ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದಲ್ಲಿ ‘ಟೈಮ್ಸ್‌’ ಅಂತೂ ಶುರುವಾಗಿದೆ... ಆದರೆ ಓದುಗರು?

By Staff
|
Google Oneindia Kannada News

Times of India Kannada version
ಅಆಇಈ ಜೊತೆ ವ್ಯಾಪಾರ ಕುದುರಿಸುತ್ತಿರುವ 'ಟೈಮ್ಸ್‌ ಆಫ್‌ ಇಂಡಿಯಾ" ಬಳಗದ ಗುಣಾಕಾರ, ಭಾಗಾಕಾರ, ಸಂಕಲನ, ವ್ಯವಕಲನ ಒಂದು ಪಕ್ಕಕ್ಕಿರಲಿ. ಕನ್ನಡ ಓದುಗರ ನಾಡಿಮಿಡಿತ, ಅವರ ಅಗತ್ಯಗಳನ್ನು ಸ್ವಲ್ಪ ಅರ್ಥಮಾಡಿಕೊಳ್ಳೋಣ.

* ಎಸ್ಕೆ. ಶಾಮಸುಂದರ

ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕಾ ಬಳಗ ಹೊರಡಿಸಿರುವ ಅದೇ ಹೆಸರಿನ ಕನ್ನಡ ಪತ್ರಿಕೆಗೆ ಕನ್ನಡ ಜನಮಾನಸದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿವರು 'ಗುರುವಾರ ಬೆಳಗ್ಗೆ ಮೊದಲು ಓದಿದ್ದೇ ನಿಮ್ಮ ಪತ್ರಿಕೆ" ಎಂದು ಪತ್ರಿಕೆಯ ಮುಖ್ಯಸ್ಥ ಚಿನನ್‌ದಾಸ್‌ ಅವರಿಗೆ ಹೇಳಿದ್ದಾರೆ. ಸಂತೋಷ. ರಾಜಕಾರಣಿಗಳು ಎಲ್ಲ ಪತ್ರಿಕೆಗಳ ಬಗೆಗೂ ಇಂಥದೇ ಮೆಚ್ಚುಗೆಯ ಮಾತುಗಳನ್ನಾಡುವುದು ಪದ್ಧತಿ.

ಕನ್ನಡಕ್ಕೆ ಇಂಥದೊಂದು ಪತ್ರಿಕೆ ಬೇಕಾಗಿತ್ತು. ವ್ಯಾಪಾರ ವಹಿವಾಟುಗಳನ್ನು ಕನ್ನಡ ಭಾಷೆಯ ಮೂಲಕ ವೃದ್ಧಿಸುವುದಕ್ಕೆ ಟಿಒಐ ಲಾಯಕ್ಕಾದ ಸಂಸ್ಥೆ ಎಂದು ನಮ್ಮ ಓದುಗರಲ್ಲೊಬ್ಬರಾದ ರಾಕೇಶ್‌ ಐನಾಪುರ್‌ ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕೆಯ ಎಲ್ಲ ವಿಭಾಗಗಳಲ್ಲೂ ವೃತ್ತಿಪರತೆ ತಂದುಕೊಡುವುದಕ್ಕೆ ಅವರಿಗೆ ಮಾತ್ರ ಸಾಧ್ಯ ಎನ್ನುವುದು ಅವರ ಅಂಬೋಣ.

ಹೊಸ ಪತ್ರಿಕೆಗೆ ಸರಿಯಾದ ಕನ್ನಡವೇ ಗೊತ್ತಿಲ್ಲ ಎನ್ನುತ್ತಿದ್ದಾರೆ ಅನೇಕ ಓದುಗರು. ಜತೆಗೆ, ಅವರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗೆಗೆ ಕಿಂಚಿತ್ತೂ ಕಾಳಜಿ ಇಲ್ಲ ಎನ್ನುವುದು ಬಹಳ ಜನರ ಆರೋಪ. ಹೊಸ ಪತ್ರಿಕೆಗೆ ಎಲ್ಲ ಯಶಸ್ಸು ಲಭ್ಯವಾಗಲಿ ಎನ್ನುವುದು ಭಾಗ್ಯ ಶೇಷಾದ್ರಿ ಅವರ ಹಾರೈಕೆ.

ಅದೊಂದು ಪತ್ರಿಕೆಯೇ ಅಲ್ಲ, ಕನ್ನಡಿಗರು ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ ಪತ್ರಿಕೆಯನ್ನು ಓದಬಾರದು ಎಂದು ಅಪ್ಪಣೆ ಕೊಡಿಸಿದ್ದಾರೆ ಜ್ಞಾನಪೀಠ ಪ್ರಶಸ್ತಿ ಅಲಂಕೃತ ಸಾಹಿತಿ ಯು.ಆರ್‌. ಅನಂತಮೂರ್ತಿ. ಅವರ ದೃಷ್ಟಿಯಲ್ಲಿ ಅದು ಇಂಗ್ಲಿಷಿನ 'ಎಂಜಲು ಪತ್ರಿಕೆ".

ಇಷ್ಟಾಗಿಯೂ ಕನ್ನಡಿಗರು ಹಳೆಯ ಪತ್ರಿಕೆಗಳನ್ನು (ಉದಯವಾಣಿ, ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕ ಮತ್ತು ವಿಜಯ ಕರ್ನಾಟಕ) ನಿರಾಕರಿಸಿ ಹೊಸ ಪತ್ರಿಕೆಗೆ ಕೈ ಹಾಕುತ್ತಾರಾ ಎನ್ನುವುದು ಬಗೆಹರಿಯದ ಕುತೂಹಲ. ಅಥವಾ ಎರಡು ಕನ್ನಡ ಪತ್ರಿಕೆಯನ್ನು ಕನ್ನಡಿಗರು ಕೊಳ್ಳುವುದು ಕನಸಿನ ಮಾತು. ಇಂಥ ಪರಿಸ್ಥಿತಿಯಲ್ಲಿ ಟೈಮ್ಸ್‌ ಆಫ್‌ ಇಂಡಿಯಾ ಕನ್ನಡ ಪತ್ರಿಕೆಯನ್ನು ಕೊಂಡು ಓದುವ ಕನ್ನಡಿಗನಾರು, ಅವನು ಎಲ್ಲಿದ್ದಾನೆ ಎನ್ನುವುದು ಯಕ್ಷ ಪಶ್ನೆ. ಪತ್ರಿಕೆಗೆ ನಷ್ಟ ಉಂಟಾದರೆ ಅದನ್ನು ಭರಿಸುವ ಶಕ್ತಿ ಮತ್ತು ಯುಕ್ತಿ ಬೆನೆಟ್‌ ಕೊಲ್‌ಮನ್‌ ಸಂಸ್ಥೆಗಿದೆ ಎನ್ನುವುದು ಬೇರೆಯದೇ ಆದ ಪ್ರಶ್ನೆ.

*

ಅಮೆರಿಕಾದಲ್ಲಿ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆ. ವಿಶೇಷವಾಗಿ ಸಿಲಿಕಾನ್‌ ಕಣಿವೆಯ ಕನ್ನಡಿಗರು ಹೆಚ್ಚಿನ ಆಸಕ್ತಿಯಿಂದ ಕನ್ನಡ ಕಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಕಡೆಯ ಪಕ್ಷ ಮಕ್ಕಳು ಅಪ್ಪ ಅಮ್ಮ, ಹಸಿವು, ಬಾಯಾರಿಕೆ, ಹೆದರಿಕೆ ಅಂತ ಕನ್ನಡದಲ್ಲಿ ಹೇಳಲು ಕಲಿತರೆ ಎಷ್ಟೋ ಪ್ರಯೋಜನ. ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಜರುಗಿದ ಕನ್ನಡ ಕಲಿ ಕಾರ್ಯಕ್ರಮದ ಬಗ್ಗೆ ಮೊನ್ನೆ ನಮ್ಮಲ್ಲಿ ಒಂದು ವರದಿ ಪ್ರಕಟವಾಗಿತ್ತು. ಆವತ್ತೇ ಮತದಾನ ವಿಭಾಗದಲ್ಲಿ 'ಬೆಂಗಳೂರಿನ ಫ್ಲ್ಯಾಟ್‌ಗಳಲ್ಲಿ ಕನ್ನಡ ಕಲಿಸಿ ಕಾರ್ಯಕ್ರಮ ಯಾಕೆ ಮಾಡಬಾರದು" ಎಂಬ ಪ್ರಶ್ನೆಯೂ ಇತ್ತು.

ಅದನ್ನು ಗಮನಿಸಿದ ಕ್ಯಾಲಿಫೋರ್ನಿಯ ಕನ್ನಡ ಕಲಿ ತರಗತಿಯ ಪ್ರಾಂಶುಪಾಲರಾದ ಶ್ರೀಮತಿ ಸಂಧ್ಯಾ ರವೀಂದ್ರನಾಥ್‌ ಅವರು ನಮಗೆ ಬರೆದು ಕೊಂಡದ್ದೇನೆಂದರೆ : ಬೆಂಗಳೂರಿನ ಬಹುಅಂತಸ್ತು ವಸತಿಗೃಹ ಸಮುಚ್ಛಯಗಳಲ್ಲಿ ಕನ್ನಡ ತರಗತಿಗಳನ್ನು ನಡೆಸುವವರಿಗೆ ಕನ್ನಡ ಕಲಿ ಪಠ್ಯಗಳನ್ನು (course material) ನಾನು ಇಲ್ಲಿಂದ ರವಾನಿಸುತ್ತೇನೆ. ಆಸಕ್ತಿ ಇರುವ ಕರ್ನಾಟಕದ ಕನ್ನಡಿಗರು ಬರೆಯಿರಿ.

*

ಮೂಳೆ ಅರ್ಬುದ ರೋಗಕ್ಕೆ ತುತ್ತಾಗಿರುವ ಕಳಸದ ಬಾಲಕಿ ಲಾರಿಸ್ಸಗೆ ಹಣ ಸಹಾಯ ಮಾಡುವವರಿಗೆ ಸ್ವಾಗತಕೋರಿ ನಾವು ಒಂದು ಆಮಂತ್ರಣ ಪ್ರಕಟಿಸಿದ್ದೆವು. ತುಂಬಾ ಕಷ್ಟದಲ್ಲಿರುವ ಅವರ ತಂದೆ ತಾಯಿಯ ಪರವಾಗಿ ನಾವು ಹೊರಡಿಸಿದ ಕೋರಿಕೆಗೆ ಅನೇಕರು ಓಗೊಟ್ಟಿದ್ದಾರೆ. ಯಥಾನುಶಕ್ತಿ ಧನಸಹಾಯವನ್ನು ಮಗುವಿನ ಆಸ್ಪತ್ರೆವಿಳಾಸಕ್ಕೆ ಕಳಿಸಿಕೊಟ್ಟಿದ್ದಾರೆ. ಮಗು ಬೇಗ ಗುಣಮುಖವಾಗಲಿ ಎಂದು ಹಾರೈಸಿದ ಪ್ರತಿಯಾಬ್ಬರನ್ನೂ ನಾನು ಇಲ್ಲಿ ತುಂಬು ಹೃದಯದಿಂದ ನೆನೆಯುತ್ತೇನೆ. ಮಗುವಿನ ಆರೋಗ್ಯ ಭಾಗ್ಯ ಕುರಿತ ಇತ್ತೀಚಿನ ವರದಿಗಾಗಿ ಕಾಯುತ್ತಿದ್ದೇನೆ. ಮಾಹಿತಿ ಸಿಕ್ಕನಂತರ ನಿಮಗೆ ತಿಳಿಸುತ್ತೇನೆ.

*

ನಿಮ್ಮ ತಂದೆ. ತಾಯಿ, ಅಜ್ಜ ಅಜ್ಜಿ ಮುಂತಾಗಿ ಹಿರಿಯರ ಕಪ್ಪು ಬಿಳಪು ಭಾವಚಿತ್ರಗಳನ್ನು ದಟ್ಸ್‌ಕನ್ನಡ ಕಚೇರಿಗೆ ಕಳಿಸಿಕೊಡಿ. ಅವರ ಬಗೆಗೆ ಒಂದಿಷ್ಟು ಮಾಹಿತಿಯನ್ನೂ ಬರೆದು ತಿಳಿಸಿರಿ. ಆ ಕಾಲದ ಅವರನ್ನೆಲ್ಲ ಈ ಕಾಲದ ಅಂತರಜಾಲತಾಣಕ್ಕೆ ಕರೆತಂದು ನಮ್ಮ ಪ್ರೀತಿ ಹಾಗೂ ಗೌರವಗಳನ್ನು ಸಲ್ಲಿಸೋಣ -ಎಂದು ನಿಮ್ಮಲ್ಲಿ ಕೋರಿಕೊಂಡಿದ್ದೆ. ತುಂಬಾ ಒಳ್ಳೆಯ ಹೆಜ್ಜೆ ಇಟ್ಟಿದ್ದೀರಿ, ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಅನೇಕ ಓದುಗರು ನನ್ನ ಬೆನ್ನು ತಟ್ಟಿದರು. ಆದರೆ, ಮನೆಯಲ್ಲಿರುವ ಆ ಚಿತ್ರವನ್ನು ತೆಗೆದು, ಸ್ಕ್ಯಾನ್‌ ಮಾಡಿ ಕಳಿಸಿಕೊಡುವಷ್ಟು ಪುರುಸೊತ್ತು ನಮ್ಮವರಿಗಿಲ್ಲದಾಗಿದೆ. ಹೇಗೂ ಇರಲಿ, ನಿಮ್ಮ ಹಿರಿಯರ ನೆನಪು-ಆಶೀರ್ವಾದ ನಿಮ್ಮ -ನಿಮ್ಮ ಮಕ್ಕಳ ಮೇಲೆ ಸದಾ ಇರಲಿ.

ಕಪ್ಪು-ಬಿಳುಪು ಚಿತ್ರಗಳು ಬಂದಂತೆ ಹಿರಿಯರಿಗೆ ನಮಸ್ಕಾರ ವಿಭಾಗದಲ್ಲಿ ಪ್ರಕಟಿಸುತ್ತೇನೆ. ಅಲ್ಲಿಯವರೆವಿಗೆ ತೊಂದರೆಯಿಲ್ಲ. ಬಣ್ಣ ಬಣ್ಣದ ಚಿತ್ರಗಳು ನಿಮಗಾಗಿ ಇದ್ದೇ ಇರುತ್ತವೆ. ತೊಗೋಳಿ..

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X