ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾರಾಯಣಮೂರ್ತಿ ಎಲೆಕ್ಷನ್ನಿಗೆ ನಿಲ್ಲಬೇಕಾ? ರಾಷ್ಟ್ರಪತಿಯಾಗಬೇಕಾ?

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಮೊನ್ನೆ ರಾಜಕಾರಣಿಯಾಬ್ಬರೊಂದಿಗೆ ಮಾತನಾಡುತ್ತಿರುವಾಗ, ಅವರ ಬಾಯಲ್ಲೇ ಈ ಮಾತು ಬಂತು :

‘ಇನ್ಫೋಸಿಸ್‌ನ ನಾರಾಯಣಮೂರ್ತಿಯವರಿಗೆ ಪೊಲಿಟಿಕಲ್‌ ಡಿಸೈರ್‌ ತುಂಬಾ ಇದೆ. ಅಬ್ದುಲ್‌ ಕಲಾಮ್‌ ಥರದ ವಿಜ್ಞಾನಿ ಭಾರತದ ರಾಷ್ಟ್ರಪತಿಯಾದರು. ಇನ್ಫೋಸಿಸ್‌ನಂಥ ಸಂಸ್ಥೆ ಕಟ್ಟಿದ ತಾವು ಯಾಕೆ ರಾಷ್ಟ್ರಪತಿಯಾಗಬಾರದು? ಅದು ನಾರಾಯಣಮೂರ್ತಿಯವರ ಆಸೆ. ಅವರ ಪತ್ನಿ ಸುಧಾಮೂರ್ತಿಯವರದು, ಹೇಗಾದರೂ ಮಾಡಿ ಎಂ.ಪಿ.ಆಗಬೇಕು. ಆಮೇಲೆ ದೇಶದ ಇನ್ಫರ್ಮೇಷನ್‌ ಟೆಕ್ನಾಲಜಿ ಖಾತೆಯ ಸಚಿವೆಯಾಗಬೇಕು ಅನ್ನೋ ಆಸೆ. ಇಬ್ಬರವೂ ಒಂಥರಾ hidden agendaಗಳೇ. ಹೀಗಾಗಿ ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ಪತ್ರಿಕೆಗಳಲ್ಲಿ ತಮ್ಮ ಬಗ್ಗೆ ಸುದ್ದಿಯಾಗೋ ಹಾಗೆ ನೋಡಿಕೊಳ್ತಾರೆ’ ಅಂದರು ಆತ.

ನಾರಾಯಣಮೂರ್ತಿ ಮತ್ತು ಸುಧಾ ದಂಪತಿಗಳಿಗೆ ವಿಪರೀತವಾದ ಪ್ರಚಾರದ ಗೀಳಿದೆ. ಅದು ನನಗೆ ಗೊತ್ತು. ಅವರು ತಮ್ಮ ಸುತ್ತ ವ್ಯವಸ್ಥಿತ ಪ್ರೆಸ್‌ ಸೆಕ್ರೆಟರಿಗಳನ್ನಿಟ್ಟುಕೊಂಡಿದ್ದಾರೆ. ಪತ್ರಕರ್ತರನ್ನು ಸಾಕಿಕೊಂಡಿದ್ದಾರೆ. ತಮ್ಮ ದಾನಧರ್ಮಾದಿಗಳನ್ನು ಕೂಡ ಕ್ರಮಬದ್ಧವಾದ ಪಬ್ಲಿಸಿಟಿ ಸಿಗೋ ರೀತಿಯಲ್ಲೇ ಮಾಡುತ್ತಾರೆ. ಮೊನ್ನಿನ ಘಟನೆಯನ್ನೇ ತೆಗೆದುಕೊಳ್ಳಿ.

ಕೇರಳದ ಡ್ರೆೃವರ್‌ ಕುಟ್ಟಿ ಎಂಬಾತನನ್ನು ಇರಾಕ್‌ನ ಉಗ್ರರು ಕತ್ತು ಕುಯ್ದು ಕೊಂದು ಹಾಕಿದರು. ತಕ್ಷಣ ಇನ್ಫೋಸಿಸ್‌ ಆ ಡ್ರೆೃವರನ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ನೆರವು ಘೋಷಿಸಿತು. ಆದರೆ, ಕೆಜಿಎಫ್‌ನ ಹುಡುಗ, ಮಂಜುನಾಥನ್‌ ಎಂಬ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಉದ್ಯೋಗಿ ಕನ್ನಡಿಗನನ್ನು ಲಖಿಂಪುರದಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ‘ಸಾಲಮಾಡಿ ಇಂಜಿನೀರಿಂಗ್‌ ಮತ್ತು ಎಂ.ಬಿ.ಎ ಮಾಡಿದ್ದ ಮಂಜುನಾಥ್‌ನ ಸಾಲವನ್ನಾದರೂ ಮನ್ನಾ ಮಾಡಿ’ ಅಂತ ಆತನ ತಂದೆ-ತಾಯಿ ಗೋಗರೆದರು. ಇನ್ಫೋಸಿಸ್‌ನ ಹಿರಿಯ ದಂಪತಿಗಳು ಕನ್ನಡದ ಹುಡುಗನ ಮನೆಯವರ ನೆರವಿಗೆ ಹೋಗುವ ಮನಸು ಮಾಡಲಿಲ್ಲ.

ಬಿಡಿ, ಅವರ ದುಡ್ಡು-ಅವರ ಇಷ್ಟ. ಯಾರಿಗೆ ಬೇಕಾದರೂ ಅವರು ಕೊಡಬಹುದು. ಆದರೆ, ಇರಾಕ್‌ನಲ್ಲಿ ಮಡಿದ ಡ್ರೆೃವರನ ಕುಟುಂಬಕ್ಕೆ ತಾವು ಮಾಡಿದ ಸಹಾಯ ಭಾರತಕ್ಕೆ ಗೊತ್ತಾಗುವುದಕ್ಕಿಂತ ಮುಂಚೆಯೇ ಅಮೆರಿಕಾಕ್ಕೆ ಗೊತ್ತಾಗುತ್ತದೆ ಎಂಬುದು ಇನ್ಫೋಸಿಸ್‌ ದಂಪತಿಗಳಿಗೆ ಚೆನ್ನಾಗಿ ಗೊತ್ತು. ಆ ಸಂಗತಿಯನ್ನು ಗಮನಿಸಬೇಕು.

ಹಾಗೇನೆ, ಕೊರಿಯಾದಿಂದಲೋ, ಸಿಂಗಪೂರ್‌ನಿಂದಲೋ ಬಂದ ರಾಜತಾಂತ್ರಿಕನೊಬ್ಬ ‘ನಾರಾಯಣಮೂರ್ತಿ ರಾಜಕೀಯಕ್ಕಿಳಿಯಬೇಕು. ಈ ದೇಶವನ್ನು ಉದ್ಧರಿಸಬೇಕು’ ಅಂದ. ಒಂದು ದೊಡ್ಡ ಚರ್ಚೆಯೇ ಇಂಗ್ಲಿಷ್‌ ಪತ್ರಿಕೆಗಳಲ್ಲಿ ಶುರುವಾಗಿ ಹೋಯಿತು. ‘ಛೇಛೆ, ಎಲ್ಲಾದರೂ ಉಂಟೆ? ಭಾರತದ ಎಲೆಕ್ಟೋರಲ್‌ ಪಾಲಿಟಿಕ್ಸು ಕೆಟ್ಟು ಕೆರಹಿಡಿದು ಹೋಗಿದೆ. ಅದರಲ್ಲಿ ನಾರಾಯಣಮೂರ್ತಿಯವರಂಥ ಸಜ್ಜನರು ಧೂರ್ತ ರಾಜಕಾರಣಿಗಳಿಗೆ ಸರಿಗಟ್ಟುವುದುಂಟೇ? ಇಷ್ಟಕ್ಕೂ ಚುನಾವಣೆಯಲ್ಲಿ ಗೆಲ್ಲುವುದೆಂದರೇನು ಸುಮ್ಮನೆ ಮಾತಾ?ಅಕಸ್ಮಾತ್‌ ಗೆದ್ದರು ಅಂತಲೇ ಇಟ್ಟುಕೊಳ್ಳಿ. ನಾರಾಯಣಮೂರ್ತಿಯಂಥ ಸಜ್ಜನರು ಗೆದ್ದು ಮಾಡುವುದದಾದರೇನು?ಈ ವ್ಯವಸ್ಥೆ ಅವರನ್ನು ಆಳಲು ಬಿಡುತ್ತದಾ? ಅವರಂಥ ಸಜ್ಜನರು ಗೆದ್ದು ಈ ತನಕ ಏನು ಮಾಡಲು ಸಾಧ್ಯವಾಗಿದೆ?’ ಅಂತ ಕೆಲವರು ಬರೆದರು. ‘ಇಲ್ಲ ಇಲ್ಲ, ನಾರಾಯಣಮೂರ್ತಿ ಆಳಲೇಬೇಕು. ಇನ್ಫೋಸಿಸ್‌ನ ಉದ್ಧರಿಸಿದಂತೆಯೇ ಅವರು ದೇಶವನ್ನೂ ಉದ್ಧರಿಸುತ್ತಾರೆ’ ಅಂತ ಮತ್ತೆ ಕೆಲವರು ಬರೆದರು.

ಆದರೆ ಯಾರೂ ಕೂಡ, ಇನ್ಫೋಸಿಸ್‌ನ ನಾರಾಯಣಮೂರ್ತಿ ಅಥವಾ ಅವರ ಪತ್ನಿ ಸುಧಾಮೂರ್ತಿ ಯಾಕೆ ರಾಜಕೀಯಕ್ಕೆ ಬರಬೇಕು? ಇವರಿಗಿಂತ ದೊಡ್ಡಮಟ್ಟದ ಯಶಸ್ಸು ಕಂಡಿರುವ ಬಿಲ್‌ಗೇಟ್ಸ್‌ಅಮೆರಿಕಾದ ರಾಜಕೀಯಕ್ಕೆ ಬಂದಿದ್ದಾನಾ? ಬೇರೆ ಯಾವುದಾದರೂ ದೇಶದ, ಯಾವುದಾದರೂ ಐ.ಟಿ.ತಂತ್ರಜ್ಞ ರಾಜಕಾರಣಕ್ಕೆ ಬಂದಿದ್ದಾನಾ?ಎಂಬ ಮೂಲ ಪ್ರಶ್ನೆ ಕೇಳಲಿಲ್ಲ. ನಾರಾಯಣಮೂರ್ತಿ ಕೂಡ ‘ದೊಡ್ಡ ದನಿಯಲ್ಲಿ’ ರಾಜಕೀಯವೆಂಬುದು ನನ್ನ ರಂಗವಲ್ಲ. ಅದರಲ್ಲಿ ನನಗೆ ಆಸಕ್ತಿಯಿಲ್ಲ ಅಂತ ನಿನ್ನೆಯತನಕ ಹೇಳಿರಲಿಲ್ಲ. ರಾಜಕೀಯ ಅಧಿಕಾರವನ್ನು ಒಂದು ದಪ ನೋಡೇ ಬಿಡೋಣ ಅಂತ ಮೂರ್ತಿ ದಂಪತಿಗಳೂ ಅಂದುಕೊಂಡಂತಿದೆ ಅಂತಲೇ ಈ ತನಕ ಅನ್ನಿಸುತ್ತಿತ್ತು.

ಹಾಗಂತ ಅವರು ಅಂದುಕೊಂಡಿದ್ದರೆ ಖಂಡಿತ ತಪ್ಪಿಲ್ಲ. ತಾವು ಕಟ್ಟಿಕೊಂಡ ಇನ್ಫೋಸಿಸ್‌ನಲ್ಲಿ ಜಿಮ್ನೇಷಿಯಂನಿಂದ ಹಿಡಿದು ಹೆಲಿಪ್ಯಾಡ್‌ತನಕ ಎಲ್ಲವನ್ನೂ ಮಾಡಿಕೊಂಡು ದೊಡ್ಡ ಸಾಧನೆಯನ್ನೇ ಮಾಡಿರುವ ನಾರಾಯಣಮೂರ್ತಿ, ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನೋ, ಸಮಸ್ತ ಭಾರತವನ್ನೋ ಇವತ್ತಿನ ಈ ಸಿಂಗು-ಕೇಂದ್ರದ ಸಿಂಗುಗಳಿಗಿಂತ ಚೆನ್ನಾಗಿಯೇ ಮ್ಯಾನೇಜ್‌ ಮಾಡಬಹುದು.(ಈಗಾಗಲೇ ಸುಧಾಮೂರ್ತಿಯವರು ಒಂದು ದಿನಪತ್ರಿಕೆ ಮಾಡುತ್ತಾರಂತೆ ಎಂಬ ಸುದ್ದಿಯೂ ದಟ್ಟವಾಗಿ ಹರಡಿದೆ.)

ಆದರೆ ನಿಮಗೆ ಗೊತ್ತಿರಲಿ : ಇನ್ಫೋಸಿಸ್‌ ಸಂಸ್ಥೆಯನ್ನ ನಾರಾಯಣಮೂರ್ತಿಗಳು ಶೈಶವ ಸ್ಥಿತಿಯಲ್ಲಿ ಸಲುಹಿದವರು, ಅಷ್ಟೇ. ಅದನ್ನು ಈವತ್ತಿನ ಈ ಸ್ಥಿತಿಗೆ ಬೆಳೆಸಿ, ಕಟ್ಟಿ ನಿಲ್ಲಿಸಿದವರು ನಂದನ್‌ ನಿಲೇಕಣಿ ದೊಡ್ಡ ತಾಕತ್ತಿನ ಮನುಷ್ಯ. ನಾರಾಯಣಮೂರ್ತಿಗಳು ಸದ್ಯಕ್ಕೆ ಇನ್ಫೋಸಿಸ್‌ನ ಹಳೇ ಉತ್ಸವಮೂರ್ತಿ : ಮಠದಲ್ಲಿ ವೃದ್ಧ-ಹಿರಿಯ ಸ್ವಾಮಿಗಳಂತೆ ಇದ್ದಾರೆ. ರಾಜಕೀಯಕ್ಕೆ ಬರುವುದೇ ಆದರೆ ನಂದನ್‌ ಬರಲಿ. ಅದರಿಂದ ಪ್ರಯೋಜನವೂ ಜಾಸ್ತಿ.

ಅಂತೆಯೇ, ರಾಜಕೀಯಕ್ಕೆ ಬರುವುದು ಅಂದರೆ ಏನು-ಎಂಬುದರ ಬಗ್ಗೆಯೂ ಸಾದ್ಯಂತವಾಗಿ ಚರ್ಚೆ ನಡೆಯಾಗಲಿ. ನಾರಾಯಣಮೂರ್ತಿ ರಾಜಕೀಯಕ್ಕೆ ಬಂದರೆ, ಅವರು ಈ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಿ ಭಾರತವನ್ನ ಇನ್ಫೋಸಿಸ್‌ ಥರಾ(ಕಡೇ ಪಕ್ಷ ಇಂದಿರಾನಗರದ ಥರಾ) ಫಳಫಳಿಸುವಂತೆ ಮಾಡುತ್ತಾರೆ ಅಂತ ತಾನೇ ವಾದ? ನಮ್ಮ ದೇಶದ ಅಷ್ಟೂ ಬ್ರಹ್ಮಾಂಡ ಭ್ರಷ್ಟಾಚಾರ ಇರುವುದೇ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ. ಅಲ್ಲಿ ರಿಪೇರಿಗಳಾಗಿಬಿಟ್ಟರೆ, nothing like that. ಆದ್ದರಿಂದ ನಾರಾಯಣಮೂರ್ತಿಗಳು, ಮೊದಲು ಚುನಾವಣೆಗೆ ನಿಲ್ಲುವ ತಯಾರಿ ನಡೆಸಬೇಕು. ಒಂದು ಪಕ್ಷದೊಂದಿಗೆ identify ಮಾಡಿಕೊಳ್ಳಬೇಕು. ಜನರೊಂದಿಗೆ ಬೆರೆಯಬೇಕು. ಎಲ್ಲ ಪಕ್ಷಗಳೂ ಭ್ರಷ್ಟಗೊಂಡಿರುವುದರಿಂದ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಅನ್ನಬೇಕು. ಒಬ್ಬರೇ ಗೆದ್ದರೆ ಏನುಪಯೋಗ ಅಂತ ಆಲೋಚಿಸಿ ಸ್ವಂತದ್ದೊಂದು ಪಕ್ಷವನ್ನೇ ಕಟ್ಟಿ ಚುನಾವಣೆಗಿಳಿಯುತ್ತೇನೆ ಅನ್ನಬೇಕು. ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಹುಡುಕಬೇಕು. ನಿಲ್ಲಬೇಕು, ನಿಲ್ಲಿಸಬೇಕು, ತಾವೂ ಗೆದ್ದು ತಮ್ಮವರನ್ನೂ ಗೆಲ್ಲಿಸಬೇಕು.

ಸಜ್ಜನ ಹೋರಾಟಗಾರನೊಬ್ಬ ಈ ವ್ಯವಸ್ಥೆಯನ್ನು ಸರಿಪಡಿಸಿ, ದೇಶವನ್ನು ಉತ್ತಮ ರೀತಿಯಲ್ಲಿ ಮ್ಯಾನೇಜ್‌ ಮಾಡಲು ಹೊರಡುತ್ತಾನೆಂದರೆ, ಆತ ಇದನ್ನೆಲ್ಲ ಮಾಡಬೇಕು. ಅದು ಬಿಟ್ಟು, ರಾಜ್ಯಸಭೆಗೆ ನೇಮಕಮಾಡಿ ಅಂದರೆ ಪುಸ್ಕ! ರಾಷ್ಟ್ರಪತಿಯನ್ನಾಗಿ ಮಾಡಿ ಅಂತ ವಿನಂತಿಸಿದರೆ, ಅದು ಆತ್ಮ ವಂಚನೆ. ಎಲ್ಲ ಬಿಟ್ಟು ಗವರ್ನರೋ, ರಾಯಭಾರಿಯೋ ಆದರೆ ಅದು ಭೂಮಿಗೆ ಭಾರ. ಏಕೆಂದರೆ, ರಾಷ್ಟ್ರಪತಿಯಾಗಿ ಈ ದೇಶವನ್ನು - ಇದರ ವ್ಯವಸ್ಥೆಯನ್ನು ಉದ್ಧರಿಸಿದ ಒಂದೇ ಒಂದು ಉದಾಹರಣೆ ಇಲ್ಲ. ರಾಜ್ಯಸಭೆಗೆ ನಾಮಿನೇಟು ಮಾಡಿದರೆ ಇನ್ಫೋಸಿಸ್‌ನ ಆಸ್ತಿ ಪಾಸ್ತಿ ಉಳಿದಾವೆಯೇ ಹೊರತು ದೇಶಕ್ಕೆ ಮಾಡಬಹುದಾದ್ದು ಏನೂ ಇರುವುದಿಲ್ಲ. ಗವರ್ನರ್‌ ಆದರಂತೂ ಮುಗಿದೇ ಹೋಯಿತು : ಇಡೀ ದಿನ ಪ್ರೆೃಜು ಕೊಟ್ಟು ಕೈ ಮುಗಿದು, ಕಡತಗಳಿಗೆ ಸೈನು ಮಾಡಿ ರಾಜಭವನದ ಕಂಪೋಂಡಿನಲ್ಲಿ ವಾಕಿಂಗು ಹೋಗಿ ಬರಬೇಕಷ್ಟೇ. ಅದಕ್ಕೆ ನಾರಾಯಣಮೂತಿಗಳೇ ಆಗಬೇಕೆಂದಿಲ್ಲ.

ನಾರಾಯಣಮೂರ್ತಿಯಂಥವರಿಗೆ ಈ ವ್ಯವಸ್ಥೆಯನ್ನು ಸರಿಪಡಿಸುವ ಇರಾದೆಗಳಿದ್ದರೆ, ಇಂಥ via mediaಗಳನ್ನು ಅವರು ಯೋಚಿಸಲೇಬಾರದು. ‘ನೀವು ನೆಲ ಕದ್ದಿದ್ದೀರಿ, ಜಮೀನು ಹೊಡ್ಕಂಡಿದೀರಿ’ ಅಂತ ನೆಲಗಳ್ಳರ ಪೈಕಿಯೇ ಕಳ್ಳರ ಕಳ್ಳನಂಥ ದೇವೇಗೌಡ ಆಪಾದನೆ ಮಾಡಿದಾಗ ಸೆಟೆದು ನಿಂತು ತಮ್ಮ ಸಾಚಾತನವನ್ನು ಸಾಬೀತುಪಡಿಸಬೇಕು. ದೇವೇಗೌಡರು ಆಡಿದ ಪ್ರತಿ ಮಾತೂ ಸುಳ್ಳು ಅಂತ ಸಾರ್ವಜನಿಕರೆದುರು ನಿರೂಪಿಸಿ, ಗೌಡರ ವಿರುದ್ಧವೇ ತೊಡೆತಟ್ಟಿ ಚುನಾವಣೆಗೆ ನಿಂತು ಗೆದ್ದುಬರಬೇಕು. ನಾರಾಯಣಮೂರ್ತಿಗಳಿಗೆ ಆ ತಾಕತ್ತು, ನೇರವಂತಿಕೆ ಇದೆಯೇ?

‘ಈಗಿರುವ ರಾಜಕಾರಣಿಗಳೆಲ್ಲ ಕಳ್ಳರು, ಸುಳ್ಳರು. ನಾರಾಯಣಮೂರ್ತಿಯವರಂಥ ಯಶಸ್ವಿ ಐಟಿ ದಿಗ್ಗಜರು ಅಧಿಕಾರಕ್ಕೆ ಬಂದರೆ ಈ ಕಳ್ಳ ಸುಳ್ಳರು ಮಾಡಿದ ಅನಾಚಾರವನ್ನೆಲ್ಲ ತೊಳೆದು ದೇಶವನ್ನು ತಮ್ಮ ಐಟಿ ಇಂಡಸ್ಟ್ರಿಯಂತೆಯೇ ಯಶಸ್ಸಿನ ದಾರಿಯಲ್ಲಿ ಕೊಂಡೊಯ್ಯುತ್ತಾರೆ’ ಅಂತ ಯಾರಾದರೂ ವಾದಿಸಿದರೆ : ಒಂದೋ, ಅವರು ವಿಪರೀತ ಆಶಾವಾದಿ ಅಮಾಯಕರು ಅಥವಾನಾರಾಯಣಮೂರ್ತಿಯವರ ಬಗ್ಗೆ ಗೊತ್ತಿಲ್ಲದೇನೇ ಸೈಕೋಫ್ಯಾನ್ಸಿ ಬಳಸಿಕೊಂಡವರು.

ನಾರಾಯಣಮೂರ್ತಿಯವರ ಸಾಚಾತನದ ಬಗ್ಗೆ ಒಂದು ಚಿಕ್ಕ ಉದಾಹರಣೆ ಇದೆ ನೋಡಿ. ಕೆಲ ವರ್ಷಗಳ ಹಿಂದೆ ಸಭೆಯಾಂದರಲ್ಲಿ ಬೆಳ್ಳಂದೂರಿನ ಪಂಚಾಯ್ತಿ ಅಧ್ಯಕ್ಷರೊಬ್ಬರು ‘ಸ್ವಾಮೀ, ನೀವು ಇನ್ಫೋಸಿಸ್‌ಗೆ ಜಮೀನು ಬೇಕು ಅಂದಾಗ, ಸರ್ಕಾರದವರು ರೈತರಿಗೆ 3-4ಲಕ್ಷ ಕೊಟ್ಟು ಅಕ್ವಾಯರ್‌ ಮಾಡಿಕೊಂಡಿದ್ದ ಜಮೀನನ್ನ ಅದೇ ರೇಟಿಗೆ ತಗೊಂಡ್ರಿ. ಉಳಿದ ಎಲ್ಲಾ ಐಟಿ ಇಂಡಸ್ಟ್ರಿಯವರು ನೇರವಾಗಿ ರೈತರಿಂದ 15-20ಲಕ್ಷ ಬೆಲೆ ಕೊಟ್ಟು ಜಮೀನು ಖರೀದಿಸಿದರು. ಅವರು ನಿಮ್ಮ ಹಾಗೆ ಸರ್ಕಾರದ ಹೆಗಲ ಮೇಲೆ ಬಂದೂಕಿಟ್ಟು ರೈತರ ಜಮೀನು ಕಿತ್ತಿಕೊಳ್ಳಲಿಲ್ಲ. ನಿಮಗಿಂತ ಅವರೇ ಮೇಲು... ’ ಅಂತ ತುಂಬಿದ ಸಭೆಯಲ್ಲಿ ನೇರವಾಗಿ ಆಪಾದನೆ ಮಾಡಿದರು. ಮೂರ್ತಿಗಳು ಖಿಮಕ್ಕೆನ್ನಲಿಲ್ಲ. ಭ್ರಷ್ಟಾತಿಭ್ರಷ್ಟ ಮುಖ್ಯಮಂತ್ರಿ ಎಸ್ಸೆಂ ಕೃಷ್ಣರೊಂದಿಗೆ ಗಳಸ್ಯವಾದರು, ಕಂಠಸ್ಯವಾದರು.

ಆದರೂ ನಾರಾಯಣಮೂರ್ತಿಯವರನ್ನು ತುಂಬ ಪ್ರಾಮಾಣಿಕ ಮನುಷ್ಯ ಅಂದುಕೊಂಡ ಒಂದು ವರ್ಗವಿದೆ. ಅವರಿಗೆ ಗೊತ್ತಿರಲಿ : ನಾರಾಯಣಮೂರ್ತಿ ಒಬ್ಬ ಯಶಸ್ವಿ ತಂತ್ರಜ್ಞ. ಅದ್ಭುತ ಮ್ಯಾನೇಜರ್‌. ಅವರಿಗಿಂತ ಅದ್ಭುತ ಮ್ಯಾನೇಜರಿಕೆ, ವ್ಯವಹಾರ ಗೊತ್ತಿರುವವರು ನಂದನ್‌ ನಿಲೇಕಣಿ. ಇಳಿಸುವುದಾದರೆ, ನಂದನ್‌ರನ್ನು ಐಟಿ ಅಭಿಮಾನಿಗಳು ರಾಜಕೀಯಕ್ಕಿಳಿಸಲಿ. ಹಾಗೆ ಇಳಿಸುವ ಮುನ್ನ ಒಂದು ವಿಷಯ ಅವರಿಗೆ ಗೊತ್ತಿರಲಿ :

ಒಬ್ಬ ಒಳ್ಳೆ ವ್ಯಾಪಾರಿ, ಒಬ್ಬ ಒಳ್ಳೆ ರಾಷ್ಟ್ರನಾಯಕನೂ ಆಗಬಲ್ಲ ಅಂದುಕೊಳ್ಳುವುದು ತಪ್ಪು. ನಾರಾಯಣಮೂರ್ತಿ ಒಬ್ಬ ಒಳ್ಳೆ ವ್ಯಾಪಾರಿ ಅಂತ ಅಂದುಕೊಳ್ಳುವುದು ಕೂಡ ತಪ್ಪೇ. ಏಕೆಂದರೆ, ನಿಜವಾದ ಒಳ್ಳೆ ವ್ಯಾಪಾರಿ ನಂದನ್‌ ನಿಲೇಕಣಿ, ನಾರಾಯಣಮೂರ್ತಿಗಳ ಬೆನ್ನ ಹಿಂದಿದ್ದಾರೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರ್‌!)

ನಾರಾಯಣಮೂರ್ತಿ ಕುರಿತು ಇನ್ನೆರಡು ಟೀಕೆಗಳು :

  • ನಾರಾಯಣಮೂರ್ತಿ ಕುರಿತು ಇನ್ನೆರಡು ಟೀಕೆಗಳು :
  • ಇನ್‌ಫೋಸಿಸ್‌ನ ಹಿರಿಯ ಹೆಣ್ಣು ಮಗಳು ಸುಧಾಮೂರ್ತಿ ಅವರಿಗೆ..!

    ಮುಖಪುಟ / ಅಂಕಣಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X