ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ. ರಘುನಾಥ ಅಂಕಣ: ನರಸಿಂಗನ ಗೆಲುವು ಇಲ್ಲಿಯೇ ಎಂದು ಭವಿಷ್ಯ ನುಡಿದ ಅಪ್ಪಯ್ಯ

By ಸ. ರಘುನಾಥ
|
Google Oneindia Kannada News

ನಾವೊಂದು ಎಂಟು ಮಂದಿ ಹೈಸ್ಕೂಲಿಗೆ ಕಾಲಿಟ್ಟೆವು. ನನ್ನನ್ನು ಲಾಯರ್ ಮಾಡಲು ಅಪ್ಪ ಇಂಗ್ಲಿಷ್ ಮೀಡಿಯಮ್‌ಗೆ ಸೇರಿಸಿದ. ಉಳಿದವರೆಲ್ಲ ಕನ್ನಡ ಮೀಡಿಯಂ. ನಾನು ಹಾಸ್ಟೆಲ್‌ಗೆ ಸೇರಿದೆ. ಇಲ್ಲಿಂದಲೇ ನಮ್ಮ ನಡುವಿನ ಅಂತರ ಹೆಚ್ಚಿದ್ದು.

ಒಂಬತ್ತನೆಯ ತರಗತಿಗೆ ಬಂದಾಗ, ನರಸಿಂಗನಿಗೆ ಊರಿನಲ್ಲಿ ಆಡುತ್ತಿದ್ದ ತೆಲುಗು ಕೇಳಿಕೆ, ಕನ್ನಡ ನಾಟಕಗಳ ಪಾರ್ಟುದಾರರೊಂದಿಗೆ ಗೆಳೆತನ ಬೆಳೆಯಿತು. ಅವರೆಲ್ಲ ಇವನಿಗಿಂತ ದೊಡ್ಡವರು. ಆದರೂ ಗೆಳೆತನ. ಅದು ಹೇಗೋ ನರಸಿಂಗ ಕಲಿತಿದ್ದ ತೆಲುಗು ಮತ್ತು ಕನ್ನಡದಲ್ಲಿ ನರಸಿಂಗ ಫಸ್ಟು ಎಂದು ಗಜೇಂದ್ರರಾಜು ಮೇಷ್ಟು ಕೊಟಿದ್ದ ಮೆಚ್ಚುಗೆಯ ಸರ್ಟಿಫಿಕೆಟ್, ಪಾರ್ಟುದಾರರಲ್ಲಿ ಕೆಲವರು ಅವನೊಂದಿಗೆ ಸಖ್ಯ ಬೆಳೆಸಲು ಮುಖ್ಯ ಕಾರಣ.

Sa Raghunath Column: Appaiah Predicted Has Narsingas Victory

ಪುಸ್ತಕಗಳ ಮುಂದೆ ಕುಳಿತೇ ಕೇಳಿಸಿಕೊಳ್ಳುತ್ತಿದ್ದ

ಅಪ್ಪಯ್ಯ ಹಾಡುತ್ತಿದ್ದ ಪದ್ಯ, ಹಾಡುಗಳನ್ನು ನರಸಿಂಗ ಪುಸ್ತಕಗಳ ಮುಂದೆ ಕುಳಿತೇ ಕೇಳಿಸಿಕೊಳ್ಳುತ್ತಿದ್ದ. ಅವುಗಳ ದಾಟಿಯನ್ನು ಹಿಡಿಯುತ್ತಿದ್ದ. ಹಾಗಾಗಿ ಪಾರ್ಟುದಾರರು ಪದ್ಯ, ಹಾಡುಗಳಲ್ಲಿ ತಮ್ಮಿಂದಾಗುವ ತಪ್ಪುಗಳನ್ನು ಇವನಿಂದ ತಿದ್ದಿಸಿಕೊಳ್ಳುತ್ತಿದ್ದರು. ಇದು ಸ್ನೇಹವಾಗಿ ಪರಿಣಮಿಸಿತ್ತು.

ಅಪ್ಪಯ್ಯ ಕಲಿಸುತ್ತಿದ್ದುದು ಜಮಾಯಿಂಪು (ತಾಲೀಮು) ನಡೆಸಲು ಗೊತ್ತಾದ ರಾತ್ರಿಗಳಲ್ಲಿ. ನರಸಿಂಗನಿಂದ ಪಡೆಯುತ್ತಿದ್ದ ಅಭ್ಯಾಸಕ್ಕೆ ಗೊತ್ತಾದ ಸಮಯ, ಸ್ಥಳ ಇರಲಿಲ್ಲ. ಬಿಡುವಾದಾಗ ಹೊಲ, ತೋಟ, ಗದ್ದೆಗಳಲ್ಲಿ. ಅವನಿಗೆ ಶಾಲೆಗೆ ರಜೆಯಿದ್ದ ದಿನಗಳಲ್ಲಿ ದನ ಕಾಯುವಾಗ. ಇಂಥವರು ನರಸಿಂಗನಲ್ಲಿ ಚಿಕ್ಕವನೆಂಬ ಸಲಿಗೆ, ಕಲಿಸುವನೆಂಬ ಗೌರವ ಇಟ್ಟುಕೊಂಡಿದ್ದರು.

ನಾರಾಯಣಪ್ಪನದು ದುರ್ಯೋಧನನ ಪಾತ್ರ

ಓದಬೇಕಿರುವಾಗ ಇವೆಲ್ಲ ಏತಕ್ಕೆ? ಮಗನಿಗೆ ಗಟ್ಟಿಯಾಗಿ ಹೇಳುವುದಿಲ್ಲ ಏಕೆ? ಎಂದು ಹೆಂಡತಿ ಕೇಳಿದೆರಡು ಪ್ರಶ್ನೆಗಳಲ್ಲಿ ಅವಳ ಮನದ ದುಗುಡ, ಮಗನ ದಾರಿ ಸರಿಯಾದುದಲ್ಲವೇನೊ ಎಂಬ ಶಂಕೆ ಅಪ್ಪಯ್ಯನ ಎದೆಗೆ ಕಂಡಿತ್ತು. ಅವನ ಸರಿದಾರಿ ಮುಂದಿದೆ. ನೀನು ನಿರುಮ್ಮಳದಿಂದಿರು ಎಂದು ಹೇಳಿದ. ಅವಳು ಊರಿನ ಸಿದ್ಧಪ್ಪ ದೇವರ ಗುಡಿಯ ದಿಕ್ಕಿಗೆ ಕೈ ಮುಗಿದಳು. ಆಡಲಿದ್ದುದು 'ಶಶಿರೇಖಾ ಪರಿಣಯ' ಎಂಬ ತೆಲುಗು ಕೇಳಿಕೆ. ಕೃಷ್ಣಪ್ಪನೋರ ನಾರಾಯಣಪ್ಪನದು ದುರ್ಯೋಧನನ ಪಾತ್ರ. ಅವನಿಗೆ ಈ ಪಾತ್ರದಲ್ಲಿ ತೆಲುಗಿನ ಪ್ರಸಿದ್ಧ ನಟ ಎನ್‌ಟಿಆರ್ (ಎನ್.ಟಿ. ರಾಮಾರಾವ್) ಹಾಗೆ ಸಂಭಾಷಣೆಯೊಂದಿಗೆ ನಟಿಸಬೇಕೆಂಬ ಆಸೆ. ಹಾಗಾಗಿ ನರಸಿಂಗನೊಂದಿಗೆ ಮದನಪಲ್ಲಿ, ಬೀರಂಗಿ ಕೊತ್ತಕೋಟ ಹೀಗೆ ಎಲ್ಲೆಲ್ಲಿ ಆ ನಟನ ಇಂಥ ಸಿನೆಮಾಗಳು ಓಡುತ್ತಿದ್ದವೋ ಅಲ್ಲಿಗೆಲ್ಲ ಕರೆದುಕೊಂಡು ಹೋಗಿ ತೋರಿಸುತ್ತಿದ್ದ. ಅದರಂತೆ ನರಸಿಂಗ ಈ ಕೇಳಿಕೆಯಲ್ಲಿನ ಸಂಭಾಷಣೆ, ಪದ್ಯಗಳನ್ನು ಹೇಳಿಸುತ್ತ, ತಿದ್ದುತ್ತಿದ್ದ. ಇದಕ್ಕಾಗಿ ನಾರಾಯಣಪ್ಪ ತನ್ನ ಹುಲ್ಲು, ಜೋಳದಕಡ್ಡಿ, ತೋಟದ ತರಕಾರಿ ಕೊಟ್ಟು, ಈ ಕೆಲಸಗಳಿಗೆ ನರಸಿಗನಿಗಿದ್ದ ಸಮಯವನ್ನು ಬಳಸಿಕೊಳ್ಳುತ್ತಿದ್ದ.

ದ್ವಾರಕೆಗೆ ಪಯಣ ಹೊರಡುವ ದೃಶ್ಯ

ನಾಟಕ (ಕೇಳಿಕೆ) ನಡೆಯುವ ಹಿಂದಿನ ದಿನ ಅಪ್ಪಂಭಟ್ಟನ ಪಾತ್ರಧಾರಿ ತನ್ನ ಮಾವನ ಮಣ್ಣಿಗೆಂದು ಹೋದವನು ಹಿಂದಿರುಗುವುದಾಗದೆ ಆತಂಕ ತಂದಿದ್ದ. ಅಪ್ಪಯ್ಯನಿಗೆ ಮಾತ್ರ ಆತಂಕವಿರಲಿಲ್ಲ. ನರಸಿಂಗ ಆ ಪಾತ್ರವನ್ನು ನೀನು ಕಟ್ಟು ಎಂದ.

ಲಕ್ಷ್ಮಣ ಕುಮಾರನಿಗೆ ಶಶಿರೇಖೆಯನ್ನು ತಂದುಕೊಳ್ಳುವ ದುರ್ಯೋಧನನ ಸಂದೇಶ ಹೊತ್ತು, ಅಪ್ಪಂಭಟ್ಟ ತಿಪ್ಪಂಭಟ್ಟನೊಂದಿಗೆ ದ್ವಾರಕೆಗೆ ಪಯಣ ಹೊರಡುವ ದೃಶ್ಯ. ಅರಮನೆಯ ಮೃಷ್ಠಾನ್ನ ಭೋಜನ ಉಂಡು ಹೊರಟವರಿಗೆ ಭುಕ್ತಾಯಾಸ. ಕೈಯಲ್ಲಿನ ಊರುಗೋಲು ಊರಿ ನಡೆಯಬೇಕು. ಒಂದು ಕೋಲು ರಂಗಪರಿಕರಗಳ ನಡುವೆ ತಪ್ಪಿ ಹೋಗಿ, ಹುಡುಕಿದರೂ ಸಿಕ್ಕಿರಲಿಲ್ಲ.

ವಯಸ್ಸಿಗೆ ಮೀರಿದ ಎತ್ತರ ಅವನದು

ಆಗ ಯಾರೋ ಓಡಿಹೋಗಿ ಬಂಡಿಯ ಗೂಟಗೋಲನ್ನು ತಂದು ಕೊಟ್ಟಿದ್ದರು. ಅದು ನರಸಿಂಗನ ಕೈಲಿತ್ತು. ವಯಸ್ಸಿಗೆ ಮೀರಿದ ಎತ್ತರ ಅವನದು. ಆ ಗಿಡ್ಡಕೊಳನ್ನು ನೆಲಕ್ಕೂರಿ ನಡೆಯಲಾಗುತ್ತಿರಲಿಲ್ಲ. ಊರುವ ಪ್ರಯತ್ನದಲ್ಲಿ ಅದು ಕೈ ಜಾತಿ ಬಿದ್ದಿತು. ನೇಪಥ್ಯದಲ್ಲಿದ್ದವರು ಆಭಾಸವಾಯಿತು ಎಂದುಕೊಳ್ಳುತ್ತಿರುವಾಗಲೇ ನರಸಿಂಗ, ಬಗ್ಗಿ ಕೋಲನ್ನು ಎತ್ತಿಕೊಳ್ಳಲಾಗದಷ್ಟು ಹೊಟ್ಟೆ ಭಾರವಾಗಿದೆ ತಿಪ್ಪಂಭಟ್ಟ. ಇಲ್ಲಿಯೇ ಕೊಂಚ ಹೊತ್ತು ಕುಳಿತು ಹೋಗೋಣ. ನಾನು ಊರಿ ಕುಳಿತುಕೊಳ್ಳಲು ನಿನ್ನ ಕೋಲು ಕೊಡು ಎಂದು ಹೇಳಿದ್ದೇ ಪ್ರೇಕ್ಷಕರಲ್ಲಿ ನಗೆಗಡಲು ಉಕ್ಕಿತು. ಕೂಡಲೇ ಅಪ್ಪಯ್ಯ, ನರಸಿಂಗನ ಗೆಲುವು ಇಲ್ಲಿಯೇ ಎಂದು ಭವಿಷ್ಯ ನುಡಿದ.

English summary
Sa Raghunath Column: Gajendraraju had issued a certificate of appreciation as Narasinga First in Telugu and Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X