ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರೈಸಿಸ್ ಮ್ಯಾನೇಜ್ಮೆಂಟಲ್ಲಿ ಯಡಿಯೂರಪ್ಪ ವಿಫಲ!

By Staff
|
Google Oneindia Kannada News

Yeddyurappa with arch bishop Bernard Morasಕರ್ನಾಟಕದಲ್ಲಿ ಚರ್ಚ್ ಗಳ ಮೇಲೆ ದಾಳಿಗಳಾಗುತ್ತಿದ್ದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ವಿರೋಧ ಪಕ್ಷಗಳು ಮಾತ್ರವಲ್ಲ ರಾಜ್ಯದ ಪ್ರಜೆಗಳಿಂದಲೂ ಟೀಕೆಗೆ ಗುರಿಯಾಗಿದೆ. ಕೃಷ್ಣ, ದೇವೆಗೌಡ ಮೊದಲಾದ ವಿರೋಧ ಪಕ್ಷದ ನಾಯಕರ ವಿರುದ್ಧ ಯಡಿಯೂರಪ್ಪಗೆ ಬಿನ್ನಾಭಿಪ್ರಾಯಗಳೇನೆ ಇರಲಿ ಅಂಥವರಿಂದ ಕಲಿಯುವುದೂ ಸಾಕಷ್ಟಿದೆ. ಊರ ಮದುವೆಗೆಲ್ಲ ನಂದೇ ಪೌರೋಹಿತ್ಯ ಅಂತ ಕುಳಿತರೆ ಹೇಗೆ?

ಅಂಕಣಕಾರ : ರವಿ ಬೆಳಗೆರೆ

ಮೊನ್ನೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕುಳಿತು ಅವರು ಮಾಧ್ಯಮದವರೆದುರು ಮಾತನಾಡುತ್ತಿದ್ದ ರೀತಿ ನೋಡಿದವರಿಗೆ ಇಂತಹ ಅನುಮಾನ ಹುಟ್ಟಿದರೆ ಅದೇನೂ ಅಸಹಜವಲ್ಲ. ಕರ್ನಾಟಕದಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿ ಬಗ್ಗೆ ಕೇಂದ್ರ ಸರ್ಕಾರ ತೋರುತ್ತಿರುವ ಆಸಕ್ತಿ ಅತಿಯಾಯಿತು. ಇದು ನಮ್ಮ ಸರ್ಕಾರವನ್ನು ಬೀಳಿಸಲು ಕಾಂಗ್ರೆಸ್-ಜೆಡಿಎಸ್ ನವರು ಮಾಡುತ್ತಿರುವ ಸಂಚು ಅಂತೆಲ್ಲ ಯಡಿಯೂರಪ್ಪ ಒಂದೇ ಸಮನೇ ಹೇಳುತ್ತಾ ಹೋದರೆ ಕೇಳುವವರಿಗೆ ಅಯೋಮಯ.

ನಿಜ, ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ ಏನಾಗುತ್ತಿದೆ? ಯಾವ್ಯಾವ ರಾಜಕೀಯ ಪಕ್ಷಗಳು ಹೇಗೆ ವರ್ತಿಸುತ್ತಿವೆ? ಆ ಪೈಕಿ ಯಾವ್ಯಾವ ಪಕ್ಷಗಳು ಯಾವ್ಯಾವ ರೀತಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿವೆ? ಅನ್ನುವುದನ್ನು ಯಡಿಯೂರಪ್ಪ ಮಾತ್ರವಲ್ಲ, ಜನ ಸಾಮಾನ್ಯರೂ ಗಮನಿಸುತ್ತಿದ್ದಾರೆ. ಹಾಗೆಯೇ ಮಂಗಳೂರು, ಚಿಕ್ಕಮಗಳೂರು, ಉಡುಪಿಯಲ್ಲಿನ ಚರ್ಚ್‌ಗಳ ಮೇಲೆ ಬಜರಂಗದಳದವರು ನಡೆಸಿದ ದಾಳಿಯ ನಂತರ ಕರ್ನಾಟಕದ ಹಲವಡೆಗಳಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆದಾಗ ಬರೀ ಬಜರಂಗದಳದವರು ಮಾತ್ರ ಕಾರಣರಲ್ಲ, ಬದಲಿಗೆ ರಾಜಕೀಯ ಲಾಭ ಪಡೆಯಲು ಹೊರಟ ಕೆಲ ಹಿತಾಸಕ್ತಿಗಳ ಕೈವಾಡವೂ ಇದೆ ಅನ್ನುವ ಅನುಮಾನ ಹಲವರಿಗಿದೆ. ಪ್ರಶ್ನೆ ಅದಲ್ಲ, ಒಟ್ಟಾರೆಯಾಗಿ ಚರ್ಚ್‌ಗಳ ಮೇಲಿನ ದಾಳಿ ಪ್ರಕರಣವನ್ನು ಯಡಿಯೂರಪ್ಪ ನಿಭಾಯಿಸುತ್ತಿರುವ ರೀತಿ ಇದೆಯಲ್ಲ? ಅದು ಒಬ್ಬ ಮುತ್ಸದ್ಧಿಯ ವರ್ತನೆಯಯಂತಿದೆಯೇ? ಅನ್ನುವುದೇ ಇವತ್ತಿನ ಪ್ರಶ್ನೆ. ಯಾಕೆಂದರೆ, ಯಡಿಯೂರಪ್ಪ ಈ ನಾಡಿನ ಮುಖ್ಯಮಂತ್ರಿಯಾಗಿ ಮೂದಲು ತಮ್ಮ ಮೈಮೇಲೆ ಸಹನೆ ಎಂಬ ಮಂತ್ರವನ್ನು ಅವಾಹನೆ ಮಾಡಿಕೊಳ್ಳಬೇಕಿದೆ. ಉದಾಹರಣೆ ತೆಗೆದುಕೊಳ್ಳಿ. ಕ್ರೈಸ್ತ ಮಿಷನರಿಗಳು ಬಲವಂತದ ಮತಾಂತರ ಮಾಡುತ್ತಿದ್ದಾರೆ ಅನ್ನುವ ದೂರಿದೆ. ಅದನ್ನು ನಾನು ಸಹಿಸುವುದಿಲ್ಲ ಅಂತ ಚೀರಾಡುತ್ತಾರೆ ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ದೂರವಾಣಿ ಮೂಲಕ ಇವರನ್ನು ಸಂಪರ್ಕಿಸಿ ಕರ್ನಾಟಕದಲ್ಲಿ ಎಷ್ಟು ಮಂದಿ ಹಿಂದೂಗಳನ್ನು ಮತಾಂತರ ಮಾಡಲಾಗಿದೆ ಅನ್ನುವ ಬಗ್ಗೆ ಅದೆಷ್ಟು ದೂರುಗಳಿವೆ? ಅಂತ ಕೇಳಿದರೆ ನತಮಸ್ತಕರಾಗುತ್ತಾರೆ. ಅದರರ್ಥ? ಕರ್ನಾಟಕದಲ್ಲಿ ಕ್ರೈಸ್ತ ಮಿಷನರಿಗಳು ಹಿಂದೂಗಳ ಮತಾಂತರ ಮಾಡುತ್ತಿಲ್ಲ ಅಂತಲ್ಲ. ಆದರೆ ಅವರು ಯಾರನ್ನು ಮತಾಂತರ ಮಾಡಿದ್ದಾರೆ? ಅವರಿಗೆ ಸವಲತ್ತು ನೀಡುವ ಭರವಸೆ ನೀಡಿ ಮತಾಂತರ ಮಾಡುತ್ತಾರೆ. ದೂರು ಅಂತ ಎಲ್ಲಿಂದ ಬರಬೇಕು? ಎಲ್ಲಕ್ಕಿಂತ ಮುಖ್ಯವಾಗಿ ಈ ರೀತಿ ಮತಾಂತರ ಮಾಡುವವರಿಗೆ ತಾಂತ್ರಿಕವಾದ ಬೆಂಬಲಗಳಿವೆ. ದೇಶದ ಸಂವಿಧಾನವೇ ಯಾರು ಬೇಕಾದರೂ ತಮ್ಮ ಧರ್ಮದ ಪರ ಪ್ರಚಾರ ನಡೆಸಬಹುದು, ಅದನ್ನು ಒಪ್ಪಿ ಯಾರು ಬೇಕಾದರೂ ಈ ಧರ್ಮವನ್ನು ಅನುಸರಿಸಬಹುದು ಅನ್ನುತ್ತದೆ.

ಇವತ್ತು ಮತಾಂತರ ನಿಷೇಧ ಮಾಡಿ ಎಂದರೆ ಅದನ್ನು ಮಾಡಬೇಕಾದವರು ಯಾರು? ಹಾಗೆ ಮಾಡಬೇಕೆಂದರೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕು. ಹೀಗೆ ಮತಾಂತರದ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ಕಗ್ಗಂಟುಗಳಿವೆ. ಅದೆಲ್ಲ ಒಂದು ಕಡೆಗಿರಲಿ. ಈಗ ನಮ್ಮ ಯಡಿಯೂರಪ್ಪ ಅವರ ಕಡೆಗೆ ಬರೋಣ. ಚರ್ಚ್ ಮೇಲೆ ದಾಳಿ ಪ್ರಕರಣಗಳು ನಡೆದವಲ್ಲ? ಆ ಕ್ಷಣಕ್ಕೆ ಯಡಿಯೂರಪ್ಪ ಏನು ಮಾಡಬೇಕಿತ್ತು? ದಾಳಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ತಕ್ಷಣವೇ ಕರ್ನಾಟಕದ ಸರ್ವಪಕ್ಷಗಳ ನಾಯಕರ ಸಭೆ ಕರೆಯಬೇಕಿತ್ತು. ಕಾಂಗ್ರೆಸ್, ಜೆಡಿಎಸ್, ಸಿಪಿಐ, ಸಿಪಿಎಂ, ರೈತಸಂಘ ಹೀಗೆ ವಿವಿಧ ಪಕ್ಷಗಳ ನಾಯಕರ ಸಭೆ ಕರೆದು ಸರ್ಕಾರಕ್ಕೆ ನಿಮ್ಮ ಸಹಕಾರಬೇಕು ಅಂದಿದ್ದರೆ ಯಡಿಯೂರಪ್ಪ ನಿಜವಾದ ನಾಯಕರಾಗುತ್ತಿದ್ದರು. ಅದೇ ಕಾಲಕ್ಕೆ ಸರ್ವಧರ್ಮಗಳ ನಾಯಕರ ಸಭೆ ಕರೆದು, ಇಲ್ಲ, ಇನ್ನು ಇಂತಹ ಘಟನೆಗಳಾಗಲು ಅವಕಾಶ ಕೊಡುವುದಿಲ್ಲ ಅಂದಿದ್ದರೆ ಮುಂದೆ ಚರ್ಚ್ ಮೇಲೆ ದಾಳಿ ನಡೆಯಲು ಸಾಧ್ಯವೇ ಇರಲಿಲ್ಲ. ಆದರೆ ನಿರಂತರವಾಗಿ ಚರ್ಚ್‌ಗಳ ಮೇಲೆ ದಾಳಿ ನಡೆಯುತ್ತಿದ್ದರೆ ಯಡಿಯೂರಪ್ಪ ಒಂದೇ ಸಮನೆ ಪ್ರತಿಪಕ್ಷದ ನಾಯಕರನ್ನು ಹಿಡಿದು ಕುಟ್ಟುತ್ತಿದ್ದರು. ಸರ್ಕಾರ ಬೀಳಿಸಲು ಆ ಅಪ್ಪ ಮಕ್ಕಳು ಸಂಚು ನಡೆಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸೇರಿ ಬಿಜೆಪಿ ಸರ್ಕಾರವನ್ನುರುಳಿಸಲು ಪಿತೂರಿ ನಡೆಸುತ್ತಿದ್ದಾರೆ ಎಂದು ಒಂದೇ ಸಮನೆ ಭೋರ್ಗರೆಯುತ್ತಿದ್ದರೆ ಪ್ರತಿಪಕ್ಷದವರೇನು ಮಾಡುತ್ತಾರೆ? ಯಡಿಯೂರಪ್ಪ ಅವರ ಬೈಗುಳ ಕೇಳಿಸಿಕೊಂಡು ಸುಮ್ಮನೆ ಕೂರಲು ಅವರೇನು ಸದಾನಂದಗೌಡರಾ? ಇಲ್ಲಾ ಅವರ ಬೆನ್ನಲ್ಲೇ ಇರುವ ಗೋಸ್ವಾಮಿಯಾ?

ನಿಜ, ಇವತ್ತು ಚರ್ಚ್‌ಗಳ ಮೇಲೆ ದಾಳಿ ನಡೆದ ಪ್ರಕರಣವನ್ನು ಬಳೆಸಿಕೊಂಡು ತಮ್ಮ ಪಕ್ಷವನ್ನು ಬೆಳಸುವುದು ಹೇಗೆ? ಅಂತ ಕಾಂಗ್ರೆಸ್‌ನವರೂ ಯೋಚಿಸುತ್ತಾರೆ. ಬೈಬರ್ತ್ ಪೊಲಿಟಿಷಿಯನ್ ದೇವೇಗೌಡರೂ ಯೋಚಿಸುತ್ತಾರೆ. ಆದರೆ ಇಂತಹ ಸಂದಿಗ್ಧ ಕಾಲದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳು ಜಾಣ್ಮೆ ಇರಬೇಕಾದ್ದು ಯಾರಿಗೆ? ಯಡಿಯೂರಪ್ಪ ಅವರಿಗಲ್ಲವೇ? ವಿಪರ್ಯಾಸವೆಂದರೆ ಯಡಿಯೂರಪ್ಪ ಅವರಿಗೆ ಕ್ರೈಸಿಸ್ ಮ್ಯಾನೇಜ್‌ಮೆಂಟ್ ಅಂದರೆ ಏನೂಂತಲೇ ಗೊತ್ತಿಲ್ಲ. ಪ್ರತಿಪಕ್ಷದಲ್ಲಿದ್ದಾಗ ಅವರು ಒಂದೇ ಸಮನೆ ಸರ್ಕಾರದ ವಿರುದ್ಧ ಕೂಗಾಡುತ್ತಿದ್ದರು. ಚೀರಾಡುತ್ತಿದ್ದರು, ಉರುಳಾಡಿ ಅಬ್ಬರಿಸುತ್ತಿದ್ದರು. ಸರಿಯೇ. ಆದರೆ ಈ ಪ್ರಯೋಗಗಳು ಸರ್ಕಾರ ನಡೆಸಲು ಉಪಯುಕ್ತವಲ್ಲ ಅನ್ನುವುದು ನೂರು ದಿನ ಕಳೆದ ನಂತರವಾದರೂ ಯಡಿಯೂರಪ್ಪ ಅವರಿಗೆ ಅರ್ಥವಾಗಬೇಕಿತ್ತವೇ? ಉಹುಂ, ಇವತ್ತಿಗೂ ಅವರು ವಿರೋಧ ಪಕ್ಷದ ನಾಯಕ. ಕೇಳಿದರೆ ನಾನು ಹಳ್ಳಿಗ ಸ್ವಾಮಿ, ಇನ್ನೊಬ್ಬರನ್ನು ಕೇಳಿ ತಿಳಿದುಕೊಂಡು ಕೆಲಸ ಮಾಡುತ್ತೇನೆ ಅನ್ನುತ್ತಾರೆ. ಆದರೆ ಹತ್ತಾರು ವರ್ಷಗಳ ಕಾಲ ವಿಧಾನಸಭೆಯಲ್ಲಿದ್ದವರು ಯಡಿಯೂರಪ್ಪ, ಕಲಿಯುವ ಇಚ್ಛೆ ಇದ್ದಿದ್ದರೆ ಸಹನೆ ಅನ್ನುವ ಮಂತ್ರವನ್ನು ಕಲಿಯಲು ಅವರಿಗೆ ಹಲವಾರು ನಾಯಕರ ಉದಾಹರಣೆಗಳಿದ್ದವು.

ರಾಮಕೃಷ್ಣ ಹೆಗಡೆ, ದೇವೇಗೌಡ, ಪಟೇಲ್, ಕೃಷ್ಣ ಹಾಗೆ ಹಲವಾರು ನಾಯಕನ್ನು, ಸಂದಿಗ್ಧ ಕಾಲದಲ್ಲಿ ಅವರು ಹಾಗೆ ವರ್ತಿಸುತ್ತಿದ್ದರು ಅನ್ನುವುದನ್ನು ನೋಡಿಯೇ ಬೆಳೆದವರಲ್ಲವೇ ಯಡಿಯೂರಪ್ಪ? ನರಹಂತಕ ವೀರಪ್ಪನ್ ವರನಟ ರಾಜ್‌ರನ್ನು ಅಪಹರಿಸಿಕೊಂಡು ಹೋದ ಸಂದರ್ಭವಿತ್ತಲ್ಲ? ಆವತ್ತು ನೂರಕ್ಕೂ ಹೆಚ್ಚು ದಿನಗಳನ್ನು ಕೃಷ್ಣ ನಿಭಾಯಿಸಿದ ರೀತಿಯಿದೆಯಲ್ಲ? ಅದು ಅವರ ಎಕ್ಸ್‌ಪೀರಿಯನ್ಸ್. ಅವತ್ತು ಕೃಷ್ಣ ಕೂಡಾ ಹೀಗೇ ಯಡಿಯೂರಪ್ಪ ಅವರ ಥರ ಲೊಳಗಂಬಳಗ ಮಾತಾನಾಡಿದ್ದರೆ ಕರ್ನಾಟಕ ಹೊತ್ತಿ ಉರಿದು ಹೋಗುತ್ತಿತ್ತು. ಆದರೆ ಕೃಷ್ಣ ಮೌನ ವಹಿಸಿದರು. ಇಡೀ ವಿಷಯವನ್ನು ತಾವೂಬ್ಬರೇ ನಿಭಾಯಿಸಲು ಹೋಗದೆ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆಯವರ ಮೇಲೆ ಜವಾಬ್ದಾರಿ ವಹಿಸಿದರು.

ಇಡೀ ಕರ್ನಾಟಕದ ಪಾಲಿಗೆ ಧಾವಂತ ತಂದಿಟ್ಟಿದ್ದ ಹುಬ್ಬಳ್ಳಿಯ ಈದ್ಗಾ ಮೈದಾನದ ವಿಷಯವನ್ನು ದೇವೇಗೌಡ ಹೇಗೆ ನಿಭಾಯಿಸಿದರು? ಪಕ್ಕದಲ್ಲಿ ಒಬ್ಬ ಸಿ.ಎಂ.ಇಬ್ರಾಹಿಂ ಅವರನ್ನಿಟ್ಟಿಕೊಂಡು, ಕಾಂಗ್ರೆಸ್ ಪಕ್ಷದ ಹಿಂಡಸಗೇರಿ ಅವರನ್ನು ಮಗ್ಗುಲಲ್ಲಿಟ್ಟಿಕೊಂಡು ಕಣ್ರೆಪ್ಪೆ ಮುಚ್ಚಿ ತೆಗೆಯುವಷ್ಟರಲ್ಲಿ ಪರಿಹರಿಸಬಿಟ್ಟರಲ್ಲ? ಇದರರ್ಥ ಏನು ಅಂದರೆ, ಒಬ್ಬ ನಾಯಕ ಊರ ಮದುವೆಗೆಲ್ಲ ನಂದೇ ಪೌರೋಹಿತ್ಯ ಅಂತ ಕೂರಬಾರದು, ಅಕ್ಕ-ಪಕ್ಕ ನಂಬಿಕಸ್ಥರು ಅಂತ ಒಂದಷ್ಟು ಜನರನ್ನು, ಕ್ರೈಸಿಸ್ ಮ್ಯಾನೇಜ್‌ಮೆಂಟ್ ಅಂದರೆ ಏನೂಂತ ಬಲ್ಲವರನ್ನು ಇಟ್ಟುಕೊಂಡಿರಬೇಕು. ಆದರೆ ಯಡಿಯೂರಪ್ಪ ಕಳೆದ ಹತ್ತನ್ನೆರಡು ದಿನಗಳಿಂದ ಆಚಾರ್ಯ ಅನ್ನುವ ನಂದಿನಿ ಬ್ರಾಂಡ್ ಗೃಹ ಸಚಿವರನ್ನು ಕರೆದುಕೊಂಡು ಗಣಗಣ ತಿರುಗುತ್ತಿದ್ದಾರೆಯೇ ವಿನಾ ಬೇರೇನಾದರೂ ಮಾಡುತ್ತಿದ್ದಾರೆಯೇ? ಕ್ರೈಸಿಸ್ಸು ಪರಿಹಾರವಾಬೇಕೂಂದರೆ ಹೇಗೆ ಪರಿಹಾರವಾಗಬೇಕು?

ಇವತ್ತು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ನೆನಪಿಡಬೇಕಾದ ಹಲವು ವಿಷಯಗಳಿವೆ. ಈ ಪೈಕಿ ಮುಖ್ಯವಾದುದು ಎಂದರೆ ಒಂದು ಸಂದರ್ಭವನ್ನು ನಿಭಾಯಿಸಲು ಯಾರು ಅರ್ಹರು ಅನ್ನುವುದನ್ನು ಗುರುತಿಸಿಟ್ಟುಕೊಳ್ಳುವುದು. ಜೆ.ಎಚ್.ಪಟೇಲರಿಗೆ ಈ ಗುಣವಿತ್ತು. ಅವತ್ತು ಮುಖ್ಯಮಂತ್ರಿ ಪಟ್ಟದಿಂದ ತಮ್ಮನ್ನು ಕೆಳಗಿಳಿಸಲು ಹೊರಟ ದೇವೆಗೌಡರಿಗೆ ಅವರು ಉತ್ತರ ಕೊಡಿಸಿದ್ದು ಯಾರಿಂದ? ಭೈರೇಗೌಡರಿಂದ, ನಾಗೇಗೌಡರಿಂದ, ಬಚ್ಚೇಗೌಡರಿಂದ. ಆವಾಗೇನಾಯಿತು ಎಂದರೆ ಪಟೇಲರ ಸರ್ಕಾರ ಒಕ್ಕಲಿಗ ವಿರೋಧಿ ಅಂತ ಹಣೆಪಟ್ಟಿ ಹಚ್ಚುವುದು ದೇವೆಗೌಡರಿಂದ ಸಾಧ್ಯವಾಗಲಿಲ್ಲ. ಇದನ್ನು ಯಡಿಯೂರಪ್ಪ ಕಣ್ಣಾರೆ ನೋಡಿದವರಲ್ಲವೆ? ಆದರೂ ಯಾಕವರಿಗೆ ಇದು ಪಾಠವಾಗಲಿಲ್ಲ? ಚರ್ಚ್ ಗಳ ಮೇಲೆ ದಾಳಿ ಘಟನೆಗಳಿಂದ ಕೆಂಡಾಮಂಡಲಗೊಂಡಿದ್ದ ಆರ್ಚ್ ಬಿಷಪ್ ಅವರನ್ನು ನೋಡಲು ಹೋಗುವಾಗ ಇದು ಅವರಿಗೆ ನೆನಪಿನಲ್ಲಿರಬೇಕಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಸಂದರ್ಭವನ್ನು ನಿಭಾಯಿಸಲು ಅನಂತಕುಮಾರ್ ಥರದ ಸೊಫಿಸ್ಟಿಕೇಟೆಡ್ ನಾಯಕರನ್ನು ಕಳುಹಿಸಿದ್ದರೆ ತಾವೇ ನಿಂತು ಪರಪರ ಬೈಸಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಆದರೆ ಅಲ್ಲಿ ಆರ್ಚ್ ಬಿಷಪ್, ಯಡಿಯೂರಪ್ಪ ಅವರಿಗೆ ತಾರಾಮಾರಾ ಟೀಕಿಸುತ್ತಿದ್ದರೆ ಯಡಿಯೂರಪ್ಪ ಅವರ ಜತೆ ಹೋಗಿದ್ದ ಜನ ಚನ್ನಪಟ್ಟಣದ ಬೊಂಬೆಗಳಂತೆ ನಿಂತಿದ್ದರು. ಇದನ್ನೆಲ್ಲ ಯಾಕೆ ಹೇಳಬೇಕೆಂದರೆ ಯಡಿಯೂರಪ್ಪ ಅವರಲ್ಲಿ ಸಹನೆಯ, ವಿಶ್ವಾಸದ ಕೊರತೆಯಿದೆ. ಅದನ್ನು ಭರ್ತಿ ಮಾಡಿಕೊಳ್ಳದಿದ್ದರೆ ಅವರು ಏನು ಹೇಳಲು ಹೊರಟಿದ್ದಾರೋ ಅದರಲ್ಲಿ ಸತ್ಯವಿದ್ದರೂ ನೋಡುವವರ ಕಣ್ಣಿಗೆ ತಪ್ಪಾಗಿ ಕಾಣುತ್ತದೆ. ಅದು ಅವರಿಗಷ್ಟೇ ಅಲ್ಲ, ರಾಜ್ಯದ ಪಾಲಿಗೇ ಶಾಪವಾಗುತ್ತದೆ ಅನ್ನುವುದನ್ನು ಅವರು ಮರೆಯಬಾರದು.

(ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X