ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾತ್ಮ ಗಾಂಧಿಯನ್ನು ಅವರೇಕೆ ಕೊಂದರು? ಭಾಗ 2

By Staff
|
Google Oneindia Kannada News

ಮಹಾತ್ಮ ಗಾಂಧಿಯನ್ನು ಅವರೇಕೆ ಕೊಂದರು? .... ಮುಂದುವರೆದ ಭಾಗ

ಅಲ್ಲಿನ್ನೂ ಮೌಂಟ್ ಬ್ಯಾಟನ್‌ನೊಂದಿಗೆ ಗಾಂಧೀಜಿ ಮಾತನಾಡುತ್ತಿರುವಾಗಲೇ, ಅವರು ಮಾಡುತ್ತಿರುವ ಉಪವಾಸ ಸತ್ಯಾಗ್ರಹ ಹೂಡಿರುವ ಸಂಗತಿ ಸುದ್ದಿಯಾಗಿ ಮಾಧ್ಯಮಗಳ ಮೂಲಕ ಹದಿನಾಲ್ಕು ಭಾಷೆಗಳಲ್ಲಿ ಬಿತ್ತರವಾಗುತ್ತಿತ್ತು. ಆದರೆ ವಿವರಗಳನ್ನು ಟೆಲಿಪ್ರಿಂಟರ್ ಯಂತ್ರದ ಮೇಲೆ, ಪಾಳು ಬಿದ್ದಂತಿದ್ದ ಒಂದು ಪತ್ರಿಕಾ ಕಚೇರಿಯಲ್ಲಿ ಕುಳಿತು ಇಬ್ಬರು ವ್ಯಕ್ತಿಗಳು ಓದುತ್ತಿದ್ದರು ಪುಣೆಯಲ್ಲಿ. ಅದನ್ನು ಓದಿದ ಮರುಗಳಿಗೆಯಲ್ಲೇ ಅವರು ತೀರ್ಮಾನಿಸಿದ್ದರು, ಗಾಂಧಿಯನ್ನು ಕೊಲ್ಲಬೇಕು.

* ರವಿ ಬೆಳಗೆರೆ

ಅವರಿಬ್ಬರ ಹೆಸರು ನಾಥೂರಾಮ ಗೋಡ್ಸೆ ಮತ್ತು ನಾರಾಯಣ ಆಪ್ಟೆ. ಅವರು ಮಾರಾಠಿ ದಿನಪತ್ರಿಕೆಯಾದ ಹಿಂದೂರಾಷ್ಟ್ರದ ಸಂಪಾದಕ ಮತ್ತು ವ್ಯವಸ್ಥಾಪಕ ಹುದ್ದೆಗಳಲ್ಲಿದ್ದವರು. ಇಬ್ಬರ ಪೈಕಿ ಯಾರು ಮೊದಲು ಮಹಾತ್ಮ ಗಾಂಧಿಯನ್ನು ಕೊಲ್ಲಬೇಕು ಎಂದು ತೀರ್ಮಾನಿಸಿದರೆಂಬುದು ಗೊತ್ತಿಲ್ಲ. ಏಕೆಂದರೆ ಕಟ್ಟಕಡೆ ನಿಮಿಷದ ತನಕ ನಾಥೂರಾಮ ಗೋಡ್ಸೆಯೊಬ್ಬನೇ ಕಾರಣ ಎಂದು ವಾದಿಸಲಾಯಿತು. ಬಹುಶಃ ಇಬ್ಬರೂ ಏಕಕಾಲದಲ್ಲಿ ಹಾಗೆ ತೀರ್ಮಾನಿಸಿದ್ದರೆ ಅತಿಶಯೋಕ್ತಿಯಲ್ಲ ಜೊತೆಗೆ ಕೆಲಸ ಮಾಡಿದ ನಾಲ್ಕೂವರೆ ವರ್ಷಗಳಲ್ಲಿ ಎಷ್ಟೋ ಸಲ ಹಾಗೆನ್ನಿಸಿದ್ದಿದೆ. ನಾನು ಮತ್ತು ನಾಥೂರಾಮ ಒಂದೇ ವಿಷಯವನ್ನು ಒಂದೇ ಸಲಕ್ಕೆ ಒಂದೇ ರೀತಿಯಲ್ಲಿ ಯೋಚಿಸುತ್ತೇವೆ. ಎಲ್ಲಿಗೋ ಹೋಗಿರುತ್ತದ್ದ ನಾಥೂರಾಮ ಅಲ್ಲಿಂದಲೇ ಒಂದು ಅಗ್ರ ಲೇಖನ ಬರೆದು ಕಳಿಸಿದರೆ, ಅದೇ ವಿಷಯದ ಬಗ್ಗೆ ಅದೇ ದಾಟಿಯಲ್ಲಿ ನಾನಾಗಲೇ ಇಲ್ಲಿ ಬರೆದಿರುತ್ತಿದ್ದೆ, ನಮ್ಮ ಗುರಿ ಒಂದೇ ಆಗಿತ್ತಾದ್ದರಿಂದ ನಾವು ಎರಡು ದೇಹ. ಒಂದು ಮನಸ್ಸು ಎಂಬಂತಿದ್ದೆವು ಎಂಬ ಮಾತನ್ನು ನೇಣು ಹಾಕಲಿಕ್ಕೆ ಕೆಲವೇ ದಿನಗಳಿಗೆ ಮುಂಚೆ ಗೋಪಾಲ ಗೋಡ್ಸೆಗೆ ನಾರಾಯಣ ಆಪ್ಟೆ ಹೇಳಿದ್ದನಂತೆ.

ಅವರಿದ್ದ ಏಕೈಕ ಗುರಿಯೆಂದರೆ ಹಿಂದೂ ಸಂಘಟನ್, ಹಿಂದೂಗಳೆಲ್ಲ ಒಗ್ಗೂಡಬೇಕು, ಪುನಶ್ಚೇತನಗೊಳ್ಳಬೇಕು. ಅವರು ಒಟ್ಟಾಗಿ ಎದ್ದು ರಾಜಕೀಯ ಹಕ್ಕುಗಳಿಗೆ ಬಡಿದಾಡಬೇಕು. ಈ ಮುಂಚಿನಂತೆ ಮುಸ್ಲಿಂರಿಗೆ ತಲೆಬಾಗಬಾರದು ಎಂಬ ಉದ್ದೇಶಗಳು ಅವರಿಗಿದ್ದವು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಹಿಂದೂ ಸಂಘಟನೆಗಿದ್ದ ಅತಿದೊಡ್ಡ ಗುರಿಯೆಂದರೆ ಭಾರತ ದೇಶ ಇಬ್ಬಾಗವಾಗದಂತೆ ತಡೆಯುವುದು. ಆದರೆ ಈ ವಿಷಯದಲ್ಲಿ ಅವರಾಗಲೇ ಸೋಲೊಪ್ಪಿಕೊಂಡಾಗಿತ್ತು. ಭಾರತ ಇಬ್ಭಾಗವಾಗಿತ್ತು. ಅದನ್ನು ಮತ್ತೆ ಒಗ್ಗ್ಗೂಡಿಸುವುದು ಶತಾಯಗತಾಯ ಸಾಧ್ಯವಿರಲಿಲ್ಲ. ಅವರು ಕ್ರುದ್ಧರಾಗಿದ್ದರು, ಮನಸ್ಸು ಕಹಿಯಾಗಿತ್ತು. ನಿಸ್ಸಹಾಯಕ ಸ್ಥಿತಿಯಲ್ಲಿ ಏನು ಬೇಕಾದರೂ ಮಾಡಲು ಅವರು ಸಿದ್ಧರಾಗಿದ್ದರು. ಬ್ರಿಟಿಷರು ವ್ಯವಸ್ಥಿತವಾಗಿ ಮೋಸ ಮಾಡಿದ್ದರೆ, ಕಾಂಗ್ರೆಸ್ ಇಡೀ ದೇಶವನ್ನು ವಂಚಿಸಿತ್ತು. ಅವರ ದೃಷ್ಟಿಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು, ಅದೊಂದು ಅಪಹಾಸ್ಯ, ಅಣಕು, ಅವಮಾನ, ಸ್ವಾತಂತ್ರ್ಯ ತಂದುಕೊಳ್ಳುವ ಭರದಲ್ಲಿ ಭಾರತ ಮಾತೆಯ ದೇಹದ ಒಂದು ಭಾಗವನ್ನು ಕಳೆದುಕೊಂಡಿರಲಿಲ್ಲವೇ? ಅವರು ಅಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವವನ್ನು ಶೋಕಾಚರಣೆ ದಿನವನ್ನಾಗಿ ಆಚರಿಸುತ್ತಿದ್ದರು. ವಾರಗಟ್ಟಲೇ, ತಿಂಗಳುಗಟ್ಟಲೇ ಅವರು, ಅವರ ಸಂಗಾತಿಗಳು ಕೂತುಕೊಂಡು ನಿರಂತರವಾಗಿ ತಲೆಕೆಡಿಸಿಕೊಂಡಿದ್ದರು.

ಇಡೀ ದೇಶವನ್ನು ಒಂದೇ ಸಲಕ್ಕೆ ನಡುಗಿಸಿಬಿಡುವಂತಹದೇನನ್ನಾದರೂ ಮಾಡಲು ಅವರು ಚಡಪಡಿಸುತ್ತಿದ್ದರು. ಒಬ್ಬಬ್ಬರಿಗೂ ಒಂದೊಂದು ವಿಚಾರ ಬರುತ್ತಿತ್ತು. ಪಾಕಿಸ್ತಾನಕ್ಕೆ ಹೊರಡುತ್ತಿದ್ದ ಮದ್ದುಗುಂಡಿನ ದಾಸ್ತಾನಿನ ರೈಲನ್ನೇ ಉಡಾಯಿಸಿ ಬಿಡೋಣ, ಮಹಮ್ಮದ್ ಅಲಿ ಜಿನ್ನಾನನ್ನು ಆತನ ವಿಧಾನ ಮಂಡಲದ ಸದಸ್ಯರ ಸಮೇತ ಕೊಂದು ಬಿಡೋಣ, ಸೇತುವೆಗಳನ್ನು ಉಡಾಯಿಸೋಣ, ಆ ತನಕ ಭಾರತದಿಂದ ಹೊರಗೆ ಉಳಿದಿದ್ದ ಹೈದರಾಬಾದ್ ಸಂಸ್ಥಾನದ ಮೇಲೆ ಕಮಾಂಡೋ ತರಹದ ದಾಳಿ ಮಾಡೋಣ ಹೀಗೆ ಕೇವಲ ವಿಚಾರ ಮಾಡುವುದಷ್ಟೆ ಅಲ್ಲ. ಸಾಕಷ್ಟು ಕಷ್ಟ ಪಟ್ಟು ಆಪತ್ತುಗಳನ್ನೆದುರಿಸಿ ಈ ಕೆಲಸಕ್ಕೆ ಬೇಕಾಗುವ ಮದ್ದು ಗುಂಡು, ಬಂದೂಕು ಸ್ಫೋಟಕಗಳನ್ನು ಅವರಾಗಲೇ ಸಂಗ್ರಹಿಸಿಯೂ ಇದ್ದರು.

ಈಗ ಇದ್ದಕ್ಕಿದ್ದಂತೆ ಅವರಿಗೆ ತಮ್ಮ ಗುರಿಯೇನೆಂಬುದು ಮಿಂಚು ಹೊಳೆದಂತೆ ಹೊಳೆದಿತ್ತು. ಭಾರತದ ತಂದೆ ಎಂದು ಹೇಳಿಕೊಳ್ಳುವ ಮನುಷ್ಯನನ್ನು ಕೊಂದು ಹಾಕುವುದು ನನ್ನ ಕರ್ತವ್ಯ ಎಂದು ನಾನು ಭಾವಿಸಿದ್ದೆ ಎಂಬುದಾಗಿ ಹೆಮ್ಮೆ ಹೇಳಿಕೊಂಡಿದ್ದ ನಾಥೂರಾಮ ಗೋಡ್ಸೆ . ಹಾಗೆ ಆತ ತನ್ನ ಕರ್ತವ್ಯವನ್ನು ನಿಭಾಯಿಸಿ ಇತಿಹಾಸದಲ್ಲಿ ಒಂದು ಜಿಗುಪ್ಸಾಕಾರಕ ಅಮರತ್ವವನ್ನು ಪಡೆದುಕೊಂಡ.

ನಾಥೂರಾಮ ಗೋಡ್ಸೆ ಮಡಿವಂತ ಬ್ರಾಹ್ಮಣರ ಮನೆತನದಿಂದ ಬಂದವನು. ಆತನ ಹಳ್ಳಿ ಉಕ್ಸನ್ ಎಂಬುದು ಬಾಂಬೆ-ಪೂನಾ ರಸ್ತೆಯಲ್ಲಿರುವ ಕಮ್ ಷೆಟ್ ರೈಲು ನಿಲ್ದಾಣದಿಂದ ಸುಮಾರು ಹತ್ತು ಮೈಲಿ ದೂರದಲ್ಲಿದೆ. ಆತನ ತಂದೆ ವಿನಾಯಕ ಗೋಡ್ಸೆ ಅಂಚೆ ಇಲಾಖೆಯಲ್ಲಿ ಚಿಕ್ಕ ದರ್ಜೆಯ ನೌಕರ. ಆತ 1892 ರಲ್ಲಿ ಮದುವೆಯಾದಾಗ ಆತನಿಗೆ ಹದಿನೇಳು ವರ್ಷ ವಯಸ್ಸು. ಹುಡುಗಿಗೆ ಹತ್ತು ಅವರಿಬ್ಬರಿಗೂ ಮೊದಲು ಹುಟ್ಟಿದ್ದು ಮಗ. ಅಮೇಲೆ ಮಗಳು, ಮೊದಲ ಮಗ ಎರಡು ವರ್ಷ ತುಂಬುವ ಮೊದಲೇ ತೀರಿಕೊಂಡಿತು. ಆದಾದ ಮೇಲೆ ಎರಡು ಗಂಡು ಮಕ್ಕಳು ಹುಟ್ಟಿದವಾದರೂ, ಎರಡು ದಕ್ಕಲಿಲ್ಲ. ಆವತ್ತಿನ ದಿನಮಾನದಲ್ಲಿ ಅದೊಂದು ಶಾಪ. ಹುಟ್ಟಿದ ಮೊರು ಗಂಡು ಮಕ್ಕಳು ತೀರಿಕೊಂಡು ಬರೀ ಹೆಣ್ಣು ಮಗುವೂಂದೇ ಉಳಿದುಕೊಂಡಿತು.ಗಂಡು ಸಂತಾನಕ್ಕೆ ಶಾಪವಿದೆಯೆಂದೇ ಅರ್ಥ. ಅದಕ್ಕಿದ್ದ ಒಂದೇ ಪರಿಹಾರವೆಂದರೆ, ಮುಂದೆ ಹುಟ್ಟಲಿರುವ ಗಂಡುಮಗುವನ್ನು ಹೆಣ್ಣು ಮಗುವಿನಂತೆ ಬೆಳಸುತ್ತೇವೆಂದು ಬೇಡಿಕೊಳ್ಳವುದು. ಹಾಗೆಂದುಕೊಂಡೆ ವಿನಾಯಕ ಗೋಡ್ಸೆ ಮತ್ತು ಆತನ ಹೆಂಡತಿ ಹರಕೆ ಹೊತ್ತರು. ಮುಂದಿನ ಮಗು ಗಂಡಾದರೆ, ಅದನ್ನು ಹೆಣ್ಣು ಮಗುವಿನಂತೆ ಸಾಕುವುದಾಗಿ ಹೇಳಿಕೊಂಡರು. ಮಗುವಿನ ಮೂಗಿನ ಎಡಗಡೆಯ ಹೊಳ್ಳೆಯನ್ನು ನಥ್(ನತ್ತು)ಗಾಗಿ ಚುಚ್ಚಿಸುವುದಾಗಿಯೂ ಹರಕೆ ಹೊತ್ತರು.

ಅಂದುಕೊಂಡಂತೆ ಮುಂದಿನ ಮಗು ಗಂಡೇ ಆಯಿತು. ಮೇ.19, 1910 ರಲ್ಲಿ ಹುಟ್ಟಿದ ಮಗುವಿಗೆ ಮೊದಲು ರಾಮಚಂದ್ರ ಎಂದು ಹೆಸರಿಟ್ಟರು. ಆದರೆ ಮೂಗು ಚುಚ್ಚಿಸಿದ್ದುದರಿಂದ ಹುಡುಗ ನಾಥೂರಾಮ ಎಂದು ಕರೆಸಿಕೊಂಡ. ನಾಥೂರಾಮನಾಗಿ ಬೆಳದ . ಅಲ್ಲಿಗೆ ಶಾಪ ವಿಮೋಚನೆಯಾದಂತಾಗಿತ್ತು. ದಷ್ಟಪುಷ್ಟ ಮಗುವಾಗಿ ಬೆಳೆದ ನಾಥೂರಾಮನ ಹಿಂದೆ ಮತ್ತೂ ಮೂವರು ಗಂಡು ಮಕ್ಕಳಾದರು. ಅವರೆಲ್ಲರೂ ಬದುಕುಳಿದರು. ಆ ಪೈಕಿ 1920ರಲ್ಲಿ ಹುಟ್ಟಿದ ಗೋಪಾಲ ಗೋಡ್ಸೆ ಕೂಡಾ ಗಾಂಧಿ ಹತ್ಯೆಯಲ್ಲಿ ಆಪಾದಿತನಾಗಿ ಕಾಣಿಸಿಕೊಂಡ. ನಾಥೂರಾಮನ ಮಾನಸಿಕ ಒಲವುಗಳಿಗೆ ಆತನನ್ನು ಚಿಕ್ಕಂದಿನಲ್ಲಿ ಹೆಣ್ಣು ಮಗುವಿನಂತೆ ಬೆಳೆಸಿದುದು ಕಾರಣವಾಗಿತ್ತೇ ? ಮಾನಸಿಕ ಶಾಸ್ತ್ರಜ್ಞರು ಉತ್ತರ ಹುಡುಕಬೇಕು.

ನಾಲ್ಕು ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು ಇದ್ದ ಕುಟುಂಬ ದೊಡ್ಡದಿತ್ತು. ಮನೆಯಲ್ಲಿ ಬಡತನವಿತ್ತು. ತಂದೆಗೆ ಬಾಂಬೆ ಪ್ರಸಿಡೆನ್ಸಿಯ ಉದ್ದಗಲಕ್ಕೂ ಚಿಕ್ಕಪುಟ್ಟ ಮತ್ತು ದೂರಾಭಾರದ ಊರುಗಳಿಗೆ ವರ್ಗಾ ಆಗುತ್ತಿತ್ತು. ಮರಾಠಿ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ ನಾಥೂರಾಮ ಮೆಟ್ರಿಕ್ಯುಲೇಷನ್ ಪರೀಕ್ಷೆಗಾಗಿ ಪುಣೆಗೆ ಓದಲು ಕಳಿಸಲಾಯಿತು. ನಾಥೂರಾಮ ಚಿಕ್ಕವನಿದ್ದಾಗ ಕೆಲವು ನಿಗೂಢವಾದ ಶಕ್ತಿಗಳಿವೆ ಎಂಬುದಾಗಿ ಅವನ ತಂದೆ-ತಾಯಿ ಮತ್ತು ಸಹೋದರರು ಭಾವಿಸಿದ್ದರು. ಅವನು ಕೆಲವೂಮ್ಮೆ ಮನೆತನದ ದೇವತೆಯ ವಿಗ್ರಹದ ಮುಂದೆ ಪದ್ಮಾಸನ ಹಾಕಿಕೊಂಡು ಕೂಡುತ್ತಿದ್ದ. ಎದುರಿಗಿರುತ್ತಿದ್ದ ತಾಮ್ರದ ತಟ್ಟೆಯ ಮಧ್ಯೆ ಭಾಗಕ್ಕೆ ಹಚ್ಚಿರುತ್ತಿದ್ದ ವಿಭೂತಿಯನ್ನೇ ಏಕಾಗ್ರತೆಯಿಂದ ದಿಟ್ಟಿಸುತ್ತಿದ್ದವನು ನೋಡುನೋಡುತ್ತಿದ್ದಂತೆಯೇ ಟ್ರಾನ್ಸ್ ಗೆ ಒಳಗಾಗಿ ಬಿಡುತ್ತಿದ್ದ. ಹಾಗೆ ಸಮಾಧಿ ಸ್ಥಿತಿಯಲ್ಲಿದ್ದಾಗ ನಾಥೂರಾಮನಿಗೆ ಯಾವುದೋ ಆಕೃತಿಗಳು ಕಾಣುತ್ತಿದ್ದವು.ಎಂಥದೋ ಬರಹ ಗೋಚರಿಸುತ್ತಿತ್ತು. ಆ ಮನೆಯವರು ಯಾರಾದರೂ ಅವನನ್ನು ಪ್ರಶ್ನೆ ಕೇಳುತ್ತಿದ್ದರು. ಅವನ ಮೂಲಕ ದೇವತೆ ಉತ್ತರಿಸುತ್ತಾಳೆಂದು ಭಾವಿಸಲಾಗುತ್ತಿತ್ತು.

ಅವನು ಕಂಠಪಾಠ ಮಾಡದಿದ್ದ ಸಂಸ್ಕೃತ ಮಂತ್ರಗಳನ್ನ, ಶ್ಲೋಕಗಳನ್ನ ಆ ಸಮಾಧಿ ಸ್ಥಿತಿಯಲ್ಲಿ ಓತಪ್ರೋತವಾಗಿ ಹೇಳುತ್ತಿದ್ದ . ಆದರೆ ಸಮಾಧಿ ಸ್ಥಿತಿ ಮುಗಿದ ಮೇಲೆ ಅವನಿಗೆ ಅದ್ಯಾವುದೂ ನೆನಪಿಗೆ ಬರುತ್ತಿರಲಿಲ್ಲ ಎಂಬುದಾಗಿ ನಾಥೂರಾಮನ ತಮ್ಮ ಗೋಪಾಲ ಗೋಡ್ಸೆ ಬರೆಯುತ್ತಾರೆ. ನಾಥೂರಾಮ ಹಾಗೆ ಸಮಾಧಿ ಸ್ಥಿತಿ ಹೋಗುವುದನ್ನು ನಾವು ಅನೇಕ ಸಲ ನೋಡಿರುವುದಾಗಿ ಬರೆಯುತ್ತಾರೆ. ತನ್ನ ಹದಿನಾರನೆಯ ವಯಸ್ಸಿನ ತನಕ ನಾಥೂರಾಮ ಹೀಗೆ ಕುಲದೇವತೆಗೂ, ಮನೆಯ ಸದಸ್ಯರಿಗೂ ಮಧ್ಯೆ ಮಾಧ್ಯಮವಾಗಿದ್ದ. ಆನಂತರ ಅವನಲ್ಲಿ ಭಕ್ತಿ ಕೊಂಚ ಕುಂದಿದಂತಾಗಿ ಹೆಚ್ಚು ಹೆಚ್ಚು ಪ್ರಾಪಂಚಿಕನಾದ. ಇದರಿಂದಾಗಿ ಅವನ ಏಕಾಗ್ರತೆಯ ಶಕ್ತಿ ಕುಂದಿದ್ದಿರಬೇಕು ಎಂದು ಗೋಪಾಲ ಗೋಡ್ಸೆ ಬರೆಯುತ್ತಾರೆ.

ಉಳಿದಂತೆ ನಾಥೂರಾಮನ ಇತರ ಆಸಕ್ತಿಗಳೂ ಇದ್ದವು. ಬಾಲ್ಯದಲ್ಲಿ ಹೆಣ್ಣು ಮಗುವಿನಂತೆ ಬೆಳೆಸಿದ್ದು ಹೌದಾದರೂ ಬೆಳೆಯುತ್ತ ಬೆಳೆಯುತ್ತ ಶಕ್ತಿಶಾಲಿ, ದೃಢಯುವಕನಾದ ನಾಥೂರಾಮ ಅಂಗ ಸಾಧನೆಯಲ್ಲಿ ಅಪಾರವಾದ ಆಸಕ್ತಿ ಹೊಂದಿದ್ದ. ತನ್ನ ಈಜುವ ತಾಕತ್ತಿನ ಬಗ್ಗೆ ಅವನಿಗೆ ಹೆಮ್ಮೆಯಿತ್ತು. ನೆರೆಹೊರೆಯವರಿಗೆ ತುಂಬ ಸಹಾಯಕನಾಗಿರುತ್ತಿದ್ದ. ಬಾವಿಗೆ ಕೊಡಬಿತ್ತೆಂದರೆ ತಗೆಯಲಿಕ್ಕೆ ಅವನನ್ನೇ ಕರೆಯುತ್ತಿದ್ದರು. ಖಾಯಿಲೆಯಾದವರನ್ನು ಒಯ್ಯಲು ನಾಥೂರಾಮನೇ ಬೇಕು. ಗುಡಿಯಲ್ಲಿ ಉತ್ಸವಗಳಾದರೆ ಅವನಿಗೇ ಕರೆ ಬರುತ್ತಿತ್ತು. ತನಗಿಂತ ಬಡವರ ಮನೆಗಳ ಮದುವೆಗಳಿಗೆ ನಾಥೂರಾಮ ಸದಿಚ್ಛೆಯಿಂದ ಓಡಾಡುತ್ತಿದ್ದ. ಲೋನಾವಾಲದಲ್ಲಿದ್ದಾಗ ಅಸ್ಪೃಶ್ಯ ಮಗುವೊಂದು ಬಾವಿಗೆ ಬಿದ್ದರೆ ಅದನ್ನು ನಾಥೂರಾಮ ಹೊರತಗೆದು ರಕ್ಷಿಸಿದ್ದ. ಆದರೆ ಅಸ್ಪೃಶ್ಯರ ಮಗುವನ್ನು ಮುಟ್ಟಿ ಆ ನಂತರ ಶುದ್ಧಿ ಸ್ನಾನ ಮಾಡದೆ ಮನೆಯೊಳಕ್ಕೆ ಬಂದುದಕ್ಕಾಗಿ ತಂದೆತಾಯಿಯರಿಂದ ಬೈಸಿಕೊಂಡಿದ್ದ. ಆ ದಿನಮಾನದಲ್ಲಿ ಬ್ರಾಹ್ಮಣ ಕುಟುಂಬಗಳಲ್ಲಿ ಇಂಥ ಕಟ್ಟಳೆಗಳೆಲ್ಲ ಇದ್ದುವಾದರೂ ನಾಥೂರಾಮ ಅವಕ್ಕೆ ಕಿಮ್ಮತ್ತು ಕೊಡುತ್ತಿರಲಿಲ್ಲ. ಮುಂದಿನ ದಿನಗಳಲ್ಲಿ ಅವನು ಅಸ್ಪೃಶ್ಯತೆಯ ಪ್ರಬಲ ವಿರೋಧಿಯಾಗಿ ಬೆಳೆದಿದ್ದು ಅವನ ತಂದೆ ತಾಯಿಯರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು.

ಆತನಿಗೆ ಆಸಕ್ತಿ ಇದ್ದದ್ದು ಮರಾಠಿ ಭಾಷೆಯಲ್ಲಿ ಲಭ್ಯವಿದ್ದಂತಹ ಪುರಾಣ, ಧರ್ಮಶಾಸ್ತ್ರ ಮತ್ತು ಇತಿಹಾಸದಲ್ಲಿ. ಅವುಗಳನ್ನೇ ಗೋಡ್ಸೆ ವಿಸ್ತಾರವಾಗಿ ಓದಿಕೊಂಡಿದ್ದ. ಇಂಗ್ಲೀಷು ಆತನಿಗೆ ಕ್ಲಿಷ್ಟವಿತ್ತು. ಶಾಲೆಯ ಓದಿನಲ್ಲೂ ನಾಥೂರಾಮನಿಗೆ ಅಂಥ ಆಸಕ್ತಿಯಿರಲಿಲ್ಲ. ಹೀಗಾಗಿ ಮೆಟ್ರಿಕ್ಯುಲೇಷನ್ ನಲ್ಲಿ ನಾಥೂರಾಮ ಅನುತ್ತೀರ್ಣನಾದ.

ಆ ದಿನಗಳಲ್ಲಿ ಸರ್ಕಾರಿ ಕಚೇರಿಯಲ್ಲಿ ಅತಿ ಚಿಕ್ಕ ಕೆಲಸ ಸಿಗಬೇಕೆಂದರೂ ಮೆಟ್ರಿಕ್ ಪಾಸಾಗುವುದು ಅವಶ್ಯವಿತ್ತು. ನಾಥೂರಾಮನ ತಂದೆ ವಿನಾಯಕ ಗೋಡ್ಸೆ ಆಗಲೇ ನಿವೃತ್ತಿ ಹಂತಕ್ಕೆ ತಲುಪಿದ್ದರು. ತಮ್ಮದೇ ಇಲಾಖೆಯ ಯಾವುದಾದರೂ ಹುದ್ದೆಗೆ ಅವನನ್ನು ಸೇರಿಸುವ ಇರಾದೆ ಅವರದಾಗಿತ್ತು. ಮತ್ತೊಮ್ಮೆ ಪರೀಕ್ಷೆ ಬರೆಯುವಂತೆ ಅವರು ಒತ್ತಾಯಿಸಿದರು. ಆದರೆ ನಾಥೂರಾಮ ಗಾಂಧೀಜಿಯ ಅಸಹಕಾರ ಚಳುವಳಿ ಪ್ರಭಾವಕ್ಕೆ ಒಳಗಾಗಿದ್ದು, ಸರ್ಕಾರಿ ನೌಕರಿಯೆಂದರೆ ಅಸಹನೆಯಿಂದ ಸಿಡುಕುತ್ತಿದ್ದ. ಶಾಲೆ ಮತ್ತು ಓದು ಎರಡು ಸಾಕಾಗಿದ್ದವು. ಅವನಲ್ಲಿ ದುಡಿಯುವ ತುಡಿತ ಆರಂಭವಾಗಿತ್ತು. ಹೀಗಾಗಿ ಪುಣೆಯಿಂದ ಹೊರಬಿದ್ದು ತನ್ನ ತಂದೆ ಆಗ ಕೆಲಸದಲ್ಲಿದ್ದ ಕಜರಟ್ ಎಂಬಲ್ಲಿಗೆ ಬಂದ. ಅಲ್ಲಿ ಸುಮಾರು ಎರಡು ವರ್ಷ ಬಡಗಿ ಕೆಲಸ ಕಲಿಯುವ ಪ್ರಯತ್ನ ಮಾಡಿದನಾದರೂ, ಅಷ್ಟರಲ್ಲಿ ಅವನ ತಂದೆಗೆ ವರ್ಗಾ ಆದ್ದರಿಂದ ಇಡೀ ಕುಟುಂಬ ಊರು ಬಿಡಬೇಕಾಯಿತು.

ಅದು ಇಸವಿ 1929. ನಾಥೂರಾಮನಿಗೆ ಆಗ ಹತ್ತೊಂಬತ್ತು ವರ್ಷ. ಅವನ ತಂದೆಗೆ ಪಶ್ಚಿಮ ಕರಾವಳಿಯ ಪುಟ್ಟ ಪಟ್ಟಣವಾದ ರತ್ನಗಿರಿಗೆ ವರ್ಗಾ ಆಗಿತ್ತು. ಬರ್ಮಾದ ದೊರೆ ಥಿಬಾವ್ ನನ್ನು ಬ್ರಿಟೀಷರು ಅಲ್ಲಿಂದ ತಂದು, ಇಲ್ಲಿಟ್ಟಿದ್ದರು ಎಂಬುದನ್ನು ಬಿಟ್ಟರೆ ರತ್ನಗಿರಿಗೆ ಯಾವ ಐತಿಹಾಸಿಕ ಪ್ರಾಮುಖ್ಯತೆಯೂ ಇರಲಿಲ್ಲ. ಬರ್ಮಾದ ದೊರೆಯೂ ಸತ್ತು ಹೋಗಿ ಹದಿಮೂರು ವರ್ಷಗಳಾಗಿದ್ದವು. ಊರು ಎಲ್ಲ ದೃಷ್ಟಿಯಿಂದಲೂ ಹಿಂದುಳಿದು ಸಣ್ಣ ಗಾತ್ರದ ಪಿಂಚಣಿದಾರರಿಗೆ ಹೇಳಿ ಮಾಡಿಸಿದಂತಿತ್ತು. ಆದರೆ ನಾಥೂರಾಮ ಮಾತ್ರ ರತ್ನಗಿರಿಗೆ ಸಂತೋಷದಿಂದ ಹೋದ. ಏಕೆಂದರೆ ರತ್ನಗಿರಿಯಲ್ಲೀಗ ಮತ್ತೊಬ್ಬ ರಾಜಕೀಯ ಖೈದಿಯನ್ನು ಇಡಲಾಗಿತ್ತು. ಅವರನ್ನು ಅಂಡಮಾನ್ ಸೆರೆಮನೆಯಿಂದ ವಾಪಸ್ಸು ಕರೆತಂದು, ಉಳಿದ ಐವತ್ತು ವರ್ಷ ಅವಧಿಯ ಕಾರಾಗೃಹ ಶಿಕ್ಷೆ ಕಳೆಯಲು ರತ್ನಗಿರಿಯ ಬಂಗಲೆಯೊಂದರಲ್ಲಿ ಇಡಲಾಗಿತ್ತು. ಅವರಿಗೆ ರತ್ನಗಿರಿ ಜಿಲ್ಲೆಯ ಸರಹದ್ದಿನಲ್ಲಿ ಓಡಾಡಿಕೊಂಡಿರಲು ಅನುಮತಿ ನೀಡಿದ್ದು, ಯಾವುದೇ ತರಹದ ರಾಜಕೀಯ ಚಟುವಟಿಕೆಗಳಲ್ಲಿ ಅವರು ತೊಡಗುವಂತಿರಲಿಲ್ಲ. ಆದರೆ ಅವರನ್ನು ಯಾರು ಬೇಕಾದರೂ ಭೇಟಿಯಾಗಬಹುದಿತ್ತು. ಆ ರಾಜಕೀಯ ಖೈದಿಯ ಹೆಸರು ವಿನಾಯಕ ದಾಮೋದರ ಸಾವರ್ಕರ್.

(ಸ್ನೇಹಸೇತು: ಹಾಯ್ ಬೆಂಗಳೂರು)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X