• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಎರಡು ಬಾಳೆಲೆ ಹರಡು

By Staff
|

*ಶ್ರೀವತ್ಸ ಜೋಶಿ

ಒಂದನೇ ತರಗತಿಯ ಕನ್ನಡಭಾರತಿ ಪಠ್ಯಪುಸ್ತಕದಲ್ಲಿದ್ದ ಹಾಡು ಅದು. ಅದರಲ್ಲಿ ಬಾಳೆ ಎಲೆ ಹರಡಿದ ಮೇಲೆ ಬಡಿಸುವುದು ಅನ್ನ (ಮೂರು-ನಾಲ್ಕು ಅನ್ನ ಹಾಕು), ಸಾರು (ಐದು-ಆರು ಬೇಳೆ ಸಾರು) ಮತ್ತು ಪಲ್ಯದ ದಂಟು (ಏಳು-ಎಂಟು ಪಲ್ಯಕೆ ದಂಟು. ಒಂದೋ ಬಸಳೆ, ಹರಿವೆ ಅಥವಾ ನುಗ್ಗೆಯ ದಂಟು ಇರಬಹುದು) ಮಾತ್ರ. ಇವಿಷ್ಟು ಐಟಂಸ್‌ ಆಗುವಾಗ ಎಲೆ ಮುದುರುತ್ತದೆ (ಒಂಬತ್ತು-ಹತ್ತು ಎಲೆಮುದುರೆತ್ತು), ಊಟದ ಆಟ ಮುಗಿಯುತ್ತದೆ, ಮಗುವಿನ ಹೊಟ್ಟೆಯೂ ತುಂಬುತ್ತದೆ. ಒಂದನೇ ಕ್ಲಾಸಿನ ಮಗು ಇನ್ನೆಷ್ಟು ತಿಂದೀತು, ಅಲ್ಲವೆ?

ಬಹುಶಃ ಇದು ‘ನಿತ್ಯಾವಳಿ’ಯ ಊಟ. ಆದರೆ ಸಮಾರಂಭದ ಸ್ಪೆಷಲ್‌ ಊಟ ಹೇಗಿರುತ್ತದೆ? ನಮ್ಮ ಉಡುಪಿ ಪರಿಸರದಲ್ಲಿ ಮದುವೆ-ಮುಂಜಿ-ಗೃಹಪ್ರವೇಶ-ಚಂಡಿಕಾಹೋಮ ಇತ್ಯಾದಿ ಸಮಾರಂಭ ಇದ್ದರೆ ಊಟದ ಎಲೆಯಲ್ಲಿ ಏನೆಲ್ಲ ಐಟಂಸ್‌ ಇರುತ್ತವೆಯೆಂಬುದರ ಪರಿಚಯ ಈ ಸಲದ ವಿಚಿತ್ರಾನ್ನದಲ್ಲಿ . ಇತ್ತೀಚೆಗೆ ‘ಬಫೆ’ ಸಂಸ್ಕೃತಿಯಿಂದಾಗಿ ಈ ತರಹ ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ (ಊಟಕ್ಕೆ ಒಂದು ಪಂಕ್ತಿ ಕುಳಿತರೆ ಮುಗಿಯಲು ಸುಮಾರು ಒಂದು ಗಂಟೆಯಷ್ಟು ಹೊತ್ತಾದರೂ ಬೇಕು) ಊಟಮಾಡುವ ಕ್ರಮ ನಿಧಾನವಾಗಿ ಕ್ಷೀಣಿಸುತ್ತಿದೆ ಎಂಬ ವಿಚಾರ ನಿಮಗೂ ತಿಳಿದದ್ದೇ. ಟೆಸ್ಟ್‌ ಮ್ಯಾಚ್‌ಗಳಿಗಿಂತ ವನ್‌-ಡೇ ಕ್ರಿಕೆಟ್‌ನತ್ತ ಒಲವು ಜಾಸ್ತಿ ಇದೆಯಲ್ಲ , ಹಾಗೆ. ಆದರೂ ನಿಮ್ಮ ಬಾಲ್ಯದಲ್ಲಾದರೂ ಇಂತಹ ಒಂದು ಊಟವನ್ನು ನೀವು ಮಾಡೇ ಇರುತ್ತೀರಿ.

ಇರಲಿ. ಈಗ ನಿಮ್ಮ ಮುಂದೆ ಉಡುಪಿ ಶೈಲಿಯ ಊಟ ಉಣ್ಣಲು ಬಾಳೆ ಎಲೆ ಹರಡಲಾಗಿದೆ. ಎಲೆಯ ಯಾವ ಯಾವ ಭಾಗದಲ್ಲಿ ಯಾವ್ಯಾವ ಐಟಂ ಬಡಿಸಲಾಗುತ್ತದೆ ಎಂಬ ಪಕ್ಷಿನೋಟ ಇಲ್ಲಿದೆ. ಕೆಲವು ಪದಾರ್ಥಗಳ ಬಗ್ಗೆ ಸೂಕ್ತ ಟಿಪ್ಪಣಿಯನ್ನೂ ಬರೆಯಲಾಗಿದೆ. ಆಸ್ವಾದಿಸಿ ಈ-ಭೋಜನವನ್ನು !

1. ಉಪ್ಪು (ಕರ್ನಾಟಕದ ವಿವಿಧ ಕಡೆಗಳಲ್ಲಿ , ಉಪ್ಪು ಮೊದಲು ಬಡಿಸಬಹುದೇ, ಬಾರದೇ ಎಂಬ ಶಾಸ್ತ್ರ /ರೀತಿರಿವಾಜುಗಳಿವೆ. ಉಡುಪಿ ಊಟದಲ್ಲಿ ಮೊದಲು ಎಲೆಯ ಮೇಲೆ ಬಡಿಸುವುದೇ ಉಪ್ಪು. ತಾಯಿಗಿಂತ ಬಂಧುವಿಲ್ಲ , ಉಪ್ಪಿಗಿಂತ ರುಚಿಯಿಲ್ಲ....!)

2. ಉಪ್ಪಿನಕಾಯಿ

3. ಚಟ್ನಿ ಪುಡಿ (ಕೆಂಪು/ಕಂದು ಬಣ್ಣದ ಒಣ ಪೌಡರ್‌)

4. ಕೋಸುಂಬರಿ-1ನೇ ವಿಧ (ಹೆಸರು ಬೇಳೆ, ಕ್ಯಾರೆಟ್‌, ಸೌತೆಕಾಯಿ ತುರಿದು ಹಾಕಲಾಗಿದೆ)

5. ಕೋಸುಂಬರಿ-2ನೇ ವಿಧ (ಕಡಲೆಬೇಳೆ ರಾತ್ರಿಯಿಡೀ ನೆನೆಸಿಟ್ಟು ಮಾರನೆದಿನ ಕಾಯಿತುರಿ, ಒಗ್ಗರಣೆ ಸೇರಿಸಿದೆ)

6. ತೆಂಗಿನಕಾಯಿ ಚಟ್ನಿ (ಮಾವಿನಕಾಯಿ ಸಿಗುವ ಸೀಸನ್‌ನಲ್ಲಾದರೆ ಮಾವಿನಚಟ್ನಿ)

7. ಬೀನ್ಸ್‌ ಪಲ್ಯ

8. ಗುಜ್ಜೆ ಪಲ್ಯ (ಗುಜ್ಜೆ ಅಂದರೆ ಎಳೇ ಹಲಸಿನಕಾಯಿ; ಅದರ ಸಿಪ್ಪೆ ತೆಗೆದು ಅದಕ್ಕೆ ಉದ್ದುದ್ದವಾಗಿ ಒಂದು ಮರದಕೋಲು ತೂರಿ, ಕತ್ತಿಯಿಂದ ಗುಜ್ಜೆಯನ್ನು ಸಣ್ಣಸಣ್ಣದಾಗಿ ಕೊಚ್ಚಿ ಮಾಡಿದ ಪಲ್ಯ. ಆಹಾ!)

9. ಚಿತ್ರಾನ್ನ (ವಿಚಿತ್ರಾನ್ನ ಅಲ್ಲ !)

10. ಹಪ್ಪಳ (ಉದ್ದಿನ ಹಪ್ಪಳ ಇಲ್ಲವೆ ಹಲಸಿನಹಪ್ಪಳ, ಅವಲಕ್ಕಿ ಹಪ್ಪಳ, ಬಟಾಟೆ ಹಪ್ಪಳ ಯಾವುದೂ ಆಗುತ್ತದೆ)

11. ಸಂಡಿಗೆ (ಸಬ್ಬಕ್ಕಿಯಿಂದ ಮಾಡಿದ್ದು)

12. ಕಡುಬು

13. ಅನ್ನ

14. ತೊವ್ವೆ (ಹೆಸರುಬೇಳೆಯ ದಪ್ಪ ಸಾರು, ಶುಂಠಿ-ಕೊತ್ತುಂಬರಿ-ಕರಿಬೇವು ಧಾರಾಳ ಇದೆ)

15. ಸಿಹಿಗೊಜ್ಜು (ಮೊಸರು/ಮಜ್ಜಿಗೆ ಉಪಯೋಗಿಸಿ ಮಾಡಿದ ಬಟಾಟೆ ಗೊಜ್ಜು . ಸಮಾರಂಭದ ಊಟವಾದ್ದರಿಂದ ಈರುಳ್ಳಿ ಹಾಕಿರುವುದಿಲ್ಲ)

16. ಸಾರು (ರಸಮ್‌. ಬೆಂಗಳೂರು ಮತ್ತು ಇತರ ಕೆಲವು ಪ್ರದೇಶಗಳಲ್ಲಿ ಮೊದಲು ಹುಳಿ, ಪಲ್ಯ ಇತ್ಯಾದಿಯೆಲ್ಲ ಬಡಿಸಿ ಕೊನೆಯಲ್ಲಿ ಸಾರು ಬಡಿಸುವ ಕ್ರಮ. ಆದರೆ ಉಡುಪಿ ಊಟದಲ್ಲಿ ಸಾರಿನದೇ ಪ್ರಧಾನ ಭೂಮಿಕೆ. ಮೂರು-ನಾಲ್ಕು ಸಲ ‘ವಿಚಾರಣೆ’ ಸಾರಿನದೇ. ಪಲ್ಯ, ಹುಳಿ ಇತ್ಯಾದಿ ಏನಿದ್ದರೂ ‘ನೆಂಚಿ’ಕೊಳ್ಳಲು ಮಾತ್ರ)

17. ಉದ್ದಿನಹಿಟ್ಟು (ಉದ್ದಿನಹಿಟ್ಟಿಗೆ ಸ್ವಲ್ಪ ಮಜ್ಜಿಗೆ/ಮೊಸರು ಸೇರಿಸಿ ಒಗ್ಗರಣೆ ಕೊಟ್ಟದ್ದು. ಇದನ್ನು ಸ್ವಲ್ಪವೇ ಒಂದು ಚಿಟಿಕೆಯಷ್ಟೆ ಬಡಿಸುವುದು)

18. ಬದನೆ ಪೋಡಿ (ಬದನೆಕಾಯಿಯ ತೆಳ್ಳನೆಯ ಸ್ಲೈಸ್‌ ಮಾಡಿ ಕಡ್ಲೆಹಿಟ್ಟಲ್ಲಿ ಅದ್ದಿ ಕರಿದ ಬೋಂಡಾ. ಬದನೆಕಾಯಿಯ ಬದಲು ಬಟಾಟೆ, ಬಾಳೆಕಾಯಿ, ಸಿಹಿಗೆಣಸು ಉಪಯೋಗಿಸುವುದೂ ಇದೆ)

19. ಮೆಣಸ್‌ಕಾಯಿ (ಇದೊಂದು ಕರಾವಳಿ ಜಿಲ್ಲೆ ಸ್ಪೆಷಲ್‌. ಹಾಗಲಕಾಯಿ ಮತ್ತು ಆಮ್ಟೆಕಾಯಿ ಹಾಕಿ ಮಾಡಿದರೆ ಅತ್ಯುತ್ತಮ. ಎಳ್ಳು ಹಾಕಬೇಕು. ಸಿಹಿ-ಕಹಿ-ಖಾರ-ಹುಳಿ ಎಲ್ಲ ರುಚಿಗಳೂ ಇದರಲ್ಲಿ ಮೇಳೈಸಿರುತ್ತವೆ)

20. ಗೋಳಿ ಬಜೆ (ಮೈದಾ ಹಿಟ್ಟಿಗೆ ಮಜ್ಜಿಗೆ, ಸೋಡಾ, ಉಪ್ಪು, ಖಾರ ಬೆರೆಸಿ ಎಣ್ಣೆಯಲ್ಲಿ ಕರಿದ ತಿಂಡಿ)

21. ಅವಿಯಲ್‌ (ಇದು ಕೇರಳ, ತಮಿಳುನಾಡಿನವರ ಕೊಡುಗೆ. ಎಲ್ಲ ತರಕಾರಿಗಳ ಮಿಶ್ರಣ. ನುಗ್ಗೆಕಾಯಿ, ಕ್ಯಾರೆಟ್‌, ಬೀನ್ಸ್‌ , ಬಟಾಟೆ ಇವಿಷ್ಟಂತೂ ಕಡ್ಡಾಯ)

22. ಗಟ್ಟಿಬಜೆ (ಬೆಂಡೆಕಾಯಿ ಪಕೋಡಾ)

23. ಗುಳ್ಳ ಕೊದ್ಯೆಲ್‌ (ಗುಳ್ಳ ಎಂದರೆ ಉಡುಪಿ ಪರಿಸರದಲ್ಲಿ, ವಿಶೇಷವಾಗಿ ‘ಮಟ್ಟಿ’ ಎಂಬ ಹಳ್ಳಿಯಲ್ಲಿ ಬೆಳೆಯುವ ಸ್ಪೆಷಲ್‌ ಬದನೆ. ಗುಳ್ಳಕ್ಕೆ ಬದನೆಯ ಅಡಿಗೆಗಿಂತ ‘ಎರೋಮಾ’ ಜಾಸ್ತಿ . ಕೊದ್ಯೆಲ್‌ ಅಂದರೆ ತುಳು ಭಾಷೆಯಲ್ಲಿ ಸಾಂಬಾರ್‌. ಇದು ಮಾಮೂಲಿ ಸಾಂಬಾರ್‌/ಹುಳಿಗಿಂತ ಸ್ವಲ್ಪ ದಪ್ಪ ಇರುತ್ತದೆ. ‘ಘಸಿ’ ಎನ್ನಲಡ್ಡಿಯಿಲ್ಲ)

24. ಚಿರೋಟಿ-ಹಾಲು (ಇನ್ನೂ ವಿವರಿಸಿದರೆ ನಿಮ್ಮ ಬಾಯಲ್ಲಿ ಈಗಾಗಲೇ ನೀರೂರಿರುವುದಕ್ಕೆ ಅಣೆಕಟ್ಟು ಕಟ್ಟಬೇಕಾದೀತು!)

25. ಗೊಜ್ಜಾಂಬಡೆ (ಮಸಾಲಾ ವಡೆ ಕರಿದು ಗೊಜ್ಜಿನಲ್ಲಿ ಮುಳುಗಿಸಿಡುತ್ತಾರೆ)

26. ಕಾಯಿ ಹೋಳಿಗೆ (ತೆಂಗಿನಕಾಯಿಯ ಹೂರಣದ ಹೋಳಿಗೆ)

27. ವಾಂಗೀಭಾತ್‌ (ವಾಂಗೀ ಅಂದರೆ ಬದನೆ. ಆದರೆ ಕಾಲಿಫ್ಲವರ್‌ ಅಥವಾ ಇತರ ತರಕಾರಿ ಹಾಕಿ ಮಾಡಿದರೂ ವಾಂಗೀಭಾತ್‌ ಎಂದೇ ಹೆಸರು!)

28. ಭಾರತ (ನಮ್ಮ ಮಹಾನ್‌ ದೇಶದ ಹೆಸರೂ ಹೌದು. ಶುಂಠಿ, ತೆಂಗಿನಕಾಯಿ, ಮೊಸರು ಉಪಯೋಗಿಸಿ ಮಾಡಿದ ಒಂದು ತಣ್ಣನೆ ಗೊಜ್ಜಿನ ಹೆಸರೂ ಹೌದು!)

29. ಪರಡಿ ಪಾಯಸ (ಕುದಿಯುತ್ತಿರುವ ತೆಂಗಿನಕಾಯಿಹಾಲಿಗೆ ಜರಡಿಯ ಮೂಲಕ ತೆಳು ಅಕ್ಕಿಹಿಟ್ಟನ್ನು ಉದುರಿಸಿ, ಬೆಲ್ಲ , ಏಲಕ್ಕಿ ಹಾಕಿ ಮಾಡಿದ ಪಾಯಸ)

30. ಮೊಸರು

31. ಮಜ್ಜಿಗೆ (ಮಜ್ಜಿಗೆ ಅಥವಾ ಮೊಸರಿನೊಂದಿಗೆ ಸ್ವಲ್ಪ ಅನ್ನ ಕಲಸಿ ಊಟ ಮಾಡಿದರೇನೇ ಮೃಷ್ಟಾನ್ನ ಭೋಜನ ಕೊನೆಗೊಳ್ಳುವುದು. ಮಜ್ಜಿಗೆಯೂಟ ಅಂದರೆ ಸಭೆ-ಸಮಾರಂಭದ ಕೊನೆಯಲ್ಲಿ ‘ಜನಗಣಮನ...’ ಇದ್ದಂತೆ).

ಆನಂದ ಆನಂದವೆಂಬೋ ತೇಗು ಬಂದಾಗ... ಎರಡು ತೇಗು ಬಂದಾಗ... ಆನಂದ ಮೂರುತಿ ನಮ್ಮ ಪುರಂದರ ವಿಠಲನ ನೆನೆಯಿರೋ...

ವಿಚಿತ್ರಾನ್ನ ಅಂಕಣವು ಹದಿನೆಂಟು ವಾರಗಳನ್ನು ಯಶಸ್ವಿಯಾಗಿ ಪೂರೈಸಿದ ಸಂದರ್ಭದಲ್ಲಿ ನಿಮಗೆಲ್ಲ ಒಂದು ಮಿತ್ರಭೋಜನ ಬಡಿಸಬೇಕೆಂಬ ಆಶಯವಿತ್ತು . ನಿಮಗೆ ತೃಪ್ತಿಯಾಗಿದೆಯೆಂದು ಭಾವಿಸಿದ್ದೇನೆ. ವಿಚಿತ್ರಾನ್ನವೇನೂ ಮಹಾಭಾರತ (ಹದಿನೆಂಟು ಪರ್ವಗಳು) ಅಥವಾ ಭಗವದ್ಗೀತೆಯಷ್ಟು (ಹದಿನೆಂಟು ಅಧ್ಯಾಯಗಳು) ಶ್ರೇಷ್ಠವಾದದ್ದು ಅಲ್ಲ ಬಿಡಿ. ಇದೇನಿದ್ದರೂ ನಮ್ಮ ನಿಮ್ಮ ದೈನಂದಿನ ಸರಳ ಜೀವನದ ಸುಂದರ ಸಂಗತಿಗಳ ಸುಲಲಿತ ವ್ಯಾಖ್ಯಾನ. ಹದಿನೆಂಟರ ನಂತರವೂ ಮುಂದುವರಿಸುವಾ; ಆಗದೇ? sjoshim@hotmail.comಗೆ ಬರೆದು ತಿಳಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more