ಸದ್ದಿಲ್ಲದೆ ನಿರ್ಗಮಿಸಿದ ಶಕ್ತ ರಾಜಕಾರಣಿ ವಿಪಿ ಸಿಂಗ್
* ರವಿ ಬೆಳಗೆರೆ
ಇಡೀ ದೇಶ ಮಹಾನಗರಿ ಮುಂಬೈ ಮೇಲೆ ಕಣ್ಣು ನೆಟ್ಟು ಕುಳಿತು ಬಿಟ್ಟಿರುವ ಸಂದರ್ಭದಲ್ಲಿಯೇ ಈ ದೇಶದ ಮಾನ ಮರ್ಯಾದೆಯನ್ನು ಕೆಲವೇ ಕೆಲವು ಉಗ್ರಗಾಮಿಗಳು ಬೀದಿಪಾಲು ಮಾಡಿಬಿಡಬಹುದಾ ಎಂಬು ಬೆಕ್ಕಸಬೆರಗಾಗಿ ನೋಡುತ್ತಿರುವ ಘಳಿಗೆಯಲ್ಲೇ ತಣ್ಣಗೆ ನಿರ್ಗಮಿಸಿದವರು ವಿಶ್ವನಾಥ್ ಪ್ರತಾಪ್ ಸಿಂಗ್. ಭಯೋತ್ಪಾದಕರ ಆಟಾಟೋಪ ಇಲ್ಲದೇ ಹೋಗಿದ್ದರೆ ಸಿಂಗ್ ನಿಧನದ ಸುದ್ದಿ ಪತ್ರಿಕೆಗಳ ಮುಖಪುಟದಲ್ಲಿ ದೊಡ್ಡದಾಗೇ ಕಾಣಿಸಿಕೊಳ್ಳುತ್ತಿತ್ತು. ಇಂಡಿಯಾದ ರಕ್ತ-ಮಾಂಸಕ್ಕೇ ವಿಷ ಉಣಿಸಲು ಬಂದ ಉಗ್ರರ ನಡುವೆ ಮಿಸ್ಟರ್ ಕ್ಲೀನ್ ವೀಪಿ ಸಿಂಗ್, ದೇಶದ ರಾಜಕೀಯದ ದಿಕ್ಕನ್ನೇ ಬದಲಿಸಿ ಕಾಂಗ್ರೆಸ್ ಪಕ್ಷವೇ ಬೆಚ್ಚುವಂತೆ ಮಾಡಿದ್ದ ಸಿಂಗ್, ಅಧಿಕಾರದ ಕ್ರೀಮ್‌ನಲ್ಲಿ ಮೇಲ್ವರ್ಗದ ಮಂದಿಯೇ ಕುಳಿದಿದ್ದಾಗ ಇತರ ಹಿಂದುಳಿದವರ ವರ್ಗದ ಮಂದಿಗೆ ಗಟ್ಟಿ ದನಿಯನ್ನು ಕೊಟ್ಟ ಸಿಂಗ್ ನಿಧನದ ಸುದ್ದಿ ಕಾಣಿಸಿಕೊಂಡಿದ್ದು ಮುಖಪುಟದ 'ಬ್ರೀಫ್' ಕಾಲಂನಲ್ಲಿ ಅನ್ನುವುದು ವಿಪರ್ಯಾಸದ ಸಂಗತಿ. ಈ ಭಯೋತ್ಪಾದಕರ ಚೆಲ್ಲಾಟದ ಘಟನೆಗಳು ದೇಶದಲ್ಲಿ ಸಂಭವಿಸಿದಾಗಲೆಲ್ಲ ನನಗೆ ನೆನಪಿಗೆ ಬರುವುದು ವೀಪಿ. ನಿಮಗೆ ನೆನಪಿರಬಹುದು. ವೀಪಿ ಪ್ರಧಾನಿಯಾದ ಕೆಲವೇ ದಿನಗಳಲ್ಲಿ ಉಗ್ರಗಾಮಿಗಳು ಕಾಶ್ಮೀರದಲ್ಲಿ ಠಳಾಯಿಸಿದ್ದರು. ಅಂದು ಕೇಂದ್ರದಲ್ಲಿ ಗ್ರಹ ಮಂತ್ರಿಯಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ಮಗಳು ಮೆಹಬೂಬಾ ಮುಫ್ತಿಯನ್ನು ಉಗ್ರಗಾಮಿಗಳು ಅಪಹಸಿರಿದ್ದರು. ಆಗ ಜೈಲಿನಲ್ಲಿದ್ದ ಕಟ್ಟಾ ಉಗ್ರಗಾಮಿಗಳನ್ನು ಬಿಡುಗಡೆ ಮಾಡಬೇಕು ಎಂಬುದು ಬೇಡಿಕೆ. ಬಹುಶಃ ಮೊದಲ ಬಾರಿಗೆ ಪಾಕ್ ಉಗ್ರರು ಅಷ್ಟೊಂದು ದೊಡ್ಡ ರಂಪಾಟ ಮಾಡಿದ್ದರು ಅನಿಸುತ್ತದೆ. ತೀರಾ ಸಜ್ಜನರಾಗಿ ರಾಜಕಾರಣ ಮಾಡಿದ್ದ ವೀಪಿಗೆ ಇದು ದೊಡ್ಡ ಆಘಾತ. ಸರ್ಕಾರ ಉಗ್ರರ ಜೊತೆ ಒಪ್ಪಂದ ಮಾಡಿಕೊಂಡಿತು. ನಾಟಕೀಯ ವಿದ್ಯಮಾನಗಳು ನಡೆದು ಹೋದವು. ಉಗ್ರಗಾಮಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಅವರನ್ನು ಹೊತ್ತ ವಾಹನಗಳು ಕಾಶ್ಮೀರದತ್ತ ಬಿಗಿ ಕಾವಲಿನಲ್ಲಿ ದೌಡಾಯಿಸಿದವು. ಇನ್ನೊಂದು ಕಡೆ ಮೆಹಬೂಬಾರನ್ನು ಹೊತ್ತ ಉಗ್ರರ ವಾಹನ. ಮಗಳನ್ನು ಕರಕೊಂಡು ದೇಶದ್ರೋಹಿಗಳನ್ನು ಬಿಟ್ಟುಕೊಟ್ಟಿತು ಸರ್ಕಾರ. ಅಂತೂ ಬಿಕ್ಕಟ್ಟನ್ನು ಬಗೆಹರಿಸಿದ ನಿಟ್ಟುಸಿರು. ಆದರೆ, ವಿಪಿ ಸಿಂಗ್‌ರ ರಾಷ್ಟ್ರೀಯರಂಗ ಸರ್ಕಾರ ಬಹುದೊಡ್ಡ ಟೀಕೆಗೆ ಗುರಿಯಾಯಿತು.
ಮೊನ್ನಿನ ಮುಂಬೈ ಮಹಾದಾಳಿಯ ನಡುವೆಯೇ ಸಿಂಗ್ ನಿಧನರಾಗಿದ್ದು ಒಂದು ಕಾಕತಾಳೀಯವೇ ಬಿಡಿ. ಆದರೆ, ಇಂದಿಗೂ ನಾವು ನೆನಪಿಸಿಕೊಳ್ಳಬೇಕಾದದ್ದು ವೀಪಿ ಅವರ ಅಪ್ಪಟ ಪ್ರಾಮಾಣಿಕತೆಯನ್ನು. ಇಡೀ ರಾಜಕೀಯ ಜೀವನದಲ್ಲಿ ಪರಿಶುದ್ಧತೆಯನ್ನು ಕಾಪಾಡಿಕೊಳ್ಳುವ ರಾಜಕಾರಣಿಗಳು ನಮ್ಮಲ್ಲಿ ಇನ್ನೂ ಇದ್ದಾರೆಯೇ ಎಂದು ಹುಡುಕಾಡಿದರೂ ಸುಸ್ತಾಗಿ ಬಿಡುತ್ತೀರಿ. ಅವರಲ್ಲಿದ್ದ ಪ್ರಾಮಾಣಿಕತೆಯ ಕಾರಣದಿಂದಲೇ ಆಡಳಿತದ ಖದರು ಅವರ ಕೈಗೆ ಹತ್ತಲಿಲ್ಲವೋ ಎಂಬ ಅನುಮಾನ ಅನೇಕ ಬಾರಿ ಕಾಡುತ್ತದೆ. ರಾಜಕೀಯದ ತಿರುಗುಣಿಯಲ್ಲಿ ಅವರು ತೋರಿದ ಹೋರಾಟದ ಛಾಪನ್ನು ಅಧಿಕಾರದ ಅಖಾಡದಲ್ಲಿ ತೋರಿಸಲು ಸಾಧ್ಯವಾಗಲಿಲ್ಲ. ಅವರು ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ, ಕೇಂದ್ರದಲ್ಲಿ ಹಣಕಾಸು, ರಕ್ಷಮಾ ಮಂತ್ರಿಯಾಗಿದ್ದಾಗಲೂ ಹೀಗೇ ಆಗಿತ್ತು. ನಿಷ್ಠುರ ನಿಲುವುಗಳೇ ಅವರಿಗೆ ಮುಳುವಾಗಿದ್ದವು. ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಹಣದ ಥೈಲಿಯೊಂದಿಗೇ ಅವರು ಬದುಕಬಹುದಿತ್ತು.
ಎಪ್ಪತ್ತೇಳು ವರ್ಷದ ಸಿಂಗ್ ಬದುಕು ಸಾವಿನ ನಡುವೆ ಹೋರಾಟ ಮಾಡಲು ಶುರು ಮಾಡಿ ಹದಿನೇಳು ವರ್ಷಗಳೇ ಕಳೆದು ಹೋಗಿದ್ದವು. ಅವರಿಗೆ ರಕ್ತದ ಕ್ಯಾನ್ಸರ್ ಆಗಿತ್ತು. ಅದರ ಟ್ರೀಟ್‌ಮೆಂಟ್‌ಗೆ ಅಂತ ಆಗಾಗ ವಿದೇಶಕ್ಕೆ ಹೋಗಿ ಬರುತ್ತಿದ್ದರು. ಬಂದವರೇ ಮತ್ತೆ ಚೈತನ್ಯ ತುಂಬಿಕೊಂಡು ಮುರಿದುಬಿದ್ದ ಜನತಾ ಪರಿವಾರವನ್ನು ಕಟ್ಟುವ ಪ್ರಯತ್ನ ಮಾಡುತ್ತಿದ್ದರು. ಮಹಾಮಾರಿ ರಕ್ತ ಕ್ಯಾನ್ಸರ್‌ಗೆ ಹದಿನೇಳು ವರ್ಷದ ಹೋರಾಟ ಬಹು ದೊಡ್ಡದೇ ಬಿಡಿ. ನುಣ್ಣಗೆ ತಲೆ ಬೋಳಿಸಿಕೊಂಡ ವೀಪಿ ಆಗಾಗ ಕಾಣಿಸಿಕೊಳ್ಳುತ್ತಿದ್ದರಾದರೂ ನಮ್ಮ ಕಣ್ಣ ಮುಂದೆ ತುಪ್ಪಳದ ಟೋಪಿ ಹಾಕಿಕೊಂಡ, ಕೋಟು ತೊಟ್ಟ ಎತ್ತರ ನಿಲುವಿನ, ಸದಾ ಹಸನ್ಮುಖಿ ವಿಶ್ವನಾಥ್ ಪ್ರತಾಪ್ ಸಿಂಗ್ ಅವರ ರೂಪವೇ.
ಮೇಲ್ವರ್ಗದ ಮುಂದಿ ಏನೇ ಬೊಬ್ಬೆ ಹೊಡೆದುಕೊಳ್ಳಬಹುದು. ಕಡು ಬಡವರ, ಹಿಂದುಳಿದವರು ಹಕ್ಕುಗಳ ಬಗ್ಗೆ ಯಾವತ್ತೂ ಕಾಳಜಿ ಹೊಂದಿದ ನಾಯಕರೊಬ್ಬರಿದ್ದರೆ ಅದು ವೀಪಿ. ಅವರು ದೇಶದ ಹತ್ತನೇ ಪ್ರಧಾನಿಯಾಗಿ ಅಧಿಕಾರದಲ್ಲಿದ್ದುದು ಕೇವಲ ಹನ್ನೊಂದು ತಿಂಗಳು. ಯಾವುದೇ ನಿಷ್ಠುರಕ್ಕೆ ಒಳಗಾಗದೇ ಹೋಗಿದ್ದರೆ ಇನ್ನಷ್ಟು ಕಾಲ ಅಧಿಕಾರಕ್ಕೆ ಅಂಟಿಕೊಂಡು ಕುಳಿತುಕೊಳ್ಳಬಹುದಿತ್ತು. ಅವರು ಅಧಿಕಾರದ ಗದ್ದುಗೆಗೆ ಬಂದಾಗ ಅನೇಕ ವರ್ಷಗಳಿಂದ ಧೂಳು ಹಿಡಿದು ಬಿದ್ದಿದ್ದ ಒಂದು ಕಡತವಿತ್ತು. ಅದು ಬಿಂದೇಶ್ವರಿ ಪ್ರಸಾದ್ ಮಂಡಲ್ ಆಯೋಗದ ಶಿಫಾರಸುಗಳು. ಅದನ್ನು ಮುಟ್ಟಲು ಹೋದರೆ ದೇಶದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆಂಬ ಅರಿವು ಹಿಂದೆ ಬಂದ ಎಲ್ಲ ನಾಯಕರಿಗೆ ಇತ್ತು. ಹಾಗೆ ಮಾಡಿ ಒಂದು ಇತಿಹಾಸ ನಿರ್ಮಿಸಲು, ಆ ಮೂಲಕ ಹಿಂದುಳಿದ ವರ್ಗದವರಿಗೆ ಸರ್ಕಾರಿ ಉದ್ಯೋಗಗಳಲ್ಲಿ ನಿರ್ದಿಷ್ಟವಾದ ಮೀಸಲಾತಿ ಒದಗಿಸುವುದು ಯಾರಿಗೂ ಬೇಕಿರಲಿಲ್ಲ. ಆದರೆ, ಅದನ್ನು ವೀಪಿ ಸಿಂಗ್ ಮಾಡಿದರು. ಕರ್ನಾಟಕದಲ್ಲಿ ಉಳುವವನೇ ಹೊಲದೊಡೆಯ ಎಂಬ ವ್ಯವಸ್ಥೆಯನ್ನು ದೇವರಾಜ್ ಅರಸು ಮಾಡಿದ ಹಾಗೆ ಮಂಡಲ್ ವರದಿಯನ್ನು ಜಾರಿಗೆ ತಂದು ಹಿಂದುಳಿದ ವರ್ಗಗಳಿಗೆ ದನಿ ಕೊಟ್ಟ ವೀಪಿಯನ್ನು ಈ ದೇಶ ಯಾವತ್ತೂ ನೆನಪಿಸಿಕೊಳ್ಳುತ್ತದೆ.
ಮಂಡಲ್ ವರದಿ ಜಾರಿಗೆ ಮುಂದಾದ ಸರ್ಕಾರಕ್ಕೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಯಿತು ಎಂಬುದನ್ನು ಅನೇಕರು ಮರೆತಿರಲಿಕ್ಕಿಲ್ಲ. ಮೇಲ್ವರ್ಗದ ಯುವಕರ ಆಕ್ರೋಶ ಹೇಗಿತ್ತೆಂದರೆ, ದೇಶದಲ್ಲಿ ಆತ್ಮಾಹುತಿಯಂತಹ ಸಮೂಹ ಸನ್ನಿ ಶುರವಾಗಿದ್ದೇ ಆವಾಗ. ಮೇಲ್ಜಾತಿಯ ತರುಣರು ತಮಗಿನ್ನು ಭವಿಷ್ಯವೇ ಇಲ್ಲ ಎನ್ನು ರೀತಿಯ್ಲಿ ಬೀದಿಗಿಳಿದು ಸರಣಿ ಸರಣಿಯಾಗಿ ಆತ್ಮಾಹುತಿಗೆ ಇಳಿದುಬಿಟ್ಟರು. ಪಾರ್ಲಿಮೆಂಟಿನ ಮುಂಭಾಗದಲ್ಲಿ ಇಂತಹ ಪ್ರಯತ್ನ ನಡೆಯಿತು. ಉಹುಂ, ವೀಪಿ ಜಗ್ಗಲಿಲ್ಲ. ಅವರು ದೃಢ ನಿರ್ಧಾರ ಮಾಡಿಬಿಟ್ಟಿದ್ದರು. ಯಾಕೆಂದರೆ ಅಂತಹುದೊಂದು ರಾಜಕೀಯ ಗಟ್ಟಿತನ, ಇಚ್ಛಾಶಕ್ತಿ ಅವರಲ್ಲಿತ್ತು. ವೀಪಿ ರಾಜಕೀಯ ಪ್ರವೇಶ ಮಾಡಿದಾಗ ನೆಹರೂ ಯುಗವಿತ್ತು .ಕಾಂಗ್ರೆಸ್‌ನಂತಹ ಪಕ್ಷವನ್ನು ಸೇರಿಕೊಂಡಾಗ ಅಲ್ಲಿನ ಪಾಳೇಗಾರಿಕೆಯನ್ನು ಅರಗಿಸಿಕೊಳ್ಳುವುದು ಎಲ್ಲರಿಂದಲೂ ಸಾಧ್ಯವಿಲ್ಲ ಬಿಡಿ. ಆದರೆ, ಅಲಹಾಬಾದಿನ ಈ ಯುವಕ ಆ ಪಕ್ಷದಲ್ಲಿ ಮೂಡಿಸಿದ ಛಾಪು ಅವರ ಇಡೀ ರಾಜಕೀಯ ಜೀವನವನ್ನು ರೂಪಿಸಿತು. ವೀಪಿ ಅಂದರೆ ಹೀಗೆ ಎಂಬುದನ್ನು ಅಳೆಯುವುದು ಜನರಿಗೆ ಕಷ್ಟವಾಗಲಿಲ್ಲ.
ಎಂಬತ್ತರ ದಶಕದಲ್ಲಿ ಉತ್ತರ ಪ್ರದೇಶವೆಂದರೆ ಇಡೀ ಇಂಡಿಯಾದ ರಾಜಕೀಯ ಚಿತ್ರಣವನ್ನು ಬದಲಿಸುವ ತಾಕತ್ತು ಅದಕ್ಕೆ ಮಾತ್ರ ಇತ್ತು. ಎಲ್ಲಕ್ಕಿಂತ ಹೆಚ್ಚಿನದೇನೆಂದರೆ ಒಂದು ಪಕ್ಷವನ್ನು ದೇಶದ ಅಧಿಕಾರದ ಗದ್ದುಗೆಯ ಮೇಲೆ ಕೂರಿಸುವ, ದೇಶದ ಪ್ರಧಾನಿಗೆ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಒಂದು ರಾಜ್ಯವಿದ್ದರೆ ಅದು ಉತ್ತರಪ್ರದೇಶ ಎಂಬುದು ಖಾತ್ರಿಯಾಗಿತ್ತು. (ಈಗ ಹಾಗಿಲ್ಲ ಬಿಡಿ, ರಾಜ್ಯವೇ ಹೋಳಾಗಿದೆ, ರಾಜ್ಯದಲ್ಲಿರುವ ಪಕ್ಷಗಳೂ ಹೋಳಾಗಿ ಹೋಗಿವೆ.) 1980ರಲ್ಲಿ ಇಂದಿರಾ ಅಧಿಕಾರಕ್ಕೆ ಬಂದಾಗ ವಿಶ್ವನಾಥ್ ಪ್ರತಾಪ್ ಅವರನ್ನು ಉತ್ತರಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. ಆಗ ಇಡೀ ರಾಜ್ಯಕ್ಕೆ ರಾಜ್ಯವೇ ಸಮಸ್ಯೆಯನ್ನು ಹೊದ್ದು ಮಲಗಿತ್ತು. ರಾಜ್ಯದ ಒಂದು ಭಾಗವನ್ನು ದರೊಡೆಖೋರರೇ ಆಳುತ್ತಿದ್ದರೇನೋ ಎಂಬ ಸ್ಥಿತಿ ಇತ್ತು. ಜನ ಕಡು ಬಡತನದಿಂದ ಬಳಲುತ್ತಿದ್ದ ರಾಜ್ಯದ ಆಗ್ನೇಯ ದಿಕ್ಕಿನ ಗ್ರಾಮೀಣ ಜಿಲ್ಲೆಯಲ್ಲಿ ಡಕಾಯಿತರು ಬೆಳೆದುಬಿಟ್ಟಿದ್ದರು. ಎಲ್ಲರೂ ಉಗ್ರಾತಿ ಉಗ್ರರು. ಇವರನ್ನು ಮಟ್ಟ ಹಾಕುವುದಕ್ಕೆ ರಾಜ್ಯಕ್ಕೆ ಅಷ್ಟೇ ಕಠಿಣತಮ ನಾಯಕ ಬೇಕಿತ್ತು. ಅಂತಹ ಕಾಲದಲ್ಲಿ ವೀಪಿ ಮುಖ್ಯಮಂತ್ರಿಯಾಗಿ ಗಾದಿಗೆ ಬಂದರು. ಡಕಾಯಿತರು ಅಂಕುಶ ಹಾಕಲು ದೊಡ್ಡ ಸಮರವನ್ನೇ ಸಾರಿದರು. ಡಕಾಯಿತರು ಏಕಾಏಕಿ ದಾಳಿ ಮಾಡಿ ಒಂದೇ ಗ್ರಾಮದ ಸುಮಾರು 30 ಮಂದಿಯನ್ನು ಗುಂಡಿಟ್ಟು ಕೊಂದರು. ಇನ್ನೊಂದು ಪ್ರಕರಣದಲ್ಲಿ ವಿಪಿ ಸಿಂಗ್ ಸಹೋದರರನ್ನೇ ಡಕಾಯಿತರು ಹತ್ಯೆ ಮಾಡಿಬಿಟ್ಟರು. ಆಗ ವೀಪಿ ಕುಸಿದುಹೋಗಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ಬಂದರು. ರಾಜೀನಾಮೆ ಅಂಗೀಕಾರವಾಗಲಿಲ್ಲ. ಮುಂದೆ ಕೆಲ ವರ್ಷಗಳಲ್ಲೇ ಕಟ್ಟಾ ಡಕಾಯಿತರು ಶಸ್ತ್ರ ತ್ಯಾಗ ಮಾಡಿ ಮಂಡಿಯೂರಿದ್ದನ್ನು ಇಡೀ ರಾಷ್ಟ್ರವೇ ನಿಬ್ಬೆರಗಾಗಿ ನೋಡಿತು.
ವೀಪಿ ಸಿಂಗರ ನಿಷ್ಠೆ, ಶ್ರದ್ಧೆ, ಕಟ್ಟುಪಾಡಿನ ರಾಜಕಾರಣವನ್ನು ಕೇಲವ ಉತ್ತರಪ್ರದೇಶ ಮಾತ್ರ ನೋಡಲಿಲ್ಲ. ಇಡೀ ರಾಷ್ಟ್ರವೇ ಗುರುತಿಸಿತು. ಇಂತಹ ನಾಯಕ ದೇಶಕ್ಕೆ ಪ್ರಧಾನಿಯಾಗಿ ಬರಬೇಕು ಎಂಬಂತೆ ಜನ ಅಂದೇ ಮಾತಾಡಿದ್ದರು. ಇಂದಿರಾ ಹತ್ಯೆಯ ನಂತರ 1984ರಲ್ಲಿ ರಾಜೀವ್‌ಗೆ ಮಹಾತೀರ್ಪು ಸಿಕ್ಕಾಗ ವೀಪಿಯನ್ನು ವಿತ್ತಮಂತ್ರಿ ಮಾಡಿದ್ದರು. ದೇಶದ ಹಣಕಾಸಿನ ಲೆಕ್ಕಕ್ಕೆ ಶುದ್ಧಹಸ್ತರೇ ಬೇಕಿತ್ತಲ್ಲ. ಲೈನೆನ್ಸ್ ರಾಜ್ ಹಿಡಿತವನ್ನು ತಗ್ಗಿಸಿದ್ದು, ಚಿನ್ನದ ಕಳ್ಳ ಸಾಗಣಿಕೆಗೆ ಅಂಕುಶ ಹಾಕಿದ್ದು ವೀಪಿ ಕಾಲದಲ್ಲೇ. ಆದರೆ, ಈ ದೇಶದ ತೆರಿಗೆಗಳ್ಳರು ಸದಾ ನೆನಪಿಸಿಕೊಳ್ಳುವಂತೆ ಕೆಲಸವನ್ನು ಅವರು ಮಾಡಿದರು. ಹಣಕಾಸು ಖಾತೆಯ ವ್ಯಾಪ್ತಿಗೆ ಬರುವ ಜಾರಿ ನಿರ್ದೇಶನಾಲಯಕ್ಕೆ ಇನ್ನಿಲ್ಲದ ಪವರ್ ಕೊಟ್ಟರು. ಆಗ ನಡೆಯಿತು ನೋಡಿ ದೇಶಾದ್ಯಂತ ದಾಳಿಗಳು? ಯಾರನ್ನೂ ಬಿಡಲಿಲ್ಲ ಅಧಿಕಾರಿಗಳು. ಒಂದು ಹಂತದಲ್ಲಿ ಧೀರೂಬಾಯ್ ಅಂಬಾನಿ, ಅಮಿತಾಭ್ ಬಚ್ಚನ್ ಕೂಡ ಖೆಡ್ಡಾಕ್ಕೆ ಬಿದ್ದುಬಿಟ್ಟರು. ಬೆಂಕಿ ಬಿದ್ದಿದ್ದೇ ಆಗ. ವೀಪಿ ಕೆಂಡದ ಮನೆಗೇ ಕೈ ಹಾಕಿದ್ದರು. ಕಾಂಗ್ರೆಸ್ ಪಕ್ಷವನ್ನು ಚುನಾವಣೆ ಕಾಲದಲ್ಲಿ ಪೋಷಿಸಿದ ಕೈಗಾರಿಕೋದ್ಯಮಿಗಳ ಮೇಲೇ ದಾಳಿ ಮಾಡಿ ಬದುಕುವುದುಂಟೆ? ಮೊದಲೇ ಕೆಂಪು ಮುಖದ ರಾಜೀವ್ ಕೆಂಡಾಮಂಡಲವಾಗಿದ್ದರು. ಹಣಕಾಸು ಖಾತೆಗೆ ಕತ್ತರಿ ಬಿತ್ತು. ಆದರೆ ವೀಪಿ ಜನಪ್ರಿಯತೆ ಉತ್ತುಂಗದಲ್ಲಿತ್ತು. ಅದನ್ನು ತಾಳಿಕೊಳ್ಳಲಾಗದೇ ರಾಜೀವ್, ಅವರಿಗೆ ರಕ್ಷಣಾ ಖಾತೆಯನ್ನು ಕೊಟ್ಟರು. ಪಾಪ ರಾಜೀವ್ ಎಡವಿ ಬಿದ್ದದ್ದೇ ಇಲ್ಲಿ ಅನ್ನಿಸುತ್ತದೆ. ರಕ್ಷಣಾ ಖಾತೆಯಲ್ಲಿ ದೊಡ್ಡ ದೊಡ್ಡ ಹೆಗ್ಗಣಗಳೇ ಇದ್ದವಲ್ಲ! ಎಲ್ಲರೂ ಬಿಲ ಬಿಟ್ಟು ಆಚೆ ಬಂದರು. ಇಲ್ಲದ್ದಕ್ಕೆ ಬೋಫೋರ್ಸ್ ಡೀಲ್‌ನ ಗಂಟಲಿಗೇ ಕೈ ಹಾಕಿದ್ದರು ರಕ್ಷಣಾ ಮಂತ್ರಿ. ಇನ್ನು ಬಂಡವಾಳ ಬಯಲಾಗುತ್ತದೆ ಎಂದುಕೊಂಡರು ರಾಜೀವ್. ಮರುದಿನವೇ ವೀಪಿ ಸಿಂಗ್ ಸಂಪುಟದಿಂದ ವಜಾ ಆಗಿದ್ದರು.
ಕಾಂಗ್ರೆಸ್ ಯಜಮಾನಗಿರಿ ಸಾಕಾಗಿ ಹೋಗಿತ್ತು. ವ್ಯಗ್ರರಾಗಿ ಸಿಂಗ್ ಪಕ್ಷಕ್ಕೆ, ಲೋಕಸಭೆ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಿ ಹೊರಬಂದರು. ಆಗ ಕಾಂಗ್ರೆಸ್ ವಿರುದ್ಧ ಸೆಟೆದು ನಿಲ್ಲುವ ಅನೇಕ ನಾಯಕರಿದ್ದರು. ಈಗಿನ ಹಾಗಿರಲಿಲ್ಲ. ಈಗ ಒಬ್ಬ ವಿಲಾಸ್‌ರಾವ್ ರಾಜೀನಾಮೆ ಕೊಟ್ಟರೆ ಮುಂದಿನ ನಾಯಕರ್ಯಾರು ಎಂದು ಹುಡುಕುವ ಸ್ಥಿತಿಯಲ್ಲಿದೆ ಪಕ್ಷ. ಆಗ ಅರುಣ್ ನೆಹ್ರೂ, ಆರಿಫ್ ಮೊಹ್ಮದ್ ಖಾನ್ ಸೇರಿದಂತೆ ಅನೇಕರು ವೀಪಿಗೆ ಸಾಥ್ ಕೊಟ್ಟರು. ಅಲಹಾಬಾದ್‌ನಲ್ಲಿ ಉಪಚುನಾವಣೆ ನಡೆಯಿತು. ಪ್ರತಿಸ್ಪರ್ಧಿಯನ್ನಾಗಿ ಅನಿಲ್ ಶಾಸ್ತ್ರಿಯನ್ನು ಕಣಕ್ಕಿಳಿಸಿದರು ರಾಜೀವ್. ವೀಪಿ ಗೆಲುವು ಇಡೀ ರಾಷ್ಟ್ರಕ್ಕೆ ಬೇಕಿತ್ತು. ಅದು ಸುಳ್ಳಾಗಲಿಲ್ಲ. ಅಲ್ಲಿಂದ ರಾಜೀವ್ ಅಧಿಕಾರದ ಪತನವೂ ಶುರುವಾಯ್ತು. ವೀಪಿ ಜೊತೆ ಜನತಾ ಪರಿವಾರಕ್ಕೆ ಅನೇಕ ಪಕ್ಷಗಳು ಸೇರಿ ಆಗಿದ್ದೇ ಜನತಾಳ. ಮುಂದೆ ಜಾತ್ಯತೀತ ಮನೋಭಾವದ ಅನೇಕ ಪಕ್ಷಗಳು ಸೇರಿದ್ದು, ರಾಷ್ಟ್ರೀಯರಂಗ ರಚನೆಯಾಗಿ ಕಾಂಗ್ರೆಸ್‌ನ ಕೋಟೆಗಳೆಲ್ಲ ಚೂರಾಗತೊಡಗಿತು.
1989ರಲ್ಲಿ ನಡೆದ ಚುನಾವಣೆ ಒಂದು ಇತಿಹಾಸ ಬಿಡಿ. ರಾಷ್ಟ್ರೀಯರಂಗಕ್ಕೆ ಸರಳ ಬಹುಮತ ದೊರೆತು ಸರ್ಕಾರ ರಚನೆಯ ಹಂತಕ್ಕೆ ಬಂದಾಗ ನಡೆದ ನಾಯಕೀಯ ವಿದ್ಯಮಾನವನ್ನು ನಿಮಗೆ ವಿವರಿಸಿ ಈ ಬರಹವನ್ನು ಮುಗಿಸುತ್ತೇನೆ. ನ್ಯಾಷನಲ್ ಫ್ರಂಟ್ ಇನ್ನೇನು ಸರ್ಕಾರ ರಚಿಸಬೇಕು ಅನ್ನುವ ಹಂತದಲ್ಲಿ ಪ್ರಧಾನಿಯಾದರೆ ವೀಪಿ ಎನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು. ಡಿಸೆಂಬರ್ ಒಂದನೇ ತಾರೀಕು1989; ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್‌ನಲ್ಲಿ ನಾಯಕನ ಆಯ್ಕೆಗೆ ಸಭೆ ಸೇರಿದ್ದವು ಈ ಸಮಾನ ಮನಸ್ಕ ಪಕ್ಷಗಳು. ಸಭೆಯಲ್ಲಿ ಮೊದಲು ಎದ್ದು ನಿಂತವರು ವೀಪಿ. ಪ್ರಧಾನಿ ಹುದ್ದೆಗೆ ಅವರು ಸೂಚಿಸಿದ ಹೆಸರು ಹರ್ಯಾಣದ ಜಾಟ್ ನಾಯಕ ದೇವಿಲಾಲಾ! ಆದರೆ, ಅಜಾನುಬಾಹು ದೇವಿಲಾಲ್ ತಮ್ಮ ಚಾಳೀಸನ್ನು ಏರಿಸಿಕೊಂಡು ಪ್ರಧಾನಿ ಪಟ್ಟವನ್ನು ನಿರಾಕರಿಸಿ, ಮಿಸ್ಟರ್ ಕ್ಲೀನ್ ವೀಪಿ ಸಿಂಗ್ ಪ್ರಧಾನಿ ಆಗಬೇಕು ಎಂದರು. ಸಭೆ ಅನುಮೋದಿಸಿತು. ಅಂದು ಇದನ್ನು ಅರಗಿಸಿಕೊಳ್ಳದ ಒಬ್ಬೇ ಒಬ್ಬ ಮುಖಂಡನೆಂದರೆ ಚಂದ್ರಶೇಖರ್. ಮುಂದೆ ಅವರು ಸಂಪುಟವನ್ನು ಸೇರಿಕೊಳ್ಳಲಿಲ್ಲ.
ಅದಾಗಿ ಮರುದಿನವೇ ವೀಪಿ ಈ ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದರು. ಶುದ್ಧ ಹಸ್ತದ ನಾಯಕನಿಗೆ ಆಡಳಿತದ ನಾಜೂಕುತನ ಕೈಗೆ ಹತ್ತಲಿಲ್ಲ. ಅನೇಕ ಸಮಸ್ಯೆಗಳು ಮೈಮೇಲೆ ಬಿದ್ದವು. ಮಿಸ್ಟರ್ ಕ್ಲೀನ್ ಅಂಕಲ್ ಹೈರಾಣಾಗಿದ್ದರು. ಆಗ ಅವರ ಮಗ್ಗುಲಲ್ಲಿ ಇದ್ದ ಪಕ್ಷಗಳಾದವೂ ಎಷ್ಟು? ಅದರಲ್ಲೂ ಕೇಸರಿ ಪಕ್ಷದ ಉಪಟಳ! ಅಡ್ವಾಣಿ ಅಂಕಲ್ ನಡೆಸಿದ ರಥಯಾತ್ರೆ! ಬಿಡಿ ಅದನ್ನು ನೆನಪಿಸಿಕೊಳ್ಳದಿರುವುದೇ ಒಳ್ಳೆಯದು.