ಸಿಂಗಪುರದಲ್ಲಿಯೂ ಇಣುಕುತ್ತಿದೆ ಉದ್ಯೋಗದ ಅಭದ್ರತೆ!

By: ವಸಂತ ಕುಲಕರ್ಣಿ, ಸಿಂಗಪುರ
Subscribe to Oneindia Kannada

ಎರಡು ದಿನಗಳ ಹಿಂದೆ ನನ್ನ ಐಟಿ ಗೆಳೆಯರೊಬ್ಬರು ಭೇಟಿಯಾಗಿದ್ದರು. ಸ್ವಾಭಾವಿಕವಾಗಿ ನಮ್ಮ ಸಂಭಾಷಣೆ ಟ್ರಂಪ್ ಅವರ ಹೊಸ ವೀಸಾ ನೀತಿಯತ್ತ ಹೊರಳಿತು. ಟ್ರಂಪ್ ಅಧ್ಯಕ್ಷರಾದ ಬಳಿಕ ಅಮೆರಿಕಾದಲ್ಲಿರುವ ಅವರ ಮಿತ್ರರೊಬ್ಬರ ವೀಸಾ ಅವಧಿ ಮುಗಿಯಿತಂತೆ. ಆದರೆ ಅವರ ಹೆಂಡತಿ ಮತ್ತು ಹಸುಗೂಸಿನ ವೀಸಾ ಇನ್ನೂ ಮುಗಿದಿರಲಿಲ್ಲ. ಹೊಸ ವೀಸಾ ಕೊಡಲು ಮೊದಮೊದಲು ಅಲ್ಲಿನ ವೀಸಾ ಕಚೇರಿ ಬಹಳ ಅಡೆತಡೆಗಳನ್ನುಂಟು ಮಾಡಿತಂತೆ. ಅನೇಕ ತೊಂದರೆಗಳನ್ನನುಭವಿಸಿ ಕೊನೆಗೂ ವೀಸಾ ವಿಸ್ತರಣೆ ಪಡೆದು ನೆಮ್ಮದಿಯ ಉಸಿರು ಬಿಟ್ಟರಂತೆ.

ತಮ್ಮ ಮಿತ್ರರು ಅದೃಷ್ಟವಂತರಾಗಿರಬಹುದು. ಅವರಿಗೆ ಕೊನೆಗೂ ವೀಸಾ ವಿಸ್ತರಣೆ ದೊರಕಿತು. ಆದರೆ ಇನ್ನೂ ಅನೇಕರಿಗೆ ಈ ವೀಸಾ ವಿಸ್ತರಣೆ ಕೂಡ ದೊರಕಿರಲಿಕ್ಕಿಲ್ಲ. ಅವರ ಪರಿಸ್ಥಿತಿ ಏನಾಗಿರಬಹುದು, ಎಷ್ಟು ತೊಂದರೆಗೆ ಅವರು ಸಿಲುಕಿರಬಹುದು ಎಂಬುದನ್ನು ಊಹಿಸುವದು ಕಷ್ಟ ಅಲ್ಲವೇ?[ಈಗ ಭಾರತೀಯರಿಗೆ ಸಿಂಗಾಪುರದಿಂದಲೂ ವೀಸಾ ಪ್ರಮಾಣ ಕಡಿತ]

Insecurity of jobs looms large in Singapore too

ಅಮೆರಿಕದಂತೆ ಸಿಂಗಪುರ ಕೂಡ ಐಟಿ ಇಂಜಿನಿಯರುಗಳ ವೀಸಾ ನಿಯಂತ್ರಣ ಮಾಡಿದ್ದು ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಸುದ್ದಿಯಾಗಿದೆಯಾದರೂ ಸಿಂಗಪುರದಲ್ಲಿ ಅಷ್ಟೇನೂ ಸುದ್ದಿ ಮಾಡಿಲ್ಲ. ಸಿಂಗಪುರದಲ್ಲಿ ಕೇವಲ ಐಟಿ ಇಂಜಿನಿಯರುಗಳಲ್ಲದೇ ಬ್ಯಾಂಕಿಂಗ್, ನೌಕಾ ಸರಕು ಸಾಗಾಣಿಕೆ, ತೈಲ ಮತ್ತು ರಿಫೈನರಿ, ರಾಸಾಯನಿಕ ಉತ್ಪನ್ನಗಳ ತಯಾರಿಕೆ, ಸೆಮಿ ಕಂಡಕ್ಟರ್ ಇತ್ಯಾದಿ ಕ್ಷೇತ್ರಗಳಲ್ಲಿ ಕುಶಲರಾದ ಇಂಜಿನಿಯರುಗಳು ಮತ್ತು ವೃತ್ತಿಪರರು ಕೆಲಸ ಮಾಡುತ್ತಾರೆ.

ತೈಲ ಉದ್ಯಮದಲ್ಲಿ ಕಳೆದೆರಡು ವರ್ಷಗಳಿಂದ ಮುಂದುವರೆಯುತ್ತಿರುವ ವ್ಯವಹಾರ ಕುಸಿತದಿಂದ ಈ ಕ್ಷೇತ್ರದ ಹಲವಾರು ಕಂಪನಿಗಳೊಂದಿಗೆ ಅನೇಕ ಇಂಜಿನಿಯರುಗಳು ಸಿಂಗಪುರ ಬಿಟ್ಟು ನಿರ್ಗಮಿಸಿದ್ದಾರೆ ಮತ್ತು ಈ ಕ್ಷೇತ್ರದಲ್ಲಿ ಹೊಸ ಇಂಜಿನಿಯರುಗಳು ಭಾರತ ಒಳಗೊಂಡಂತೆ ಇತರ ದೇಶಗಳಿಂದ ಸಿಂಗಪುರಕ್ಕೆ ಬರುತ್ತಿಲ್ಲ. ಹೀಗಾಗಿ ಒಟ್ಟು ವ್ಯವಹಾರ ಕುಸಿತದ ಪರಿಣಾಮವಾಗಿ ಐಟಿ ಉದ್ಯಮದ ವೀಸಾ ನಿಯಂತ್ರಣ ಇಲ್ಲಿ ಅಷ್ಟೊಂದು ಸುದ್ದಿ ಮಾಡಿಲ್ಲ.[ಸ್ವಾರ್ಥ ಮೀರಿದ ದೇಶಪ್ರೇಮವಿದ್ದರೆ ಮಾತ್ರ ಇಂಥ ಅದ್ಭುತ ಸಾಧ್ಯ!]

Insecurity of jobs looms large in Singapore too

ಆದರೆ ಕಳೆದ ಕೆಲವು ವರ್ಷಗಳಿಂದ ಇಲ್ಲಿ ಹೊರ ದೇಶದ ಕೆಲಸಗಾರರಿಂದ ಇಲ್ಲಿಯ ಕೆಲವು ಜನರಲ್ಲಿ ಸ್ವಲ್ಪ ಅಭದ್ರತೆಯ ಭಾವನೆ ಉಂಟಾಗಿರಬಹುದು ಎನಿಸುತ್ತದೆ. ದಶಕಗಳಿಂದ ಭಾರತೀಯರನ್ನು ಕೇವಲ ಕೂಲಿ ಕಾರ್ಮಿಕರನ್ನಾಗಿ ಕಂಡ ಇಲ್ಲಿಯ ನಾಗರಿಕರಿಗೆ, ಕಳೆದ ದಶಕದಲ್ಲಿ ಭಾರತದಿಂದ ವೈಟ್ ಕಾಲರ್ ಉದ್ಯೋಗಿಗಳು ಬಂದು ಹೈ ಟೆಕ್ ಉದ್ಯೋಗಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ಸು ಪಡೆಯತೊಡಗಿದ ನಂತರ ಮೊದ ಮೊದಲು ಅಚ್ಚರಿಯುಂಟಾದರೂ, ಕ್ರಮೇಣ ಸ್ವಲ್ಪ ಮಟ್ಟಿಗೆ ಅಭದ್ರತೆಯ ಭಾವನೆ ಉಂಟಾಗಿರಬಹುದು. ಆದರೆ ಆ ತರಹದ ಜನ ತುಂಬಾ ಕಡಿಮೆ.

ಸಿಂಗಪುರ ತನ್ನ ಅರ್ಹತಾಶಾಹಿ(Meritocracy)ಗೆ ಹೆಸರಾದ ದೇಶ. ಅದರಂತೆ ಇಲ್ಲಿಯ ಜನ ಕೂಡ ನಿಜವಾದ ಪ್ರತಿಭಾವಂತರಿಗೆ ಅವಕಾಶ ನೀಡಲು ಹಿಂಜರಿಯುವುದಿಲ್ಲ. ಐರೋಪ್ಯ ದೇಶಗಳಿಗೆ ಹೋಲಿಸಿದರೆ ಇಲ್ಲಿ ಅನ್ಯಜನಾಂಗ ದ್ವೇಷ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಜನ ಸ್ನೇಹಪರರಾದರೂ, ಮಿತಭಾಷಿಗಳು. ಆದರೆ ಆರ್ಥಿಕ ಕುಸಿತ ಉದ್ಯೋಗಾವಕಾಶಗಳನ್ನು ಕೂಡ ಕಡಿಮೆ ಮಾಡಿದ ಮೇಲೆ ಸ್ವಲ್ಪ ಮಟ್ಟಿನ ಆರ್ಥಿಕ ರಕ್ಷಣೆಯ ಮನೋಸ್ಥಿತಿ ಇಲ್ಲಿ ಕೂಡಾ ಕಾಲಿಟ್ಟಿದೆ. ಅದು ಸಹಜವೂ ಹೌದು. ಯಾವ ದೇಶ ತಮ್ಮ ನಾಗರಿಕರ ಹಿತಾಸಕ್ತಿಗಳನ್ನು ಎತ್ತಿ ಹಿಡಿಯುವುದಿಲ್ಲ?

Insecurity of jobs looms large in Singapore too

ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಪದವಿ ಏರಿದ ಮೇಲೆ ವಿಶ್ವಾದ್ಯಂತ ಆರ್ಥಿಕ ರಕ್ಷಣೆಯ ಅಲೆಯೆದ್ದಿದೆ. ಅಮೆರಿಕ ತನ್ನ ದೇಶದ ಕಂಪನಿಗಳನ್ನು ಬೇರೆ ದೇಶಗಳಿಗೆ ಹೊರಗುತ್ತಿಗೆ ಕೊಡಲು ನಿರ್ಬಂಧಿಸುತ್ತಿದೆ, ಹೊರ ದೇಶದ ಕುಶಲ ಕೆಲಸಗಾರರಿಗೆ ವೀಸಾ ನೀಡಲು ಅನೇಕ ಅಡೆತಡೆಗಳನ್ನುಂಟು ಮಾಡುತ್ತಿದೆ. ಇದು ಅಮೆರಿಕದ ದೊಡ್ಡ ದೊಡ್ದ ಕಂಪನಿಗಳ ಮೇಲೆ ಅವಲಂಬನೆ ಹೊಂದಿದ ನಮ್ಮ ಅನೇಕ ಐಟಿ ಕಂಪನಿಗಳ ನಿದ್ದೆಗೆಡಿಸಿದೆ. ಅವು ಈಗ ತಮ್ಮ ಭವಿಷ್ಯದ ಬಗ್ಗೆ ಚಿಂತಿಸುತ್ತಿವೆ.

ಅನೇಕ ಐಟಿ ಇಂಜಿನಿಯರುಗಳು ಟ್ರಂಪ್ ಅವರ ವೀಸಾ ನಿಷೇಧದಿಂದ ಅನೇಕ ತರಹದ ತೊಂದರೆ ಅನುಭವಿಸಿರುವುದಂತೂ ನಿಜ. ದುರದೃಷ್ಟಾವಶಾತ್ ಈ ಆರ್ಥಿಕ ರಕ್ಷಣೆಯ ಅಲೆ ಈಗ ಅಮೆರಿಕದ ತೀರದಿಂದ ಇತರ ದೇಶಗಳಿಗೆ ಕೂಡ ಹರಡುತ್ತಿದೆ. ಯುರೋಪಿಯನ್ ದೇಶಗಳನ್ನೊಳಗೊಂಡಂತೆ ಅನೇಕ ದೇಶಗಳು ತಮ್ಮ ದೇಶಗಳ ಉದ್ಯೋಗಗಳನ್ನು ತಮ್ಮ ಪ್ರಜೆಗಳಿಗಾಗಿಯೇ ಉಳಿಸುವ ಪಣ ತೊಡುತ್ತಿವೆ. ಊಹಿಸಲು ಅಸಾಧ್ಯವಾದ ವಿಷಯವೆಂದರೆ ಈ ಆರ್ಥಿಕ ರಕ್ಷಣೆಯ ಅಲೆ ಈಗ ಮಧ್ಯಪ್ರಾಚ್ಯ ದೇಶಗಳನ್ನು ಕೂಡ ತಲುಪಿದೆ. ಸೌದಿ ಅರೇಬಿಯಾದಂತಹ ದೇಶ ಕೂಡ ಅನೇಕ ವಿದೇಶೀ ಕೆಲಸಗಾರರನ್ನು ಹೊರ ಹಾಕುತ್ತಿದೆ.

Insecurity of jobs looms large in Singapore too

ಉದ್ಯಮದ ಕುಸಿತ ಅನೇಕ ದೇಶಗಳಲ್ಲಿ ನಿರುದ್ಯೋಗವನ್ನು ಸೃಷ್ಟಿಸಿದೆ. ಇದರಿಂದ ಆಯಾ ದೇಶಗಳು ಈಗಿರುವ ಸೀಮಿತ ಉದ್ಯೋಗಾವಕಾಶಗಳನ್ನು ತಮ್ಮತಮ್ಮ ನಾಗರಿಕರಿಗೆ ದೊರಕಿಸಲು ಪ್ರಯತ್ನಿಸುತ್ತಿವೆ. ಇದರಲ್ಲಿ ತಪ್ಪೇನಿಲ್ಲ. ಈ ಮನಃಸ್ಥಿತಿಗೆ ಸಿಂಗಪುರವೂ ಹೊರತಲ್ಲ. ಯಾವುದೋ ದೇಶದಲ್ಲಿ ಕೆಲಸವೊಂದನ್ನು ಪಡೆದು ನೆಮ್ಮದಿಯ ಜೀವನ ನಡೆಸುತ್ತಿದ್ದ ಸಾಮಾನ್ಯ ಜನರನ್ನು ಬುಡಸಮೇತ ಕೀಳುವ ಈ ಪರಿಸ್ಥಿತಿಯನ್ನು ಕುರಿತು ವಿಚಾರಿಸುವ ಕಾಲ ಈಗ ಬಂದಿದೆ. ಅದರಲ್ಲೂ ನಾವು ಭಾರತೀಯರು ಈ ವಿಷಯದ ಬಗ್ಗೆ ತೀವ್ರ ಚಿಂತನೆ ನಡೆಸಬೇಕಿದೆ.

ಏಕೆಂದರೆ ವಿಶ್ವದ ಅನೇಕ ಮುಂದುವರೆದ ದೇಶಗಳಲ್ಲಿ ದೊರಕುವ ಅವಕಾಶಗಳನ್ನು ಪಡೆದುಕೊಂಡು ಅಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ವಿಶ್ವದ ನಾಗರಿಕರಲ್ಲಿ ಭಾರತೀಯರೇ ಮೊದಲಿಗರು. ಹೀಗಾಗಿ ವಿಶ್ವದ ಆರ್ಥಿಕ ಪರಿಸ್ಥಿತಿಯಲ್ಲಿ ಉಂಟಾಗುವ ಏರು ಪೇರುಗಳಿಂದ ಬೀಳುವ ಪೆಟ್ಟುಗಳಿಗೆ ಕೂಡ ನಾವೇ ಹಕ್ಕುದಾರರು. ನಮ್ಮ ದೇಶದಲ್ಲಿ ಅವಕಾಶಗಳು ಬಹಳ ಸೀಮಿತವಾಗಿರುವುದರಿಂದ ಮತ್ತು ಇರುವ ಅವಕಾಶಗಳು ಜನರ ಆಶಯಗಳನ್ನು ಪೂರೈಸಲು ಸೋತಿರುವುದರಿಂದ ಜನರು ಉಜ್ವಲ ಅವಕಾಶಗಳನ್ನು ಹುಡುಕಿಕೊಂಡು ಹೊರಗೆ ಹೋಗುತ್ತಾರೆ. ಈ ದಿಶೆಯಲ್ಲಿ ಸರಕಾರ ಎಚ್ಚೆತ್ತುಕೊಂಡು ದಶಕಗಳಿಂದ ಉಂಟಾಗುತ್ತಿರುವ Brain Drainನ ದಿಕ್ಕನ್ನು ತಿರುಗಿಸಬೇಕಾಗಿದೆ. ಈಗ ತಾನೆ ಹಮ್ಮಿಕೊಂಡಿರುವ Make in India ಯೋಜನೆ ಈ ದಿಶೆಯಲ್ಲಿ ಮೊದಲ ಮೈಲಿಗಲ್ಲಾಗಬಹುದೇ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Not just in America, in Singapore also many working from other countries are facing job threat as Singapore government is thinking of imposing strict visa norms to ensure employment for the local people. Vasant Kulkarni from Singapore analyses the situation.
Please Wait while comments are loading...