ಹತ್ತಿರದಲ್ಲಿ ನೀನಿಲ್ಲ, ನನ್ನೊಳಗೆ ನಾನಿಲ್ಲ!

ಕಾಲು ಚಾಚಿ ಕುಳಿತುಕೊಂಡವನ ಕಿವಿಗೆ ಬಿದ್ದದ್ದು ಭಾವಗೀತೆ. ಉರಿಯುತ್ತಿದ್ದ ಸಿಗರೇಟು ಆರಿಸಿ ಕಿಟಕಿಯಾಚೆಗೆ ನೋಡಿದೆ. 'ಯಾವ ಮೋಹನ ಮುರಳಿ ಕರೆಯಿತು...' ಗೀತೆ ಮೊಳಗುತ್ತಲೇ ಇತ್ತು. ಹತ್ತಿರದಲ್ಲಿ ನೀನಿಲ್ಲ, ನನ್ನೊಳಗೆ ನಾನಿಲ್ಲ. ಇವತ್ತು ಬೆಳಗ್ಗೆ ಏಳೇಳುತ್ತಲೇ ನಿನ್ನ ನೆನಪು. ಜೊತೆಗಿದ್ದಿದ್ದರೆ ಎರಡು ಹುಸಿ ಮುನಿಸು, ಒಂದು ಪುಟ್ಟ ಜಗಳ, ಮೂರು ತಬ್ಬುಗೆ, ಹೊಟ್ಟೆ ಮೇಲಿನ ಹುಟ್ಟು ಮಚ್ಚೆಗೆ ಹತ್ತು ಮುತ್ತು. ಇನ್ನೂ ಏನೇನೆಲ್ಲ ಆಗುತ್ತಿತ್ತೋ? ಹಟಕ್ಕೆ ಬಿದ್ದರೆ ಥೇಟ್ ಪಾಪಚ್ಚಿ ನೀನು. ಪ್ರೀತಿಗೆ ನಿಂತರೆ ಎಷ್ಟೊಂದು ಅಮ್ಮ.
ನಿನ್ನ ಬಗ್ಗೆ ನನ್ನ ಹೊಸ ತಕರಾರುಗಳು ಏನೂ ಇಲ್ಲ. ಒಮ್ಮೆಮ್ಮೆ ದೊಡ್ಡ ಜಂಗುಳಿಯಲ್ಲಿದ್ದಾಗ ಥಟ್ಟನೆ ನೆನಪಾಗಿ ಬಿಡುತ್ತೀಯ, ಉರಿವ ಗಾಯದಂತೆ; ಮನೆಯಲ್ಲೇ ಬಿಟ್ಟು ಬಂದ ಮಗು ತಾಯಿಗೆ ನೆನಪಾಗುವಂತೆ. ಹಾಗಾದಾಗಲೆಲ್ಲ ಮಂಕಾಗುತ್ತೇನೆ. ಗತಿಸಿ ಹೋದ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತೇನೆ. ಅಸಲಿಗೆ ನೀನು ಸಿಗದೇನೇ ಹೋಗಿದ್ದಿದ್ದರೆ ಈ ಬದುಕು ಎಷ್ಟೊಂದು ವ್ಯರ್ಥ ಹೋಗುತ್ತಿತ್ತಲ್ಲವಾ : ಸಮುದ್ರದ ಮೇಲೆ ಬಿದ್ದ ಮಳೆಯಂತೆ, ಅಂದುಕೊಳ್ಳುತ್ತಿರುತ್ತೇನೆ. ಪಾಪ ನಾನು!
In fact, ಬದುಕು ನಂಗೆ ಎಲ್ಲವನ್ನೂ ಕೊಟ್ಟಿದೆ. I am a happy person. ಈಗಷ್ಟೇ ಮಿಲಿಟರಿಯಿಂದ ಬಂದಂತೆ ಕಾಣುವ ದೊಡ್ಡ ಮೀಸೆಯ ಅಪ್ಪ ನಿಜಕ್ಕೂ ಹೃದಯವಂತ. ಕೈಗೆ ಮೊಬೈಲ್ ಕೊಟ್ಟರೆ 'ಇದನ್ನು ಆಫ್ ಮಾಡೋು ಹ್ಯಾಗೋ' ಅಂತ ಫಜೀತಿಗೆ ಬಿದ್ದವಳ ಹಾಗೆ ಕೇಳುವ ಅಮಾಯಕ ಅಮ್ಮ, ರುಚಿಯಾದದ್ದು ಚಿಕ್ಕವನಿಗಿರಲಿ ಅನ್ನುತ್ತ ಉಳಿದದ್ದನ್ನಷ್ಟೇ ತಿಂದು ಕೈತೊಳೆಯುವ ಅಣ್ಣ, 'ಅಪ್ಪನನ್ನು ಬಿಟ್ಟರೆ ನಾನು ಪ್ರೀತಿಸಿದ ಎರಡನೇ ಗಂಡಸು ಅಂದರೆ ನೀನು ಕಣೋ' ಅನ್ನುವ ತುಂಟ ತಂಗಿ, ಓಡಾಡಲು ಕೆಂಪಗೆ ಸಾಯಂಕಾಲದ ಸೂರ್ಯನಂತೆ ಹೊಳೆಯುವ ಬೈಕು, ನನಗೆ ಇನ್ನೇನು ಬೇಕಿತ್ತು ಹೇಳು?
ಹಾಗೆ ಸಂತೋಷವಾಗಿದ್ದವನ ಮೊಬೈಲಿಗೆ ಅವತ್ತು ಅನಿರೀಕ್ಷಿತವಾಗಿ ಬಂದದ್ದು ಒಂದು wrong call. 'ಶ್ರೀನಿವಾಸ್ ಇದಾನಾ?' ಅಂತ ಕೇಳಿದ್ದೇ ಕೇಳಿದ್ದು. ಇದು ಶ್ರೀನಿವಾಸ್ ನ ನಂಬರ್ ಅಲ್ಲ ಅಂತ ಹೇಳುವುದರೊಳಗಾಗಿ ನೀನೂ ಬಿಟ್ಟು ಬಿಡದೆ ಮುಕ್ಕಾಲು ಪ್ಯಾರಾ ಬೈದಿದ್ದೆ. ಎಲ್ಲ ಬೈಸಿಕೊಂಡಾದ ಮೇಲೆ 'ನಾನು ಶ್ರೀನಿವಾಸ್ ಅಲ್ಲ' ಅಂತ ಮೆಲುದನಿಯಲ್ಲಿ ಹೇಳಿದೆ. ಹಾಗಾದರೆ ಯಾಕೆ ಬೈಸಿಕೊಂಡಿರಿ? ಫೋನ್ ಯಾಕೆ ತಗೊಂಡಿರಿ? ಅಂತ ಮತ್ತೆ ನೀನು ಬೈದೆ. 'ಫೋನ್ ನಂದು. ಅದು ರಿಂಗ್ ಆದದ್ದರಿಂದ ತಗೊಂಡೆ. ನೀವು ಡಯಲ್ ಮಾಡಿದ್ದು ರಾಂಗ್ ನಂಬರು' ಅಂತ ಹೇಳಿದೆ. Sorry ಹೇಳುವ ಬದಲು ನೀನು ಎಷ್ಟು ಚೆನ್ನಾಗಿ ನಕ್ಕು ಬಿಟ್ಟೆ ನೆನಪಿದೆಯಾ?
ನಮ್ಮ ಗೆಳೆತನ ಹಾಗೆ ಶುರುವಾಯಿತಿ ನೋಡು. ಬಂದದ್ದು wrong call ಆದರೂ ಅದು right person connect ಮಾಡಿತ್ತು. ಮೊದಲ ಬಾರಿ ಭೇಟಿಯಾದಾಗ, ಇಷ್ಟು ಚೆಂದದ ಹುಡುಗಿ ಇರಬಹುದು ಅಂದುಕೊಂಡಿರಲಿಲ್ಲ. ನೋಡಿದ ತಕ್ಷಣ ಫಿದಾ ಆಗಿಬಿಟ್ಟೆ. ಆ ಮೇಲೆ ನಾವು ದಿನಾ ಭೇಟಿಯಾಗತೊಡಗಿದೆವು. ಮೊಬೈಲುಗಳಲ್ಲಿ ನೂರಾರು ಗಂಟೆಯ ಮಾತು ಹರಿದಾಡಿದ ಮೆಸೇಜುಗಳ ಲೆಕ್ಕವಿಟ್ಟವರಾರು? ಎರಡು ಮಳೆಗಾಲ ಕಳೆದು ಚಳಿ ಶುರುವಿಡುವ ಹೊತ್ತಿಗೆ, ಹೂವು ಹಾಸಿಗೆ ಚಂದ್ರ ಚಂದನ : ಹಾಹು ಬಂಧನ ಚುಂಬನ.
ಕೆದಕಿಕೊಂಡಂತೆಲ್ಲ ಆಸೆಗಳು ಅರಳಿ ನಿಲ್ಲುತ್ತವೆ. ನೀವು ಊರಲ್ಲಿಲ್ಲ. ಯಾಕೋ, ನಿನ್ನ ಫೋನೂ ಇಲ್ಲ. ಪ್ರತಿ ಹತ್ತು ನಿಮಿಷಕ್ಕೊಮ್ಮೆ ಮೊಬೈಲಿನತ್ತ ನೋಡುತ್ತೇನೆ. ನಿನಗೆ ಅರ್ಥವಾಗದ್ದೇನಿದೆ? ಒಂದು ಫೋನ್ ಮಾಡೇ!
ನಿನ್ನವನು












Click it and Unblock the Notifications