ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲಿ ಲಾಲಿ ಲಾಲಿ ಜೋ! ನನ್ನ ಬಾಳಿನ ಬಂಗಾರ ಜೋ!!

By Staff
|
Google Oneindia Kannada News

ಲಾಲಿ ಲಾಲಿ ಲಾಲಿ ಜೋ! ನನ್ನ ಬಾಳಿನ ಬಂಗಾರ ಜೋ!!
ಜೋಗುಳದ ಹಾಡಿಗೆ ಮಗು ನಿದ್ರೆಗೆ ಶರಣಾಗುತ್ತದೆ. ಇದೇನೂ ಪವಾಡವಲ್ಲ, ಲಾಲಿ ಹಾಡಿನ ಪ್ರಭಾವ! ಬರೀ ಹಾಡು ಮಾತ್ರವಲ್ಲದೆ ಲಯ ಬದ್ಧವಾದ ಯಾವುದೇ ಸದ್ದಿಗೆ ಮೆದುಳು ತನ್ನ ಒತ್ತಡಗಳನ್ನು ನೀಗಿಕೊಂಡು ನಿದ್ದೆಗೆ ಶರಣಾಗುವುದು ವೈಜ್ಞಾನಿಕವಾಗಿಯೂ ದೃಢಪಟ್ಟಿರುವ ಸಂಗತಿ. ಕಾಲಗರ್ಭದಲ್ಲಿ ಲೀನವಾಗುತ್ತಿರುವ ಹಳೆಯ ಲಾಲಿ ಹಾಡುಗಳ ಮೋಹಕತೆಯನ್ನು ಒಮ್ಮೆ ನೆನಪಿಸಿಕೊಳ್ಳೋಣವೆ?

K. Triveni Srinivasarao, Illinois, US ಕೆ. ತ್ರಿವೇಣಿ ಶ್ರೀನಿವಾಸರಾವ್‌, ಇಲಿನಾಯ್‌, ಅಮೆರಿಕಾ
ತವರು: ಕಡೂರು - ಚಿಕ್ಕಮಗಳೂರು ಜಿಲ್ಲೆ

[email protected]

‘‘ಹಸುಗೂಸು ಮಲಗಿಹುದು
ಹುಸಿನಗೆಯು ತೊಲಗಿಹುದು
ಕನಸಿನಾಚೆಗೆ ಇರುವ ನಿದ್ದೆಯಲ್ಲಿ’’

ಬೇಂದ್ರೆಯವರ ಕವಿತೆಯೊಂದರ ತುಣುಕಿದು. ಸುತ್ತಲಿನ ಜಗತ್ತಿನ ಆಗುಹೋಗುಗಳ ಅರಿವೇ ಇಲ್ಲದಂತೆ ಮಲಗಿರುವ ಮಗು ಮುಗ್ಧತೆಯ ಸಾಕಾರ ರೂಪ. ಆದರೆ ಹಾರುವ ಚಿಟ್ಟೆಯಂತೆಯೇ ಚಡಪಡಿಸುವ, ಚಟುವಟಿಕೆಯ ಚಿಗುರಿನಂತಹ ಮಗುವನ್ನು ನಿದ್ರೆಗೆ ತೊಡಗಿಸುವುದಿದೆಯಲ್ಲ? ಅದು ಸುಲಭದ ಕೆಲಸವಲ್ಲ. ಆ ಮಗುವಿಗೆ ನಿದ್ದೆ ಬಂದು ಕಣ್ಣೆಳೆದುಕೊಂಡು ಹೋಗುತ್ತಿದೆ. ಆದರೆ ಇನ್ನೂ ಆಡುವ ಬಯಕೆ. ಈಗಲೇ ನಿದ್ರಾಲೋಕಕ್ಕೆ ಹೋಗಿ ತಣ್ಣಗೆ ಮಲಗುವ ಮನಸ್ಸಿಲ್ಲ. ನಿದ್ದೆಯಲ್ಲಿ ವ್ಯರ್ಥವಾಗಿ ಹೋಗುವ ತನ್ನ ಆಟದ ಕ್ಷಣಗಳ ಚಿಂತೆ ಅದಕ್ಕಿದ್ದರೂ ಇರಬಹುದು. ಅಲ್ಲದೆ ನಿದ್ದೆ ಬಂದೊಡನೆ ಹೋಗಿ ಮಲಗಬೇಕೆಂಬ ಅರಿವೂ ಮಗುವಿಗೆ ಇರುವುದಿಲ್ಲ.

ಇಂತಹ ಹೊತ್ತಿನಲ್ಲಿ ನಿದ್ದೆ, ಆಯಾಸ ಎರಡೂ ಸೇರಿ ಮಗುವನ್ನು ಹಿಂಸೆಗೆ ಗುರಿಮಾಡುತ್ತವೆ. ಬಾಲಕಾರ್ಮಿಕನಂತೆ ಸತತವಾಗಿ ಶ್ರಮಿಸಿದ ಪುಟ್ಟ ಕೈಕಾಲುಗಳು ಸೋತುಹೋಗಿವೆ. ಮಗು ರಚ್ಚೆ ಹಿಡಿದು ಅಳತೊಡಗುತ್ತದೆ. ಆಡಿ ದಣಿದ ಕಂದನಿಗೆ ಈಗ ವಿಶ್ರಾಂತಿ ಬೇಕಾಗಿದೆ. ಆಗ ಆ ಮಗುವನ್ನು ಬಲವಂತವಾಗಿ ಹಿಡಿದು ತೊಡೆಯ ಮೇಲೆ ಹಾಕಿಕೊಂಡು ನಿಮಗೆ ತಿಳಿದ ಯಾವುದೋ ಒಂದು ಹಾಡನ್ನು ಹಾಡಿ. ಆ ಹಾಡಿನ ಮುಂದಿನ ಚರಣಗಳು ತಿಳಿಯದಿದ್ದರೂ ಸರಿಯೇ. ಪಲ್ಲವಿಯನ್ನೇ ಮತ್ತೆ ಮತ್ತೆ ಹಾಡಿದರೂ ಪರವಾಗಿಲ್ಲ. ಆದರೆ ಆ ಹಾಡಿಗೆ ಒಂದು ಲಯವಿರಬೇಕು. ಆಮೇಲೆ ನೋಡಿದರೆ - ಕೆಲವೇ ನಿಮಿಷಗಳ ಹಿಂದೆ ತನ್ನ ತುಂಟತನದಿಂದ ಮನೆಯನ್ನೆಲ್ಲ ಅಲ್ಲೋಲಕಲ್ಲೋಲ ಮಾಡುತ್ತಿದ್ದ ‘ಕುಟ್ಟಿಚ್ಚಾತ’ ಇವನೇನಾ ಎಂದು ನಿಮಗೇ ಅನುಮಾನ ಬರುವಂತೆ ಮಗುವನ್ನು ಗಾಢ ನಿದ್ರೆ ಆವರಿಸುತ್ತದೆ.

ಇದೇನೂ ಪವಾಡವಲ್ಲ, ಲಾಲಿ ಹಾಡಿನ ಪ್ರಭಾವ! ಮಕ್ಕಳನ್ನು ಹೆತ್ತವರಿಗೆ ಮಾತ್ರವಲ್ಲದೆ, ಮಕ್ಕಳ ಪಾಲನೆ ಪೋಷಣೆ ಮಾಡಿ ಗೊತ್ತಿರುವ ಪ್ರತಿಯೊಬ್ಬರ ಅನುಭವಕ್ಕೆ ಬಂದೇ ಇರುವ ಸಣ್ಣ ವಿಷಯವಿದು. ಬರೀ ಹಾಡು ಮಾತ್ರವಲ್ಲದೆ ಲಯ ಬದ್ಧವಾದ ಯಾವುದೇ ಸದ್ದಿಗೆ ಮೆದುಳು ತನ್ನ ಒತ್ತಡಗಳನ್ನು ನೀಗಿಕೊಂಡು ನಿದ್ದೆಗೆ ಶರಣಾಗುವುದು ವೈಜ್ಞಾನಿಕವಾಗಿಯೂ ದೃಢಪಟ್ಟಿರುವ ಸಂಗತಿ. ಬಸ್ಸಿನಲ್ಲಿ, ರೈಲುಗಳಲ್ಲಿ ಎಷ್ಟೇ ಗದ್ದಲವಿದ್ದರೂ, ಅವುಗಳ ಲಯಬದ್ಧ ಶಬ್ದವನ್ನೇ ಅಭ್ಯಾಸ ಮಾಡಿಕೊಂಡಿರುವ ಅನೇಕ ಜನ ನಿಶ್ಚಿಂತೆಯಿಂದ ನಿದ್ದೆಯಲ್ಲಿ ಮುಳುಗಿರುವುದನ್ನು ನೋಡಿದಾಗ ಈ ವಿಷಯ ನಿಜವೆನ್ನಿಸುತ್ತದೆ.

ನನ್ನ ಮಕ್ಕಳು ಕೆ. ಎಸ್‌. ನರಸಿಂಹಸ್ವಾಮಿಯವರ ‘‘ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು’’, ಲಕ್ಷ್ಮೀನಾರಾಯಣಭಟ್ಟರ ‘‘ಮಲಗು ಮಲಗೆನ್ನ ಮರಿಯೇ’’ ಈ ಹಾಡುಗಳನ್ನು ಕೇಳುತ್ತಲೇ ಬೆಳೆದು ದೊಡ್ದವರಾದವರು! ನನ್ನವರಂತೂ ‘‘ಹಾಲು ಕುಡಿಯೇ ಕಂದಮ್ಮಾ..ನೀರು ಕುಡಿಯೇ ಕಂದಮ್ಮಾ..’’ ಈ ಎರಡು ಸಾಲುಗಳನ್ನೇ ವಿವಿಧ ರಾಗಗಳಲ್ಲಿ ಹಾಡಿ ಅಲ್ಪ ಸಮಯದಲ್ಲಿಯೇ ಮಕ್ಕಳನ್ನು ನಿದ್ರಾದೇವಿಯ ಮಡಿಲಿಗೆ ಒಯ್ದುಬಿಡುತ್ತಿದ್ದರು. ಮಕ್ಕಳ ಕೋಮಲ ಮೈಗೆ ಕಿಂಚಿತ್ತೂ ನೋವಾಗದಂತೆ ಹಿತವಾಗಿ ಅವುಚಿ ಹಿಡಿದುಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದಂತಿತ್ತು. ಅನೇಕ ಸಲ ಹೊರಗೆ ಸುತ್ತಾಡಲೆಂದು ಸಿಂಗರಿಸಿದ್ದ ಮಕ್ಕಳು ಅವರ ಕೈಗೆ ಹೋದೋಡನೆ ನಿದ್ದೆಹೋಗಿ ತೊಂದರೆಯಾಗಿದ್ದೂ ಇದೆ.

ಕವಿ ಎಸ್‌.ವಿ ಪರಮೇಶ್ವರ ಭಟ್ಟರ ‘‘ತಿಳಿಮುಗಿಲ ತೊಟ್ಟಿಲಲಿ’’ ಕವಿತೆಯಲ್ಲಿ ತಿಳಿಮುಗಿಲಿನ ತೊಟ್ಟಿಲಲಿ ಚಂದಿರ ಮಲಗಿದ್ದಾನೆ. ಅವನಿಗೆ ಗಾಳಿಯದೇ ಜೋಗುಳ! ಇಡೀ ಲೋಕವೇ ಪ್ರಕೃತಿಯ ಜೋಗುಳದಲ್ಲಿ ಮೈಮರೆತು ಮಲಗಿರುವ ನೀರವ ರಾತ್ರಿಯೊಂದರ ಸುಂದರ ವರ್ಣನೆ ಈ ಕವಿತೆಯಲ್ಲಿದೆ.

ಎಪ್ಪತ್ತೇಳರಲ್ಲಿ ಬಂದಿದ್ದ ಚಿತ್ರ ‘ಚಿನ್ನ ನಿನ್ನ ಮುದ್ದಾಡುವೆ’ ಚಿತ್ರದ ‘‘ಜೋ ಜೋ ಲಾಲಿ ನಾ ಹಾಡುವೆ’’ ಹಾಡು ಆಗ ಬಹಳ ಜನಪ್ರಿಯವಾಗಿತ್ತಲ್ಲದೆ, ಇಂದಿಗೂ ಆ ಹಾಡು ಜನರ ಮನಸ್ಸಿನಿಂದ ಮರೆಯಾಗಿಲ್ಲ. ಭಕ್ತಪ್ರಹ್ಲಾದ ಚಿತ್ರದ ’’ಲಾಲಿ ಲಾಲಿ ಸುಕುಮಾರ’’, ಪಿ.ಬಿ ಶ್ರೀನಿವಾಸ್‌ ಹಾಡಿರುವ ‘ತೂಗುವೆ ರಂಗನ ತೂಗುವೆ ಕೃಷ್ಣನ’ ತಕ್ಷಣಕ್ಕೆ ನೆನಪಾಗುವ ಮತ್ತಿತರ ಹಾಡುಗಳು. ಇತ್ತೀಚಿನ ಚಿತ್ರಗಳಂತೂ ಈ ಲಾಲಿಹಾಡನ್ನೇ ಒಂದು ಬಲವಾದ ಸೆಂಟಿಮೆಂಟ್‌ ಅಸ್ತ್ರವಾಗಿ ಮಾಡಿಕೊಂಡಿದ್ದುಂಟು.

‘ರಾಮಾಚಾರಿ’ ಚಿತ್ರದ ‘‘ರಾಮಾಚಾರಿ ಹಾಡುವ ಲಾಲಿ ಹಾಡ ಕೇಳವ್ವಾ’’ ಚಿತ್ರದ ಮೂಲಕ ಪ್ರಾರಂಭವಾದ ತಾಯಿ ಮತ್ತು ಲಾಲಿ ಹಾಡಿನ ಭಾವನಾತ್ಮಕ ಪ್ರವಾಹ ಇವತ್ತಿಗೂ ನಿಂತಿಲ್ಲ. ಸೂಪರ್‌ ಹಿಟ್‌ ಚಿತ್ರ ಜೋಗಿಯನ್ನು ಕಾಪಾಡಿದ್ದೂ ಇದೇ ‘ತಾಯಿ’ಯ ಆಶೀರ್ವಾದವೇ! ಲಾಲಿಹಾಡು ಮತ್ತು ಸಿನಿಮಾರಂಗಕ್ಕಿರುವ ನಂಟಿಗೆ ಸಾಕ್ಷಿಯಾಗಿ ಈಗಾಗಲೇ ‘ಲಾಲಿ’ ‘ಲಾಲಿಹಾಡು’ ‘ಜೋಗುಳ’ ಮುಂತಾದ ಹೆಸರಿನ ಚಿತ್ರಗಳು ಬೆಳ್ಳಿತೆರೆಯನ್ನು ಅಲಂಕರಿಸಿವೆ.

ಆದರೆ ಎಂದಿನಿಂದಲೂ ಕನ್ನಡ ಚಿತ್ರಗಳಲ್ಲಿ ‘‘ಜೋ ಜೋ ಲಾಲಿ’’ ಎಂದೇ ಇಂಪಾಗಿ ಉಲಿಯುತ್ತಿದ್ದ ಈ ಲಾಲಿಹಾಡು, ಈಗ ಪರಭಾಷಿಗರ ಪ್ರಭಾವಕ್ಕೆ ಒಳಗಾಗಿರುವ ನಮ್ಮ ಸಿನಿಮಾಮಂದಿಯ ಕೈಯಲ್ಲಿ ಸಿಕ್ಕಿ ಅಲ್ಲಲ್ಲಿ ‘‘ಆರಾರೋ ಆರಿರಾರೋ’’ ಆಗಿರುವುದುಂಟು. ನಿಮಗೆ ನಂಬಿಕೆ ಬರಲಿಲ್ಲವೇ? ಹಾಗಾದರೆ ಸುದೀಪನ ‘ನಲ್ಲ’ ಚಿತ್ರದ ‘‘ಮಲಗೆ ಮಲಗೆ ಗುಬ್ಬಿ ಮರಿ’’ ಹಾಡು ಕೇಳಿ.

ತಾಯಿ ಅಪ್ಪುಗೆಯಂತೆ ಮನಸ್ಸಿಗೆ ಮುದ ನೀಡುವ ಲಾಲಿಹಾಡು ಮುಂದೆಯೂ ‘‘ಜೋ... ಜೋ... ಲಾಲಿ’’ ಎಂದೇ ಕೇಳಿಸುತ್ತಿರಲಿ. ಇಲ್ಲದಿದ್ದರೆ ಮಾತೃಭಾಷೆಯನ್ನು ಕಲಿಯದೆಯೇ ಬೆಳೆಯುವ ಕನ್ನಡದ ಕಂದಗಳು ಮುಂದೊಮ್ಮೆ ಜೋಗುಳವನ್ನೂ ಪರಭಾಷೆಯಲ್ಲಿಯೇ ಕೇಳಬೇಕಾದ ದುರ್ಗತಿ ಒದಗೀತು. ‘‘ಜೋಗುಳದ ಹರಕೆಯಿದು ಮರೆಯದಿರು ಕಂದಾ....’’ ಎಂದು ಕನ್ನಡಮ್ಮ ಕಣ್ಣೀರು ತುಂಬಿ ಹೇಳಿದ ಮಾತನ್ನು ಮರೆತ ಹಾಗೆಯೇ, ನಾವು ಕೊನೆಗೆ ಜೋಗುಳವನ್ನೂ ಮರೆಯುವುದು ಬೇಡ!

ಚಿತ್ರದ ಸಂದರ್ಭಕ್ಕೆ ತಕ್ಕಂತೆ ಹೊಸೆಯಲಾಗಿರುವ ಈ ಸಿನಿಮಾ ಲಾಲಿಹಾಡುಗಳಿಗೆ ಅದರದ್ದೇ ಆದ ಇತಿಮಿತಿಗಳಿರುತ್ತವೆ. ಹಾಗಾಗಿ ಅದನ್ನು ಅಲ್ಲಿಯೇ ಅಲ್ಲಿಗೆ ಬಿಟ್ಟು, ಈ ಮಣ್ಣಿನ ಸಾರವನ್ನು ಹೀರಿಕೊಂಡಿರುವ ಜನಪದ ಲೋಕಕ್ಕೆ ಬರೋಣ. ಲಾಲಿಹಾಡಿಗೆ ಜನಪದದ ಕೊಡುಗೆಯೂ ಸಾಕಷ್ಟಿದೆ. ಜನಪದ ಸೊಗಡು ತುಂಬಿರುವ ಲಾಲಿಹಾಡಿನ ಇಂಪು ಅಸದೃಶ. ಅಲ್ಲದೆ ಜನಪದ ಹಾಡುಗಳಿಗೆ ಚರಣಗಳ ಮಿತಿಯಿಲ್ಲ. ನಾಲ್ಕು ಸಾಲುಗಳಿರುವ ಜನಪದ ಗೀತೆಗಳನ್ನು ಎಲ್ಲಿಯವರೆಗೆ ಬೇಕಾದರೆ ಮುಂದುವರಿಸಬಹುದು.

ಜೋಗುಳ ಹಾಡಿದರೆ ಆಗಲೇ ಕೇಳ್ಯಾನು
ಹಾಲ ಹಂಬಲವ ಮರೆತಾನು
ಹಾಲ ಹಂಬಲವ ಮರೆತಾನು ಕಂದಂಗೆ
ಜೋಗುಳರಾಗ ಅತಿ ಮುದ್ದು

ಮೋಹನ್‌ ಕುಮಾರಿ ಮತ್ತು ಸೋಹನ್‌ ಕುಮಾರಿಯರು ಹಾಡಿರುವ ಈ ಸೊಗಸಾದ ಜಾನಪದಗೀತೆಯನ್ನು ಕೇಳಿದ ನೆನಪಿದೆಯೇ? ಪಿ.ಕಾಳಿಂಗರಾಯರ ಇನಿದನಿಯಲ್ಲಿರುವ ಜನಪದ ಗೀತೆಗಳು ಕಿವಿಗಳಿಗೊಂದು ಹಬ್ಬ! ‘‘ತೂಗಿರೊ ರನ್ನವ ತೂಗಿರೊ ಚಿನ್ನವ ತೂಗಿರೊ ಬೇಲೂರ ಚೆನ್ನಿಗನ’’ ಕಾಳಿಂಗರಾವ್‌ ಅವರು ಹಾಡಿರುವ ಇನ್ನೊಂದು ಸುಂದರವಾದ ಜನಪದ ಜೋಗುಳ.

ಜನಪದದಂತೆ ದಾಸ ಸಾಹಿತ್ಯ ಕೂಡ ಬಹಳಷ್ಟು ಹಾಡುಗಳನ್ನು ಜೋಗುಳವಾಗಿಸಿದೆ. ನಮ್ಮ ದೇವರುಗಳೆಲ್ಲ ಸಂಗೀತಪ್ರಿಯರು. ಅವರಿಗೆ ಮುಂಜಾನೆ ಸುಶ್ರಾವ್ಯವಾಗಿ ಸುಪ್ರಭಾತ ಹಾಡಬೇಕು. ರಾತ್ರಿ ಮಲಗುವಾಗ ಜೋಗುಳ ಸೇವೆಯಾಗಬೇಕು. ಅದರಲ್ಲೂ ಜಗದಾನಂದಕಾರಕನೆನಿಸಿದ ಶ್ರೀಕೃಷ್ಣ ಮಗುವಿನ ರೂಪದಲ್ಲೇ ಅವತಾರ ತಾಳಿದ್ದರಿಂದ ಅವನನ್ನು ರಮಿಸುವ, ಮುದ್ದಿಸುವ, ಜೋಗುಳ ಹಾಡಿ ಮಲಗಿಸುವ ಸರಸಮಯ ಸಾಹಿತ್ಯರಾಶಿಯನ್ನೇ ನಮ್ಮ ದಾಸರುಗಳು ಸೃಷ್ಟಿಸಿದ್ದಾರೆ.

ಗೋಪಾಲಬಾಲ ಹಟ ಹಿಡಿದು ಅತ್ತರೆ ‘‘ಅಳುವುದ್ಯಾಕೆಲೋ ರಂಗ?’’ ಎಂಬ ಆತಂಕದ ದನಿಯ ವಿಚಾರಣೆ. ಆಗಲೂ ತುಂಟನ ಅಳು ನಿಲ್ಲಲಿಲ್ಲವೇ? ‘‘ಯಾರೇನೆಂದರೋ ಹರಿ? ಮೂರು ಲೋಕದೊಳು ಮುದ್ದು ಸುರಿವ ನಿನ್ನ?’’ ಎಂದು ಅನುನಯದ ಓಲೈಕೆ. ಈ ಮೆಲುಮಾತಿನ ಸಮಾಧಾನಕ್ಕೆಲ್ಲ ಸುಳ್ಳು ಸುಳ್ಳೇ ಅಳುತ್ತಿರುವ ಕಿಲಾಡಿ ಕಿಟ್ಟನ ಹಟ ನಿಂತರೆ ತಾನೇ? ಆಗ ದಾಸರು ಅವನಿಗಿಂತ ತಾವೇನೂ ಕಡಿಮೆ ಇಲ್ಲವೆಂದು ಜೋರಿನಿಂದ ‘‘ಇವನ ಹಿಡಿದುಕೊಂಡು ಹೋಗೆಲೋ ಜೋಗಿ, ಇವ ನಮ್ಮ ಮಾತು ಕೇಳದೆ ಪುಂಡನಾದನು’’ ಎಂದು ಬೆದರಿಸುತ್ತಾರೆ. ಕೂತರೆ ನಿಂತರೆ ಧಮಕಿ ಹಾಕುವ ಈ ಹರಿದಾಸರ ಸಹವಾಸವೇ ಬೇಡವೆಂದು ಕೃಷ್ಣ ಹೊರಗೆಲ್ಲೋ ಆಡಲು ಹೋದರೆ, ಆ ಅಗಲಿಕೆಯನ್ನೂ ದಾಸರ ಭಕ್ತಿಭರಿತ ಹೃದಯ ಸಹಿಸಲೊಲ್ಲದು.

ತನ್ನ ಕಾಲುಗಳಿಗೆ ತೊಡರುತ್ತಾ, ಮನೆ ತುಂಬಾ ದಾಂದಲೆ ಹಾಕುವ ಮಗುವಿನ ತುಂಟತನವನ್ನು ದೂರುತ್ತಲೇ, ಅದನ್ನು ಆನಂದಿಸುವ ತಾಯಿಯ ಅಂತ:ಕರಣ ದಾಸರುಗಳದು. ಕೀಟಲೆ ಮಾಡುವ ಕೃಷ್ಣನನ್ನು ನೆರೆಮನೆಗಳಿಗೆ ಕೂಡ ಹೋಗಲು ಬಿಡದೆ ‘‘ಮನೆಯೊಳಗಾಡೋ ಗೋವಿಂದ’’ ಎಂದು ಕಟ್ಟಳೆ ವಿಧಿಸುತ್ತಾರೆ. ‘‘ಭಾಗವತರು ಕಂಡರೆ ಎತ್ತಿ ಕೊಂಡೊಯ್ಯುವರು, ಪೋಗದಿರಲೋ ರಂಗಾ ಬಾಗಿಲಿಂದಾಚೆಗೆ’’ ಎಂದು ಅಂಗಲಾಚಿ ಬೇಡಿಕೊಳ್ಳುತ್ತಾರೆ. ‘‘ಆಡಪೋಗೋಣ ಬಾರೋ ರಂಗಾ.. ಕೂಡಿ ಯಮುನಾ ತೀರದಲ್ಲಿ’’ ಎಂದು ದೇವಕಿಕಂದನೊಡನೆ ತಾವೂ ಮಗುವಾಗಿ ಆಡಿದ್ದಾರೆ!

ಮನೆಯಲ್ಲಿ ಹಿರಿಯರಿದ್ದರೆ ಅವರು ಹಾಡುವ ಜೋಗುಳ ಮತ್ತೂ ಸೊಗಸು. ನಮ್ಮಮ್ಮ ಹಾಡುತ್ತಿದ್ದುದು ಇಂತಹದೇ ಕೆಲವು ಜನಪದ ಗೀತೆಗಳನ್ನು. ಮತ್ತೆ ಕೆಲವು ದೇವರನಾಮ ಎಂದು ಕರೆಯಲ್ಪಡುವ ಲಾಲಿ ಹಾಡುಗಳು. ಮಗುವಿನ ಹೆಸರನ್ನೂ ಲಾಲಿಹಾಡಿನೊಂದಿಗೆ ಸೇರಿಸಿ ಹಾಡುವ ಕಲೆ ಅಮ್ಮನಿಗೆ ಕರಗತವಾಗಿತ್ತು. ಜನಪದ ಗೀತೆಗಳು ಜನರಿಂದಲೇ ಹುಟ್ಟಿ, ಜನರಿಂದಲೇ ಬೆಳೆದುಬಂದ ಗೀತೆಗಳಾಗಿರುವುದರಿಂದ ಈ ಸ್ವಾತಂತ್ರ್ಯ ಅಲ್ಲಿ ಮಾತ್ರ ಲಭ್ಯ. ಉದಾಹರಣೆಗೆ - ಮಗುವಿನ ಹೆಸರು ಸುರಭಿ ಎಂದಿದ್ದರೆ ಅಮ್ಮನ ಜೋಗುಳ ಹೀಗೆ ಮಾರ್ಪಾಟಾಗುತ್ತಿತ್ತು -

‘‘ಅಂಗಳಾದೊಳಗೊಂದು ತೆಂಗಿನಮರ ಹುಟ್ಟಿ
ರಂಗುರಂಗೆಂಬ ಗಿಣಿ ಕೂತು
ರಂಗುರಂಗೆಂಬ ಗಿಣಿ ಕೂತು ಹಾಡ್ಯಾವ
ರಂಭೆ ಸುರಭಿಯ ಮದುವೆಯೆಂದು’’

ಕೈಯಲ್ಲಿರುವ ಮಗು ಹೆಣ್ಣಲ್ಲವೇ? ಗಂಡೇ? ಅದಕ್ಕೂ ಚಿಂತೆ ಇಲ್ಲ. ಅದೇ ಸಾಲನ್ನು ಸ್ವಲ್ಪ ತಿದ್ದುಪಡಿ ಮಾಡಿ ಹಾಡುವ ಜಾಣ್ಮೆ ಅಮ್ಮನಿಗಿತ್ತು. ಆಗ ‘ರಂಭೆ’ಯ ಜಾಗದಲ್ಲಿ ‘ರಾಜ’ ಬಂದು ಗತ್ತಿನಿಂದ ಕೂಡುತ್ತಿದ್ದ. ಪ್ರತಿ ಚರಣಗಳ ಕೊನೆಯಲ್ಲೂ ನಾಲಿಗೆಯನ್ನು ತುಟಿಗಳ ನಡುವೆ ತಿರುಗಿಸಿದಾಗ ‘ಉಳ್ಳಾಯಿ...ಹಾಯಿ ಹಾಯಿ’ ಎಂಬ ಸಾಲು ಮಕ್ಕಳಿಗೆ ಬಹು ಮುದಕೊಡುವ ಭಾಗ. ಮಗು ಇನ್ನೂ ಎಚ್ಚರವಾಗಿದ್ದರೆ ಅದಕ್ಕೆ ನಗು. ನಗುನಗುತ್ತಲೇ ನಿದ್ದೆಯ ಮಡಿಲಿಗೆ ಜಾರುವ ಮುದ್ದು ಮಗು. ಅದೊಂದು ಕಣ್ಮನ ತಣಿಸುವ ರಮ್ಯ ನೋಟ!

ಇಂತಹ ಲಾಲಿಹಾಡುಗಳಂತೆಯೇ ಮತ್ತೆ ಕೆಲವು ಯಾವ ಪ್ರಕಾರಕ್ಕೂ ಸೇರದ ಹಾಡುಗಳಿವೆ. ಬಹುಶ: ಅವುಗಳನ್ನು ಸಂಪ್ರದಾಯದ ಹಾಡುಗಳು ಎನ್ನುತ್ತಾರೇನೋ. ಮದುವೆ, ಮುಂಜಿ, ಬಳೆ ತೊಡಿಸುವುದು ಮುಂತಾದ ಸಂದರ್ಭದಲ್ಲಿ ಹಾಡುವಂತಹವು. ಹೆಂಗಳೆಯರು ಅರಿಶಿನ ಕುಂಕುಮಕ್ಕೆಂದು ಒಂದೆಡೆ ಸೇರಿದಾಗ ಈ ರೀತಿಯ ಹಾಡುಗಳನ್ನು ಹಾಡಿಕೊಳ್ಳುವ ಪರಿಪಾಠವಿತ್ತು. ಹಾಡಬಲ್ಲವರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇದೊಂದು ಅವಕಾಶವಾದರೆ ಉಳಿದವರಿಗೆ ಮನರಂಜನೆ. ಮದುವೆ ಮನೆಗಳಲ್ಲಿ ಬೀಗರನ್ನು ಕೆಣಕುವ, ರೇಗಿಸುವ ಹಾಡುಗಳಂತೂ ಬಹಳ ತಮಾಷೆಯಾಗಿರುತ್ತಿದ್ದವು. ಇಂತಹ ಹಾಡುಗಳನ್ನು ಯಾರೂ ಬರೆದಿಟ್ಟುಕೊಂಡು ಹಾಡುತ್ತಿರಲಿಲ್ಲ. ಸಮಯ, ಸನ್ನಿವೇಶಗಳಿಗೆ ತಕ್ಕಂತೆ ಸೃಷ್ಟಿಯಾಗುತ್ತಿದ್ದ ಹಾಡುಗಳವು.

ಹಾಗಾಗಿ ಇಂತಹ ಬಹುಪಾಲು ಹಾಡುಗಳೆಲ್ಲ ಈಗ ಕೇಳಲು ಸಿಗುವುದು ಕಷ್ಟ. ಅವೂ ಕೂಡ ಅದನ್ನು ಹಾಡುತ್ತಿದ್ದ ಹಿರಿಯರ ಜೊತೆಗೆ ಕಾಲಗರ್ಭದಲ್ಲಿ ಕಣ್ಮರೆಯಾಗಿ ಹೋಗಿದೆ!

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X