ನಿತ್ಯಹರಿದ್ವರ್ಣ ವನದಲ್ಲಿ ಮೃತ್ಯುಚುಂಬನ!
ನ್ಯಾಯದ ಹೆಸರಲ್ಲಿ ಹಿಂಸೆ ಸರಿಯೇ? ನಕ್ಸಲ್ ಸಿದ್ಧಾಂತ ತಪ್ಪೇ? ನಕ್ಸಲರ ಸೃಷ್ಟಿಗೆ ಆಡಳಿತ ಯಂತ್ರ ಎಷ್ಟು ಕಾರಣ? ನಕ್ಸಲರ ಹಾವಳಿ ತಡೆಗಟ್ಟಲಾಗದಿರುವುದಕ್ಕೆ ಆಡಳಿತ ಯಂತ್ರ ( ಶಂಕರ ಬಿದರಿ ಎಂದು ಓದಿಕೊಳ್ಳಬೇಕು) ಎಷ್ಟು ಕಾರಣ? ಇವು ಸದ್ಯದ ಪ್ರಶ್ನೆಗಳು.
ಜೈವಿಕ ವೈವಿಧ್ಯ , ನಿತ್ಯಹರಿದ್ವರ್ಣ ಕಾನನ ಮತ್ತು ನಿಶ್ಯಬ್ದ ಇದು ಪಶ್ಚಿಮಘಟ್ಟ ಕುರಿತ ನಿನ್ನೆಯ ಮಾತಾಯಿತು. ಘಟ್ಟದಿಂದ ನಮಗೆ ಇವತ್ತು ಕೇಳಿ ಬರುತ್ತಿರುವುದು ತುಪಾಕಿಗಳ ಶಬ್ದ ಮತ್ತು ಕಾಣಿಸುತ್ತಿರುವುದು ಮದ್ದು ಗುಂಡಿನ ಹೊಗೆ. ಅದರೊಟ್ಟಿಗೆ ವಿವಾದಗಳ ಹೊಗೆ.
ಶಾಂತಿಗೆ ಮತ್ತು ಸಹಬಾಳ್ವೆಗೆ ಇನ್ನೊಂದು ಹೆಸರೇ ಆಗಿರುವ ಕರ್ನಾಟಕದಲ್ಲಿ, ಇವತ್ತು ಎಲ್ಲ ಕ್ಷೇತ್ರಗಳೂ ಒಂದಲ್ಲ ಒಂದು ರೀತಿಯ ಕ್ಷೋಭೆಗೆ ಗುರಿಯಾಗಿವೆ. ಪಶ್ಚಿಮ ಘಟ್ಟವೂ ಇದಕ್ಕೆ ಹೊರತಾಗಿಲ್ಲ. ಪ್ರತಿಯೊಂದು ಮನೆಯಲ್ಲೂ ಒಬ್ಬ ದಂಗೆಕೋರ ಇರುತ್ತಾನೆ. ಅವನಿಗೆ ಅವನದ್ದೇ ಆದ ತೆವಲುಗಳು ಮತ್ತು ಅದಕ್ಕೆ ಸರಿಹೊಂದುವಂಥ ಸಿದ್ಧಾಂತಗಳು ಇರುತ್ತವೆ. ಹೀಗಿರುವಾಗ ಸಮಗ್ರ ಮಲೆನಾಡು ಕುದುರೆಮುಖ ಪ್ರದೇಶ ಘಟ್ಟದ ಸಾಲಿನ ಹಳ್ಳಕೊಳ್ಳಗಳಲ್ಲಿ, ಗಿರಿಕಂದರಗಳಲ್ಲಿ ನಾಲ್ಕಾರು ಮಂದಿ ದಂಗೆಕೋರರು ಹುಟ್ಟಿಕೊಳ್ಳುವುದು ಅಸಹಜವೇನಲ್ಲ, ದಂಗೆ ಮತ್ತು ದರೋಡೆಕೋರರಿಗೆ ಸಿದ್ಧಾಂತ ಎನ್ನುವುದು ಇದ್ದರೆ ಆಶ್ಟರ್ಯವೇನಿಲ್ಲ. ಸಿದ್ಧಾಂತ ಯಾರಪ್ಪನ ಮನೆ ಸೊತ್ತೂ ಅಲ್ಲ.
ಸಾಮಾಜಿಕ ಸಮಸ್ಯೆಗಳು ಆರಂಭವಾದಾಗ ಚಿಕ್ಕದಾಗೇ ಕಾಣುತ್ತದೆ. ಬೆಳೆಯಲು ಬಿಟ್ಟರೆ ಬೃಹದಾಕಾರವಾಗುವುದು ನಿಶ್ಚಿತ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ. ವೀರಪ್ಪನ್ ಕೂಡ ಚಾಮರಾಜನಗರದಲ್ಲಿ ತನ್ನ ಪ್ರೊಫೆಷನ್ ಆರಂಭಿಸುವ ಮುನ್ನ, ಗಂಧದ ಮರ ಮತ್ತು ತನಗೆ ಎದುರಾಗುವವರ ತಲೆಕಡಿಯುವ ಮುನ್ನ ವೀಳೆಯದೆಲೆ ಕಳ್ಳನಾಗಿದ್ದ. ಆಮೇಲೆ ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಏನೇನಾಯಿತು ಎಂದು ನಿಮಗೆ ನೆನಪಿಸುವ ಅಗತ್ಯವಿಲ್ಲ.
ಪಶ್ಚಿಮಘಟ್ಟದ ಪರಿಸ್ಥಿತಿ ಇದಕ್ಕಿಂತ ಬೇರೆಯಲ್ಲ. ಸಾಮಾಜಿಕ ನ್ಯಾಯ (?), ಮಲೆನಾಡಿನ ಅಭಿವೃದ್ಧಿ ಹಾಗೂ ಗಿರಿಜನರ ಕಲ್ಯಾಣದ ಘೋಷಣೆಗಳ ನಡುವೆ ನಕ್ಸಲೀಯರು ಎಂದು ತಮ್ಮನ್ನು ತಾವು ಗುರುತಿಸಿಕೊಳ್ಳುವ ಒಂದಿಷ್ಟು ಮಂದಿ ಉಗ್ರರಾಗಿದ್ದಾರೆ. ಅಂಥ ನಕ್ಸಲರನ್ನು ನಕಲು ಮಾಡುವ ಕೆಲವರು ಪುಢಾರಿಗಳು, ಸ್ಥಳೀಯ ಕಳ್ಳಕಾಕರು ಸೇರಿಕೊಂಡು ಮಲೆನಾಡಿನ ಜನಜೀವನವನ್ನು ಅಸ್ತವ್ಯಸ್ಥಗೊಳಿಸುವಲ್ಲಿ ಸಫಲತೆ ಕಾಣುವ ಆಶೆ ಇಟ್ಟುಕೊಂಡಿದ್ದಾರೆ. ಆದಷ್ಟೂ ನಾವು ಇಲ್ಲಿ ರಾಜಕಾರಣಿಗಳ ಬಗೆಗೆ , ಅವರ ಕುಟಿಲೋಪಾಯಗಳ ಬಗೆಗೆ ಬರೆಯುವುದಿಲ್ಲ. ಕಾರಣ, ಅವರಿಗಿಂತ ಹಿರಿಯರಾದ ನಕ್ಸಲರು ಈ ಪ್ರಾಂತ್ಯದಲ್ಲಿ ಇಲ್ಲ.
ಮುಂದೇನು?
ಮಲೆನಾಡಿನ ಜಿಲ್ಲೆಗಳ ಅಭಿವೃದ್ಧಿಗೆ, ಗಿರಿಜನರ ಕಲ್ಯಾಣಕ್ಕೆ ಶ್ರಮಿಸಲು ಹೋರಾಟ ಮಾಡುತ್ತಿರುವುದಾಗಿ ನಕ್ಸಲರು ಹೇಳುತ್ತಿದ್ದಾರೆ. ನಕ್ಸಲ್ ಹೋರಾಟದ ಹೆಸರಲ್ಲಿ ಪುಂಡಾಟಿಕೆ ನಡೆದಿದೆ ಎನ್ನುತ್ತದೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರಕಾರ. ಅದೇ ಸರ್ಕಾರದ ವಾದ.
ಮಾವೊವಾದಿಗಳನ್ನು ಕರೆದು ಮಾತುಕತೆ ನಡೆಸುವ ಸರಕಾರದ ಉಮೇದು ಈಗ ಆಗಬೇಕಾಗಿರುವ ಮೊದಲನೆ ಕೆಲಸ. ಅಲ್ಲಿಯವರೆಗೆ ಮಲೆನಾಡಿನಲ್ಲಿ ರಾತ್ರೋರಾತ್ರಿ ಮನೆಗೆ ನುಗ್ಗುವ , ಬೆದರಿಕೆ ಮತ್ತು ಹಿಂಸೆಗೆ ಮೈತಾಕಿಸಿಕೊಳ್ಳುವ ಜನರನ್ನು ನಿರ್ದಾಕ್ಷಿಣ್ಯವಾಗಿ ಬಗ್ಗುಬಡಿಯುವುದು ಎರಡನೆಯ ಮತ್ತು ಸದ್ಯಕ್ಕೆ ಕೊನೆಯ ಕೆಲಸ.
ನ್ಯಾಯದ ಹೆಸರಲ್ಲಿ ಹಿಂಸೆ ಸರಿಯೇ? ನಕ್ಸಲ್ ಸಿದ್ಧಾಂತ ತಪ್ಪೇ? ನಕ್ಸಲರ ಸೃಷ್ಟಿಗೆ ಆಡಳಿತ ಯಂತ್ರ ಎಷ್ಟು ಕಾರಣ? ನಕ್ಸಲರ ಹಾವಳಿ ತಡೆಗಟ್ಟಲಾಗದಿರುವುದಕ್ಕೆ ಆಡಳಿತ ಯಂತ್ರ ( ಶಂಕರ ಬಿದರಿ ಎಂದು ಓದಿಕೊಳ್ಳಬೇಕು) ಎಷ್ಟು ಕಾರಣ? ಇವು ಸದ್ಯದ ಪ್ರಶ್ನೆಗಳು. ಇತ್ತೀಚೆಗಿನ ನಕ್ಸಲ್ ಹೋರಾಟದ ಬಗ್ಗೆ, ಸರ್ಕಾರದ ಧೋರಣೆ ಬಗ್ಗೆ , ನಕ್ಸಲೀಯರನ್ನು ಬೆಂಬಲಿಸುವವರ ಕುರಿತು, ವಿರೋಧಿಸುವವರ ಕುರಿತು, ನಡುನಡುವೆ ಮಲೆನಾಡಿನ ನಿರಪರಾಧಿ ಪ್ರಜೆಗಳಿಗೆ ಹಿಂಸೆ ಆಗುತ್ತಿರುವುದರ ಕುರಿತು ಓದುಗರು ತಮ್ಮ ಅಭಿಪ್ರಾಯ ಮಂಡಿಸುವುದಕ್ಕೆ ದಟ್ಸ್ ಕನ್ನಡ ಆಹ್ವಾನ ಕೊಡುತ್ತದೆ.
ನಿಮ್ಮ ಅಭಿಪ್ರಾಯಗಳು ಚಿಕ್ಕದಾಗಿರಲಿ, ವಸ್ತುನಿಷ್ಠವಾಗಿರಲಿ, ಕನ್ನಡದಲ್ಲಿರಲಿ, ನಮ್ಮ ವಿಳಾಸ :[email protected]












Click it and Unblock the Notifications