ದೀಪದಾನದ ಅತ್ಯುನ್ನತ ರೂಪ - ಆಕಾಶದೀಪ
ನೆನಪುಗಳ ಗೂಡಲ್ಲಿ ‘ಗೂಡುದೀಪ’...
ನಮ್ಮೂರಲ್ಲಿ ನಮ್ಮ ಮನೆಯಲ್ಲಿ ದೀಪಾವಳಿಗಿಂತಲೂ 15 ದಿನ ಮೊದಲಿಂದಲೇ ಮತ್ತು ದೀಪಾವಳಿಯಾಗಿ 15 ದಿನಗಳವರೆಗೂ (ಅಂದರೆ ಆಶ್ವಯುಜ ಮಾಸದ ಹುಣ್ಣಿಮೆಯಿಂದ ಕಾರ್ತೀಕ ಮಾಸದ ಹುಣ್ಣಿಮೆಯವರೆಗೆ) ಪ್ರತಿರಾತ್ರಿಯೂ ಆಕಾಶದೀಪ ಅಥವಾ ‘ಗೂಡುದೀಪ’ವನ್ನು ಹಚ್ಚಿಡುವ ಕ್ರಮ.
ಬಾಲ್ಯದ ದಿನಗಳಲ್ಲಿ ನನ್ನ ಅಣ್ಣಂದಿರು ನಮ್ಮದೇ ತೋಟದಿಂದ ಬಿದಿರುಕಡ್ಡಿಗಳು ಮತ್ತು ಅಡಿಕೆಮರದ ಪುಟ್ಟ ಸಲಾಕೆಗಳನ್ನು ತಂದು ಅವುಗಳಿಂದ ಗೂಡುದೀಪದ ಒಳಚೌಕಟ್ಟನ್ನು ರಚಿಸಿ ಪೇಟೆಯಿಂದ ತಂದ ಬಣ್ಣದಕಾಗದಗಳನ್ನು, ಪತಾಕೆಗಳನ್ನು ಅಂಟಿಸಿ ಮನೆಯಲ್ಲೇ ಗೂಡುದೀಪದ ನಿರ್ಮಾಣವಾಗುತ್ತಿತ್ತು. ತೆಂಗಿನಮರ ಅಥವಾ ಅಡಿಕೆಮರದ ತುದಿಯಲ್ಲಿ ಸಣ್ಣದೊಂದು ಅಡ್ಡಕೋಲನ್ನು ಕಟ್ಟಿ, ಅದಕ್ಕೆ ರಾಟೆಯನ್ನು ಅಳವಡಿಸಿ ಉದ್ದದ ಹಗ್ಗದ ಮೂಲಕ ಆಕಾಶದೀಪ ಆರೋಹಣದ ವ್ಯವಸ್ಥೆ. ಸಾಕಷ್ಟು ಎತ್ತರದ ಮರಕ್ಕೆ ಗೂಡುದೀಪವನ್ನು ನಿಧಾನವಾಗಿ ಏರಿಸುವುದು ಮತ್ತು ಮನೆಯವರೆಲ್ಲ ಸೇರಿ ‘ದಾಮೋದರಾಯ ನಭಸಿ...’ ಶ್ಲೋಕವನ್ನು ಹೇಳುವುದು - ಇವೆರಡೂ ಏಕಕಾಲದಲ್ಲಿ ನಡೆದು ಅದರದ್ದೇ ಒಂದು ರೋಮಾಂಚನ!
ಒಮ್ಮೆ ನಮ್ಮಣ್ಣ ತನ್ನ ಕಾಲೇಜಿನ ಭೌತಶಾಸ್ತ್ರ ವಿಭಾಗದಲ್ಲಿ ಏನೊ ‘ತತ್ವ’ವನ್ನು ಕಲಿತುಕೊಂಡು ಒಂದು ‘ತಿರುಗುಬುಟ್ಟಿ’ ಗೂಡುದೀಪವನ್ನು ರಚಿಸಿದ್ದರು. ಅದರೊಳಗೆ ದೀಪ ಉರಿಸಿದಾಗ ಭೌತಶಾಸ್ತ್ರತತ್ವದಂತೆ ಅದರ ಸುತ್ತಲ ಬುಟ್ಟಿರಚನೆ ತಿರುಗುತ್ತದೆ. ನಮಗೆಲ್ಲ ಆ ಸ್ವಯಂಚಾಲಿತ ದೀಪದ ಕಾರ್ಯಾಚರಣೆಯನ್ನು ನೋಡಿ ಅಚ್ಚರಿಯ ಆನಂದ! ಆ ವರ್ಷ ನಮ್ಮೂರಿನ ಪರಶುರಾಮ ದೇವಸ್ಥಾನದ ಲಕ್ಷದೀಪೋತ್ಸವದ ವೇಳೆ ನಮ್ಮಣ್ಣ ಮಾಡಿದ್ದ ತಿರುಗುದೀಪ ವಿಶೇಷ ಆಕರ್ಷಣೆಯಾಗಿತ್ತು.
ಹೀಗೆ ನಮ್ಮೂರಲ್ಲಾದರೆ ದೀಪಾವಳಿ, ದೀಪೋತ್ಸವ ಸಂಭ್ರಮದಲ್ಲಿ ಆಕಾಶದೀಪವೂ ಒಂದು ಅವಿಭಾಜ್ಯ ಅಂಗ. ಮನೆಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ, ದೇವಸ್ಥಾನಗಳಲ್ಲೂ ಆಕಾಶದೀಪವನ್ನು ಹಚ್ಚಿಡುತ್ತಾರೆ. ಶ್ರೀಕೃಷ್ಣಕ್ಷೇತ್ರವಾದ ಉಡುಪಿಯ ಅಷ್ಟಮಠಗಳಲ್ಲಿ ಪ್ರತಿಯಾಂದರ ಆವರಣದಲ್ಲೂ ತಲಾ ಎರಡು ಆಕಾಶದೀಪಗಳು ಮತ್ತು ಕೃಷ್ಣದೇವಾಲಯದ ನಾಲ್ಕು ಮೂಲೆಗಳಲ್ಲಿ ನಾಲ್ಕು ಆಕಾಶದೀಪಗಳನ್ನು ಕಾರ್ತೀಕಮಾಸದ ಪ್ರತಿಸಂಜೆಯಲ್ಲೂ ಬೆಳಗಿಸುವ ಪದ್ಧತಿ ಸಾಂಪ್ರದಾಯಿಕವಾಗಿ ನಡೆದುಬಂದಿದೆ. ದೀಪಾವಳಿ-ದೀಪೋತ್ಸವಗಳ ಸಂದರ್ಭದಲ್ಲಿ ಉಡುಪಿ ಮಂಗಳೂರು ಮುಂತಾದೆಡೆ ಆಕರ್ಷಕ ಗೂಡುದೀಪ ರಚನೆಯ ಸ್ಪರ್ಧೆಗಳೂ ಏರ್ಪಾಡಾಗುವುದಿದೆ.
ಈಗ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸಗಳ ಆಕರ್ಷಕ ಬಣ್ಣಗಳ ಚಿಕ್ಕದೊಡ್ಡ ಗಾತ್ರದ ಗೂಡುದೀಪಗಳು ಸಿಗುತ್ತವೆ ನಿಜ. ಆದರೆ ಮನೆಯಲ್ಲೇ ಸ್ವಂತವಾಗಿ ರಚಿಸಿದ ಗೂಡುದೀಪವನ್ನು ಬೆಳಗಿಸಿದಾಗಿನ ಬೆಳಗೇ ಬೇರೆ! ಮಾರುಕಟ್ಟೆಯಿಂದ ತಂದ ಗೂಡುದೀಪ ಹಚ್ಚಿಟ್ಟರೆ ಬಣ್ಣಬಣ್ಣದ ಬೆಳಕೇನೋ ಹರಿಯಬಹುದು, ಆದರೆ ಮನೆಯಲ್ಲೇ ರಚಿಸಿದ ಆಕಾಶದೀಪ ಹಚ್ಚಿದಾಗ ತೃಪ್ತಿ ಹೆಮ್ಮೆಗಳಿಂದ ಮನವೂ ಬೆಳಗುತ್ತದೆ! ಹಾಗೆ ಸ್ವಯಂನಿರ್ಮಾಣದ ಆಕಾಶದೀಪದಿಂದ ಮನೆ-ಮನಗಳನ್ನು ಬೆಳಗಿಸಿಕೊಳ್ಳುವ ಒಬ್ಬ ಸ್ನೇಹಿತನ ಬಗ್ಗೆ ಉಲ್ಲೇಖಿಸಿ ಈ ಲೇಖನವನ್ನು ಮುಗಿಸುತ್ತೇನೆ.
ಸಿಲಿಕಾನ್ ಕಣಿವೆಯಲ್ಲೊಂದು ಆಕಾಶದೀಪ!
ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನಲ್ಲಿರುವ ಹರೀಶ್ ಬಧ್ಯ (ಮೂಲತಃ ಉಡುಪಿಯವರು; ಈಗ ಸಿಲಿಕಾನ್ ವ್ಯಾಲಿಯ ಕಂಪೆನಿಯಾಂದರಲ್ಲಿ ಸಾಫ್ಟ್‌ವೇರ್ ವೃತ್ತಿಯಲ್ಲಿದ್ದಾರೆ) ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ಅಂದವಾದ ಆಕಾಶದೀಪವನ್ನು ತಾವೇ ರಚಿಸುತ್ತಾರೆ. ಮರದ ಕಡ್ಡಿಗಳು, ಅವನ್ನು ಗಟ್ಟಿಯಾಗಿ ಕಟ್ಟಲು ಟ್ವೈನ್ ನೂಲು, ಹೊರಕವಚ ಮತ್ತು ಬಾಲಂಗೋಚಿಗಳನ್ನು ಮಾಡಲು ಬಣ್ಣದ ಕಾಗದಗಳು, ಅಂಟು - ಇವನ್ನೆಲ್ಲ ಪಾರ್ಟಿಮಾರ್ಟ್‌ನಂತಹ ಅಲಂಕಾರಿಕ ಸಾಮಗ್ರಿಮಳಿಗೆಗಳಿಂದ ತಂದು, ಒಂದು ವಾರಾಂತ್ಯವನ್ನು ‘ರಚನಾತ್ಮಕ’ವಾಗಿ ವ್ಯಯಿಸಿ, ಅಮೆರಿಕದಲ್ಲೂ ಆಕಾಶದೀಪ ಆರೋಹಣದ ವ್ಯವಸ್ಥೆಯನ್ನು ಅವರು ಅಚ್ಚುಕಟ್ಟಾಗಿ ಮಾಡುತ್ತಾರೆ. ತನ್ಮೂಲಕ ತಾಯ್ನೆಲದ ಸಂಸ್ಕೃತಿಯನ್ನು ಅಮೆರಿಕದ ಆಗಸದಲ್ಲೂ ಬಿತ್ತರಿಸುವಂಥವರಾಗುತ್ತಾರೆ!
ಕಳೆದ ದೀಪಾವಳಿಯ ಸಮಯದಲ್ಲಿ ರಚಿಸಿದ್ದ ಆಕಾಶದೀಪದ ಚಿತ್ರ ತೆಗೆದು ಹರೀಶ್ ನನಗೆ ಕಳಿಸಿದ್ದರು. ಈ ವರ್ಷ ದೀಪಾವಳಿಯ ಸಂದರ್ಭದಲ್ಲಿನ ಈ ವಿಚಿತ್ರಾನ್ನ ಸಂಚಿಕೆಯನ್ನು ಅದೇ ಚಿತ್ರದಿಂದ ಸಿಂಗರಿಸಿ ಸಜ್ಜುಗೊಳಿಸಿದ್ದೇನೆ.
ದಾಮೋದರನ ದಯೆ ನಮ್ಮೆಲ್ಲರ ಮೇಲೆ ಸದಾ ಇರಲಿ, ಆಕಾಶದೀಪದ ಅತ್ಯುನ್ನತ ಬೆಳಕು ಎಲ್ಲರ ಮನೆ-ಮನಗಳನ್ನೂ ಬೆಳಗಲಿ; ನಮ್ಮಲ್ಲಿನ ಸ್ನೇಹ-ಸೌಜನ್ಯ-ಸಹೃದಯತೆಗಳು ಆಕಾಶದೆತ್ತರಕೆ ಬೆಳೆಯಲಿ ಎಂಬ ಆಶಯದೊಂದಿಗೆ, - [email protected]












Click it and Unblock the Notifications