ಸಾಗರದ ಅಪ್ಪೆಮಿಡಿ ಭಟ್ಟರು ಉಪ್ಪಿನಕಾಯಿ ಹಾಕುವುದನ್ನು ನಿಲ್ಲಿಸಿದ್ದಾರೆ
ಅಪ್ಪೆ ಮಿಡಿ ಉಪ್ಪಿನಕಾಯಿ ತಯಾರಿಸುವುದರಲ್ಲಿ ನಿಸ್ಸೀಮರಾದ ಸಾಗರದ ಸೀತಾರಾಮ ಭಟ್ ಉರುಫ್ ಉಪ್ಪಿನಕಾಯಿ ಭಟ್ಟರ ಬಗ್ಗೆ ಕೇಳಿದ್ದೆ, ಓದಿದ್ದೆ. ಮೊನ್ನೆ ಸಿಗಂದೂರಿಗೆ ಹೋಗಿ, ವಾಪಸ್ ಬರ್ತಾ ಸಾಗರದಲ್ಲಿ ಇಳಿದು ಅವರ ಮನೆ ಹುಡುಕಿ ಹೊರಟೆ. ಸಂದಿಗೊಂದಿಗಳಲ್ಲಿ ತೆವಳಿಕೊಂಡು ಹೋದ ನಮ್ಮ ಕಾರು ಕೊನೆಗೆ ಶ್ರೀ ಟಾಕೀಸ್ ರಸ್ತೆಯಲ್ಲಿರುವ ಅವರ ಮಂಗಳೂರು ಹಂಚಿನ ಮನೆ ಮುಂದೆ ನಿಲ್ತು. ಭಟ್ಟರು ಮನೆ ಮುಂದೆ ಕನ್ನಡದಲ್ಲಿ ನಾಮಫಲಕ ಹಾಕಿಕೊಂಡಿದ್ದಾರೆ. ಅದನ್ನು ನೀವಿಲ್ಲಿ ಓದುತ್ತಿದ್ದೀರಿ.
ಮನೆಯ ವರಾಂಡವೇ ಭಟ್ಟರ ಫ್ರಂಟ್ ಆಫೀಸು, ಅಂಗಡಿ, ಮುಂಗಟ್ಟು. ಬನ್ನಿ ಬನ್ನಿ ಅಂತ ಕರೆದು ಒಳಗೆ ಕೂರಿಸಿದರು. ನನ್ನ ಜತೆಯಲ್ಲಿದ್ದವರಿಗೋ ಬಾಯಿ ಚಪಲದ ಅರ್ಜೆಂಟು. ನಾಲಗೆಯ ಕೆಳಗೆ ಚುಳ್ ಅಂತ ನೀರು ಬಂದಿರಬೇಕು. ಭಟ್ಟರು ಮಿಡಿ ಮಾವಿನ ಉಪ್ಪಿನಕಾಯಿ ಹೋಳುಗಳನ್ನು ಟೂತ್ ಪ್ರಿಕ್ ಕಡ್ಡಿಗಳಲ್ಲಿ ಚುಚ್ಚಿ "ರುಚಿ ನೋಡ್ರಿ" ಅಂತ ಕೊಡುತ್ತಿದ್ದರೆ ಇನ್ನೊಂದು ಕಡ್ಡಿಗೆ ಕೈಚಾಚುತ್ತಿದ್ದರು. ನನಗೆರಡು ಕೇಜಿ, ನಂಗೆ ಮೂರ್ ಕೇಜಿ ಅಂತ ಏರ್ ಟೈಟ್, ವಾಟರ್ ಟೈಟ್ ಉಪ್ಪಿನಕಾಯಿಯ ರೆಡಿಮೇಡ್ ಪೊಟ್ಟಣಗಳನ್ನು ಪ್ಯಾಕ್ ಮಾಡಿಸುತ್ತಿದ್ದರು.

ನನಗೋ ಭಟ್ಟರ ಬದುಕು ಮತ್ತು ಅವರ ಉಪ್ಪಿನಕಾಯಿ ಮಹಾತ್ಮೆ ತಿಳಿಯುವ ಕುತೂಹಲ. ಉತ್ತರ ಕನ್ನಡ ಜಿಲ್ಲೆಯಿಂದ ಭಟ್ಟರು ಸಾಗರಕ್ಕೆ ವಲಸೆ ಬಂದು 40 ವರ್ಷನೇ ಆಯ್ತಂತೆ. ಪಂಚತಾರಾ ಹೋಟೆಲುಗಳಲ್ಲಿ ನೌಕರಿ ಮಾಡಿದ ಅವರಿಗೆ, ಸಾಕಿದು ಎನಿಸಿ ಸ್ವಂತ ಉದ್ಯಮಕ್ಕೆ ಕೈಹಾಕಿದರು. ನಾಲಕ್ಕು ಮಂದಿ ನೌಕರರಿಗೆ ಉದ್ಯೋಗ ಕಲ್ಪಿಸುವದರ ಜತೆಗೆ ತಮ್ಮ ಜೀವನಕ್ಕೊಂದು ದಾರಿ ಕಂಡುಕೊಂಡರು. ಅಪ್ಪೆಮಿಡಿ ಉಪ್ಪಿನಕಾಯಿ ಅಂದರೆ ಸೀತಾರಾಮ ಭಟ್ಟರು ಎನ್ನುವಷ್ಟರ ಮಟ್ಟಿಗೆ ದೇಶವಿದೇಶಗಳಲ್ಲಿ ಅವರ ಜನಪ್ರಿಯತೆ ಬೆಳೆಯಿತು.
ಕಳೆದ ಮೂರು ವರ್ಷಗಳಿಂದ ಅಪ್ಪೆ ಮಿಡಿ ಫಲ ಕಡಿಮೆಯಾಗಿದೆ ಎಂದು ವಿಷಾದಪಡುತ್ತಾರೆ ಅವರು. ಯಾಕಂದ್ರೆ, ಅರಣ್ಯನಾಶ, ಮರಮುಟ್ಟುಗಳಿಗಾಗಿ ಮಾವಿನಮರದ ದೊಡ್ಡ ದೊಡ್ಡ ಕೊಂಬೆಗಳನ್ನು ಕಡಿಯುವ ಟ್ರೆಂಡ್ ಮಲೆನಾಡಿನಲ್ಲಿ ಹೆಚ್ಚಾಗುತ್ತಿದೆ. ಸ್ಥಿತಿ ಹೀಗೇ ಮುಂದುವರೆದರೆ ಅಪ್ಪೆ ಮಿಡಿ ಕುಲ ನಾಶವಾಗತ್ತೆ. ಅಳಿವಿನ ಅಂಚಿಗೆ ಬಂದಿರುವ ಹಲವಾರು ತಳಿಯ ಅಪ್ಪೆ ಮಿಡಿ ಕೃಷಿಯನ್ನು ಉಳಿಸಿ ಬೆಳೆಸುವುದಕ್ಕೆ ಜನ ಮನಸ್ಸು ಮಾಡಬೇಕು ಮಾರಾಯ್ರೆ ಎಂದ್ರು ಭಟ್ರು.
ಅಪ್ಪೆ ಮಿಡಿ ಮರಗಳು ಹೆಚ್ಚಾಗಿ ಕಾಣಬರುವುದು ರಿಪ್ಪನ್ ಪೇಟೆಯಲ್ಲಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ ದಾಂಡೇಲಿಯ ಹೊಳೆದಂಡೆಗಳಲ್ಲಿ. ಇಲ್ಲಿ ಬೆಳೆಯುವ ಅಪ್ಪೆ ಮಾವು ಉಪ್ಪಿನಕಾಯಿಗೆ ಹೇಳಿಮಾಡಿಸಿದ್ದು. ಒಂದು ಮುಂಗಾರು ಋತುವಿನಲ್ಲಿ ಭಟ್ಟರು ಸುಮಾರು 10 ಕ್ವಿಂಟಾಲು ಉಪ್ಪಿನಕಾಯಿ ತಯಾರಿಸಿ ಮಾರುತ್ತಾರೆ. ಇವರ ಉಪ್ಪಿನಕಾಯಿಗೆ ಅತಿಹೆಚ್ಚು ಬೇಡಿಕೆ ಮುಂಬೈ ಮತ್ತು ದುಬೈನಿಂದ ಬರ್ತದೆ. ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದಿರುವುದು ಭಟ್ಟರ ಉಪ್ಪಿನಕಾಯಿಯ ಹೆಚ್ಚುಗಾರಿಕೆ.

ಇವರ ಉಪ್ಪಿನಕಾಯಿ ವ್ಯಾಪಾರ ಮುಖ್ಯವಾಗಿ ಟೆಲಿ ಮಾರ್ಕೆಟಿಂಗ್ ಮೇಲೆ ನಿಂತಿದೆ. ಭಟ್ಟರು ಎರಡು ಮೊಬೈಲ್ ಫೋನ್ ನಂಬರುಗಳನ್ನು ಮಾರ್ಕೆಟ್ಟಿಗೆ ರಿಲೀಸ್ ಮಾಡಿದ್ದಾರೆ. ಈ ಋುತುವಿನಲ್ಲಿ ಫೋನಿಗೆ ಬಿಡುವೇ ಇರಲ್ಲ. ಫೋನಿನಲ್ಲಿ ಆರ್ಡರ್ ಸ್ವೀಕರಿಸುವುದು, ಕೂರಿಯರ್ ಮೂಲಕ ಉಪ್ಪಿನಕಾಯಿ ರವಾನಿಸುವುದರಲ್ಲಿ ಭಟ್ರು ಸದಾ ಬಿಜಿಯಾಗಿರ್ತಾರೆ. ಅವರ ಕೈಗುಣದ ಉಪ್ಪಿನಕಾಯಿ ಬೇಗ ಹಾಳಾಗದು. ಅದಕ್ಕೆ ಮೂರು ವರ್ಷ ಆಯಸ್ಸು! ನೀವು ಸಾಗರಕ್ಕೆ ಹೋದಾಗ ಭಟ್ಟರನ್ನು ಭೇಟಿ ಮಾಡಿ ಎಷ್ಟಾದರೂ ಮಾತನಾಡಬಹುದು. ಆದರೆ, ಉಪ್ಪಿನಕಾಯಿ ರೆಸಿಪಿ ಮಾತ್ರ ಕೇಳಬಾರದು!
ಸಾಗರದ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಭಟ್ಟರ ಚಾಲ್ತಿ ಖಾತೆ ಇದೆ. ಈ ಖಾತೆಗೆ ಹಣ ತುಂಬಿ, ನಿಮ್ಮ ವಿಳಾಸವನ್ನು ಎಸ್ ಎಂ ಎಸ್ ಮಾಡಿದರೆ ಉಪ್ಪಿನಕಾಯಿ ಮನೆಗೆ ಬರತ್ತೆ. ಅಪ್ಪೆ ಮಿಡಿ ಉಪ್ಪಿನಕಾಯಿ ಧಾರಣೆ ಒಂದು ಕೆಜಿಗೆ 360 ರೂಪಾಯಿ. ಕೂರಿಯರ್ ಛಾರ್ಜ್ 60 ರೂಪಾಯಿ. ನೆನಪಿರಲಿ : ನಿಂಬೆ, ಹೇರಳೆ ಮುಂತಾದ ಬೇರೆ ಯಾವ ಉಪ್ಪಿನಕಾಯಿಯನ್ನು ಇವರು ತಯಾರಿಸುವುದಿಲ್ಲ. ಇವರು ಮಾರುವುದು 3 ಪದಾರ್ಥ ಮಾತ್ರ. ಅಪ್ಪೆ ಮಿಡಿ, ಸಾರಿನ ಪುಡಿ ಮತ್ತು ತೊಡವೆ ಜೇನುತುಪ್ಪ. ಸಾಕಿದ ಜೇನಿನಿಂದ ತೆಗೆಯುವ ತುಪ್ಪಕ್ಕೆ ತೊಡವೆ ಎನ್ನುತ್ತಾರೆ. ಇದು ಅಪರೂಪ ಮತ್ತು ದುಬಾರಿ.

ಈ ಉಪ್ಪಿನಕಾಯಿ ರುಚಿ Flipkart, Snapdeal, Amazon, Ebay ಆ ಬೇಗಳಲ್ಲಿ ಸಿಕ್ಕದು. ಭಾರತದಲ್ಲಿ ಸಣ್ಣ ಉದ್ದಿಮೆದಾರರ ಉತ್ಪನ್ನಗಳು ಮತ್ತು ಸೇವೆಗಳಿಗೆ ಆಕಾಶದಷ್ಟು ಮಾರುಕಟ್ಟೆ ಇದೆ. ಇವೆಲ್ಲ ಅಂತರ್ಜಾಲದಲ್ಲಿ ನಮಗೆ ದಕ್ಕಿದ ದಿನ ಇ-ಕಾಮರ್ಸ್ ಹುಲುಸಾಗಿ ಬೆಳೆಯುತ್ತದೆ.
ಸೀತಾರಾಮ ಭಟ್ಟರಿಗೆ ಇಬ್ಬರು ಹೆಣ್ಣುಮಕ್ಕಳು. ಒಬ್ಳು ಬಿಜಿನೆಸ್ ಮ್ಯಾನೇಜ್ ಮೆಂಟ್ ಕಲಿತು ಬೆಂಗಳೂರು ಸೇರಿದ್ದಾಳೆ. ಇನ್ನೊಬ್ಬಳನ್ನು ಸಾಗರಕ್ಕೆ ಕೊಟ್ಟು ಮದುವೆ ಮಾಡಿದ್ದಾರೆ. "ಅವಳು ಅದೆಂಥದೋ ಕಂಪ್ಯೂಟರ್ ಅಂಗಡಿ ಇಟ್ಟುಕೊಂಡಿದ್ದಾಳೆ. ನನಗೆ 60 ಆಯ್ತು. ಕೈಲ್ ಆಗಲ್ಲ. ಸಾಕಪ್ಪಾ, ಇದನ್ನ ಬಿಟ್ಬುಡು ಅಂತಾರೆ ಮಕ್ಕಳು. ಕೈಲಾಗೋವರೆಗೂ ಮಾಡ್ಕೊಂಡು ಹೋಗ್ತೀನಿ" ಅಂದ್ರು ಬಾಯ್ತುಂಬಾ ಮಾತನಾಡುವ ಭಟ್ಟರು. (ಇಳಿವಯಸ್ಸಿನ ಕಾರಣ ಅಪ್ಪೆಮಿಡಿ ಭಟ್ಟರು ಉಪ್ಪಿನಕಾಯಿ ಹಾಕುವುದನ್ನು ನಿಲ್ಲಿಸಿದ್ದಾರೆ.)
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications