ಮಾಯಾನಗರಿ ‘ನ್ಯೂಯಾರ್ಕ್’ನಲ್ಲೊಂದು ವಾರಾಂತ್ಯ

Posted By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

ಕಳೆದ ವಾರಾಂತ್ಯ ನ್ಯೂಯಾರ್ಕ್ ನಗರಕ್ಕೆ ಭೇಟಿ ಕೊಟ್ಟ ಅನುಭವ ಈ ವಾರದ 'ನವರಸಾಯನ'ದ ವಿಷಯ. ನ್ಯೂಯಾರ್ಕ್ ಎಂದೊಡನೆ ಮನಸ್ಸಿಗೆ ಬರುವುದು 'ಓ! ವಾವ್! ಎಂದೇ. ನೋಡೋಣ ಬನ್ನಿ

ನವರಸಾಯನ ಅಂಕಣ: ರಿಯಾಲಿಟಿ ಷೋ ಪಿಡುಗೋ, ಪರಿಹಾರವೋ?

ಶುಕ್ರವಾರ ಬೆಳಗ್ಗೆ ಐದಕ್ಕೆ ನಮ್ಮೂರಿನಿಂದ ಹೊರಟು ಆರು ಗಂಟೆಗಳ ಪ್ರಯಾಣ ಮಾಡಿ ನ್ಯೂಯಾರ್ಕ್ ನಗರ ತಲುಪಿ, ಹೋಟೆಲಿನಲ್ಲಿ ನಮ್ಮ ಪುಟ್ಟ ಲಗ್ಗೇಜನ್ನು ಇಟ್ಟೆವು. ಮೊದಲ ಕಲಿಕೆ ಈ ಹೋಟೆಲ್ ರೂಮು. ಮೂರು ದಿನಗಳ ತಂಗುವಿಕೆಗೆ ಬೇಕಾದ ಹಾಸಿಗೆ ಬಟ್ಟೆ, ಒಂದು ಟಿವಿ, ಫ್ರಿಡ್ಜ್, ಶೌಚಾಲಯ, ಸ್ನಾನದ tub!

ಮೂರು ದಿನಗಳ ಜೀವನಕ್ಕೆ ಇಷ್ಟು ಸಾಕಾಗಿತ್ತು. ಇಂಥಾ ಮೂರು ದಿನಗಳ ಬುವಿಯ ಮೇಲಿನ ಜೀವನಕ್ಕೆ ಎಷ್ಟೆಲ್ಲಾ ಎಷ್ಟೆಲ್ಲಾ ಕಸರತ್ತು ಮಾಡಿಕೊಂಡು ಜೀವನವೆಲ್ಲಾ ಒದ್ದಾಡ್ತೀವಲ್ಲಾ ಅನ್ನೋ ಕಲಿಕೆ! ಅದ್ಬುತ ಕಲಿಕೆ ಅಲ್ಲವೇ?

Weekend trip to beautiful city New York

ಆದರೆ, ಎಷ್ಟು ದಿನ ಹೊರಗೆ ತಿನ್ನಲು ಸಾಧ್ಯ? ಅಡುಗೆ ಮನೆ ಬೇಕೇ ಬೇಕಲ್ಲವೇ? ನಮ್ಮದೇ ಮನೆಗಳಲ್ಲಿ ಹೆಚ್ಚಿನ ಸಮಯ ಕಳೆಯೋದೇ ಅಡುಗೆಮನೆಯಲ್ಲಿ! ಹಾಗಾಗಿ ಜೀವನದ ಹೋರಾಟ! ಎಲ್ಲರೂ ಮಾಡುವುದು ಹೊಟ್ಟೆಗಾಗಿ.

ಸರಿ, ಲಗ್ಗೇಜನ್ನು ಹೋಟೆಲ್ ರೂಮಿನಲ್ಲಿ ಹಾಕಿ ಹೊರಗೆ ಊಟಕ್ಕೆ ಹೊರಟೆವು! ಹೊರಗೆ ಅಡಿಯಿಡುತ್ತಿದ್ದಂತೆಯೇ ಪ್ರತಿ ಬೀದಿಯ ಕೊನೆಯಲ್ಲಿ 'ನಮ್ಮ ಬಸ್ ಟೂರು' ಮಾಡಿ ಎಂದು brochure ಹಂಚುವ ಮಂದಿ. ಹಾಗಂತ ಸುಮ್ಮನೆ ಬಂದ ಬಂದವರಿಗೆಲ್ಲ ಕೈಗೆ ತುರುಕುತ್ತಿದ್ದರು ಅಂತಲ್ಲ!

ಇವರು ಆಡುವ ಕ್ರಿಕೆಟ್ಟಿಗೆ ನಾವೇಕೆ ಟೆನ್ಷನ್ ಮಾಡ್ಕೊಬೇಕು?

ಭಾರತೀಯ ವದನ, ಚೈನಾ ಮೂಲದ ಮುಖಗಳನ್ನು ಕಂಡಾಗ ಮೊದಲು ನೀಡುತ್ತಿದ್ದರು. ಮೂರು ದಿನಗಳಲ್ಲಿ ಮೂವತ್ತು ಸಾರಿಯಾದರೂ ಆಫ್ರಿಕನ್-ಅಮೆರಿಕನ್ನರ ಬಾಯಲ್ಲಿ 'ನಮಸ್ತೇ' ಎಂದು ಕೇಳಿದೆ! ಇದೊಂದು ಮಾರ್ಕೆಟಿಂಗ್ ತಂತ್ರ ಎಂದರೂ ಅದನ್ನು ಅರ್ಥೈಸಿಕೊಂಡು ಬಳಸಿಕೊಂಡಿರುವುದು ಶ್ಲಾಘನೀಯ.

ನಮಗೆ 'ನಿನ್ನ ಬಸ್ ಬೇಡಪ್ಪಾ' ಅಂತ ತಿರಸ್ಕರಿಸಿದರೂ ಬೇಸರ ತೋರಿಸದೆ ಶಾಂತ ರೀತಿಯಲ್ಲೇ 'ನೋ ಪ್ರಾಬ್ಲಮ್ ಸರ್! ಹ್ಯಾವ್ ಎ ನೈಸ್ ಡೇ' ಅನ್ನೋದು ಇನ್ನೂ ನಡೆದಿದೆ ಎಂಬುದೇ ಸಂತಸಕರವಾದ ವಿಚಾರ.

Weekend trip to beautiful city New York

ನ್ಯೂಯಾರ್ಕ್ ನಗರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಎಂದರೆ "Times Square". ಸೆವೆನ್ತ್ ಅವೆನ್ಯೂನಲ್ಲಿ ಒಂದು ತುದಿಯಿಂದ ಇನ್ನೊಂದು ತುದಿಗೆ ಸುಮ್ಮನೆ ನಡೆದು ಹೋಗಿ ವಾಪಸ್ ಬಂದರೆ ಸಾಕು ಒಳ್ಳೆಯ ನಡಿಗೆಯ ಜೊತೆಗೆ ರಂಗುರಂಗಾದ ನ್ಯೂಯಾರ್ಕ್ ನ ಒಂದು ತುಣುಕಿನ ದರ್ಶನ.

ಶೃಂಗಾರ ರಸ ಎಂದರೆ ಅದರ ಪ್ರತಿರೂಪವೇ ಹೆಣ್ಣು. ಫ್ಯಾಷನ್ ಎಂಬುದು ಎಲ್ಲಿ ಆರಂಭವಾಯಿತು ಎಂಬ ಪ್ರಶ್ನೆ ಉದ್ಭವವಾದರೆ ನ್ಯೂಯಾರ್ಕ್ ಎಂತಂದು ಹೇಳುವವರು ವಿರಳ ಅಲ್ಲ ಹೇರಳ! ಮೈತುಂಬಾ ಬಟ್ಟೆ ಧರಿಸಿ ವಯ್ಯಾರ ಮಾಡುವ ಮಂದಿಯಿಂದ ಹಿಡಿದು ಅತ್ಯಂತ ಕನಿಷ್ಠ ವಸ್ತ್ರಧಾರಿಣಿಯರನ್ನು ಒಂದೇ ಬೀದಿಯಲ್ಲಿ ಕಾಣಬಹುದು ಎಂದರೆ ಅತಿಶಯೋಕ್ತಿಯೇನಲ್ಲ.

ಹಾಗೆಯೇ ಓಡಾಡುವುದು ತರವಲ್ಲ (?) ಎಂಬ ಉದ್ದೇಶದಿಂದ ಕೆಲವರು ಇರಲಿ ಎಂದು ಬಟ್ಟೆ ಧರಿಸಿದಂತೆ ಇತ್ತು! ಈ ಪರಿಯ ಶೃಂಗಾರದ ಬಗ್ಗೆ ಬರೆಯುತ್ತಲೇ ಹೋದರೆ ಅಶ್ಲೀಲತೆ ಇಣುಕಬಹುದು ಎಂಬ ಭೀತಿಯಿಂದ ಇಲ್ಲಿಗೇ ನಿಲ್ಲಿಸುತ್ತೇನೆ. ಪ್ರಾಣಿಗಳಂತೆ ಬಟ್ಟೆಯ ಉಸಾಬರಿಯೇ ಬೇಡ ಎಂಬಂತೆ ಅಲೆವ ಕಾಲ ದೂರ ಇಲ್ಲ!

Weekend trip to beautiful city New York

ಶೃಂಗಾರ ರಸದೊಂದಿಗೆ ಹೊಂದಿಕೊಳ್ಳುವಂತೆ ಹಾಸ್ಯವನ್ನು ಉಣಬಡಿಸಿದರೆ ಹೇಗೆ? ಇಲ್ಲಿ ಜನಸಾಗರ ಎಂದರೆ ಹೇಗಪ್ಪಾ ಎಂದರೆ ನೆಲಕ್ಕೆ ಏನಾದರೂ ಬಿತ್ತು ಎಂದು ತೆಗೆದುಕೊಳ್ಳಲು ಬಾಗಿದಲ್ಲಿ ನಿಮ್ಮನು ತುಳಿದು ಮುಂದೆ ಹೋಗುವುದು ಖಂಡಿತ ಎನಿಸುವಷ್ಟು! ಈ ಕಡೆಯಿಂದ ಆ ಕಡೆ, ಆ ಕಡೆಯಿಂದ ಈ ಕಡೆ ಯಾಕೆ ಓಡಾಡ್ತಾ ಇದ್ದಾರೆ ಎಂದು ಕೆಳದಿರಿ!

ಅಂಥಾ ಜನನಿಬಿಡ ರಸ್ತೆಯಲ್ಲಿ ಗಂಡು-ಹೆಣ್ಣು ಒಬ್ಬರನ್ನೊಬ್ಬರು ಅಪ್ಪಿಕೊಂಡು ಉಪ್ಪ ಕೊಡ್ತಾ ನಿಂತಿರ್ತಾರಲ್ಲ ಇವರಿಗೆಲ್ಲಾ ಮನೆಯಲ್ಲಿ ಜಾಗ ಇಲ್ಲವೇ? ಈ ಸ್ವೇಚ್ಛೆ ಎಂಬ ಮಂತ್ರವನ್ನೇ ಬಾಲಿವುಡ್ ಮಹಾಜನರು ನಮ್ಮಲ್ಲೂ ತರುತ್ತಿರೋದು !

ಕರುಣಾ ರಸದ ಸನ್ನಿವೇಶದೊಂದಿಗೆ ಹಾಸ್ಯವನ್ನು ಸೇರಿಸಿದರೆ ಹೇಗೆ? ಇಲ್ಲಿ ಬೀದಿ ಬೀದಿಯಲ್ಲಿ ಭಿಕ್ಷುಕರು ಎಂದರೆ ನಿಮಗೆ ಅಚ್ಚರಿಯಾಗಬಹುದು. ಕೆಲವರನ್ನು ಕಂಡ ಕೂಡಲೇ ಅವರನ್ನು ಭಿಕ್ಷುಕರು ಎಂದು ಹೇಳಬಹುದು ಆದರೆ 'ತಾವು ಭಿಕ್ಷುಕರು' ಎಂದು ಹೇಳಿಕೊಳ್ಳುವ ಹಲವಾರು ಮಂದಿ ಸಕತ್ತಾಗಿರೋ ಷೂ ಹಾಕಿರಬಹುದು, ದುಬಾರಿ ಸಿಗರೇಟ್ ಸೇದುತ್ತಿರಬಹುದು ಹೀಗೆ.

Weekend trip to beautiful city New York

ಹೀಗೇ ನಾವು ನಡೆದು ಹೋಗುತ್ತಿರಲು ಒಮ್ಮೆ, ಒಳ್ಳೆಯ ಬಟ್ಟೆ ಧರಿಸಿದ ಒಬ್ಬಾತ ಬಂದು ಏನೋ ಕೇಳಿದ. ಅರ್ಥವಾಗಲಿಲ್ಲವೆಂದು 'ಏನು?' ಎಂದು ಕೇಳಿದೆ "can you give me $2.50 for a soup ?" ಎಂದ!

ಕರುಣೆ ಉಕ್ಕಿಸಿಯೇ ದುಡ್ಡು ಕೇಳಬೇಕಿಲ್ಲ ಎಂಬ ಅದ್ಬುತ ವಿಚಾರ ತಿಳಿಸಿಕೊಟ್ಟು ಹಾಸ್ಯ ಉಣಿಸಿದವನನ್ನು ರೌದ್ರನಾಗಿ ವೀರತನ ತಾಳದೆ ಶಾಂತ ರೀತಿಯಲ್ಲೇ ಸಾಗಹಾಕಿದೆ.

ನಮ್ಮೂರಿನಲ್ಲಿ ಅಲ್ಲಲ್ಲಿ ಕಂಡು ಬರುತ್ತಿದ್ದ ಒಂದು ದೃಶ್ಯ ಇಲ್ಲಿ ಹೇರಳ ಎನಿಸುವಷ್ಟಿತ್ತು. ಏನಪ್ಪಾ ಅಂದಿರಾ? ತೊಡೆಯಿಂದ ಹೆಚ್ಚು ಕಮ್ಮಿ ಪಾದದವರೆಗೂ ಅಲ್ಲಲ್ಲೇ ಬಟ್ಟೆ ಇದ್ದು ಮಿಕ್ಕೆಲ್ಲ ಭಾಗ ಹರಿದು ಚೂರಾದ ಜೀನ್ಸ್ ತೊಟ್ಟ ಶ್ರೀಮಂತ ಹೆಣ್ಣುಗಳು! ಇಂಥಾ 'ಚಿಂದಿ' ಹೆಣ್ಣೊಬ್ಬಳು ಹರಕಲು ಜೀನ್ಸ್ ತೊಟ್ಟ ಒಬ್ಬ ಭಿಕ್ಷುಕನಿಗೆ ಹಣ ಕೊಟ್ಟು ಸಾಗಿದಾಗ ಚಿಂದಿ ತೊಟ್ಟವರೆಲ್ಲಾ ಭಿಕ್ಷುಕರಲ್ಲ ಎನಿಸಿತು. ಇದು ಕರುಣೆಯೂ ಹಾಸ್ಯವೋ ನೀವೇ ನಿರ್ಧರಿಸಿ!

ಆಧುನಿಕತೆಯ ಹೆಸರಿನಲ್ಲಿ ಹೆಣ್ಣುಗಳು ಧರಿಸಿದ್ದ ವಸ್ತ್ರಗಳು, ಹೊಟ್ಟೆಪಾಡಿಗಾಗಿ ಎನ್ನುವುದಕ್ಕಿಂತ ದೌಲತ್ತಿಗಾಗಿ ಅಡ್ಡದಾರಿ ಹಿಡಿದವರ ವಯ್ಯಾರ, ಸಿಗರೇಟ್ ಸೇದುವ ಹೆಣ್ಣುಗಳು ಎಂಬುದನ್ನು ಕಂಡಾಗ ಅಪ್ಪ-ಅಮ್ಮ ಇಲ್ಲದೆ ನೇರವಾಗಿ ಧರೆಗೆ ಇಳಿದವರೋ ಏನೋ ಎಂಬ ಭಾವನೆ ಮೂಡಿಸಿದರು.

ಯಾರೊಬ್ಬರ ಹಂಗಿಲ್ಲದೆ ಬೆಳೆದವರೋ ಏನೋ ಎಂಬ ಅನುಮಾನ ಮೂಡಿತ್ತು. ನನ್ನ ದೃಷ್ಟಿಯಲ್ಲಿ 'ಅಡ್ಡದಾರಿ' ಎನಿಸಿಕೊಂಡ ಈ ದಾರಿಯಲ್ಲಿ ಸಾಗುತ್ತಿರುವ ಇಂದಿನ ಜನಾಂಗ ಭೀಭತ್ಸ ರಸದ ದರ್ಶನ ಮಾಡಿಸಿದರು!

ಹಿಂದೆಂದೂ ನ್ಯೂ ಯಾರ್ಕ್ ನಲ್ಲಿ ಸಬ್-ವೇ ಪಯಣ ಮಾಡಿರಲಿಲ್ಲ. ಅದೂ ನಡೆಯಲಿ ಎಂದು ಸ್ಟೇಷನ್ ಒಳಗೆ ಕಾಲಿಟ್ಟೆವು. ಅತೀ ಜನಸಂದಣಿ ಇರುವ ಪ್ರದೇಶವೋ ಏನೋ ಒಟ್ಟಿನಲ್ಲಿ ಆ ವಾತಾವರಣ ಅಷ್ಟು ಇಷ್ಟವಾಗಲಿಲ್ಲ. ನಾಲ್ಕು ಹೆಜ್ಜೆ ಇಡುತ್ತಲೇ ಬಹುಶಃ ಹತ್ತು ಪೊಲೀಸರು ಅಲ್ಲಲ್ಲೇ ಹಂಚಿ ಹರಿದು ನಿಂತಿದ್ದರು!

'ಈ ಕಡೆ ಬಾರದಿರಿ ಆ ಕಡೆ ಹೋಗಿ' ಎಂದು ನಿರ್ದೇಶಿಸುತ್ತಿದ್ದರು! ಏನಾಯ್ತಪ್ಪಾ ಎಂದು ನೋಡಿದರೆ ಯಾವುದೋ ದೊಡ್ಡ ದೇಹದ ಕಪ್ಪು ಹೆಣ್ಣೊಬ್ಬಳು ನೆಲದ ಮೇಲೆ ಅಂಗಾತ ಬಿದ್ದುಗೊಂಡು ಅಳುತ್ತಿದ್ದಳು! ಕಳ್ಳತನವೋ ಮತ್ತಿನ್ಯಾವುದೋ ಕೇಸ್ ಎಂಬಂತಿತ್ತು! ಅದನ್ನು ದಾಟಿ ಮುಂದೆ ಹೋದಾಗ ಕೊಂಚ ಭಯಂಕರ ಎನಿಸುವ ರೀತಿಯಲ್ಲಿ ಅಲ್ಲಲ್ಲೇ ಗುಂಪು ಗುಂಪಾಗಿ ಕಪ್ಪುಜನರು ನಿಂತುಕೊಂಡು ಒಬ್ಬಳನ್ನು ಶಿಕ್ಷಿಸಲು ಇಷ್ಟು ಮಂದಿ ಪೊಲೀಸರು ಬೇಕೇ ಎನ್ನುವಂತೆ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು!

ಇನ್ನೂ ದೇಶಾದ್ಯಂತ ವರ್ಣಭೇದ ತೋರುವ ಗಲಭೆಗಳು ನಡೆಯುತ್ತಲೇ ಇರುವಾಗ ಮೊದಲ ಬಾರಿಗೆ ಕಾಲಿಟ್ಟ ಸಬ್-ವೇಯಲ್ಲಿ ಗಲಭೆ ಶುರುವಾದರೆ ಏನು ಮಾಡುವುದು ಎಂಬ ಭೀತಿ ಮೂಡಿದ್ದು ಸಹಜ. ಸದ್ಯ ಏನೂ ಆಗಲಿಲ್ಲ.

ಒಮ್ಮೆ ರಾತ್ರಿಯ ಹೊತ್ತಿನಲ್ಲಿ ಒಂದು ಬೀದಿಯ ಬಳಿ ಬಂದಾಗ ಅಲ್ಲಲ್ಲೇ ನಾಲ್ಕು ಸಣ್ಣ ಸಣ್ಣ ಟ್ರಕ್ ಗಳು ನಿಂತಿದ್ದವು. "stop-by to fly" ಎನ್ನುವ ಘೋಷಣೆ ಮಾಡುತ್ತಿದ್ದ ಒಬ್ಬ ! ಅದೊಂದು ಲಾಲಿಪಾಪ್ (ಕ್ಯಾಂಡಿ) ಅಂಗಡಿ. ಬೆಳಗಿನ ಹೊತ್ತಿನಲ್ಲಿ ಮಕ್ಕಳು ಮರಿ ಇರುವಾಗ ಇಲ್ಲದ ಗಾಡಿ ಈಗೇಕೆ ಎಂದು ಹತ್ತಿರ ಹೋಗಿ ನೋಡಿದೆ !

ಅಮೆರಿಕಾದ ಹಲವು ರಾಜ್ಯಗಳಲ್ಲಿ ಲೀಗಲ್ ಎನಿಸಿಕೊಂಡಿರುವ ಸೊಪ್ಪಿನ ಗಾಡಿ! ಅದೊಂದು ಭಯಂಕರ ನೋಟ! ವೀಡ್ ವರ್ಲ್ಡ್ ಕ್ಯಾಂಡೀಸ್ ಎಂಬ ಗಾಡಿಯಲ್ಲಿ ಮಾದಕ ದ್ರವ್ಯಗಳನ್ನು ಕ್ಯಾಂಡಿ ರೂಪದಲ್ಲಿ ಮಾರಾಟ ಮಾಡುವ ಭಯಾನಕ ನೋಟ! ಅಬ್ಬಬ್ಬಾ ಎಂದರೆ ರಾತ್ರಿ ಎಂಟು ಗಂಟೆಯ ಸಮಯ ಅಷ್ಟೇ!

ಈ ಹೊತ್ತಿನಲ್ಲೇ ಮಾದಕ ವಸ್ತುಗಳ ಮಾರಾಟವೇ ? ನಂತರ ರೂಮಿಗೆ ಬಂದು ಗೂಗಲಿಸಿದಾಗ ಇದೂ ಪೊಳ್ಳು ಎಂಬ ವಿಷಯ ಅರ್ಥವಾಯ್ತು. ಮಾದಕ ವಸ್ತು ಇದೆ ಎಂದು ಮಾರುತ್ತಾರೆಯೇ ಹೊರತು ಅದು ಬರೀ ಕ್ಯಾಂಡಿ ಮಾತ್ರ ಆದರೆ ಬೆಲೆ ಮಾತ್ರ ಅತೀ ಹೆಚ್ಚು ಎಂದು!

ನ್ಯೂಯಾರ್ಕ್ ನಗರ ಅಮೆರಿಕದ ಪ್ರತೀಕ! ಮೂರು ದಿನ ಓಡಾಡಿದ ಬೀದಿಗಳಲ್ಲಿ ಆಂಗ್ಲ ಭಾಷೆ ಕೇಳಿಸಿದ್ದು ಅತೀ ಕಡಿಮೆ ಎಂದರೆ ಅಚ್ಚರಿಯಲ್ಲ! ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬಂತೆ ಬಿಳಿಯರೆಲ್ಲಾ ಅಮೆರಿಕನ್ಸ್ ಅಲ್ಲ! ಜಗತ್ತಿನ ಮೂಲೆ ಮೂಲೆಯಿಂದ ಬಂದ ಹಲವಾರು ಭಾಷೆ-ಮತ-ಮಠದ ಜನ ಅಲ್ಲಿದ್ದರು.

ಇಂದಿಗೆ ನ್ಯೂಯಾರ್ಕ್ ಈ ಮಟ್ಟಕ್ಕೆ ಜನಾಕರ್ಷಣೆ ಪಡೆದಿದೆ ಎಂದರೆ ವರ್ಣಭೇದವಿಲ್ಲದೆ ಎಲ್ಲರ ಸಹಕಾರದಿಂದ ಸಾಧ್ಯವಾಗಿದೆ ಎಂದೇ ಅರ್ಥವಲ್ಲವೇ? ಒಂದೆಡೆ ಈ ವಿಚಾರ, ಮತ್ತೊಂದೆಡೆ ನಡೆಯುತ್ತಿರುವ ಗಲಭೆಗಳನ್ನು ತೂಗಿದರೆ ಎಲ್ಲೋ ಜನ ತಾಳ ತಪ್ಪುತ್ತಿದ್ದಾರೆ ಎನಿಸುತ್ತದೆ !

ಈ ನಗರ ಒಂದರಲ್ಲೇ ಇಪ್ಪತ್ತೈದು ಸಾವಿರ ರೆಸ್ಟೋರೆಂಟ್ ಗಳು ಇವೆ ಎನ್ನುತ್ತಾರೆ! Manhattan ಒಂದರಲ್ಲೇ ಸುಮಾರು ಹದಿನಾರು ಸೇತುವೆಗಳಿವೆ ! ಹದಿನಾಲ್ಕು ಲೇನ್ ಗಳುಳ್ಳ ಜಗತ್ತಿನ ಏಕಮೇವ ಸಸ್ಪೆನ್ಷನ್ ಸೇತುವೆಯಾದ 'ಜಾರ್ಜ್ ವಾಷಿಂಗ್ಟನ್' ಸೇತುವೆ ಒಂದು ಉದಾಹರಣೆ.

ಇಷ್ಟು ವಿವಿಧ ರೀತಿಯ ಊಟೋಪಚಾರಗಳು ಇರುವ, ಇಷ್ಟೆಲ್ಲಾ ಮೂಲೆ ಮೂಲೆಯಿಂದ ಬಂದು ಹೋಗುವ / ನೆಲೆಸಿರುವ ಜನರನ್ನು ಬಂಧಿಸಲು ಹದಿನಾರೇ ಸೇತುವೆಗಳು ಸಾಕೇ ಎಂಬ ಅದ್ಬುತ ರಸ ನಿಮ್ಮ ಮನಸ್ಸಿನಲ್ಲೂ ಹರಿದಿದೆಯೇ?

ನ್ಯೂಯಾರ್ಕ್ ನಗರ ಒಂದು ವಿಶಿಷ್ಟ ನಗರ! ಜಗತ್ತಿನ ಮೂಲೆ ಮೂಲೆಯಲ್ಲಿನ ಜನರನ್ನು ತನ್ನತ್ತ ಆಕರ್ಷಿಸಿದೆ. ಬರೀ ಸೀದಾಸಾದಾ ಜನರನ್ನೇ ಆಕರ್ಷಿಸಿದ್ದರೆ ಅದು ಬೇರೆ ವಿಷಯ. ಆತಂಕವಾದಿಗಳನ್ನೂ ಆಕರ್ಷಿಸಿರುವುದು ಸೆಪ್ಟೆಂಬರ್ ಹನ್ನೊಂದರ ಘಟನೆಗಳಂಥ ಆತಂಕಗಳನ್ನೂ ತನ್ನತ್ತ ಸೆಳೆದುಕೊಂಡಿದೆ. ನವರಸದ ಮೇಲೆ ಮತ್ತೊಂದು ಎನ್ನಬಹುದಾದ ಇದು ಆತಂಕ ರಸ!

ಇಂಥದ್ದಿಲ್ಲ ಎಂಬಂತೆ ತನ್ನದೇ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಸದಾ ಓಟದಲ್ಲೇ ಸಾಗಬೇಕಾದ ಜೀವನ ಒಂದು ರೀತಿ ನಿಮ್ಮಲ್ಲಿ ಸಂಚಲನೆ ಮೂಡಿಸುವುದರಲ್ಲಿ ಸಂಶಯವೇ ಇಲ್ಲ. ಊರಿದ್ದ ಮೇಲೆ ಕೊಳೆಗೇರಿ ಎಂಬಂತೆ ಅದೂ ಇದೂ ಇದ್ದೇ ಇರುತ್ತದೆ. ಇದಕ್ಕೆ ನ್ಯೂಯಾರ್ಕ್ ಹೊರತೇನಲ್ಲ! ಬಣ್ಣಬಣ್ಣದ ಬದುಕಿಗೆ ಜಗತ್ತಿನ ಉತ್ಕೃಷ್ಟ ನಗರದಲ್ಲಿ ಒಂದು ಈ ನ್ಯೂಯಾರ್ಕ್ !

ರಂಗುರಂಗಾದ ನಗರ ಕಂಡಾಗ ವಿಸ್ಮಯ. ನಿಮಿಷಕ್ಕೊಮ್ಮೆ ಆಂಬ್ಯುಲೆನ್ಸ್ ಶಬ್ದ ಕೇಳಿ ಬಂದಾಗ ಆತಂಕ. ಪೊಲೀಸ್ ವಾಹನ ಕಂಡಾಗ ಭೀತಿ. ನಿರ್ಭಿಡೆಯ ಅವತಾರ ಕಂಡಾಗ ವ್ಯಾಕುಲ. ಟ್ರಾಫಿಕ್ ಕಂಡಾಗ ರೇಜಿಗೆ, ಗಗನಚುಂಬಿ ಕಟ್ಟಡಗಳನ್ನು ಕಂಡಾಗ ಅಚ್ಚರಿ ಹೀಗೆ ನಾನಾ ರೀತಿಯ ಭಾವನೆಗಳನ್ನು ಅರಳಿಸಿ ಮನಸ್ಸಿನಲ್ಲಿ ಅಚ್ಚಳಿಯದ ನೆನಪನ್ನು ಮೂಡಿಸಿದ ನ್ಯೂಯಾರ್ಕ್ ಗೆ ಮತ್ತೊಮ್ಮೆ ಬರುತ್ತೇನೆ ಎಂದು ಹೇಳಿ ಹೊರಟು ಬಂದಿದ್ದೇನೆ! ನೀವೂ ಬನ್ನಿ, ಹೋಗೋಣ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
America's one of the beautiful city New York explored by Oneindia columnist Srinath Bhalle on his weekend. Here is the wonderful travelogue of the New York.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X