ಸುಧಕ್ಕನ ಎಂಟು ಕೋಟಿ ರೂ ಚರಂಡಿಪಾಲು
ಬೆಂಗಳೂರಿನ ಶೌಚಗಳಿಗೆ ಎಂಟು ಕೋಟಿ ಸುರಿದರಂತೆ ಸುಧಕ್ಕ. ಆದರೆ,ಇಂಥ ಕೊಡುಗೈ ದಾನಗಳನ್ನು ಉಪಯೋಗಿಸುವುದಕ್ಕೆ ನಮ್ಮ ಸಮಾಜ ಇನ್ನೂ ಸಿದ್ಧವಾಗಿಲ್ಲ. ಕೋಟಿಕೋಟಿ ಹಣ ಚರಂಡಿಪಾಲಾದ ವಿಷ್ಯ.
- ರವಿಬೆಳಗೆರೆ
ಒಂದು ಚಿಕ್ಕ ವಿಷಯ. ಹಿಂದೊಮ್ಮೆ ಕರ್ನಾಟಕದ ಉತ್ತರ ಭಾಗದ ಗಡಿ ಜಿಲ್ಲೆಗಳಿಗೆ ಪ್ರವಾಹ ಬಂದಾಗ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಪತ್ನಿ ಸುಧಾ ಮೂರ್ತಿಯವರಿಗೊಂದು ಬಹಿರಂಗ ಪತ್ರದಂಥದ್ದನ್ನು ಬರೆದಿದ್ದೆ. ಆ ಜಿಲ್ಲೆಗಳ ಜನಕ್ಕೆ ಆರ್ಥಿಕ ನೆರವು ಕೊಡಿ ಸುಧಕ್ಕ, ನೀವು ಅಲ್ಲಿಯವರಲ್ಲವೇ ಅಂತ. ಆ ಬಗ್ಗೆ ಇಂಟರ್ ನೆಟ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಚರ್ಚೆಗಳೆಲ್ಲ ಆದವು. ಕೆಲವರು ನನ್ನನ್ನು ಬೈದರು. ಮತ್ತೆ ಕೆಲವರು ಹೌದೆಂದರು.
ಅದಿರಿಲಿ, ಇವತ್ತು ಸುಧಾಮೂರ್ತಿಯವರು ಬೆಂಗಳೂರಿನಲ್ಲಿ ಎಂಟು ಕೋಟಿ ರುಪಾಯಿ ಡೊನೇಷನ್ ಕೊಟ್ಟು ಕಟ್ಟಿಸಿದ ಸಾರ್ವಜನಿಕ ಮೂತ್ರ ಶೌಚಾಲಯದ ಬಗ್ಗೆ 'ಟೈಮ್ಸ್ ಆಫ್ ಇಂಡಿಯಾ'ದಲ್ಲಿ ವರದಿಯೊಂದು ಬಂದಿದೆ. ಅದರ ಪ್ರಕಾರ ಸುಧಾ ಅವರು ತಮ್ಮ ಖಾಸಗಿ ಅಕೌಂಟಿನಿಂದ 'ನಿರ್ಮಲ ಬೆಂಗಳೂರು' ಯೋಜನೆಗೆಂದು ಎಂಟು ಕೋಟಿ ರುಪಾಯಿ ಕೊಟ್ಟರು.ಆ ದುಡ್ಡಿನಲ್ಲಿ ಸುಮಾರು ನೂರು ಶೌಚಾಲಯಗಳನ್ನು ನಿರ್ಮಿಸಲಾಯಿತು. ಆದರೆ ಇವತ್ತು ಅವುಗಳ ಪರಿಸ್ಥಿತಿ ನೋಡುವ ಹಾಗಿಲ್ಲ . ಹಾಕಿಸಿದ ಟೈಲ್ಸ್ ಮುರಿದಿವೆ, ಕೈ ತೊಳೆಯುವ ಬೇಸಿನ್ನಲ್ಲಿ ತೂತು ಬಿದ್ದು ಕಾಲ ಮೇಲೆ ನೀರು ಸುರಿಯುತ್ತದೆ, ಪೈಪು-ನಳ ಕಿತ್ತುಕೊಂದು ಹೋಗಿದ್ದಾರೆ. ಕೊಳೆಗೆ ನೀರು ಹಾಕುವವರು ಇಲ್ಲ -ಹೀಗೆ ವರದಿ.
ಒಂದು ನಗರದೆಡೆಗೆ ಸುಧಾಮೂರ್ತಿಯವರಿಗಿರುವ ಪ್ರೀತಿ ಗೌರವಿಸಬೇಕಾದಂತಹುದೇ. ನಮ್ಮೂದು ಚೊಕ್ಕಾಟವಗಿರಲಿ, ಊರ ಮಂದಿಗೆ ಪಾಯಖಾನೆ ಯಾವುದು, ಊಟದ ಮನೆ ಯಾವುದು ಎಂಬ ವ್ಯತ್ಯಾಸ ಗೊತ್ತಿರಲಿ. ಭಾರತದ ಗಂಡಸು ಮಾತ್ರ ಎಂಥ ಹೊತ್ತಿನಲ್ಲಿ ಎಲ್ಲಿ ಬೇಕಾದರೂ ನಿಂತು ಏನನ್ನ್ನು ಬೇಕಾದರೂ ವಿಸರ್ಜಿಸಬಲ್ಲ! ಆತ ಕೊಂಚ ಗೌರವಯುತವಾಗಿ ವರ್ತಿಸುವುದು ಕಲಿಯಲಿ ಎಂಬ ಸದುದ್ದೇಶವಿಟ್ಟುಕೊಂಡು ಸುಧಾ ಮೂರ್ತಿ ಬೆಂಗಳೂರಿನ ಶೌಚಾಲಯಗಳಿಗೆ ಎಂಟು ಕೋಟಿ ರುಪಾಯಿ ಕೊಟ್ಟರು.
ತುಂಬ ಹಣವಿದ್ದು, ಒಳ್ಳೆಯ ಕೆಲಸವನ್ನು ಮಾಡಲು ಮನಸ್ಸೂ ಇರುವವರಿಗೆ ಕೆಲವು ಸಲ ideaಗಳ ಕೊರತೆ ಇರುತ್ತದೆ. ಎಂಟು ಕೋಟಿ ರುಪಾಯಿ ಕೊಟ್ಟಿದ್ದಿದ್ದರೆ ನಾನು ವೀಣಕ್ಕನ ಹೆಸರಿನಲ್ಲಿ ಕನಿಷ್ಠ ಪಕ್ಷ ಒಂದು ನೂರು ವರ್ಷ ಬಾಳುವಂಥ HIVಬಾಧಿತರ ಸಲುವಾಗಿನ ಆಸ್ಪತ್ರೆ ಕಟ್ಟಿಸಿ, ಅದು ಯಶಸ್ವಿಯಾಗಿ ನಡೆಯುವುದನ್ನೂ ತೋರಿಸಿ ಸಾಬೀತು ಮಾಡಿರುತ್ತಿದ್ದೆ. ಸುಧಕ್ಕ ಸುಮ್ಮನೆ ದುಡ್ಡು ಹಾಳು ಮಾಡಿದರು.
ಶೌಚಾಲಯ ಕಟ್ಟಿಸುವವರು 'ಇದನ್ನು ಜನ ಬಳಸುತ್ತಾರಾ? ಸರಿಯಾಗಿ ಬಳಸುತ್ತಾರಾ? ಇದರ ನಿರ್ವಹಣೆ ಸಾಧ್ಯವಾ?'ಅಂತ ಯೋಚಿಸಬೇಕು. ಈ ಪೈಕಿ ಮುಖ್ಯವಾದ ಕೆಲಸವೆಂದರೆ ಶೌಚಾಲಯಗಳೊಳಕ್ಕೆ ಜನರನ್ನು ಕಳಿಸುವುದು. ಅಲ್ಲಿ ಉಚ್ಚೆ ಹೊಯ್ಯಬೇಕು. ಅಲ್ಲೇ ಉಚ್ಚೆ ಹೊಯ್ಯಬೇಕು. ಅದರ್ ಖರ್ಚು ಎಂಟಾಣೆ! ದಿನದಲ್ಲಿ ಹತ್ತು ಸಲ ಪುಗಸಟ್ಟೆ ಮಾಡುವುದನ್ನು ಎಂಟೆಂಟಾಣೆ ಕೊಟ್ಟು ಮಾಡಯ್ಯಾ ಅಂದರೆ ಬೆಂಗಳೂರಿನ ಅರ್ಧ ಪಾಪ್ಯುಲೇಷನ್ನು ಅದಕ್ಕೆ ಒಪ್ಪುವುದಿಲ್ಲ. ತಿಪ್ಪೆ, ಯಾರದೋ ಮನೆಯ ಕಂಪೋಂಡು, ನಮ್ಮ ಪಾಲಿಗೆ ಆ ತಕ್ಷಣದ ಮರೆ ಅಷ್ಟೆ. ನೀವು ಬೇರೆ ಯಾವುದಾದರೂ ದೇಶದಲ್ಲಿ ಆ ಕೆಲಸ ಮಾಡಿದರೆ ದಂಡ ಕಟ್ಟುತ್ತೀರಿ. ಛಡಿ ಏಟು ತಿನ್ನುತ್ತೀರಿ. ಹಾಗೆ ವಿವರಿಸಲು ಹೋದರೆ'ಇದು ಇಂಡಿಯಾ ಸ್ವಾಮೀ!' ಅನ್ನುತ್ತಾರೆ.
ಇದಕ್ಕೆ ಕಲಾಸಿಪಾಳ್ಯದ ಇನ್ಸ್ ಪೆಕ್ಟರ್ ಉಮೇಶ್ ಒಂದು ಉಪಾಯ ಹುಡುಕಿದ್ದಾರೆ. ಎಲ್ಲೆಂದರಲ್ಲಿ ನಿಂತು ಉಚ್ಚೆ ಬಿಡುವವರನ್ನು ಒಯ್ದು ಫೈನ್ ಹಾಕಿ, ಅವಮಾನಿಸಿ-ಎಲ್ಲ ವಿಫಲವಾದ ಮೇಲೆ ಈ ಉಪಾಯ. ನಾಲ್ಕು ಜನ ಪೇದೆಗಳು ಕೈಗೆ ಕೀಲೆಣ್ಣೆ ಹಚ್ಚಿಕೊಂಡು ಓಡಾಡುತ್ತಿರುತ್ತಾರೆ. ಉಚ್ಚೆ ಹೊಯ್ಯುತ್ತ ನಿಂತವನ ಬೆನ್ನ ಮೇಲೆ ಕೈಯಿಂದ ಒಂದು printಹೊಡೆಯುತ್ತಾರೆ. ಕೀಲೆಣ್ಣೆ ಸುಲಭಕ್ಕೆ ಹೋಗುವಂಥದಲ್ಲ. ಆ ಷರಟು ಅವತ್ತಿಗೆ ಫಿನಿಷ್. ಮತ್ತೊಮ್ಮೆ ಕಲಾಸಿಪಾಳ್ಯದ ಕಡೆಗೆ ಹೋದಾಗ ಮಿತ್ರಮ ಎಚ್ಚರವಾಗಿರುತ್ತಾನೆ. ಹೀಗೆ ಮಾಡತೊಡಗಿದ ಮೇಲೆ ಕಲಾಸಿಪಾಳ್ಯ ಮೊದಲಿಗಿಂತ ಸಾವಿರ ಪಾಲು ಕ್ಲೀನಾಗಿದೆ. ಅಲ್ಲಿನ ಖಾಸಗಿ ಬಸ್ಸುಗಳ ಮಾಫಿಯಾವನ್ನೂ ಉಮೇಶ್ ಮುರಿದು ಹಾಕಿದ್ದಾರೆ.
ನಮ್ಮ ದೇಶದ ಸಮಸ್ಯೆಯೇ ಅದು.ಇಲ್ಲಿನ ಮನುಷ್ಯನನ್ನು ಸರಿಯಾಗಿ ವರ್ತಿಸುವಂತೆ ಸದಾ ಭಯಪಡಿಸುತ್ತಿರಬೇಕು. ಎಲ್ಲಿಯ ಮನುಷ್ಯನನ್ನಾದರೂ ಅಷ್ಟೇ: ಹೆದರಿಸುತ್ತಲೇ ಇರಬೇಕು. ಬೇರೆ ದೇಶಗಳಲ್ಲಿ ಹೆದರಿಸಲಿಕ್ಕೆ ಬೇಕಾದಷ್ಟು ಜನ ಪೊಲೀಸರಿರುತ್ತಾರೆ. ಇಲ್ಲಿ ಆ ಸೌಲಭ್ಯವಿಲ್ಲ. ಇಂಥ ಸಂದರ್ಭಗಳಲ್ಲಿ ಸುಧಕ್ಕನಂಥ ಫಿಲಾಂತ್ರಫಿಸ್ಟುಗಳು ಸರ್ಕಾರಗಳನ್ನ, ಕಾರ್ಪೊರೇಷನ್ನುಗಳನ್ನ ನಂಬಿಕೊಂಡು ದುಡ್ಡು ಹಾಕಬಾರದು.












Click it and Unblock the Notifications