ಬರ್ತಾಯಿದೆ : ಕೆಪಿ ನಂಜುಂಡಿ, ವಿಶ್ವೇಶ್ವರ ಭಟ್ಟರ 'ವಿಶ್ವವಾಣಿ'

Posted By:
Subscribe to Oneindia Kannada

ಬೆಂಗಳೂರು, ಜ 13 : ಕೆ ಪಿ ನಂಜುಂಡಿ ಅವರ ಹೊಸ ಸಾಹಸ, ವಿಶ್ವೇಶ್ವರ ಭಟ್ ಅವರ ಹೊಸ ಪತ್ರಿಕೆ "ವಿಶ್ವವಾಣಿ" ಇದೇ ಜನವರಿ 15ರ ಶುಕ್ರವಾರ ಕನ್ನಡ ದಿನಪತ್ರಿಕೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ವಿಶ್ವಾಕ್ಷರ ಮೀಡಿಯ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಪತ್ರಿಕೆ ಪ್ರಕಟವಾಗುತ್ತಿದ್ದು ಸಂಸ್ಥೆಗೆ ಚಿನ್ನದ ವ್ಯಾಪಾರಿ, ವಿಶ್ವಕರ್ಮ ಸಮುದಾಯದ ಮುಂದಾಳು ಕೆ ಪಿ ನಂಜುಂಡಿ ಅಧ್ಯಕ್ಷರಾಗಿರುತ್ತಾರೆ. ಪತ್ರಕರ್ತರಾಗಿ ದೀರ್ಘ ಅನುಭವವಿರುವ ವಿಶ್ವೇಶ್ವರ ಭಟ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದು ಪತ್ರಿಕೆ ಅವರ ಸಾರಥ್ಯದಲ್ಲಿ ಹೊರಹೊಮ್ಮುತ್ತದೆ.

ಕನ್ನಡ ಟಿವಿ ವಾಹಿನಿಗಳಲ್ಲಿ ಮಿಂಚುವ ಜಾಹೀರಾತುಗಳನ್ನು ಗಮನಿಸುವವರಿಗೆ ಗೊತ್ತಿರುತ್ತದೆ. ಲಕ್ಷ್ಮಿ ಗೋಲ್ಡ್ ಪ್ಯಾಲೇಸಿನ ಮಾಲಿಕ ನಂಜುಂಡಿ ಹೇಳುತ್ತಿದ್ದರು. "ನಮ್ಮ ಚಿನ್ನಾಭರಣ ತಯಾರಿಕೆಯಲ್ಲಿ ವೇಸ್ಟೇಜ್ ಇರುವುದಿಲ್ಲ, ವೇಸ್ಟೇಜ್ ನಿರೂಪಿಸಿದವರಿಗೆ ಕೋಟಿ ರೂ ಬಹುಮಾನ". ಜತೆಗೆ, ಕರ್ನಾಟಕ ರಾಜ್ಯ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷರಾಗಿ ಸಮುದಾಯದ ಸಂಘಟನೆಗೆ ಅಹರ್ನಿಶಿ ದುಡಿದಿರುವ ನಂಜುಂಡಿ ಕಿರುತೆರೆಯಲ್ಲಿ ನಟಿಸಿದ್ದಾರೆ ಕೂಡ. ಉದಯ ಟಿವಿಯಲ್ಲಿ ಪ್ರಸಾರವಾದ ಎಸ್ ನಾರಾಯಣ್ ನಿರ್ದೇಶನದ "ಪಾರ್ವತಿ" ಧಾರಾವಾಹಿಯಲ್ಲಿ ಅವರು ಪಾತ್ರ ನಿರ್ವಹಿಸಿದ್ದರು.

Vishweshwar Bhat KP Nanjundi Vishwavani New Kannada Daily Launch on Jan-15-2016

ಯಾವುದೇ ಸ್ಥಾನ ಮಾನಗಳು ಒಲಿದು ಬರದಿದ್ದರೂ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ, ಇಂತಿಪ್ಪ ನಂಜುಂಡಿ ಅವರ ದ್ರವ್ಯಾನುಕೂಲ ಮತ್ತು ಸಂಯುಕ್ತ ಕರ್ನಾಟಕ, ಕನ್ನಡಪ್ರಭ, ವಿಜಯ ಕರ್ನಾಟಕ, ಸುವರ್ಣ 24x7 ಚಾನಲ್ ನಲ್ಲಿ ಒಟ್ಟು ಮೂರು ದಶಕಗಳ ಎಡಬಿಡದೆ ದುಡಿದಿರುವ ವಿಶ್ವೇಶ್ವರ ಭಟ್ ಅವರ ವೃತ್ತಿ ನೈಪುಣ್ಯವಲ್ಲದೆ ಪ್ರತಿಭಾವಂತ ಪತ್ರಕರ್ತರ ಹಿಂಡಿನ ಪರಿಶ್ರಮವನ್ನು ಪಣಕ್ಕಿಟ್ಟ "ವಿಶ್ವವಾಣಿ" ಪತ್ರಿಕೆ, ಕನ್ನಡ ದಿನಪತ್ರಿಕೆ ನಕಾಶೆಯಲ್ಲಿ ಭದ್ರ ಸ್ಥಾನ ದಕ್ಕಿಸಿಕೊಳ್ಳಲು ಹಾತೊರೆಯುತ್ತಿದೆ. ಭಟ್ಟರು ಪ್ರಸಿದ್ಧ ಅಂಕಣಕಾರರಲ್ಲದೆ ಇದುವರೆಗೆ ಅವರ 63 ಕನ್ನಡ ಪುಸ್ತಕಗಳು ಪ್ರಕಟವಾಗಿವೆ.

ಪತ್ರಿಕೆಯ ರಾಜ್ಯವ್ಯಾಪ್ತಿ ಆವೃತ್ತಿಯ ಲೋಕಾರ್ಪಣೆ ಸಮಾರಂಭ ಶುಕ್ರವಾರ ಬೆಂಗಳೂರಿನಲ್ಲಿ ಆಯೋಜನೆ ಆಗಿದೆ. ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವ ಧಾರ್ಮಿಕ, ರಾಜಕೀಯ ಮುಖಂಡರಲ್ಲದೆ ಖ್ಯಾತ ಕಾದಂಬರಿಕಾರರ ಉಪಸ್ಥಿತಿಯ ವಿವರಗಳನ್ನು ಈ ಕೆಳಗಿನ ಆಮಂತ್ರಣ ಪತ್ರಿಕೆಯಲ್ಲಿ ನೀವು ಓದುತ್ತಿದ್ದೀರಿ. 16+4, ಬಣ್ಣದಲ್ಲಿ ಮುದ್ರಣಗೊಳ್ಳುವ ಇಪ್ಪತ್ತು ಪುಟಗಳ ಬೆಲೆ 5 ರೂಪಾಯಿ. ವಾರದಲ್ಲಿ ಏಳೂದಿನ ಏಕರೂಪದ ಬೆಲೆ.

Vishweshwar Bhat KP Nanjundi Vishwavani New Kannada Daily Launch on Jan-15-2016

ಸಾಮಾಜಿಕ ಜಾಲತಾಣಗಳಲ್ಲಿ ವಿಶ್ವೇಶ್ವರ ಭಟ್ ಅವರು ಅಪ್ ಲೋಡ್ ಮಾಡುತ್ತಿರುವ ಬಿಲ್ಡ್ ಅಪ್ ಗಮನಿಸಿದರೆ, ಬದಲಾಗುತ್ತಿರುವ ದಿನಪತ್ರಿಕೆ ಓದುಗರ ಅಭಿರುಚಿ ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಪತ್ರಿಕೆ ರೂಪುಗೊಳ್ಳುವ ಲಕ್ಷಣಗಳು ಗೋಚರಿಸುತ್ತವೆ. ಇಡೀ ಮೂವತ್ತು ವರ್ಷ ಬೇರೊಬ್ಬರ ಒಡೆತನದ ಮಾಧ್ಯಮ ವೇದಿಕೆಗಳಲ್ಲಿ ನೌಕರರಾಗಿದ್ದ ಭಟ್ಟರಿಗೆ ಪತ್ರಿಕೆಯ ಮೈಕಟ್ಟು ಮತ್ತು ಸುದ್ದಿ ಸಾಮಗ್ರಿಗಳನ್ನು ಹೊಂದಿಸುವ ಕೌಶಲ್ಯದ ಬಗ್ಗೆ ತಮ್ಮದೇ ಆದ ದೃಷ್ಟಿಕೋನಗಳಿವೆ. ಇಂತಿಪ್ಪ ಭಟ್ಟರೀಗ ಹೊಸ ಸಂಸ್ಥೆಯ ಆಡಳಿತ ಅಂಗಳದಲ್ಲೂ ಇದ್ದು, ಪತ್ರಿಕೆಯ ಸಾರಥ್ಯವನ್ನೂ ವಹಿಸಿಕೊಂಡಿರುವುದರಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಸಂಕ್ರಾಂತಿಯ ಮುಂಜಾವು ಪತ್ರಿಕೆ ಅಂಗಡಿಯಲ್ಲಿ ಸಿಗುತ್ತದೆ. ಕೈಗೆತ್ತಿಕೊಳ್ಳುವುದೊಂದೇ ಬಾಕಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vishwakshara Media Pvt Ltd`s Kannada daily 'Vishwavani' to hit the stands on 15th Jan 2016. Gold merchant K P Nanjundi`s media venture spearheaded by editor Vishweshwar Bhat. The all Karnataka edition priced at Rs 5, on all days. A function to mark the launch will be held in Jnana Jyothi auditorium, central college campus, Bengaluru on Friday 15th Jan.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ