• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀರಾಮನವಮಿ ಶುಭಾಶಯಗಳು

By * ಧವಳ
|
ವಿಜಯನಾಮ ಸಂವತ್ಸರ, ವಸಂತ ಋತು, ಚೈತ್ರಮಾಸ ಏಪ್ರಿಲ್ 19 ಶುಕ್ರವಾರದಂದು ಕೌಸಲ್ಯಾ ಸುಪ್ರಜಾ, ಮರ್ಯಾದಾ ಪುರುಷೋತ್ತಮ, ಏಕಪತ್ನೀವ್ರತಸ್ಥ, ಅಯೋಧ್ಯೆಯ ಚಕ್ರವರ್ತಿ ಶ್ರೀರಾಮಚಂದ್ರನ ಹುಟ್ಟುಹಬ್ಬ. ಪ್ರಾಚೀನ ಭಾರತದ ಮೇರು ಕೃತಿ ವಾಲ್ಮೀಕಿ ವಿರಚಿತ ರಾಮಾಯಣದ ಕಥಾನಾಯಕನನ್ನು ಸ್ಮರಿಸಿಕೊಳ್ಳುವ ದಿನ. ಆತನ ಜನ್ಮದಿನಕ್ಕೆ ಹಬ್ಬದ ಮಹತ್ವ.

ಸಾಮಾನ್ಯವಾಗಿ ಹಿಂದೂ ಮನೆಗಳಲ್ಲಿ ದೇವರ ಪಟಗಳನ್ನು ಗೋಡೆಯ ಮೋಲೆ ತೂಗುಹಾಕುವುದು ಪದ್ಧತಿ. ಮನೆಯ ಪೂರ್ವಜರ ಚಿತ್ರಗಳ ಜತೆಗೆ ವೀಣಾಪಾಣಿ ಸರಸ್ವತಿ, ಬಂಗಾರದ ನಾಣ್ಯಗಳನ್ನು ಕೈಯಿಂದ ಉದುರಿಸುತ್ತಿರುವ ಲಕ್ಷ್ಮೀ, ವಿಘ್ನನಾಶಕ ಗಣಪತಿ, ಸಂಜೀವಿನಿ ಪರ್ವತ ಹೊತ್ತು ಹಾರುತ್ತಿರುವ ಆಂಜನೇಯನ ಚಿತ್ರಪಟಗಳ ಸಾಲಿನಲ್ಲಿ ಸೀತಾ ಲಕ್ಷ್ಮಣ ಸಮೇತ ರಾಮನ ಫೋಟೋ ರಾರಾಜಿಸುವುದು. ಇದಲ್ಲದೆ ಅವರವರ ಮನೆ ದೇವರ ಫೋಟೋಗಳು ದೇವರ ಚಿತ್ರಗಳ ಸಾಲಿನಲ್ಲಿ ಇರುತ್ತವೆ.

ರಾಮ ಹೇಗಿದ್ದ, ಸೀತಾ ಹೇಗಿದ್ದಳು ನಾವೇನೂ ನೋಡಿಲ್ಲ. ಆದರೆ ಅವರಿಗೆಲ್ಲ ಒಂದು ಮನುಷ್ಯ ಆಕಾರ, ವೇಷ ಭೂಷಣ ಕಲ್ಪಿಸಿ ದೇವರು ಎಂದರೆ ಇವರೇ ಎಂದು ತೋರಿಸಿಕೊಟ್ಟವರು ಭಾರತೀಯ ಪಾರಂಪರಿಕ ಚಿತ್ರ ಕಲಾವಿದರು. ಭಕ್ತರು ದೇವರನ್ನು ಮನಸಾ ನೆನೆಯುವಾಗ ಈ ಕಲಾವಿದರನ್ನೂ ನೆನೆದರೆ ಚೆನ್ನ. ಎಷ್ಟೋ ವೇಳೆ ಈ ಚಿತ್ರ ಬಿಡಿಸಿದ ಕಲಾವಿದ ಯಾರು ಎಂಬುದೇ ಗೊತ್ತಿರುವುದಿಲ್ಲ. ನಾಮಿಕ, ಅನಾಮಿಕ ಕಲಾವಿದರಿಗೆ ಒಂದು ನಮೋ ಹೇಳೋಣ.

ಭಾರತದ ಕಡು ಬೇಸಿಗೆಯಲ್ಲಿ ಬರುವ ರಾಮನವಮಿ ಹಬ್ಬ ಅನೇಕ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ. ಶಾಲಾ ಪರೀಕ್ಷೆಗಳು ಮುಗಿದು ಬಾಲಕರಿಗೆ ಮರಕೋತಿ ಆಡುವ ಸಮಯ. ಬಾಲಕಿಯರಿಗೆ ಚೌಕಾಭಾರ, ಘಟಗೋಣಿಮಣೆ, ಕುಂಟಾಬಿಲ್ಲೆ ಆಡುವ ಬೇಸಿಗೆ ರಜಾ ಮಜಾ. ರೆಫ್ರಿಜಿರೇಟರಿಗೆ ಸೆಖೆಯಾಗುವಷ್ಟು ಸೂರ್ಯನ ಬೇಗೆಯಿಂದ ಅಲ್ಪ ಸ್ವಲ್ಪ ಸುಧಾರಿಸಿಕೊಳ್ಳುವುದಕ್ಕೆ ಋತುಮಾನಕ್ಕೆ ತಕ್ಕಂತೆ ಆಹಾರ, ಪಾನೀಯ.

ಶಿವರಾತ್ರಿಗೆ ಆರಂಭವಾಗುವ ಬೇಸಿಗೆ ಕಾಲಕ್ಕೆ ಸರಿಯಾಗಿ ಬೇಲದ ಹಣ್ಣಿನ ಪಾನಕ. ಯುಗಾದಿಗೆ ಪ್ರಕೃತಿಯೇ ಕರುಣಿಸಿದ ಮಾವು ಬೇವು ಬೆಲ್ಲ. ರಾಮನವಮಿಗೆ ನಾನಾ ಬಗೆಯ ಪೇಯಗಳು. ಕಲ್ಲಂಗಡಿ, ಕರಬೂಜಾ, ನಿಂಬೆ ಹಣ್ಣಿನ ರಸ ಸೇವನೆಗೆ ಸಕಾಲ. ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳು ಬೇಸಿಗೆಯಲ್ಲೇ ಫಲಕೊಡುವುದು ಡಿವೈನ್ ಕಾನ್ಸಪಿರಸಿ! ಹಣ್ಣುಗಳ ಜತೆಗೆ ತಂಪು ಪದಾರ್ಥ ಹೆಸರುಬೇಳೆ ಕೋಸಂಬರಿಗೂ ರಾಮನವಮಿಗೂ ಬಿಡಿಸಲಾರದ ನಂಟು. ನಾಲಕ್ಕು ಸೌತೇಕಾಯಿ ಹೋಳು, ಎರಡು ಲೋಟ ನೀರು ಮಜ್ಜಿಗೆಯನ್ನು ಪಡೆದವನೇ ಭಾಗ್ಯವಂತ.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಶ್ರೀರಾಮಚಂದ್ರನ ದೇವಾಲಯಗಳು ಕಾಣಿಸುತ್ತವೆ. ಹಾಗೆ ನೋಡಿದರೆ ರಾಮನಿಗಿಂತ ಅವನ ಪರಮಭಕ್ತ ಆಂಜನೇಯನಿಗೆ ಮೀಸಲಾದ ಗುಡಿಗಳೇ ದೇಶದಲ್ಲಿ ಜಾಸ್ತಿ. ಅಂತೆಯೇ, ರಾಮಮಂದಿರಗಳಲ್ಲಿ ಮತ್ತು ಆಂಜನೇಯನ ಗುಡಿಗಳಲ್ಲಿ ನಾಳೆ ವಿಶೇಷ ಪೂಜೆ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆರವೇರುತ್ತವೆ.

ರಾಮನ ಜತೆಗೆ ಭಾತೃ ಪ್ರೇಮಕ್ಕೆ ಹೆಸರಾದ ಲಕ್ಷ್ಮಣ, ಭರತ, ಶತ್ರುಘ್ನರಿಗೆ ಪ್ರತ್ಯೇಕವಾದ ದೇಗುಲಗಳು ಅಷ್ಟಾಗಿ ಕಂಡುಬಾರವು. ಇವರೆಲ್ಲ ಒಟ್ಟಾಗಿ ದೇಗುಲಗಳಲ್ಲಿ ಕಾಣುವುದು ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಮಾತ್ರ. ಈ ಎರಡು ಸ್ಥಳಗಳಲ್ಲಿ ಹೊರತುಪಡಿಸಿ ಮತ್ತೆಲ್ಲೂ ಇಲ್ಲ ಎಂದು ನನ್ನ ತಿಳಿವಳಿಕೆ ಹೇಳುತ್ತದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆವಣಿ ಗ್ರಾಮದಲ್ಲಿ ಈ ನಾಲ್ಕೂ ಜನ ಅಣ್ಣ ತಮ್ಮಂದಿರು ಒಟ್ಟಾಗಿರುವ ದೇಗುಲವೊಂದಿದೆ. ಇಲ್ಲಿ ರಾಮಲಿಂಗೇಶ್ವರನೆಂದು ಹೆಸರುವಾಸಿ . ಈತನ ಅಕ್ಕಪಕ್ಕದಲ್ಲಿ ಸೀತಮ್ಮ ಆಂಜನೇಯ ಅಲ್ಲದೆ ಉಳಿದ ತಮ್ಮಂದಿರು ಬೇರೆಬೇರೆ ದೇಗುಲಗಳಲ್ಲಿ ವಿರಾಜಮಾನರಾಗಿದ್ದಾರೆ.

ಈ ದೇಗುಲಕ್ಕೆ ಪುರಾಣ ಐತಿಹ್ಯವಿದೆ. ರಾಮ ಸೀತೆ ಲವಕುಶರನ್ನು ಲಾಲಿಸಿದುದು ಇಲ್ಲೇ ಎನ್ನುವ ನಂಬಿಕೆ ಸ್ಥಳೀಯರಿಗಿದೆ. ಈ ದೇಗುಲಕ್ಕೆ ಹೊಂದಿಕೊಂಡಂತೆ ಇರುವ ಬೆಟ್ಟವನ್ನು 'ಸೀತಮ್ಮ ಕೊಂಡ' ಎಂದು ಕರೆಯುತ್ತಾರೆ . ಇಲ್ಲಿ ವರ್ಷಕ್ಕೊಮ್ಮೆ ದನಗಳ ಜಾತ್ರೆ ನಡೆಯುತ್ತದೆ.(ಇತ್ತೀಚೆಗೆ ಆ ಜಾತ್ರೆ ನಡೆಯಿತು)ಆಗ ದೂರದೂರಿಂದ ರೈತರು ಬಂದು ಎತ್ತುಗಳನ್ನು ಕೊಳ್ಳುತ್ತಾರೆ. ಈ ಬೆಟ್ಟದ ತಪ್ಪಲಲ್ಲಿ ಶಾರದಾಂಬೆಯ ದೇಗುಲವಿದೆ. ಇಷ್ಟಪಟ್ಟವರು ಬೆಂಗಳೂರಿನಿಂದ (ಸುಮಾರು 80ಕಿಮಿ) ಸೀದಾ ಅಲ್ಲಿಗೆ ಹೋಗಿ 'ಮೆಸರ್ಸ್ ರಾಮ್ ಅಂಡ್ ಬ್ರದರ್ಸ್' ದೇವಸ್ಥಾನವನ್ನು ನೋಡಿಕೊಂಡು ಬರಬಹುದು.

ಇ೦ತಹುದೇ ಮತ್ತೊಂದು ಸ್ಥಳ ಕೇರಳದಲ್ಲಿದೆ. ಇಲ್ಲಿಯೂ ಈ ಅಣ್ಣತಮ್ಮಂದಿರ ಪ್ರತ್ಯೇಕ ದೇಗುಲಗಳು ಇವೆ. ಮಲಯಾಳದಲ್ಲಿ ಇದನ್ನು ನಲಂಬಲಂ ಎಂದು ಕರೆಯುತ್ತಾರೆ. ರಾಮನಿಂದ ಆರಂಭಿಸಿ ಆ ಬಳಿಕ ಶತ್ರುಘ್ನ ದೇಗುಲ ನೋಡುವುದರ ಮೂಲಕ ಮುಕ್ತಾಯ ಹಾಡುವ ಪದ್ಧತಿ ಇಲ್ಲಿದೆ. ಈ ದೇವಾಲಯ ತಿರುಚ್ಚಿ ಜಿಲ್ಲೆಯ ರಾಮಪುರದಲ್ಲಿದೆ. ಆವಣಿಯಂತೆ ಇಲ್ಲಿ ಎಲ್ಲಾ ಅಣ್ಣ ತಮ್ಮಂದಿರು ಜಾಯಿಂಟ್ ಫ್ಯಾಮಿಲಿ ಥರ ಒಟ್ಟಾಗಿ ಇಲ್ಲ. ಟ್ಯಾಕ್ಸಿ ಮೂಲಕ ಅಷ್ಟೂ ದೇಗುಲಗಳನ್ನು ಬೇರೆಬೇರೆಯಾಗಿ ಸಂದರ್ಶಿಸಬಹುದು.ಕೇವಲ ರಾಮಪುರದಲ್ಲಿ ಮಾತ್ರವಲ್ಲದೆ ಕೊಟ್ಟಾಯಂ, ಎರ್ನಾಕುಲಂ, ಮಲಪ್ಪುರಂ ಜಿಲ್ಲೆಗಳಲ್ಲೂ ಈ ಅಣ್ಣ ತಮ್ಮಂದಿರ ದೇಗುಲಗಳು ಇವೆ. ಟೈಮ್ ಇದ್ದಾಗ ಒಮ್ಮೆ ಹೋಗಿ ಅಣ್ಣತಮ್ಮಂದಿರ ಒಗ್ಗಟ್ಟು ಕಾಣಿರಿ!

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more