ನೀವು Multitaskerರೋ? Unitaskerರೋ?

Posted By: ಶ್ರೀನಾಥ್ ಭಲ್ಲೆ, ರಿಚ್ಮಂಡ್
Subscribe to Oneindia Kannada

ಬಹುಕಾರ್ಯಕ ಎಂದರೆ ಒಂದು ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಕೆಲಸಗಳನ್ನು ಮಾಡುವುದು ಅಂತ ಅರ್ಥ. ಕೇಳೋಕ್ಕೆ ಬಹಳಾ ಸಿಂಪಲ್ಲು! ಆದರೆ ಇದರ ಹಿಂದಿರೋ ಸತ್ಯಾಸತ್ಯತೆಗಳು ಮಾತ್ರ ಮಹಾ ಕಾಂಪ್ಲಿಕೇಟೆಡ್! ಯಾಕೆ ಕಾಂಪ್ಲಿಕೇಟೆಡ್ ಅಂದ್ರೆ, ಎಷ್ಟೋ ಜನ ತಾವು 'ಮಲ್ಟಿ-ಟಾಸ್ಕ್' ಮಾಡ್ತೀವಿ ಅಂತ ಹೇಳ್ಕೋತಾರೆ ಅಷ್ಟೇ, ಆದರೆ ಒಂದು ಕೆಲಸವೇ ನೆಟ್ಟಗೆ ಮಾಡೋಲ್ಲ! ತುಂಬಾ ನೇರವಾಗಿ ಹೇಳಿದೆ ಅಂತ ನಿಮಗೆ ಅನ್ನಿಸಿದರೆ ನಾಳೆಯಿಂದಲೇ ಹಾಗೆ ಹೇಳುವವರನ್ನು ಸೂಕ್ಷ್ಮವಾಗಿ ಗಮನಿಸಿ.

ಬಹುಕಾರ್ಯಕದ ಬಗ್ಗೆ ಒಂದಷ್ಟು ವಿಚಾರ ನಾನೇ ಹೇಳಿಬಿಡ್ತೀನಿ, ಆಗ ನಿಮಗೆ ಕೆಲಸ ಸಲೀಸಾಗಬಹುದು.

ನಗಬಾರದಪ್ಪಾ ನಗಬಾರದು, ನಗಬಾರದಮ್ಮಾ ನಗಬಾರದು!

ಟೀಮ್ ಮೀಟಿಂಗ್ ನಡೆಯುತ್ತಾ ಇರುತ್ತೆ. ಮೀಟಿಂಗ್ ಮಾಡೋದ್ಯಾಕಪ್ಪಾ? ಯಾರಿಗೋ ಏನೋ ಪ್ರಶ್ನೆ ಇರುತ್ತೆ ಅಥವಾ ಏನೋ ಸಂಕಟ ಇರುತ್ತೆ. "ನನಗೊಂದು ಪ್ರಶ್ನೆ ಇದೆ ಮಿಸ್. ರಶ್ಮಿ. ವಿಷಯ ಏನಪ್ಪಾ ಅಂದ್ರೆ ... " ಅಂತ ಶುರು ಮಾಡಿ ಎರಡು ಮೂರು ನಿಮಿಷ ಮಾತನಾಡುತ್ತಾರೆ. ಆಮೇಲೆ ತಮ್ಮ ಸಂಕಟ ಪರಿಹಾರಾರ್ಥವಾಗಿ ರಶ್ಮಿ ಮಾತನಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಮಾತು ನಿಲ್ಲಿಸುತ್ತಾರೆ. ಆ ರಶ್ಮಿ ಮೇಡಂ ಬಾಯಿಬಿಡ್ತಾರೆ "ಓ! ಸಾರಿ! ಐ ವಾಸ್ Multitasking. Can you repeat?" ಪ್ರಶ್ನೆ ಕೇಳಿದವರು ನೀವೇ ಆಗಿದ್ದರೆ ಹೇಗನ್ನಿಸುತ್ತದೆ?

Are you multitasker or unitasker

ಇಷ್ಟಕ್ಕೂ ಈ ಬಹುಕಾರ್ಯಕ ಹೇಗೆ ಅಂತ? ಸ್ನಾನ ಮಾಡುವಾಗ ಉಪ್ಪಿಟ್ಟು ತಿನ್ನುವುದೇ? ಪ್ಯಾಂಟ್ ಹಾಕಿಕೊಳ್ಳುವಾಗ ಬನೀನ್ ಧರಿಸಿಸುವುದೇ? ಹಲ್ಲುಜ್ಜುವಾಗ ಕಾಫಿ ಕುಡಿಯುವುದೇ? ಖಂಡಿತ ಇದ್ಯಾವುದೂ ಬಹುಕಾರ್ಯಕ ಅಲ್ಲ. ಇವೆಲ್ಲಾ ಒಂದಾದ ನಂತರ ಮತ್ತೊಂದು ಮಾಡುವ ಕೆಲಸಗಳೇ!

ಒಂದರ್ಥದಲ್ಲಿ ಬಹುಕಾರ್ಯಕ ಅನ್ನೋದು ಸುಳ್ಳು. ಬಹುಕಾರ್ಯಕ ಎಂಬುದೂ ಒಂದರ ನಂತರ ಇನ್ನೊಂದು ಮಾಡುವ ಕೆಲಸಗಳೇ! ಎರಡು ಕೆಲಸಗಳ ನಡುವೆ ಅತಿಸೂಕ್ಷ್ಮವಾದ ಸಮಯದ gap ಕೊಟ್ಟು ಕೆಲಸಗಳನ್ನು ಮಾಡಿದಲ್ಲಿ ಅದು ಬಹುಕಾರ್ಯಕ ಎನಿಸಿಕೊಳ್ಳುತ್ತದೆ.

ನವರಸಾಯನ ಅಂಕಣ: ರಿಯಾಲಿಟಿ ಷೋ ಪಿಡುಗೋ, ಪರಿಹಾರವೋ?

ಹೀಗೊಂದು ಸಮೀಕ್ಷೆ ನಡೆಸಲಾಯಿತು. ಏನಪ್ಪಾ ಅಂದರೆ, ಎರಡು ಗೆರೆ ಹಾಕುವುದು. ಮೊದಲ ಸಾಲಿನಲ್ಲಿ A to Z ಬರೆಯುವುದು, ಎರಡನೆಯ ಸಾಲಿನಲ್ಲಿ ಒಂದರಿಂದ ಇಪ್ಪತ್ತಾರರವರೆಗೆ ಬರೆಯುವುದು. ಇದಕ್ಕೆ ತೆಗೆದುಕೊಂಡ ಸಮಯ ಎಷ್ಟು ಅಂತ ಬರೆದಿಟ್ಟುಕೊಳ್ಳುವುದು. ನಂತರ, ಮೊದಲ ಸಾಲಲ್ಲಿ A ಎರಡನೆಯ ಸಾಲಿನಲ್ಲಿ 1, ಮೊದಲ ಸಾಲಲ್ಲಿ B ಎರಡನೆಯ ಸಾಲಿನಲ್ಲಿ 2, ಹೀಗೆ ಬರೆಯುತ್ತಾ ಸಾಗಿ 26'ಕ್ಕೆ ನಿಲ್ಲಿಸುವುದು. ಆಗ ತೆಗೆದುಕೊಂಡ ಸಮಯ ಮೊದಲಿನದಕ್ಕಿಂತ ಎರಡರಷ್ಟಾಗಿರುತ್ತದೆ. ಇದೇ ಕೆಲವರ Multitasking!

Are you multitasker or unitasker

Multitasking ಮಾಡುವಾಗ ದಿನದ ಕೊನೆಗೆ ಮನಸ್ಸು ಎಷ್ಟು ತ್ರಾಸಗೊಂಡಿರುತ್ತದೆ ಎಂದರೆ ಮಲಗಿದರೆ ನಿದ್ದೆ ಹತ್ತೋಲ್ಲ! ಏಕೆ ಹೀಗೆ ಎಂದರೆ, ಮೆದುಳು ಮೊದಲ ಕೆಲಸದಲ್ಲಿ ತೊಡಗಿರುತ್ತದೆ. ಕೂಡಲೇ ಮತ್ತೊಂದು ಕೆಲಸ ತೆಗೆದುಕೊಂಡಾಗ ಇದೇ ಮೆದುಳು ಮೊದಲ ಕೆಲಸವನ್ನು ಪಕ್ಕಕ್ಕೆ ಇಟ್ಟು ಇನ್ನೊಂದು ಕೆಲಸವನ್ನು ಕೈಗೆತ್ತಿಕೊಳ್ಳಬೇಕು. ಹೀಗೆ ಹತ್ತು ಹಲವು ಕೆಲಸಗಳನ್ನು ಮಾಡುತ್ತಾ ಹೋದಲ್ಲಿ ಮೆದುಳಿಗೇ ತಲೆ ಕೆಟ್ಟುಹೋಗುತ್ತದೆ, ನಿಜವಾಗಲೂ!

Multitaskingನಲ್ಲಿ ತಪ್ಪುಗಳು ಹೆಚ್ಚುತ್ತವೆ! ಕಚೇರಿಯಲ್ಲೇ ತೆಗೆದುಕೊಳ್ಳಿ, ಮೀಟಿಂಗ್ ನಡೆವ ಸಮಯದಲ್ಲಿ ಯಾವುದೋ ಈಮೈಲ್ ಬರೆಯುತ್ತಾ ಇರುತ್ತಾರೆ. ಇವರನ್ನು ಪ್ರಶ್ನೆ ಕೇಳಿದಾಗ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಏನೋ ಉತ್ತರ ಕೊಡುವುದು ಆಗುತ್ತದೆ ಅಥವಾ ಮೀಟಿಂಗ್ ಕಡೆ ಗಮನವಿದ್ದು ಉತ್ತರ ಸರಿಯಾಗಿ ನೀಡಿದರೂ ಈಮೈಲ್ ತಪ್ಪಾಗುವ ಸಂಭವ ಇರುತ್ತದೆ.

ಮಾತು ಮಾತಿನ ಬಗ್ಗೆ ಪೀಠಿಕೆ ಸಾಕು, ಇನ್ನು ನೀವು ಶುರುಹಚ್ಚಿಕೊಳ್ಳಿ!

ಅರ್ಥಾತ್, Multitasking ಎಂದರೆ ತಪ್ಪು ಹೆಚ್ಚು, ಅನುಕೂಲ ಕಡಿಮೆ ಎಂದೇ? ಹಾಗೇನಿಲ್ಲ, ಮೆದುಳಿಗೆ ಸರಿಯಾದ ತರಬೇತಿ ನೀಡುವುದು ಅತ್ಯವಶ್ಯಕ. A trained brain can perform multitasking. ಇದೊಂದು ರೀತಿ ಹಗ್ಗದ ಮೇಲೆ ನಡೆದಂತೆ. ಇಲ್ಲಿ ನಡೆಯುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಮುಂದೆ ನೋಡುತ್ತಾ ಸಾಗುವುದು. ಕಣ್ಣುಗಳು, ಕಾಲುಗಳು ಒಟ್ಟಿಗೆ ಕೆಲಸ ಮಾಡಬೇಕು.

ನನ್ನ ಅನುಭವದಲ್ಲಿ Multitasking'ಗೆ ಉತ್ತಮ ಉದಾಹರಣೆ ಎಂದರೆ ಸಂಗೀತ. ಅದು ಅಭ್ಯಾಸವೇ ಆಗಿರಬಹುದು, ಕಚೇರಿ ನಡೆಸುವುದೇ ಆಗಿರಬಹುದು. ಒಬ್ಬ ಹಾಡುಗಾರನ ಉದಾಹರಣೆ ತೆಗೆದುಕೊಂಡರೆ, ಒಂದು ಸಮಯದಲ್ಲೂ ಆತ/ಆಕೆ ಎಷ್ಟು ಕೆಲಸ ಮಾಡಬಹುದು? ಮೊದಲಿಗೆ ಶ್ರುತಿ. ಸಾಹಿತ್ಯವನ್ನು ನೆನಪಿನಿಂದ ಉದುರಿಸಬೇಕು. ಅದರ ಜೊತೆ ಸಂಗತಿಗಳು (variation). ನಂತರ ಹಾಡಿನ ಸರಿಸಮಕ್ಕೆ ತಾಳ. ಆ ತಾಳದ ಜೊತೆ ಲೆಕ್ಕ. ಹಾಡುಗಾರರ ಜೊತೆಗೆ ನಟುವಾಂಗ ಇದ್ದಾರೆ ಎಂದರೆ ಇನ್ನೊಂದು ಕಥೆ. ಕೆಲವು ಹಾಡುಗಾರರು ವಾದ್ಯವನ್ನೂ ನುಡಿಸುತ್ತಾ ಹಾಡುತ್ತಾರೆ. ಇದು Multitasking. ಒಂದು ಹಳಿ ತಪ್ಪಿದರೆ ಕೇಳುಗರಿಗೆ ಕರ್ಕಶ!

ಇಷ್ಟೆಲ್ಲಾ ಹೇಳಿದ್ರಲ್ಲಾ, ನೀವು Multitasking ಮಾಡ್ತೀರೋ? ನಾನೇನು ಮಾಡ್ತೀನಿ ಅಂಬೋದನ್ನ ಹೇಳ್ತೀನಿ, ಅದು Multitasking ಹೌದೋ ಅಲ್ಲವೋ ನಿಮಗೆ ಬಿಟ್ಟಿದ್ದು. ನಾನು ಮಾಡೋ ಕೆಲಸಗಳು ಎಂದರೆ ಟಿವಿಯಲ್ಲಿ ಸಿನಿಮಾ ನೋಡುವಾಗ ಬಟ್ಟೆಯ ಇಸ್ತ್ರಿ, ಟ್ರೆಡ್-ಮಿಲ್ ಮೇಲೆ ಓಡುವಾಗ ವಾಟ್ಸಾಪ್ ನೋಡುವುದು, ಈ ಲೇಖನ ಬರೆಯುವಾಗ ಆಲೂಗಡ್ಡೆ ಹುಳಿ ಮಾಡ್ತಿದ್ದೆ, ಹೀಗೆ...

ನನ್ನ ಸ್ನೇಹಿತನ ಮಲ್ಟಿ-ಟಾಸ್ಕಿಂಗ್ ಕೊಂಚ ಬೇರೆ ರೀತಿಯದ್ದು! ಅವನಿಗೆ ಕರೆ ಮಾಡಿ 'ಬ್ಯುಸಿ ಇದ್ಯೇನೋ?' ಅಂತ ನಾನು ಕೇಳಲು "ಇಲ್ಲಾ ಗುರೂ, ಮಲ್ಟಿ-ಟಾಸ್ಕಿಂಗ್ ಮಾಡ್ತಿದ್ದೀನಿ. ಹೇಳೋ ಪರವಾಗಿಲ್ಲಾ" ಅಂದ. ನಾನು ಇನ್ನೇನು ಮಾತು ಶುರು ಮಾಡಬೇಕು ಅನ್ನೋವಾಗ Toilet flush ಶಬ್ದ ಕೇಳಿಸಿತು. ನನ್ನ ಕರೆಯನ್ನು ಕತ್ತರಿಸಿದೆ!

ಕೆಲಸದ ಇಂಟರ್ವ್ಯೂ'ಗೆ ಹೋದಾಗ ಸಾಮಾನ್ಯ ಪ್ರಶ್ನೆ ಅಥವಾ ಆ ಕೆಲಸಕ್ಕೆ ಬೇಕಾದ ಅವಶ್ಯಕತೆಗಳಲ್ಲಿ ಒಂದು "ನೀವು Multitasking ಮಾಡಬಲ್ಲಿರಾ ಅಂತ". ಅರ್ಥಾತ್, ಒಂದೇ ಪ್ರಾಜೆಕ್ಟ್ ಕೆಳಗೆ ಹತ್ತು ಹಲವು ಕೆಲಸಗಳನ್ನು ಮಾಡುವ ತಾಕತ್ ಇದೆಯೇ ಅಂತ!

ಪುಟ್ಟ ಉದಾಹರಣೆ ಎಂದರೆ ಒಂದು ಮೀಟಿಂಗ್'ಗೆ ನೀವು ಮತ್ತು ನಿಮ್ಮ ಮೆನೇಜರ್ ಹೋಗುವುದಿದೆ ಎಂದುಕೊಳ್ಳಿ. ನಿಮ್ಮ ಮೆನೇಜರ್'ಗೆ ಬೇರೊಂದು ತುರ್ತು ಕೆಲಸ ಬಂದು ಆತ/ಆಕೆ ಮೀಟಿಂಗ್'ಗೆ ಬರಲಾಗದೆ ಇದ್ದಾಗ ನೀವು ಮಾತ್ರ ಆ ಮೀಟಿಂಗ್'ಗೆ ಹೋಗಬೇಕಾಗುತ್ತದೆ. ಅಲ್ಲದೆ ಅಲ್ಲಿ ನಡೆವ ವಿಷಯಗಳನ್ನೂ ಬರೆದಿಟ್ಟುಕೊಳ್ಳಬೇಕು. ಯಾರಾದರೂ ಪ್ರಶ್ನೆ ಕೇಳಿದರೆ ತಕ್ಕ ಉತ್ತರ ಕೊಡಬೇಕು. ಅವರೇನು ಪ್ರಶ್ನೆ ಕೇಳಿದ್ದಾರೆ ಎಂಬುದನ್ನು ಬರೆದಿಟ್ಟುಕೊಂಡು ಮೆನೇಜರ್'ಗೆ ಒಪ್ಪಿಸಬೇಕು. ಇಷ್ಟೆಲ್ಲದರ ಮಧ್ಯೆ ಮತ್ಯಾವುದೋ ಡೆಪಾರ್ಟ್ಮೆಂಟ್'ನವರು ಏನೋ ಪ್ರಶ್ನೆ ಮೆಸೇಜ್ ಮಾಡುತ್ತಾರೆ. ಅದಕ್ಕೆ ಉತ್ತರ ಕೊಡಬೇಕು. ಮಧ್ಯೆ ಮಧ್ಯೆ ಪಾನೀಯಂ ಸಮರ್ಪಯಾಮಿ ಅಂತ ನಿಮ್ಮ ಮೊಬೈಲ್ ನೋಡಬೇಕು! ಇದಪ್ಪಾ Multitasking ಅಂದರೆ. ಎಡವಟ್ಟು ಏನಪ್ಪಾ ಅಂದರೆ ಸ್ನೇಹಿತರಾರೋ ಅದೇ ಸಮಯಕ್ಕೆ "ಏಮಂಡಿ ಬಾಗುನ್ನಾರ" ಅನ್ನೋ ಪ್ರಶ್ನೆಗೆ "ನೇನು ಬಾಗುನ್ನಾನು" ಅಂತ ಆಂಗ್ಲದಲ್ಲಿ ಟೈಪಿಸೋದು. ಅದು ಡೇವಿಡ್'ಗೆ ತಲುಪಿ, 'ಸಾರಿ ರಾಂಗ್ ವಿಂಡೋ' ಅಂತ ಕ್ಷಮೆಯಾಚಿಸುವುದು ಬೇರೆ ವಿಷಯ!

ವ್ಯಾಸರಂತೆ ಹೇಳುತ್ತಾ ಸಾಗುವುದು, ಗಣೇಶನಂತೆ ಅರ್ಥೈಸಿಕೊಂಡು ಬರೆಯುವುದು ಸುಲಭದ ಕೆಲಸವಲ್ಲ!

ಒಂದು ಕೆಲಸವನ್ನು ಶ್ರದ್ಧೆಯಿಂದ ಮಾಡಲು ಏಕಾಗ್ರತೆ ಬೇಕು. Multitasking ಮಾಡಲು ಬಹಳ ಏಕಾಗ್ರತೆಗಳು ಬೇಕು. ಇದನ್ನು 'ಬಹುಗ್ರತೆ' ಅನ್ನುತ್ತಾರೇನೋ ಗೊತ್ತಿಲ್ಲ!

ಈಗ Multitasking ವಿಷಯ ತೆಗೆದುಕೊಂಡರೆ ಯಾವ ಜಾತಿಯವರು ಉತ್ತಮ? ಥತ್! ಇಲ್ಲೂ ಜಾತಿ-ಮತ ಇದೆಯೇ ಎನ್ನದಿರಿ. ನಾನು ಕೇಳಿದ್ದು ಗಂಡು ಜಾತಿಯೋ ಹೆಣ್ಣು ಜಾತಿಯೋ ಅಂತ! "ಓ! ಹಾಗೆ. ಆದರೂ ಚೆನ್ನಾಗಿ ಜೋಕ್ ಮಾಡ್ತೀರಾ ಬಿಡಿ. ಮಕ್ಕಳಿಗೆ ಡಬ್ಬಿ ರೆಡಿ ಮಾಡುತ್ತಾ, ಮಗನಿಗೆ ಅವನ ಬ್ಯಾಗ್ ಎಲ್ಲಿದೆ ಎಂದು ತಿಳಿಸುತ್ತಾ, ಗಂಡನಿಗೆ ಕಾರಿನ ಕೀ ಅಲ್ಲೇ ನೇತುಹಾಕಿದೆ ಎಂದು ತೋರಿಸುತ್ತ, ಮಾವನಿಗೆ ಕನ್ನಡಕ ನಿಮ್ಮ ಮುಖದ ಮೇಲೆ ಇದೆ ಎಂದು ಸನ್ನೆ ಮಾಡಿ ತೋರಿಸುತ್ತಾ, ಪಾತ್ರೆ ತೊಳೆಯಲು ಬಂದ ಕೆಲಸದಾಕೆಗೆ ಕಾಫಿ ಮಾಡಿಕೊಡುವ 'ಹೌಸ್-ವೈಫ್' ಮುಂದೆ ನಾವೇನ್ರಿ? ಗಂಡು ಜಾತಿಯೋ ಹೆಣ್ಣು ಜಾತಿಯೋ ಅಂತ ಕೇಳ್ತೀರಲ್ಲಾ?

ಹೆಣ್ಣು ಹೀಗೇಕೆ ಎಂಬ ಪ್ರಶ್ನೆ ಸಾಮಾನ್ಯ ಉತ್ತರ 'ಅದು ಅವರ ಬ್ಲಡ್'ನಲ್ಲೇ ಇದೆ ಬಿಡಿ'. ನನ್ನಂತೆ ಎಷ್ಟೋ ಹೆಣ್ಣುಗಳಿಗೆ ನನ್ನದೇ ಬ್ಲಡ್ ಗ್ರೂಪ್ ಇದೆಯಪ್ಪಾ! ನನಗೇಕೆ ಹೀಗೆ?

ವಿಷಯ ಏನಪ್ಪಾ ಅಂದರೆ, ಒಂದಾನೊಂದು ಕಾಲದಲ್ಲಿ ಗಂಡ ಬೇಟೆಗೆ ಹೋಗಿದ್ದಾಗ ಆ ಹೆಣ್ಣು ಅವನೇನು ಹೊಡೆದು ತರುತ್ತಾನೋ ಅದಕ್ಕೆ ತಕ್ಕಂತೆ ಊಟದ ವ್ಯವಸ್ಥೆ ಮಾಡಬೇಕಿತ್ತು! "ಹನಿ, ಜಿಂಕೆ ಹೊಡೆದು ತರ್ತಾ ಇದ್ದೀನಿ" ಅಂತ ಅವನು ಹೇಳೋಕ್ಕೆ ಮೊಬೈಲ್ ಕಾಲ ಅಲ್ಲವದು. ಹಾಗಾಗಿ, ಅವನು ಹೊಡೆದು ತಂದ ಪ್ರಾಣಿಯನ್ನು ತೊಳೆದು, ಕೆರೆದು ಇನ್ನೇನೋ ಮಾಡಿ ಅಡುಗೆ ಸಿದ್ದ ಮಾಡುವ, ಸರಿ ಸಮಾನವಾಗೇ ಗಂಡನ ಆರೈಕೆ, ಮಕ್ಕಳೆಡೆ ಗಮನ ಇತ್ಯಾದಿ ಇತ್ಯಾದಿ ನಡೆಸಿಕೊಂಡೇ ಬಂದಿರುವ ಹೆಣ್ಣಿಗೆ Multitasking ಅನ್ನೋದು ರಕ್ತದಲ್ಲೇ ಬಂದಿದೆ. ಸೋಫಾದ ಮೇಲೆ ಕೂತು-ಮಲಗಿ ಟಿವಿ ನೋಡುತ್ತಾ, ಕುಡಿದ ಕಾಫಿ ಲೋಟ ಅಲ್ಲೇ ಬದಿಗಿರಿಸಿ 'ಇನ್ನೂ ಅಡುಗೆ ಆಗಿಲ್ವಾ?' ಎಂದು ಕೇಳ್ವ ಗಂಡು ಕೂಡ Multitasker!

ಕೊನೆ ಹನಿ, ಎಲ್ಲ ಗಂಡು-ಹೆಣ್ಣುಗಳು ಹೀಗೆ ಅಲ್ಲಾ? ಇರಲಿ ಬಿಡಿ, ನಿಮ್ಮ Multitasking ಹೇಗೆ? ನೀವೇನು Multitaskerರೋ ? Unitaskerರೋ?

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Multitasking is nothing but deal with more than one task at the same time. A humorous write up by Srinath Bhalle with lively examples. After reading the story, tell me are you multitasker or a unitasker? ನೀವು Multitaskerರೋ? Unitaskerರೋ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X