ಚುನಾವಣೆಯೆಂಬ ರೋಚಕ ಪತ್ತೆದಾರಿ ಕಾದಂಬರಿ!
ಚುನಾವಣೆ ಎಂದರೆ ಕೆಲವರಿಗೆ ಹುರುಪೋ ಹುರುಪು. ಲೌಡ್ ಸ್ಪೀಕರಿನಲ್ಲಿ ಜೋರಾಗಿ ತಮ್ಮ ಅಭ್ಯರ್ಥಿಯ ಗುರುತು ಪರಿಚಯವನ್ನು ಒರಲುತ್ತಾ ಓಡಾಡುವ ಜೀಪುಕಾರುಗಳು, ತಮ್ಮ ತಮ್ಮ ಅಭ್ಯರ್ಥಿಯ ಜಯಘೋಷ ಮಾಡುತ್ತ ಭರದಿಂದ ಅತ್ತಿತ್ತ ಓಡಾಡುವ ಅವರ ಚೇಲಾಗಳು, ಜನಗಳನ್ನು ಐದು ವರ್ಷಗಳ ನಂತರ ಮತ್ತೆ ಬಂದು ಭೇಟಿಯಾಗಿ ಕಷ್ಟ ಸುಖ ವಿಚಾರಿಸುವ ನಾಟಕ ಮಾಡುವ ರಾಜಕಾರಣಿಗಳು!
"ಅವರು ಬರಲಿ ಅವರನ್ನೊಮ್ಮೆ ವಿಚಾರಿಸುವಾ" ಎಂದುಕೊಂಡು, ಆದರೆ ಅವರು ಬಂದಾಕ್ಷಣ ಅವರು ಹೇಳಿದ್ದನ್ನೆಲ್ಲಾ ಕೇಳಿ ತಲೆಯಾಡಿಸಿ ಕಳಿಸುವ ನಮ್ಮಂತಹ ಜನಸಾಮಾನ್ಯರು, ಪ್ರಿಪೋಲ್, ಎಕ್ಸಿಟ್ ಪೊಲ್ ಎಂದೆಲ್ಲಾ ಗಂಟೆಗಟ್ಟಲೇ ವಿಶ್ಲೇಷಣೆ ನಡೆಸುವ ಮೀಡಿಯಾ ಧುರಂಧರರು, ಇವೆಲ್ಲಾ ಕೆಲವರಿಗೆ ಅದೇನೋ ಒಂದು ಕಿಕ್ ನೀಡುತ್ತವೆ. ಚುನಾವಣೆಯ ಅನೇಕವಾರಗಳ ಮೊದಲು ಮತ್ತು ಅನಂತರ ಸಾಮಾನ್ಯ ಜನತೆ ಈ ಚುನಾವಣೆಯ ವಿಷಯದ ಮೇಲೆ ಲೋಕಾಭಿರಾಮದ ಮಾತುಕತೆ ನಡೆಸುತ್ತಾ ಮಗ್ನರಾಗಿರುತ್ತಾರೆ.
ನಾನೂ ಕೂಡಾ ಇದಕ್ಕೆ ಹೊರತಲ್ಲ. ಚುನಾವಣಾ ಆಯೋಗ ಚುನಾವಣೆಯ ದಿನಗಳನ್ನು ಘೋಷಣೆ ಮಾಡುವದರಿಂದ ಶುರುವಾಗಿ, ಚುನಾವಣೆಯ ಫಲಿತಾಂಶದ ಘೋಷಣೆಯವರೆಗೆ ಒಂದು ಕುತೂಹಲಕಾರಿ ರೋಚಕ ಪತ್ತೇದಾರಿ ಕಾದಂಬರಿಯಂತೆ ಏಳು ಬೀಳುಗಳು ಮತ್ತು ಅದ್ಭುತ ತಿರುವುಗಳನ್ನೊಳಗೊಂಡ ನಮ್ಮ ಚುನಾವಣೆಗಳ ಮಹಾಪರ್ವದ ಆಕರ್ಷಣೆ ನನ್ನನ್ನು ಕೂಡಾ ಸೆಳೆದಿಡುತ್ತದೆ. ಆದರೆ ಜೊತೆಗೇ ಚುನಾವಣಾ ಪರ್ವ ನನ್ನನ್ನು ವ್ಯಾಕುಲಗೊಳಿಸುತ್ತದೆ. ಈ ಚುನಾವಣೆಗಳ ಮೂಲ ಉದ್ದೇಶ ಮತ್ತು ಅವುಗಳ ಈಗಿನ ಪ್ರಕ್ರಿಯೆ ಮತ್ತು ನಮ್ಮ ಸಮಾಜದ ಮೇಲಿನ ಒಟ್ಟಿನ ಪರಿಣಾಮಗಳ ಕುರಿತು ಅನೇಕ ಪ್ರಶ್ನೆಗಳು ಉದ್ಭವಿಸಿ ಕಾಡತೊಡಗುತ್ತವೆ.

ಚುನಾವಣೆಗಳು ಪ್ರಜೆಗಳಿಂದ ಚುನಾಯಿಸಲ್ಪಟ್ಟ ಪ್ರಜಾಪ್ರತಿನಿಧಿಗಳನ್ನು ಪ್ರತಿನಿಧಿ ಸಭೆಗಳಿಗೆ ಕಳುಹಿಸಿ ಅವರಿಂದ ಒಟ್ಟಾರೆ ಪ್ರಜಾಹಿತ ಕಾರ್ಯಗಳನ್ನು, ಕಾಯಿದೆಗಳನ್ನು ರೂಪಿಸಿ ಕಾರ್ಯಗತಗೊಳಿಸಲು ಏರ್ಪಡಿಸಿದ ಸಾಂವಿಧಾನಿಕ ಪ್ರಕ್ರಿಯೆ. ಆದರೆ ಈ ಚುನಾವಣೆಗಳು ತಮ್ಮ ಉದ್ದೇಶದಲ್ಲಿ ಯಶಸ್ವಿಯಾಗಿವೆಯೇ? ಸ್ವಾತಂತ್ರಾನಂತರ ಪ್ರತಿನಿಧಿ ಸಭೆಗಳಿಗೆ ಕಳುಹಿಸಲ್ಪಟ್ಟ ಅದೆಷ್ಟು ಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ನಿಷ್ಠಾಪೂರ್ವಕವಾಗಿ ಮತ್ತು ನಿಸ್ಪಕ್ಷಪಾತಿಗಳಾಗಿ ನಿರ್ವಹಿಸಿದ್ದಾರೆ? ಈ ಪ್ರತಿನಿಧಿಗಳು ಜನರೆಲ್ಲರನ್ನು ಒಗ್ಗೂಡಿಸಿ, ಭಾರತೀಯತೆ ಎಂಬ ಗುರುತು ನಮ್ಮ ಉಳಿದೆಲ್ಲ ಗುರುತುಗಳಿಗಿಂತ ಮುಖ್ಯ ಎಂಬ ಮೂಲಭೂತ ಭಾವನೆಯನ್ನು ಜನಮನದಲ್ಲಿ ಮೂಡಿಸಲು ಶ್ರಮವಹಿಸಿದ್ದಾರೆಯೇ?
ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಪ್ರತಿನಿಧಿಗಳಲ್ಲಿ ಅದೆಷ್ಟು ಜನ ಈ ವಿಷಯದಲ್ಲಿ ವಸ್ತುನಿಷ್ಠವಾಗಿ ಯೋಚಿಸುವ ಶಕ್ತಿಯುಳ್ಳವರಾಗಿದ್ದಾರೆ? ಅದೆಷ್ಟು ಜನ ತಮ್ಮ ಸ್ವಂತ ಜಾತಿ ಧರ್ಮಗಳ ಸೀಮೆಗಳನ್ನು ಮೀರಿ ದೇಶದ ಒಟ್ಟಾರೆ ಅಭಿವೃದ್ದಿಗಾಗಿ ಕಾರ್ಯಶೀಲರಾಗಿದ್ದಾರೆ? ನಮ್ಮ ದೇಶದ ಸ್ಥಿತಿಗತಿಗಳನ್ನು ಕುರಿತು ವಸ್ತುನಿಷ್ಠವಾಗಿ ಆಲೋಚಿಸಿದರೆ ಈ ಪ್ರಶ್ನೆಗಳಿಗೆ ನಮಗೆ ನಿರಾಶಾದಾಯಕ ಉತ್ತರಗಳು ದೊರಕುತ್ತವೆ. ಅಲ್ಲಲ್ಲಿ ಕೆಲವು ಬೆಳ್ಳಿಚುಕ್ಕಿಗಳು ಕಾಣಸಿಕ್ಕರೆ ನಮ್ಮ ಅದೃಷ್ಟ ಅಷ್ಟೇ. ಹೀಗಾಗಿ ನಮ್ಮ ಚುನಾವಣೆಗಳ ಬಗ್ಗೆ ಸ್ವಲ್ಪ ನಿರಾಸಕ್ತಿ ಬೆಳೆಯತೊಡಗುತ್ತದೆ.

ಅದಕ್ಕೆ ವಿಪರೀತವಾಗಿ, ಇಂದಿನ ಮಾಧ್ಯಮ ಯುಗದಲ್ಲಿ, ನಮ್ಮ ಈ ಚುನಾವಣೆಗಳು ನಮ್ಮ ದೇಶದ ಸಾಮಾಜಿಕ ಮತ್ತು ರಾಜಕೀಯ ಬಿರುಕುಗಳನ್ನು ಇಡೀ ಜಗತ್ತಿಗೆ ಪ್ರದರ್ಶಿಸುವ ವೇದಿಕೆಗಳಾಗಿಬಿಡುತ್ತವೆ. ನಮ್ಮ ರಾಜಕೀಯ ನಾಯಕರು ಈ ಬಿರುಕುಗಳನ್ನು ಬೇಕಾಬಿಟ್ಟಿ ಪ್ರದರ್ಶಿಸುವುದಲ್ಲದೇ ಈ ಬಿರುಕುಗಳಲ್ಲಿ ಬೆರಳುಹಾಕಿ ಹಿಗ್ಗಾಮುಗ್ಗಾ ಎಳೆದೆಳೆದು ಇನ್ನಷ್ಟು ದೊಡ್ಡದಾಗಿ ಮಾಡಿಬಿಡುತ್ತಾರೆ.
ವಾಕ್ ಸ್ವಾತಂತ್ರ್ಯದ ಸಬೂಬು ಹೇಳುತ್ತಾ ದೃಶ್ಯ ಮಾಧ್ಯಮಗಳಲ್ಲಿ ಕುಳಿತು ಗಂಟೆಗಟ್ಟಲೇ ಸಾಮಾನ್ಯ ಜನತೆಗೆ ಈ ಬಿರುಕುಗಳ ಬಗ್ಗೆ ಉಪನ್ಯಾಸ ನೀಡುವ ಬುದ್ಧಿಜೀವಿಗಳು, ಮತ್ತು ಅವರು ಬರಹ ಮಾಧ್ಯಮಗಳಲ್ಲಿ ಬರೆಯಲ್ಪಡುವ ಅತಿರೇಕದ ಲೇಖನಗಳು ನಮ್ಮ ಸಮಾಜವನ್ನು ಸೀಳಿ ಹಾಕುವದನ್ನು ನೋಡಿ ಮತ್ತು ಅದರಿಂದ ಸುಖ ಅನುಭವಿಸುವ ಈ ಬುದ್ಧಿಜೀವಿಗಳು ಮತ್ತು ರಾಜಕಾರಣಿಗಳನ್ನು ಕಂಡು ಮನಸ್ಸಿಗೆ ಸಂಕಟವಾಗುತ್ತದೆ.

ಇಂತಹ ಚುನಾವಣೆಗಳಿಂದ ಮತ್ತು ಅವುಗಳಿಂದ ಉತ್ಪತ್ತಿಯಾಗುವ ಹಾಲಾಹಲದಿಂದ ಏನು ಉಪಯೋಗ? ನಮ್ಮ ದೇಶವನ್ನು ಮತ್ತು ಸಮಾಜವನ್ನು ಪರಸ್ಪರ ದ್ವೇಷ ಮತ್ತು ಹೋರಾಟಗಳಿಗೆ ದೂಡುವ ಈ ಚುನಾವಣೆಗಳಿಂದ ಏನನ್ನು ಸಾಧಿಸಲು ಸಾಧ್ಯ? ಅಷ್ಟೊಂದು ತೆರಿಗೆ ಹಣ ವ್ಯರ್ಥ ಮಾಡಿ, ಮೇಲಿಂದ ಮೇಲೆ ಚುನಾವಣೆ ನಡೆಸಿ, ಇಲ್ಲಿಯವರೆಗೆ ನಾವು ಸಾಧಿಸಿದ ಪುರುಷಾರ್ಥವಾದರೂ ಏನು?
ಇನ್ನೇನು, ಇಷ್ಟರಲ್ಲೇ ನಮ್ಮ ನೆಚ್ಚಿನ ಕನ್ನಡ ನಾಡು ಚುನಾವಣೆಗಳನ್ನು ಎದುರಿಸುತ್ತದೆ. ಈ ಚುನಾವಣೆಗಳ ಫಲಿತಾಂಶ ಏನು ಎನ್ನುವುದರ ಬಗ್ಗೆ ನನಗೆ ಆಸಕ್ತಿ ಅಷ್ಟೊಂದಿಲ್ಲ. ಆದರೆ ಎಂದಿನಂತೆ ಮನಸ್ಸು ಮತ್ತೆ ಅದರ ಪರಿಣಾಮಗಳ ಬಗ್ಗೆ ಯೋಚಿಸುತೊಡಗುತ್ತದೆ. ಈ ಚುನಾವಣಾ ಪ್ರಕ್ರಿಯೆಯಲ್ಲಿ ನಮ್ಮ ರಾಜ್ಯದ ಮುಗ್ಧ ಜನತೆಯಲ್ಲಿ ಅದೆಷ್ಟು ಹಗೆತನ ಬೆಳೆಯುತ್ತದೆ? ಅದೆಷ್ಟು ದಂಗೆಗಳಾಗುತ್ತವೆ? ಅದೆಷ್ಟು ಆಸ್ತಿಪಾಸ್ತಿ ಮತ್ತು ಜೀವ ಹಾನಿಯಾಗುತ್ತದೆ? ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳ ಆರ್ಭಟಕ್ಕೆ ಬಲಿಯಾಗಿ ಅದೆಷ್ಟು ಜನ ತಮ್ಮ ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ನೆರೆಹೊರೆಯವರ ಬಗ್ಗೆಯೇ ದ್ವೇಷಾಸೂಯೆಗಳನ್ನು ಬೆಳೆಸಿಕೊಳ್ಳುತ್ತಾರೆ?

ನಮ್ಮ ಚುನಾವಣೆಗಳಲ್ಲಿ ದೇಶ, ರಾಜ್ಯ ಮತ್ತು ಸಮಾಜದ ಒಟ್ಟಾರೆ ಏಳಿಗೆಗಳ ಬಗ್ಗೆ ಧನಾತ್ಮಕ ಚರ್ಚೆಗಳು ಏಕೆ ಆಗುವುದಿಲ್ಲ? ನಮ್ಮ ಗ್ರಾಮಗಳು ಮತ್ತು ಚಿಕ್ಕ ಪಟ್ಟಣಗಳ ಏಳಿಗೆಗಳ ಬಗ್ಗೆ ಏಕೆ ಯಾವುದೇ ಪಕ್ಷಗಳು ಮಾತನಾಡುವುದಿಲ್ಲ? ನಮ್ಮ ರಾಜ್ಯ ಎದುರಿಸುವುತ್ತಿರುವ ಭಯಂಕರ ಸಮಸ್ಯೆಗಳಾದ ನಿರುದ್ಯೋಗ, ನಿರಕ್ಷರತೆ, ಪರಿಸರ ಮಾಲಿನ್ಯ, ಅನಾರೋಗ್ಯ ಸಮಸ್ಯೆಗಳು, ನೀರು, ಸಾರಿಗೆ ಮುಂತಾದ ಮೂಲಭೂತ ಸೌಕರ್ಯಗಳ ಬೆಳವಣಿಗೆ ಮುಂತಾದ ವಿಷಯಗಳನ್ನು ಕುರಿತು "Out of Box" ಯೋಜನೆಗಳನ್ನು ಕುರಿತು ಪರ್ಯಾಲೋಚನೆ ನಡೆಯುವುದಿಲ್ಲ? ಯಾವಾಗಲೂ ಋಣಾತ್ಮಕ ವಿಷಯಗಳ ಮೇಲೆಯೇ ಏಕೆ ನಮ್ಮ ಚುನಾವಣೆಗಳ ಗಮನ ಕೇಂದ್ರೀಕೃತವಾಗಿರುತ್ತದೆ? ಪ್ರಶ್ನೆಗಳನೇಕ, ಆದರೆ ಉತ್ತರ ಕೊಡಬೇಕಾದವರೇ ಈ ಕುರಿತು ಆಸಕ್ತಿ ತೋರಿಸುವುದಿಲ್ಲ.
ಮುಂಬರುವ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸರಕಾರ ವಾಪಸ್ ಅಧಿಕಾರಕ್ಕೆ ಬರುವುದೋ ಅಥವಾ ಜಾತ್ಯತೀತ ಜನತಾದಳ, ಬಿಜೆಪಿ ಪಕ್ಷಗಳು ಅಧಿಕಾರಕ್ಕೇರುವವೋ ಅದರ ನಿಷ್ಕರ್ಷೆಯನ್ನು ಕನ್ನಡ ಜನತೆಯ ಒಟ್ಟಾರೆ ಜಾಣ್ಮೆಯ ಆಯ್ಕೆಗೆ ಬಿಟ್ಟು ಬಿಡೋಣ. ನನ್ನಂತಹ ಶ್ರೀ ಸಾಮಾನ್ಯರಿಗೆ ನಮ್ಮ ರಾಜಕೀಯ ನಾಯಕರಿಂದ ಇರುವ ನಿರೀಕ್ಷೆಗಳು ಕೆಲವು ಮಾತ್ರ.
ನಮ್ಮನ್ನು ಜಾತಿ, ಮತ, ಪಂಥಗಳ ಆಧಾರದ ಮೇಲೆ ಒಡೆಯುವ ಕೆಲಸವನ್ನು ನಿಲ್ಲಿಸಿ, ನಮ್ಮನ್ನೆಲ್ಲಾ ನಮ್ಮ ನಾಡಿನ ನವ ನಿರ್ಮಾಣಕ್ಕಾಗಿ ಒಂದುಗೂಡಿಸುವ ಕೆಲಸವನ್ನು ಮಾಡಲಿ. ಇಲ್ಲ ಸಲ್ಲದ ಬಿಟ್ಟಿ "ಭಾಗ್ಯ"ಗಳನ್ನು ಕೊಡುವ ಅಲ್ಪತನವನ್ನು ಗೆದ್ದು, ರಾಜ್ಯದ ದೀರ್ಘಕಾಲೀನ ಅಭಿವೃದ್ಧಿಗೆ ಸಹಾಯಕವಾಗುವ ದೂರದೃಷ್ಟಿಯನ್ನು ಬೆಳೆಸಿಕೊಳ್ಳಲಿ. ಈ ನಿರೀಕ್ಷೆಗಳು ಕಿವುಡುಗಿವಿಗಳ ಮೇಲೆಯೇ ಬೀಳುವ ಸಾಧ್ಯತೆ ಹೆಚ್ಚು ಎಂಬುದು ವಾಸ್ತವ ಗೊತ್ತಿದ್ದೂ, ಎಂತಹುದೋ ಒಂದು ಅವ್ಯಕ್ತ ಆಶಾವಾದದ ಮೇಲೆ ನಂಬಿಕೆಯಿರಿಸಿ ಇವುಗಳನ್ನು ಇಲ್ಲಿ ವ್ಯಕ್ತಪಡಿಸಿದ್ದೇನೆ.












Click it and Unblock the Notifications