ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಟಿ ರೋಗಕ್ಕೆ ಮದ್ದಿರಬಹುದು, ಜಾತಿ ರೋಗಕ್ಕೆ ಔಷಧ ಇದೆಯಾ!

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

ಹೊಸ ವರ್ಷವನ್ನು ಸ್ವಾಗತಿಸುವ ಸಡಗರದಲ್ಲಿಯೇ ದೇಶದಲ್ಲಿ ಹಳೆಯ ದೋಷವೊಂದು ಗಂಭೀರ ಸಮಸ್ಯೆಯ ರೂಪದಲ್ಲಿ ಬೆಳೆದು ನಿಂತಿತು. ಮಹಾರಾಷ್ಟ್ರದಲ್ಲಿ ಕೆಲವು ದಲಿತ ಸಂಘಗಳು ಮರಾಠ ಪೇಶ್ವೆಯ ವಿರುದ್ಧದ ಬ್ರಿಟಿಷರ ವಿಜಯವನ್ನು ಹೆಮ್ಮೆಯಿಂದ ಆಚರಿಸುತ್ತಾರೆ. ಅದಕ್ಕೆ ಕಾರಣ ಅಂದಿನ ಬ್ರಿಟಿಷರ ಸೈನ್ಯದಲ್ಲಿ ದಲಿತ ಜನಾಂಗದ ಮಹಾರ್ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಪೇಶ್ವೆಯ ಸೈನ್ಯದಲ್ಲಿ ಕೆಳಜಾತಿಯವರಾದ ಅವರಿಗೆ ಸ್ಥಾನಮಾನ ದೊರಕಲಿಲ್ಲವಾದುದರಿಂದ ಅವರು ಬ್ರಿಟಿಷರ ಸೈನ್ಯ ಸೇರಿ ಪೇಶ್ವೆಯ ವಿರುದ್ಧದ ಹೋರಾಟದಲ್ಲಿ ಕೆಚ್ಚೆದೆಯಿಂದ ಕಾದಿ, ಬ್ರಿಟಿಷರ ವಿಜಯಕ್ಕೆ ಕಾರಣರಾದರು. ಆದುದರಿಂದ ಅಂದಿನಿಂದ ಇಂದಿನವರೆಗೆ ಈ ವಿಜಯವನ್ನು ಮಹಾರ್ ಜನರು ಹೆಮ್ಮೆಯಿಂದ ಆಚರಿಸುತ್ತಾರೆ.

ವಾಕ್ ಸ್ವಾತಂತ್ರ್ಯ ನಮ್ಮ ದೇಶದ ಗೌರವಕ್ಕಿಂತ ಹೆಚ್ಚೆ?ವಾಕ್ ಸ್ವಾತಂತ್ರ್ಯ ನಮ್ಮ ದೇಶದ ಗೌರವಕ್ಕಿಂತ ಹೆಚ್ಚೆ?

ಮರಾಠರ ಪತನದಿಂದ ಬ್ರಿಟಿಷರ ಆಳ್ವಿಕೆ ಸುದೃಢವಾದರೂ ಮತ್ತು ಈ ವಿಜಯ ಭಾರತದ ಸ್ವಾತಂತ್ರ್ಯಹರಣಕ್ಕೆ ಕಾರಣವಾದರೂ ಶತಮಾನಗಳಿಂದ ತುಳಿಯಲ್ಪಟ್ಟ ದಲಿತರ ಸ್ವಾಭಿಮಾನವನ್ನು ಈ ವಿಜಯ ಎತ್ತಿ ಹಿಡಿದಿತ್ತು. ಆದುದರಿಂದ ರಾಷ್ಟ್ರ ಪ್ರೇಮದ ಭಾವನೆಗಳಿಗೆ ಅದೆಷ್ಟೇ ವಿರುದ್ಧವಾದರೂ ಮಹಾರಾಷ್ಟ್ರದ ಮೂಲೆಯೊಂದರಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಈ ಆಚರಣೆಯನ್ನು ಹಾಗೆಯೇ ಸುಮ್ಮನೆ ನಡೆಯಬಿಟ್ಟಿದ್ದರೆ ಯಾವ ಸಮಸ್ಯೆಯೇನೂ ಏಳುತ್ತಿರಲಿಲ್ಲ.

Is it possible to come out caste- religion hurdles

ಆದರೆ, ಅಂದಿನ ಸಮಾವೇಶದ ಮೇಲೆ ಯಾರೋ ಕೆಲವು ಕಿಡಗೇಡಿಗಳು ಕಲ್ಲೊಗೆದು ಹೊಸ ವರ್ಷದ ಹೊಸ್ತಿಲಲ್ಲೇ ಜಾತಿ ಸಂಘರ್ಷದ ಕಿಡಿಯನ್ನು ಹಚ್ಚಿ, ದೊಡ್ಡ ಕಿಚ್ಚೆಬ್ಬಿಸಿ ಬಿಟ್ಟರು. ಇಷ್ಟೇ ಸಾಕು ಎಂದು ಕಾಯ್ದುಕೊಂಡಿದ್ದ ರೌಡಿಗಳಿಗೆ ಈ ಘಟನೆ ತಕ್ಕ ವೇದಿಕೆಯನ್ನೊದಗಿಸಿತು.

ಮಹಾರಾಷ್ಟ್ರದಾದ್ಯಂತೆ ದೊಂಬಿ ಎಬ್ಬಿಸಿ ಸುಮಾರು ನೂರ ಎಂಬತ್ತಕ್ಕೂ ಮಿಕ್ಕಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಅಗ್ನಿಗೆ ಆಹುತಿ ನೀಡಿದರು. ಕೋಟಿಗಟ್ಟಲೆ ಆಸ್ತಿಪಾಸ್ತಿಗೆ ಹಾನಿಯಾಗಿ, ಅದಕ್ಕೂ ಹೆಚ್ಚು ವ್ಯಾಪಾರ- ವ್ಯವಹಾರಗಳಿಗೆ ನಷ್ಟವಾಯಿತು.

ಭಾಷಾ ಕಲಹದ ನಡುವೆ ಸೊರಗುತ್ತಿರುವ ಬೆಳಗಾವಿಭಾಷಾ ಕಲಹದ ನಡುವೆ ಸೊರಗುತ್ತಿರುವ ಬೆಳಗಾವಿ

ಈ ಇಡೀ ಪ್ರಕರಣವನ್ನು ಖಂಡಿಸಿ ದೋಷಿಗಳ ವಿರುದ್ದ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ರಾಜ್ಯ ಸರಕಾರದ ಮೇಲೆ ಒತ್ತಡ ತರುವ ಬದಲು ಈ ಘಟನೆ ಆಳುವ ಪಕ್ಷದ ವಿರುದ್ಧ ದಲಿತರ ಸಂಘರ್ಷ ಎಂದು ವಿರೋಧ ಪಕ್ಷ ಹೇಳಿಕೆ ನೀಡಿ, ರಾಜಕೀಯ brownie point ಗಳಿಸಲು ಯತ್ನಿಸಿದ್ದು ದೌರ್ಭಾಗ್ಯವೇ.

Is it possible to come out caste- religion hurdles

ಮೊದಲಿನಿಂದಲೇ ಇಂತಹ ಪ್ರಕರಣವನ್ನು ನಿರೀಕ್ಷಿಸಿ ಕಟ್ಟುನಿಟ್ಟಿನ ಬಂದೋಬಸ್ತನ್ನು ಮಾಡದಿದ್ದುದು ಅಲ್ಲಿನ ಸರಕಾರದ ವೈಫಲ್ಯ. ಎಲ್ಲಕ್ಕಿಂತ ಹೆಚ್ಚಾಗಿ ಭಾರತೀಯರಾಗಿ ನಾವೆಲ್ಲ ನಮ್ಮ ಹಳೆಯ ವೈಷಮ್ಯಗಳನ್ನು ಮರೆತು ಐಕಮತ್ಯದ ಸಮಾಜವನ್ನು ನಿರ್ಮಿಸುವತ್ತ ಹೆಜ್ಜೆಯಿಡುವುದರಲ್ಲಿ ವಿಫಲರಾಗಿದ್ದು ನಮ್ಮ ದುರ್ದೈವ.

ನಮ್ಮಲ್ಲಿಯ ಒಡಕುಗಳನ್ನು ಎತ್ತಿ ಹಿಡಿದು ಅವುಗಳನ್ನೇ ದೊಡ್ಡದಾಗಿ ತೋರಿಸಿ, ನಮ್ಮನ್ನು ಬೀದಿ ಜಗಳಗಳಿಗೆ ಪ್ರೇರೇಪಿಸಿ, ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವ ರಣಹದ್ದುಗಳಿಗೆ ನಮ್ಮ ದೇಶದಲ್ಲಿ ಕೊರತೆಯಿಲ್ಲ. ಈ ಒಡೆದು ಆಳುವ ನೀತಿ ಬ್ರಿಟಿಷರೊಂದಿಗೆ ಮುಗಿಯದೇ ಈಗ ದೈತ್ಯಾಕಾರ ಪಡೆದುಕೊಂಡಿದೆ.

ಈಗ ಪ್ರತಿ ರಾಜ್ಯಗಳಲ್ಲಿ ಜಾತಿ ವೈಷಮ್ಯ, ಧರ್ಮ ವೈಷಮ್ಯದ ಕಾಳ್ಗಿಚ್ಚನ್ನು ಹಬ್ಬಿಸುವ ಅನೇಕರು ಇಂದು ತಮ್ಮನ್ನು ತಾವೇ ಅನೇಕ ಧರ್ಮ, ಜಾತಿಗಳ ಮುಖಂಡರೆಂದು ಸ್ವಘೋಷಣೆ ಮಾಡಿಕೊಂಡು ವಿಜೃಂಭಿಸುತ್ತಿದ್ದಾರೆ. ಅನೇಕ ಸ್ವಾರ್ಥಪರ ನಾಯಕರು ಅವರಿಗೆ ಕುಮ್ಮಕ್ಕು ಕೂಡ ನೀಡುತ್ತಿದ್ದಾರೆ.

Is it possible to come out caste- religion hurdles

ಇಂತಹ ಬೆಳವಣಿಗೆಗಳಿಗೆ ಸದ್ಯಕ್ಕಂತೂ ಅಂತ್ಯ ಕಾಣುತ್ತಿಲ್ಲ. ಇತ್ತೀಚಿನ ಗುಜರಾತಿನ ಚುನಾವಣೆಯಲ್ಲಿ ನಡೆದ ಧರ್ಮ ಮತ್ತು ಜಾತಿ ರಾಜಕಾರಣದ ನಗ್ನ ತಾಂಡವವೇ ಅದಕ್ಕೆ ಸಾಕ್ಷಿ. 2014ರ ಚುನಾವಣೆಯ ಅಭಿವೃದ್ಧಿಪರ ರಾಜಕೀಯದ ಧನಾತ್ಮಕ ಬೆಳವಣಿಗೆ ಇಂದು ಹಿನ್ನೆಲೆಗೆ ಸರಿದು, ಮತ್ತೆ ಧರ್ಮ ಮತ್ತು ಜಾತಿಗಳ ರಾಜಕಾರಣ ಮುಂಚೂಣಿಗೆ ಬರುವ ದುರ್ಲಕ್ಷಣಗಳು ಎದ್ದು ಕಾಣುತ್ತಿವೆ. ಇದಕ್ಕೆ ಎಂದಾದರೂ ಅಂತ್ಯವಿದೆಯೇ ಎಂದು ಜನ ಸಾಮಾನ್ಯರು ಕೇಳುವಂತಾಗಿದೆ.

ಆದರೆ, ಇದರ ಪರಿಹಾರ ನಮ್ಮ ಮುಂದೆಯೇ ಇದೆ ಎನ್ನಬಹುದು. ನಮ್ಮ ದೇಶದ ಅನೇಕ ಸಂತ ಮಹಾನುಭಾವರು ಈ ಜಾತಿ ಮತ್ತು ಧರ್ಮಗಳ ಆಧಾರದ ಮೇಲೆ ನಡೆಯುವ ಶೋಷಣೆಯ ವಿರುದ್ಧ ದನಿಯೆತ್ತಿದ್ದಾರೆ. ಸಮಾಜಕ್ಕೆ ತಿಳಿವಳಿಕೆ ನೀಡಿದ್ದಾರೆ. ಬಸವಣ್ಣ, ಕನಕದಾಸರು, ಕಬೀರದಾಸರು, ಗುರು ನಾನಕ್, ಸಂತ ತುಕಾರಾಮ್, ಮಹಾತ್ಮ ಗಾಂಧಿ ಮತ್ತು ನಾರಾಯಣ ಗುರುಗಳಂತಹ ಮಹಾತ್ಮರು ಈ ದಿಶೆಯಲ್ಲಿ ದಾರಿ ತೋರಿದ್ದಾರೆ.

ಅವರು ಹೇಳಿದಂತೆ ನಾವೆಲ್ಲ ನಮ್ಮ ಜಾತಿ, ಧರ್ಮಗಳ ಸಂಕೋಲೆಯನ್ನು ಕಡಿದು ಹಾಕಬೇಕಾಗಿದೆ. ಆದರೆ ಸ್ವಾತಂತ್ರ್ಯಾನಂತರದ ನಮ್ಮ ರಾಜಕೀಯ ದುರಂಧರರು ಈ ಭೇದ- ಭಾವಗಳನ್ನು ತೊಡೆದು ಹಾಕುವತ್ತ ಪ್ರಯತ್ನಿಸುವುದನ್ನು ಬಿಟ್ಟು ಮತ್ತಷ್ಟು ಹೆಚ್ಚು ವಿಜೃಂಭಿಸುವಂತೆ ಸಂಚು ಹೂಡಿದರು.

ಮುನ್ನೂರು ಚಿಲ್ಲರೆ ವರ್ಷಗಳ ಪರಕೀಯರ ದುರಾಡಳಿತದಿಂದ ಬೇಸತ್ತು ಹೊಸ ದಿಗಂತದತ್ತ ನೋಡುತ್ತಿದ್ದ ಮುಗ್ಧ ಜನರನ್ನು ಜಾತಿ- ಮತಗಳ ಸಂಕೋಲೆಗಳಿಗೆ ಮತ್ತೆ ಮತ್ತೆ ಸಿಲುಕಿಸಿ, ಬ್ರಿಟಿಷರ ಒಡೆದು ಆಳುವ ಪದ್ಧತಿಯನ್ನು ಅನೂಚಾನವಾಗಿ ಮುಂದುವರೆಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಸಂತೋಷದಿಂದ ಉಪಯೋಗಿಸಿದರು.

ಆದರೆ, ಇಪ್ಪತ್ತೊಂದನೆ ಈ ಶತಮಾನದಲ್ಲಿ ನಾವು ಇನ್ನೂ ಮುಗ್ಧರಾಗಿ ಮುಂದುವರೆಯಬೇಕಿಲ್ಲ. ಏನು ಮಾಡಿದರೆ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ನಾವು ಸ್ವತಃ ವಿಶ್ಲೇಷಿಸಿ ಅರಿಯಬೇಕಾಗಿದೆ. ಕೆಲವು ಪುಢಾರಿಗಳು ಒರಲುವಂತೆ ಬೀದಿ ಹೋರಾಟದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಸಾರ್ವಜನಿಕ ಆಸ್ತಿಯನ್ನು ನಾಶಮಾಡುವುದರಿಂದಲೂ ಸಾಧ್ಯವಿಲ್ಲ. ಒಬ್ಬರನ್ನೊಬ್ಬರ ಮೇಲೆ ಕಲ್ಲು ತೂರುವದರಿಂದ ಅಥವಾ ಹಿಂಸೆಗಿಳಿಯುದರಿಂದಲಂತೂ ಸರ್ವಥಾ ಸಾಧ್ಯವಿಲ್ಲ.

ಈ ಜಾತಿ ಮತ್ತು ಧರ್ಮಗಳ ಭೇದಭಾವಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವುದರಿಂದ ಮಾತ್ರ ಇದು ಸಾಧ್ಯ. ದೇಶದ ಸರ್ವಾಧಿಕ ಜನರ ಮನಸ್ಥಿತಿಯಲ್ಲಿ ಇಂದು ಇಂತಹ ಬದಲಾವಣೆ ಬರಬೇಕಾಗಿದೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತ ಕೇಳಲು ಬರುವ ಎಲ್ಲ ರಾಜಕಾರಣಿಗಳನ್ನು ಬಹಿರಂಗವಾಗಿ ತಿರಸ್ಕರಿಸುವ ಮನಸ್ಥಿತಿ ನಮ್ಮಲ್ಲಿ ಬರದೇ ಹೋದರೆ ದೇಶದಾದ್ಯಂತ ಹಿಂಸೆ, ದೊಂಬಿಗಳ ತಾಂಡವವನ್ನು ಮಾಡಿಸಿ, ದೇಶವನ್ನು ಇನ್ನಷ್ಟು ಅಧಃಪತನಕ್ಕೆಳೆಯಲು ನಮ್ಮ ದೇಶದ ಕೆಲವು ಪುಢಾರಿಗಳು ಸಜ್ಜಾಗಿಯೇ ಕುಳಿತಿದ್ದಾರೆ ಎನ್ನಬಹುದು.

ಇಂತಹ ಕ್ರಾಂತಿಕಾರಿ ಮನೋಭಾವ ನಮ್ಮಲ್ಲಿ ಬರಬಹುದೇ? ಬೆಳಗ್ಗೆದ್ದು ಮಾಧ್ಯಮಗಳ ಕರ್ಕಶ ಅಬ್ಬರಕ್ಕೆ ಕಿವಿಗೊಟ್ಟರೆ ನಮಗೆ ಕೇಳಿಬರುವುದು ಜಾತಿ, ಧರ್ಮಗಳಿಂದ ಉಂಟಾದ ಕಲಹ, ಅಲ್ಲೋಲ ಕಲ್ಲೋಲಗಳು. ನಮ್ಮ ಸಮಾಜವನ್ನು ಸುತ್ತುವರೆದು ನುಂಗಿ ಹಾಕುತ್ತಿರುವ ಈ ಪಟ್ಟಭದ್ರ ಹಿತಾಸಕ್ತಿಗಳಿಂದ ನಮ್ಮನ್ನು ನಾವು ಬಿಡಿಸಿಕೊಳ್ಳಬಲ್ಲೆವೇ?

ಈ ದಿಶೆಯಲ್ಲಿ ದಕ್ಷಿಣ ಪೂರ್ವ ರಾಷ್ಟ್ರಗಳಿಂದ ಕಲಿಯುವುದು ಸಾಕಷ್ಟಿದೆ. ನಮ್ಮ ಜೊತೆಯೇ ಅಥವಾ ನಮಗಿಂತ ಆಮೇಲೆ ಸ್ವಾತಂತ್ರ್ಯ ಗಳಿಸಿದ ಈ ರಾಷ್ಟ್ರಗಳ ನಾಯಕರು ನಮ್ಮ ನಾಯಕರುಗಳಿಗಿಂತ ಹೆಚ್ಚಿನ ಮುಂದಾಲೋಚನೆಯನ್ನು ಪ್ರದರ್ಶಿಸಿ, ತಮ್ಮಲ್ಲಿಯ ಭೇದ ಭಾವಗಳನ್ನು ತೊಡೆದು ಹಾಕಿ ಪ್ರಜೆಗಳನ್ನು ಅಭಿವೃದ್ಧಿಯ ಪಥದತ್ತ ನಡೆಸಿದರು.

ಇಂದು ಈ ರಾಷ್ಟ್ರಗಳು ನಮ್ಮ ದೇಶಕ್ಕಿಂತ ಹೆಚ್ಚಿನ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯವಾದುದು ಇಲ್ಲಿನ ಪ್ರಜೆಗಳು ತಮ್ಮ ಕರಾಳ ಭೂತಕಾಲವನ್ನು ಹಿಂದೆ ತಳ್ಳಿ, ಉಜ್ವಲ ಭವಿಷ್ಯದತ್ತ ಹೆಜ್ಜೆ ಹಾಕುವತ್ತ ಮನಸ್ಸು ಮಾಡಿದ್ದರಿಂದ. ಹಾಗೆಯೇ ನಮ್ಮಲ್ಲಿ ಕೂಡ ಈ ರೀತಿ ಮಾಡುವುದು ಸಾಧ್ಯವೇ? ಹಾಗಾಗಲಿ ಎಂದು ಮನಸ್ಸು ಪ್ರಾರ್ಥಿಸುತ್ತದೆ.

ಕೊನೆಯಲ್ಲಿ ಸುನಿಲ್ ದತ್ತರ ಈ ಅದ್ಭುತ ಹಾಡು ಈಗ ಅತ್ಯಂತ ಪ್ರಸ್ತುತ ಎನಿಸುವುದರಿಂದ ಇಲ್ಲಿ ಲಿಂಕ್ ಅನ್ನು ಕೊಟ್ಟಿದ್ದೇನೆ.

English summary
Recent Koregaon riot again witnessed caste feelings of people. How such feelings ruin our country? Leaders should think of it and people should aware of such situation. Here is the beautiful write up by One India columnist Vasant Kulkarni.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X