ಶ್ರೀನಾಥ್ ಭಲ್ಲೆ ಅಂಕಣ: ಧನ್ಯತಾಭಾವವನ್ನು ತೋರುವುದೇ Thanksgiving

ಇವರ ಹಬ್ಬ ಅಂದ್ರೆ ಅವರು ತೆಗಳೋದು, ಅವರ ಹಬ್ಬ ಅಂದ್ರೆ ಇವರು ತೆಗಳೋದು ಮತ್ತು ಅದಕ್ಕೆ ಕಲ್ಲು ಹಾಕೋದು, ಹಬ್ಬದ ದಿನ ಇವರೇನು ತಿಂದರು, ಅವರೇನು ಕುಡಿದರು ಎಂಬೆಲ್ಲಾ ವಿಷಯಗಳನ್ನು ಕಿಟಕಿಯಿಂದ ಅಲ್ಲ ಬಾಗಿಲನ್ನೇ ತೆರೆದು ಆಚೆಗೆ ತೂರಿ, ಕೇವಲ ಒಂದು ಹಬ್ಬವನ್ನು ಅದರ ಇಂಗಿತದಿಂದ ಮಾತ್ರ ಅರಿತು, ಅದರಿಂದ ನಾವೇನು ಕಲಿಯಬಹುದು ಎಂದು ಮಾತ್ರ ಧನಾತ್ಮಕವಾಗಿ ನೋಡೋಣ, ಬನ್ನಿ.

Thanksgiving Day ಎಂಬ ಹಬ್ಬ ಅಮೆರಿಕದಲ್ಲಿ ಮತ್ತು ಕೆಲವು ಇತರೆ ದೇಶಗಳಲ್ಲಿ ನವೆಂಬರ್ ತಿಂಗಳ ಕೊನೆಯ ಗುರುವಾರದಂದು ಆಚರಿಸಲಾಗುತ್ತದೆ. Thanksgiving ಎಂದರೆ ಧನ್ಯತೆ ತೋರುವುದು ಅಂತ. ಯಾವುದಕ್ಕೆ ಧನ್ಯತೆ ತೋರುತ್ತಿರೋದು? ಎಲ್ಲರೂ ಬಾಯಲ್ಲಿ ಬೆಳ್ಳಿಯ ಚಮಚೆಯನ್ನು ಇಟ್ಟುಕೊಂಡೇ ಬೆಳೆದವರಲ್ಲ. ಹೀಗೆ ಹೇಳುವುದಕ್ಕಿಂತಾ, ಎಲ್ಲೋ ಕೆಲವರು ಮಾತ್ರ ಬಾಯಲ್ಲಿ ಬೆಳ್ಳಿ, ಅಥವಾ ಚಿನ್ನ ಚಮಚೆ ಇಟ್ಟುಕೊಂಡು ಬೆಳೆದಿರುತ್ತಾರೆ. ಮಿಕ್ಕವರು ಅವರವರ ಪ್ರಾಪ್ತಿ ಇದ್ದಂತೆ. ಏನು ಕೇಳ್ಕೊಂಡು ಬಂದಿರುತ್ತೇವೆಯೋ ಹಾಗೆ ಅಂತ ಕೆಲವರ ಅಂಬೋಣ, ಹಿಂದಿನ ಜನ್ಮದಲ್ಲಿ ಕೊಟ್ಟು ಹುಟ್ಟಿದ್ದರೆ ಈಗ ಅದರ ಫಲ ಉಣ್ಣುತ್ತಾರೆ ಎನ್ನುತ್ತಾರೆ ಕೆಲವರು. ಯಾವುದನ್ನೂ ಯಾರೂ ಸಾಬೀತು ಮಾಡಲಾರರು.

ರಜೆ ಇಲ್ಲ ಎನ್ನುವುದಕ್ಕಿಂತಾ ರಜೆ ತೆಗೆದುಕೊಳ್ಳುವ ಹಾಗಿಲ್ಲ
Thanksgiving Day ಎಂಬುದು ಇಂದು ನಮ್ಮಲ್ಲಿ ಏನಿದೆ ಎಂಬುದಕ್ಕೆ ಆ ದೇವನಿಗೆ ಧನ್ಯವಾದಗಳನ್ನು ಅರ್ಪಿಸುವ ದಿನ. ಎಲ್ಲ ಧರ್ಮಗಳ ಹಬ್ಬಗಳಂತೆ ಇಲ್ಲೂ ಬಂಧು- ಮಿತ್ರರೊಡನೆ ಕೂಡಿಕೊಂಡು ಹಬ್ಬವನ್ನು ಆಚರಿಸುತ್ತಾರೆ. ಬೇರೆ ಊರಿನಲ್ಲಿ ಓದುತ್ತಿರುವ, ಕೆಲಸಗಳನ್ನು ಮಾಡುತ್ತಿರುವ, ಸಂಸಾರವನ್ನೇ ನಡೆಸುತ್ತಿರುವವರು ಈ ಹಬ್ಬದಂದು ತಮ್ಮ ಮಾತಾಪಿತೃಗಳೊಡನೆ ಕೂಡಿಕೊಂಡು ಆಚರಣೆ ಮಾಡುತ್ತಾರೆ ಎಂಬುದು ಮುಖ್ಯ. ಮಕ್ಕಳಿಗೆ ಬುಧ, ಗುರು ಮತ್ತು ಶುಕ್ರವಾರಗಳಂದು ರಜೆ ಇರುತ್ತದೆ. ರಾಜ್ಯ ಸರಕಾರದ ಮತ್ತು ಕೌಂಟಿ ಡಿಪಾರ್ಟ್ಮೆಂರ್ಟ್‌ನಲ್ಲಿ ಕೆಲಸ ಮಾಡುವವರಿಗೆ ಗುರುವಾರ ಮತ್ತು ಶುಕ್ರವಾರ ರಜೆ. Black Friday ಎಂದು ಕರೆಸಿಕೊಳ್ಳುವ ಶುಕ್ರವಾರವು ವ್ಯಾಪಾರಿಗಳ ಶುಭ ಶುಕ್ರವಾರ. ಅಂಗಡಿಗಳಲ್ಲೇ ಕೆಲಸ ಮಾಡುವವರಿಗೆ ಮತ್ತು ಆಯಾ ಕಂಪನಿಯಲ್ಲಿ ಕೆಲಸ ಮಾಡುವ ಮಂದಿಗೆ ಶುಕ್ರವಾರ ರಜೆ ಇರುವುದಿಲ್ಲ. ರಜೆ ಇಲ್ಲ ಎನ್ನುವುದಕ್ಕಿಂತಾ ರಜೆ ತೆಗೆದುಕೊಳ್ಳುವ ಹಾಗಿಲ್ಲ ಎನ್ನಬಹುದು.

Srinath Bhalle Column: Thanks Giving Seems To be a Positive Attitude

ಅನಾಥೋ ದೈವರಕ್ಷಕಃ ಎಂದು ಕೇಳಿಯೇ ಇದ್ದೇವೆ
ಉಳ್ಳವರು ಶಿವಾಲಯವ ಮಾಡುತ್ತಾರೆ. ಊಟ- ಬಟ್ಟೆ- ವಸತಿಗೆ ಕೊರತೆ ಇಲ್ಲದವರು ಆಲಯಕ್ಕೆ ಹೋಗುತ್ತಾರೆ. ಇವೆರಡೂ ಅಲ್ಲದವರು ಆಲಯದ ಹೊರಗೆ ಇರುತ್ತಾರೆ. ಅನಾಥೋ ದೈವರಕ್ಷಕಃ ಎಂದು ಕೇಳಿಯೇ ಇದ್ದೇವೆ. ಅನಾಥ ಮಕ್ಕಳಿಗೆ, ಕೊಳ್ಳಲು ಚೈತನ್ಯವಿಲ್ಲದ ಸಂಸಾರಗಳ ಮಕ್ಕಳಿಗೆ ಈ ಸಂದರ್ಭದಲ್ಲಿ ಅವಶ್ಯಕ ವಸ್ತುಗಳನ್ನು ನೀಡಲಾಗುತ್ತದೆ. ಹಲವಾರು ಸಂಸ್ಥೆಗಳು ತಮ್ಮ ಕೆಲಸಗಾರರಿಂದ ದಾನ ಪಡೆದುಕೊಂಡು ಒಂದೆಡೆ ಶೇಖರಣೆ ಮಾಡುತ್ತಾರೆ. ಆ ನಂತರ ಸ್ವಯಂಸೇವಕರ ಸಹಾಯದಿಂದ ಒಂದೊಂದು ಬ್ಯಾಗ್ ಸಿದ್ಧ ಮಾಡಿಕೊಂಡು ಆ ನಂತರ ಹಂಚಿಕೆ ನಡೆಯುತ್ತದೆ.

ಒಂದು ಚೀಲದಲ್ಲಿ ಏನೇನಿರಬಹುದು? ಸ್ನಾನದ ಸೋಪು, ಟಾಯ್ಲೆಟ್ ಪೇಪರ್ ರೋಲ್, toothbrush-paste, jackets, ಟವೆಲ್, shoes, gloves, caps, ಹೊದೆಯಲು ಹೊದಿಕೆ ಹೀಗೆ ವಿವಿಧ ರೀತಿಯ ವಸ್ತುಗಳು ಅಲ್ಲಿರುತ್ತದೆ.

ಕೋವಿಡ್ ನನ್ನನ್ನು ಆಹುತಿ ತೆಗೆದುಕೊಂಡಿಲ್ಲ
ಈ ಹಬ್ಬದ ಆಸುಪಾಸಿನಲ್ಲಿ, ಕೆಲವೊಮ್ಮೆ ಕಚೇರಿಯ ಮೀಟಿಂಗ್‌ಗಳಲ್ಲಿ ಟೀಮ್ building ಚಟುವಟಿಕೆಗಳನ್ನು ಮಾಡುವಾಗ "ನಿಮ್ಮ ಜೀವನದ ಯಾವ ಐದು ವಿಚಾರಗಳ ಬಗ್ಗೆ ನೀವು ಧನ್ಯರಾಗಿದ್ದೀರಿ?' ಎಂಬ ಪ್ರಶ್ನೆಯನ್ನು ಇಡಲಾಗುತ್ತದೆ. ಸರದಿಯಲ್ಲಿ ಒಬ್ಬರ ನಂತರ ಒಬ್ಬರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಬಹುದು. ಇದು ಅವರವರ ಅನಿಸಿಕೆಯಾದ್ದರಿಂದ ಸರಿ-ತಪ್ಪು ಅಂತೇನಿಲ್ಲ.

ಕೆಲವರ ಅನಿಸಿಕೆಗಳು ಹೀಗಿರಬಹುದು ಎನ್ನಿ. 'ಮೊದಲಿಗೆ ನಾನು ಜೀವಂತವಾಗಿದ್ದೀನಿ ಕೋವಿಡ್ ನನ್ನನ್ನು ಆಹುತಿ ತೆಗೆದುಕೊಂಡಿಲ್ಲ. ಎರಡನೆಯದಾಗಿ ಈರುಳ್ಳಿ ವಿಷಯಕ್ಕೂ ನಾನು ಕಣ್ಣೀರು ಹಾಕೋದಿಲ್ಲ. ಮೂರನೆಯದಾಗಿ ವಯಸ್ಸಿಗೆ ಅನುಗುಣವಾಗಿ ಏನು ತೊಂದರೆಗಳು ಇರಬೇಕೋ ಅಷ್ಟೇ ಇದೆ. ನಾಲ್ಕನೆಯದಾಗಿ ಹೊಟ್ಟೆಬಟ್ಟೆಗೆ ಕೊರತೆ ಇಲ್ಲ. ಐದನೆಯದಾಗಿ ನೆಟ್‌ವರ್ಕ್ ಚೆನ್ನಾಗಿದೆ ಹಾಗಾಗಿ ತೊಂದರೆ ಇಲ್ಲ'.

ಮಾಸ್ಕ್ ಧರಿಸಿಯೇ ಹೊರಗೆ ಅಡಿಯಿಡೋದು
ಮೇಲೆ ಹೇಳಿದ ವಿಷಯದಷ್ಟು ವಿಚಾರಗಳು ಯಾರ ಜೀವನದಲ್ಲಿ ಇದೆಯೋ ಅವರೆಲ್ಲರೂ ಸುಖಿ. ಮೇಲ್ನೋಟಕ್ಕೆ ಸಿಂಪಲ್ ಆದ ವಿಚಾರಗಳು ವಿನೋದವಾಗಿ ಕಂಡರೂ ಆಳಕ್ಕೆ ಇಳಿದಾಗ ಭಿನ್ನವಾಗಿ ತೋರುತ್ತದೆ. ಬನ್ನಿ ಕೊಂಚ ಪಾದ ಒದ್ದೆ ಮಾಡಿಕೊಳ್ಳುವ.

'ಮೊದಲಿಗೆ ನಾನು ಜೀವಂತವಾಗಿದ್ದೀನಿ ಕೋವಿಡ್ ನನ್ನನ್ನು ಆಹುತಿ ತೆಗೆದುಕೊಂಡಿಲ್ಲ' ಎಂದರೆ ನಿಯಮಗಳನ್ನು ಪಾಲಿಸಿದ್ದೇನೆ ಹಾಗಾಗಿ ರೋಗಾಣು ನನಗೆ ಹತ್ತಿಲ್ಲ. ಇಂದಿಗೂ ಮಾಸ್ಕ್ ಧರಿಸಿಯೇ ಹೊರಗೆ ಅಡಿಯಿಡೋದು. ಬೇಕಾದ ವ್ಯಾಕ್ಸಿನೇಷನ್ ಆಗಿದೆ. ತೆಗೆದುಕೊಳ್ಳಬೇಕಾದ ಎಚ್ಚರಿಕೆ ತೆಗೆದುಕೊಂಡಿರುವುದರಿಂದ, ನಾನು ಜೀವಂತ.

ವಯಸ್ಸಿಗೆ ಅನುಗುಣವಾಗಿ ಏನು ತೊಂದರೆಗಳು ಇರಬೇಕೋ ಅಷ್ಟೇ ಇದೆ
'ಎರಡನೆಯದಾಗಿ ಈರುಳ್ಳಿ ವಿಷಯಕ್ಕೂ ನಾನು ಕಣ್ಣೀರು ಹಾಕೋದಿಲ್ಲ'. ಈರುಳ್ಳಿ ಹೆಚ್ಚಿದಾಗ ಕಣ್ಣೀರು ಬರುತ್ತದೆ, ದುಃಖವಾದಾಗಲೂ ಕಣ್ಣೀರು ಬರುತ್ತದೆ, ಅತೀ ಸಂತಸವಾದಾಗಲೂ ಕಣ್ಣೀರು ಬರುತ್ತದೆ. ಅತೀ ದುಃಖವನ್ನೂ ಪಡದೇ, ಅತೀ ಸಂತಸಕ್ಕೂ ಹೋಗದೇ ಹಿತಮಿತವಾಗಿ ಇದ್ದೇನೆ ಎನ್ನಬಹುದು. ಈರುಳ್ಳಿಯಿಂದಲೂ ಕಣ್ಣೀರು ಬಾರದು ಎಂದರೆ ಬಹುಶಃ ಈರುಳ್ಳಿ ಸೇವನೆಯೇ ಇಲ್ಲ ಅಥವಾ ಮನೆಯಲ್ಲಿನ ಮತ್ತೊಬ್ಬರು ಕೆಲಸಗಳಿಗೆ ಕೈಜೋಡಿಸಿ ಕಣ್ಣೀರು ಹಾಕದಂತೆ ನೋಡಿಕೊಂಡಿರಬಹುದು.

'ಮೂರನೆಯದಾಗಿ ವಯಸ್ಸಿಗೆ ಅನುಗುಣವಾಗಿ ಏನು ತೊಂದರೆಗಳು ಇರಬೇಕೋ ಅಷ್ಟೇ ಇದೆ'. ವಯಸ್ಸಿಗೆ ತಕ್ಕಂತೆ ಬಹುಶಃ ಕಾಲು ನೋವು ಇರಬಹುದು, ಹಲ್ಲು ಉದುರಿರಬಹುದು, ತಲೆಗೂದಲು ಬೆಳ್ಳಗಾಗಿರಬಹುದು, ಕಿವಿ ಕೇಳದಂತಾಗಿರಬಹುದು, ಕಣ್ಣು ಮಂಜಾಗಿರಬಹುದು ಹೀಗೆ. ವಯಸ್ಸನ್ನು ಪರಿಗಣಿಸದೇ, ಜಾತಿ-ಮತ- ಧರ್ಮ- ಲಿಂಗ ಭೇದವಿಲ್ಲದೇ ಕಾಡುವ ಯಾವ ದೊಡ್ಡ ಖಾಯಿಲೆಗಳೂ ಇಲ್ಲಾ ಎಂದರೆ ಅದಕ್ಕಿಂತಾ ಸೌಭಾಗ್ಯ ಇನ್ನೇನಿದೆ?

ಕೈಯೆತ್ತಿ ಬೇಡುವ ಸ್ಥಿತಿ ಇಲ್ಲ
'ನಾಲ್ಕನೆಯದಾಗಿ ಹೊಟ್ಟೆಬಟ್ಟೆಗೆ ಕೊರತೆ ಇಲ್ಲ'. ಕೈ ನೀಡಿ ಕೊಡದಿದ್ದರೂ, ಕೈಯೆತ್ತಿ ಬೇಡುವ ಸ್ಥಿತಿ ಇಲ್ಲ. ಎರಡು ಹೊತ್ತಿನ ಊಟಕ್ಕೆ ತೊಂದರೆ ಇಲ್ಲ, ತೊಡಲು ಬಟ್ಟೆಗೆ ಕೊರತೆ ಇಲ್ಲಾ ಎಂದರೆ ಅದೇ ಸುಸ್ಥಿತಿ. ಇರಲು ಸ್ವಂತ ಮನೆಯೇ ಇಲ್ಲಾ ಎಂದರೆ ಕನಿಷ್ಠ ತಲೆಯ ಮೇಲೆ ಬಾಡಿಗೆ ಸೂರು ಇದ್ದರೆ ಸಾಕು ಅಲ್ಲವೇ? ಸ್ವಂತ ಮನೆ ಇದೆ ಆದರೆ ಚಿಕ್ಕದು ಎಂದರೆ ತಪ್ಪು, ಮನೆಯು ಸ್ವಂತದ್ದಾದರೆ ಅದೇ ಸಿರಿ. ಕನಿಷ್ಠ ಉಟ್ಟಿದ್ದಾದರೂ ಹರಕಲು ಅಲ್ಲದ್ದನ್ನು ಮತ್ತೊಬ್ಬರಿಗೆ ಕೈಯೆತ್ತಿ ನೀಡಿದರೂ ಒಳಿತು. ತಿನ್ನಲು ಯೋಗ್ಯವಾದುದ್ದನ್ನು ಮತ್ತೊಬ್ಬರಿಗೆ ನೀಡಿದರೆ ಅದೇ ದೊಡ್ಡ ದಾನ.

ಸಮಯಕ್ಕೆ ಬೇಕು ಎಂದರೆ ಜನರ ಸಹಾಯವಿದೆ
'ಐದನೆಯದಾಗಿ ನೆಟ್‌ವರ್ಕ್ ಚೆನ್ನಾಗಿದೆ ಹಾಗಾಗಿ ತೊಂದರೆ ಇಲ್ಲ'. Network ಎಂದರೆ ಸಂಪರ್ಕ. ಸಾಮಾಜಿಕ ತಾಣವನ್ನೇ ಮೊದಲಿಗೆ ಉದಾಹರಣೆಯಾಗಿ ತೆಗೆದುಕೊಂಡರೆ, ನೆಟ್‌ವರ್ಕ್ ಚೆನ್ನಾಗಿದ್ದಾಗ ಅಂತರ್ಜಾಲ ಬಳಸಿ ಕೆಲಸಗಳನ್ನು ಮಾಡಬಹುದು, ಸುತ್ತಮುತ್ತಲಿನ ವಿಷಯ ತಿಳಿದುಕೊಳ್ಳಬಹುದು, ಯಾವುದೇ ಲಲಿತ ಕಲೆಯಲ್ಲೂ ಆಸಕ್ತಿ ತೋರಿ ಜೀವನದಲ್ಲಿ ಉತ್ಸಾಹಿಗಳಾಗಿರಬಹುದು ಹೀಗೆ ಒಂದಲ್ಲಾ ಒಂದು ರೀತಿ ಪ್ರಯೋಜನ ಪಡೆದು ಚೈತನ್ಯದಿಂದ ಬಾಳಬಹುದು. Network ಎಂದರೆ ಸಂಪರ್ಕ. ಈ ಅಂತರ್ಜಾಲ ಬರುವುದಕ್ಕೆ ಮುನ್ನ ಇದ್ದವರು ನಿಜವಾದ ಸ್ನೇಹಿತರು ಮತ್ತು ಬಂಧುಗಳೇ ತಾನೇ? ಎಲ್ಲರೊಂದಿಗೆ ಸಂಪರ್ಕ ಚೆನ್ನಾಗಿದೆ ಎಂದರೆ, ಸಮಯಕ್ಕೆ ಬೇಕು ಎಂದರೆ ಜನರ ಸಹಾಯವಿದೆ ಅಂತರ್ಥ. ಸಂಪರ್ಕ ಚೆನ್ನಾಗಿದೆ ಎಂದರೆ ಅದು ಏಕಮುಖವಲ್ಲ ಬದಲಿಗೆ ಬೇರೆಯವರಿಗೆ ಸಹಾಯ ಬೇಕಿದ್ದಲ್ಲಿ ತನ್ನಿಂದಲೂ ಸಹಾಯ ಅವರಿಗೆ ದೊರೆಯುತ್ತದೆ ಅಂತ.

ಈಗ ನಿಮ್ಮ ಸರದಿ. ಐದು ವಿಷಯ ಬೇಡ ಸದ್ಯಕ್ಕೆ ಮೂರು ವಿಷಯಗಳನ್ನು ಮಾತ್ರ ಸಾಕು. ಯಾವ ಮೂರು ಮುಖ್ಯವಾದ ವಿಷಯಗಳ ಬಗ್ಗೆ ನಿಮಗೆ ಹೃದಯ ಪೂರ್ವಕವಾದ ಧನ್ಯತಾಭಾವ ಇದೆ. ಹೇಳುವಿರಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+