ಕಾದಂಬರಿಯ ಓದಿಗೆ ಮುನ್ನ...

ಕಥಾ ವಾಹಿನಿ
Resurgence of Kannada novel on internet

ನದಿಯ ಹಾಗೆ!

ಅದು ಹುಟ್ಟುವುದು ಒಂದು ಸಣ್ಣ ಸೆಲೆಯಾಗಿ. ಕ್ರಮೇಣ ಅದಕ್ಕೆ ಉಪನದಿಗಳು ಸೇರಿಕೊಳ್ಳುತ್ತವೆ. ಗುಪ್ತಗಾಮಿನಿಯಾಗಿ ಮತ್ತಾವುದೋ ಸೆಲೆ ಬಂದು ಕೂಡಿಕೊಳ್ಳುತ್ತದೆ. ಹೀಗೆ ತನ್ನನ್ನು ಕೂಡಿಕೊಂಡದ್ದನ್ನೆಲ್ಲ ತೆಕ್ಕೆಗೆ ತೆಗೆದುಕೊಂಡು ನದಿ ಹರಿಯುತ್ತದೆ.

ಕಾದಂಬರಿಯೂ ಹಾಗೆಯೇ. ನನ್ನ ಪ್ರಕಾರ ಸಣ್ಣಕತೆಯೆಂದರೆ ಶಿಕಾರಿ. ನಿಗೂಢದಲ್ಲಿ ಹೊಂಚಿ ಕುಳಿತವನ ಸುಳಿವೇ ತಿಳಿಯದೆ ಬರುವ ಮೃಗವನ್ನು ಕೆಡವಿ ಉರುಳಿಸುವುದು. ಕವಿತೆಯೆಂದರೆ ಬೆಸ್ತನ ಹಾಗೆ ಕಾಲದ ಹೊಳೆಗೆ ಗಾಳ ಹಾಕುತ್ತಾ ಕೂರುವುದು.

ಆದರೆ ಕಾದಂಬರಿ ಹಾಗಲ್ಲ. ಅದರ ವಿಸ್ತಾರ ದೊಡ್ಡದು; ಅದು ಒಳಗೊಳ್ಳುವ ಸಂಗತಿಗಳೂ. ಅದು ಇಡೀ ಮನುಕುಲದ ಕತೆಯೂ ಹೌದು. ಹೀಗಾಗಿ ಕಾದಂಬರಿಯ ಕರ್ತೃ ಎಲ್ಲವನ್ನೂ ಔದಾರ್ಯದಿಂದ ಮತ್ತು ಅನುಮಾನದಿಂದ ನೋಡಬೇಕಾಗುತ್ತದೆ. ಚಂಚಲತೆಯ ಜೊತೆ ತನ್ಮಯತೆಯನ್ನೂ ಗಳಿಸಿಕೊಳ್ಳಬೇಕಾಗುತ್ತದೆ.

ಆದರೆ ಈ ಕಾಲ ಕಷ್ಟದ್ದು. ನಮ್ಮ ಅನುಭವಗಳಲ್ಲಿ ಟೊಳ್ಳೆಷ್ಟು , ನಿಜವೆಷ್ಟು ಅನ್ನುವುದು ನಮಗೇ ಅರಿವಾಗದ ಕಾಲ. ನಮ್ಮನ್ನು ಯಾವ್ಯಾವ ಶಕ್ತಿಗಳೋ ನಿಯಂತ್ರಿಸುತ್ತವೆ. ಜಾತಿ, ರಾಜಕಾರಣ ಮತ್ತು ಧರ್ಮ ನಮ್ಮ ಶ್ರದ್ಧೆಯನ್ನು ಮೀರಿ ವ್ಯಾಪಿಸಿದೆ. ಹಳ್ಳಿಗಳು ಕ್ರಮೇಣ ನಗರಗಳಾಗುತ್ತಿವೆ. ಟೀವಿ ಎಂಬ ಮಾಯೆ ಪ್ರತಿಯಾಬ್ಬರನ್ನೂ ವಿಶಿಷ್ಟವಾಗಿ ತಬ್ಬಿದೆ. ಎಲ್ಲೋ ಏನೋ ತಪ್ಪಿದೆ ಎಂಬ ಶಂಕೆಯಲ್ಲೇ ಸೃಜನಶೀಲತೆಯನ್ನು ಉಳಿಸಿಕೊಳ್ಳಬೇಕಾಗಿದೆ.

ನದಿಯ ನೆನಪಿನ ಹಂಗು ಇಂಥ ಕಷ್ಟಕಾಲದಲ್ಲಿ ಹುಟ್ಟಿದ ಕೃತಿ. ಅದರ ಮೂಲಸೆಲೆ ಯಾವುದು ಅನ್ನುವುದು ನನಗೂ ಮರೆತುಹೋಗಿದೆ. ನದಿಗೆ ನೆನಪುಗಳಿರುವುದಿಲ್ಲ ಅನ್ನುತ್ತಾರೆ. ಯಾಕೆಂದರೆ ಅದು ಎಲ್ಲವನ್ನೂ ತೊಳೆಯುತ್ತಾ ಸಾಗುತ್ತದೆ. ಆದರೆ ನದಿಯ ನೆನಪಿನ ಹಂಗಿನಿಂದ ನೀವ್ಯಾರೂ ಪಾರಾಗಲಾರಿರಿ ಅನ್ನುವುದು ನನಗೆ ಗೊತ್ತಿದೆ. ಇದ್ದ ನದಿಗಿಂತ ಗಾಢವಾಗಿ ಇರದ ನದಿ ಕಾಡುತ್ತದೆ. ನೋಡಿದ ಮುಖಕ್ಕಿಂತ ತೀವ್ರವಾಗಿ ನೋಡದ ಮುಖ ಕಾಡುವ ಹಾಗೆ!

ಬರೆಯುವುದು ಎಂದರೆ ದಾಖಲಿಸುವುದು, ಅದಕ್ಕಿಂತ ಹೆಚ್ಚಾಗಿ ಕನೆಕ್ಟ್‌ ಮಾಡುವುದು. ಈ ಕಾದಂಬರಿ ನಿಮ್ಮನ್ನೂ ನನ್ನನ್ನೂ ಕನೆಕ್ಟ್‌ ಮಾಡುವ ಹಾಗೆ, ನಿಮ್ಮನ್ನೂ ನಿಮ್ಮ ಬಾಲ್ಯವನ್ನೂ ಸೇರಿಸಲಿ. ನಿಮ್ಮ ನೆನಪುಗಳ ಜೊತೆ ವಾಸ್ತವವನ್ನು ಬೆಸೆಯಲಿ.

ಈ ಕೃತಿಗೆ ಅಂಥ ಮಹದೋದ್ದೇಶಗಳಿಲ್ಲ . ಇದು ಪ್ರೀತಿಯಿಂದ ಬರೆಸಿಕೊಳ್ಳುತ್ತಿರುವ, ಪ್ರೀತಿಯಿಂದ ಓದಿಸಿಕೊಳ್ಳಬೇಕಾದ ಪ್ರಸಂಗ. ಇದು ಯಾವ ರೂಪದಲ್ಲಿ ತನ್ನನ್ನು ಪ್ರಕಟಿಸಿಕೊಳ್ಳುತ್ತದೆ ಎಂಬ ಕುತೂಹಲ ನಿಮ್ಮಷ್ಟೇ ನನಗೂ ಇದೆ. ಹೀಗಾಗಿ ಕರ್ತೃ ಕೂಡ ಇಲ್ಲಿ ಒಬ್ಬ ಓದುಗನಷ್ಟೇ ಮುಗ್ಧ ಕುತೂಹಲಿ.

ಇವತ್ತಿಗೆ ಎರಡೇ ದಿನಗಳು ಬಾಕಿ. ನದಿ ನಿಮ್ಮ ಬಳಿಗೆ ಹರಿದು ಬರುತ್ತದೆ. ಆಮೇಲೆ ನೀವುಂಟು ನದಿಯುಂಟು.
- ಕರ್ತೃ

ಕಾದಂಬರಿಯ ಓದಿಗೆ ಮುನ್ನ...
ಕನ್ನಡ ಕಾದಂಬರಿಯ ಗುಂಗು
ಅಂತರ್ಜಾಲದಲ್ಲಿ ಕನ್ನಡ ಕಾದಂಬರಿಯ ಮರುಹುಟ್ಟು

Thank you for choosing Thatskannada.com
[email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+