• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಪ್ರಭದಿಂದ ಪ್ರತಿಭಾ ಪಲಾಯನ

By * ಎಸ್ಕೆ. ಶಾಮ ಸುಂದರ
|

ಕನ್ನಡದ ಹೆದ್ದಾರಿ ಸುದ್ದಿ ವಾಹಿನಿಗಳಲ್ಲಿ ಒಂದಾಗಿ ರೂಪುಗೊಳ್ಳಲು ತವಕಿಸುತ್ತಿರುವ ಸುವರ್ಣ ಚಾನಲ್ ನಲ್ಲಿ ಈಗ ಬದಲಾವಣೆಯ ಗಾಳಿ ಪ್ರಬಲವಾಗಿ ಬೀಸುತ್ತಿದೆ. ಹಳೆ ನೀರು ಕೊಚ್ಚಿಹೋಗಿ ಹೊಸ ನೀರು ನುಗ್ಗಲು ತಗ್ಗು ಪ್ರದೇಶ ಚಾನಲ್ಲಿನಲ್ಲಿ ಸೃಷ್ಟಿಯಾಗಿದೆ. ಪತ್ರಕರ್ತರ ತಲೆಗಳು ಉರುಳುತ್ತಿವೆ. ಜವಾಬ್ದಾರಿಯನ್ನು ಹೊರಲು ಅಣಿಯಾಗಿರುವ ಹೊಸ ತಲೆಗಳಿಗೋಸ್ಕರ ಚಾನಲ್ ಕಚೇರಿಯಲ್ಲಿರುವ ಆಯಕಟ್ಟಿನ ಕೋಣೆಗಳನ್ನು ನವೀಕರಿಸಲಾಗುತ್ತಿದೆ.

ಪ್ರಮುಖವಾಗಿ ಚಾನಲ್ಲಿನ ಮುಖ್ಯಸ್ಥ ಗಡ್ಡಧಾರಿ ಶಶಿಧರ ಭಟ್ ಅವರನ್ನು ಸೈಡ್ ವಿಂಗಿಗೆ ತಳ್ಳಲಾಗುತ್ತಿದ್ದು, ಅವರ ಜಾಗಕ್ಕೆ ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕ ಎಚ್.ಆರ್. ರಂಗನಾಥ್ ನೇಮಕ ಮಾಡಲಾಗಿದೆ. ಸೈಡ್ ವಿಂಗ್ ಎಂದರೆ, ಏಷಿಯಾ ನೆಟ್ ಸಂಸ್ಥೆಯ ಪರಿಧಿಯಲ್ಲಿ ಬೇಕಾದಷ್ಟು ಇತರೆ ಅಂಗಸಂಸ್ಥೆಗಳಿವೆ. ಜ್ಯುಪಿಟರ್ ಎಂಬ ಸಂಸ್ಥೆಗೋ ಅಥವಾ ರಾಜ್ಯಸಭಾ ಸದಸ್ಯ, ಸುವರ್ಣ ಚೇರ್ಮನ್ ರಾಜೀವ್ ಚಂದ್ರಶೇಖರ್ ಅವರ ರಾಜಕೀಯ ಕಾರ್ಯದರ್ಶಿಯನ್ನಾಗಿಯೋ ಶಶಿಧರ ಭಟ್ ಅವರನ್ನು ಅಟ್ಟಲಾಗುವುದೆಂಬ ಸುದ್ದಿ ದಟ್ಟವಾಗಿದೆ.

ಕನ್ನಡಪ್ರಭದ ಸಂಪಾದಕ ಹುದ್ದೆಗೆ ರಂಗನಾಥ್ ಅವರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದ್ದು, ಅವರು ಸುವರ್ಣ ಚಾನಲ್ಲಿನ ಮುಖ್ಯಸ್ಥರಾಗಿ ಸೆಪ್ಟೆಂಬರ್ 1ರಂದು ಅಧಿಕಾರ ಗ್ರಹಣ ಮಾಡಲಿದ್ದಾರೆ. ರಂಗನಾಥ್ ಅವರ ಜತೆಗೆ ಕನ್ನಡಪ್ರಭದಲ್ಲಿರುವ ಕೆಲವು ಹಿರಿಯ, ಅನುಭವಿ ಪತ್ರಕರ್ತರೂ ಪತ್ರಿಕೆಯ ಉದ್ಯೋಗ ತೊರೆದು ಟಿವಿ ಪತ್ರಿಕೋದ್ಯಮಕ್ಕೆ ದಾಂಗುಡಿಯಿಡುವ ಸನ್ನಾಹದಲ್ಲಿದ್ದಾರೆಂದೂ ಊರೆಲ್ಲ ಗುಲ್ಲಾಗಿದೆ. ಗುಲ್ಲನ್ನು ಅಲ್ಲಗೆಳೆಯುವ ಮಂದಿಯೂ ಇದ್ದು, ಜೋಗಿಮನೆ ಬ್ಲಾಗಿನ ಜೋಗಿ ಉರುಫ್ ಗಿರೀಶ್ ರಾವ್, ಉದಯ ಮರಕಿಣಿ ಮತ್ತು ರಂಗಾ ಅವರ ಬಲಗೈ ಬಂಟ ರವಿ ಹೆಗಡೆ ಅವರೂ ಸಹ ಕನ್ನಡಪ್ರಭಕ್ಕೆ ರಾಜಿನಾಮೆ ಕೊಟ್ಟು ಸುವರ್ಣಾಗೆ ಹೋಗಲು ಕಿಟ್ ಬ್ಯಾಗ್ ರೆಡಿ ಮಾಡಿಕೊಂಡಿದ್ದಾರೆ.

ಆದರೆ, ರಂಗನಾಥ್ ಅವರಿಗೆ ತಮ್ಮ ತಂಡವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಸುವರ್ಣ ಆಡಳಿತ ವರ್ಗ ನೀಡಿರುವುದರಿಂದ ಅವರು ಅಧಿಕಾರ ಸ್ವೀಕರಿಸುವವರೆಗೂ ಕನ್ನಡಪ್ರಭದಿಂದ ಸುವರ್ಣಕ್ಕೆ ಗುಳೆ ಹೋಗುವವರ ಸುದ್ದಿಯನ್ನು ಮುಗುಂ ಆಗಿ ಇಡಲಾಗಿದೆಯಷ್ಟೆ. ಇದೇ ವೇಳೆ, ರಂಗನಾಥ್ ಅವರ ನಿರ್ಗಮನದಿಂದ ಹಠಾತ್ತನೆ ಸೃಷ್ಟಿಯಾಗುತ್ತಿರುವ ಖಾಲಿಕುರ್ಚಿಯನ್ನು ತುಂಬುವ ಕನ್ನಡಪ್ರಭ ಸಂಪಾದಕರಾರೆಂಬುದು ಇನ್ನೂ ಇತ್ಯರ್ಥವಾಗಿಲ್ಲ. ಅದೇನಿದ್ದರೂ ಚೆನ್ನೈನಲ್ಲಿರುವ ಇಂಡಿಯನ್ ಎಕ್ಸ್ ಪ್ರೆಸ್ ಆಡಳಿತವರ್ಗವೇ ನಿರ್ಧರಿಸಬೇಕಾಗಿದ್ದು, ಸಮರ್ಥ ಸಂಪಾದಕ ಅಥವಾ ಸಂಪಾದಕಿಗಾಗಿ ಹುಡುಕಾಟ ನಡೆದಿದೆ.

ವೆಂಕಟನಾರಾಯಣ್ ಎಂಬ ಪತ್ರಕರ್ತರು ಕನ್ನಡಪ್ರಭದ ಸಂಪಾದಕರಾಗಿದ್ದರು. ಅವರ ಗುತ್ತಿಗೆ ಅವಧಿ ಎಕ್ಸ್ ಪೈರ್ ಆದನಂತರ ಸಂಪಾದಕರಾಗಿ ಬಂದ ತಮ್ಮ ಗೆಳೆಯರ ಪ್ರೀತಿಯ ರಂಗಾ, ಕನ್ನಡಪ್ರಭಕ್ಕೆ ಹೊಸ ಆಯಾಮ, ಹೊಸ ಚೌಕಟ್ಟನ್ನು ಕಟ್ಟಿಕೊಟ್ಟಿದ್ದರು. ಅವರಿಗೆ ಬೆನ್ನೆಲುಬಾಗಿ ನಿಂತಿದ್ದ ಅನುಭವಿ ಪತ್ರಕರ್ತರೂ ಸುವರ್ಣ ಟಿವಿಗೆ ಗುಳೆ ಹೋಗುವ ಸಾಧ್ಯತೆ ನಿಚ್ಚಳವಾಗಿರುವುದರಿಂದ ಪತ್ರಿಕೆಗೆ ಸಂಪಾದಕರನ್ನು ಔಟ್ ಸೋರ್ಸ್ ಮಾಡಿಕೊಳ್ಳಲೇ ಬೇಕಾದ ಪರಿಸ್ಥಿತಿ ಇಂಡಿಯನ್ ಎಕ್ಸ್ ಪ್ರೆಸ್ ಮಧುರೈ ಪ್ರೈವೇಟ್ ಲಿಮಿಟೆಡ್ ಆಡಳಿತ ವರ್ಗಕ್ಕೆ ಎದುರಾಗಿದೆ.

ಇತ್ತ ಸುವರ್ಣ ಚಾನಲ್ಲಿನಲ್ಲಿ ಎಲ್ಲವೂ ಸರಿಯಿಲ್ಲ, ಮಾರುಕಟ್ಟೆ ಮತ್ತು ವೀಕ್ಷಕರ ಬೇಡಿಕೆಗೆ ಅನುಗುಣವಾಗಿ ಸುದ್ದಿ ಉತ್ಪನ್ನ ಮತ್ತು ಸುದ್ದಿ ಸಂಸ್ಕಾರಗಳು ಆಗುತ್ತಿಲ್ಲ ಎಂಬ ಅಪಸ್ವರಗಳು ಕೆಲವು ದಿನಗಳಿಂದ ಕೇಳಿಬರುತ್ತಿದ್ದವು. ಈ ಅಸಮಾಧಾನದ ಹಿನ್ನೆಲೆಯಲ್ಲಿ ಹೊಸಬರ ಆಯ್ಕೆಯ ಸುದ್ದಿಗೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ. ಮೇಲಾಗಿ ಕನ್ನಡ ವಾಹಿನಿಗಳ ಪ್ರಬಲ ಪೈಪೋಟಿ ಇರುವುದರಿಂದ ತಮ್ಮ ಚಾನಲ್ಲನ್ನು ತಮ್ಮ ಸಮೀಪ ಪ್ರತಿಸ್ಪರ್ಧಿಗಳಿಗಿಂತ ಮೇಲೆಕ್ಕೆತ್ತಲು ಸುವರ್ಣ ಮ್ಯಾನೇಜ್ ಮೆಂಟ್ ಕೆಲವು ಕ್ರಮಗಳನ್ನು ಕೈಗೆತ್ತಿಕೊಂಡಿವೆ.

ನಿಮಗೆ ಆಶ್ಚರ್ಯವಾಗಬಹುದು. ಸುವರ್ಣ ಚಾನಲ್ಲಿನಲ್ಲಿ ಪ್ರಸಾರವಾಗುವ ಒಂದು ಧಾರಾವಾಹಿಯ ಬಗ್ಗೆ ಚಿತ್ರಮಂದಿರಗಳಲ್ಲಿ ಜಾಹಿರಾತು ಪ್ರಸಾರವಾಗುತ್ತದೆ. ಬೆಂಗಳೂರಿನ ಕಾಂಪೌಂಡುಗಳ ಮೇಲೆ ಚಾನಲ್ ಕಾರ್ಯಕ್ರಮಗಳ ಬಗೆಗಿನ ಭಿತ್ತಿ ಚಿತ್ರಗಳು ಕಣ್ಣು ಮಿಟುಕಿಸುತ್ತವೆ. ಸುವರ್ಣ ಟಿವಿಯ ಮನೋರಂಜನೆ ವಿಭಾಗ ಉದಯ ಟಿವಿ ನಂತರದ ಎರಡನೆಯ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಅಲುಗಾಡುತ್ತಿರುವ ಜೀಕನ್ನಡ ಟಿವಿ ನಂತರದಲ್ಲಿ ನಾಲಕ್ಕನೇ ಸ್ಥಾನದಲ್ಲಿ ಕುಕ್ಕರಿಸಿರುವ ಈಟಿವಿ ಕನ್ನಡ ಚಾನಲ್ ರಾಮೋಜಿರಾವ್ ಅವರಿಗೆ ಚೂರು ತಲೆನೋವು ತಂದಿದೆ.

ಟಿವಿ9 ಚಾನಲ್ಲಿನಿಂದಲೂ ಪತ್ರಕರ್ತರು ಸುವರ್ಣ ಚಾನಲ್ಲಿಗೆ ಜಂಪ್ ಆಗುತ್ತಾರೆಂಬ ಸುದ್ದಿ ಇದೆ. ಆದರೆ, ನಮ್ಮ ಟಿವಿ ರೌಂಡ್ ಅಪ್ ಬಾತ್ಮೀದಾರರ ಪ್ರಕಾರ, ನಾವು ಟಿವಿ9 ರ ಪರದೆಯ ಮೇಲೆ ನಿತ್ಯ ನೋಡುವ ಪರ್ತಕರ್ತರು ಮತ್ತು ಸುವರ್ಣ ಅಧಿಕಾರಿಗಳ ನಡುವೆ ನಡೆದ ಡೀಲುಗಳು ಕುದುರದೆ ಮಾತುಕತೆಗಳು ನಿಂತಲ್ಲೆ ನಿಂತುಬಿಟ್ಟಿವೆಯಂತೆ. ಈ ಮಧ್ಯೆ, ಪತ್ರಕರ್ತರು ಬೇಕಾಗಿದ್ದಾರೆ ಎಂಬ ಸುವರ್ಣ ಜಾಹಿರಾತಿಗೆ ಓಗೊಟ್ಟು ಸಂದರ್ಶನ, ಲಿಖಿತ ಪರೀಕ್ಷೆ ಬರೆದವರ ಪಟ್ಟಿ ದೊಡ್ಡದಿದೆ. ಆದರೆ, ಅವರಲ್ಲಿ ಯಾರನ್ನೂ ಕೆಲಸಕ್ಕೆ ಇದುವರೆವಿಗೂ ನೇಮಿಸಿಕೊಂಡಿಲ್ಲ.

ಇನ್ ಕಂಬಂಟ್ ಸಂಪಾದಕ ರಂಗನಾಥ್ ಅವರೇ ಆ ಫೈಲನ್ನು ಕೇಳಿ ತರಿಸಿ ನೋಡುವವರೆಗೂ ಸಂದರ್ಶನಕ್ಕೆ ಹಾಜರಾದವರು ಕಾಯಬೇಕಾಗಿದೆ. ಅಷ್ಟೇ ಅಲ್ಲದೆ, ಸದ್ಯ ಸುವರ್ಣದಲ್ಲಿ ಕೆಲಸ ಮಾಡುತ್ತಿರುವ ಮಂದಿ ಹೊಸ ಸಂಪಾದಕರ ಮನೋಧರ್ಮಕ್ಕೆ, ವೃತ್ತಿ ಧೋರಣೆಗೆ ಹೊಂದಿಕೊಳ್ಳುವುದು ಹೇಗೆ ಎಂದು ಅರ್ಥಮಾಡಿಕೊಳ್ಳಲು ಶಾಬಾದಿಮಠದ ಗೈಡ್ ಗಳನ್ನು ತಿರುವಿ ಹಾಕುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X