• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ನಾನ :ಮನಸು ಪೊರೆ ಕಳಚಿಕೊಂಡು ಹಗುರಾಗುವ ಹೊತ್ತು!

By Staff
|

ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ

ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

sritri@gmail.com

A pleasant experience of Bath!ಉರಿಬಿಸಿಲಿನ ಮಧ್ಯಾಹ್ನ. ಬೆವರಿನ ಜೊತೆಗೆ ರಸ್ತೆಯ ಧೂಳು ಬೆರೆತು ಅಂಟುಅಂಟಾದ ದೇಹ. ಇಂತಹ ಸಮಯದಲ್ಲಿ ಮನಸ್ಸು ಬಯಸಬಹುದಾದ ಏಕೈಕ ಸುಖವೆಂದರೆ ಅದು ಸ್ನಾನ. ಕೊಳಕಾದ ದೇಹವನ್ನು ತೊಳೆದು, ಸೋಪಿನ ಜಾಹೀರಾತಿನಲ್ಲಿ ತೋರಿಸುವಂತೆ ತಾಜಾ ಅನುಭವವನ್ನು ಹಿತವಾದ ಸ್ನಾನ ಮಾತ್ರ ತಂದುಕೊಡಬಲ್ಲದು. "ಸ್ನಾನೇನ ಶುದ್ಧಿಃ ನ ತು ಚಂದನೇನ" ಎಂದು ಸುಭಾಷಿತವೊಂದು ನುಡಿಯುವಂತೆ ಸ್ನಾನ ಮಾಡದೆ ಏನೆಲ್ಲಾ ಸುಗಂಧದ್ರವ್ಯಗಳನ್ನು ಸುರಿದುಕೊಂಡರೂ ಮನಸ್ಸಿನಲ್ಲಿ ನಿರ್ಮಲ ಭಾವನೆ ಮೂಡದು.

ಜನನದಿಂದ ಮರಣದವರೆಗೆ ಬದುಕಿನ ಭಾಗವಾಗಿರುವ ಸ್ನಾನ ಎಲ್ಲರಿಗೂ ಚಿರಪರಿಚಿತ ಕ್ರಿಯೆ. ಸ್ನಾನ ಎಂಬ ಶುದ್ಧ ಸಂಸ್ಕೃತ ಪದಕ್ಕೆ ಜಳಕ, ಮೀಯುವುದು ಎಂಬ ಸುಂದರವಾದ ಕನ್ನಡ ಪದಗಳಿವೆ. ಅನೇಕ ಮನೆಗಳಲ್ಲಿ ಸ್ನಾನಕ್ಕೆ "ಮೈ ತೊಳೆದುಕೊಳ್ಳುವುದು" ಎನ್ನುವ ಪದವೇ ಬಳಕೆಯಲ್ಲಿತ್ತು. ಅದೇಕೋ ಏನೋ ಈಚೆಗೆ ಆ ಪದ ಅಷ್ಟಾಗಿ ಕೇಳಸಿಗದೆ ಆ ಸ್ಥಾನವನ್ನು ಸ್ನಾನವೇ ಆಕ್ರಮಿಸಿಕೊಂಡಿದೆ.

"ತನ್ನಾಶ್ರಯದ ರತಿಸುಖವನು ತಾನುಂಬ ಊಟವನು ಬೇರೊಬ್ಬರ ಕೈಯಲ್ಲಿ ಮಾಡಿಸಲುಬಹುದೇ?" - ಎಂದು ವಚನಕಾರರೆಂದಂತೆ ಸ್ನಾನ ಕೂಡ ಪೂರ್ತಿ ವೈಯುಕ್ತಿಕ. ನಮಗೆ ನಾವೇ ಮಾಡಿಕೊಳ್ಳಬಹುದಾದ ಉಪಕಾರ. ಕೈಯಲ್ಲೊಂದು ಟವಲ್ಲು ಹಿಡಿದು, ಬಚ್ಚಲು ಮನೆ ಹೊಕ್ಕು ಬಾಗಿಲು ಹಾಕಿಕೊಂಡರೆ ಮುಗಿಯಿತು. ಅದು ವರ್ತಮಾನ, ಭೂತ, ಭವಿಷ್ಯಗಳ ನಡುವಿನ ಅಂತರ ಅಳಿಸಿಹಾಕುವ ಬೇರೊಂದು ಲೋಕ. ಶವರಿನಿಂದ ಹದವಾದ ಬಿಸಿ ನೀರು ತುಂತುರು ಹನಿಗಳಾಗಿ ಮೈಮೇಲೆ ಬೀಳತೊಡಗಿರೆಂದರೆ ಅದು ಮನಸು ಪೊರೆ ಕಳಚಿಕೊಂಡು ಹಗುರಾಗುವ ಹೊತ್ತು. ಆ ಕ್ಷಣದಲ್ಲಿ ಒಲೆಯ ಮೇಲೆ ಅರ್ಧಂಬರ್ಧ ಬೆಂದಿರುವ ಅಡುಗೆ ನೆನಪಿಗೆ ಬಾರದು. ಕಿರುಚಿಕೊಳ್ಳುವ ದೂರವಾಣಿಗಳಿಗೆ ಉತ್ತರಿಸಬೇಕೆನ್ನುವ ಜರೂರು ಕಾಡದು. ಆಫೀಸಿಗೆ ಹೊರಟುನಿಂತಿರುವ ಗಂಡನ ಗಡಿಬಿಡಿ, ಹಸಿದ ಮಕ್ಕಳ ಅಳಲು, ಅನುದಿನದ ಬದುಕಿನ ಜಂಜಡಗಳೆಲ್ಲ ಕ್ಷಣಮಟ್ಟಿಗೆ ಮರೆತುಹೋಗುವ ಭ್ರಾಮಕ ಜಗತ್ತು. ಮನೆಗೊಂದೇ ಬಚ್ಚಲಿದ್ದ ಕಾಲದಲ್ಲಿ ಹೊರಗಿನಿಂದ ಯಾರಾದರೂ ಧಡಧಡ ಬಾಗಿಲು ಬಡಿಯುವ ತನಕ ನಿಲ್ಲದ ನೆನಪುಗಳ ಮೆರವಣಿಗೆ.

ತಾಮ್ರದ ಹಂಡೆಯಲ್ಲಿ ಕುದಿಯುತ್ತಿರುವ ನೀರು. ಇನ್ನೊಂದು ಬದಿ ತುಂಬಿದ ತಣ್ಣೀರಿನ ತೊಟ್ಟಿ. ಎರಡೂ ನೀರನ್ನು ಬೆರೆಸಿ ಹದ ಮಾಡಿಕೊಳ್ಳಲೊಂದು ದೊಡ್ದ ಕಬ್ಬಿಣದ ಬಕೀಟು. ಬಕೀಟಿನಿಂದ ನೀರೆತ್ತಿಕೊಳ್ಳಲು "ಬೋಸಿ" ಎಂದು ಕರೆಯಲ್ಪಡುತ್ತಿದ್ದ ತಂಬಿಗೆ. ಅಲ್ಲೇ ಇರುವ ಪುಟ್ಟ ಗೂಡಿನಲ್ಲಿ ಹಲ್ಲು ಪುಡಿ, ಸೀಗೆ ಪುಡಿ, ಅರಿಶಿನ ಪುಡಿ ತುಂಬಿದ ಬಟ್ಟಲುಗಳು. ಕರಿ ಹಿಡಿದ ಗೋಡೆಯಲ್ಲಿ ಬಟ್ಟೆ ತೂಗುಹಾಕುವ ತಂತಿ. ಇದು "ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ..." ಮಂತ್ರದ ಸೊಲ್ಲು ನಿತ್ಯ ಮೊಳಗುತ್ತಿದ್ದ ಅಂದಿನ ಬಚ್ಚಲು ಮನೆಗಳ ಚಿತ್ರ.

ಧಗಧಗಿಸುತ್ತಾ ಉರಿಯುವ ಕಟ್ಟಿಗೆ ಒಲೆಯಿಂದ ಹೊಗೆಯೊಂದಿಗೆ ಹೊರಸೂಸುತ್ತಿದ್ದ ವಿಶಿಷ್ಟ ಪರಿಮಳ ಈಗೆಲ್ಲಿ ಸಿಕ್ಕೀತು? ಬಾಯ್ಲರ್ ಪ್ರವೇಶದೊಂದಿಗೆ ಬಹಳಷ್ಟು ಮನೆಗಳಲ್ಲಿದ್ದ ತಾಮ್ರದ ಹಂಡೆಗಳು ನಿಷ್ಪ್ರಯೋಜಕವಾಗಿ ಮೂಲೆ ಸೇರಿದ್ದು ಹಳೆಯ ಕಥೆ. ಈಚೆಗೆ ಪಿಕ್ನಿಕ್‌ಗೆಂದು ಯಾವುದೋ ಪಾರ್ಕಿಗೆ ಹೋಗಿದ್ದಾಗ ತಾಯಿಯೊಬ್ಬರು ತಮ್ಮ ಮಗುವಿಗೆ ಮುಸುಕಿನ ಜೋಳ ಸುಡುತ್ತಿದ್ದ ಗ್ರಿಲ್ ತೋರಿಸಿ "ಒಲೆ ಅಂದರೆ ಇದೇ ನೋಡು ಮರಿ" ಎಂದು ತೋರಿಸುತ್ತಿದ್ದುದ್ದನ್ನೂ ನೋಡಿ, ನನ್ನ ಮನಸ್ಸಿನಲ್ಲಿಯೂ ಒಲೆ ಎಂದರೆ ಹೇಗಿರುತ್ತಿತ್ತು? ಎಂಬ ಪ್ರಶ್ನೆ ಮೂಡಿ, ನೆನಪಿನಾಳದಿಂದ ಸೌದೆ ಒಲೆಯ ಚಿತ್ರವನ್ನು ಕಣ್ಮುಂದೆ ತಂದುಕೊಂಡಿದ್ದೆ. ನಿಗಿನಿಗಿ ಕೆಂಡವನ್ನೇ ಕಂಡಿರದ ಮಕ್ಕಳಿಗೆ "ಕೆಂಡಗಣ್ಣನ" ಕಲ್ಪನೆ ದಕ್ಕೀತಾದರೂ ಹೇಗೆ?

"ಹೆಂಗಸು ಉಂಡಿದ್ದು ತಿಳಿಯಬಾರದು, ಗಂಡಸು ಮಿಂದಿದ್ದು ತಿಳಿಯಬಾರದು" ಎಂಬ ಗಾದೆ ಮಾತಿನಂತೆ ಗಂಡಸರಿಗೆ ಹೆಚ್ಚು ಹೊತ್ತು ಮೀಯುವ ಅವಕಾಶವಿರಲಿಲ್ಲ. ಅದು ಗಂಡಸರಿಗಿಲ್ಲದ ಹೆಂಗಸರ ಜನ್ಮಸಿದ್ಧ ಹಕ್ಕು! ನಮ್ಮ ಮನೆಯಲ್ಲಂತೂ ತಂದೆ, ದೊಡ್ಡಪ್ಪ, ಚಿಕ್ಕಪ್ಪಂದಿರು ಬಚ್ಚಲು ಮನೆಯ ಬಾಗಿಲು ಹಾಕಿಕೊಂಡು ಘಂಟೆಗಟ್ಟಲೆ ಸ್ನಾನ ಮಾಡಿದ್ದು ನೆನಪಿಗೇ ಬರುವುದಿಲ್ಲ. ಸ್ನಾನ ಅವರೆಲ್ಲರಿಗೆ ದಿನದ ಅನಿವಾರ್ಯ ಕರ್ಮ, ನಿತ್ಯಾನುಷ್ಠಾನದ ಒಂದು ಭಾಗ ಮಾತ್ರ ಆಗಿತ್ತೆನಿಸುತ್ತದೆ. ಯಾರಾದರೂ ಈ ನಿಯಮ ಮೀರಿದ್ದೇ ಆದರೆ "ಅದೇನೋ ಹೆಂಗಸರಂತೆ ಅಷ್ಟು ಹೊತ್ತು ಸ್ನಾನ ಮಾಡ್ತೀಯಾ?" ಎಂಬ ನವಿರಾದ ಗೇಲಿ ಮಾತು ಕೇಳಬೇಕಿತ್ತು.

ಹಿಂದಿನ ಕಾಲದ ಸೌದೆ ಒಲೆ, ಹಂಡೆ ನೀರಿನ ಸ್ನಾನದ ಮಜಾ ಏನೇ ಇರಲಿ, ಆದರೆ ಅಂದಿನ ಬಚ್ಚಲು ಮನೆಗಳ ಬಾಗಿಲುಗಳು ಮಾತ್ರ ಸರಿ ಇರುತ್ತಿರಲಿಲ್ಲ. ಬಾಗಿಲು ಸರಿ ಇದ್ದರೂ ಚಿಲುಕಗಳದ್ದು ಸದಾ ಏನಾದರೊಂದು ತಕರಾರು. ಬಾಗಿಲಿಲ್ಲದ, ಚಿಲುಕವಿಲ್ಲದ ಬಚ್ಚಲು ಮನೆಗಳಲ್ಲಿ ಮಾಡುವ ಸ್ನಾನ ಮನಸ್ಸಿನ ಅಭದ್ರ ಭಾವನೆಯನ್ನು ಬಿಂಬಿಸಲು ಒಂದು ಉತ್ತಮ ಉದಾಹರಣೆ ಆಗಬಹುದು. ನಮ್ಮಂತಹ ಹುಲುಮಾನವರ ಪಾಡಿರಲಿ ; ಕೈಲಾಸವಾಸ ಗೌರೀಶನ ಮಡದಿ ಪಾರ್ವತಿಯ ಸ್ನಾನ ಗೃಹದ್ದೂ ಇದೇ ಕಥೆ. ಒಂದು ವೇಳೆ ಪಾರ್ವತಿಯ ಬಚ್ಚಲು ಮನೆಗೆ ಒಂದು ಗಟ್ಟಿಮುಟ್ಟಾದ ಚಿಲುಕವಿದ್ದಿದ್ದರೆ, ಅವಳು ಸ್ನಾನಕ್ಕೆ ಹೋದಾಗ ಯಾರೂ ಒಳಬರದಂತೆ ಕಾವಲು ಕಾಯಲು ತನ್ನ ಮೈಬೆವರಿನಿಂದ ಸೃಷ್ಟಿಸಿದ ಬಾಲಕನನ್ನು ನಿಲ್ಲಿಸಿ, ಅವನು ಶಿವನಿಂದ ಹತನಾಗಿ, ಮುಂದೆ ಗಜವದನನ ಅವತಾರಕ್ಕೆ ಸುಂದರ ವೇದಿಕೆ ನಿರ್ಮಾಣವಾಗುತ್ತಿತ್ತಾದರೂ ಹೇಗೆ?

ಈಗಿನ ಸುಸಜ್ಜಿತ ಸ್ನಾನದ ಮನೆಗಳ ವೈಭೋಗ ರಾಜ-ಮಹಾರಾಜರ ಜಲಕ್ರೀಡೆಯ ವೈಭವವನ್ನು ನೆನಪಿಗೆ ತರುವಂತಹದು. ನೂರೆಂಟು ಬಣ್ಣ, ಸುಗಂಧದ ಸೋಪು, ಶಾಂಪು, ಬಾಡಿವಾಷ್, ವಿವಿಧ ವಿನ್ಯಾಸದ ಸ್ನಾನದ ತೊಟ್ಟಿಗಳು ಬೆರಗುಂಟುಮಾಡುತ್ತವೆ. ಜನ ತಮ್ಮ ದಿನದ ಬಹುಪಾಲು ಸಮಯವನ್ನು ಸ್ನಾನ ಗೃಹದಲ್ಲಿಯೇ ಕಳೆಯುತ್ತಾರಾ ಎಂಬ ಅನುಮಾನವೂ ಮೂಡುತ್ತದೆ. ಹಿಂದೆಲ್ಲಾ ಮನೆಗೊಂದರಂತೆ ಇದ್ದ ಬಾತ್‌ರೂಮುಗಳು ಈಗ ಕೋಣೆಗೊಂದೊಂದು. ಅವುಗಳಲ್ಲಿ ಸ್ನಾನ ಮಾಡಲು ಅಲ್ಲವಾದರೂ ಅವನ್ನು ಶುಚಿಗೊಳಿಸಲಂತೂ ಸಾಕಷ್ಟು ಸಮಯ ವಿನಿಯೋಗಿಸಲೇಬೇಕಾದ ಅನಿವಾರ್ಯ.

ಸ್ನಾನದ ಪರಿಕಲ್ಪನೆಯೇ ಇರದಿದ್ದರೆ ಯಾರಿಗೆ ಏನು ಹಾನಿಯಾಗಿರುತ್ತಿತ್ತೋ ಗೊತ್ತಿಲ್ಲ. ಆದರೆ ನಮ್ಮ ಸಿನಿಮಾ ಮಂದಿಗಂತೂ ಅಪಾರ ನಷ್ಟವಾಗಿರುತ್ತಿತ್ತು. ಹೇಗೆಂದಿರಾ? ಕೇಳಿ. ಶ್ರೀರಾಮಚಂದ್ರನಂತಹ ಪತ್ನೀವ್ರತ ನಾಯಕನನ್ನು ಸೋಪಿನ ತುಂಡಿನ ಮೇಲೆ ಕಾಲಿಡುವಂತೆ ಮಾಡಿ ಜಾರಿಸಿ, ಅವನೊಂದಿಗೆ ಅವನ ಶೀಲವನ್ನೂ ಮುಗ್ಗರಿಸುವಂತೆ ಮಾಡಲು ಸ್ನಾನದ ಮನೆಗಿಂತ ಪ್ರಶಸ್ತ ಜಾಗ ಇನ್ನೆಲ್ಲಿ ತಾನೇ ಸಿಗುತ್ತಿತ್ತು? ಬಿದ್ದ ನೀರು, ಒದ್ದೆ ಮುದ್ದೆ ಮೈಗಳ ಪ್ರಣಯಕ್ಕೆ "ಬಿದ್ದೆ ಬಿದ್ದೆ ಬಾತ್‌ರೂಮಲ್ಲಿ ಲವ್ವಲ್ಲಿ ಬಿದ್ದೆ" ಹಾಡಿನ ಹಿನ್ನಲೆ ಬೇರೆ. ತೆಳುವಾದ ಬಿಳಿಯುಡುಗೆಯುಟ್ಟ ನಾಯಕಿ ಹಾಡಿಕೊಂಡು ಸ್ನಾನ ಮಾಡುವ ದೃಶ್ಯ ತೋರಿಸಿ ಕಾಸು ಮಾಡಿಕೊಳ್ಳದ ನಿರ್ಮಾಪಕನೇ ಪರಮ ಪಾಪಿ.

ಸಿನಿಮಾ, ಸ್ನಾನ ಎಂದೊಡನೆ ನೆನಪಾಯಿತು. ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಕಥಾ ಸಂಗಮ" ಚಿತ್ರದಲ್ಲಿ ಕುರುಡಿ ಮುನಿತಾಯಿ ಸ್ನಾನ ಮಾಡುವ ದೃಶ್ಯವೊಂದಿದೆ. ಒಂದಿಷ್ಟೂ ಅಶ್ಲೀಲಕ್ಕೆ ಎಡೆಯಿಲ್ಲದಂತೆ ಸನ್ನಿವೇಶವನ್ನು ಮನಮುಟ್ಟುವಂತೆ ಪುಟ್ಟಣ್ಣ ಚಿತ್ರಿಸಿದ್ದಾರೆ. ಇದೇ ದೃಶ್ಯ ಇಂದಿನ ಚಿತ್ರ ಬ್ರಹ್ಮರ ಕೈಗೆ ಸಿಕ್ಕಿದ್ದಿದ್ದರೆ ಕಥೆಗೆ ಪೂರಕ ಎನ್ನುವ ದೃಶ್ಯದಲ್ಲಿ ಮುನಿತಾಯಿಯ ಸ್ಥಿತಿಯನ್ನು ಅದೆಷ್ಟು ಅಧ್ವಾನಗೊಳಿಸಿರುತ್ತಿದ್ದರೋ ಆ ದೇವರೇ ಬಲ್ಲ!

ನಮ್ಮ ಪಾಲಿಗೆ ಸ್ನಾನವೆಂದರೆ ನಿತ್ಯ ಮೈಮೇಲೆ ನೀರೆರೆದುಕೊಳ್ಳುವ ಯಾಂತ್ರಿಕ ಕ್ರಿಯೆಯಾಗಿದ್ದರೂ, ಸ್ನಾನಕ್ಕೆ ತನ್ನದೇ ಆದ ಮಹತ್ವವಿದೆ. ದೇಹವೇ ದೇಗುಲ ಎಂಬ ಪರಿಕಲ್ಪನೆಯನ್ನು ಹೊಂದಿರುವ ಹಿಂದೂ ಸಂಸ್ಕೃತಿಯಲ್ಲಂತೂ ಸಕಲ ಧಾರ್ಮಿಕ ಆಚರಣೆಗಳೂ ಸ್ನಾನದೊಂದಿಗೆ ಥಳುಕು ಹಾಕಿಕೊಂಡಿವೆ. ಮದುವೆ, ಉಪನಯನ, ಹಬ್ಬಗಳು ಇತ್ಯಾದಿಯಾಗಿ ಯಾವುದೇ ಸಂಭ್ರಮವಿರಲಿ ಅದು ಮಂಗಳಸ್ನಾನದೊಂದಿಗೇನೇ ಮೊದಲಾಗಬೇಕು. ಮೊದಲು ಶರೀರಕ್ಕೆ ಶುದ್ಧ ಸ್ನಾನ, ನಂತರವೇ ಧ್ಯಾನ, ಮೌನ. ಪುಣ್ಯನದಿಗಳಲ್ಲಿ ಮುಳುಗಿ ಸ್ನಾನ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬುದು ಭಾರತೀಯರ ನಂಬಿಕೆ. ಹಾಗಾಗಿಯೇ ಕೆಲವು ವಿಶೇಷ ಸಂದರ್ಭಗಳಲ್ಲಿ ನದೀ ತೀರಗಳು ಜನರಿಂದ ತುಂಬಿ ಗಿಜಿಗುಡುತ್ತಿರುತ್ತವೆ. ಭಕ್ತಾದಿಗಳ ಪಾಪ ತೊಳೆದು ಹೈರಾಣವಾಗಿ ಹೋಗಿರುವ ನಮ್ಮ ಪುಣ್ಯನದಿಗಳ ಪಾಡು ಹೇಳತೀರದು.

ಪವಿತ್ರ ತೀರ್ಥಗಳಲ್ಲಿ ಸ್ನಾನ ಮಾಡುವುದರಿಂದಲೇ ಪುಣ್ಯ ಪ್ರಾಪ್ತಿಯಾಯಿತೆಂದು ಭಾವಿಸುವರ ಕುರಿತು ದಾಸ, ವಚನ ಸಾಹಿತ್ಯಗಳಲ್ಲಿ ಅನೇಕ ಕಡೆ ವಿಡಂಬನೆ ಮಾಡಲಾಗಿದೆ. "ತನು ಶುದ್ಧಿಯಿಲ್ಲದವಗೆ ತೀರ್ಥದ ಫಲವೇನು?", "ಮಿಂದಲ್ಲಿ ಫಲವೇನು ಮೀನು ಮೊಸಳೆಯಂತೆ, ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ", "ನೀರ ಕಂಡಲ್ಲಿ ಮುಳುಗುವರಯ್ಯಾ, ಮರನ ಕಂಡಲ್ಲಿ ಸುತ್ತುವರಯ್ಯಾ, ಬತ್ತುವ ಜಲವ, ಒಣಗುವ ಮರನ ಮೆಚ್ಚಿದವರು ನಿಮ್ಮನೆತ್ತ ಬಲ್ಲರು?" "ಉದಯ ಕಾಲದೊಳೆದ್ದು ಗಡಗಡ ನಡುಗುತ ನದಿಯಲಿ ಮಿಂದೆವೆಂದು ಹೇಳುತಲಿ" ಮುಂತಾದ ಉಲ್ಲೇಖಗಳು ಹೊರಗೆ ಮಿಂದು ಒಳಗೆ ಮೀಯದಿರುವ ಆಷಾಢಭೂತಿಗಳ ಮುಖಕ್ಕೆ ಕನ್ನಡಿ ಹಿಡಿಯುವಂತಿವೆ.

ಸ್ನಾನವೆಂದರೆ ಶುದ್ಧಿ. ಬಹಿರಂಗದೊಡನೆ ಅಂತರಂಗದ ಶುದ್ಧಿಯೂ ನಡೆದರೆ ಅದು ಸ್ನಾನದ ಸಾರ್ಥಕ್ಯ. ಕೊಳೆ ತುಂಬಿದ ಮೈಯನ್ನು ಸ್ವಚ್ಚಗೊಳಿಸುವಂತೆ ಕಿಲುಬು ಹಿಡಿಯುವ ಮನಸ್ಸನ್ನೂ ಸ್ವಚ್ಚಗೊಳಿಸುವಂತಿದ್ದರೆ ಚೆನ್ನಾಗಿರುತ್ತಿತ್ತು ಅಲ್ಲವೇ? ಹಾಗೆ ಮಾಡುವುದು ಸಾಧ್ಯವಿಲ್ಲವಾದ್ದರಿಂದ, ಪ್ರತಿ ದಿನವೂ ತಪ್ಪದೆ ಶರೀರಕ್ಕೆ ಸ್ನಾನ ಮಾಡಿಸುವ ನಾವು ಆಗೊಮ್ಮೆ ಈಗೊಮ್ಮೆಯಾದರೂ ನಮ್ಮ ಮನಸ್ಸೆಷ್ಟು ಪರಿಶುದ್ಧವಾಗಿದೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ.

ಸರಿ, ನೀವು ಈ ಗಂಭೀರ ವಿಷಯದ ಬಗ್ಗೆ ಯೋಚಿಸುತ್ತಿರಿ. ಅಷ್ಟರಲ್ಲಿ ನಾನು ಸ್ನಾನ ಮುಗಿಸಿಕೊಂಡು ಬಂದುಬಿಡುತ್ತೇನೆ. :)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more