ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಬತ್ತು ಹತ್ತು ತೊಂಬತ್ತು... ತೋಟಕೆ ಹೋದನು ಸಂಪತ್ತು !

By Staff
|
Google Oneindia Kannada News
Srivathsa Joshi *ಶ್ರೀವತ್ಸ ಜೋಶಿ

Assorted Berries from Butlers Orchard ಇಲ್ಲಿ ವಾಷಿಂಗ್ಟನ್‌ ಡಿಸಿಯಲ್ಲಿ ನಮ್ಮ ಮನೆಗೆ ಸುಮಾರು ಐದಾರು ಮೈಲುಗಳಷ್ಟೇ ದೂರದಲ್ಲಿ ‘ಬಟ್ಲರ್ಸ್‌ ಒರ್ಚರ್ಡ್‌’ ಎಂಬ ಹೆಸರಿನ ಒಂದು ಹಣ್ಣಿನತೋಪು ಇದೆ. ಏನಪ್ಪಾ ಅದರ ವಿಶೇಷತೆ ಅಂತಂದ್ರೆ, ವರ್ಷದ ಬೇರೆಬೇರೆ ಋತುಮಾನಗಳಲ್ಲಿ ಅಲ್ಲಿ ಬೆಳೆಸುವ ವಿಧವಿಧದ ಹಣ್ಣುಗಳನ್ನು ಸಾರ್ವಜನಿಕರೇ ಹೋಗಿ ಕೊಯ್ದು ಬುಟ್ಟಿ ತುಂಬಿಸಿ, ಅಲ್ಲೇ ಇರುವ ‘ಚೆಕ್‌ಔಟ್‌ ಪಾಯಿಂಟ್‌’ನಲ್ಲಿ ತೂಕದ ಆಧಾರದಲ್ಲಿ ಹಣ ಪಾವತಿಸಿ ತರಬಹುದು. ಬರೀ ಗ್ರೋಸರಿ ಸ್ಟೋರ್‌ಗಳಲ್ಲಿ ಹಣ್ಣು ಕೊಳ್ಳುವುದಕ್ಕಿಂತ ನಾವೇ ಕೈಯಲ್ಲಿ ಬುಟ್ಟಿ ಹಿಡಿದು ಗಿಡದಿಂದ ಕೊಯ್ದು ತರುವುದೆಂದರೆ (ದುಡ್ಡು ಕೊಡಬೇಕು ಹೌದಾದರೂ) ಅದೊಂದು ಅಮಿತಾನಂದದ ವಿಷಯವೇ.

ಮೊನ್ನೆ ಒಂದು ದಿನ ನಮ್ಮ ಮಗರಾಯನನ್ನೂ ಕರಕೊಂಡು ಹೋಗಿದ್ದೆವು ಬಟ್ಲರ್ಸ್‌ ಒರ್ಚರ್ಡ್‌ಗೆ. ಇದು ಆ ತೋಟಕ್ಕೆ ನಮ್ಮ ಎರಡನೇ ಭೇಟಿ. ಕಳೆದ ವರ್ಷವೂ ಬೇರೊಂದು ಸೀಸನ್‌ನಲ್ಲಿ ಹೋಗಿದ್ದೆವು. ಏಪ್ರಿಲ್‌-ಮೇ ತಿಂಗಳಲ್ಲಿ ಸ್ಟ್ರಾಬೆರ್ರಿ ಹಣ್ಣುಗಳ ಸೀಸನ್‌ನಿಂದ ಶುರುವಾಗಿ, ಮುಂದೆ ಒಂದೊಂದೇ ತಿಂಗಳಂತೆ ಬ್ಲೂಬೆರ್ರಿ, ರಾಸ್ಪ್‌ಬೆರ್ರಿ, ಟಾರ್ಟ್‌ಚೆರ್ರಿ, ಬ್ಲ್ಯಾಕ್‌ಬೆರ್ರಿ ಇತ್ಯಾದಿ ಬಹುತೇಕ ‘ಬೆರ್ರಿ’ ಪ್ರಭೇದದ ಹಣ್ಣುಗಳು. ಸೆಪ್ಟೆಂಬರ್‌-ಅಕ್ಟೋಬರ್‌ ಹೊತ್ತಿಗೆ ಸೇಬು, ಹ್ಯಾಲ್ಲೊವೀನ್‌ ಟೈಮಿಗೆ ಸರಿಯಾಗಿ ಚೀನಿಕುಂಬಳ, ಕೊನೆಯಲ್ಲಿ ಡಿಸೆಂಬರ್‌ನ ಮಂಜು ಬೀಳಲು ಶುರುವಾಗುವಾಗ ಕ್ರಿಸ್ಮಸ್‌ ಟ್ರೀಸ್‌. ಒಟ್ಟಿನಲ್ಲಿ ವರ್ಷದ ಎಂಟು ತಿಂಗಳಲ್ಲಿ ಬಟ್ಲರ್ಸ್‌ ಒರ್ಚರ್ಡ್‌ ‘ಸಂಪದ್ಭರಿತ’ವಾಗಿರುತ್ತದೆ. ಹೋದವರ್ಷ ಆಗಸ್ಟ್‌ನಲ್ಲಿ ಬ್ಲ್ಯಾಕ್‌ಬೆರ್ರಿ (ಹಿಪ್ಪುನೇರಳೆಹಣ್ಣು) ಮತ್ತು ರಾಸ್ಪ್‌ಬೆರ್ರಿ ಟೈಮಲ್ಲಿ ನಾವು ಹೋಗಿದ್ದದ್ದು. ಈ ಸಲ ಜೂನಲ್ಲಿ ಹೋಗಿದ್ದರಿಂದ ಈಗ ಸ್ಟ್ರಾಬೆರ್ರಿ ಇನ್ನೇನು ಮುಗೀತಾ ಬಂದಿದ್ದು ಬ್ಲೂಬೆರ್ರಿಗಳ ಪರ್ವಕಾಲ.

S Joshi family visit to Butlers Orchardಒರ್ಚರ್ಡ್‌ಗೆ ಭೇಟಿಯೆಂದರೆ ಒಂಥರಾ ಎಜುಕೇಷನ್‌ ಟ್ರಿಪ್ಪೂ ಹೌದು. ಸ್ಟ್ರಾಬೆರ್ರಿ ಹಣ್ಣುಗಳಾಗುವುದು ಟೊಮ್ಯಾಟೊದಂಥ - ಅತ್ತ ಗಿಡವೂ ಅಲ್ಲ ಇತ್ತ ಬಳ್ಳಿಯೂ ಅಲ್ಲ - ಆ ಥರದ ಪ್ಲಾಂಟ್‌ಗಳಲ್ಲಿ ಎಂಬ ವಿಷಯ ನನಗೆ ಗೊತ್ತಾದದ್ದು ಮೊನ್ನೆ ಒರ್ಚರ್ಡ್‌ಗೆ ಹೋಗಿ ಬಂದ ನಂತರವೇ. ಅಂಗಡಿಯಲ್ಲಿ ಮಾತ್ರ ಹಣ್ಣು ಕೊಂಡು ಗೊತ್ತಿದ್ದರೆ ಅದೇ ಆಗುವುದು, ಮೂಲಕ್ಕೆ ಅಂದರೆ ಪ್ರಕೃತಿಗೇ ಹೋದರೇನೇ ಗೊತ್ತಾಗುವುದು ಯಾವ ಹಣ್ಣು ಎಂಥ ಬಳ್ಳಿ, ಗಿಡ ಅಥವಾ ಮರದಲ್ಲಿ ಬಿಡುವುದೆನ್ನುವ ಸಂಗತಿ. ಬಟ್ಲರ್ಸ್‌ ಒರ್ಚರ್ಡ್‌ನಲ್ಲಿ ಹತ್ತಿರದವರೆಗೂ ನಮ್ಮ ಕಾರಲ್ಲೇ ಹೋಗಿ ಪಾರ್ಕ್‌ ಮಾಡಿ ಅಲ್ಲೇ ಇಟ್ಟಿರುವ ಬುಟ್ಟಿ (ಬೇರೆ ಬೇರೆ ಸೈಜ್‌ಗಳಲ್ಲಿಟ್ಟಿರುತ್ತಾರೆ) ಎತ್ತಿಕೊಂಡು ನಮಗೆ ಬೇಕಾದಷ್ಟು ಹಣ್ಣು ಕೊಯ್ಯಬಹುದು. ಕೊಯ್ಯುತ್ತಿರುವಾಗಲೇ ರುಚಿನೋಡಲೆಂದು ಒಂದೊಂದಾಗಿ ಗುಳುಂ ಮಾಡುವವರೂ ಇದ್ದಾರಾದರೂ ಆ ಬಗ್ಗೆ ಅಲ್ಲಿನ ‘ಮಾಲಿ’ಗಳು ಅಷ್ಟೇನೂ ಕಟ್ಟುನಿಟ್ಟಿಲ್ಲ. ಬ್ಲೂಬೆರ್ರಿ ಪ್ಲಾಂಟೇಷನ್‌ ಇರುವಲ್ಲಿಗೆ ಸಣ್ಣಸಣ್ಣ ಬ್ಯಾಚ್‌ಗಳಲ್ಲಿ ಜನರನ್ನು ಟ್ರಾಕ್ಟರ್‌ನಲ್ಲಿ ಕರಕೊಂಡು ಹೋಗುತ್ತಾರೆ. ನನ್ನ ಮಗನಿಗೆ ಅದೂ ಒಂದು ಖುಶಿಯ ಸಂಗತಿಯೇ! ಒಟ್ಟಿನಲ್ಲಿ ಬಟ್ಲರ್ಸ್‌ ಒರ್ಚರ್ಡ್‌ ನಮಗೊಂದು ಮನೆ ಹತ್ತಿರದಲ್ಲೇ ಫೇವರಿಟ್‌ ಸ್ಪಾಟ್‌. ಈರೀತಿ ಬೇರೆ ಒರ್ಚರ್ಡ್‌ಗಳು ಅಮೆರಿಕದಲ್ಲಿ (ಫ್ಲೋರಿಡಾ, ಕ್ಯಾಲಿಫೋರ್ನಿಯಾದಲ್ಲೆಲ್ಲ ಕಿತ್ತಳೆ, ದ್ರಾಕ್ಷೆ ಇತ್ಯಾದಿ) ಬೇರೆ ಕಡೆಯೂ ಇವೆಯೆನ್ನಿ.

ಅದ್ಸರಿ, ಇವತ್ತಿನ ಶೀರ್ಷಿಕೆಯಲ್ಲಿನ ‘ತೋಟಕೆ ಹೋದನು ಸಂಪತ್ತು...’ ಸಂಗತಿಯೇನು ಎಂದುಕೊಂಡಿರಾ? ‘ಹತ್ತು ಹತ್ತು ಇಪ್ಪತ್ತು... ತೋಟಕೆ ಹೋದನು ಸಂಪತ್ತು...’ ಅಂತ ಒಂದು ಶಿಶುಗೀತವಿದೆಯಲ್ಲ ! ಬಟ್ಲರ್ಸ್‌ ಒರ್ಚರ್ಡ್‌ಗೆ ಹೋಗಿ ನಾವು ಕಲ್ಲು ಬಿಸಾಕಿ ಮಾಲಿ ಕಂಡಾಗ ಓಡಿಬಂದದ್ದು ಅಲ್ಲವಾದರೂ ಯಾಕೋ ತೋಟಕ್ಕೆ ಹೋದ ಚೂಟಿ ಹುಡುಗ ಸಂಪತ್ತು ನೆನಪಾಗುತ್ತಾನೆ. ಅಲ್ಲಿ ಹಣ್ಣುಕೊಯ್ಯಲು ಹೋಗುವವರಲ್ಲೆಲ್ಲ ನನಗೇಕೊ ಸಂಪತ್ತು ಕಾಣುತ್ತಾನೆ. ಬಟ್ಲರ್ಸ್‌ ಒರ್ಚರ್ಡ್‌ ‘ಸಂಪತ್‌ ಭರಿತ’ವಾಗಿರುತ್ತದೆ ಎಂದದ್ದೂ ಅದಕ್ಕೇ!

ಹೇಗಿದ್ದರೂ ಇದು ವಿಚಿತ್ರಾನ್ನದ ಸಂಚಿಕೆ ನಂಬರ್‌ ತೊಂಬತ್ತು. ಅದಕ್ಕೇ ಪ್ರಾಸಬದ್ಧ ಶೀರ್ಷಿಕೆ - ‘ಎಂಬತ್ತು ಹತ್ತು ತೊಂಬತ್ತು... ತೋಟಕೆ ಹೋದನು ಸಂಪತ್ತು’!

* * *

Ripe Strawberries ready for pluckingಹಣ್ಣುಗಳನ್ನು ಗಿಡ/ಮರದಿಂದ ಸ್ವತಃ ಕೊಯ್ದು ತಿನ್ನುವುದು ನಮ್ಮಂಥ ಹಳ್ಳಿಮೂಲದವರಿಗೆ ಹೊಸ ವಿಷಯವೇ ಅಲ್ಲ. ಚಿಕ್ಕಂದಿನಲ್ಲಿ ನಮ್ಮ ತೋಟದಲ್ಲಿ ಬೇಸಿಗೆಯಲ್ಲಿ ಜಾಂಬು (ಅದರಲ್ಲೇ ಮೂರ್ನಾಲ್ಕು ವಿಧದವು ಇವೆ)ಹಣ್ಣು ತಿಂದದ್ದಕ್ಕೆ ಲೆಕ್ಕವೇ ಇಲ್ಲ. ಅಂಜೂರದ ಮರದ ಮೈತುಂಬ ಬಿಡುತ್ತಿದ್ದ ಅಂಜೂರ ಹಣ್ಣಾಗಿ ಕಪ್ಪಾಗುವವರೆಗೆ ನಾವೆಲ್ಲ ‘ಕಪಿಸೈನ್ಯ’ದವರು ಬಿಟ್ಟರೆ ತಾನೆ, ನಸುಗೆಂಪು ಆದರೆ ಸಾಕು ನಮಗದು ಪಕ್ವವೆಂದೇ ಲೆಕ್ಕ. ಪೇರಳೆ (ಸೀಬೆ) ಹಣ್ಣುಗಳ ಮರಗಳ ಎಡ್ರೆಸ್‌ ಗೆಳೆಯರ ಗುಂಪಿನಲ್ಲಿ ಎಲ್ಲರಿಗೂ ಗೊತ್ತು. ಚಂದ್ರಪೇರಳೆ, ಸೂರ್ಯಪೇರಳೆ, ಬೀಜಗಳಿಲ್ಲದ ಪೇರಳೆ - ವಿಧವಿಧದ ಸವಿ. ಗಿಳಿ ಕಚ್ಚಿಟ್ಟಿದ್ದಕ್ಕಂತೂ ಇನ್ನೂ ಸವಿ! ಹಳ್ಳಿಯಲ್ಲಿ ಮನೆಗಳ ಪಕ್ಕವೇ ಕಾಡಾದ್ದರಿಂದ ಕೆಲವೆಲ್ಲ ಕಾಡು-ಹಣ್ಣುಗಳ ಕೊಯ್ಲು ಹಳ್ಳಿಮಕ್ಕಳ ಬೇಸಿಗೆರಜೆಯ ಚಟುವಟಿಕೆಯಲ್ಲೊಂದು. ನಾವು ಕೇಪಳಹಣ್ಣು ಎನ್ನುತ್ತಿದ್ದ ಕೆಂಪು ಅಥವಾ ಹಳದಿ ಬಣ್ಣದ ಸಣ್ಣ ಹಣ್ಣು, ರೆಂಜೆಹೂವಿನ ಮರದ ಹಣ್ಣು, ಮತ್ತು ಇನ್ನೊಂದು ಸಂಪಿಗೆಹಣ್ಣು ಎನ್ನುತ್ತಿದ್ದ (ಸಂಪಿಗೆ ಹೂವಿನ ಮರಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ) ಕೆಂಪುಬಣ್ಣದ ಹಣ್ಣುಗಳು... ಒಂದೇ ಎರಡೇ.

ಶಾಲೆ ಮುಗಿಸಿ ಮನೆಗೆ ವಾಪಸಾಗುವಾಗ ನೇರದಾರಿಯಾಗಿ ಮನೆಗೆ ಬರದೆ ಹಣ್ಣಿನಮರಗಳ ತಲಾಶಿಯನ್ನೂ ಮಾಡಿಯೇ ಬರುವುದು. ನೇರಳೆಹಣ್ಣು ಇತ್ಯಾದಿ ತಿಂದರೆ ನಾಲಿಗೆಗೆ ಬಣ್ಣ ಬಂದು ಮನೆಯವರಿಗೆ ನಮ್ಮ ಕಿಲಾಡಿತನ ತಿಳಿದೇ ತಿಳಿಯುತ್ತದೆ ಎನ್ನುವುದು ಗೊತ್ತಿದ್ದರೂ ಹಣ್ಣುಕೊಯ್ದು ತಿನ್ನದಿರುತ್ತಿರಲಿಲ್ಲ. ನೆಲ್ಲಿಕಾಯಿ ತಿಂದು ನೀರು ಕುಡಿದಾಗ ತುಂಬ ಸಿಹಿಯೆನಿಸುವುದೇ ಒಂದು ಮೋಜು. ಇನ್ನು ಹೆಬ್ಬಲಸು ಹಣ್ಣು, ಬೇಸಗೆಯ ಕೊನೆಯಲ್ಲಿ ಒಂದೆರಡು ಮಳೆ ಬಂದರೆ ಹಣ್ಣಾಗಿ ಪೊದೆ ತುಂಬ ಮುತ್ತುಗಳನ್ನು ಜೋಡಿಸಿಟ್ಟಂತೆ ಕಾಣುವ ಮುಳ್ಳುಹಣ್ಣು, ತುಳು ಭಾಷೆಯಲ್ಲಿ ‘ನಾಣೇಲ್‌’ ಎನ್ನುವ ಹಸಿರು ಬಣ್ಣದ ಹಣ್ಣು - ಇವನ್ನೆಲ್ಲ direct from source ತಿಂದದ್ದೇ ಹೊರತು ಯಾರೋ ಕೊಯ್ದು ಇನ್ಯಾರೋ ಮಾರುತ್ತಿರುವುದನ್ನು ತಿಂದು ಗೊತ್ತೇ ಇಲ್ಲ !

ತೋಟದಿಂದ ಫ್ರೆಷ್‌ಆಗಿ ಕೊಯ್ದು ತಂದ ಹಣ್ಣುಗಳಿಗಿರುವ (ಅಥವಾ ಕಾಯಿಯಾಗಿದ್ದಾಗ ಕೊಯ್ದು ಮಾಗಿದ ಮೇಲೆ) ಸವಿ, ಮಾರ್ಕೆಟ್‌ನಲ್ಲಿ ಎಂಥ ಚಂದದ ಬುಟ್ಟಿಗಳಲ್ಲಿ ಎಷ್ಟು ಸೊಗಸಾಗಿ ಪೇರಿಸಿಟ್ಟಿದ್ದರೂ ಆ ಹಣ್ಣುಗಳಿಗಿರುವುದಿಲ್ಲ. ನಮ್ಮ ಕಾರ್ಕಳ ಪೇಟೆಯಲ್ಲಿ ಮುದುಕನೊಬ್ಬ ‘ಚಿಕ್ಕು ಚಿಕ್ಕು....’ ಎಂದು ಕೂಗುತ್ತ ಬಸ್‌ಸ್ಟಾಂಡಿನಲ್ಲಿ ಬಸ್‌ ಪ್ರಯಾಣಿಕರಿಗೆ ಸಪೋಟಹಣ್ಣು ಮಾರುವವ ಕಾಣಿಸುತ್ತಿದ್ದ. ಬಾಡಿಮುದುಡಿ ನಿರಿಗೆಗಳು ಬಂದಿರುತ್ತಿದ್ದ ಆ ಸಪೋಟ ಮತ್ತು ಆ ಮುದುಕನ ಸುಕ್ಕುಮುಖ ಹೆಚ್ಚುಕಡಿಮೆ ಒಂದೇ ಕಲರ್‌/ಟೆಕ್ಸ್‌ಚರ್‌ ಎಂದರೂ ಸರಿಯೇ. ಅವನು ಮಾರುವ ಆ ಸಪೋಟಗಳ ರುಚಿಯೆಲ್ಲಿ , ಬೇಸಿಗೆ ರಜೆಯಲ್ಲಿ ಸಿರ್ಸಿಗೆ ನಮ್ಮಕ್ಕನ ಮನೆಗೆ ಹೋದಾಗ ಅಲ್ಲಿ ಅವರ ದೊಡ್ಡ ತೋಟದಿಂದ ನಾವೇ ಕೊಯ್ದ ಸಪೋಟ ಹಣ್ಣುಗಳ ರುಚಿಯೆಲ್ಲಿ ! ಎಷ್ಟು ದೊಡ್ಡ ಮತ್ತು ಸಿಹಿ ಸಪೋಟ ಅಂತೀರಾ! ಸಿರ್ಸಿಯಿಂದ ಬರುತ್ತ ಕಾಯಿ ಚಿಕ್ಕು ಕೊಯ್ದು ಕಾರ್ಟನ್‌ಗಳಲ್ಲಿ ತುಂಬಿಸಿ ನಮ್ಮೂರಿಗೆ ತಕ್ಕೊಂಡು ಬರುತ್ತಿದ್ದೆವು.

ಹೈದರಾಬಾದ್‌ನಲ್ಲಿ ನಾನಿದ್ದಾಗಿನ ಬ್ಯಾಚುಲರ್‌ಹುಡ್‌ ದಿನಗಳ ಮಾತು. ಹೈದರಾಬಾದ್‌-ಸಿಕಂದರಾಬಾದ್‌ (ಜಂಟ ನಗರಾಲು) ವಿಧವಿಧ ಹಣ್ಣುಗಳ ಲಭ್ಯತೆ ಮಟ್ಟಿಗೆ ನನಗಿಷ್ಟವಾಗಿದ್ದುವು. ಸಿಕಂದರಾಬಾದ್‌ನಲ್ಲಿ ಒಂದು ಪ್ರದೇಶಕ್ಕೆ ‘ಸೀತಾಫಲ್‌ ಮಂಡಿ’ ಎಂದೇ ಹೆಸರಿದೆ. ಹತ್ತಿರದ ಹಳ್ಳಿಗಳಿಂದ ರೈತರು ಸೀತಾಫಲ ಹಣ್ಣು ಬುಟ್ಟಿಗಟ್ಟಲೆ ತಂದು ಅಲ್ಲಿ ಮಾರುತ್ತಿದ್ದರು. ನನ್ನೊಬ್ಬ ಸಹೋದ್ಯೋಗಿ ಸ್ನೇಹಿತ ಫೆಲಿಕ್ಸ್‌ (ಈಗ ಅವನು ನ್ಯೂಜೀಲಂಡ್‌ಗೆ ವಲಸೆ ಹೋಗಿದ್ದಾನೆ) ಮತ್ತು ನಾನು ಕೆಲವೊಮ್ಮೆ ಹೈದರಾಬಾದ್‌ನಿಂದ ಸುಮಾರು 20-30 ಮೈಲು ದೂರದಲ್ಲಿರುವ ತುರ್ಕಪಲ್ಲಿ ಎಂಬ ಹಳ್ಳಿಗೆ, ಅಲ್ಲಿಯ ಸೀತಾಫಲ ತೋಟಗಳಿಗೆ ಹೋಗಿ ಬುಟ್ಟಿ ತುಂಬ ಸೀತಾಫಲ ಕೊಯ್ದುಕೊಂಡು ಬರುತ್ತಿದ್ದೆವು. ಎಸ್ಪೆಷಲಿ ಅಕ್ಟೋಬರ್‌ ನವೆಂಬರ್‌ನಲ್ಲಿ (ದೀಪಾವಳಿ ಟೈಮ್‌) ಊರಿಗೆ ಹೋಗುವ ಹಿಂದಿನ ದಿನ ನಮ್ಮದೊಂದು ಟ್ರಿಪ್‌ ಸೀತಾಫಲ ಒರ್ಚರ್ಡ್‌ಗೆ ಇರುತ್ತಿತ್ತು.

ಒಂದೆರಡು ಸಲ ದೊಡ್ಡಬುಟ್ಟಿಯಲ್ಲಿ ನಾನು ಒಯ್ದಿದ್ದ ಸೀತಾಫಲ ನಮ್ಮೂರಲ್ಲಿ ಸಕತ್‌ ಇಷ್ಟವಾಗಿ ರುಚಿಹತ್ತಿದ ಮೇಲೆ, ಹೈದರಾಬಾದಿಂದ ಬರುವಾಗ ಪುಲ್ಲಾರೆಡ್ಡಿ ಸ್ವೀಟ್ಸ್‌ ಇತ್ಯಾದಿ ತರುವ ಬದಲು (ಹೈದರಾಬಾದ್‌ ಮತ್ತು ಕರ್ನೂಲ್‌ನ ಬಹುವಿಖ್ಯಾತ ಜಿ. ಪುಲ್ಲಾ ರೆಡ್ಡಿ ಸ್ವೀಟ್ಸ್‌ ಶಾಪ್‌) ಸೀತಾಫಲಗಳ ಬುಟ್ಟಿಯೇ ಆಗಬಹುದು ಎಂದು ನಮ್ಮನೆಯಲ್ಲಿ ಎಲ್ಲರ ಅಭಿಪ್ರಾಯವಾಗಿತ್ತು. ಹೈದರಾಬಾದಿಂದ ನಮ್ಮೂರಿಗೆ ತಲುಪಬೇಕಿದ್ದರೆ 24 ಗಂಟೆ ಬಸ್‌ ಪ್ರಯಾಣ. ಅದೂ ಒಂದೆರಡು ಕಡೆ ಬಸ್‌ ಬದಲಾಯಿಸಬೇಕು. ಅಂಥಾದ್ದರಲ್ಲಿ ಸೀತಾಫಲಗಳ ಭಾರದ ಬುಟ್ಟಿ ಬೇರೆ ಬವಣೆ ಕೊಟ್ಟು ಬೆವರಿಳಿಸುತ್ತಿದ್ದರೂ ‘ತೋಟದಿಂದ ಕೊಯ್ದು ತಂದ ಸೀತಾಫಲ ಹಣ್ಣು’ ಮನೆಯವರಿಗೆಲ್ಲ ಹಂಚುವಾಗಿನ, ಅದನ್ನು ಸವಿದಾಗಿನ ಆನಂದ ಇದೆಯಲ್ಲ , ಅದು something special !

ಮೊನ್ನೆ ಬಟ್ಲರ್ಸ್‌ ಒರ್ಚರ್ಡ್‌ಗೆ ಹೋಗಿ ಯಥೇಷ್ಟ ಹಣ್ಣು ಕೊಯ್ದು (ಕೊಂಡು) ತಂದಾಗ ನೆನಪಾಯ್ತು ಇದೆಲ್ಲ!

* * *

ಹಣ್ಣಿನ ತೋಟ, ಕೊಯ್ದ ಹಣ್ಣುಗಳ ರಸದೂಟಗಳ ವರ್ಣನೆಯ ತೊಂಬತ್ತನೇ ವಿಚಿತ್ರಾನ್ನ ಸಂಚಿಕೆಯ ಶೀರ್ಷಿಕೆಯನ್ನಲಂಕರಿಸಿದ್ದಕ್ಕಾಗಿ ಸಂಪತ್ತುಗೆ ಥಾಂಕ್ಯೂ ಹೇಳಬೇಡವೇ? ಅದಕ್ಕಾಗಿಯೇ ಇಲ್ಲಿದೆ ಸಂಪತ್ತು ಮಾಡಿದ ಸಾಹಸದ ಮೂಲಹಾಡಿನ ಪೂರ್ಣಪಾಠ. ಓದಿಕೊಳ್ಳಿ.

ಹತ್ತು ಹತ್ತು ಇಪ್ಪತ್ತು । ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು । ಕೈಯಲಿ ಒಂದು ಕಲ್ಲಿತ್ತು
ಮೂವತ್ತು ಹತ್ತು ನಲ್ವತ್ತು । ಎದುರಿಗೆ ಮಾವಿನ ಮರವಿತ್ತು
ನಲ್ವತ್ತು ಹತ್ತು ಐವತ್ತು । ಮರದಲಿ ಕಾಯಿ ತುಂಬಿತ್ತು
ಐವತ್ತು ಹತ್ತು ಅರ್ವತ್ತು । ಕಲ್ಲನು ಬೀರಿದ ಸಂಪತ್ತು
ಅರ್ವತ್ತು ಹತ್ತು ಎಪ್ಪತ್ತು । ಕಾಯಿಗಳೆಲ್ಲ ಉದುರಿತ್ತು
ಎಪ್ಪತ್ತು ಹತ್ತು ಎಂಬತ್ತು । ಮಾಲಿಯ ಕಂಡನು ಸಂಪತ್ತು
ಎಂಬತ್ತು ಹತ್ತು ತೊಂಬತ್ತು । ಕಾಲುಗಳೆರಡು ಓಡಿತ್ತು
ತೊಂಬತ್ತು ಹತ್ತು ನೂರಾಯ್ತು । ತಲುಪಿದ ಮನೆಗೆ ಸಂಪತ್ತು

ಸಂಪತ್ತು ಮನೆ ತಲುಪಿದ; ಕಲ್ಲೆಸೆದು ಬೀಳಿಸಿದ ಹಣ್ಣುಗಳನ್ನು ಕೊನೆಗೂ ಹೆಕ್ಕಿಕೊಂಡನೇ ಇಲ್ಲವೇ ಎಂಬುದನ್ನು ಹಾಡು ತಿಳಿಸುವುದಿಲ್ಲ. ಇದನ್ನ ಓದುತ್ತಿರುವಾಗ ಮಾತ್ರ ನಿಮ್ಮ ನೆನಪುಗಳು ಸಂಪತ್ತು ಮಾಡುತ್ತಿದ್ದಂತೆ ನೀವೂ ಕಲ್ಲು ಬಿಸಾಡುತ್ತಿದ್ದ, ಹಣ್ಣು ಕೊಯ್ಯುತ್ತಿದ್ದ, ತಿಂದು ಆನಂದಿಸುತ್ತಿದ್ದ ದಿನಗಳತ್ತ ಸರಿಯುತ್ತವೆ. ಅಲ್ಲಿಗೆ ‘ಬಾಲ್ಯದ ನೆನಪುಗಳನ್ನು ಕೆದಕಿದ’ ಇನ್ನೊಂದು ವಿಚಿತ್ರಾನ್ನ ಸಂಚಿಕೆಯ ಮುಕ್ತಾಯವಾಗುತ್ತದೆ. ಓದಿದ ನಿಮ್ಮ ಅನಿಸಿಕೆ, ಪ್ರತಿಕ್ರಿಯೆಗಳನ್ನು ಆಹ್ವಾನಿಸುತ್ತ [email protected] ವಿಳಾಸವನ್ನೂ ತಿಳಿಸಿ ಮುಂದಿನ ಮಂಗಳವಾರ ಮತ್ತೆ ಭೇಟಿಯಾಗೋಣ ಎಂದು ಬೀಳ್ಕೊಡುವ ಹೊತ್ತಾಗುತ್ತದೆ.


ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X