ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀನಾಥ್ ಭಲ್ಲೆ ಅಂಕಣ: ಅಭ್ಯಾಸಗಳೋ, ದುರಭ್ಯಾಸಗಳೋ ಒಟ್ಟಾರೆ ಸರ್ವದಾ ಅವು ನಮ್ಮೊಂದಿಗೆ

|
Google Oneindia Kannada News

ಮೊದಲಲ್ಲೇ ಒಂದು expectation set ಮಾಡಿಬಿಡುವಾ. ಉಗುರು ಕಚ್ಚೋದು, ಕಣ್ಣು ತಿಕ್ಕಿಕೊಳ್ಳೋದು, ಉಗುರು ಕಿತ್ತೋದು ಎಂಬೆಲ್ಲಾ ಅಭ್ಯಾಸ-ದುರಭ್ಯಾಸಗಳು ಇಂದಿನ ವಿಷಯವಲ್ಲ. ಇವೆಲ್ಲಾ ಸರ್ವದಾ ದುರಭ್ಯಾಸ ಅಂತಲೇ ಅಂದುಕೊಂಡರೆ ಇಂದಿನ ಮಾತು ಒಬ್ಬರ ಸಂಗೀತ ಮತ್ತೊಬ್ಬರ ಗಲಭೆ ಅಂತಾರಲ್ಲಾ ಹಾಗೆ.

ಎಲ್ಲಿಂದ ಆರಂಭಿಸುವಾ? ಇನ್ನೆಲ್ಲಿಂದಾ? ಬೆಳಿಗ್ಗೆ ಏಳೋದ್ರಿಂದಲೇ ಆರಂಭಿಸುವಾ. ಬೆಳಿಗ್ಗೆ ಏಳಬೇಕು ಅಂದ್ರೆ ಅದಕ್ಕೂ ಮುಂಚೆ ಮಲಗಬೇಕು. ರೋಮ್ಯಾಂಟಿಕ್ ಆಲೋಚನೆ ಪಕ್ಕಕ್ಕೆ ಇರಿಸಿ, ಸದ್ಯಕ್ಕೆ ಒಬ್ಬರೇ ಮಲಗಿರೋದು ಅಂದುಕೊಳ್ಳಿ ಸಾಕು. ಕೆಲವರಿಗೆ ಎಡಕ್ಕೆ ಹೊರಳಿ ಮಲಗುವ ಅಭ್ಯಾಸ, ಕೆಲವರಿಗೆ ಬಲಕ್ಕೆ. ಕೆಲವರಿಗೆ ತಮ್ಮ ಬೆನ್ನಿನ ಮೇಲೆ ಮಲಗುವ ಅಭ್ಯಾಸ, ಮತ್ತೂ ಕೆಲವರಿಗೆ ಹೊಟ್ಟೆಯ ಮೇಲೆ ಮಲಗಿ ಅಭ್ಯಾಸ. ನಾಲ್ಕೇ ರೀತಿ ಮಲಗಲು ಸಾಧ್ಯ ಅಲ್ಲವೇ ಎನ್ನದಿರಿ, ಇನ್ನೂ ಸಾಕಷ್ಟು ಬಗೆ ಇದೆ.

ಕೂತರೆ ಹಂಗೇ ನಿದ್ದೆ ಬಂದೇ ಬರುತ್ತದೆ
ಹೌದು, ನಮ್ಮೆಲ್ಲರಿಗೂ ಕೂತು ನಿದ್ದೆ ಮಾಡಿ ಅಭ್ಯಾಸ ಇದೆ ಅಲ್ಲವೇ? ಕನಿಷ್ಠ ಪಕ್ಷ ಅಂದ್ರೂ ಬಸ್ಸಿನಲ್ಲಿ ಕೂತಾಗ ಅಥವಾ ಯಾವುದೋ ಊರಿಗೆ ಹೋಗುವಾಗ ಮತ್ತೊಬ್ಬರು ಕಾರು ಓಡಿಸುವಾಗ ಬೇರೆ ಸೀಟಿನಲ್ಲಿ ಕೂತಿರುವ ನಿಮಗೆ ನಿದ್ದೆ ಮಾಡೋದೇ ಕೆಲಸ ತಾನೇ? ಮಧ್ಯಾಹ್ನ ಊಟವಾದ ಮೇಲೆ ಕುರ್ಚಿ ಅಥವಾ ಸೋಫಾದ ಮೇಲೆ ಕೂತರೆ ಹಂಗೇ ನಿದ್ದೆ ಬಂದೇ ಬರುತ್ತದೆ. ಕಚೇರಿಯಲ್ಲಿ ಇರ್ತೀವಿ ಅಂದುಕೊಳ್ಳಿ, ಎದುರಿಗೆ ಇರುವವರು ಏರಿಳಿತವಿಲ್ಲದ ಏಕನಾದದಲ್ಲಿ ಮಾತನಾಡುತ್ತಾ ಇದ್ದರೆ, ಕೂತಲ್ಲೇ ನಿದ್ದೆ ಬರೋದು ಖಚಿತ.

 Srinath Bhalle Column: Habits And Bad Habits Are Always With Us

ಪ್ರತೀ ದಿನ ಮಧ್ಯಾಹ್ನ ಒಂದು ಘಂಟೆಗೆ ಏಕನಾದದಲ್ಲಿ ಮಾತನಾಡುವ ವ್ಯಕ್ತಿಯೊಡನೆ ಒಂದು ಘಂಟೆಯ ಕಾಲ ಒಂದು ಮೀಟಿಂಗ್‌ನಲ್ಲಿ ಇರುತ್ತೀರಿ ಅಂದುಕೊಳ್ಳಿ. ಅವರೊಂದಿಗೆ ಇದ್ದೂ ಇದ್ದೂ ಮೀಟಿಂಗ್‌ನಲ್ಲಿ ಮಲಗಿಬಿಡೋದೇ ನಿಮಗೆ ಅಭ್ಯಾಸವಾಗಿ ಹೋಗಿರುತ್ತದೆ ಎಂದುಕೊಂಡರೆ, ವಾರಾಂತ್ಯದಲ್ಲೂ ಆ ಸಮಯಕ್ಕೆ ನಿದ್ದೆ ಖಂಡಿತ ಬರುತ್ತದೆ ಅಲ್ಲವೇ? ಇದನ್ನು ಅಭ್ಯಾಸ ಎನ್ನಬೇಕೇ? ಅಥವಾ ದುರಭ್ಯಾಸ ಎನ್ನಬೇಕೇ? ನನ್ನ ಪ್ರಕಾರ ಎರಡೂ ಅಲ್ಲ, ನಿಮ್ಮ ದೇಹ ಸಂದರ್ಭಕ್ಕೆ ತಕ್ಕಂತೆ ಪ್ರತಿಸ್ಪಂದಿಸುತ್ತಿದೆ ಅಂತರ್ಥ ಅಷ್ಟೇ.

Recommended Video

BCCI ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ರಾ ವಿರಾಟ್?ಅಸಲಿಗೆ ಆಗಿದ್ದೇನು? | Oneindia kannada

ತಲೆಯ ಮೇಲೆ ಕುಟ್ಟಿ ಮಲಗುವ ಅಭ್ಯಾಸವೇ?
ಬಾಗಿಲು ಕಾಯುತ್ತಾ ನಿಂತಿರುವ ವ್ಯಕ್ತಿಗೆ ನಿಂತಲ್ಲೇ ನಿದ್ದೆ ಬರುತ್ತಾ? ಒಂದೇ ಸಮನೆ ನಿಂತೂ, ನಿಂತಲ್ಲೇ ಅಭ್ಯಾಸ ಬೆಳೆಸಿಕೊಂಡಿರಬಹುದೇ? ರಾತ್ರಿಯ ಕಾವಲುಗಾರ ಕೂತಲ್ಲಿ ಅಥವಾ ನಿಂತಲ್ಲಿ ಮಲಗುವ ಅಭ್ಯಾಸ ಬೆಳೆಸಿಕೊಂಡಿರಬಹುದೇ?

ಆಯ್ತು ಬಿಡಿ, ಮಲಗಿದ್ದಂತೂ ಆಯ್ತು. ಸದ್ಯಕ್ಕೆ ಹಾಸಿಗೆಯ ಮೇಲೆ ಮಲಗಿ ಏಳುವ ಹೊತ್ತು ಎಂದುಕೊಳ್ಳಿ. ಅಲಾರ್ಮ್ ಹೊಡೆದ ನಂತರ ಏಳುವ ಅಭ್ಯಾಸವೋ? ಅಲಾರ್ಮ್ ಹೊಡೆದಾಗ ಅದರ ತಲೆಯ ಮೇಲೆ ಕುಟ್ಟಿ ಮಲಗುವ ಅಭ್ಯಾಸವೇ? ಅಲಾರ್ಮ್ ಗಡಿಯಾರ ಇಟ್ಟುಕೊಳ್ಳುವಿರೋ? ಮೊಬೈಲ್‌ನಲ್ಲಿ ಅಲಾರ್ಮ್ ಇಟ್ಟುಕೊಳ್ಳುವಿರಾ? ಪಕ್ಕದ ಮನೆ ಕೋಳಿ ಕೊಕ್ಕೋ ಎಂದಾಗ ಏಳುವ ಅಭ್ಯಾಸವೇ? ಅಥವಾ ಕುಕ್ಕರಿನ ಸೀಟಿಗೆ ಏಳುವಿರಾ? ಮಹಡಿ ಮನೆಯ ಯಜಮಾನ ಬಚ್ಚಲು ಮನೆಯಲ್ಲಿ ಹಲ್ಲುಜ್ಜುವಾಗ ಮಾಡುವ ಗಲಭೆಯಿಂದ ಏಳುವ ಅಭ್ಯಾಸವೇ? ಒಟ್ಟಾರೆ ನಿಮಗೆ ಹೇಗೆ ಎಚ್ಚರವಾಗುತ್ತದೆ ?

ಸ್ತ್ರೀ ಸಿಟ್ಟು ಮಾಡಿಕೊಂಡ ಮೂಲ
ನದಿಮೂಲ, ಋಷಿಮೂಲ, ಸ್ತ್ರೀಮೂಲ ಇತ್ಯಾದಿಗಳ ವಿಚಾರಗಳ ಮೂಲ ತಿಳಿಯಲು ಹೋಗಬಾರದಂತೆ. ಸ್ತ್ರೀ ಸಿಟ್ಟು ಮಾಡಿಕೊಂಡ ಮೂಲ, ನಿದ್ದೆಯಿಂದ ಹೇಗೆ ಏಳ್ತೀರಾ ಎಂಬ ಮೂಲ ಅರಿತು ಅದನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದರೆ ಸಮಯಕ್ಕೆ ಸಹಾಯಕ್ಕೆ ಬರುತ್ತದೆ. ಮುಂದಿನ ಬಾರಿ ಕೇಳಿದಾಗ ಹೇಳಿ ಆಯ್ತಾ? ಈಗ ಮುಂದೆ ಹೋಗೋಣ ಬನ್ನಿ.

ಮೊದಲಿಗೆ ನಿದ್ದೆಯಿಂದ ಏಳುವ ಅಭ್ಯಾಸ ಹೇಗೆ ಎನ್ನುವುದಕ್ಕಿಂತಾ ನೆಮ್ಮದಿಯಾಗಿ ಎದ್ದೇಳುವುದೇ ಸೌಭಾಗ್ಯ ಅಲ್ಲವೇ? ಹಾಗಾಗಿ ಯಾವುದೇ ಅಭ್ಯಾಸದಿಂದಲಾದರೂ ಏಳಿ ಒಟ್ಟಿನಲ್ಲಿ ಧಡಾರೆಂದು ಏಳಬೇಡಿ ಆರಾಮವಾಗಿ ಏಳಿ. ಈಗ ಏಳುವ ಅಭ್ಯಾಸಕ್ಕೆ ಬರೋಣ. ಬಲಕ್ಕೆ ಹೊರಳಿ ಏಳುವ ಅಭ್ಯಾಸವೇ? ಎಡಕ್ಕೆ ಹೊರಳಿ ಏಳುವ ಅಭ್ಯಾಸವೇ? ಅಥವಾ ಎರಡೂ ಬೇಡ ಅಂತ ಏಳುವ ಮುನ್ನ ಬೆನ್ನ ಮೇಲೆ ಮಲಗಿ ಹಾಗೆಯೇ ಎದ್ದು ಕೂರುವಿರಾ? ಹೊಟ್ಟೆಯ ಮೇಲೆ ಮಲಗುವ ಅಭ್ಯಾಸ ಇರುವವರು ಬಹುಶಃ ಸುಮ್ಮನೆ ಹಾಗೆಯೇ ಮಂಡಿಯೂರಿ ಎದ್ದು ಕೂರುವುದಿಲ್ಲಾ ಎಂದುಕೊಳ್ಳುವೆ.

ಒಂದು ಪುಟ್ಟ ಬ್ರೇಕ್ ತೆಗೆದುಕೊಂಡು ಒಮ್ಮೆ ಹಿಂದಿರುಗಿ ನೋಡಿ
ಈಗ ಎದ್ದು ಕೂತಿದ್ದೂ ಆಯ್ತು. ಎದ್ದ ಕೂಡಲೇ ಹಸ್ತಗಳೆರಡನ್ನೂ ತೆರೆದು 'ಕರಾಗ್ರೇ' ಹೇಳಿಕೊಳ್ಳುವಿರಾ? ಅಥವಾ ಫೋನ್ ಕೈಗೆ ತೆಗೆದುಕೊಳ್ಳುವಿರಾ? ದೇವರಪಟ ನೋಡಿ ಏಳುವ ಅಭ್ಯಾಸವೇ? ಅಥವಾ ಪಕ್ಕದಲ್ಲಿರುವ ಮನೆಯಾತ ಅಥವಾ ಮನೆಯಾಕೆ ಅಥವಾ ಮೊಮ್ಮಕ್ಕಳನ್ನು ನೋಡಿ ಏಳುವ ಅಭ್ಯಾಸವೇ?

ಸದ್ಯಕ್ಕೆ ಒಂದು ಪುಟ್ಟ ಬ್ರೇಕ್ ತೆಗೆದುಕೊಂಡು ಒಮ್ಮೆ ಹಿಂದಿರುಗಿ ನೋಡಿ. ಇಲ್ಲಿಯವರೆಗೆ ಮಾಡಿರುವ ಕೆಲಸಗಳು ಅಂದ್ರೆ ಮಲಗಿದ್ದು, ಮತ್ತು ಎದ್ದಿದ್ದು ಅಷ್ಟೇ! ಇಷ್ಟರಲ್ಲೇ ಅದೆಷ್ಟು ಅಭ್ಯಾಸಗಳು ನಮ್ಮಲ್ಲಿ ಹಾಸುಹೊಕ್ಕಾಗಿವೆ ಎಂದು ನೋಡಿದರೆ ಅಚ್ಚರಿಯಾಗೋದಿಲ್ಲವೇ? ಈಗ ಬನ್ನಿ ಒಂದಷ್ಟು ಮುಂದೆ ಸಾಗುವ.

ಬಿಸಿ ನೀರು ಕುಡಿಯುವ ಅಭ್ಯಾಸ
ನಿಮಗೆ ಕಾಫಿ ಕುಡಿದು ಅಭ್ಯಾಸವೇ? ಟೀ ಕುಡಿದು ಅಭ್ಯಾಸವೇ? ಕೆಲವರು ಬಿಸಿ ನೀರು ಕುಡಿಯುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಕೆಲವರು ತಣ್ಣೀರು ಕುಡಿಯುತ್ತಾರೆ. ಕೆಲವರು ಏನನ್ನೂ ಕುಡಿಯೋದಿಲ್ಲ ಅಂತಾದರೆ ಕೆಲವರು ಎದ್ದು ಅರ್ಧ ಘಂಟೆಯವರೆಗೆ ಏನನ್ನೂ ಕುಡಿಯುವುದಿಲ್ಲ. ಎಲ್ಲರಿಗೂ ಅವರವರ ಅಭ್ಯಾಸ.

ಈಗ ಈ ಕುಡಿಯುವುದೇ ಅಭ್ಯಾಸವಾದರೆ ಅದೆಂಥಾ ಟೀ? ಖಾಲೀ ಟೀ? ಮಸಾಲೆ ಟೀ? ಗ್ರೀನ್ ಟೀ? ಯಾವ ಅಭ್ಯಾಸ ನಿಮ್ಮದು? ಇನ್ನು ಕಾಫಿಯೇ ಆದರೆ ಸಕ್ಕರೆ ಸಹಿತ? ಸಕ್ಕರೆ ರಹಿತ? ಕಾಫಿ ಅಂದ್ರೆ ಬರೀ ಕಾಫಿಯೋ? ಕಾಫಿ ಜೊತೆ ದಿನಪತ್ರಿಕೆ? ಕಾಫಿ ಜೊತೆ ಮೊಬೈಲ್? ಕಾಫಿ ಜೊತೆ ಬಿಸ್ಕೆಟ್? ನಿಮ್ಮ ಅಭ್ಯಾಸ ಏನು? ಬರೀ ಕಾಫಿ ಕುಡಿಯುವುದು ಅಂತ ಅಂದುಕೊಂಡರೂ, ಅಲ್ಲೊಂದು ಅಭ್ಯಾಸ ಅಡಗಿದೆ. ಕೆಲವರು ಎತ್ತಿದ ಕಾಫಿ ಗ್ಲಾಸ್ ಇಳಿಸುವುದಿಲ್ಲ. ಅರ್ಥಾತ್ ಪೂರ್ಣ ಗಮನ ಕಾಫಿಯತ್ತಲೇ. ಕುಡಿದು ಮುಗಿಸಿ ಲೋಟ ಕೆಳಗೆ ಇರಿಸಿದಾಗ ಅದೇನೋ ಯುದ್ಧವೇ ಗೆದ್ದಂತೆ.

ಕಾಫಿ ಜೊತೆ ಸ್ನಾಕ್ಸ್ ಅನ್ನೋದು ಕೆಲವರ ಅಭ್ಯಾಸ
ಕೆಲವರು ಕಾಫಿ ಕುಡಿಯೋದು ಧೂಮಪಾನ ಮಾಡಿದಂತೆ. ಒಂದು ಸಿಪ್ ಕುಡಿಯೋದು ಅಲ್ಲಿಡೋದು. ನಿಮಿಷವೋ ಎರಡು ನಿಮಿಷವೋ ಆದ ಮೇಲೆ ಮತ್ತೊಂದು ಸಿಪ್. ಕೆಲವರು ಇದಕ್ಕೂ ಆಚೆ. ಒಂದು ಲೋಟ ಕಾಫಿಯನ್ನು ಒಂದೆರಡು ಘಂಟೆಗಳೇ ಕುಡಿಯಬಹುದು, ಕೆಲವೊಮ್ಮೆ ತಣ್ಣಗಾಯ್ತು ಅಂತ ಮೂರು ಘಂಟೆಯಾದ ಮೇಲೆ ಚೆಲ್ಲುತ್ತಾರೆ. ನಿಮ್ಮ ಅಭ್ಯಾಸ ಹೇಗೋ?

ಕಾಫಿ ಜೊತೆ ಸ್ನಾಕ್ಸ್ ಅನ್ನೋದು ಕೆಲವರ ಅಭ್ಯಾಸ ಅಂತ ಹೇಳಿದೆ. ಇಲ್ಲೊಂದು ಸೂಕ್ಷ್ಮ ಅಡಗಿದೆ. ಏನದು? ಕೆಲವರು ಸ್ನಾನವಿಲ್ಲದೆ ಒಂದು ಹನಿ ನೀರನ್ನೂ ಸೇವಿಸುವುದಿಲ್ಲ. ಕೆಲವರು ಹಲ್ಲುಜ್ಜದೆ ಕಾಫಿ-ಟೀ ಸೇವಿಸಿದರೆ, ಕೆಲವರು ಹಲ್ಲುಜ್ಜಿಯೇ ಟೀ-ಕಾಫಿ. ಕೆಲವರು ಹಲ್ಲುಜ್ಜಿದ ನಂತರ ಕಾಫಿ ಜೊತೆ ಸ್ನಾಕ್ಸ್ ರೂಪದಲ್ಲಿ ಬಿಸ್ಕೆಟ್ ಅಥವಾ ಬನ್ ಇತ್ಯಾದಿ. ಮೊದಲಲ್ಲಿ ಹೇಳಿದ್ದ 'ಒಬ್ಬರ ಸಂಗೀತ, ಮತ್ತೊಬ್ಬರ ಗದ್ದಲ' ಎಂಬುದು ಇಲ್ಲಿಗೆ ಅನ್ವಯಿಸುತ್ತದೆ ನೋಡಿ. 'ಹಲ್ಲುಜ್ಜದೇ ತಿನ್ನೋದಾ?' ಅಂತ ಹೇಳಿ ಇದೆಲ್ಲಾ ಪಾಶ್ಚಾತ್ಯ ಸಂಸ್ಕೃತಿ ಅಂತ ಲೇಬಲ್ ಹಚ್ಚುವುದು ಸರ್ವೇಸಾಮಾನ್ಯ. ಒಂದು ಪುಟ್ಟ ವಿಷಯ ಹೇಳಿಬಿಡ್ತೀನಿ. ನಿಮ್ಮ ಹಲವಾರು ಸೆಲೆಬ್ರಿಟಿ ತಾರೆಗಳು ಹಲ್ಲುಜ್ಜದೇ ಶೂಟಿಂಗ್‌ಗೆ ಬರುತ್ತಾರೆ.

ಅನಿಷ್ಟಕ್ಕೆ ಶನೇಶ್ವರ ಕಾರಣ
ಒಂದು ಚಿಕ್ಕ ಸನ್ನಿವೇಶ ಮಾತ್ರ ಇಲ್ಲಿ ನಾನು ಉಲ್ಲೇಖಿಸಿರೋದು. ಕೇವಲ ಮಲಗಿ, ಎದ್ದು, ಕೂತು, ಕಾಫಿ- ಟೀ ಕುಡಿದ್ವಿ, ತಿಂದ್ವಿ ಅಷ್ಟೇ. ಅಷ್ಟರಲ್ಲೇ ಇಷ್ಟೆಲ್ಲಾ ಅಭ್ಯಾಸಗಳನ್ನು ನೋಡಿದೆವು. ಇವೆಲ್ಲಾ ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿ ಇರುವ ಸನ್ನಿವೇಶಗಳೇ ಆದರೆ ಅಭ್ಯಾಸಗಳು ಮಾತ್ರ ಹಲವಾರು. ಈ ಅಭ್ಯಾಸಗಳು ತಪ್ಪಾ? ಈ ಅಭ್ಯಾಸಗಳು ಸರಿಯಾ? ಇದು ಸರಿಯೂ ಅಲ್ಲಾ, ತಪ್ಪೂ ಅಲ್ಲಾ. ಅವರವರ ಅಭ್ಯಾಸ ಅವರಿಗೆ ಸರಿ. ಅವರದಲ್ಲದ ಅಭ್ಯಾಸಗಳು ತಪ್ಪು ಅಂತ ಆದಾಗ ಮತ್ತೊಬ್ಬರ ಕಡೆ ಬೆಟ್ಟು ಮಾಡಿ ತೋರಿಸಿ 'ಅನಿಷ್ಟಕ್ಕೆ ಶನೇಶ್ವರ ಕಾರಣ' ಎಂಬ ಅಭ್ಯಾಸ ಯಾಕೆ? ಬೇರೆಲ್ಲಾ ಅಭ್ಯಾಸ ನಿಮ್ಮ ಇಷ್ಟದಂತೆ ಇರಲಿ. ಆದರೆ ಮತ್ತೊಬ್ಬರ ಮೇಲೆ ಗೂಬೆ ಕೂರಿಸುವ ಅಭ್ಯಾಸವನ್ನು ಹವ್ಯಾಸ ಮಾಡಿಕೊಳ್ಳದೇ ಇರೋಣ. ಏನಂತೀರಿ?

ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

English summary
Srinath Bhalle Column: Practices, Habits and Bad Habits are always with us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X