• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಪಿನ್ಯಾಟ’ - ಮೊಸರುಕುಡಿಕೆಯಂತಹ ಆಟ!

By Super
|

‘ಪಿನ್ಯಾಟ' - ಮೊಸರುಕುಡಿಕೆಯಂತಹ ಆಟ!

‘ಹೊಡಿಮಗ ಹೊಡಿಮಗ ಹೊಡಿಮಗ ಬಿಡಬೇಡ ಅವುನ್ನ...' -ಇದು ‘ಜೋಗಿ'ಯ ಹಾಡು. ಈ ಚಿತ್ರದಲ್ಲಿ ಲಾಂಗು-ಮಚ್ಚಿನ ಆಟ. ‘ಹೊಡಿಮಗ...' ಅರ್ಥಬರುವಂತಹ ಸ್ಪಾನಿಷ್‌ ಭಾಷೆಯ ಹಾಡನ್ನು ಪಿನ್ಯಾಟ ಆಡುವ ಸಂದರ್ಭದಲ್ಲಿ ಹೇಳಲಾಗುತ್ತದೆ. ಆದರೆ ಪಿನ್ಯಾಟ ಮುಗ್ಧಮನಗಳ ಮೆಚ್ಚಿನ ಆಟ; ಚಿನ್ನರ ಆಟ. ನಮಗಿಂದು ಬೇಕಾಗಿರುವುದು ಪಿನ್ಯಾಟದಂತಹ ಪುಣ್ಯದ ಆಟ. ಏನಂತೀರಿ?

ಈ ವರ್ಷ ನಮ್ಮ ಮಗನ ಹುಟ್ಟುಹಬ್ಬದ (6 ವರ್ಷ) ವಿಶೇಷತೆ ಏನಿತ್ತಪ್ಪಾ ಅಂದ್ರೆ ‘ಜೀಪರ್ಸ್‌' ಎಂಬ ಒಳಾಂಗಣ ಮನರಂಜನಾ ಉದ್ಯಾನದಲ್ಲಿ ಆಚರಣೆ. ಅವನ ಒಬ್ಬಿಬ್ಬರು ಸ್ನೇಹಿತರ ಬರ್ತ್‌ಡೇ ಪಾರ್ಟಿಗಳೂ ಈಹಿಂದೆ ಅಂತಹ ಅಮ್ಯೂಸ್‌ಮೆಂಟ್‌ ಪಾರ್ಕ್‌ಗಳಲ್ಲಿ ಆಚರಿಸಲ್ಪಟ್ಟಿದ್ದುವು. ಅವುಗಳಲ್ಲಿ ಭಾಗವಹಿಸಿ ಅಲ್ಲಿನ ಮಜಾ ಅನುಭವಿಸಿದ್ದರಿಂದ ತನ್ನ ಬರ್ತ್‌ಡೇ ಕೂಡ ಜೀಪರ್ಸ್‌ನಲ್ಲೇ ಆಗಬೇಕು ಎಂದು ಮೊದಲೇ ತಾಕೀತು ಮಾಡಿದ್ದ. ಆ ಪ್ರಕಾರ ಜನವರಿ ಕೊನೆಯ ವಾರಾಂತ್ಯದ ಒಂದುದಿನ ಸಂಜೆ ಸುಮಾರು 25-30 ಮಕ್ಕಳು ಮತ್ತು ಅವರ ಹೆತ್ತವರ ಉಪಸ್ಥಿತಿಯಲ್ಲಿ ಬರ್ತ್‌ಡೇ ಪಾರ್ಟಿಯನ್ನು ಆಯೋಜಿಸಿದ್ದೆವು.

ಇಲ್ಲಿ ಅಮೆರಿಕದಲ್ಲಿ Chuck-E-Cheese, Jeepers ಇತ್ಯಾದಿ ಹೆಸರಿನ Indoor Amusement Parkಗಳ ಒಂದು ಪ್ರಮುಖ ಆಕರ್ಷಣೆಯೆಂದರೆ ಬರ್ತ್‌ಡೇ ಪಾರ್ಟಿ ಸೆಲೆಬ್ರೇಷನ್‌. ಒಂದೆರಡು ವಾರಗಳ ಮೊದಲೇ ನಮಗೆ ಬೇಕಾದ ದಿನದಂದು, ಬೇಕಾದ ವೇಳೆಯಲ್ಲಿ ಎರಡೊ ಮೂರೊ ಗಂಟೆಗಳ ಅವ-ಧಿಯನ್ನು ರಿಸರ್ವ್‌ ಮಾಡಿಟ್ಟು ಪಾರ್ಟಿಗೆ ಎಷ್ಟುಜನ ಮಕ್ಕಳು, ಹೆತ್ತವರು ಬರುತ್ತಾರೆ ಎಂದು ತಿಳಿಸಿಟ್ಟರಾಯಿತು. ಪಾರ್ಟಿಗೆ ಬೇಕಾದ ಡೆಕೊರೇಷನ್‌, ಕೇಕ್‌, ಅದರ ವಿತರಣೆ, ಕ್ಲೀನಿಂಗ್‌ ಇತ್ಯಾದಿ ಎಲ್ಲವನ್ನೂ ಅವರೇ ಏರ್ಪಾಡುಮಾಡುತ್ತಾರೆ. ಜತೆಯಲ್ಲೇ ಮಕ್ಕಳಿಗೆಲ್ಲ ಒಂದೆರಡು ಗಂಟೆಗಳ ಕಾಲ ಪಾರ್ಕ್‌ನಲ್ಲಿನ ವಿವಿಧ ಆಟ-ನೋಟಗಳ ಮೋಜು-ಮಸ್ತಿ.

ಜೀಪರ್ಸ್‌ನಲ್ಲಿ ಬರ್ತ್‌ಡೇ ಪಾರ್ಟಿಯ ಅಂಗವಾಗಿ ನನಗೆ ಆಸಕ್ತಿಕರವಾಗಿ ಕಂಡ ಒಂದು ಸಂಗತಿಯೆಂದರೆ ‘ಪಿನ್ಯಾಟ'. ಒಂದು ವಿಧದಲ್ಲಿ ನಮ್ಮೂರಿನ ಸಾರ್ವಜನಿಕ ಗಣೇಶೋತ್ಸವದ ಆಟೋಟಗಳಲ್ಲಿರುತ್ತಿದ್ದ ‘ಮಡಿಕೆ ಒಡೆಯುವ ಸ್ಪರ್ಧೆ' ಅಥವಾ ಜನ್ಮಾಷ್ಟಮಿ ಸಂದರ್ಭದ ಮೊಸರುಕುಡಿಕೆ ಆಟದ ಹೋಲಿಕೆ ಇರುವ ‘ಪಿನ್ಯಾಟ', ಮಕ್ಕಳಿಗೆಲ್ಲ ಅವತ್ತು ಸಕ್ಕತ್‌ ಮಜಾ ಕೊಟ್ಟಿತು. ಮಕ್ಕಳು ಖುಶಿಯಿಂದ ಕುಣಿದಾಡಿದಾಗ ಸಹಜವಾಗಿಯೇ ಹಿರಿಯರಿಗೂ ಮೋಜೆನಿಸಿತ್ತು ಅನ್ನಿ. ಅಂತೂ ಪಿನ್ಯಾಟ ಅವತ್ತಿನ ಬರ್ತ್‌ಡೇ ಪಾರ್ಟಿಯ ಹೈಲೈಟ್‌!

ಪಿನ್ಯಾಟ ಮೂಲತಃ ಮೆಕ್ಸಿಕನ್‌ ಸಂಸ್ಕೃತಿಯ ಒಂದು ಆಟವಂತೆ. ಆಮೇಲೆ ನಾನು ಮೆಕ್ಸಿಕನ್‌ ಮಿತ್ರನೊಬ್ಬನಿಂದ ಪಿನ್ಯಾಟದ ಬಗ್ಗೆ ಇನ್ನೂ ಒಂದಷ್ಟು ಮಾಹಿತಿಯನ್ನು ಸಂಗ್ರಹಿಸಿದೆ. ಅದನ್ನಿಂದು ನಿಮಗೂ ಪರಿಚಯಿಸೋಣವೆಂದು ಇಲ್ಲಿ ಪ್ರಸ್ತುತಪಡಿಸಿದ್ದೇನೆ.

Pinata ಸ್ಪಾನಿಷ್‌ ಭಾಷೆಯ ಪದ. ಪಿನ್‌-ಯಾಹ್‌-ಟ ಎಂದು ಉಚ್ಚಾರ. ನಾಮಪದ ರೂಪದಲ್ಲಿ ‘ಕಟ್ಟು' ಪದಕ್ಕಿರುವ ಅರ್ಥ. ಮಕ್ಕಳಿಗೆ ಆಕರ್ಷಣೆಯ ವಿವಿಧ ವಸ್ತುಗಳನ್ನು (ಪುಟ್ಟದಾದ ಆಟಿಗೆಗಳು, ಚಾಕಲೇಟ್‌, ಕ್ಯಾಂಡಿ, ಪೀಪಿ, ಬಲೂನ್‌ ಇತ್ಯಾದಿ) ಒಂದು ಮಡಿಕೆಯಲ್ಲಿ ಅಥವಾ ಕಾರ್ಡ್‌ಬೋರ್ಡ್‌ನಿಂದ ತಯಾರಿಸಿದ ಬೇರಾವುದಾದರೂ ರಚನೆಯಲ್ಲಿ ಕಟ್ಟಿಟ್ಟು ಮೇಲೆ ಹೊದಿಕೆಯಾಗಿ ಬಣ್ಣಬಣ್ಣದ ಕಾಗದ, ಪತಾಕೆಗಳಿಂದ ಅಲಂಕರಿಸಿಟ್ಟದ್ದೇ ಪಿನ್ಯಾಟ.

ಪಾರ್ಟಿಮಾರ್ಟ್‌ ಮುಂತಾದ ಅಂಗಡಿಗಳಲ್ಲಿ ವಿವಿಧ ವಿನ್ಯಾಸದ ಪಿನ್ಯಾಟಗಳು ತಯಾರಿಸಿಟ್ಟದ್ದೇ ಸಿಗುತ್ತವೆ. ಅಥವಾ ನಾವೇ ಅದನ್ನು ತಯಾರಿಸುವುದೂ ಸುಲಭವೇ ಇದೆ. ರಟ್ಟುಕಾಗದ, ಕಾರ್ಡ್‌ಬೋರ್ಡ್‌, ಹಳೆ ನ್ಯೂಸ್‌ಪೇಪರ್‌, ದಾರ, ಅಂಟು ಇತ್ಯಾದಿ ವಸ್ತುಗಳು, ಸಿಂಗಾರಕ್ಕೆ ಬಣ್ಣಬಣ್ಣದ ಕಾಗದಗಳು, ಪೆಯಿಂಟ್‌ - ಇಷ್ಟಿದ್ದರೆ ಸಾಕು. ಸಾಂಪ್ರದಾಯಿಕವಾಗಿ ಸಪ್ತಕೋನಾಕೃತಿಯ (ಅಥವಾ ಸ್ಪೂಟ್ನಿಕ್‌ ಉಪಗ್ರಹದ ಮಾದರಿ) ಫ‚ೆ್ರೕಮ್‌ವರ್ಕನ್ನು ಮಾಡಿರುತ್ತಾರೆ, ವಿವಿಧ ಪ್ರಾಣಿ-ಪಕ್ಷಿ ಅಥವಾ ಕಾರ್ಟೂನ್‌ ಪಾತ್ರಗಳ ಆಕಾರವೂ ನಡೆಯುತ್ತದೆ. ಫ‚ೆ್ರೕಮ್‌ವರ್ಕ್‌ ಒಳಗೆ ಟೊಳ್ಳಾಗಿದ್ದು ಹೊದಿಕೆಗೆ ಬಣ್ಣದಕಾಗದಗಳನ್ನು ಹಚ್ಚಲಾಗುತ್ತದೆ. ಒಳಗೆ ಕ್ಯಾಂಡಿ, ಚಾಕಲೇಟ್‌, ಆಟಿಗೆಗಳನ್ನು ತುಂಬಿಸಿ ಮುಚ್ಚಬೇಕು.

ಹೀಗೆ ಸರ್ವಾಂಗಸುಂದರವಾಗಿ ಸಿದ್ಧವಾದ ಪಿನ್ಯಾಟವನ್ನು, ಸಾಧ್ಯವಾದರೆ ಹೊರಗಡೆ ಬಯಲಿನಲ್ಲಿ ಅಥವಾ ಒಳಗಾದರೆ ಸಾಧ್ಯವಿದ್ದಷ್ಟು ವಿಸ್ತಾರಜಾಗದಲ್ಲಿ ಎರಡು ಕಂಬಗಳ ಮಧ್ಯೆ (ಬಟ್ಟೆ ಒಣಗಿಸುವ ತಂತಿಯಂತೆ) ಕಟ್ಟಿದ ಹಗ್ಗಕ್ಕೆ ಕಟ್ಟುತ್ತಾರೆ. ಒಂದಷ್ಟು ದೂರದಲ್ಲಿ ಸಾಲಾಗಿ ನಿಲ್ಲಿಸಿದ ಮಕ್ಕಳನ್ನು, ಒಬ್ಬೊಬ್ಬರಾಗಿಯೇ ಕಣ್ಣಿಗೆ ಬಟ್ಟೆಕಟ್ಟಿ ಕೈಯಲ್ಲೊಂದು ಕೋಲನ್ನು ಕೊಟ್ಟು ಪಿನ್ಯಾಟದೆಡೆಗೆ ಕಳಿಸುತ್ತಾರೆ. ನೆರೆದ ಪ್ರೇಕ್ಷಕರು ಹುರಿದುಂಬಿಸುವ ಮಾತುಗಳಿಂದ ಈ ಮಕ್ಕಳ ಗಮನವನ್ನು ಒಮ್ಮೆ ಪಿನ್ಯಾಟದೆಡೆಗೂ ಇನ್ನೊಮ್ಮೆ ಬೇರೆಡೆಗೂ ಸೆಳೆಯುವಂತೆ ಮಾಡುತ್ತಾರೆ. ಒಂದು ಮಗುವಿಗೆ ಪಿನ್ಯಾಟಕ್ಕೆ ಗುರಿಯಿಟ್ಟು ಹೊಡೆಯಲು ಮೂರು ಚಾನ್ಸ್‌. ಆಗಲೂ ಅದು ಒಡೆಯದಿದ್ದರೆ ಸಾಲಿನಲ್ಲಿನ ನಂತರದ ಮಗುವಿಗೆ ಆಟ ಮುಂದುವರೆಯುತ್ತದೆ. ಕೊನೆಗೂ ಯಾರಾದರೊಬ್ಬರು ಪಿನ್ಯಾಟವನ್ನು ‘ಸದೆಬಡಿಯು'ವಲ್ಲಿ ಯಶಸ್ವಿಯಾದಾಗ ಎಲ್ಲರಿಂದಲೂ ಹೋ ಎಂದು ಹರ್ಷೋದ್ಗಾರ, ಚಪ್ಪಾಳೆ. ಪಿನ್ಯಾಟದಿಂದ ಕೆಳಬಿದ್ದ ಕ್ಯಾಂಡಿ-ಆಟಿಗೆಗಳನ್ನು ಆರಿಸಿಕೊಳ್ಳಲು ಮಕ್ಕಳೆಲ್ಲ ಅಲ್ಲಿಗೆ ಓಡುತ್ತಾರೆ.

Children playing Pinataಪಾರ್ಟಿಗಳಲ್ಲಿ ಪಿನ್ಯಾಟ ಎಷ್ಟು ಜನಪ್ರಿಯವಾಗುತ್ತದೆಂದರೆ ಚಿಕ್ಕಮಕ್ಕಳ ಬರ್ತ್‌ಡೇಗಳಷ್ಟೇ ಅಲ್ಲದೆ ದೊಡ್ಡವರ ಪಾರ್ಟಿಗಳಲ್ಲೂ ಮನರಂಜನೆ ಐಟಂ ಆಗಿ ಪಿನ್ಯಾಟ ಇರುವುದಿದೆ. ದೊಡ್ಡದೊಡ್ಡ ಕಂಪೆನಿಗಳಲ್ಲಿ ವರ್ಷಾಂತ್ಯದ ವೇಳೆ ಕ್ರಿಸ್ಮಸ್‌ ರಜೆಯ ಸಡಗರಕ್ಕೆ ಮೊದಲು ಕಾರ್ಪೊರೇಟ್‌ ಪಾರ್ಟಿಗಳಲ್ಲಿ ಪಿನ್ಯಾಟ ಮೋಜು ಸೇರಿಕೊಳ್ಳುತ್ತದೆ. ಹಾಗೆಯೇ ಅಮೆರಿಕದ ಎರಡು ರಾಜಕೀಯ ಪಕ್ಷಗಳ (ರಿಪಬ್ಲಿಕನ್‌ ಮತ್ತು ಡೆಮೊಕ್ರಾಟಿಕ್‌) ಚಿಹ್ನೆಗಳಾದ ಕತ್ತೆ ಮತ್ತು ಆನೆಯ ಆಕಾರದಲ್ಲಿ ಪಿನ್ಯಾಟ ರಚಿಸಿ ಅದನ್ನು ಕೋಲಿಂದ ಹೊಡೆಯುವ ಅವಕಾಶವನ್ನು ರಾಜಕೀಯ ಲೇವಡಿಯಾಗಿ ಉಪಯೋಗಿಸುವುದೂ ಇದೆ!

ಪಿನ್ಯಾಟದ ಚರಿತ್ರೆಯನ್ನು ಕೆದಕಿದರೆ, ಮೆಕ್ಸಿಕೊ ದೇಶದಲ್ಲಿನ ಸ್ಪಾನಿಷ್‌ ವಸಾಹತುಗಾರರು ಈ ಸಂಪ್ರದಾಯವನ್ನು ಆರಂಭಿಸಿದರು ಎಂದು ತಿಳಿದುಬರುತ್ತದೆ. ಮೆಕ್ಸಿಕೊದಿಂದ ಅಮೆರಿಕ ಮತ್ತು ಯುರೋಪ್‌ನ ದೇಶಗಳಿಗೆ ಅದು ಹಬ್ಬಿರಬಹುದು. ಇನ್ನೊಂದು ಅಭಿಪ್ರಾಯದಂತೆ ಪಿನ್ಯಾಟದ ಹುಟ್ಟು ಚೈನಾದೇಶದಲ್ಲಿ ಆಗಿದ್ದು 15ನೇ ಶತಮಾನದಲ್ಲಿ ಮಾರ್ಕೊ ಪೊಲೊ ಮತ್ತಿತರ ನಾವಿಕರು ಪೌರ್ವಾತ್ಯದೇಶಗಳ ಪರ್ಯಟನೆ ಮಾಡಿ ಹಿಂತಿರುಗುವಾಗ ಯುರೋಪ್‌ನಲ್ಲೂ ಪಿನ್ಯಾಟವನ್ನು ಪರಿಚಯಿಸಿರಬೇಕು. ಯುರೋಪ್‌ನವರು ಅಮೆರಿಕೆಗೆ ಬಂದಾಗ ಇಲ್ಲಿ ಅದನ್ನು ಬಿತ್ತಿರಬಹುದು.

ಮೆಕ್ಸಿಕೊದಲ್ಲಿ ಪಿನ್ಯಾಟ ಬರೀ ಒಂದು ಮೋಜಿನ ಆಟವಾಗಿರದೆ ಅದಕ್ಕೆ ಧಾರ್ಮಿಕ ನಂಬಿಕೆಗಳ ಲೇಪವೂ ಇದೆ. ಸಾಮಾನ್ಯವಾಗಿ ಸಪ್ತಕೋನಗಳ ಆಕೃತಿಯಲ್ಲಿ ಪಿನ್ಯಾಟ ರಚನೆಯಿರುವುದರಿಂದ ಅದೊಂದು ಸಪ್ತಮಹಾಪಾಪಗಳ ಆಸುರೀಶಕ್ತಿ, ಅದನ್ನು ಸದೆಬಡಿದು ಅದು ಹಿಡಿದಿಟ್ಟಿರುವ ಒಳ್ಳೆಯದನ್ನು ಬಿಡಿಸಿ ಪಡೆದುಕೊಳ್ಳುವುದು ಪಿನ್ಯಾಟದ ಸಾಂಕೇತಿಕ ಅರ್ಥ. ಕಣ್ಣಿಗೆ ಬಟ್ಟೆ ಕಟ್ಟಿ ಕೈಯಲ್ಲಿ ಕೋಲು ಹಿಡಿದು ಪಿನ್ಯಾಟವನ್ನು ಭೇದಿಸಿ ಕ್ಯಾಂಡಿ ಪಡೆಯಲು ಹೊರಟ ಮಗು, ಈ ಜಗತ್ತಿನ ಐಹಿಕ ಸುಖಭೋಗಗಳನ್ನು ಅರಸುತ್ತ ಹೊರಟ ಹುಲುಮಾನವನ ಪ್ರತೀಕ.

ಮೆಕ್ಸಿಕೊದಲ್ಲಿ ಕ್ರಿಸ್ಮಸ್‌ ಸಡಗರಕ್ಕೆ ಕಳಶಪ್ರಾಯವಾಗುವುದು ಪಿನ್ಯಾಟ. ಹಬ್ಬದ ಸಂಭ್ರಮದಿಂದ ಪಿನ್ಯಾಟದೊಳಗೆ ಕ್ಯಾಂಡಿ-ಆಟಿಗೆಗಳಷ್ಟೇ ಅಲ್ಲದೆ ಮೆಕ್ಸಿಕೊದಲ್ಲಿ ಯಥೇಷ್ಟ ಬೆಳೆಯುವ ಹಣ್ಣುಹಂಪಲು, ಕಡಲೆ, ಕಬ್ಬು, ದವಸಧಾನ್ಯ, ನಗನಾಣ್ಯ ಇತ್ಯಾದಿಯನ್ನೂ ತುಂಬಿಸಿಡುತ್ತಾರೆ. ಪಿನ್ಯಾಟವನ್ನೊಡೆದು ಧನಧಾನ್ಯ ಮಳೆಗರೆದಾಗ ಸಂತಸ ಮುಗಿಲುಮುಟ್ಟುತ್ತದೆ. ಪಿನ್ಯಾಟವನ್ನು ಕೋಲಿಂದ ಹೊಡೆಯುವಾಗ ಸ್ಪಾನಿಷ್‌ ಭಾಷೆಯ ಈ ಪದ್ಯವನ್ನೂ ಹೇಳುವ ಕ್ರಮವಿದೆಯಂತೆ.

ಡಾಲೆ ಡಾಲೆ ಡಾಲೆ

ನೊ ಪಿಯರ್ದಾಸ್‌ ಎಲ್‌ ತಿನೊ

ಪೋರ್‌ ಕೆ ಸಿಲೊ ಪಿಯರ್ದೆಸ್‌

ಪಿಯರ್ದೆಸ್‌ ಎಲ್‌ ಕಮಿನೊ...

(Hit it, hit it, hit it. Dont lose your aim. Because if you lose it, You will lose your way... ಎಂದರ್ಥ).

‘ಹೊಡಿಮಗ ಹೊಡಿಮಗ ಹೊಡಿಮಗ ಬಿಡಬೇಡ ಅವ್ನ...' ಎಂಬ ಜೋಗಿಯ ಹಾಡು ಇದರದ್ದೇ ಭಾಷಾಂತರ ಎಂದು ನಿಮಗನ್ನಿಸಿದರೆ ಅದು ಕೇವಲ ಕಾಕತಾಳೀಯ. ಯಾಕೆಂದರೆ ಪಿನ್ಯಾಟ ಮುಗ್ಧಮನಗಳ ಮೆಚ್ಚಿನ ಆಟ; ಈ ಹೊಡಿಮಗ ಹೊಡಿಮಗಗಳೆಲ್ಲ ಲಾಂಗು-ಮಚ್ಚಿನ ಆಟ. ನಮಗಿಂದು ಬೇಕಾಗಿರುವುದು ಪಿನ್ಯಾಟದಂತಹ ಪುಣ್ಯದ ಆಟ. ಏನಂತೀರಿ?

English summary
Pinata is amusement game mainly played during christmas in US. It resembles our own mosaru gadige breaking game, usually played in Mumbai. Srivathsa Joshi introduces funny game.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more