ಸಿನಿಮಾ ನೋಡುವ ಸುಖದ ಕುರಿತು...

A still from Seven Pounds
ಕ್ಲಾಸಿಗೆ ಚಕ್ಕರ್ ಹಾಕಿ, ಸ್ನೇಹಿತರೊಡಗೂಡಿ ಹಳ್ಳಿ ಚಿತ್ರಮಂದಿರಗಳಲ್ಲಿ ಕದ್ದುಮುಚ್ಚಿ ಚಲನಚಿತ್ರ ನೋಡುವ ಖುಷಿಯಿದೆಯಲ್ಲ, ಅದು ಯಾವ ಸಂತೋಷಕ್ಕೂ ಸಾಟಿಯಲ್ಲ. ಹಳ್ಳಿ ಹುಡುಗರನೇಕರು ಪಟ್ಟಣ ಸೇರಿಕೊಂಡು ಆ ಸುಖದಿಂದ ವಂಚಿತರಾಗುತ್ತಿರುವುದು ಅಷ್ಟೇ ಸತ್ಯ. ಈಗಂತೂ ಸಿನೆಮಾವನ್ನು ಡಿವಿಡಿಗಳಲ್ಲೇ ನೋಡುವ ಸೌಭಾಗ್ಯ ಲಭಿಸುತ್ತಿರುವುದರಿಂದ ಮನೆಯಲ್ಲಿ ಕೂತು ಸಿನೆಮಾ ನೋಡುವವರ ಸಂಖ್ಯೆ ಜಾಸ್ತಿಯಾಗ್ತಾಯಿದೆ. ಆದರೂ, ಧಿಯೇಟರಿಗೆ ಹೋಗಿ ಚಿತ್ರ ವೀಕ್ಷಿಸುವ ಸುಖವೇ ಬೇರೆ, ಏನಂತೀರಾ?

* ಶ್ರೀನಿಧಿ ಡಿ.ಎಸ್.

ಚಲನಚಿತ್ರಗಳ ಜೊತೆಗಿನ ನನ್ನ ಬಂಧ ಶುರುವಾಗಿ ಬಹಳ ಕಾಲವಾಯಿತು. ಅದ್ಯಾವಾಗಲೋ ಮೊತ್ತಮೊದಲು ಟಾಕೀಸಿನಲ್ಲಿ ನೋಡಿದ ಬಬ್ರುವಾಹನ ಸಿನಿಮಾದಿಂದ ತೊಡಗಿ, ನಿನ್ನೆ ನೋಡಿದ ಸೆವೆನ್ ಪೌಂಡ್ಸ್ ನವರೆಗೂ, ನನ್ನ ಮತ್ತು ಸಿನಿಮಾ ಸಂಬಂಧ ವರುಷದಿಂದ ವರುಷಕ್ಕೆ ಭಾಷೆಯ ಭೇದವಿಲ್ಲದೇ, ಕಥೆಯ ಬಗೆಗಿನ ಆಯ್ಕೆಗಳಿಲ್ಲದೇ ಗಟ್ಟಿಗೊಳ್ಳುತ್ತಲೇ ಸಾಗಿದೆ. ಪ್ರತಿ ಸಿನಿಮಾ ನೋಡುವಾಗಲೂ- ಕೆಲಬಾರಿ ಅದು ಕಳಪೆ ಅಂತ ಮೊದಲೇ ಗೊತ್ತಿದ್ದರೂ ಬಲವಾದ ಉತ್ಕಟತೆಯೊಂದಿಗೇ ಆ ಸಿನಿಮಾ ನೋಡಲು ಆರಂಭಿಸುತ್ತೇನೆ. ಪ್ರತಿ ಚಿತ್ರ ನೋಡಿದ ಮೇಲೂ ಅದು ಒಂದು ದಿನವಾದರೂ ತಲೆಯೊಳಗೆ ಓಡುತ್ತಲೇ ಇರುತ್ತದೆ ಹೆಚ್ಚಿನ ಸಲ. ಈ ಚಿತ್ರವನ್ನು ಇನ್ನೂ ಚೆನ್ನಾಗಿ ಹೇಗೆ ಮಾಡಬಹುದಿತ್ತು ಅಂತಲೋ, ಥೂ ಎಷ್ಟು ಕಚಡವಾಗಿತ್ತು ಅಂತಲೋ ಏನಾದರೊಂದು ಯೋಚನೆ ಓಡಾಡುತ್ತಲೇ ಇರುತ್ತದೆ.

ಮೊದಲೆಲ್ಲ ಸಿನಿಮಾ ನೋಡುವುದು ಅಂದರೆ ಲಕ್ಷುರಿಯಾಗಿತ್ತು. ಅಪ್ಪ ನಮ್ಮೂರ ಥಿಯೇಟರಿಗೆ ಎಂಥದಾದರೂ "ಸೂಪರ್" ಅನ್ನಿಸುವಂತಹ ಸಿನಿಮಾ ಬಂದರೆ ಮಾತ್ರ ಕರೆದುಕೊಂಡು ಹೋಗುತ್ತಿದ್ದರು. ಅಪ್ಪನ ಜೊತೆ ಥಿಯೇಟರಿಗೆ ಹೊರಟ ಸಂಭ್ರಮಗಳೇ ಜಾಸ್ತಿ ನೆನಪಿವೆ ಬಿಟ್ಟರೆ, ಅಲ್ಲಿ ಕೂತು ನೋಡಿದ್ದೆಷ್ಟೋ- ಬಿಟ್ಟದ್ದೆಷ್ಟೋ. ನಮ್ಮೂರಿನ ಭೂತಾಕಾರದ ಥಿಯೇಟರಿನಲ್ಲಿ ಕೂತು ಸಿನಿಮಾ ನೋಡುವುದಕ್ಕೂ ಧೈರ್ಯ ಬೇಕಿತ್ತು. ಎಷ್ಟೋ ಬಾರಿ 10-20ಕ್ಕಿಂತ ಹೆಚ್ಚಿನ ಜನರೇ ಇರುತ್ತಿರಲಿಲ್ಲ.

ಶಾಲಾ ದಿನಗಳಲ್ಲಿ ಎರಡು ರೂಪಾಯಿಗೆ ನೋಡಿದ ಡಾಕ್ಯುಮೆಂಟರಿಗಳು ಇಂಗ್ಲೀಷು ಚಿತ್ರಗಳೂ ಅಷ್ಟೇ. ಅವುಗಳನ್ನು ನೋಡುವ ಪ್ರೊಸೆಸ್- ಸಿನಿಮಾ ನೋಡಿದ್ದಕ್ಕಿಂತ ಜಾಸ್ತಿ ಖುಷಿ ಕೊಡುತ್ತಿತ್ತು. ನಿತ್ಯ ಕಾಣುವ ನಮ್ಮ ಶಾಲೆಯ ಖಾಲಿ ಗೋಡೆಯಮೇಲೆ, ಅದೆಲ್ಲಿಂದಲೋ ಬಂದ ಒಂದಿಷ್ಟು ಜನ- ಏನೋ ಯಂತ್ರಗಳನ್ನಿಟ್ಟು ಬಣ್ಣದ ಚಿತ್ರಗಳು ಓಡಿಸುವುದನ್ನು ಬಿಟ್ಟ ಬಾಯಿ ಬಿಟ್ಟ ಹಾಗೇ ನೋಡುವುದೇ ಒಂದು ದಿವ್ಯಾನುಭೂತಿ. ಮಾರನೇ ದಿನ ತರಗತಿಗೆ ಬಂದು, ಖಾಲಿ ಖಾಲಿ ಕಾಣುವ ಗೋಡೆ ನೋಡುತ್ತ ಎದುರಿನ ಪಾಠವನ್ನು ಸಂಪೂರ್ಣ ನಿರ್ಲಕ್ಷಿಸಿ ನಿನ್ನೆ ದಿನ ಕಂಡ ಇಂಗ್ಲೀಷು ಪಿಚ್ಚರಿನ ವಿಮಾನ ಬಿದ್ದ ಸೀನನ್ನೋ ಅಪಾರ ಕೀರ್ತಿ ಗಳಿಸಿ ಮೆರೆದ.. ಅನ್ನುವ ಹಾಡನ್ನೋ.. ನೆನಪಿಸಿಕೊಳ್ಳುವುದು ಮತ್ತೂ ಮಜಾ!

ಪದವಿಗೆ ಬರುವಾಗ ಸಿನಿಮಾ ವೀಕ್ಷಣೆ ಚಟವಾಗಿ ಹೋಗಿತ್ತು. ನಮ್ಮೂರ ಥೇಟರು ಕ್ಲೋಸಾಗುತ್ತದಂತೆ ಅಂತ ಯಾರೋ ಸುದ್ದಿ ಹಬ್ಬಿಸಿದ ಮೇಲಂತೂ- ಅಲ್ಲಿಗೆ ಬರುವ ಯಾವುದೇ ಚಲನಚಿತ್ರವನ್ನು ನಮ್ಮ ಟೀಮು ಬಿಡಲೇ ಇಲ್ಲ. ನಮ್ಮ ಗ್ರಹಚಾರಕ್ಕೆ ಥೇಟರು ಕ್ಲೋಸೂ ಆಗಲಿಲ್ಲ- ಆರು ತಿಂಗಳವರೆಗೆ. ಎಸ್ನಾರಾಯಣಿಂದ ಹಿಡಿದು ಮಣಿರತ್ನಂ ತನಕ ಯಾರ ಚಿತ್ರಗಳನ್ನೂ ಬಿಡಲಿಲ್ಲ. ಕೊನೆಕೊನೆಗೆ ನಾವು ಲೇಟಾಗಿ ಬಂದರೆ ಟಿಕೇಟು ಕೌಂಟರಿನವನೇ, "ದುಡ್ಡು ಆಮೇಲೆ ಕೊಡಿ ಪಿಚ್ಚರು ಶುರುವಾಗಿದೆ ಹೋಗಿ" ಅನ್ನುತ್ತಿದ್ದ. ನಾವು ಇನ್ನೇನು ಸಿನಿಮಾ ನೋಡಿ ನೋಡಿ ಎಕ್ಕುಟ್ಟಿ ಹೋಗುತ್ತೇವೆ ಅನ್ನುವಷ್ಟೊತ್ತಿಗೆ ಲಾಸು ತಾಳಿಕೊಳ್ಳಲಾಗದೇ ಥಿಯೇಟರು ಮುಚ್ಚಲ್ಪಟ್ಟಿತು ಮತ್ತು ನಾವೆಲ್ಲ ಅತಂತ್ರರಾದೆವು. ಆಮೇಲೆ ಮಂಗಳೂರಿನ ಥಿಯೇಟರುಗಳಿಗೆ ಎಲ್ಲೋ ಆಗೀಗ ಹೋಗಿ ಬರಲು ಆರಂಭಿಸಿದೆವು. ಆದರೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ ಅನ್ನುವುದು ಅರಿವಾಗಿ ಅದೂ ನಿಂತುಹೋಯಿತು.

ಆಮೇಲಾಮೇಲೆ ಸಿಕ್ಕಸಿಕ್ಕ ಚಿತ್ರಗಳನ್ನೆಲ್ಲ ನೋಡುವ ತಲುಬು ಮುಗಿದು ಹೋಯಿತು. ಏನಿದ್ದರೂ ನಾಲ್ಕು ಜನ ಹೊಗಳಿರುವ ಚೆನ್ನಾಗಿದೆ ಅಂತ ಹಣೆಪಟ್ಟು ಹೊತ್ತ ಚಿತ್ರಗಳನ್ನು ಮಾತ್ರ ನೋಡುವ ರೂಢಿಯಾಯಿತು. ಆದರೂ ಅಲ್ಲಿ ಇಲ್ಲಿ ಮೋಸ ಹೋಗುತ್ತಲೇ ಇರುತ್ತೇನೆ ಸ್ನೇಹಿತರ ಒತ್ತಾಯಕ್ಕೋ ಅನಿವಾರ್ಯವಾಗಿಯೋ ಏನಾದರೊಂದು. ಆದರೂ ಅವುಗಳ ಸಂಖ್ಯೆ ಕಡಿಮೆ ಎನ್ನಿ.

ಉತ್ತಮ ಸದಭಿರುಚಿಯ ಚಿತ್ರಗಳನ್ನು ನೋಡುವ ನನ್ನ ಸ್ನೇಹಿತರ ವಲಯ ಚೆನ್ನಾಗಿರುವುದರಿಂದ ಪ್ರತಿ ವಾರಕ್ಕೆ ಎರಡು ಮೂರಾದರೂ "ಆಲ್ ಟೈಮ್ ಕ್ಲಾಸಿಕ್"ಗಳೆಂದು ಕರೆಯಲ್ಪಡುವ ಚಿತ್ರಗಳನ್ನು ನೋಡುತ್ತಿರುತ್ತೇನೆ. ನಾವೊಂದಿಷ್ಟು ಜನ ಸ್ನೇಹಿತರು ಡೀವೀಡಿಗಳನ್ನು ಸಿನಿಮಾಗಳು ತುಂಬಿರುವ ಹಾರ್ಡ್ ಡಿಸ್ಕುಗಳನ್ನು ಪರಸ್ಪರ ಹಂಚಿಕೊಳ್ಳುತ್ತ, ಚಿತ್ರಗಳ ಸವಿ ಉಣ್ಣುತ್ತಿದ್ದೇವೆ ಈಗ.

ಇದೆಲ್ಲ ಯಾಕೆ ಹೀಗೆಲ್ಲ ನೆನಪಾಯಿತು ಅನ್ನುವುದಕ್ಕೊಂದು ಕಾರಣವಿದೆ. ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲಚಿತ್ರೋತ್ಸವ ನಡೆಯುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ. ಪ್ರತಿ ದಿನ ಎರಡು ಮೂರು ಚಿತ್ರಗಳನ್ನು ಒಂಥರಾ ಹಠ ಹಿಡಿದು ನೋಡುತ್ತಿದ್ದೇನೆ. ಯಾಕೋ ನಿನ್ನೆ ಇದು ತೀರಾ ಅತಿಯಾಯಿತು ಅನ್ನಿಸಿ ಒಂದೇ ಸಿನಿಮಾ ನೋಡಿ ಎದ್ದುಬಂದುಬಿಟ್ಟೆ. ಕಣ್ಣು ಸುಮ್ಮನೇ ಮುಚ್ಚಿದರೂ ಸ್ಕ್ರೀನು ಅದರಲ್ಲಿ ಓಡಾಡುವ ಚಿತ್ರಗಳು ಕಾಣಿಸಲು ಶುರುವಾಗಿತ್ತು. ಅತಿಯಾದರೆ ಅಮೃತವೂ.. ಅನ್ನುವ ಹಾಗೆ.. ಆದರೆ ನೋಡುವ ಆಸೆ ಕಡಿಮೆಯೂ ಆಗಿಲ್ಲ. ಒಂದಾದಮೇಲೊಂದು ಚೆಂದದ ಚಿತ್ರಗಳು ಇದೆ ಅಂತ ಗೊತ್ತಾದ ಮೇಲೆ ಅವುಗಳನ್ನು ನೋಡದೆ ಇರುವುದಾದರೂ ಹೇಗೆ ಅನ್ನುವ ಪ್ರಶ್ನೆ.

ಜಗತ್ತಿನ ಬೇರೆ ಬೇರೆ ಭಾಷೆಯ, ಬೇರೆ ಬೇರೆ ಆಲೋಚನೆಗಳನ್ನು ಹೊಂದಿದ- ಭಿನ್ನ ಚಿತ್ರ ನಿರ್ಮಾಣ ತಂತ್ರ ಹೊಂದಿರುವ ನಿರ್ದೇಶಕರ ಚಿತ್ರಗಳು ಒಂದೇ ಕಡೆ ಸಿಗುವಾಗ ಅವುಗಳನ್ನು ನೋಡಬೇಕು ಅನ್ನುವ ಆಸೆ ಪ್ರತಿ ಸಿನಿಮಾ ಹುಚ್ಚರಿಗೂ ಇದ್ದೇ ಇರುತ್ತದೆ. ಆದರೆ ಸಮಸ್ಯೆಗಳೆಂದರೆ ಯಾವ ಚಿತ್ರ ನೋಡಬೇಕು ಅನ್ನುವುದು. ಈ ಬಾರಿಯ ಚಲನಚಿತ್ರೋತ್ಸವದಲ್ಲಿ 120ಕ್ಕೂ ಹೆಚ್ಚು ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಒಂದೇ ಹೊತ್ತಿಗೆ ಬೇರೆ ಬೇರೆ ಕಡೆಗಳಲ್ಲಿ ಕನ್ನಡವೂ ಸೇರಿದಂತೆ ಜಗತ್ತಿನ ಕ್ಲಾಸಿಕ್ಸ್ ಅಂತ ಕರೆಯಲ್ಪಡುವ ಚಿತ್ರಗಳನ್ನು ನೋಡುವ ಅವಕಾಶವಿದೆ.

ಬೆಂಗಳೂರಿನಲ್ಲಿ ಮೂರನೇ ಬಾರಿಗೆ ಈ ಚಿತ್ರೋತ್ಸವ ಆಗುತ್ತಿದೆ. ಸುಚಿತ್ರಾದ ಸಂಯೋಜಕತ್ವದಲ್ಲಿ ನಡೆಯುತ್ತಿರುವ ಈ ಚಿತ್ರೋತ್ಸವಕ್ಕೆ ಕರ್ನಾಟಕ ಸರಕಾರದ ಮತ್ತು ಕನ್ನಡ ಚಿತ್ರರಂಗದ ಸಹಯೋಗವಿದೆ. ನಾನು ಪ್ರಕಾಶ್ ರೈ ಮನೋಜ್ಞ ಅಭಿನಯದ ಕಾಂಚೀವರಂ, ವಿಲ್ ಸ್ಮಿತ್ ನ ಆಸ್ಕರ್ ಕನಸಿನ ಸೆವೆನ್ ಪೌಂಡ್ಸ್ -ಇತ್ಯಾದಿಗಳನ್ನೆಲ್ಲ ನೋಡಿ ಸಂತಸಪಟ್ಟೆ. ಇನ್ನೂ ಮೂರುದಿನ ಚಿತ್ರಜಾತ್ರೆಯಿದೆ, ಎಷ್ಟು ಸಿನಿಮಾಗಳು ನನ್ನ ಮನದ ಜೋಳಿಗೆಯೊಳಗೆ ಭದ್ರವಾಗುತ್ತವೆಯೋ - ನೋಡೋಣ.

ಇದನ್ನೂ ಓದಿ:
ಉಸಿರಾಡೋರೆಲ್ಲ ನೋಡಲೇಬೇಕಾದ ಚಿತ್ರ
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+