ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಗೆ ದಕ್ಕುವ ಪ್ರತಿ ನಿತ್ಯದ ಸೈಲೆನ್ಸೇ ಧ್ಯಾನ!

By ಅಂಕಣಕಾರ : ರವಿ ಬೆಳೆಗೆರೆ
|
Google Oneindia Kannada News

Think about yourself when you have nothing to doಫೋನಿನಲ್ಲಿ ಮಾತನಾಡಿ ಫೋನಿಟ್ಟ ಮೇಲೆ ಒಂದು ಸೈಲೆನ್ಸ್ ಆವರಿಸಿಕೊಳ್ಳುತ್ತೆ. ಅದನ್ನು ಗಮನಿಸಿದ್ದೀರಾ? ರಾತ್ರಿ ಪಾರ್ಟಿ ನಡೆಯುತ್ತದೆ. ಮಾತು, ಹಾಡು, ನಗು, ಡ್ರಿಂಕು ಬೆಳಿಗ್ಗೆ ಎದ್ದು ಕೂತರೆ ಒಂದು ವಿಚಿತ್ರವಾದ ಮೌನ! ರಾತ್ರಿ ಏನೇನಾಯಿತು ಅಂತ ನೆನೆಸಿಕೊಳ್ಳುವ ಪ್ರಯತ್ನ. ಯಾಕೋ ಚಿಕ್ಕ ಅಸಮಾಧಾನ. ಒಂದು ರಿಗ್ರೆಟ್. ಅದೆಲ್ಲ ಬೇಡಿತ್ತೇನೋ ಎಂಬ ಭಾವ. ಜಗಳವೂ ಹಾಗೆ. ಜಗಳ ಮುಗಿದು ಅಲ್ಲಿಂದ ಹೊರಟು ಬಂದ ಮೇಲೆ, ಮನಸ್ಸಿನ ದುಮುದುಮು ಮುಗಿದು ಅಲ್ಲಿಂದ ಒಂದು ತೆರನಾದ ಮೌನ ಆವರಿಸಿಕೊಳ್ಳುತ್ತದೆ. ಹಾಗೆ ಮಾತಾಡಬಾರದಿತ್ತೇನೋ ಎಂಬ ಭಾವ. ಅಷ್ಟೆಲ್ಲ ಯಾಕೆ? ಒಂದು ಪುಸ್ತಕ ಓದಿ ಮುಚ್ಚಿಟ್ಟಾದ ಮೇಲೆ ಮನಸ್ಸು ಮೌನಕ್ಕೆ ಶರಣಾಗುತ್ತದೆ.

ಇಂಥ ಮೌನಗಳು ಪ್ರತಿನಿತ್ಯ ನಮ್ಮ ಬದುಕಿನಲ್ಲಿ ಸಂಭವಿಸುತ್ತಿರುತ್ತದೆ. ದೊಡ್ಡ ದೊಡ್ಡ ವಿಷಯಗಳನ್ನು ಬಿಡಿ. ಗಂಡ-ಮಕ್ಕಳು ಆಫೀಸಿಗೆ, ಶಾಲೆಗೆ ಹೋದ ಮೇಲೆ ಮನೆಯಲ್ಲಿ ಚಿಕ್ಕದೊಂಡು ಮೌನ ನೆಲೆಗೊಳ್ಳುತ್ತದೆ.

ಅಂಥ ಮೌನವನ್ನು ಏನು ಮಾಡುತ್ತೀರಿ ಎಂಬುದು ನನ್ನ ಪ್ರಶ್ನೆ. ಅನೇಕ ಜನಕ್ಕೆ ಆ ಮೌನದ ಕಿಮ್ಮತ್ತೇ ಗೊತ್ತಿರುವುದಿಲ್ಲ. ತಕ್ಷಣ ಯಾರಿಗೋ ಫೋನು ಮಾಡುತ್ತಾರೆ. ನಿನ್ನೆ ರಾತ್ರಿಯ ಪಾರ್ಟಿ ಹಂಗಾಯಿತಲ್ವಾ, ಹಿಂಗಾಯಿತಲ್ವಾ ಅಂತ ಮಾತು ಶುರು ಮಾಡಿಬಿಡುತ್ತೇವೆ. ಒಬ್ಬರೇ ಇರೋಕೆ ಬೋರು ಅಂತ ಯಾರಿಗೋ ಫೋನು ಮಾಡುತ್ತೇವೆ. ಟಿವಿ ಹಾಕುತ್ತೇವೆ. ಕೆಟ್ಟಾಕೊಳಕ ಹಾಡು ಹಾಕಿಕೊಳ್ಳುತ್ತೇವೆ. ಆ ನಿಮಿಷದಲ್ಲಿ ಬದುಕಿನ ಎಂಥ ದೊಡ್ಡ ಸಂತೋಷವನ್ನು, prime timeನ್ನ ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ನಮ್ಮಲ್ಲಿ ಅನೇಕರಿಗೆ ಗೊತ್ತಿರುವುದಿಲ್ಲ.

ಪಾರ್ಟಿ ಮುಗಿತ ಮಾರನೆಯ ಬೆಳಿಗ್ಗೆ ನಾನು ಹಾಸಿಗೆಯಿಂದ ಏಳುವುದೇ ತಡ. ಸಾಮಾನ್ಯವಾಗಿ ಎಚ್ಚರವಾದ ಮೇಲೆ ಹಾಸಿಗೆಯಲ್ಲಿ ಮಲಗಿರುವುದು ನನ್ನಿಂದ ಸಾಧ್ಯವಿಲ್ಲ. ಸ್ಪ್ರಿಂಗಿನಂತೆ ಎದ್ದು ಕುಳಇತು ಆವತ್ತಿನ ಕೆಲಸ ಶುರು ಮಾಡಿಬಿಡುತ್ತೇನೆ. ಆದರೆ ಪಾರ್ಟಿ ಮುಗಿದ ಮಾನನೆಯ ಬೆಳಿಗ್ಗೆ ನಾನು ಕೊಂಚ ಜಡ. ಸುಮ್ಮನೆ ಮಲಗಿ ಎಲ್ಲವನ್ನೂ recollect ಮಾಡಿಕೊಳ್ಳುತ್ತೇನೆ. ಹೆಚ್ಚೆಂದರೆ ಅದು ಹತ್ತು ಹದಿನೈದು ನಿಮಿಷದ ವ್ಯವಹಾರ. ಮೊನ್ನೆ ನಾನು ದಯಾನಾಯಕ್ ರಾತ್ರಿ ಹತ್ತೂವರೆಗೆ ಭೇಟಿಯಾದವರು ಬೆಳಗಿನ ಜಾವ ಐದು ಗಂಟೆಯತನಕ ಮಾತನಾಡಿದೆವು. ಬೆಳಿಗ್ಗೆ ಎಂಟೂವರೆಗೆ ಎಚ್ಚರವಾಯಿತು. ರಾತ್ರಿ ಮಾಡಿಕೊಂಡ ನೋಟ್ಸ್ ಎಲ್ಲ ಮತ್ತೆ ಮನನ ಮಾಡಿಕೊಂಡೆ. ನನಗೆ ಟೀ ತಂಡುಕೊಡುವ ಹುಡುಗರಿಗೂ ನನ್ನನ್ನು ಆ ಘಳಿಗೆಯಲ್ಲಿ disturb ಮಾಡಕೂಡದು ಅಂತ ಗೊತ್ತಿರುತ್ತದೆ. ನನ್ನ ಪಾಡಿಗಿರಲು ಬಿಟ್ಟುಬಿಡುತ್ತಾರೆ.

ಇಂಥ ಮೌನದ ಘಳಿಗೆಗಳು ಎಲ್ಲರ ಬದುಕಿನಲ್ಲೂ ಪ್ರತಿನಿತ್ಯ ಎದಿರಾಗುತ್ತಿರುತ್ತವೆ. ಪ್ರತೀ ರಾತ್ರಿ ಮಲಗುವ ಮುನ್ನ ಅಂಥದೊಂದು ಮೌನ ನಿಮಗೆ ದಕ್ಕುತ್ತಿರುತ್ತದೆ. ಅದನ್ನು ಟೀವಿಯ ಮುಂದೆ, ಕೆಲಸಕ್ಕೆ ಬಾರದ ಮ್ಯಾಗಝೀನಿನ ಕೈಗೆ, ಟೆಲಿಫೋನಿನ ಕೈಗೆ, ಫಾರ್ವರ್ಡೆಡ್ ಎಸ್ಸೆಮ್ಮೆಸ್ಸುಗಳ ಕೈಗೆ ಕೊಟ್ಟು ಹಾಳು ಮಾಡಿಕೊಂಡು ಬಿಡಬೇಡಿ. ನಿಮಗೊಂದು ಚಿಕ್ಕ ಸತ್ಯವನ್ನು ಹೇಳುತ್ತೇನೆ ಕೇಳಿ : ಅದು ಧ್ಯಾನದ ಸಮಯ!

ಧ್ಯಾನ ಅಂತ ಕೂಡಲೆ ಪದ್ಮಾಸನ ಹಾಕಿಕೊಂಡು ಭಕ್ತ ಪ್ರಹ್ಲಾದನೋ, ಭಕ್ತ ಮಾರ್ಕಂಡೇಯನೋ ಮೈಮೇಲೆ ಬಂದಂತೆ ಕೂತುಕೊಳ್ಳುವುದಲ್ಲ. ರವಿಶಂಕರ್ ಗುರೂಜಿಯೋ, ಮಾತೆ ಮಹಾದೇವಿಯೋ ಹೇಳಿಕೊಡುವು ಮೆಡಿಟೇಷನ್ ಭಂಗಿಯೂ ಅಲ್ಲ. ಅದು ನಿಮ್ಮ ಪಾಡಿಗೆ ನೀವು ಸುಮ್ಮನೆ ಧೇನಿಸುವ ಕಾಲ. ಆ ಕ್ಷಣದಲ್ಲಿ ನೀವು ಬೇರೆ ಯಾರೂ ಆಗಿರುವುದಿಲ್ಲ. ಯಾರದೋ ಅಲ್ಲ, ಯಾರಿಗೋ ಮಗ, ಮತ್ಯಾರಿಗೋ ಗೆಳೆಯ, ಅವರ ಮನೆಯ ಸೊಸೆ, ಇಂಥವರ ಹೆಂಡತಿ, ಸದರಿಯವರಿಗೆ ಅಕ್ಕ- ಉಹುಂ. ಅದ್ಯಾವುದೂ ಆಗಿರುವುದಿಲ್ಲ. ನೀವು ಕೇವಲ ನೀವಾಗಿರುತ್ತೀರಿ. ನೀವು ಒಬ್ಬಂಟಿಯಾಗಿರುತ್ತೀರಿ. ಎಲ್ಲ ಬಂಧನಗಳ ನಡುವೆಯೂ ಮುಕ್ತರಾಗಿರುತ್ತೀರಿ. ಯಾವುದರ ಬಗ್ಗೆ ಬೇಕಾದರೂ ಧೇನಿಸಲಿಕ್ಕೆ, contemplate ಮಾಡಲಿಕ್ಕೆ ಸ್ವತಂತ್ರರಾಗಿರುತ್ತೀರಿ. ಆ ಸಮಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡಿರೋ ನೀವು ಜಾಣರು.

ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದು ಅಂದರೇನು? ನಡೆದುಹೋದ ಘಟನೆಯ ಬಗ್ಗೆ ಯೋಚನೆ ಮಾಡುವುದಾ? ಸಾಲದಂಥ ಸಮಸ್ಯೆಯ ಬಗ್ಗೆ ಚಿಂತಿಸುವುದಾ? ಮಕ್ಕಳ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುವುದಾ? ಭೇಟಿಯಾಗಲಿರೋ ಹುಡುಗಿಯ ಬಗ್ಗೆ ಕನಸು ಕಾಣುವುದಾ? ಸರಿಯಾಗಿ ಹೇಳಿ. ನೀವಾದರೆ ಲೇಖಕರು. ನಿಮಗೆ ಯಾವುದರ ಕುರಿತೋ ಯೋಚಿಸುವ, ಧೇನಿಸುವ, ಚಿಂತನೆ ಮಾಡುವ ಅವಶ್ಯಕತೆ ಇರುತ್ತದೆ. ನಮ್ಮಂಥವರಿಗೆ ಅಂಥದ್ದೇನಿರುತ್ತದೆ ಹೇಳಿ? ಸುಮ್ಮನೆ ಕೂತರೆ ನಿತ್ಯದ ಜಂಜಡಗಳೇ ಮನಸ್ಸಿಗೆ ಅಮರಿಕೊಳ್ಳುತ್ತವೆ. ನಮಗೆ ಧೇನಿಸುವಂಥದ್ದೇನಿರುತ್ತದೆ- ಅಂತ ನೀವು ಕೇಳಬಹುದು.

ಧೇನಿಸಲಿಕ್ಕೆ ಏನಿದೆ ಅಂತ ಕೇಳುವ crowdಗಾಗಿಯೇ ನಮ್ಮ ಋಷಿಮುನಿಗಳು, ಆಚಾರ್ಯ ರಜನೀಶ್ ಅಂಥವರು ಧ್ಯಾನ ಅಥವಾ meditation ಅನ್ನೋದನ್ನ ಒಂದು ritualನಂತೆ ರೂಢಿ ಮಾಡಿಸಿಕೊಟ್ಟರು. ಮನಸ್ಸಿನಲ್ಲಿ ಒಂದು ದೀಪವನ್ನು ಕಲ್ಪಿಸಿಕೊಂಡು ಅದರ ಮೇಲೆಯೇ ನಿಮ್ಮ ಗಮನವನ್ನು ಕೇಂದ್ರೀಕರಿಸಿ ಅಂತ ಹೇಳಿಕೊಟ್ಟರು. ನಮ್ಮ ಅಷ್ಟೂ ಧರ್ಮಗಳು ಮನುಷ್ಯನಿಗೆ ಹೇಳಿಕೊಡಲು ಹೆಣಗಿದುದೇ ಆ ಧ್ಯಾನವನ್ನ, meditationನ್ನ!

ಆದರೆ ನಾವು ಧರ್ಮವನ್ನು ಮೀರಿದವರು. ನನ್ನಂಥವರಿಗೆ ದೀಪದ ಸೊಡರು ಕೂಡ ಇಲ್ಲದೇನೇ ಒಂದು ವಿಷಯದ ಮೇಲೆ ನನ್ನ ಗಮನವನ್ನು ಕೇಂದ್ರೀಕರಿಸಲು ಬರುತ್ತದೆ. ಚದುರಂಗದ ಆಟಗಾರನ ಏಕಾಗ್ರತೆ ನನಗೆ ಸಾಧ್ಯವಾಗುತ್ತದೆ. ಏಕೆಂದರೆ, ನಾನು ಪ್ರತಿನಿತ್ಯ ಸಿಕ್ಕುವ ಆ ಮೌನದ ಘಳಿಗೆಗಳನ್ನು ತೀರ ಸ್ವಾರ್ಥಿಯಂತೆ, ನನ್ನ ಧ್ಯಾನಕ್ಕೆಂದೇ ಬಳಸಿಕೊಳ್ಳುವುದನ್ನು ರೂಢಿ ಮಾಡಿಕೊಂಡಿದ್ದೇನೆ. ಆ ಮೌನದ ಘಳಿಗೆ ನನ್ನ ಪಾಲಿಗೆ best part of the day.

ನನ್ನ ಮಾತು, ಧಾಟಿ ಸರಿಯಾಗಿದೆಯಾ? ನಾನು ಇನ್ನೊಬ್ಬರಿಗೆ sensible ಅನ್ನಿಸುತ್ತಿದ್ದೇನಾ? ನನ್ನ ಸ್ವಾಭಾವದಲ್ಲಿದ್ದ ಆ ಸೂಕ್ಷ್ಮಜ್ಞತೆ- ಅದು ಹಾಗೇ ಉಳಿದಿದೆಯಾ? ದುಡ್ಡು, ವಯಸ್ಸು, ಅಧಿಕಾರ ಇತ್ಯಾದಿಗಳೆಲ್ಲ ಸೇರಿ ನನ್ನ ಆ sensitivityಯನ್ನ ಅಷ್ಟರ ಮಟ್ಟಿಗೆ ಮೊಟಕು ಮಾಡಿವೆಯಾ? ಅರೇ, ನನ್ನ ಒಳ್ಳೆಯತನ ಏನಾಯಿತು? ಯಾಕೆ ಈ ನಡುವೆ ಹೀಗಾಡುತ್ತಿದ್ದೇನೆ? ಜವಾಬ್ದಾರಿಗಳನ್ನೆಲ್ಲ ನಿಷ್ಠೆಯಿಂದ ಮುಗಿಸಿ ಈಚೆಗೆ ಬಂದ ಮೇಲೆ ನಾನು ಬೇಜವಾಬ್ದಾರಿಯ ಮನುಷ್ಯನಾಗಿಬಿಟ್ಟೆನಾ? ಏನಾಗಿದೆ ನನಗೆ? ಅಪ್ಪ-ಅಮ್ಮ-ಗಂಡ-ಮಕ್ಕಳೊಂದಿಗಿನ ನನ್ನ ಸಂಬಂಧ ಬದಲಾಗುತ್ತಿದೆಯಾ? ಮೊದಲಿಗಿಂತ ಹೆಚ್ಚಿನ ಆರ್ದ್ರತೆ ಸ್ಥಾಪಿತವಾಗಿದೆಯಾ?

ಇಂಥ ಪ್ರಶ್ನೆ ಕೇಳಿಕೊಳ್ಳಲಿಕ್ಕೆ ನೀವು ಲೇಖಕರೋ, ಚಿಂತಕರೋ, ಧಾರ್ಮಿಕ ವ್ಯಕ್ತಿಯೋ ಮತ್ತೇನೋ ಆಗಿರಬೇಕಿಲ್ಲ. ನಿಮ್ಮ ಬದುಕಿನ, ನಿಮಗೆ ದಕ್ಕುವ ಸೈಲೆನ್ಸ್ ನ ಉಪಯೋಗಿಸಿಕೊಳ್ಳಲಿಕ್ಕೆ ನಿಮಗೆ ಗೊತ್ತಿರಬೇಕಷ್ಟೆ. ಸ್ವಲ್ಪ ರೇಡಿಯೋ ಆಫ್ ಮಾಡಿ, ಫೋನು ತೆಗೆದಿಡಿ. ಕೋಣೆಯ ಬಾಗಿಲು ಹಾಕಿಕೊಳ್ಳಿ. ನಿಮಗೆ ಇಷ್ಟದ ಭಂಗಿಯಲ್ಲಿ ಕುಳಿತು ನಿಮ್ಮ ಬಗ್ಗೆಯೇ ಯೋಚಿಸಿಕೊಳ್ಳಿ.

ಅದು ನೂರು ಮೆಡಿಟೇಷನ್ನುಗಳಿಗೆ ಸಮ್.

(ಸ್ನೇಹಸೇತು : ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X