ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೊ. ಅ.ರಾ.ಮಿತ್ರರೊಡನೆ someವಾದ

By Staff
|
Google Oneindia Kannada News


ಪ್ರೇಕ್ಷಕರಿಂದ ಬಂದಿದ್ದ ಪ್ರಶ್ನೆಗಳು :

ಗುರುಪ್ರಸಾದ್‌ ಕಾಗಿನೆಲೆ:- ಐಟಿ, ಬಿಟಿ ಸಾಹಿತ್ಯ ಅವಸರದ ಸಾಹಿತ್ಯ. ಅದು ಇತರ ಸಾಹಿತ್ಯದ ಜೊತೆ ನಿಲ್ಲಲಾರದು ಎಂಬುದು ವಿಮರ್ಶಕರ ಅಂಬೋಣ. ನಿಮ್ಮ ಅಭಿಪ್ರಾಯವೇನು?

ಪ್ರೊ. ಅ.ರಾ.ಮಿತ್ರ:- ಸಾಹಿತ್ಯದಲ್ಲಿ ಐಟಿ. ಬಿಟಿ. ಎಂಬ ವರ್ಗೀಕರಣ ಸರಿಯಲ್ಲ. ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ ಎಂದು ವಚನಕಾರರು ನುಡಿದಿರುವಂತೆ ಬರೆಯುವವರದ್ದೇ ಒಂದು ಜಾತಿ. ಬರವಣಿಗೆಯ ಯೋಗ್ಯತೆ ಬರಹದಿಂದ ನಿರ್ಧಾರವಾಗಬೇಕೇ ಹೊರತು ಯಾರು ಬರೆಯುತ್ತಿದ್ದಾರೆ ಎಂಬುದರಿಂದಲ್ಲ. ‘‘ನೀವು ದೊಡ್ಡವರು ನಿಜ, ನಾವೇನೂ ಕುಬ್ಜರಲ್ಲ’’ ಎನ್ನುವಂತೆ ಇಂತಹ ಟೀಕೆಗಳನ್ನು ಮೀರಿ ಬೆಳೆಯುವ ಪ್ರಯತ್ನವಾಗಬೇಕು. ಸಮಾಜದ ಎಲ್ಲಾ ಸ್ತರಗಳ ಜನರೂ ತಮ್ಮ ಅನುಭವವನ್ನು ದಾಖಲಿಸುತ್ತಿರುವುದು ಸಂತೋಷವೇ.

ನಳಿನಿ ಮೈಯ:- ಐಟಿ ಯುಗದ ಪ್ರಭಾವ, ಇಂಗ್ಲಿಷ್‌ ಹಾವಳಿ, ಈಗಿನ ಹಾಸ್ಯ ಸಾಹಿತ್ಯದಲ್ಲಿ ಹೊಸತನ ತಂದಿದೆಯೇ?

ಪ್ರೊ. ಅ.ರಾ.ಮಿತ್ರ:- ಈ ಬಗ್ಗೆ ನನಗೆ ಅಷ್ಟಾಗಿ ಗೊತ್ತಿಲ್ಲ. ಬರವಣಿಗೆಯ ಒತ್ತಡ ಒಳಗಿನಿಂದ ಬರಬೇಕು. ಕೇವಲ ಮಾರಾಟದ ದೃಷ್ಟಿಯಿಂದ ಪುಸ್ತಕ ಪ್ರಕಟನೆಯನ್ನು ಪ್ರೋತ್ಸಾಹಿಸುವುದರಿಂದ ಯಾವ ಭಾಷೆಯ ಸಾಹಿತ್ಯವೂ ಉನ್ನತಿ ಹೊಂದುವುದಿಲ್ಲ.

ತ್ರಿವೇಣಿ ಶ್ರೀನಿವಾಸ ರಾವ್‌:- ಕನ್ನಡ ಸಾಹಿತ್ಯದಲ್ಲಿ ಹಾಸ್ಯದ ಕೊರತೆ ಇಲ್ಲವೆಂದು ನೀವು ನಿನ್ನೆ ಮಾಡಿದ ಭಾಷಣದಿಂದ ತಿಳಿಯಿತು. ಆದರೆ ಈಚೆಗೆ ಹಾಸ್ಯೋತ್ಸವ, ನಗೆ ಹಬ್ಬಗಳಲ್ಲಿ ಹಾಸ್ಯದ ಪುನರಾವರ್ತನೆಯಿಂದ ಬೇಸತ್ತಿದ್ದೇನೆ. ಈ ಬಗ್ಗೆ ನೀವೇನಂತೀರಿ?

ಪ್ರೊ. ಅ.ರಾ.ಮಿತ್ರ:- ಹೌದು, ಹಾಸ್ಯದ ಪುನರಾವರ್ತನೆ ಇದೆ ಎಂಬುದನ್ನು ನಾನು ಒಪ್ಪುತ್ತೇನೆ. ಅದಕ್ಕೆ ಹಾಸ್ಯಗಾರರ ಅಮೋಘ ಮೌಢ್ಯವೇ ಕಾರಣ. ಹಾಸ್ಯ ಗೋಷ್ಠಿಗಳಲ್ಲಿ ಒಬ್ಬರು ಹೇಳಿದ್ದನ್ನೇ ಮತ್ತೊಬ್ಬರು ಹೇಳುವುದು ಸಾಮಾನ್ಯವಾಗಿದೆ. ಹಾಸ್ಯ ಸಾಹಿತಿಗಳು ಓದುವುದನ್ನು ಕಡಿಮೆ ಮಾಡಿರುವುದರಿಂದ ಹೀಗಾಗಿದೆ. ಹಾಸ್ಯ ಎಲ್ಲೆಡೆಯೂ ಇದೆ. ಆದರೆ ಅದನ್ನು ಹುಡುಕುವ ಮನೋಭಾವವಿರಬೇಕು. ದಿನ ನಿತ್ಯದ ಘಟನೆಗಳಲ್ಲಿ ಹಾಸ್ಯ ಹೇಗೆ ಅಡಗಿರುತ್ತದೆ ಎಂಬುದಕ್ಕೆ ನನ್ನದೇ ಒಂದು ಉದಾಹರಣೆ. ನಮ್ಮ ಮನೆಯಲ್ಲಿ ನಡೆದ ಈ ದೂರವಾಣಿ ಸಂಭಾಷಣೆ ಈಗ ಬೆಂಗಳೂರಿನಲ್ಲಿ ಮನೆಮಾತಾಗಿದೆ.

ಎಚ್‌.ಕೆ. ರಂಗನಾಥ್‌:- ಮಿತ್ರ ಇದಾನಾ?
ಲಲಿತಾ ಮಿತ್ರ:- ಸ್ನಾನ ಮಾಡ್ತಾ ಇದಾರೆ.
ಎಚ್‌. ಕೆ. ಆರ್‌:- ಅವನು ಸ್ನಾನ ಬೇರೆ ಮಾಡ್ತಾನಾ?
ಲಲಿತಾ ಮಿತ್ರ:- ಇವತ್ತು ಮಂಗಳವಾರ ಅಲ್ವಾ ಅದಕ್ಕೆ.

ದತ್ತಮೂರ್ತಿ ಅಜ್ಜಂಪುರ:- ಛಂದಸ್ಸುಗಳ ಬಗ್ಗೆ ಬರೆದಿದ್ದೀರಿ. ಅದರ ಕಿರು ಪರಿಚಯ ಮಾಡಿಕೊಡಿ.

ಪ್ರೊ. ಅ.ರಾ.ಮಿತ್ರ:- ಛಂದಸ್ಸು ಅರ್ಥವಾಗುವುದು ಕಷ್ಟ. ‘ಮಾತ್ರೆ ’ ಎಂದರೆ ಏನೆಂದು ತಿಳಿಯದ ಮಕ್ಕಳು ವೈದ್ಯರ ಮುಖ ನೋಡುತ್ತಾರೆ. ಅದನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥ ಮಾಡಿಸುವ ಪ್ರಯತ್ನ ‘‘ಛಂದೋಮಿತ್ರ’’ದಲ್ಲಿ ಮಾಡಿದ್ದೇನೆ. ಕನ್ನಡ ಸಾಹಿತ್ಯದ ಎಲ್ಲಾ ಛಂದಸ್ಸುಗಳ ಕುರಿತ ವಿವರಣಾ ಪದ್ಯವನ್ನು ಆಯಾ ಛಂದಸ್ಸಿನಲ್ಲಿಯೇ ಬರೆಯಲಾಗಿದೆ. ತಿಳಿಹಾಸ್ಯದ ಮೂಲಕ, ಸರಳವಾಗಿ ತಿಳಿಸಿರುವುದರಿಂದ ಮನಸ್ಸಿಗೆ ಮುಟ್ಟುತ್ತದೆ.

ಉದಾಹರಣೆಗೆ ಇಡ್ಲಿಯ ಬಗೆಗಿರುವ ಒಂದು ಸಾಂಗತ್ಯ ಪದ್ಯ-

‘ನೋಡಿರಿ ಸಾವಿರ ವರ್ಷಕು ಹಳೆಯದು
ಇಡ್ಡಲಿ ಎಂಬುವ ಶಬ್ದ‘-
ನುಡಿಶಾಸ್ತ್ರ ಬಲದಿಂದ ಇಂತೆಂದು ನುಡಿದರು
ದೊಡ್ಬೆಲೆ ನರಸಿಂಹಾಚಾರ್ಯ

ತರಗತಿ ಮುಗಿಸಿ ಕ್ಯಾಂಟೀನೆಡೆ ಹೊರಟಾಗ
ತರಿಸಿದ ಇಡ್ಲಿಯ ಕಂಡು
ಸೊರಗಿದ ಮುಖಗಳ ನಮಗೆಲ್ಲ ಅನಿಸಿತು
ಖರೆಖರೆ ಇದು ಅಂದಿನದೇ!

ಇದೇ ರೀತಿ ಸ್ರಗ್ಧರಾ ಎಂಬ 21 ಅಕ್ಷರಗಳ ವೃತ್ತಕ್ಕೊಂದು ಹಾಸ್ಯ ಬೆರೆತ ಉದಾಹರಣೆ -

‘ದ್ವೈತಂ ನಮ್ಮೊಂದು ತತ್ವಂ ಮಗಳೆ ತಿಳಿದಿರೈ ಗೀತವೇ ಬೇರೆ ಆ ಸಂ
ಗೀತಂ ಪೇಳ್ವಾತನೇ ಬೇರೆ ಮನೆತನದ ಮರ್ಯಾದೆಯೂ ಮುಖ್ಯ ಗೊತ್ತೇ?’
-ಇಂತೆಲ್ಲಂ ತಂದೆ ಮುನ್ನಂ ತಿಳಿಸಿ ಕಲಿಯಲಿಕ್ಕೆಂದು ಬಿಟ್ಟಿರ್ದೊಡಂ ಆ
ಗೀತಾಚಾರ್ಯಂಗೆ ಸೋತಳ್‌ ಮಗಳು ನಿಜದಿನದ್ವೈತಮಂ ಸಾಧಿಸಿರ್ದಳ್‌

ಜ್ಯೋತಿ ಮಹಾದೇವ್‌:- ಕವಯಿತ್ರಿಯಾಗಿ ಪುಸ್ತಕಗಳನ್ನು ಅಂಗಡಿಯಿಂದ ಅಂಗಡಿಗೆ ಹೊತ್ತೊಯ್ದ ಅನುಭವದ ಆಧಾರದಲ್ಲಿ ಈ ಪ್ರಶ್ನೆ. ಡುಂಡಿರಾಜರ ಹನಿಗವನಗಳನ್ನು ಹೊರತುಪಡಿಸಿ ಕನ್ನಡ ಓದುಗ ಬಯಸುವ ಕಾವ್ಯ ಯಾರು?

ಪ್ರೊ. ಅ.ರಾ.ಮಿತ್ರ:- ಹನಿಗವನದ ಪ್ರಭಾವ ತಾತ್ಕಾಲಿಕ. ಹನಿಗವನಗಳ ಹರವು ಸಣ್ಣದು. ಅಲ್ಲೊಂದು ಇಲ್ಲೊಂದು ಹನಿಗವನಗಳು ವಿಶಾಲ ವ್ಯಾಪ್ತಿಯನ್ನು ಹೊಂದಿವೆಯಾದರೂ ಬಹುಪಾಲು ಹನಿಗಳು ಆ ಕ್ಷಣದ ಮನರಂಜನೆಗೆ ಮಾತ್ರ ಸೀಮಿತ. ಅವುಗಳನ್ನು ಗಂಭೀರವಾಗಿ ಪರಿಗಣಿಸುವುದು ಸಾಧ್ಯವಿಲ್ಲ. ಕವಿತೆಯ ಘನತೆಗೆ ಎಂದಿಗೂ ಕುಂದಿಲ್ಲ. ಉತ್ತಮ ಕವಿತೆಗೆ ಜನಮನದಲ್ಲಿ ಸ್ಥಾನವಿದ್ದೇ ಇರುತ್ತದೆ.

***

(ಶಿಕಾಗೋದಲ್ಲಿ ನಡೆದ ಹಾಸ್ಯ ಸಮ್ಮೇಳನದಲ್ಲಿ ನನಗೆ ಅತ್ಯಂತ ಇಷ್ಟವಾದ ಕಾರ್ಯಕ್ರಮಗಳಲ್ಲೊಂದು ಪ್ರೊ. ಅ.ರಾ.ಮಿತ್ರರ ಸಂವಾದ. ಅದನ್ನು ವಿಡಿಯಾ ಸಹಾಯದಿಂದ ಅಕ್ಷರಗಳಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೇನೆ. ಸಭಾಂಗಣದಲ್ಲಿ ಭೋರ್ಗರೆಯುತ್ತಿದ್ದ ಪ್ರೇಕ್ಷಕರ ನಗೆ ಸುನಾಮಿ ಅಲೆಗಳ ನಡುವೆ, ಮಿತ್ರರ ಮಾತಿನ ಮುತ್ತುಗಳನ್ನು ಹೆಕ್ಕುವುದು ನನಗೆ ನಿಜಕ್ಕೂ ಬಹಳ ಪ್ರಯಾಸವಾಯಿತು. ಹಾಗಾಗಿ, ಇಲ್ಲಿ ತಪ್ಪುಗಳೇನಾದರೂ ನುಸುಳಿದ್ದರೆ ಅವು ನನ್ನವು. ಪ್ರೊ. ಅ. ರಾ. ಮಿತ್ರರದಲ್ಲ. ಈ ಸಂವಾದದಲ್ಲಿ ಚೆಲ್ಲಾಡಿದ ನಗೆ ಚಟಾಕಿಗಳನ್ನೆಲ್ಲಾ ಇಲ್ಲಿ ಹಿಡಿದಿಡಲಾಗಿಲ್ಲ!)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X