆಯ ವಿಧಾನಗಳು ಬದಲಾಗಬಹುದು... ಆದರೆ ಪರಿಣಾಮದಲ್ಲಿ ಅಂತಹ ವ್ಯತ್ಯಾಸಗಳೇನಿಲ್ಲ. ಮಡಿಲಲ್ಲಿ ಕೆಂಡಕಟ್ಟಿಕೊಂಡು, ಕ್ಯಾಲೆಂಡರ್‌ನಲ್ಲಿ ದಿನಗಳನ್ನು ಎಣಿಸುತ್ತಲೇ ಇರುತ್ತಾಳೆ ಅವಳು, ಬಾಗದೆ, ಬಗ್ಗದೆ...

Foot Prints on the sands of Time...‘ಉತ್ತರ- ದಕ್ಷಿಣವಿದ್ದರೂ ಭೂಮಿ ದುಂಡಗಿದೆ. ವಿಚಿತ್ರ ವೈಪರೀತ್ಯಗಳ ನಡುವೆಯೂ ಸೌಂದರ್ಯವಿದೆ. ಹೊಟ್ಟೆಯಿಂದ ಹೃದಯದವರೆಗೂ ಹಸಿವು ಇದ್ದರೂ ಸೃಷ್ಟಿಯ ಮಾಧುರ್ಯ ಕಣ್ಣಿಗೆ ಕಾಣುತ್ತಿದೆ. ಹೆಬ್ಬೆಟ್ಟಿನ ಉಗುರು ಮುರಿದು ರಕ್ತ ಸೋರುತ್ತಿದ್ದರೂ ಮನಸ್ಸಿನ ಮೂಲೆಯಲ್ಲಿ ಎಲ್ಲೊ ನೆಮ್ಮದಿ ಬೆಚ್ಚಗೆ ಮೈಕಾಯಿಸಿಕೊಳ್ಳುತ್ತಿದೆ. ಕಿವಿಯೊಳಗಿಂದ ಒಳನುಗ್ಗುವ ಬಾಜಾ ಭಜಂತ್ರಿಗಳ ಮಧ್ಯದಲ್ಲೂ ಆಂತರಿಕ ಮೌನ ಪ್ರತಿನಿತ್ಯವೂ ಸೂರ್ಯಕಾಂತಿಯಂತೆ ಅರಳುತ್ತಿದೆ. ಜಟಿಲ ಸಮಸ್ಯೆಗಳಿಗೂ ಉತ್ತರ ಸರಳವಿರುವ ಸಾಧ್ಯತೆಗಳಿವೆೆ ’

‘ಇದು ಈ ಬದುಕಿನ ಬಗ್ಗೆ ನನ್ನ ದೃಷ್ಟಿಕೋನ ಅಷ್ಟೇ ಅಲ್ಲ ನನ್ನ ಹೋಪ್ಸ್‌ ಕೂಡ ಹೌದು. ಈ ದಿನದವರೆಗೂ ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾ ಬಂದಿದ್ದು ನಾನು ಕಂಡ ಸತ್ಯ, ನಾನು ಕಂಡುಕೊಂಡ truth . . . .ಆದರೆ ಈ ದಿನ ನಿಮ್ಮನ್ನ್ನೊಂದು ಪ್ರಶ್ನೆ ಕೇಳುತ್ತೇನೆ ನನಗೆ ಉತ್ತರಹೇಳಿ ಪ್ಲೀಸ್‌.

ಈ ಪ್ರಪಂಚ ಇಷ್ಟು ಭಯಾನಕವೇ? ಈ ಬದುಕು ಒಂದು ಸುಂದರ ಸುಳ್ಳೇ? ನನ್ನ optimismಗೆ ಅರ್ಥವೇ ಇಲ್ಲವೇ? ಹೌದು ನಾವು ಹೆಂಗಸರೇ ಹೀಗೆ! ಅಂತ vocal chords ಕಾಣೋ ಹಾಗೆ ಅರಚ್ಕೊಳ್ಳ್ತಿದ್ದ ಈ ವಡ್ಡಿಗೆ ಈ ದಿನ ಏನಾಯ್ತು ಅಂತ confusionನಲ್ಲಿದ್ದೀರಾ? ಆಗಬಾರದ್ದೇನೂ ನನಗೆ ನಿಮಗೆ ಆಗಿಲ್ಲ, ಆದರೆ ಹಾಗೆ ಆಗುವ ಎಲ್ಲಾ ಸಾಧ್ಯತೆಗಳೂ ಇವೆ ಅನ್ನುವ ನಿಜ ನಮ್ಮಿಬ್ಬರಿಗೂ ಗೊತ್ತಿದೆ ಅಲ್ಲವಾ?! ಮತ್ತೇನನ್ನು ಮರೆಮಾಚ್ತಿದ್ದೀವಿ? ಯಾಕೆ?

ಕಳೆದ ರಾತ್ರಿ ನಮ್ಮಿಬ್ಬರ ನಡುವೆ ಆಗಿದ್ದು ಮೊದಲ ವಾದ
ಅವನ ಕ್ರೂರ ಮಾತುಗಳು ನನ್ನನ್ನು ಇರಿಯುತ್ತಿದ್ದವು
ನನಗೆ ಗೊತ್ತು ಆ ಮಾತುಗಳು ಉದ್ದೇಶಪೂರ್ವಕವಲ್ಲ
ಅವನಿಗೂ ಅದರ ಬಗ್ಗೆ ಬೇಸರವಿದೆ; ಯಾಕೆ ಗೊತ್ತಾ?
ಈ ದಿನ ಆವನು ನನಗೆ ಹೂವು ಕೊಟ್ಟಿದ್ದಾನೆ
ಓಹ್‌, ಈವತ್ತು ನಮ್ಮ ವಿವಾಹ ವಾರ್ಷಿಕೋತ್ಸವವೂ ಅಲ್ಲ!

ಕಳೆದ ರಾತ್ರಿ ಅವನು ನನ್ನನ್ನು ಗೋಡೆಗೆ ಅಪ್ಪಳಿಸಿದ
ಉಸಿರುಗಟ್ಟುವಂತೆ ಕತ್ತು ಅಮುಕುತ್ತಿದ್ದ
ಅದೊಂದು ಭಯಂಕರ ಸ್ವಪ್ನವೆನಿಸಿತು ನನಗೆ
ಮನದೊಳಗಿನ ಹುಣ್ಣು ಮೈಮೇಲಿನ ನೀಲಿಗಟ್ಟಿದ
ಮೂಗೇಟಿನೊಂದಿಗೆ ಬೆಳಗಾಯ್ತು; ನನಗೆ ಗೊತ್ತು
ಅವನಿಗೆ ಅದರ ಬಗ್ಗೆ ಬೇಸರವಿದೆ; ಯಾಕೆ ಗೊತ್ತಾ?
ಈ ದಿನವೂ ಆವನು ನನಗೆ ಹೂವು ಕೊಟ್ಟಿದ್ದಾನೆ

ಕಳೆದ ರಾತ್ರಿ ಮತ್ತೆ ಅವನು ನನನ್ನು ಹೊಡೆದ
ಅದು ಹಿಂದೆಂದಿಗಿಂತಲೂ ಬಲವಾದ ಹೊಡೆತ
ನಾನು ಅವನನ್ನು ತ್ಯಜಿಸಿ ಹೋದರೆ. . . .?
ಏನು ಮಾಡಬಲ್ಲೆ? ಮಕ್ಕಳನ್ನು ಸಾಕುವುದು ಹೇಗೆ?
ಹಣ ಕಾಸು? ಅವನನ್ನು ಕಂಡರೆ ನನಗೆ ಹೆದರಿಕೆ
ಆದರೆ ಬಿಟ್ಟು ನಡೆಯಲು ಭಯ. . . . .
ಅವನಿಗೆ ಅದರ ಬಗ್ಗೆ ಬೇಸರವಿದೆ; ಯಾಕೆ ಗೊತ್ತಾ?
ಈ ದಿನವೂ ಆವನು ನನಗೆ ಹೂವು ಕೊಟ್ಟಿದ್ದಾನೆ
ಓಹ್‌, ಈವತ್ತು ನಾನು ಹುಟ್ಟಿದ ದಿನವೂ ಅಲ್ಲ!

ಈ ದಿನ ನನಗೆ ಹೂಗುಚ್ಛವನ್ನೇ ಕೊಟ್ಟಿದ್ದಾನೆ
ಆದರೆ ಇದು ವಿಶೇಷವಾದ ದಿನಕ್ಕಾಗಿ
ಈ ದಿನ ನನ್ನ ಅಂತ್ಯ ಸಂಸ್ಕಾರ; ಕಳೆದ ರಾತ್ರಿ ಅವನು ನನ್ನನ್ನು ಕೊಂದ
ಕೊನೆಯುಸಿರಿನವರೆಗೂ ಕೊಲ್ಲುತ್ತಿದ್ದ
ನಾನು ಧೈರ್ಯ ಮಾಡಿ ಆ ದಿನವೇ ಅವನನ್ನು ಬಿಟ್ಟಿದ್ದರೆ
ನಾನು ಸಾಯುತ್ತಿರಲಿಲ್ಲ. . . . .
ಆದರೆ, ನನಗೆ ಹೂಗುಚ್ಛ ಸಿಕ್ಕುತ್ತಿರಲಿಲ್ಲ!

ಈಗ ಹೇಳಿ ಇದು ನನಗೆ ಎದುರಾದ ಸತ್ಯದಂತೆ ಕಾಣುತ್ತಿರುವ ಒಂದು fact ಅಂದರೆ ನೀವು ನಂಬುತ್ತೀರಾ? ಒಪ್ಪುತ್ತೀರಾ? ತೀರಾ depress ಆಗಬೇಡಿ. ಅಂತಾರ್ಜಾಲದ ಅಂತರ್ಜಲದಿಂದ ಮೊಗೆದ ಭಾವನೆಗಳನ್ನು ನನಗಾಗಿ ನಿಮಗಾಗಿ ಭಾಷಾಂತರಿಸಿದೆ. ಇರುವಾಗ ಕನ್ನಡಿಯ ಮುಂದೆ ಕಣ್ಣಲ್ಲಿ ನೀರು; ಇಲ್ಲದಾದಾಗ ಮುಚ್ಚಿದ ಗೋರಿಯೊಳಗೂ ಹೃದಯದಲ್ಲಿ ಹನಿ ನೀರು. ಹೌದು ನಾವು ಹೆಂಗಸರೇ ಹೀಗೆ!

ಈ ಕ್ಷಣದಲ್ಲಿ ನನಗೆ ಅನ್ನಿಸುತ್ತಿದೆ ‘ಓ ದೇವರೇ ನೀನು ಇರುವುದೇ ಆದರೆ, ಬದುಕಿನ ಬಗೆಗಿನ ನನ್ನ hopesಅನ್ನು ಘಾಸಿಗೊಳಿಸಬೇಡ. ಜೀವನದೆಡೆಗಿನ ನನ್ನ ದೃಷ್ಟಿಕೋನವನ್ನು ಸುಳ್ಳು ಎಂದು ಸಾಬೀತು ಮಾಡಲು ಹಠ ಹಿಡಿಯಬೇಡ.’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X