• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಏನೋ ಮಿಸ್ ಆಗ್ತಾ ಇದೆ, ನಾನಿಲ್ಲಿಗೆ ಬರಬಾರದಿತ್ತು, ನಾನಿಲ್ಲಿಗೆ ಸೇರಿದವನಲ್ಲ!

By ಶ್ರೀನಾಥ್ ಭಲ್ಲೆ, ರಿಚ್ಮಂಡ್
|

ಹಲವೊಮ್ಮೆ ಹಾದಿ ತಪ್ಪಿ, ಆ ದಾರಿಯಲ್ಲಿ ಸಾಗುವಾಗ ಅಪರಿಚಿತ ಜನ / ಸನ್ನಿವೇಶ / ಅಂಗಡಿ ಮುಂಗಟ್ಟು ಅಥವಾ ನಿರ್ಜನತೆ ಕಣ್ಣಿಗೆ ರಾಚುತ್ತೆ. ಹೌದು ಹಾದಿ ತಪ್ಪಿ ಇಲ್ಲಿ ಬಂದಿದ್ದೇವೆ ಎಂಬ ಅರಿವು ಮೂಡುತ್ತದೆ. ಹಾದಿ ತಪ್ಪಿದಾಗ ಮತ್ತು ಹಾದಿ ತಪ್ಪಿದ್ದೇವೆ ಎಂಬ ಅರಿವು ಮೂಡುವ ಮಧ್ಯೆ ಇರುವ ಮನಸ್ಥಿತಿಯೇ "ಏನೋ ಮಿಸ್ ಆಯ್ತು . . . ನಾನಿಲ್ಲಿಗೆ ಬರಬಾರದಿತ್ತು . . . ಇದು ನಾನಿರಬೇಕಾದ ಸ್ಥಳವಲ್ಲ . . ನಾನಿಲ್ಲಿಗೆ ಸೇರಿದವನಲ್ಲ" ಎಂಬ ಹಲವು ರೀತಿಯ ಮಾನಸಿಕ ಗೊಂದಲಗಳು.

ಇಂಥಾ ಗೊಂದಲಗಳ ಹುಟ್ಟು ಕೇವಲ exit ಮಿಸ್ ಆಗಿ ಮತ್ಯಾವುದೋ ಬೀದಿಗೆ ಹೋದಾಗ ಮಾತ್ರವಲ್ಲದೇ ಜೀವನದ ನಾನಾ ಹಂತಗಳಲ್ಲೂ ಹುಟ್ಟುತ್ತವೆ. ಏಕೆ ಅಂದರೆ ನಮ್ಮ ಜೀವನದಲ್ಲಿನ ಪ್ರತೀ ನಿಮಿಷದ ಹಾದಿಯನ್ನೂ ನಾವು ಸವೆಸುತ್ತಲೇ ಸಾಗುತ್ತೇವೆ. ಸವೆಸುತ್ತಾ ಸಾಗಿಸೋ ಎಲ್ಲ ನಿಮಿಷಗಳನ್ನೂ ಸವಿಯುತ್ತಾ ಸಾಗೋದು ಸುಲಭವಲ್ಲ ನೋಡಿ.

ಜೀವನದಲ್ಲಿ ಕ್ರಿಕೆಟ್ ಇದೆಯೋ, ಕ್ರಿಕೆಟ್'ನಲ್ಲಿ ಜೀವನವೋ? ಜೀವನದಲ್ಲಿ ಕ್ರಿಕೆಟ್ ಇದೆಯೋ, ಕ್ರಿಕೆಟ್'ನಲ್ಲಿ ಜೀವನವೋ?

ಈ ಆಲೋಚನೆ ಮೊಳಕೆಯೊಡೆದ ಸಂದರ್ಭದಲ್ಲೇ ಆಂಗ್ಲದ ಒಂದು ಹಾಡನ್ನು FM ರೇಡಿಯೋದಲ್ಲಿ ಮೂಡಿಬಂದಿತ್ತು. ಅದರಲ್ಲಿನ ಸಾಲುಗಳು ಮನದಲ್ಲೇ ಕೂತವು.

Sometimes I feel like something is gone here
Something is wrong here, I don't belong here

ಈ ಸಾಲುಗಳನ್ನು ಸಂದರ್ಭಾನುಸಾರ ನಾನಾ ವಿಧವಾಗಿ ಅರ್ಥೈಸಿಕೊಳ್ಳಬಹುದು. ಎಲ್ಲ ಸಾಲುಗಳು ಎಲ್ಲ ಸನ್ನಿವೇಶದಲ್ಲಿ ಹೊಂದಿಕೆಯಾಗಲೇಬೇಕಿಲ್ಲ. ಕೆಲವೊಂದನ್ನು ನೋಡೋಣ.

ಗಂಡನ ಆಫೀಸ್ ಪಾರ್ಟಿಗೆ family'ಯನ್ನೂ ಕರೆದುಕೊಂಡು ಬರಬಹುದು ಎಂದಿರುತ್ತದೆ ಎಂದುಕೊಳ್ಳಿ. ಆಗ ಹೆಂಡತಿಯು ಗಂಡನ ಜೊತೆ ಹೋಗಲೇಬೇಕಾದ ಪರಿಸ್ಥಿತಿ ಉಂಟಾಗಬಹುದು. ಆತನ ಆಫೀಸಿನ ಮಂದಿಯಲ್ಲಿ ಆಕೆಗೆ ಯಾರೊಬ್ಬರ ಪರಿಚಯವೂ ಇಲ್ಲ. ಹಾಗೆಯೇ ಅವರವರ ಮನೆಯವರ ಪರಿಚಯವೂ ಇಲ್ಲ ಎಂದುಕೊಳ್ಳಿ. ಪಾರ್ಟಿಗೆ ಕಾಲಿಟ್ಟ ಒಂದೈದು ಹತ್ತು ನಿಮಿಷಗಳಲ್ಲಿ ಗಂಡ ಅವನ ಜನರ ಮಧ್ಯೆ ಕಳೆದೇ ಹೋಗಬಹುದು. ಸುತ್ತಲೂ ಜನರಿದ್ದರೂ ಗಾಢ ಒಂಟಿತನ ಕಾಡುತ್ತದೆ. ತಾನು ಬರಬಾರದ ಜಾಗಕ್ಕೆ ಬಂದೆ, ನನ್ನವರಲ್ಲದ ಜನರ ನಡುವೆ ಇದ್ದೇನೆ ಎಂಬ "I don't belong here" ಮನಸ್ಥಿತಿ.

ಹಲವೊಮ್ಮೆ ಸಣ್ಣ ಗುಂಪಿನಲ್ಲಿ ಮಾತುಕತೆಯಾಡುವ ಸಮಯದಲ್ಲಿ ಅಲ್ಲಿರಲೂ ಆಗದೆ ಹೊರನಡೆಯಲೂ ಆಗದ ಪರಿಸ್ಥಿತಿ ಉಂಟಾಗುತ್ತದೆ. ಹೀಗೇ ಒಮ್ಮೆ ಒಂದು ಮದುವೆಯ receptionಗೆ ಹೋಗಿದ್ದೆ. social hour'ನಲ್ಲಿ ಒಂದಷ್ಟು ಮಂದಿಯನ್ನು ಭೇಟಿ ಮಾಡಿದ ಮೇಲೆ reception ಸಮಾರಂಭದ ಸಮಯಕ್ಕೆ ದೊಡ್ಡ ಹಾಲ್ ಒಳಗೆ ನಡೆದೆ. ನಾವು ಯಾವ tableನಲ್ಲಿ ಕೂರಬೇಕು ಅಂತ ಈ ಮುಂಚೆಯೇ ಹೇಳಿದ್ದರು. ಹೀಗಿರುವಾಗ ನನಗೆ ಇಷ್ಟ ಬಂದಂತೆ ನನಗೆ ಅರಿವಿರುವ ಜನರ ಜೊತೆ ಕುಳಿತುಕೊಳ್ಳಲು ಆಗುವುದಿಲ್ಲ ತಾನೇ. ನಾನಿದ್ದ ಟೇಬಲ್'ನಲ್ಲಿ ನನ್ನೊಂದಿಗೆ ಇದ್ದವರು ಎಪ್ಪತ್ತು ದಾಟಿದ ಗಂಡ ಹೆಂಡತಿ. ಒಬ್ಬರಲ್ಲ ಇಬ್ಬರಲ್ಲ ಒಟ್ಟು ಮೂರು ಜೊತೆ - ಆರು ಜನ. ಒಂದಷ್ಟು ಹಾಯ್ ಅಂತೆಲ್ಲಾ ಆದ ಮೇಲೆ ಸಹಜವಾಗಿ ಅವರ ಮಾತುಗಳು ಅವರ ದಿನಗಳಿಗೆ, ಅವರ ಮೊಮ್ಮಕ್ಕಳು, ಸೊಸೆ ಅಂತೆಲ್ಲಾ ಸಾಗಿತ್ತು, ಅಷ್ಟು ಮಂದಿಯ ಮಧ್ಯೆ ಇದ್ದರೂ ಕಾಡಿತ್ತು I don't belong here ಎಂಬ ಒಂಟಿತನ.

ಬೆಲ್ಟ್ ಬಿಗಿದು ನಿಲ್ಲೋದು ಅಂದ್ರೆ ಟೊಂಕ ಕಟ್ಟಿ ನಿಲ್ಲೋದು ಅಂತ ಅರ್ಥ! ಬೆಲ್ಟ್ ಬಿಗಿದು ನಿಲ್ಲೋದು ಅಂದ್ರೆ ಟೊಂಕ ಕಟ್ಟಿ ನಿಲ್ಲೋದು ಅಂತ ಅರ್ಥ!

ಒಮ್ಮೆ ಹೀಗೇ ಕಚೇರಿಯ ಸಮಯದಲ್ಲಿ ಕಾಫಿಗೆ ಹೋದೆ. ಅಲ್ಲೊಂದಿಷ್ಟು ನನ್ನ ಪಕ್ಕದ ಟೀಮಿನ ಯುವಶಕ್ತಿ ಸೇರಿದ್ದರು. ನಾನು ಅಲ್ಲಿಗೆ ಹೋದ ಕೂಡಲೇ ಮಾತನಾಡಿಸಿದ ಮೇಲೆ ಅವರೊಂದಿಗೇ ಕೂರಬೇಕಾಯ್ತು. ಒಂದೆರಡು ಉಭಯಕುಶಲೋಪರಿ ಮಾತು ಆದ ಮೇಲೆ ಒಬ್ಬ 'ಇವತ್ತು ಬೆಳಿಗ್ಗೆ ನನ್ನ ಮಗ ಬೋರಲು ಬಿದ್ದ' ಅಂತ ಚಿತ್ರ ತೋರಿಸಿದ, ಮತೊಬ್ಬ ಅವನ ಅವಳಿಜವಳಿ ಮಕ್ಕಳ ಬಗ್ಗೆ ಹೇಳಿಕೊಳ್ಳುತ್ತಿದ್ದ. ಅದು ಪ್ರತಾಪವೋ ಪ್ರಲಾಪವೋ ಗೊತ್ತಾಗಲಿಲ್ಲ. ಮತ್ತೊಬ್ಬಳು ತಾನು ಮದುವೆಯಾಗಲಿರುವ ಹುಡುಗನ ಬಗ್ಗೆ ಹೀಗೇ ಸಾಗಿತ್ತು. ಆಗೊಬ್ಬ ಕೇಳಿದ 'ನಿನಗೆ ಮದುವೆ ಆಗಿದ್ಯಾ?' ಅಂತ. ಆಗ ನನ್ನ ಮನದಲ್ಲಿ ನಡೆದಿದ್ದ ಗೊಂದಲ I don't belong here.

ಇಂದಿನ ಹಲವಾರು ವಾಟ್ಸಪ್ಪ್ ಗುಂಪುಗಳು, ಫೇಸ್ಬುಕ್ ಗುಂಪುಗಳನ್ನೇ ಪರಿಗಣಿಸಿದರೆ ಅಲ್ಲಿನ ಸದಸ್ಯರು ಆ ಗುಂಪಿನ ಮೂಲ ಉದ್ದೇಶ ಮರೆತು ತಮ್ಮದೇ ಹಾದಿಯಲ್ಲಿ ನಡೆದು ಅಡ್ಮಿನ್'ಗಳಿಗೆ ತಲೆನೋವು ತರುತ್ತಾರೆ. ಈ ಮಾತು ಈಗೇಕೆ ಬಂತು ಎಂದರೆ ಯಾವುದೋ ಒಂದು ಮಾತು ಶುರುವಾಗಿ ಅದು ಇನ್ನೊಂದು ರೂಪ ತಾಳಿ ಅದು ಮತ್ತೊಂದು ಹಾದಿಯತ್ತ ಸಾಗಿದಾಗ I don't belong here ಅನ್ನಿಸೋದು ಸಹಜ. 'ಮನಕೆ ಬಾರದ ಠಾವನ್ನು ಬಿಟ್ಟು ತೊಲಗಬೇಕು' ಎಂಬ policyಯನ್ನು ಪಾಲಿಸಬಹುದಲ್ಲಾ ಎಂದು ಹೇಳಬಹುದು, ಆದರೆ ಮಗು ತೊಡೆಯ ಮೇಲೆ ಸೂಸು ಮಾಡಿತೆಂದು ತೊಡೆಯನ್ನೇ ಕತ್ತರಿಸಿಕೊಳ್ಳಲಾರದು. ಪ್ರತೀ ಬಾರಿಯೂ ಹೀಗೆ ಹೊರನಡೆಯುತ್ತಾ ಸಾಗಿದರೆ ಬರೀ ಒಂಟಿತನ ಕಾಡುವುದಿಲ್ಲ ಬದಲಿಗೆ ಒಂಟಿಯಾಗಿ ನಿಲ್ಲಬೇಕಾದೀತು.

ಈ I don't belong here ಎಂಬುದೂ ಒಂದು ಮಾನಸಿಕ ಸ್ಥಿತಿ. ಈ ಸ್ಥಿತಿಗೆ ಹಲವಾರು ಕಾರಣಗಳಿರುತ್ತವೆ. ಒಂದು ಹಸ್ತದ ಐದು ಬೆರಳುಗಳೇ ಒಂದೇ ಸಮನಾಗಿ ಇರದಿರುವಾಗ ಲೋಕದ ಜನರು ನಮ್ಮಂತೆ ಇಲ್ಲ ಎಂದು ಕೊರಗುವುದು ತರವಲ್ಲ. ಇವರು ಸರಿ ಇಲ್ಲ, ಅವರು ಸರಿ ಇಲ್ಲ, ನನ್ನ ಹೆಂಡತಿ/ಗಂಡನ ಗುಣ ನನಗಿಂತಾ ಬಹಳಾ ಭಿನ್ನ ನನಗೆ ಸರಿ ಹೋಗುವುದಿಲ್ಲಾ ಎಂಬೆಲ್ಲಾ ಅಂದುಕೊಳ್ಳುತ್ತಾ ಸಾಗುವವರು ಅರಿತುಕೊಳ್ಳಬೇಕಾದುದು ಇಷ್ಟೇ "ಮೊದಲಿಗೆ ನಾನು ಸರಿ ಇದ್ದೇನೆಯೇ?" ಅಂತ. ಯಾವ ಒಬ್ಬನಿಗೆ ಮಿಕ್ಕೆಲ್ಲವೂ ತಪ್ಪಾಗಿಯೇ ಕಾಣುವುದೋ ಅವರೇ ಸರಿ ಇಲ್ಲ ಎಂಬುದು ನಗ್ನಸತ್ಯ.

ಎಲ್ಲ ಸಂದರ್ಭಗಳಲ್ಲೂ ಎಲ್ಲರೂ ಎಲ್ಲರೊಂದಿಗೆ ಬೆರೆತು ಇರಲಾಗದು. ಭಿನ್ನತೆಯೇ ಜೀವನ. ಅರಿವು ಮೂಡಿಸಿಕೊಳ್ಳೋದು ಹೇಗೆ? ನಾವು ವ್ಯವಹರಿಸುವ ರೀತಿ, ನಮ್ಮ ವ್ಯಕ್ತಿತ್ವ, ನಾವು ಯಾವುದಕ್ಕೆ ಬೆಲೆ ಕೊಡುತ್ತೇವೆ, ನಮ್ಮ ಆಸಕ್ತಿಗಳೇನು ಇತ್ಯಾದಿಗಳನ್ನು ಪಟ್ಟಿ ಹಾಕಿಕೊಂಡು ಅಂಥಾ ಸೂಕ್ತ ಮನೋಭಾವದ ಜನರೊಡನೆ ಬೆರೆಯುವುದು 'ಮಿಕ್ಕವರಿಗೆ' ಕ್ಷೇಮ. ಇಲ್ಲವಾದಲ್ಲಿ "I don't belong here"ಗಳು "You don't belong here"ಗಳಾಗಿ ಪರಿವರ್ತನೆ ಆಗುವುದಕ್ಕೆ ಹೆಚ್ಚು ಸಮಯ ಬೇಕಾಗೋದಿಲ್ಲ.

'ವಿಶ್ವ ತಲೆ ದಿನ' ಅಂತ ಯಾವುದೂ ಇಲ್ಲ, ದಿನವೂ ತಲೆ ದಿನವೇ! 'ವಿಶ್ವ ತಲೆ ದಿನ' ಅಂತ ಯಾವುದೂ ಇಲ್ಲ, ದಿನವೂ ತಲೆ ದಿನವೇ!

ಕಾಲೇಜು ದಿನಗಳಲ್ಲಿ ನನ್ನ ಸಹಪಾಠಿಯೊಬ್ಬನಿದ್ದ. ವಿಚಿತ್ರ ಮಾನವ (ಪ್ರಾಣಿ?). ಕೊನೆಯ ವರ್ಷದ ಪಾರ್ಟಿಗೆ ಹೋಗಿದ್ದಾಗ ಎಲ್ಲರೂ ಊಟ ಮಾಡುವಾಗ ಇವನೊಬ್ಬ ಮಾತ್ರ ಖಿನ್ನನಾಗಿ ಕೂತಿದ್ದ. ಏನಾಯ್ತು ಅಂತ ಕೇಳಿದಾಗ "ನಾವಿಲ್ಲಿ ಇಷ್ಟೆಲ್ಲಾ ಊಟ ಮಾಡ್ತಿದ್ದೀವಿ, ಎಷ್ಟೋ ಸಾರಿ ವೇಸ್ಟ್ ಮಾಡ್ತೀವಿ ಕೂಡ. ನಿಮಗೆಲ್ಲಾ ಬುದ್ದಿ ಇದೆಯಾ? ಇಂಥಾ ಪಾರ್ಟಿ ಬೇಕಾ? ದೇಶದ ಎಷ್ಟೋ ಕಡೆ ಒಪ್ಪತ್ತಿಗೆ ಊಟಕ್ಕಿಲ್ಲ..." ಹೀಗೆ ಹೇಳುತ್ತಾ ಸಾಗಿದ. ಅವನ ಆಲೋಚನೆಗಳು ಸರಿ ಇರಬಹುದು ಆದರೆ ಇತ್ತೀಚಿಗೆ ಒಮ್ಮೆ ಅವನನ್ನು ನೋಡಿದೆ. ಇಂದಿಗೂ ಅವನು ಇಂಥಾ ವಿಚಾರಗಳನ್ನೇ ಆಲೋಚಿಸಿ ಕೊರಗುತ್ತಿದ್ದಾನೆಯೇ ಹೊರತು ಅವನ ಆಲೋಚನೆಗಳ ದಿಕ್ಕಿನತ್ತ ಒಂದೂ ಕೆಲಸ ಮಾಡಿಲ್ಲ. ಇಂಥವರು 'I don't belong here' ಅಂದುಕೊಳ್ಳುತ್ತಾರೆ. ಇತರರು ಇಂಥವರನ್ನು ಕಂಡು "you don't belong here" ಎಂದುಕೊಳ್ಳುತ್ತಾರೆ.

ಪ್ರತೀ 'ನಾನು'ಗೆ 'ನೀನು' ಅಂಬೋದು ಇರುತ್ತದೆ. ಈ ನಾನು - ನೀನುಗಳಲ್ಲಿ ಇರುವ ನಾಲ್ಕೂ ಅಕ್ಷರಗಳು 'ನ'ಕಾರಗಳೇ . . . ಇದರಿಂದ ಹೊರಬಂದಾಗ ಮಾತ್ರ ಜೀವನ ಸಕಾರಾತ್ಮಕ.

ಇಂಥಾ ವಿಚಾರಗಳೆಲ್ಲಾ ಬಂದಾಗ ನಾನು ಗೌರವಿಸುವುದೇ ಮದುವೆಯಾಗಿ ಗಂಡನ ಮನೆಗೆ ಬಂದ ಹೆಂಗಳನ್ನ. ಹುಟ್ಟಿದ ಮನೆಯಲ್ಲಿ ಸ್ವೇಚ್ಛೆಯಿಂದ ಎಲ್ಲರೊಂದಿಗೆ ಇದ್ದು ಜೀವನ ನಡೆಸುವ ಆಕೆ, ಧುತ್ತನೆ ಒಂದು ದಿನ ಮತ್ತೊಬ್ಬರ ಮನೆಯಲ್ಲಿ ಉಳಿಯಬೇಕು ಎಂದಾಗ ಆರಂಭದಲ್ಲಿ ಆಕೆ ಇನ್ನೆಷ್ಟು ಸಾರಿ "I don't belong here" ಅಂದುಕೊಂಡಿರಬಹುದು. ಗಂಡ ಮತ್ತು ಆತನ ಮನೆಯವರು ಆಕೆಗೂ ಆ ಮನೆಯಲ್ಲಿ ಮತ್ತು ತಮ್ಮ ಮನಗಳಲ್ಲಿ ಒಂದು ಸ್ಥಾನ ಕಲ್ಪಿಸಿದರೆ ಈ ಅನಿಸಿಕೆ ತಕ್ಕ ಮಟ್ಟಿಗೆ ಕಡಿಮೆಯಾಗುತ್ತದೆ. ಯತ್ನಗಳು ಎರಡೂ ಕಡೆಯಲ್ಲಿ ಇರಬೇಕು. ಮದುವೆಯಾಗಿ ಹತ್ತಾರು ವರ್ಷಗಳೇ ಉರುಳಿದ್ದರೂ ಎಷ್ಟೋ ಮನಗಳು "I don't belong here" ಎಂಬ ಮನಸ್ಥಿತಿಯಿಂದ ಹೊರಗೇ ಬರುವುದಿಲ್ಲ.

ಮಾನವ ಸಂಘಜೀವಿ. ನಾಲ್ಕು ಜನರೊಡನೆ ಹೊಂದಿಕೊಂಡು ಹೋಗದೆ ಹೋರಾಡಿಕೊಂಡೇ ಇರುತ್ತೇನೆ ಎಂದರೆ ಅವನಲ್ಲೂ ಅವನ ಸುತ್ತಲೂ ಅಸಮಾಧಾನದ ಹೊಗೆಯೇ ಸುತ್ತಿರುತ್ತದೆಯೇ ವಿನಃ ಮತ್ತೇನೂ ಇರುವುದಿಲ್ಲ. "ನಾನಿಲ್ಲಿಗೆ ಸೇರಿದವನಲ್ಲ" ಅನ್ನೋದು ಸರಿ ಇಲ್ಲ. ನೀರಿನಂತೆ ಆಯಾ ಸಂದರ್ಭದ ಪಾತ್ರೆಗಳಿಗೆ ಹೊಂದಿಕೊಂಡು, ಆಯಾ ರೂಪ ತಾಳಿಕೊಂಡು ಸಾಗುವಂತೆ ಇರಬೇಕು. ನೀವೇನಂತೀರಿ?

English summary
'Sometimes I feel like something is gone here. Something is wrong here, I don't belong here'. Is this the right way of thinking? Is something wrong with us only? Srinath Bhalle writes, you think.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X