• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ. ರಘುನಾಥ ಅಂಕಣ: ‘ತಿರಕಾಸುಬುದ್ಧಿ’ಯ ಮೋನಪ್ಪ

By ಸ. ರಘುನಾಥ
|
Google Oneindia Kannada News

ನನ್ನ ಅಜ್ಜಿ 'ತಿರಕಾಸುಬುದ್ಧಿ' ಅನ್ನುವ ನುಡಿಗಟ್ಟನ್ನು ಬಳಸುತ್ತಿದ್ದಳು. ನಾನು ಇದನ್ನು 'ಮೂರುಕಾಸಿನ ಬುದ್ಧಿ' ಅನ್ನುವುದಕ್ಕೆ ಪರ್ಯಾಯವೆಂದು ಅರ್ಥ ಮಾಡಿಕೊಂಡಿದ್ದೆ. ಅವಳು ಬಳಸುತ್ತಿದ್ದ ಸಂದರ್ಭಗಳನ್ನು ಹಿಡಿದು, ತಿರಿದಕಾಸಿನ ಬುದ್ಧಿ, ಕಡಿಮೆ ಹಣದಲ್ಲಿ ಹೆಚ್ಚು ಪಡೆಯುವ ಬುದ್ಧಿ, ಚೌಕಾಸಿ ಬುದ್ಧಿ ಎಂಬ ಅರ್ಥಗಳಿಗೂ ಆ ನುಡಿಗಟ್ಟನ್ನು ಒಗ್ಗಿಸಲು ಪ್ರಯತ್ನಿಸುತ್ತಿದ್ದೆ.

ಬಹು ವರ್ಷಗಳ ನಂತರ ಕನ್ನಡ ಪ್ರೊಫೆಸರ್‌ರೊಬ್ಬರನ್ನು ಈ ಕುರಿತು ಕೇಳಿದೆ. ಅವರು ಯೋಚಿಸಿ ಯೋಚಿಸಿ 'ತಿರುಕಾಸು' ಎಂದಿದ್ದೀತು. ತಿರುಕಾಸು ಎಂದರೆ ದೇವರ ಹುಂಡಿಯ ದುಡ್ಡು. ಅದನ್ನೇ ಲಪಟಾಯಿಸುವುದು ತಿರಕಾಸು ಬುದ್ಧಿ ಆದೀತು ಎಂದರು. ಇದು ಅಸಂಗತವಾದುದು ಅಂದುಕೊಂಡೆ. ಇಂದಿಗೂ ಸ್ಪಷ್ಟವಿಲ್ಲ.

ಮೋನಪ್ಪ ನಮ್ಮೂರಿನ ಕುಳ. ಅವನ ಮಾತು ಬಂದರೆ ಅಜ್ಜಿ, 'ಅವನೊಬ್ಬ ತಿರಕಾಸು ಬುದ್ಧಿಯ ಮುಂಡೆಗಂಡ. ಅವನ ಮಾತೇನು ತೆಗಿ' ಅನ್ನುತ್ತಿದ್ದಳು. ಮೋನಪ್ಪ ಹತ್ತಿರದಿಂದ ಪರಿಚವಾದ ಮೇಲೆ 'ವಿರುದ್ಧವಾದ ಬುದ್ಧಿ, ಅತಿ ಬುದ್ಧಿವಂತಿಕೆ' ಎಂಬ ಆರ್ಥವನ್ನು ಅನ್ವಯಿಸಿಕೊಂಡೆನಾದರೂ 'ತಿರಕಾಸುಬುದ್ಧಿ' ಎಂಬುದರ ಭಾವವನ್ನು ಹಿಡಿಯಲಾಗಲಿಲ್ಲ. ಮುಂದೊಮ್ಮೆ ಯಾರಿಂದಲಾದರೂ ತಿಳಿದೀತು.

ಮೋನಪ್ಪ ಮೈ ಕಪ್ಪಿನ ಗಿಡ್ಡ ಆಸಾಮಿ. ಆದರೆ ಕಣ್ಣು, ಮನಸ್ಸು ಎಂದಿಗೂ ಒಂದಾಗಿರುತ್ತಿತ್ತು. ಮುದುಕನಾದಾಲೂ ಸಹ. ಇದು ನಿನಗೆ ಹೇಗೆ ಸಾಧ್ಯವೆಂದು ಕೇಳಿದಾಗ, ತಬಲ ಬಾರಿಸುವುದರಿಂದ ಅಂದಿದ್ದ. ನಾಟಕ, ಹರಿಕಥೆಯೆಂದರೆ ಈತನೇ ತಬಲಾ ವಾದಕ. ಎಲ್ಲರೂ ಒಂದು ದಿಕ್ಕಿನಲ್ಲಿ ಯೋಚಿಸುತ್ತಿರುವಾಗ ಈತ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಯೋಚಿಸುತ್ತಿದ್ದ. ಬುದ್ಧಿವಂತಿಕೆಯಲ್ಲಿಯೂ 'ವಿಪರೀತಮತಿ' ಅನ್ನುವುದಿಲ್ಲವೆ ಹಾಗೆ. ಹಾಗಾಗಿಯೇ ನಾನು 'ತಿರಕಾಸುಬುದ್ಧಿ' ಅನ್ನುವುದಕ್ಕೆ ಈ ಅರ್ಥ ಹಿಡಿದಿದ್ದು. ಊರಿನ ಪಂಚಾಯತಿಯಲ್ಲಿ ಮೋನಪ್ಪನಿದ್ದಾನೆಂದರೆ ಮಾತನಾಡುವವರು ಅವನು ಕೊಡುವ ತಿರುವುಗಳನ್ನು ಊಹಿಸಿಕೊಳ್ಳುತ್ತಲೇ ಮಾತನಾಡುತ್ತಿದ್ದರು. ಒಂದು ನಿಟ್ಟುಸಿರಿನ ವಿಷಯವೆಂದರೆ, ಕಡೆಯಲ್ಲಿ ಹೆಚ್ಚು ಜನರ ಅಭಿಪ್ರಾಯಕ್ಕೆ ತಾನೂ ಬಂದಿರುತ್ತಿದ್ದುದು.

ದನ ಕಾಯುವ ಹುಡುಗರ ದೋಸ್ತಿ ಇವನಿಗೆ ಶಾನೆ. ಅವರಿಗೂ ಈತನೆಂದರೆ ಸಲಿಗೆ, ಗೆಳೆತನ. ಕಾರಣವೊಂದೆ. ಅದು ಈತ ಅವರಿಗೆ ಬೀಡಿ ಸೇದುವುದಕ್ಕೆ ಗುರು. ಊರಿನಲ್ಲಿ ಈತನ ಶಿಷ್ಯರು ಅನೇಕರಿದ್ದರು. ಇದನ್ನು ತಿಳಿದವನಾಗಿ, ಹೀಗೇಕೆ ಹುಡುಗರನ್ನು ಕೆಡಿಸುತ್ತಿ ಎಂದು ಕೇಳಿದ್ದೆ. 'ನಿಂಕ ತಳೂದ್ಲ ಕಲ್ದೀರಿರು. ನಾನು ಕಲದೀರ ಇದ್ರೂನೂ ಕಲಕೊಳೋರೆ. ನನ್ತಾವ ಇಲದೀರಿದ್ದುರೆ ಅವರ ನಿಂಚಿ ತಕ್ಕೋಬೋದಲ್ವ? ಅವರ ತಾವ ಇಲದಿದ್ರೆ ನಾನು ಕೊಡಬೋದಲ್ವ' (ನಿನಗೆ ತಿಳಿಯುವುದಿಲ್ಲ ಸುಮ್ಮನಿರು. ನಾನು ಕಲಿಸದಿದ್ದರೂ ಅವರು ಕಲಿತುಕೊಳ್ಳುವವರೇ. ನನ್ನ ಹತ್ತಿರ ಇಲ್ಲದಿದ್ದರೆ ಅವರಿಂದ ತೆಗೆದುಕೊಳ್ಳಬಹುದು. ಅವರ ಹತ್ತಿರ ಇಲ್ಲದಿದ್ದರೆ ನಾನು ಕೊಡಬಹುದದಲ್ಲವೆ) ಎಂದು, ಈ ವಿಷಯದಲ್ಲಯೂ ಕೊಡುಕೊಳ್ಳುವಿಕೆಯ ತತ್ವ ಬೋಧಿಸಿದ್ದ.

ಇಲ್ಲಿ ನನ್ನನ್ನು ಹೊಗಿಟ್ಟುಕೊಂಡರೆ ಆತ್ಮವಂಚನೆಯಾಗುವುದು. 'ಐನೋರೆ ನೀನು ಸೀಕರೋಟು(ಸಿಗರೇಟು) ಸೇದೋದುನ ಕಲೀಬೇಕು ಅಂದಿದ್ದ. ನನ್ನ ತಾತನಿಗೆ ತಿಳಿದರೆ ಕೋದಂಡಕ್ಕೆ ಹಾಕುತ್ತಾನೆ ಅಂದೆ. ಗೊತ್ತಾದರಲ್ಲವ ಅಂದ. ಗುರುವಿನ ಪ್ರಭಾವಕ್ಕೆ ಮಣಿಯದಿರಲುಂಟೆ? ಅವನ ಮರೆಯಲ್ಲಿನ ಜಾಣ್ಮೆಯಲ್ಲಿ ಇಂತಹವು ಲೆಕ್ಕವಿಲ್ಲ.

ಒಂದು ರಾತ್ರಿ ಅವನ ಉರ್ಲಗಡ್ಡೆ (ಆಲೂಗೆಡ್ಡೆ) ತೋಟಕ್ಕೆ ಅವನೊಂದಿಗೆ ಕಾವಲು ಹೋಗಿದ್ದೆ. ಒಂದು ಪದ ಎತ್ಕೊ ಅಂದ. ಶಶಿರೇಖಾ ಪರಿಣಯ' ಕೇಳಿಕೆಗೆ ಅವನದೆ ತಬಲ ತಾನೆ. ನಾನು ಜಮಾಯಿಂಪು (ತಾಲೀಮು) ನಡೆಯುವಾಗಲೆಲ್ಲ ಹಾಜರಿರುತ್ತಿದ್ದೆ. ಹಾಗಾಗಿ ಹಲವು 'ಮಟ್ಟು' (ಪದ್ಯ)ಗಳು ಬರುತ್ತಿದ್ದವು. ನನಗೆ ಇಷ್ಟವಾಗಿದ್ದ ದುರ್ಯೋಧನ ಪಾತ್ರದ ಮಟ್ಟು.

ರಾಜರಾಜ ರಾಜ ನಡೆದ/ ದುರ್ಯೋಧನ ಮಹಾರಾಜ ನಡೆದ/ ಛತ್ರಿ ಚಾಮರ ಮೆರೆಯುತಿರಲು/ ಹಿಂದೆ ದಂಡು ಜನರು ಬರಲು/ ಕುರುದೇಶದಿಂದ ರಾಜರಾಜ...(ತೆಲುಗು ಪದ್ಯದ ಅನುವಾದ) ಎಂದು ಹಾಡುತ್ತಿದ್ದಾಗ, ಕಾಡು ಹಂದಿಗಳನ್ನು ಬೆದರಿಸಲು ಬಡಿಯುತ್ತಿದ್ದ ತಗಡಿನ ದಬ್ಬವನ್ನು ತಬಲ ಮಾಡಿಕೊಂಡು ಬಾರಿಸಿದ.

ಕಾವಲು ಮರೀಚಿಕೆಯಲ್ಲಿ ನೀರು ಕಟ್ಟುವಾಗ ತೇಲಿದ್ದ ನಾಲ್ಕು ಆಲೂಗೆಡ್ಡೆಗಳಿದ್ದವು. ಅವನ್ನು ಸುಡಲು ಕಿಚ್ಚು ಹಾಕಿದ. ಅವು ಸುಡುತ್ತಿರುವಾಗ, ನೀನೊಂದು ಹಾಡು ಎಂದೆ. ನಿನಕ ಡಬ್ಬ ಬಾರಿಸೋಕ ಬರಲ್ಲಲ್ಲ ಅಂದ. ನೀನೇ ಬಾರಿಸಿಕೊಂಡು ಹಾಡು ಅಂದೆ. 'ಯಾವೂರು ಭಾಮೆ, ನಿನ್ನ ಹೆಸರೇನೆ?' 'ಮಾಲೂರು ಹೈದ, ಹೆಸರು ಸತ್ಯಭಾಮೆ'. 'ಹೋಗೋಣ ಬರುತೀಯ ನಂದಿ ಪರಿಷೇಗೆ?' 'ಮದುವ್ಯಾದ ಹೆಣ್ಣೊ ಗಂಡ ಬಡಿತಾನೆ'. 'ಮದ್ದಕ್ಕಿ ಬಾರೆ ನಿನ್ನಾಳು ತೀನಿ...'

ಸುಟ್ಟಿದ್ದ ಗೆಡ್ಡೆಗಳನ್ನು ತಿನ್ನುವಾಗ, ಎಲ್ಡು ಕಲ್ಲು ಉಪ್ಪಿದ್ದಿದ್ರೆ ಪಸಂದಾಗಿರೋದು ಅಂದ. ಇಲ್ವಲ್ಲ ಅಂದೆ. ಇದ್ದಕ್ಕಿದ್ದಂತೆ, ಗುರುವಿಲದೀರ ಕಲಕೊಳೊ ಇದ್ಯ(ವಿದ್ಯೆ) ಯಾವುದು? ಅಂದ. ಯೋಚಿಸಿ ಯೋಚಿಸಿ ಗೊತ್ತಿಲ್ಲ ಅಂದೆ. ಗೊತ್ತಿಲ್ಲದ ಮ್ಯಾಕ ಅದೆಂತ ಸದುವು(ಓದಿ) ನಿಂದು? ಅಂದು, ಹೆಣ್ಣೈಕಳಿಂದೆ(ಹೆಣ್ಣುಮಕ್ಕಳ ಹಿಂದೆ) ಬಿಳ್ಳೋದು ಅಂದ. ಯಾರನ್ನಾದರು ಬೀಳಿಸಿದ್ದೀಯ ಅಂದೆ. ನಾನು ಬೀಳಿಸುಬೇಕ?... ನೀರಿಳುದರೆ ಅವರೇ ಬಿಳ್ತಾರ ಅಂದ. ನೀನು ಬಿದ್ದಿದ್ದೋನ ಅಂದಾಗ, ಬಿದ್ದಿದ್ಕೆ ಅಲ್ವಾ ನಮ್ಮಪ್ನು ಬಿರೀನ(ಬೇಗ) ಮದುವಿ ಮಾಡಿದ್ದು ಅಂದ. ಈ ಎಲ್ಲದರಿಂದ 'ತಿರಕಾಸುಬುದ್ಧಿ' ಅಂದರೆ ಏನೆಂದು ಅರ್ಥವಾಗಿದ್ದರೆ ತಿಳಿಸಿ.

English summary
Sa Raghunatha Columns: Grand-mother's Talk About rich person Monappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion