ನ್ಯೂಸ್‌ ನ್ಯೂಸ್‌ ನ್ಯೂಸ್‌!


ನೀವು ಏನೇ ಅನ್ನಿ, ಇವೆಲ್ಲ ಅದೇ ಹಳೇ ಸಮಾಚಾರನಪ್ಪ. ಯಾಕೋ ಕರ್ನಾಟಕದಲ್ಲಿ ಹೋಸದುಂತನೇ ಏನೂ ಕಾಣ್ತಾ ಇಲ್ಲ. ಬೇಜಾರಾಗತ್ತೆ... ಈ ಮಧ್ಯೆ ನಿಮಗೇನಾದ್ರೂ ಹೊಸ ನ್ಯೂಸ್‌ ಕಾಣಿಸ್ತಾ?

Karnataka is a happening State indeed!ಕರ್ನಾಟಕದಲ್ಲಿ ಏನೇನಾಗತ್ತೆ, ನಿಮಗೇನಾದ್ರೂ ಗೊತ್ತಾಗತ್ತಾ? ನೆನ್‌ಸ್ಕೊಂಡ್ರೆ ನನಗೇ ಒಂಥರಾ ಆಗತ್ತೆ. ಅವೇ ಘಟನೆಗಳು..ಕೆದಕಿಕೆದಕಿ ನೋಡಿದ್ರೆ ಯಾಕೋ.. ಎಲ್ಲಾವ್ದೂ ಹಳೆಯದೇ ಅನ್ನಿಸೋದಕ್ಕೆ ಶುರುವಾಗತ್ತೆ. ನೋಡಿದ್ದನ್ನೇ ನೋಡುವುದು , ಆಡಿದ್ದನ್ನೇ ಆಡುವುದು, ತಿಂದಿದ್ದನ್ನೇ ತಿನ್ನುವುದು, ಬರೆದದ್ದನ್ನೇ ಬರೆಯೋದು, ಬಯ್ದವರನ್ನೇ ಬಯ್ಯುವುದು ..ನಮ್ಮ ಕರ್ನಾಟಕದಲ್ಲಿ ಹೊಸದೇನೂ ನಡೆಯುವುದೇ ಇಲ್ಲವಾ? ಅನ್ಸತ್ತೆ.

ಹಾಗನಿಸುವುದಕ್ಕೆ ಈ ಋತುವೇ ಕಾರಣಾನಾ? ಸೆಪ್ಟೆಂಬರ್‌-ಅಕ್ಟೋಬರ್‌ ಅಂತಿಂಥ ಜೋಡಿಯಲ್ಲ. ಬೇಸಗೆ ಅಲ್ಲ, ಚಳಿಗಾಲವಲ್ಲ, ಮಳೆಗಾಲವಲ್ಲ. ಎಂಥ ಸೀಜನ್‌ರೀ ಇದು? ಟಿಪ್ಪೂ ಸುಲ್ತಾನ್‌ ಕನ್ನಡ ಪ್ರೇಮಿನಾ ಅಥವಾ ಅಲ್ವಾ ಅಂತ ಕರ್ನಾಟಕದಲ್ಲಿ 17 ನೇ ಬಾರಿಗೆ ಚರ್ಚೆ ಆಗ್ತದೆ. ಸ್ವಲ್ಪ ದಿನ ಪೇಪರ್‌ಗಳಲ್ಲಿ ಜಗಳನೂ ಆಗ್ತದೆ. ಹಿಂದೂಗಳು ಮಾತ್ರ ಈ ಜಗಳದಲ್ಲಿ ಇರ್ತಾರೆ. ಮುಸ್ಲಿಂ ಬಾಂಧವರು ಬೇರೆ ಏನೋ ಮಾಡ್ತಾ ಇರ್ತಾರೆ. ನಮಗೆ ಇದು ಸಂಬಂಧಾನೇ ಇಲ್ಲ ಅನ್ನೋ ರೀತಿ ನೀವು ಇದ್ದುಬಿಡ್ತೀರಾ.

ಹೀಗೇ ಇರಬೇಕಾದರೆ ಒಂದು ದಿನ ರಾಜರಾಳಿದ ಸಂಸ್ಥಾನದ ಪಲಕುಗಳನ್ನು ಮೆಲಕು ಹಾಕುವ ಮಗದೊಂದು ನವರಾತ್ರಿ ಮೈಸೂರಿಗೆ ಬಂದು-ಹೋಯಿತು. ದಸರಾ ರಜೆ ಮುಗೀತು. ಮಕ್ಕಳು ಶಾಲೆಗೆ ವಾಪಸ್ಸು ಹೋದರು. ಜಂಬೂಸವಾರಿಯ ಆನೆಗಳು ಮತ್ತೆ ಸಕ್ರೆಬೈಲು ಅರಣ್ಯ ಹೊಕ್ಕವು. ಅಯ್ಯೋ ನಾವು ಮೈಸೂರಿಗೆ ಈ ಬಾರಿ ಹೋಗಲಿಕ್ಕೇ ಆಗಲಿಲ್ಲ, ಮುಂದಿನ ಬಾರಿಯಾದರೂ ಹೋಗಬೇಕು ಮಿಸ್‌ ಮಾಡ್ಕೊಂಡ್‌ಬಿಟ್ವಿ ಅಂತ ಯಾರಿಗಾದರೂ ಅನ್ನಿಸ್ತಾ? ನನಗೆನೋ ಅನುಮಾನ. ದಸರಾ ಟೈಂನಲ್ಲಿ 10 ಲಕ್ಷ ಜನ ಆರಾಮಾಗಿ ಎಂಜಾಯ್‌ ಮಾಡುವಂಥ ಪರಿಸ್ಥಿತಿ ಮೈಸೂರಿನಲ್ಲಿ ಇದೆಯಾ? ಜನಜಂಗುಳಿಯಲ್ಲಿ ಕಳೆದು ಹೋಗುವುದಕ್ಕೆ ನಾವು ಅಲ್ಲೀತನಕ ಹೋಗಬೇಕಾ? ಏಷಿಯನ್‌ ಗೇಮ್ಸ್‌ಗೆ ಅಂತ , ಸಾರ್ಕ್‌ ಸಮ್ಮೇಳನಕ್ಕೆ ಅಂತ ಪರ್‌ಮನೆಂಟ್‌ ವ್ಯವಸ್ಥೆ ಮಾಡ್ತಾರೆ. ಅಂಥದು ಮೈಸೂರಿನಲ್ಲಿ , ನವರಾತ್ರಿಗೇಂತ ಯಾಕೆ ಮಾಡಬಾರ್ದು? ಯಾರಾದರೂ ಯೋಚನೆನಾದ್ರೂ ಮಾಡಿದ್ರಾ? ಥತ್‌ತೇರೀಕಿ.

ಅದಕ್ಮುಂಚೆ, ನಾವೆಲ್ಲ ಸೇರ್ಕೊಂಡು ದೊಡ್ಡ ಸಾಧನೆ ಮಾಡ್ತೀವಿ ಅಂತ ಹೇಳ್ಕೊಂಡು ಇವರೆಲ್ಲ ಬೆಳಗಾಂಗೆ ಹೋಗಿದ್ರು. ಅಲ್ಲೂ ಬೆಕ್ಕು ನಾಯಿ ಥರ ಕಿತ್ತಾಡಿ ಬಂದ್ರು. ಉತ್ತರ ಕರ್ನಾಟಕದಲ್ಲಿ ಕುಡಿಯುವ ನೀರೇ ಸಿಗದ ಊರುಗಳಿವೆ. ಅದರ ಕಡೆ ಗಮನ ಕೊಡ್ರಿ, ನಂಜುಂಡಪ್ಪ ಅವರ ವರದಿ ಜಾರಿಗೆ ತನ್ರೀ ಅಂದ್ರೆ ,ಮಹಾಜನ್‌ ಕಮಿಷನ್‌ ವರದಿ ಜಾರಿಗೆ ಜೈ ಅಂದು ವಿಷಯ ತಿರುಗಿಸಿ ಬೆಂಗಳೂರಿಗೆ ಬಂದು ಬಂದ್‌ ಮಾಡಿಸಿದ್ರು. ಏನ್‌ ಜನಾನಪ್ಪಾ?

ನಂಗೂ ಬಂದ್‌ ಉದ್ದೇಶಾ ಮರ್ತೇ ಹೋಯ್ತು. ಯಾಕೇಂದ್ರೆ, ಬೆಳಗಾವಿ ಬಗ್ಗೆ ಸರಿಯಾಗಿ ಯೋಚ್ನೇನೆ ಮಾಡಿಲ್ಲ ಅಷ್ಟರಲ್ಲಿ ಮಂಗಳೂರಿನಲ್ಲಿ ಚಿಲ್ರೆ ವಿಷಯಕ್ಕೆ ಊರಿಗೆ ಊರೇ ಉರಿಯಿತು. ಗಮನ ಆ ಕಡೆ ಹೊಂಟೋಯ್ತು. ಬಿಜೆಪಿನ ದಳದವರು ಬೈದರು, ದಳಕ್ಕೆ ಸ್ವಂತ ಬುದ್ದಿ ಇಲ್ಲ ಅನ್ಕೊಂಡು ಬಿಜೆಪಿ ಸುಮ್ಮನಾಯಿತು. ಏನಾರಾ ಅನ್ಕಳೀ, ಇಬ್ಬರೂ ಒಂದೇ ಕಣ್ರೀ. ಅದಾದ್‌ ತಕ್ಷಣ ದತ್ತ ಜಯಂತಿ ಬಂತು. ಮಂಗಳೂರಿನಿಂದ ಚಿಕ್ಕಮಗಳೂರಿಗೆ ಬಂದ್ವಿ. ಒಬ್ಬೊಬ್ಬರು ಒಂದೊಂದು ಥರ ಮಾತಾಡಿದರು. ದತ್ತ ಮಾಲಾನೂ ಆಯ್ತು, ಶೋಭಾ ಯಾತ್ರೇನೂ ಆಯ್ತು, ದತ್ತ ಜಯಂತಿನೂ ಆರಾಮಾಗಿ ನಡೀತು. ಯಾರ ಗಂಟೇನು ಹೋಯ್ತು.

ಈ ನಡುವೆ ಮಲ್ನಾಡ್‌ನಲ್ಲಿ ಅಡಕೆ ಬೆಲೆ ಜಾಸ್ತಿ ಆಯ್ತು. ತಿಪಟೂರಿನಲ್ಲಿ ಕೊಬ್ಬರಿ ಬೆಲೆಗೆ ಮೋಸ ಮಾಡಿದ್ರು. ಇನ್ಫೋಸಿಸ್‌ಗೆ 938 ಕೋಟಿ ರೂಪಾಯಿ ಲಾಭ ಬಂತು. ಕುಮಾರಸ್ವಾಮಿಗಳು ಹಳ್ಳಿ ಮನೇಲಿ ನಾಟಿಕೋಳಿ ಸಾರು ತಿಂದ್ರು, ಶ್ರೀ ರವಿಶಂಕರ್‌ ಪೇಪರ್‌ ಎಡಿಟ್‌ ಮಾಡಿದ್ರು, ವಿಜಯ್‌ ಮಲ್ಯ 4000 ಕೋಟಿ ಕೊಟ್ಟು ವಿಸ್ಕಿ ಫ್ಯಾಕ್ಟರಿ ತಕ್ಕೊಂಡ್ರು, ನಮಗೇನ್‌ ಬಂತು?

ಇಲ್ಲಿಗೇ ಮುಗಿಯಲ್ಲಾ ರಿ ಇದು. ದೀಪಾವಳಿ ಬರ್ತಾಯಿದೆ. ಪಟಾಕಿ ಹೊಡೀಬೇಕು. ಮಿಂಟೋ ಆಸ್ಪತ್ರೆಗೆ ಹೋಗ್ಬೇಕು, ಗ್ರೀಟಿಂಗ್‌ ಕಾರ್ಡ್‌ ಕಳಿಸಬೇಕು, ಮಿಠಾಯಿ ತಿನ್ನಬೇಕು. ಅದೆಲ್ಲ ಮುಗೀತಿದ್ದ ಹಾಗೆ ನವೆಂಬರ್‌ ಒಂದ್ನೇ ತಾರೀಕು ಬರತ್ತೆ. ಕನ್ನಡ ಬಾವುಟ ಆಟೋಗಳ ಮೇಲೆ ಹಾರತ್ತೆ. ರಾಜ್ಯೋತ್ಸವ ಪ್ರಶಸ್ತಿ ಕಿತಾಪತಿ ಆಗತ್ತೆ. ಸರಕಾರದವ್ರು ಜಾರಿಗೆ ಬರದ ಯಾವುದೋ ಒಂದು ಕಾರ್ಯಕ್ರಮ ಅನೌನ್ಸ್‌ ಮಾಡಕ್ಕೆ ರೆಡಿಯಾಗ್ತಿದಾರೆ. ಇದೇ ಟೈಂಗೆ ಐಟಿ ಮೇಳ ಇರತ್ತೆ, ಅದಾಗ್‌ತಿದ್ದ ಹಾಗೆ ಶಿವಮೊಗ್ಗಾದಲ್ಲಿ ಇಸ್ವ ಕನ್ನಡ ಸಮ್ಮೇಳನ ನಡೀತೈತೆ. ನೀವು ಏನೇ ಅನ್ನಿ, ಇವೆಲ್ಲ ಅದೇ ಹಳೇ ಸಮಾಚಾರನಪ್ಪ. ಯಾಕೋ ಹೋಸದುಂತನೇ ಏನೂ ಕಾಣ್ತಾ ಇಲ್ಲ. ಬೇಜಾರಾಗತ್ತೆ.

ಹೊಸ ಸುದ್ದಿ ಅಂದ್ರೆ ಈರುಳ್ಳಿ ಬೆಲೆ ನೆಲಕಚ್ಚಿದೆ ಅಂತ ಮನೆಕೆಲಸದ ಶಾರದಮ್ಮ ಸಂತೋಷದಿಂದ ಹೇಳ್ತಾ ಇದ್ದರು. 30 ರಿಂದ 40 ರೂಪಾಯಿ ಕೆಜಿ ಇದ್ದ ಈರುಳ್ಳಿ ಇವತ್ತು 4 ರೂಪಾಯಿಗೆ ಬಿದ್ದಿದೆಯಂತೆ. ಸರಕಾರವನ್ನು ಉರುಳಿಸುವ ಶಕ್ತಿ, ಬೆಳೆದವನನ್ನು ಬಸವಳಿಸುವ ಶಕ್ತಿ ಮತ್ತು ಸಂತೋಷದಿಂದ ತನ್ನನ್ನು ಕುಯ್ಯಿಯುವರ ಕಣ್ಣಲ್ಲೂ ನೀರು ಹನಿಸುವ ಶಕ್ತಿ ಈ ಉಳ್ಳಾಗಡ್ಡಿಗೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+