• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನಸಾಗಿಯೇ ಉಳಿದ ವೈಜ್ಞಾನಿಕ ಸಂಶೋಧಕನಾಗಬೇಕೆಂಬ ಕನಸು!

By ವಸಂತ ಕುಲಕರ್ಣಿ, ಸಿಂಗಪುರ
|

ನಾನು ಎಂಟನೆಯ ತರಗತಿಯಲ್ಲಿದ್ದಾಗ ನನ್ನ ಕ್ಲಾಸ್ ಮೇಟ್ ಒಬ್ಬಾತನಿಗೆ ವಿಜ್ಞಾನದಲ್ಲಿ ಬಹಳ ಆಸಕ್ತಿ. ಒಮ್ಮೆ ಅವನೊಂದಿಗೆ ಮಾತನಾಡುತ್ತಿದ್ದಾಗ ನಾವೇಕೆ ಒಂದು ರಾಕೆಟ್ ಅನ್ನು ಮಾಡಬಾರದು ಎಂಬ ವಿಚಾರ ಮೂಡಿತು. ಮತ್ತೊಬ್ಬ ಮಿತ್ರ ಕೂಡ ಕೈಗೂಡಿಸಿದ. ಭಾಸ್ಕರ, ರೋಹಿಣಿ ಮುಂತಾದ ಉಪಗ್ರಹಗಳನ್ನು ಹಾರಿಸಿ ಯಶಸ್ವಿಯಾದ ಇಸ್ರೋದ ಕಥೆ ನಮ್ಮಲ್ಲಿ ಉತ್ಸಾಹ ತರಿಸಿತ್ತು. ನನಗೆ ಉಪಗ್ರಹಗಳನ್ನು ಮೇಲೆ ಹಾರಿಸುವ ರಾಕೆಟ್ಟಿನ ಮಾದರಿಯನ್ನು ಮಾಡಬೇಕು ಎಂದೆನಿಸಿತು. ಅದೇ ಸಮಯದಲ್ಲಿ ಗೆಳೆಯನೊಬ್ಬ ನನಗೆ ಬಣ್ಣದ ಚಿತ್ರಗಳಿದ್ದ ವೈಜ್ಞಾನಿಕ ಪುಸ್ತಕಗಳನ್ನು ಓದಲು ಕೊಟ್ಟ. ಅದರಲ್ಲಿ ರಾಕೆಟ್ಟುಗಳ ಒಳಗಿನ ಉಪಕರಣಗಳ ಸಚಿತ್ರ ವರದಿಯಿತ್ತು. ಅದನ್ನು ಓದಿ ಪ್ರಭಾವಿತನಾದ ನಾನು ಅದರಂತೆಯೇ ಮಾದರಿಯನ್ನು ಮಾಡೋಣ ಎಂಬ ಸಲಹೆ ನೀಡಿದೆ.

ಅದರೆ ನನ್ನ ಮರಿ ವಿಜ್ಞಾನಿ ಮಿತ್ರ "ಅದು ಬೇಡ, ಕೈಯಿಂದ ಮದ್ದು ತುಂಬಿದ ರಾಕೆಟ್ ಮಾಡಿ ಮೇಲೆ ಹಾರಿಸೋಣ" ಎಂದ. ಅಂತಹ ರಾಕೆಟ್ಟು ಪಟಾಕಿ ಅಂಗಡಿಯಲ್ಲಿ ಸಿಗುತ್ತವಲ್ಲವೇ ಎನಿಸಿದರೂ, ಸ್ವತಃ ನಾವು ನಮ್ಮ ಕೈಯಿಂದ ತಯಾರಿಸಿ ಉಡಾಯಿಸುವುದು ಒಂದು ರೀತಿಯ ಸಾಹಸ ಎನಿಸಿ ಹೂಂಗುಟ್ಟಿದೆ. ಗಣೇಶ ಚತುರ್ಥಿಯ ವೇಳೆಗೆ ಕೊಂಡಿದ್ದ ಪಟಾಕಿಗಳನ್ನು ಉಳಿಸಿ ನಾವು ಅವುಗಳನ್ನು ಬಿಚ್ಚಿ ಬೇಕಾದ ಮದ್ದನ್ನು ಸಂಗ್ರಹಿಸಿದೆವು. ಆ ವೇಳೆಗೆ ಶಾಲೆಯಲ್ಲಿ ನಾವು ಮಾಡುತ್ತಿರುವ ಘನ ಕಾರ್ಯದ ಬಗ್ಗೆ ಸಾಕಷ್ಟು ಪ್ರಚಾರವಾಗಿತ್ತು. ಹೀಗಾಗಿ ನಾವು ಉಳಿದ ವಿದ್ಯಾರ್ಥಿಗಳಿಗೆ ಗೇಲಿಯ ವಿಷಯವಾಗಿದ್ದೆವು.

ಬದುಕಿನ ದಿಕ್ಕನ್ನೇ ಬದಲಿಸಿದ ಹಿರಣ್ಯಕೇಶಿ ದಂಡೆ ಮೇಲಿನ ಸಂಕೇಶ್ವರ

ಆದರೆ ಕೆಲವು ಗುರುಗಳು ಹುರಿದುಂಬಿಸಿದರು. ಹೀಗಾಗಿ ಕಾರ್ಡ್ ಬೋರ್ಡಿನಿಂದ ರಾಕೆಟ್ಟನ್ನು ತಯಾರಿಸಿ ಮದ್ದನ್ನು ತುಂಬುವ ಕೆಲಸ ಶುರುವಾಯಿತು. ಆದರೆ ನನ್ನ ಆರೋಗ್ಯ ಕೆಟ್ಟಿದ್ದರಿಂದ ರಾಕೆಟ್ ಉಡಾವಣೆಯ ಸಮಯದಲ್ಲಿ ನಾನಿರಲಿಲ್ಲ. ನನ್ನ ಮಿತ್ರ ನಮ್ಮ ಉಡಾವಣೆ ಯಶಸ್ವಿಯಾಯಿತು ಎಂದು ತಿಳಿಸಿದ. ಅದು ನಿಜವಾಗಿಯೂ ಮೇಲೇರಿತೋ ಅಥವಾ ಅಲ್ಲಿಯೇ "ಢಂ" ಎಂದಿತೋ ಎಂಬ ಸಂಶಯ ನನ್ನಲ್ಲಿ ಇನ್ನೂ ಬಲವಾಗಿದೆ. ಆದರೆ ನನ್ನ ಮಿತ್ರರಿಬ್ಬರು ಇನ್ನೂ ಆ ಸಂಶಯ ಪರಿಹರಿಸಿಲ್ಲ. ಈ ರೀತಿಯ ವೈಜ್ಞಾನಿಕ ಚಟುವಟಿಕೆಗಳನ್ನು ಮಾಡುತ್ತಿದ್ದರೂ, ನನ್ನ ಪ್ರಾಥಮಿಕ ಆಸಕ್ತಿ ಸಾಹಿತ್ಯದಲ್ಲಿಯೇ ಇತ್ತು. ಆಗ ಪ್ರಕಟವಾಗುತ್ತಿದ್ದ ಮನು, ರಾಜಶೇಖರ ಭೂಸನೂರಮಠ ಮುಂತಾದವರ ವೈಜ್ಞಾನಿಕ ಕಥೆಗಳನ್ನು ಓದಿದಾಗ ಹೊಸದೊಂದು ಆಯಾಮ ತೆರೆದಂತಾಗಿ ಬಹಳ ಖುಷಿಯಾಗುತ್ತಿತ್ತು.

1986ರಲ್ಲಿ ನಾನು ನನ್ನ 10ನೆಯ ತರಗತಿಯನ್ನು ಮುಗಿಸಿದೆ. ಅಲ್ಲಿಯವರೆಗೆ ಕಲಾ ಮಹಾವಿದ್ಯಾಲಯವನ್ನು ಸೇರಿ ಕನ್ನಡ ಸಾಹಿತ್ಯವನ್ನು ಓದುವ ತೀವ್ರ ಅಭಿಲಾಷೆಯನ್ನು ಹೊಂದಿದ್ದೆನಾದರೂ, Peer Pressure ಅನ್ನಿ, ಅಥವಾ ಸಾಹಿತ್ಯ ಓದಿದರೆ ಮುಂದೆ ನೌಕರಿ ಸಿಗುವುದೋ ಇಲ್ಲವೋ ಎಂಬ ಅಂಜಿಕೆ ಅನ್ನಿ, ಅಥವಾ ಕೆಲವು ಮಿತ್ರರಿಗೆ ನಾನು ಕೂಡ ವಿಜ್ಞಾನ ಓದಿ ಮುಂದೆ ಬರಬಲ್ಲೆ ಎಂದು ತೋರಿಸುವ ಛಲ ಅನ್ನಿ. ಒಟ್ಟಾರೆ ಹಲವಾರು ಕಾರಣಗಳಿಂದ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ಬೆಳಗಾವಿಯ ಜಿ ಎಸ್ ಎಸ್ ಪದವಿ ಪೂರ್ವ ಕಾಲೇಜನ್ನು ಸೇರಿಕೊಂಡೆ.

ಸ್ವಾಭಾವಿಕವಾಗಿಯೇ ಕಾಲೇಜಿನ ಪರಿಸರ ಪ್ರೌಢ ಶಾಲೆಯ ಪರಿಸರಕ್ಕಿಂತ ಬಹಳ ಭಿನ್ನವಾಗಿತ್ತು. ಒಂದು ವರ್ಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುತ್ತಿದ್ದರು. ಎಲ್ಲ ವಿದ್ಯಾರ್ಥಿಗಳೂ ಒಂದೊಂದು ತರ. ಒಮ್ಮೆಲೇ ದೊರೆತ ಸ್ವಾತಂತ್ರ್ಯದ ಸವಿಯನ್ನು ಸ್ವಚ್ಛಂದವಾಗಿ ಆನಂದಿಸುವ ಹಂಬಲ ಹಲವರಿಗಾದರೆ, ಕನ್ನಡ ಮಾಧ್ಯಮದಿಂದ ಹೋಗಿ ಸಂಪೂರ್ಣವಾಗಿ ಇಂಗ್ಲಿಷು ಮಾಧ್ಯಮದಲ್ಲಿರುತ್ತಿದ್ದ ಪಠ್ಯಕ್ಕೆ ಹೊಂದಿಕೊಂಡು ಹೇಗಾದರೂ ಒಳ್ಳೆಯ ಅಂಕ ತೆಗೆಯುವ ಆತಂಕ ನಮ್ಮಂತಹ ಕೆಲವರಿಗೆ. ಶಾಲೆಯಲ್ಲಿ ಕೆಲವು ಗುರುಗಳಿಗಾದರೂ ಹುಡುಗರು ಏನು ಮಾಡುತ್ತಿದ್ದಾರೆ, ಅವರನ್ನು ಹೇಗೆ ಒಳ್ಳೆಯ ಕೆಲಸಗಳಲ್ಲಿ ತೊಡಗಿಸುವುದು ಎಂಬ ಚಿಂತೆ ಇರುತ್ತಿತ್ತು. ಹೀಗಾಗಿ ಅಲ್ಪ ಸ್ವಲ್ಪವಾದರೂ ಮಾರ್ಗದರ್ಶನ ದೊರಕುತ್ತಿತ್ತು. ಆದರೆ ಕಾಲೇಜಿನಲ್ಲಿ ಪಾಠ ಹೇಳಿ ಹೇಗಾದರೂ Syllabusಅನ್ನು ಮುಗಿಸುವ ತುರಾತುರಿಯಲ್ಲಿರುತ್ತಿದ್ದ ಉಪನ್ಯಾಸಕರು ಇಂತಹ ಚಿಂತೆಯಿಂದ ಮುಕ್ತವಾಗಿದ್ದರು. ಹೀಗಾಗಿ ಯಾವುದೇ ವಿದ್ಯಾರ್ಥಿಯನ್ನು ಸನಿಹಕ್ಕೆ ಸೇರಿಸಿ ಅವರನ್ನು ಒಳ್ಳೆಯ ಕೆಲಸ ಮಾಡಲು ಪ್ರೇರಿಸುವ, ವಿಷಯಗಳಲ್ಲಿ ಗಾಢವಾಗಿ ಚಿಂತನೆ ಮಾಡಲು ಸ್ಫೂರ್ತಿಗೊಳಿಸುವ ಎಂತಹ ಕೆಲಸವನ್ನೂ ಅವರು ಮಾಡುತ್ತಿರಲಿಲ್ಲ.

ವಿನಮ್ರತೆಯ ಸಾಕಾರ ಮೂರ್ತಿ, ರಸಾಯನ ಶಾಸ್ತ್ರಜ್ಞ ವೆಂಕಟೇಶಮೂರ್ತಿ

ವಿಜ್ಞಾನ ಸೇರಿದ ಮೇಲೆ ನನ್ನ ಆದರ್ಶ ಮನಸ್ಸಿನಲ್ಲಿ ವಿಜ್ಞಾನದಲ್ಲಿ ಹೆಚ್ಚಿನ ಅಭ್ಯಾಸ ಅಥವಾ ಸಂಶೋಧನೆ ಮಾಡುವ ಹುಚ್ಚು ಹೊಕ್ಕಿತು. ಸ್ಕೂಲಿನಲ್ಲಿದ್ದಾಗಲೇ, ಮಿತ್ರನೊಬ್ಬ ಕೊಟ್ಟಿದ್ದ ಶಿವರಾಮ ಕಾರಂತರ ವಿಜ್ಞಾನ ಪ್ರಪಂಚದ ಕೆಲವು ಭಾಗಗಳನ್ನು ಓದಿ ಪ್ರಭಾವಿತನಾಗಿದ್ದೆ. ಹೀಗಾಗಿ ಪಠ್ಯಪುಸ್ತಕದಲ್ಲಿದ್ದ ವಿಷಯಗಳಿಗಿಂತ ಹೆಚ್ಚಿನ ವಿಷಯಗಳನ್ನು ಓದಲು ಪ್ರಯತ್ನ ಮಾಡುತ್ತಿದ್ದೆ. ಒಂದೊಂದು ಬಾರಿ ಕ್ಲಾಸಿನ ನಂತರ ಉಪನ್ಯಾಸಕರ ಹಿಂದೆಯೇ ಹೋಗಿ ಕೆಲವು ಸಮಸ್ಯೆಗಳನ್ನು ಚರ್ಚಿಸಲು ಪ್ರಯತ್ನಿಸುತ್ತಿದ್ದೆ. ಆದರೆ ತಮ್ಮ ಮುಂದಿನ ಕ್ಲಾಸಿನ ಚಿಂತೆಯಿಂದಲೋ ಅಥವಾ ಮತ್ತಿತರ ಕಾರಣಗಳಿಂದಲೋ ಅವರು ಹೆಚ್ಚು ಚರ್ಚಿಸಲು ಇಚ್ಛಿಸುತ್ತಿರಲಿಲ್ಲ. ನನ್ನ ಈ ನಡವಳಿಕೆ ಕ್ಲಾಸಿನ ಕೆಲವು ಮಿತ್ರರಿಗೆ ಸೋಜಿಗದ ವಿಷಯವಾಯಿತು. ನಾನು ಉಪನ್ಯಾಸಕರ Impression ಗಳಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಕೆಲವರು ಪ್ರತ್ಯಕ್ಷವಾಗಿ ಮತ್ತೆ ಕೆಲವರು ಪರೋಕ್ಷವಾಗಿ ಒಂದೆರಡು ಬಾರಿ ಹೇಳಿ ಕೀಟಲೆ ಮಾಡಿದರು. ಹೀಗಾಗಿ ನನ್ನಲ್ಲಿ ಬಹಳ ನಿರುತ್ಸಾಹವುಂಟಾಯಿತು.

ಅದೊಂದು ದಿನ ರಸಾಯನ ವಿಜ್ಞಾನದ ಲೆಕ್ಚರ್‍ ಒಂದರಲ್ಲಿ ರುದರ್ಫೋರ್ಡ್ ನ ಅಣುವಿನ ವಿಷಯದ ಉಪನ್ಯಾಸದ ಸಮಯದಲ್ಲಿ ನನ್ನಲ್ಲಿ ಒಂದು ರೀತಿಯ ಅತ್ಯುತ್ಸಾಹ ತುಂಬಿತು. ಯಾವುದೋ ಒಂದು ಪ್ರಶ್ನೆ ಮನದಲ್ಲಿ ಮೂಡಿತು. ಕೂಡಲೇ ಅದನ್ನು ಕುರಿತು ಕೇಳಲು ಉಪನ್ಯಾಸಕರ ಹಿಂದೆಯೇ ನಡೆದು ಕೂಡಲೇ ಕೇಳಿದೆ. ಒಮ್ಮೆಲೇ ಅವರು ನನ್ನನ್ನು ತುಂಬಾ ತೀವ್ರವಾಗಿ ದೃಷ್ಟಿಸಿ ಕಠಿಣ ಸ್ವರದಲ್ಲಿ "ಈ ವಿಷಯದಲ್ಲಿ ಮುಂದೆ ನಾನು ಪಾಠ ಮಾಡುತ್ತೇನೆ. ನೀವು ಆವಾಗ ಲಕ್ಷಗೊಟ್ಟು ಕೇಳಿ. ಈಗ ಇಲ್ಲ ಸಲ್ಲದ ಪ್ರಶ್ನೆಗಳನ್ನು ಮಾಡಬೇಡಿ" ಎಂದು ಹೇಳಿದರು. ನನ್ನ ಉತ್ಸಾಹ ಕೂಡಲೆ ಠುಸ್ಸೆಂದಿತು. ವಿಷಯಗಳನ್ನು ಕುರಿತು ಚರ್ಚೆ ಮಾಡಿ 'ಹೆಚ್ಚು ಹೆಚ್ಚು ತಿಳಿದುಕೊಳ್ಳಬೇಕು ಎನ್ನುವ ಉಮೇದು ಅಲ್ಲಿಗೆ ನಿಂತು ನನ್ನ ಲಕ್ಷ್ಯ ಕೇವಲ ಪರೀಕ್ಷಾ ವಿಷಯಗಳತ್ತ ಹರಿಯತೊಡಗಿತು.

ಹಗೆ ಸಾಧಿಸುವ ಪಾಕ್ ವಿರುದ್ಧ ಭಾರತ ಸ್ನೇಹಹಸ್ತ ಚಾಚಬೇಕೆ?

ಅಂದಿನ ದಿನಗಳಲ್ಲಿ ಶುದ್ಧ ವಿಜ್ಞಾನದಲ್ಲಿ ಸಂಶೋಧನೆ ಮಾಡುವುದುದನ್ನು ಕುರಿತು ಯಾರೂ ಮಾತನಾಡುತ್ತಿರಲಿಲ್ಲ. ಯೂ ಆರ್ ರಾವ್, ಸಿ ಎನ್ ಆರ್ ರಾವ್ ಮತ್ತು ರಾಜಾರಾಮಣ್ಣ ಮುಂತಾದ ಹೆಸರನ್ನು ಕೇಳಿದ ಸಾಮಾನ್ಯ ಜನರು ಕಡಿಮೆಯೇ. ಅವರ ಕೆಲಸದ ಬಗ್ಗೆ ತಿಳಿದುಕೊಂಡ ಜನ ಇನ್ನೂ ಕಡಿಮೆ. ಅಂದು ಭಾರತದಲ್ಲಿ ವಿಜ್ಞಾನದಲ್ಲಿನ ಶುದ್ಧ ಸಂಶೋಧನೆ ಬೆರಳಣಿಕೆಯಷ್ಟು ಸಂಸ್ಥೆಗಳಲ್ಲಿ ಮಾತ್ರ ಆಗುತ್ತಿತ್ತು. TIFR, ISRO, DRDO ಮತ್ತು BARC ಗಳಂತಹ ಸಂಸ್ಥೆಗಳು ಮಾತ್ರ ಅದಕ್ಕೆ ಹೆಸರಾಗಿದ್ದವು. ಆದರೆ ಇಂತಹ ಸಂಸ್ಥೆಗಳನ್ನು ಸೇರುವ ಗುರಿ ಇಟ್ಟುಕೊಳ್ಳಿ ಎಂದು ಯಾರೂ ಮಾರ್ಗದರ್ಶನ ಮಾಡುತ್ತಿರಲಿಲ್ಲ. ಆದರೆ ನನ್ನ ಮನದಲ್ಲಿ ಅದು ಹೇಗೋ ಇಂತಹ ಸಂಸ್ಥೆಗಳನ್ನು ಸೇರಿಕೊಳ್ಳಬೇಕು ಎಂಬ ಆಶಯ ಬೆಳೆದು ಬಂದಿತ್ತು.

ನನ್ನ ಎಂಜಿನಿಯರಿಂಗ್ ಮುಗಿದು ರಿಲಾಯನ್ಸ್ ಕಂಪನಿ ಸೇರಿದ ನಂತರ ಕೂಡ ನನ್ನ ಮನದಲ್ಲಿ ಎಲ್ಲಿಯೋ ಇದು ಜಾಗೃತವಾಗಿತ್ತು. ಒಮ್ಮೆ ದೊಡ್ಡ ಸಂಶೋಧನಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಪರಿಚಿತರೊಬ್ಬರಿಗೆ ನನ್ನ ಕೆಲಸ ಬಿಟ್ಟು ನನಗೆ ಅಲ್ಲಿ ಸೇರಬೇಕಾಗಿದೆ ಎಂದು ಕೇಳಿದೆ. ಆಗ ಅವರು "ತುಂಬಾ ಒಳ್ಳೆಯ ಕೆಲಸದಲ್ಲಿದ್ದೀಯಾ, ಕೈ ತುಂಬಾ ಸಂಬಳ ಗಳಿಸುತ್ತಿದ್ದೀಯಾ, ಅದನ್ನು ಬಿಟ್ಟು ಸಂಶೋಧನಾ ಸಂಸ್ಥೆಯನ್ನೇಕೆ ಸೇರಬೇಕು? ಅದೇನಂತಹ ಘನಂದಾರಿ ಕೆಲಸವನ್ನು ನಾವು ಮಾಡುತ್ತೇವೆ ಎಂದು ತಿಳಿದಿದ್ದೀಯಾ?" ಎಂದು ನನ್ನ ಆಸಕ್ತಿಗೆ ತಣ್ಣೀರೆರಚಿದರು.

ಮುಂದೆ BARCಯ ಲಿಖಿತ ಪರೀಕ್ಷೆಯಲ್ಲಿ ಪಾಸಾದೆ. ಸಂದರ್ಶನಕ್ಕೆ ಹೋಗುವಾಗ ಬಲವಾದ ಆತ್ಮವಿಶ್ವಾಸ. ಇನ್ನೇನು ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಮನೆ ಮಾಡಿದ್ದ ದೊಡ್ಡ ಸಂಶೋಧನಾ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿ ಬಿಡುತ್ತೇನೆ ಎಂಬ ಹುರುಪು. ಸಂದರ್ಶನದ ಮೊದಲ ಭಾಗದಲ್ಲಿ ತಾಂತ್ರಿಕ ಪ್ರಶ್ನೆಗಳಿಗೆ ತಕ್ಕ ಮಟ್ಟಿನ ಉತ್ತರ ನೀಡಿದೆ ಎನಿಸಿತು. ಆದರೆ ಸಂದರ್ಶನದ ಮಧ್ಯದಲ್ಲಿ "ರಿಲಾಯನ್ಸ್ ನಲ್ಲಿ ನಿಮಗೆ ಸಿಗುವ ಸಂಬಳದ ಕಾಲು ಭಾಗ ಮಾತ್ರ ನಮ್ಮಲ್ಲಿನ ಸ್ಟೈಪಂಡ್. ಹೀಗಾಗಿ ನೀವು ಹೇಗೆ ನಮ್ಮ ಸಂಸ್ಥೆ ಸೇರುತ್ತೀರಿ? ನಮಗೆ ನಂಬಿಕೆಯಿಲ್ಲ" ಎಂದು ಸಂದರ್ಶಕರೊಬ್ಬರು ನುಡಿದರು. ಆಕಸ್ಮಿಕವಾಗಿ ಬಂದ ಈ ಪ್ರಶ್ನೆಗೆ ಹೇಗೆ ಉತ್ತರ ನೀಡಬೇಕೆಂದು ತಿಳಿಯಲಿಲ್ಲ. ಸ್ವಲ್ಪ ಅಪ್ರತಿಭನಾದೆ. ಮುಂದಿನ ಪ್ರಶ್ನೆಗಳಿಗೆ ಸ್ವಲ್ಪ ಅನ್ಯಮನಸ್ಕನಾಗಿಯೇ ಉತ್ತರಿಸಿದೆ. ಒಟ್ಟಿನಲ್ಲಿ ನನಗೆ BARCನ ನೌಕರಿ ದೊರಕಲಿಲ್ಲ. ಸಂಶೋಧನೆಯ ನನ್ನ ಕನಸು ಕನಸಾಗಿಯೇ ಉಳಿಯಿತು.

English summary
My dream to become research scientist remained a dream due to several incidents, says Kannada columnist Vasant Kulkrani from Singapore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X