ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸಂಸ್ಕಾರ ಸಂಜೀವಿನಿ’ - ಪುಸ್ತಕ ಪರಿಚಯ

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Samskaara is for refinement ನಂಬಿಕೆಗಳು, ಸನಾತನ ಸತ್ಸಂಪ್ರದಾಯಗಳು, ಆಚರಣೆಗಳು ಇತ್ಯಾದಿಯ ಬಗ್ಗೆ ಹೀಗೇ ಏನೊ ಒಂದು ಚರ್ಚೆನಡೆದಿದ್ದಾಗ ಹಿರಿಯ ಸ್ನೇಹಿತರೊಬ್ಬರು ತನ್ನ ವೈಯಕ್ತಿಕ ಅಭಿಪ್ರಾಯವನ್ನು ಈರೀತಿ ವ್ಯಕ್ತಪಡಿಸಿದ್ದರು- ‘ನಾನು ಬ್ರಾಹ್ಮಣನಾಗಿಯೂ ಸಂಧ್ಯಾವಂದನೆ ಮಾಡೋದಿಲ್ಲ, ಅಂದರೆ ಅದರ ಬಗ್ಗೆ ನನಗೆ ಅನಾದರವೆಂದಲ್ಲ. ಸಂಧ್ಯಾವಂದನೆ ಯಾಕೆ ಮಾಡಬೇಕು, ಅದರ ಅರ್ಥವೇನು, ಮಹತ್ವವೇನು ಅಂತ ಯಾರಾದರೂ ಸರಳಭಾಷೆಯಲ್ಲಿ ಮನದಟ್ಟಾಗುವಂತೆ ವಿವರಿಸಿದರೆ ಖಂಡಿತ ನಾನೂ ದಿನಾ ಶಿಸ್ತಿನಿಂದ ಅದನ್ನು ಪಾಲಿಸಲಿಕ್ಕೆ ಸಿದ್ಧನಿದ್ದೇನೆ...’

ಅವರ ಮಾತಿನಲ್ಲಿ ಹುರುಳಿದೆ. ನಮ್ಮಲ್ಲಿ ಹೆಚ್ಚಿನವರ ಅವಸ್ಥೆ ಅದೇ. ಒಂದೋ ‘ಅಜ್ಜ ನೆಟ್ಟ ಆಲದಮರಕ್ಕೆ ಸುತ್ತು ಬರುವ’ ಕಾಯಕವನ್ನು ಗಾಣದೆತ್ತಿನಂತೆ ಯಾಂತ್ರಿಕವಾಗಿ ಮಾಡುವವರು ಕೆಲವರಾದರೆ, ಯಾಕೆ ಮಾಡಬೇಕು ಅನ್ನೋದು ಗೊತ್ತಿರದೆ ಸಂಸ್ಕಾರಗಳನ್ನು, ಸಂಪ್ರದಾಯಗಳನ್ನು ಕಡೆಗಣಿಸಿರುವವರು ಇನ್ನು ಕೆಲವರು. ಧಾವಂತದ ಜೀವನಕ್ರಮದಲ್ಲಿ ಅವಕ್ಕೆಲ್ಲ ಟೈಮೆಲ್ಲಿ ಎಂದು, ತಾನು ಮಾಡಬೇಕಾದ್ದನ್ನು ಮಾಡಿಲ್ಲ/ಮಾಡುತ್ತಿಲ್ಲವೆಂದು ಅರಿವಿರುವ, ಆ ಬಗ್ಗೆ ಸ್ವಲ್ಪ ಅಪರಾಧಿ ಪ್ರಜ್ಞೆ ವ್ಯಕ್ತಪಡಿಸುವವರೂ ಇದ್ದಾರೆನ್ನಿ. ಅಂತೂ ಸಂಸ್ಕಾರಗಳು ಒಂದೋ ಅರ್ಥ ಕಳಕೊಂಡಿವೆ, ಇಲ್ಲ ಅರ್ಥವಾಗದ ಕಗ್ಗಂಟಾಗಿ, ಕಬ್ಬಿಣದ ಕಡಲೆಯಾಗಿ ಉಳಿದಿವೆ.

ಬಲ್ಲವರು, ವಿಷಯಜ್ಞಾನಿಗಳು, ಪಂಡಿತೋತ್ತಮರು ಜನಸಾಮಾನ್ಯರಿಗೆ ಅರ್ಥವಾಗುವಂತೆ ಸರಳಮಾತುಗಳಲ್ಲಿ ತಿಳಿಯಪಡಿಸಿದರೆ ನಾವು ಮಾಡುವ (ಮಾಡಬೇಕಿರುವ) ಆಚರಣೆಗಳಲ್ಲೆಲ್ಲ ಶಾರೀರಿಕ, ಮಾನಸಿಕ, ಬೌದ್ಧಿಕ ಮಹತ್ವ ಬಹಳಷ್ಟಿದೆ. ಕಳೆದ ವರ್ಷ ಇಲ್ಲಿ ಅಮೆರಿಕದಲ್ಲೇ ಕನ್ನಡಿಗರೊಬ್ಬರ ಗೃಹಪ್ರವೇಶ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅವತ್ತಿನ ಪುರೋಹಿತರೂ ಕನ್ನಡದವರೇ. ಗೃಹಪ್ರವೇಶದ ಯಾವತ್ತೂ ವಿಧಿವಿಧಾನಗಳ ಮಂತ್ರಗಳ ಅರ್ಥವನ್ನು ಸರಳಗನ್ನಡದಲ್ಲಿ ವಿವರಿಸಿ ಹೇಳಿ ಎಷ್ಟು ಸೊಗಸಾಗಿ ಅವರು ಪೂಜೆಮಾಡಿಸಿದ್ದರೆಂದರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೊಂದು ಅದ್ಭುತ ಅನುಭವ. ವರ್ಷಗಳ ಹಿಂದೆ ನಮ್ಮೂರಲ್ಲಿ, ನಮ್ಮ ತೀರ್ಥರೂಪರು ದೈವಾಧೀನರಾದಾಗ ಅವರ ಉತ್ತರಕ್ರಿಯೆಗಳನ್ನು ಮಾಡಿಸಿದ ನಮ್ಮ ಕುಲಪುರೋಹಿತರೂ ಪ್ರತಿಯಾಂದು ಕ್ರಮದ ಹಿನ್ನೆಲೆಯನ್ನು ಎಳೆಎಳೆಯಾಗಿ ಬಿಡಿಸಿ ವಿವರಿಸಿ ನಮ್ಮ ಕರ್ತವ್ಯಗಳಿಗೊಂದು ಸಾರ್ಥಕತೆಯ ಮೆರುಗನ್ನು ನೀಡಿದ್ದರು.

ಆದರೆ ‘ಸರ್ವಂ ಕಮರ್ಷಿಯಲ್‌ ಮಯಂ’ ಆಗಿರುವ ಇವತ್ತಿನ ಪ್ರಪಂಚದಲ್ಲಿ ಅಂಥ ಆಚಾರ್ಯರು ಎಲ್ಲೋ ಸಹಸ್ರರಲ್ಲೊಬ್ಬಿಬ್ಬರು ಸಿಗಬಹುದೇನೊ. ಇಂತಹ ಸಂದರ್ಭದಲ್ಲಿ, ಸನ್ನಿವೇಶದಲ್ಲಿ ಕನ್ನಡ ಸಾರಸ್ವತಲೋಕಕ್ಕೊಂದು ಹೊಸ ಸಮರ್ಪಣೆಯಾಗಿದೆ, ‘ಸಂಸ್ಕಾರ ಸಂಜೀವಿನಿ’ ಎಂಬ ಪುಸ್ತಕ - ಗರ್ಭಾದಾನಾದಿ ನಲವತ್ತೆಂಟು ಸಂಸ್ಕಾರಗಳ ವೈಜ್ಞಾನಿಕ ವಿಶ್ಲೇಷಣೆ, ಕಸ್ತೂರಿ ಕನ್ನಡ ಭಾಷೆಯಲ್ಲಿ ! ಧಾರ್ಮಿಕ, ವೈದಿಕ ಪರಂಪರೆಯ ರಕ್ಷಕರು-ಪೋಷಕರಿಗಾಗಿ ಸರಳ ವಿವರಣೆಯುಳ್ಳ ಕೈಪಿಡಿಯಿದು. ಕನ್ನಡಿಗರ ಮನೆ-ಮನ ತುಂಬಬಹುದಾದ ಒಂದು ಮಾರ್ಗದರ್ಶಕ ಉದ್ಗ್ರಂಥ. ಈ ಪುಸ್ತಕದ, ಪುಸ್ತಕಕರ್ತನ ಕಿರುಪರಿಚಯವನ್ನಿಲ್ಲಿ ಕೊಡುತ್ತಿದ್ದೇನೆ.

ಷೋಡಶ (ಹದಿನಾರು) ಸಂಸ್ಕಾರಗಳ ಬಗ್ಗೆ ಕೆಲ ಪುಸ್ತಕಗಳು, ಪತ್ರಿಕೆಗಳಲ್ಲಿ ಲೇಖನಗಳು, ಆಕರಗ್ರಂಥಗಳಲ್ಲಿ ಉಲ್ಲೇಖಗಳು ಇತ್ಯಾದಿ ಕೆಲವಷ್ಟು ಲಭ್ಯವಿವೆ; ಹೆಚ್ಚಿನವರಿಗೆ ಕೇಳಿಗೊತ್ತಿರುವುದೂ ಷೋಡಶ ಸಂಸ್ಕಾರಗಳ ಬಗ್ಗೆ ಮಾತ್ರ. ಆದರೆ ಸಪ್ತಪಾಕಸಂಸ್ಥೆಗಳು, ಪಂಚಮಹಾಯಜ್ಞಗಳು, ಸಪ್ತಹವಿರ್ಯಜ್ಞಗಳು, ಸಪ್ತಸೋಮಯಜ್ಞಗಳು ಮತ್ತು ಆತ್ಮಗುಣಕ ಅಷ್ಟಸಂಸ್ಕಾರಗಳು ಇತ್ಯಾದಿ ಇತರ ಸಂಸ್ಕಾರಗಳ ವಿಶ್ಲೇಷಣೆ ಕನ್ನಡದಲ್ಲಿ ಪ್ರಾಯಶಃ ಇದೇ ಪ್ರಪ್ರಥಮ.

Sri Vasudev R Paranjape, author of Samskaara Sanjeeviniಈ ಅನನ್ಯ ಕೃತಿಯ ಲೇಖಕರು ಮೈಸೂರಿನ ವಾಸುದೇವ ಪರಾಂಜಪೆಯವರು. ವೃತ್ತಿಯಿಂದ ಅವರೊಬ್ಬ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕ. ಆದರೆ ಪ್ರವೃತ್ತಿಯಲ್ಲಿ ಬಹುಮುಖ ಪ್ರತಿಭೆ. ಸಂಸ್ಕೃತ-ವೈದಿಕ ಗೋಷ್ಠಿಗಳಲ್ಲಿ ಪ್ರವಚನಕಾರ, ಸಂಸ್ಕೃತ ಭಾಷೆಯ ಪ್ರಚಾರಕ, ವೇದ ಭಾಷ್ಯಗಳ ಕನ್ನಡ ಅನುವಾದಕ, ಹಲವು ಧಾರ್ಮಿಕ-ಸಂಸ್ಕೃತ ಪತ್ರಿಕೆಗಳಲ್ಲಿ ಬರೆಯುವ ಅನುಭವಿ ಲೇಖಕ. ಶ್ರೌತಯಜ್ಞಗಳನ್ನು ಮಾಡಿಸಲು ಭಾರತದಾದ್ಯಂತ ಸಂಚರಿಸಿದವರು. ‘ಮೀಮಾಂಸಾ ವಿದ್ವಾನ್‌’, ‘ಸಂಸ್ಕೃತ ಪ್ರಚಾರ ದುರಂಧರ’ ಮತ್ತು ‘ಶ್ರೌತಪ್ರವೀಣ’ - ಇವೆಲ್ಲ ಅವರ ಉಪಾಧಿಗಳು. ಜತೆಯಲ್ಲೇ ಮೈಸೂರು ವಿಶ್ವವಿದ್ಯಾಲಯದ ಎಂ.ಎ, ಬಿ.ಎಡ್‌ ಪದವಿ. ಪರಾಂಜಪೆಯವರ ನಾಲ್ಕು ದಶಕಗಳಿಗೂ ಹೆಚ್ಚಿನ ವೇದವೇದಾಂಗಗಳ ಅಧ್ಯಯನ-ಅಧ್ಯಾಪನದ ಅನುಭವಗಳೆಲ್ಲ ಫಲಿತಗೊಂಡ ರೂಪವೇ ‘ಸಂಸ್ಕಾರ ಸಂಜೀವಿನಿ’ ಕೃತಿ.

ಸಂಸ್ಕಾರವೆಂದರೇನು? ಅದರ ಆಚರಣೆ ಇಂದಿನ ಸಮಾಜದಲ್ಲಿ ಎಷ್ಟು ಪ್ರಸ್ತುತ? ಧಾರ್ಮಿಕ ಮತ್ತು ವೈಜ್ಞಾನಿಕ ಉಪಯೋಗಗಳೇನು? ಯಾವಾಗ ಯಾವುದನ್ನು ಯಾಕೆ ಮಾಡಬೇಕು? ಇವೆಲ್ಲದರ ವಿಶ್ಲೇಷಣೆ, ಚಿಂತನೆ ಈ ಪುಸ್ತಕದಲ್ಲಿದೆ. ಮನುಷ್ಯಜೀವಿಯ ಆತ್ಮ ಮತ್ತು ಶರೀರಗಳಿಗೆ ಜೀವಿತಾವಸ್ಥೆಯಲ್ಲಿ ಮಾಡಬೇಕಾದುವು ಒಟ್ಟು 48 ಸಂಸ್ಕಾರಗಳು. ಇವುಗಳಲ್ಲಿ ಗರ್ಭಾದಾನದಿಂದ ಹಿಡಿದು ವಿವಾಹದವರೆಗಿನ 16 ಸಂಸ್ಕಾರಗಳು (ಇವನ್ನೇ ಷೋಡಶ ಸಂಸ್ಕಾರಗಳೆನ್ನುವುದು) ಗುರು ಅಂದರೆ ತಂದೆಯಾದವನು ಮಕ್ಕಳಿಗೆ ಮಾಡಬೇಕಾದ ಸಂಸ್ಕಾರಗಳು. ವಿವಾಹದಿಂದ ಮರಣದವರೆಗಿನ 32 ಸಂಸ್ಕಾರಗಳನ್ನು ವ್ಯಕ್ತಿ ತನಗೆ ತಾನೇ ಮಾಡಿಕೊಳ್ಳುವುದು. (ಮರಣಾನಂತರದ 16 ಸಂಸ್ಕಾರಗಳು - ಇವು ಈ ಪುಸ್ತಕದ ವ್ಯಾಪ್ತಿಯಲ್ಲಿಲ್ಲ - ಮಗನಾದವನು ತಂದೆಯ ಶರೀರ/ಜೀವಾತ್ಮಕ್ಕೆ ಮಾಡುವಂಥ ಸಂಸ್ಕಾರಗಳು). ಎಲ್ಲ ಸಂಸ್ಕಾರಗಳನ್ನು ಸಕಾಲದಲ್ಲಿ ಸರಿಯಾದ ರೀತಿಯಲ್ಲಿ ಪಡೆದ ವ್ಯಕ್ತಿ ಶತಮಾನದವರೆಗೂ ಸಮಾಜಕ್ಕೆ ಬೇಕಾದವನಾಗಿಯೂ ಭಾರವಾಗದವನಾಗಿಯೂ ಬಾಳಬಲ್ಲನು. A well maintained machine lasts long, produces more... ನಿಮ್ಮ ಬೈಕ್‌, ಕಾರ್‌ ಅಥವಾ ಯಾವುದೇ ವಾಹನವನ್ನೇ ತೆಗೆದುಕೊಳ್ಳಿ. ಕಾಲಕಾಲಕ್ಕೆ ಸರ್ವಿಸಿಂಗ್‌, ಆಯಿಲ್‌ಚೇಂಜ್‌, ಟೈರ್‌-ರೊಟೇಷನ್‌ ಇತ್ಯಾದಿ ಕ್ಲುಪ್ತವಾಗಿ ಮಾಡುತ್ತಿದ್ದರೆ ಆ ಗಾಡಿಯು ಮಾರ್ಗಮಧ್ಯದಲ್ಲಿ ಕೈಕೊಡುವ ಸಾಧ್ಯತೆ ತುಂಬಾ ಕಡಿಮೆ ಅಲ್ಲವೇ? ಅದೇ ರೀತಿ ಮನುಷ್ಯಶರೀರ/ಆತ್ಮದ ವಿಷಯವೂ. ಅದೇ ಮಹತ್ವ ಸಂಸ್ಕಾರಗಳದು.

ತಲಸ್ಪರ್ಶಿ ವಿವರಣೆ, ತುಲನಾತ್ಮಕ ದೃಷ್ಟಿಕೋನ, ಅಗತ್ಯವಿರುವಲ್ಲೆಲ್ಲ ಔಚಿತ್ಯಪೂರ್ಣ ಪೂರಕಮಾಹಿತಿ, ಸಂಸ್ಕಾರಗಳ ಪ್ರಯೋಜನಗಳನ್ನು ಅರ್ಥಮಾಡಿಕೊಂಡು ಶ್ರೀಸಾಮಾನ್ಯರೂ ಪಡೆದುಕೊಳ್ಳಲೆಂಬ ದೃಷ್ಟಿ, ಮೌಲ್ಯಗಳ ಶ್ರದ್ಧಾಪೂರ್ಣ ವಿಶ್ಲೇಷಣೆ, ಕೆಲವಾರು ಚಿತ್ರಗಳು-ನಕ್ಷೆಗಳ ಮೂಲಕ ಬಣ್ಣನೆ, ಕೋಷ್ಟಕಗಳು, ಮುಖ್ಯವಾದ ಮಂತ್ರಗಳು, ಮಂತ್ರಾರ್ಥಗಳು - ಪುಸ್ತಕದ ಇವಿಷ್ಟು ಹೂರಣವನ್ನು ನೋಡಿದರೆ ಕೃತಿಯ ರಚನೆಯ ಹಿಂದಿನ ಆಸ್ಥೆ, ಶ್ರಮ ಮತ್ತು ಸದುದ್ದೇಶಗಳು ಸರ್ವವಿದಿತವಾಗುತ್ತವೆ. ಆಬಾಲವೃದ್ಧರಿಗೂ ಸುಲಭವಾಗಿ ಓದಲಿಕ್ಕನುಕೂಲಕರವಾಗುವಂತೆ ಸ್ವಲ್ಪ ದೊಡ್ಡ ಅಕ್ಷರಗಳಲ್ಲೇ ಸುಂದರವಾಗಿ ಮುದ್ರಣಗೊಂಡಿದೆ. ಕನ್ನಡ ಆವೃತ್ತಿ ಬಿಡುಗಡೆಯಾಗಿ ಒಂದೆರಡು ತಿಂಗಳಲ್ಲೇ ಈ ಪುಸ್ತಕದ ಮರಾಠಿ ಮತ್ತು ಹಿಂದಿ ಭಾಷಾಂತರವೂ ನಡೆದಿದೆ. ಕ್ರಮೇಣ ಇಂಗ್ಲಿಷ್‌ ತರ್ಜುಮೆ ಬಂದರೂ ಬರಬಹುದು!

Samskaara Sanjeevini cover pageಪುಸ್ತಕದಲ್ಲಿ ಓದಲು ಸಿಗುವ ಪೂರಕ ವಿವರಣೆಗಳ ಒಂದೆರಡು ಉದಾಹರಣೆಗಳನ್ನು ನೋಡೋಣ. ವಿವಾಹಸಂಸ್ಕಾರದಲ್ಲಿ ವರೋಪಾಚಾರವಾಗಿ ‘ಮಧುಪರ್ಕ’ (ಮೊಸರಿನಲ್ಲಿ ಜೇನುತುಪ್ಪ , ತುಪ್ಪ ಮಿಶ್ರಣ)ವನ್ನು ವರನಿಗೆ ಕುಡಿಯಲು ಕೊಡುವುದು ಕ್ರಮ. ವಿವಾಹ ಸಂದರ್ಭ ಬಿಟ್ಟರೆ ಮಧುಪರ್ಕದ ಉಪಯೋಗ ಬೇರೆಲ್ಲೂ ಮಾಡುವ ರೂಢಿಯಿಲ್ಲ. ಆದರೆ ಆಶ್ವಲಾಯನ ಸೂತ್ರ ಹೇಳುವಂತೆ - ‘ಋತ್ವಿಜಃ ವೃತ್ವಾ ಮಧುಪರ್ಕ ಮಾಹರೇತ್‌ ಸ್ನಾತಕಾಯ ಉಪಸ್ಥಿತಾಯ ರಾಜ್ಞೆ ಚ ಆಚಾರ್ಯ ಶ್ವಶುರ ಪಿತೃವ್ಯ ಮಾತುಲಾನಾಮ್‌’ - ಅಂದರೆ ಯಜ್ಞಕರ್ಮಾರ್ಥ ವರಣ ಮಾಡಲ್ಪಟ್ಟ ಋತ್ವಿಜ, ಕನ್ಯಾರ್ಥಿಯಾಗಿ ಬಂದ ವರ, ಊರಿಗೆ ಆಗಮಿಸಿದ ರಾಜ, ಮನೆಗೆ ಆಗಮಿಸಿದ ಆಚಾರ್ಯ/ವಿದ್ಯಾಗುರು, ಹೆಂಡತಿಯ ತಂದೆ (ಮಾವ), ತಂದೆಯ ಸಹೋದರ, ತಾಯಿಯ ಸಹೋದರ - ಇವಿಷ್ಟೂ ಮಂದಿ ಮಧುಪರ್ಕ ಗೌರವಕ್ಕೆ ಅರ್ಹರು. ಇವತ್ತಿನ ಕಾಲದಲ್ಲಿ ಮಧುಪರ್ಕ ಕೊಡುವುದು ಮದುವಣಿಗನಿಗೆ ಮಾತ್ರ.

ಸೀಮಂತೋನ್ನಯನ ಸಂಸ್ಕಾರದ ಬಗ್ಗೆ ಪ್ರಸ್ತಾಪಿಸುತ್ತ ಪರಾಂಜಪೆಯವರು, ಸೀಮಂತ ಅಂದರೆ ಬೈತಲೆ, ಗರ್ಭಿಣಿಯ ಬೈತಲೆಯಲ್ಲಿ ಸಾಳೆಹಕ್ಕಿಯ ಗರಿಯಿಂದ ಮೇಲಕ್ಕೆ (ಉನ್ನಯನ) ಗೆರೆಯನ್ನೆಳೆಯುವುದು ಎಂಬುದಾಗಿ ಪ್ರತಿಪದಾರ್ಥವಾಗಿ ವಿವರಿಸಿದ್ದಾರೆ. ಧಾರ್ಮಿಕ ಹಿನ್ನೆಲೆಯಿದ್ದರೂ ಸೀಮಂತಸಂಸ್ಕಾರದಲ್ಲಿ ಮನಃಶಾಸ್ತ್ರಕ್ಕೂ ನೀಡಿರುವ ಒತ್ತನ್ನು, ಬಸುರಿಯ ಮನವನ್ನು ಹಸನಾಗಿ ಇರಿಸಬೇಕಾದ ಅಗತ್ಯವನ್ನು ವರ್ಣಿಸಿದ್ದಾರೆ. ಹೀಗೆಯೇ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೂಡಾಕರ್ಮ (ಚೌಲ/ಜಾವಳ ಅನ್ನುತ್ತೇವಲ್ಲ - ಅದು, ಸುಶ್ರುತ ಸಂಹಿತಾ ಚಿಕಿತ್ಸಾಸ್ಥಾನದಲ್ಲೂ ಉಲ್ಲೇಖವಿದೆ), ಉಪನಯನ - ಪ್ರತಿಯಾಂದು ಸಂಸ್ಕಾರದ ಬಗ್ಗೆಯೂ ಸಾಕ್ಷ್ಯಾಧಾರಗಳೊಂದಿಗೆ ಚರ್ಚಿಸಿದ್ದಾರೆ. ಸಂಸ್ಕಾರವಿವರಗಳು ವರ್ಣತ್ರಯದವರಿಗೆ ಬೇರೆಬೇರೆಯಾದಾಗ ಅವನ್ನು ಪ್ರಮಾಣಪೂರ್ವಕ ವಿವರಿಸಿದ್ದಾರೆ, ಬ್ರಾಹ್ಮಣರು ಮಾತ್ರ ಸಂಸ್ಕಾರಗಳಿಗೆ ಅಧಿಕಾರಿಗಳು ಎಂಬ ಸಾಮಾನ್ಯತಪ್ಪುತಿಳಿವಳಿಕೆಯನ್ನು ಅಲ್ಲಗಳೆದಿದ್ದಾರೆ. ವಿಧ್ಯುಕ್ತವಾದ ಸಂಸ್ಕಾರಗಳನ್ನು, ಸಿದ್ಧತೆಗಳನ್ನು ಪಡೆದಿರುವ ಹೆಂಗಸರಿಗೂ ವೇದಾಧಿಕಾರವೂ ವೈದಿಕ ಕರ್ಮಾಧಿಕಾರವೂ ಉಂಟೆಂಬ ಆರ್ಷ ಸಿದ್ಧಾಂತವನ್ನು ಎತ್ತಿಹಿಡಿದಿದ್ದಾರೆ.

ದಿನಚರಿ (ಡೈರಿ) ಬರೆಯುವ ಒಳ್ಳೆಯ ಅಭ್ಯಾಸ ತುಂಬ ಮಂದಿಗೆ ಇರುತ್ತದೆ. ಬ್ರಹ್ಮಯಜ್ಞ ಸಂಸ್ಕಾರದಲ್ಲೂ ‘ದಿನಚರಿ’ ಉಲ್ಲೇಖವಿದೆಯೆಂದರೆ ಆಶ್ಚರ್ಯವಾಗುತ್ತದಲ್ಲವೇ? ‘ಪ್ರತ್ಯಹಂ ಪ್ರತ್ಯವೇಕ್ಷೇತ ನರಃ ಚರಿತಮಾತ್ಮನಃ। ಕಿನ್ನುಮೆ ಪಶುಭಿಸ್ತುಲ್ಯಂ ಕಿಂ ಸತ್ಪುರುಷೈರಿತಿ ।। ’ - ವ್ಯಕ್ತಿಯು ರಾತ್ರೆ ವಿಶ್ರಮಿಸುವ ಮುನ್ನ ತನ್ನ ದಿನಚರಿಯನ್ನೊಮ್ಮೆ ಸ್ಮರಿಸಿಕೊಳ್ಳಬೇಕು. ತಾನು ಈದಿನ ಮಾಡಿದ ಕೆಲಸಕಾರ್ಯಗಳನ್ನು ಪಶುಗಳಂತೆ ಆಚರಿಸಿದ್ದೇನೋ ಅಥವಾ ಸತ್ಪುರುಷರಂತೆ ಆಚರಿಸಿದ್ದೇನೋ ಎಂದು. ದಿನಚರಿಯ ಪೂರ್ವಾಲೋಕನೆಯಿಂದ ಮರುದಿನ ಆಚರಿಸಲಿರುವ ಕೆಲಸಗಳಲ್ಲಿ ಪಶುಚರ್ಯೆ ಕಡಿಮೆಯಾಗಿ ಸತ್ಪುರುಷಚರ್ಯೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಕ್ರಿಕೆಟ್‌ ಮತ್ತು ಇನ್ನಿತರ ಆಟಗಾರರು ಬಿಡುವಿನ ವೇಳೆಯಲ್ಲಿ ತನ್ನ ಆಟದ ವಿಡಿಯಾವನ್ನು ಮತ್ತೆಮತ್ತೆ ವೀಕ್ಷಿಸಿ ಎಲ್ಲಿ ಎಡವಿದ್ದೇನೆ, ಎಲ್ಲಿ ಉತ್ತಮಪಡಿಸಿಕೊಳ್ಳಬಹುದು ಎಂದು ಸದಾ ಕಲಿಕೆಯಲ್ಲಿರುತ್ತಾರೆ. ಪೂರ್ವಜರು ರೂಪಿಸಿದ ಸಂಸ್ಕಾರಗಳ ಆಶಯವೂ ಅದೇ - continuous refinement to achieve efficiency and effectiveness!

* * *

ಪ್ರಾಚೀನ ಮೌಲ್ಯಗಳಲ್ಲಿ ನಿಷ್ಠೆ, ಶ್ರದ್ಧೆ, ಆಸಕ್ತಿಯುಳ್ಳ ಕನ್ನಡಿಗರ ಪುಸ್ತಕಸಂಗ್ರಹಕ್ಕೆ ಸೇರಲು ಯೋಗ್ಯವಾದ ಈ ಪುಸ್ತಕದ ಬಗ್ಗೆ ಇತರ ವಿವರಗಳು ಮತ್ತು ಸಂಪರ್ಕ ಮಾಹಿತಿ:

ಮುನ್ನುಡಿ: ಡಾ. ರಾ ಸತ್ಯನಾರಾಯಣ (ಮಹಾಮಹೋಪಾಧ್ಯಾಯ ರಾಷ್ಟ್ರಭೂಷಣ). ಪ್ರಸ್ತಾವನೆ: ವೇದರತ್ನ ಕೇಶವ ಜೋಗಳೇಕರ (ಇವರು ಪರಾಂಜಪೆಯವರ ವಿದ್ಯಾಗುರು. ಪುಸ್ತಕವು ಗುರುವಿಗರ್ಪಿತ ಎಂದಿದ್ದಾರೆ ಲೇಖಕ). ಪ್ರಕಾಶಕರು: ಶುಭೋದಯ ಪ್ರಕಾಶನ; 507, 65ನೇ ಅಡ್ಡರಸ್ತೆ, 5ನೇ ಬ್ಲಾಕ್‌, ರಾಜಾಜಿನಗರ, ಬೆಂಗಳೂರು- 560010. ದೂರವಾಣಿ: 080-23102269. ಪ್ರಥಮ ಮುದ್ರಣ: 2004; ಪುಟಗಳು: 196; ಬೆಲೆ: 50 ರೂಪಾಯಿ.

ನಮ್ಮ ಇಂದಿನ, ಮುಂದಿನ ಪೀಳಿಗೆಗಳು ಸಂಸ್ಕಾರವಂಚಿತರಾಗದಿರಲಿ; ಸಮಾಜವು ಅಧೋಗತಿಗೆ ಜಾರದಿರಲಿ ಎಂಬುದೇ ನಮ್ಮೆಲ್ಲರ ಸದಾಶಯ - ಶುಭಾಶಯವಾಗಲಿ.

- [email protected]


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X