ಸ. ರಘುನಾಥ ಅಂಕಣ: ಏಕಮುಖೀ ಪ್ರಣಯಿ ಏಕಾಕ್ಷ ಗೋಪಾಲನ ನೆನಪು
ನಾನು ಹೈಸ್ಕೂಲನ್ನು ಪ್ರವೇಶಿಸುವ ದಿನಕ್ಕೆ ಈ ಗೋಪಾಲ ಯೌವನದಲ್ಲಿ ಕಾಲಿಟ್ಟಿದ್ದ. ಶಾಲೆಯ ಮುಖ ದರುಶನವನ್ನೇ ಮಾಡಿಸದ ಮನೆಯವರು ದನ- ಕುರಿಗಳನ್ನು ಕಾಯಲು ಹಾಕಿದ್ದರು. ಅವನ ಜೊತೆಗಾರರು ತಮ್ಮ ಪ್ರೇಮದ ಪ್ರಸಂಗಗಳನ್ನು ಅವನ ಕಿವಿಗೆ ಹಾಕುತ್ತ, ಯಾರನ್ನು ಹೇಗೆ 'ಬೀಳಿಸಿ'ಕೊಂಡೆವೆಂದು, ತಮ್ಮ ಸಲ್ಲಾಪಗಳು ಹೇಗಿರುತ್ತವೆಂದು, ಅವರಿಗೆ ಏನೇನು ತಂದು ಕೊಡುತ್ತೇವೆಂದು ಹೇಳಿ ಹೇಳಿ ಅವನಲ್ಲಿ ಕಾಮನೆಗಳನ್ನು ಬಿತ್ತುತ್ತಿದ್ದರು.
ಅಂತಹವರಲ್ಲಿ ಹನುಮಪ್ಪನ ಮಗ ಸೊಣ್ಣನೂ ಒಬ್ಬನಾಗಿದ್ದ. ಅವನು, ತಾನು 'ಲಂಕಾದಹನಮು' ಕೇಳಿಕೆಯಲ್ಲಿ ಮಾಡಿದ ಇಂದ್ರಜಿತು ಪಾರ್ಟನ್ನು ಮೆಚ್ಚಿನಾಗಿ ಪ್ರೀತಿಸಿದಳೆಂದು ಹೇಳಿ, ಕೇಳಿಕೆಯಲ್ಲಿ ಪಾತ್ರ ಕಟ್ಟುವ ಆಸೆ ಹುಟ್ಟಿಸಿದ್ದ. ಕೇಳಿಕೆಗಳನ್ನು ಕಲಿಸುತ್ತಿದ್ದ ಮೇಷ್ಟ್ರು ಸೀನಪ್ಪನಲ್ಲಿಗೆ ಹೋಗಿ, ಫಲ-ತಾಂಬೂಲ ಅರ್ಪಿಸಿ, ತನಗೊಂದು ಪಾರ್ಟು ಕೊಡಲು ಬೇಡಿಕೊಂಡಿದ್ದ.
ಕೆನ್ನೆ ಸವರುತ್ತಲೇ ಮುಕ್ಕಾಲು ಪಾಲು ಹಣ ಕಿತ್ತಳು
ಅವರು ನಿನಗೆ ಶುಕ್ರಾಚಾರಿ ಪಾರ್ಟೊಂದೇ ಲಾಯಕ್ಕು. ಅಂತಹ ಆಟ ಕಲಿಸುವಾಗ ಕೊಡುತ್ತೇನೆ ಎಂದು, ಅದಕ್ಕಾಗಿ ಕಾಯುವಂತೆ ಮಾಡಿದ್ದರು. ಆ ಪಾತ್ರ ಕಟ್ಟಲು ಬೇಕಿದ್ದ ಹಣವನ್ನು ಮನೆಯಿಂದ ರಾಗಿ, ನೆಲ್ಲು, ಎಳ್ಳು, ಅವರೆ, ಹುರಳಿ ಇಂಥವನ್ನು ಕದ್ದು, ಸಂಪಣ್ಣೆಪ್ಪನ ಅಂಗಡಿಯಲ್ಲಿ ಮಾರಿ, ಅವನಲ್ಲಿಯೇ ಹಣವನ್ನು ಕೂಡಿಡುತ್ತಿದ್ದ.
ಆದರೆ ಅದು ಆಗಲೇ ಇಲ್ಲ. ಆದರೇನು ಗೊಪಾಲ ತನಗೂ ಒಂದು ಪ್ರೇಮ ಪ್ರಕರಣ ಇರಲೇಬೇಕೆಂದು ಪ್ರಯತ್ನಿಸುತ್ತಲೇ ಇದ್ದ. ಗೋಪಾಲನು ಹಣ ಕೂಡಿಡುತ್ತಿದ್ದುದನ್ನು ತಿಳಿದುಕೊಂಡ ಚಿನ್ನಲಕ್ಷ್ಮಿ ಸೆರಗಿನ ಚೇಷ್ಟೆಗಳ ಮೂಲಕ ಅವನನ್ನು ಸೆಳೆದು, ಕೈಮುಟ್ಟಿ, ಕೆನ್ನೆ ಸವರುತ್ತಲೇ ಮುಕ್ಕಾಲು ಪಾಲು ಹಣ ಕಿತ್ತು, ತಾರಮಯ್ಯ ಆಡಿಬಿಟ್ಟಳು.

ಗೋಪಾಲನಲ್ಲಿದ್ದ ದೋಷದ ಮುಖ್ಯಾಂಶಗಳು ಹೀಗಿವೆ:
ಒಂದು, ಎಲೆಯಡಿಕೆ ಜಗಿದು ಜಗಿದು ಅಂದಗೆಟ್ಟ ವಕ್ರ ಸಾಲಿನ ಹಲ್ಲುಗಳು. ಎರಡನೆಯದು ಒಕ್ಕಣ್ಣು. ಮೂರನೆಯದು ಒಡಕು ಬಾಯಿ. ನಾಲ್ಕನೆಯೆದು ಯಾವುದೇ ಹುಡುಗಿ ಬಯಸುವ ಮೈಕಟ್ಟು, ಮೈಬಣ್ಣ ಇಲ್ಲದ್ದು. ಆದರೇನು ನಾನೂ ಗಂಡಸೇ ಎಂಬ ನಂಬಿಕೆಯಲ್ಲಿ ನಿರಾಸೆಯನ್ನು ಮೆಟ್ಟುತ್ತ ಪ್ರಯತ್ನಸುತ್ತಲೇ ಇದ್ದ.
ನನಗೂ ಅವನಿಗೂ ಹುಲ್ಲು, ಸೌದೆಗೆ ಹೋಗುವ ಗೆಳೆತನವಾದುದು ಈ ದಿನಗಳಲ್ಲಿಯೇ. ತನ್ನ ಮನದ ನಿರಾಸೆ, ನೋವನ್ನು ಹೇಳಿಕೊಂಡು ಅತ್ತದ್ದೂ ಉಂಟು. ಓದ್ತಾ ಇದ್ದೀಯ. ನಿನಗೆ ಏಡ್ಯ(ಐಡಿಯಾ) ಗಿತ್ತಿರ್ತದೆ ಹೇಳು ಎಂದು ಅಂಗಲಾಚುತಿದ್ದ. ಇಂತಹ ವಿಷದಲ್ಲಿ ಸೋತವನಿಗೆ ಏನು ಐಡಿಯಾ ಕೊಡುವುದೆಂದು, ಯಾರನ್ನೂ ಪ್ರೀತಿಸಿದ ಅನನುಭವಿಯಾದ ನನಗೆ ಹೊಳೆಯುತ್ತಿರಲಿಲ್ಲ.
ಸಿನಿಮಾಗಳಲ್ಲಿ ಪ್ರೇಮ ಪ್ರಸಂಗಗಳನ್ನು ನೆನೆದೆ
ಆಗ್ಗೆ ಓದಿದ್ದ ಕಥೆ, ಕಾದಂಬರಿ, ನೋಡಿದ್ದ ಸಿನಿಮಾಗಳಲ್ಲಿ ಪ್ರೇಮ ಪ್ರಸಂಗಗಳನ್ನು ನೆನೆದು ಅವನಿಗೆ ಹೊಂದುವಂಥದು ಕಾಣದೆ ಅಸಹಾಯಕನಾಗುತ್ತಿದ್ದೆ. ಒಂದು ರಾತ್ರಿ ಅವನ ಕುರಿತೇ ಯೋಚಿಸುತ್ತಿದ್ದಾಗ ಅಜ್ಜಿ ಹೇಳಿದ ಕಥೆ ನೆನಪಾಯಿತು. 'ಒಂದೂರಿನಲ್ಲಿ ರಾಮಕ್ಕ ಅನ್ನುವವಳ ಅಳಿಯನ ಹಲ್ಲುಗಳು ಎಲಡಿಕೆ ಹಾಕಿ ಹಾಕಿ ಪಾಚಿಕಟ್ಟಿ ಅಸಹ್ಯವಾಗಿದ್ದವು. ಎಷ್ಟು ಹೇಳಿದರೂ ಹಲ್ಲುಜ್ಜಿ ಮೋರೆ ತೊಳೆಯುತ್ತಿರಲಿಲ್ಲ. ಏನು ಮಾಡುವುದೆಮದು ಯೋಚಿಸಿ, ದಿನವೂ ಬೆಳಿಗ್ಗೆ ಕಬ್ಬು ತಿನ್ನಲು ಕೊಡತೊಡಗಿದಳು.
ದಿನದಿಂದ ದಿನಕ್ಕೆ ಹಲ್ಲುಗಳು ಬಿಳಿದಾಗುತ್ತ ಲಕ್ಷಣವಾಗಿ ಕಾಣತೊಡಗಿದವು. ಹೆಂಡತಿ ತಾನಾಗಿಯೇ ಬಳಿಗೆ ಬರತೊಡಗಿದಳು. ಅವನು ಎಲೆಡಿಕೆ ಹಾಕಿದರೂ ಹಲ್ಲುಜ್ಜುವುದನ್ನು ಅಭ್ಯಾಸ ಮಾಡಿಕೊಂಡ. ಈ ಕಥೆಯನ್ನು ಗೋಪಾಲನಿಗೆ ಹೇಳಿದೆ. ಪಾಲಿಸಿದ. ಆದರೇನು ಯಾವ ಹುಡುಗಿಯೂ ಒಲಿದುದಿಲ್ಲ. ಗೋಪಾಲ ನೊಂದು, ಬೆಂದ.
ಮದುವೆ ಮಾಡುವಂತೆ ಮನೆಯಲ್ಲಿ ಕೇಳು
ಒಂದು ದಿನ ಇಬ್ಬರೂ ಸೌದೆಗೆಂದು ಹೋರಟಾಗ ಹೇಳಿದೆ, ಈ ಪ್ರೀತಿ- ಗೀತಿ ಅನ್ನೋದನ್ನೆಲ್ಲ ಬಿಡು. ಮದುವೆ ಮಾಡುವಂತೆ ಮನೆಯಲ್ಲಿ ಕೇಳು. ಆಗಲ್ಲವೆಂದರೆ ಹಠ ಮಾಡು. ಅಲ್ಲಿಗೂ ಬಗ್ಗದಿದ್ದರೆ ದನ ಕಾಯಲು ಹೋಗಬೇಡ. ಅವರೇ ದಾರಿಗೆ ಬರುತ್ತಾರೆ ಎಂದು ಹೇಳಿಕೊಟ್ಟೆ. ಹಾಗೆಯೆ ಮಾಡಿದ.
ಮನೆಯವರು ಹೆಣ್ಣು ಹುಡುಕತೊಡಗಿದರು. ಅವನಿಗೆ ನಯನಾಜೂಕನ್ನು ಬೋಧಿಸಿದೆ. ಆಗ ಮಾಲೂರಿನ ಬಾಲಾಜಿ ಚಿತ್ರಮಂದಿರದಲ್ಲಿ ಎಂಜಿಆರ್ ಅಭಿನಯದ 'ಉಲಗಂ ಸುಟ್ರ ವಾಲಿಬನ್' ಸಿನಿಮಾ ಹಾಕಿದ್ದರು. ತಮಿಳು ಇಬ್ಬರಿಗೂ ಅರ್ಥವಾಗದ ಭಾಷೆ. ಆದರೂ ಅವನನ್ನು ಕರೆದುಕೊಂಡು ಹೋದೆ. ಕಪ್ಪು ಕನ್ನಡದಲ್ಲಿ ಎಂ.ಜಿ.ಆರ್ ಎಷ್ಟು ಚೆನ್ನಾಗಿ ಕಾಣುತ್ತಾರೆ ನೋಡು ಎಂದು, ನೀನೂ ಹಾಕಿಕೊ ಎಂದೆ. ಹೀಗೆ ಹೇಳಿದ ಒಂದು ವಾರಕ್ಕೆ ಮಾಲೂರು ಕರಗ. ಅಲ್ಲಿ ಗೋಪಾಲ ಕಪ್ಪು ಕನ್ನಡಕ ತೆಗೆದುಕೊಂಡ. ಅದನ್ನು ಧರಿಸಿ ಹೆಣ್ಣು ನೋಡಲು ಹೋದ. ಹುಡುಗಿಯ ಮನೆಯವರು ಒಪ್ಪಿಕೊಂಡರು.
ಗೋಪಾಲ ಮೂರು ಮಕ್ಕಳ ತಂದೆಯಾದ. ಅದರಲ್ಲಿ ಎರಡು ಹೆಣ್ಣು, ಒಂದು ಗಂಡು. ತಾತನೂ ಆದ. ಆರು ತಿಂಗಳ ಹಿಂದೆ ಕೊರೊನಾ ಸೋಂಕಿನಿಂದ ಪ್ರಾಣ ಬಿಟ್ಟನಂತೆ...












Click it and Unblock the Notifications