ಫೋನೇಜಲ್ಲ, ವೊನೇಜಲ್ಲ ಸ್ಟೋನೇಜ್

ಹೀಗೊಪ್ಪುವ ಸ್ವಯಂಚಾಲಿತ ಮಾರುತ್ತರವನ್ನು ಬಲವಂತವಾಗಿ ಕೇಳಿಸಿ ಕರೆದವರನ್ನು ಸುಮ್ಮನಾಗಿಸುವ ಸಾಧನ ಸೆಲ್ ಫೋನಿನೊಳಗೆ ಇದ್ದಾಗ್ಯೂ ಕೂಡ ಹಲವೊಮ್ಮೆ ಅನೇಕ ಕಿರಿಕಿರಿಗಳು ಆಗುತ್ತಲೇ ಇರುತ್ತವೆ. ಕರೆಗಳನ್ನು ಸ್ವೀಕರಿಸುವುದಕ್ಕೆ, ಮಾಡುವುದಕ್ಕೆ, ರಿಸೀವರ್ ಎತ್ತಲಾಗದೆ ಇರುವುದಕ್ಕೆ ಸಾಕು ಬೇಕಾದಷ್ಟು ಹೊಸ ಹೊಸ ಸಾಂದರ್ಭಿಕ ಉದಾಹರಣೆಗಳು ಪ್ರತಿನಿತ್ಯ ಎದುರಾಗುವುದರಿಂದ ಹೀಗಾಗುತ್ತಿದೆಯೋ ಏನೋ.
ಓಡಿಸುತ್ತಿದ್ದ ಎರಡು ಚಕ್ರದ ಗಾಡಿಯನ್ನು ನಿಲ್ಲಿಸಿ ಅಥವಾ ಇಹಕ್ಕೂ ಇಲ್ಲ ಪರಕ್ಕೂ ಇಲ್ಲ ಎಂಬಂತಹ ಬೋರು ಮೀಟಿಂಗುಗಳನ್ನು ಅಲ್ಲಿಗೇ ಸಮಾಪ್ತಿಗೊಳಿಸಿ ಗಡಿಬಿಡಿಯಿಂದ ತಪ್ಪಿಹೋದ ಕರೆಗಳಿಗೆ ರಿಂಗ್ ಮಾಡಿದರೆ ಅದೂ ಒಂದು ತಪ್ಪಾಗುವ ಸಂಭವ ಎದುರಾಗುತ್ತದೆ. ಏಕೆಂದರೆ, ನಾವು ಅವರಿಗೆ ವಾಪಸ್ಸು ಕಾಲ್ಮಾಡುವ ಹೊತ್ತಿಗೆ ಕರೆ ಮಾಡಿದವರಿಗೆ ಕಾಲ್ ಮಿಸ್ ಅಥವಾ ಮಿಸ್ ಕಾಲ್ ಕೊಟ್ಟಿದ್ದೇ ಮರೆತು ಹೋಗಿರಬಹುದು ಅಥವಾ ಇನ್ನೊಂದೂ ಕಾರಣವಿರಬಹುದು.
ಅವರ ಕಾಲ ಮಿಂಚಿ ಹೋಗಿರತ್ತೆ! ಆ ಹೊತ್ತಿಗೆ ನಿಮ್ಮ ಅವಶ್ಯಕತೆಯೇ ಅವರಿಗೆ ಇಲ್ಲವಾಗಿರತ್ತೆ. ನೀವು ಅವರಿಗೆ ಬೇಡವಾಗಿರುತ್ತೀರಿ. ಆದಾಗ್ಯೂ ಅವರಬಾಯಿ ನಿಮ್ಮ ಕಿವಿಗಳು ವಿನಾಕಾರಣ ಸಂಧಿಸಿದ ಪ್ರಮಾದಕ್ಕಾಗಿ ಅಸ್ಥಿತ್ವವೇ ಇಲ್ಲದ ಹಳೆ ವಿಷಯದ ಜಾಗದಲ್ಲಿ ಅನಪೇಕ್ಷಿತ ಹೊಸ ವಿಚಾರ ಇಣುಕಿ ಸುಖಾಸುಮ್ಮನೆ ನಾಕಾರು ನಿಮಿಷ ದಾಕ್ಷಿಣ್ಯದ ಮಾತುಗಳು ಹುಟ್ಟಿಕೊಳ್ಳುತ್ತವೆ. ಇದೇ ಒಂದು ಅಪರಾಧವಾಗಿ ಯಾವುದೋ ಪರದೇಶಿ ಕಂಪನಿ ಬೊಕ್ಕಸಕ್ಕೆ ಇನ್ನೂ ನಾಕು ಕಾಸು ಹಣ ಭರ್ತಿ ಆಗತ್ತೆ.
ಪರಸ್ಪರ ಸಮಯಾನುಕೂಲತೆಯ ಏರುಪೇರುಗಳಿಂದಾಗಿ ಕರೆ ಬಂದ ತಕ್ಷಣ ಫೋನ್ ಎತ್ತಿ ಕಿವಿಗೆ ತಾಗಿಸಲು ಸಾಧ್ಯವಾಗದ ವಿದ್ಯಮಾನ ವಿಶ್ವವ್ಯಾಪಿ. ಫೋನು ಸೌಕರ್ಯ ಬಂದಾಗಿನಿಂದಲೂ ಚಾಲ್ತಿಯಲ್ಲಿರುವ ಬವಣೆಯಿದು ಎಂದು ಋಜುಮಾಡಬಹುದು. ಈಚೀಚೆಗಂತೂ ವೆಬ್ ಮತ್ತು ಫೋನ್ ಸೌಕರ್ಯಗಳಿಂದಾಗಿ ಭಾರತ ಮತ್ತು ಪರದೇಶಗಳ ಭೂಪಟ ಒಂದಕ್ಕೊಂದು ಪಿನ್ ಆಗಿವೆ. ಲೋಕಲ್ ಕಾಲ್ ಯಾವುದು? ಫಾರಿನ್ ಕರೆ ಯಾವುದು? ಎರಡೂ ಅಲ್ಲದ್ದು ಯಾವುದು? ಒಂದೂ ಗೊತ್ತಾಗೋದಿಲ್ಲ.
ಇಂಥ ಪ್ರಸಂಗಗಳನ್ನು ದುಪ್ಪಟ್ಟು ಮಾಡುತ್ತಿರುವ 'ಆರೋಪ'ವನ್ನು ಅಮೆರಿಕಾದ ಒಂದು ಟೆಲಿಫೋನ್ ಕಂಪನಿ ಮೇಲೆ ಹೊರಿಸುತ್ತಿರುವುದಕ್ಕೆ ಇವತ್ತು ನನಗೇ ತಮತಮಾಷೆ ಎನಿಸುತ್ತೆ. ಹಾಗಾಗಿ ತಾವು ಇದನ್ನು ಹಾಸ್ಯ ಬರಹ ಎಂದು ಕಡ್ಡಾಯವಾಗಿ ಓದಿಕೊಳ್ಳತಕ್ಕದ್ದು.
ಉತ್ತರ ಅಮೆರಿಕಾದಲ್ಲಿ ವೊನೇಜ್ ಎಂಬ ಟೆಲಿಫೋನ್ ಇದೆ. ವಾಯ್ಸ್ ಓವರ್ ಐಪಿ ಸೌಲಭ್ಯದಿಂದಾಗಿ ವೊನೇಜ್ ಆ ಸಮಾಜದಲ್ಲಿ ತುಂಬಾನೇ ಜನಪ್ರಿಯ. ಈ ಫೋನಿನ ಬೆಲೆಗಳು ತೀರಾ ಕಡಿಮೆ. ತಿಂಗಳೊಪ್ಪತ್ತಿಗೆ ಬಾಟಾ ಕಂಪನಿ ರೇಟ್ 24.99 ಡಾಲರ್ ತೆತ್ತರೆ ಮುಗಿಯಿತು. ಮನಃಪೂರ್ತಿ ಮಾತನಾಡಬಹುದು. ಯಾವಾಗಲಾದರೂ ಮಾತನಾಡಬಹುದು. ಉತ್ತರ ಅಮೆರಿಕಾ, ಕೆನಡಾದ ಮೂಲೆಮೂಲೆಗಳಿಗೆ ಕರೆಮಾಡಿ ಎಷ್ಟು ಬೇಕಾದರೂ ಹರಟೆ ಕೊಚ್ಚಬಹುದು.
ಇಷ್ಟೇ ಆಗಿದ್ದರೆ ಪರವಾಗಿಲ್ಲ. ಅಮೆರಿಕಾದವರು ಅಮೆರಿಕಾ ಬಂಧುಗಳ ಜತೆಗೆ ಮಾತ್ರ ಮಾಡಬಹುದಾಗಿದ್ದ ಅನ್ ಲಿಮಿಟೆಡ್ ಅಂತಾರಾಷ್ಟ್ರೀಯ ಕರೆ ಸೌಲಭ್ಯವನ್ನು ವೊನೇಜ್ ಕಳೆದ ವರ್ಷ ಯೂರೋಪ್ ದೇಶಗಳಿಗೂ ವಿಸ್ತರಿಸಿತು. ಅದೇ 24.99 ಡಾಲರುಗಳಿಗೆ ಫ್ರಾನ್ಸ್, ಇಟಲಿ, ಯುಕೆ, ಜರ್ಮನಿಗೂ ಅನ್ ಲಿಮಿಟೆಡ್ ಕರೆ ಮಾಡುವ ಸೌಲಭ್ಯ ದಕ್ಕಿತು.
ಇಷ್ಟೇ ಅಲ್ಲ, 2009ರಿಂದ ಈ ಸೌಲಭ್ಯವನ್ನು ವೊನೇಜ್ ಭಾರತವೂ ಸೇರಿದಂತೆ ಇತರ 60 ದೇಶಗಳಿಗೆ ಚಾಚಿತು. ಈ ಬಗೆಯ ದುಡ್ಡು ಕಡಿಮೆ ಮಾತು ಜಾಸ್ತಿ ಸೌಲಭ್ಯದ ಜಾಗತೀಕರಣದಿಂದಾಗಿ ಅಮೆರಿಕನ್ನರು, ಅಂದರೆ ಅನಿವಾಸಿ ಕನ್ನಡಿಗರು ಕರ್ನಾಟಕದ ನಂಬರುಗಳಿಗೆ ಟ್ರಿಂಗ್ ಟ್ರಿಂಗ್ ಹೊಡೆಯುವ ಅನುಕೂಲ ಹೆಚ್ಚಾಯಿತು.
ದಟ್ಸ್ ಕನ್ನಡದ ಎಷ್ಟೋ ಮಿತ್ರರು ಸಂಪಾದಕರು ಇಂಡಿಯಾದಲ್ಲಿ ಇದ್ದಾರೆ ಎಂಬುದನ್ನು ಕ್ಷಣ ಮರೆತು ನೆನಪಾದಾಗಲೆಲ್ಲ ವೊನೇಜಿನಿಂದ ಕಾಲ್ ಹೊಡೆಯುವುದಕ್ಕೆ ಶುರುಮಾಡಿದ್ದಾರೆ. ಹಾಗಾಗಿ ಕಾಲ್ ಮಿಸ್ ಗಳ ಭರಾಟೆ ಜೋರಾಗಿದೆ. ಪೂರ್ವ ಕರಾವಳಿಯಲ್ಲೊಂದು ಸಮ್ಮೇಳನ, ಪಶ್ಚಿಮ ಕರಾವಳಿ ತೀರದಲ್ಲೊಂದು ಸಮ್ಮೇಳನಕ್ಕೆ ಸಿದ್ಧತೆ ನಡೆಯುತ್ತಿರುವಾಗ ಹೀಗಾಗುವುದು ಸಹಜ. ಯಾವ ಪ್ರದೇಶದಿಂದ ಕರೆ ಬಂದಿದೆ ಎಂದು ಗೊತ್ತುಪಡಿಸಿಕೊಂಡ ನಂತರ ಆ ದೇಶದ ಗಡಿಯಾರಗಳನ್ನು ಮನಸ್ಸಿನಲ್ಲೇ ಚಿತ್ರಿಸಿಕೊಂಡು, ನನ್ನ ಕೈಗಡಿಯಾರ ನೋಡಿಕೊಂಡು ಮಾತನ್ನು ಶುರು ಮಾಡಲು ಕಲಿತಿದ್ದೇನೆ.
ವೊನೇಜ್ ಕಂಪನಿಯನ್ನು ವೃಥಾ ಟೀಕಿಸುವುದು ಬಿಟ್ಟು ಅವರಲ್ಲಿರುವ ಒಂದು ಒಳ್ಳೆಯ ಅಂಶವನ್ನು ಮಾತ್ರ ನಾವು ಸ್ವೀಕರಿಸುವುದು ಯೋಗ್ಯ. ತಮ್ಮ ನಂಬರುಗಳನ್ನು ಹಾಗೇ ಉಳಿಸಿಕೊಂಡು ಟೆಲಿಫೋನ್ ಕಂಪನಿಯನ್ನು ಬದಲಾಯಿಸುವ (Number portability) ಸೌಲಭ್ಯ ಅಮೆರಿಕಾದಲ್ಲಿ ಇದೆ. ವೊನೇಜ್ ಕಲ್ಪಿಸಿರುವ ಇತರ ಎಲ್ಲ ಸೌಲಭ್ಯಗಳಿಗಿಂತ ನಂಬರ್ ಪೋರ್ಟಬಿಲಿಟಿ ಸೌಕರ್ಯ ಜಾರಿಯಿರುವ ಅಮೆರಿಕಾ ಸಮಾಜದ ಟೆಲಿಫೋನ್ ಜಾಲ ವ್ಯವಸ್ಥೆಯ ಮೇಲೆ ನನ್ನ ಕಣ್ಣು ಬಿದ್ದಿದೆ. ಭಾರತದಲ್ಲಿ ಸೆಲ್ ಮತ್ತು ಸ್ಥಿರ ದೂರವಾಣಿ ಸೌಲಭ್ಯ ಕೊಡಮಾಡುವ ಕಂಪನಿಗಳು ಪೋರ್ಟಬಿಲಿಟಿ ಸೌಲಭ್ಯ ಜಾರಿಗೆ ತರುವುದಾಗಿ ಸ್ಟೇಟ್ ಮೆಂಟು ಕೊಡುತ್ತಲೇ ಬಂದಿವೆ.
'ಡಿಸೆಂಬರ್ ಅಂತ್ಯದ ವೇಳೆಗೆ ನಂಬರ್ ಪೋರ್ಟಬಿಲಿಟಿ', '31 ಮಾರ್ಚ್ 2010ಕ್ಕೆ ನಂಬರ್ ಪೋರ್ಟಬಿಲಿಟಿ' ಎಂದು ಮುಂತಾದ ಸ್ಟೇಟ್ ಮೆಂಟುಗಳನ್ನು ಟೆಲಿಫೋನ್ ಮತ್ತು ಕಮ್ಯುನಿಕೇಷನ್ ಮಂತ್ರಿಗಳಾದ ಎ ರಾಜಾ ಮತ್ತು ಸಚಿನ್ ಪೈಲಟ್ ಹೇಳಿಕೊಂಡೇ ಬಂದಿದ್ದಾರೆ. ಈ ಸೌಲಭ್ಯವನ್ನು ಜಾರಿ ಮಾಡಬೇಡಿ ಎಂದು ಸಚಿವರ ಕಿವಿಗಳಲ್ಲಿ ಯಾರೋ ಉಸುರಿರಬೇಕು.












Click it and Unblock the Notifications