• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಥದೊಂದು ಮರುವೃತ್ತಿಯನ್ನು ಆಯ್ದಿಟ್ಟುಕೊಳ್ಳದಿದ್ದರೆ ...

By Super
|

ರವಿ ಬೆಳಗೆರೆ

priya_meena2001@yahoo.co.in

‘ಸರ್‌ ಅವರ್ನ ನೋಡಿದ್ರಾ ?' ಜೊತೆಗಿದ್ದ ಸಹಾಯಕ ಕೇಳಿದ.

ಅವನು ಸೂಚಿಸಿದ ದಿಕ್ಕಿಗೆ ನೋಡಿದೆ. ಒಬ್ಬ ವ್ಯಕ್ತಿ ನಡೆದು ಹೋಗುತ್ತಿದ್ದರು. ತೆಳ್ಳಗಿನ, ಚಿಕ್ಕ ಎತ್ತರದ, ಬೋಳು ತಲೆಯ ಮನುಷ್ಯ. ತೋಳು ಅರ್ಧ ಮಡಚಿದಂತೆ. ತೀರ ಮಾಮೂಲಿಯಾದ ಪ್ಯಾಂಟು. ಅಷ್ಟೇ ಮಾಮೂಲಿ ಷರಟು. ಬೆಂಗಳೂರಿನ ಡಿ. ಸಿ. ಆಫೀಸಿನ ಆಸುಪಾಸಿನಲ್ಲಿ ಹರಡಿಕೊಂಡಿದ್ದ ಸಾವಿರಾರು ಜನರ ಮಧ್ಯೆ ಅದೊಂದು ಪೇಲವ ಆಕೃತಿ ಯಾರ ಗಮನಕ್ಕೂ ಬಾರದೆ ತನ್ನ ಪಾಡಿಗೆ ತಾನು ನಡೆದು ಹೋಗುತ್ತಿತ್ತು.

ಈಗ್ಗೆ ಕೆಲವೇ ವರ್ಷಗಳ ಹಿಂದೆ ಆತನನ್ನು ಕಂಡರೆ ಬೆಂಗಳೂರು ಬೆಚ್ಚಿ, ಎದ್ದು ನಿಂತು ಗೌರವಿಸುತ್ತಿತ್ತು. ಆತ ನಗರದ ಪೊಲೀಸ್‌ ಕಮಿಶನರ್‌ ಆಗಿದ್ದರು. ಹೆಬ್ಬುಲಿಯಂಥ ಪೊಲೀಸ್‌ ಆಫೀಸರುಗಳು ರಪ್ಪನೆ ಕಾಲು ಕುಟ್ಟಿ ಸೆಲ್ಯೂಟು ಸಲ್ಲಿಸುತ್ತಿದ್ದರು. ವೈರ್‌ಲೆಸ್‌ನಲ್ಲಿ ಅವರ ದನಿ ಕೇಳಿದರೆ ಅನೇಕರಿಗೆ ಅವತ್ತು ರಾತ್ರಿ ನಿದ್ರೆ ಬರುತ್ತಿರಲಿಲ್ಲ. ಆದರೆ ಈಗ ? ಈಗ ಅವರು ನಿವೃತ್ತರು. ಮಾಜಿ ಐಪಿಎಸ್ಸು. ವಯಸ್ಸಾಗಿದೆ. ಬೆಂಗಳೂರಿನ ಕೋರ್ಟುಗಳಲ್ಲಿ ವಕೀಲಿಕೆ ಮಾಡುತ್ತಾರೆ. ಸಾವಿರಾರು ವಕೀಲರ ಮಧ್ಯೆ ಅವರದೂ ಒಂದು ಕಪ್ಪು ಕೋಟು. ಗುಂಪಿನಲ್ಲಿ ನಿಂತಾಗ ಪೊಲೀಸ್‌ ಪೇದೆಯೂ ಅವರನ್ನು ಗುರುತಿಸಲಿಕ್ಕಿಲ್ಲ. ಯಾರಿಗೆ ಯಾರೋ ಪುರಂದರ ವಿಠಲ. ಅವರದು ಗುಂಪಿನಲ್ಲಿ ಕಂಡ ಮುಖ. ಹೆಚ್ಚು ಕಡಿಮೆ ಎಲ್ಲ ಹೆಬ್ಬುಲಿಗಳದೂ ಇದೇ ಕತೆ. ಸರ್ವೀಸಿನ ಕಟ್ಟ ಕಡೆಯ ದಿನದ ತನಕ ದವಲತ್ತು , ದರ್ಬಾರು, ಸಲ್ಯೂಟು ಪರಾಕು. ರಿಟೈರಾದ ಮಾರನೇ ದಿನ ಅವರು ಏನೂ ಅಲ್ಲ. ಸರ್ಕಾರಿ ನೌಕರರು, ಮಂತ್ರಿಗಳು, ಶಾಸಕರು, ಮಗುಚಿ ಬಿದ್ದ ವರ್ತಕರು, ಆಟ ಮುಗಿಸಿದ ಕ್ರಿಕೆಟ್ಟಿಗರು, ಚಲಾವಣೆ ಕಳೆದುಕೊಂಡ ನಟರು, ಕೈ ಸೋತ ಲೇಖಕರು, ಪತ್ರಕರ್ತರು- ಎಲ್ಲರದೂ ಅಷ್ಟೇ. ಕೆಲವರು ಇಂತಿಷ್ಟು ಡೇಟಿಗೆ ಅಂತ ಕರಾರುವಾಕ್ಕಾಗಿ ರಿಟೈರ್‌ ಆಗುತ್ತಾರೆ. ಮತ್ತೆ ಕೆಲವರಿಗೆ ಎಷ್ಟೋ ದಿನಗಳ ನಂತರ ‘ಓ... ನಾನು ರಿಟೈರಾದಂತಿದೆ' ಅನ್ನಿಸತೊಡಗುತ್ತದೆ. ವೃತ್ತಿ ಅಂತ ಯಾವುದನ್ನು ಒಪ್ಪಿಕೊಂಡರೂ ಕೊನೆಗೆ ನಿವೃತ್ತಿ ಅಂತ ಒಂದು ಇದ್ದೇ ಇರುತ್ತದೆ : ಮಹಾ ಯಶಸ್ವೀ ವೇಶ್ಯೆಗೂ ಕೂಡ !

ಅದಕ್ಕೇ ಮೊದಲಿನಿಂದಲೇ ಮನಸ್ಸು ಅಣಿಗೊಳಿಸಬೇಕು. ಜಾಣತನವಿರುವುದೇ ಅಲ್ಲಿ. ಆದರೆ ಎಷ್ಟು ಮೊದಲಿನಿಂದ ನಿವೃತ್ತಿಗೆ ಅಣಿಯಾಗಬೇಕು ಎಂಬುದು ನಿಜವಾದ ಪ್ರಶ್ನೆ. ‘ಇನ್ನೂ ಐದು ವರ್ಷ ಸರ್ವೀಸಿದೆ' ಅಂದುಕೊಳ್ಳುವುದು ಸರಿಯೋ ? ‘ಇನ್ನೇನಪ್ಪ, ಐದೇ ವರ್ಷ' ಅಂದುಕೊಳ್ಳುವುದು ಸರಿಯೋ ? ಸರ್ವೀಸಿನ ವರ್ಷಗಳು ಎಷ್ಟೇ ಇರಲಿ, ನಿಮ್ಮ ಮನಸ್ಸಿಗೆ ಈಗೆಷ್ಟು ವರ್ಷ ಅಂತ ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ಅದು ನಮ್ಮ ನಿವೃತ್ತಿಗೆ ನಾವು ಮಾಡಿಕೊಳ್ಳುವ ಮೊದಲ ಸಿದ್ಧತೆ. ಯಾವುದು ಹೇಗೆ ಬೇಕಾದರೂ ಹಾಳು ಬಿದ್ದು ಹೋಗಲಿ. ನಾನು ನನ್ನ ಐವತ್ತೆೈದನೇ ವಯಸ್ಸಿಗೊಂದು ರಾಜೀನಾಮೆ ಬಿಸಾಡಿ ಕೈ ತೊಳೆದುಕೊಂಡು ಬಿಡುತ್ತೇನೆ ಅಂತ, ತನ್ನ ನಲವತ್ತೆೈದನೇ ವರ್ಷದಲ್ಲೇ ನಿರ್ಧರಿಸುವವನು ನಿಜಕ್ಕೂ ಜಾಣ. ಏಕೆಂದರೆ, ಐವತ್ತೆೈದನೇ ವರ್ಷದ ನಂತರ ಅವನು ಬದುಕಿನ ನೆಕ್ಸ್ಟ್‌ ನಲವತ್ತೆೈದು ವರ್ಷಗಳಿಗೆ ಮಾನಸಿಕವಾಗಿ ಅಣಿಯಾಗತೊಡಗುತ್ತಾನೆ. ಅದು ನಿವೃತ್ತಿಯ ಕಾಲವಲ್ಲ. ಅದು ಎರಡನೇ ಆವೃತ್ತಿಯ ಕಾಲ.

ಹೇಗೆ ಹೆಂಗಸರಿಗೆ ಎರಡನೇ ಕನ್ಯತ್ವ (second verginity)ಅಂತ ಇರುತ್ತದೊ ಗಂಡಸರಿಗೆ ಎರಡನೇ ನೌಕರಿಯ ಕಾಲವೂ ಇರುತ್ತದೆ. ಐವತ್ತೆಂಟು ಎಂಬುದು ಹಣ್ಣಣ್ಣು ವಯಸ್ಸಲ್ಲ. ಅವತ್ತಿಗೆ ರಿಟೈರಾಗಬೇಕು ಅಂತ ಗವರ್ನಮೆಂಟು ನಿರ್ಧರಿಸಿ ಹೇಳಿರಬಹುದು. ಆದರೆ ನಾವೂ ಹಾಗಂತ ಅಂದುಕೊಂಡು ಬಿಡಬಾರದು. ಆವತ್ತಿನಿಂದ, ಅಥವಾ ಅದಕ್ಕಿಂತ ಮುಂಚಿನಿಂದಲೇ ಒಂದು ಹೊಸ ವೃತ್ತಿ ಹುಡುಕಿಕೊಂಡು ಬಿಡಬೇಕು. ಇಲ್ಲದಿದ್ದರೆ ಒಂದು ಭಯಾನಕ ಶೂನ್ಯ ಕಾಡುತ್ತದೆ. ನಿವೃತ್ತಿ ಅನ್ನುವುದು ನಿಷ್ಪ್ರಯೋಜಕ ಸ್ಥಿತಿಯ ಆರಂಭ ಅನ್ನಿಸತೊಡಗುತ್ತದೆ. ಯಾರೂ ಸೆಲ್ಯೂಟು ಹೊಡೆಯುವುದಿಲ್ಲ. ಮೊದಲಿನಂತೆ ದುಡ್ಡು ಬರುವುದಿಲ್ಲ. ಬೆಳಗ್ಗೆ ಎದ್ದು ಎಲ್ಲಿಗೂ ಹೋಗಬೇಕಾಗಿರುವುದಿಲ್ಲ. ಒಂಥರಾ, ನನ್ನಿಂದ ಇನ್ನು ಮಕ್ಕಳನ್ನು ಹುಟ್ಟಿಸಲಾಗುವುದಿಲ್ಲವಲ್ಲಾ ಅಂತ ಕೊರಗು ಹತ್ತಿಸಿಕೊಳ್ಳುವ ಮನುಷ್ಯನ ಮನಸ್ಥಿತಿಗೆ ತಲುಪಿಬಿಡುತ್ತೇವೆ. ಬದುಕಿನ ಮೈನ್‌ ಸ್ಟ್ರೀಮ್‌ನಿಂದ ನಿವೃತ್ತಿ ಎಂಬುದು ಮನುಷ್ಯನನ್ನು ಎತ್ತಿ ಆಚೆಗೆ ಹಾಕಿಬಿಡುತ್ತದೆ. ಅಲ್ಲಿಗೆ ಎಲ್ಲವೂ ಮುಗಿದೇ ಹೋಯಿತೇನೋ ಎಂಬಂತಹ ಶೂನ್ಯ ಆವರಿಸಿಕೊಳ್ಳುತ್ತದೆ. ಎಷ್ಟೋ ಜನ ರಿಟೈರಾದ ತಕ್ಷಣ ಖಾಯಿಲೆ ಬೀಳುತ್ತಾರೆ, ಸತ್ತೇ ಹೋಗುತ್ತಾರೆ.

ರಿಟೈರ್‌ಮೆಂಟಿಗೆ ಸಂಬಂಧಿಸಿದಂತೆ ರಾಜ್‌ಕುಮಾರ್‌ ಆಡಿದ ಒಂದು ಮಾತು ನನಗೆ ಇವತ್ತಿಗೂ ನೆನಪಿದೆ. ಅವರ ಸದಾಶಿವನಗರದ ಮನೆಯಲ್ಲಿ ಅವರೊಂದಿಗೆ ಮಾತನಾಡುತ್ತಾ ಕುಳಿತಿದ್ದೆ. ಒಬ್ಬರ್ಯಾರೋ ಬಂದು ಕಾಲಿಗೆ ನಮಸ್ಕರಿಸಿ, ‘ರಿಟೈರ್‌ ಆಗ್ಬಿಟ್ಟೆ ಅಣ್ಣಾ...' ಅಂದರು. ತಕ್ಷಣ ರಾಜ್‌ಕುಮಾರ್‌ ಏನಂದರು ಗೊತ್ತೇ ?

‘ಹೌದಾ ? ಅದಕ್ಕೇ ಇಷ್ಟೊಂದು ಆರೋಗ್ಯವಾಗಿ ಕಾಣಿಸ್ತಾ ಇದ್ದೀರಿ. ಇನ್ನೇನು ಬಿಡಿ... ನೆಮ್ಮದಿಯಾಗಿರಬಹುದು ! ' ಆ ಮಾತು ಕೇಳಿ ಆತ ಎಷ್ಟು ಉತ್ತೇಜಿತನಾದ ಅಂದರೆ,

‘ಊಂನಣ್ಣಾ... ಮನೆ ಕಟ್ಟಿಸ್ತಾ ಇದ್ದೀನಿ' ಅಂತ ಶುರುವಿಟ್ಟುಕೊಂಡ.

ನೀವೇ ನೋಡಿ: ಸ್ವತಃ ರಾಜ್‌ಕುಮಾರ್‌ ನಿವೃತ್ತರು. ಖ್ಯಾತಿಯ, ವೈಭವದ ತುತ್ತ ತುದಿ ತಲುಪಿದವರು. ಅದೆಷ್ಟು ಶಿಫ್ಟ್‌ಗಳಲ್ಲಿ ಅದೆಷ್ಟು ವರ್ಷ ಕೆಲಸ ಮಾಡಿದರೋ ಯಾರಿಗೆ ಗೊತ್ತು ? ಆದರೆ ಅವರಿಗೂ ಒಂದು ನಿವೃತ್ತಿ ಅಂತ ಬಂತಲ್ಲ ? ಅವರದೂ ಶಿಫ್ಟ್‌ ಮುಗಿಯಿತಲ್ಲ ? ಅವರಿಗೂ ವಯಸ್ಸಾಯಿತು ಮತ್ತು ಈಗ ಬಂದಿರುವುದು ನಿವೃತ್ತಿಯ ಕಾಲ ಎಂಬುದನ್ನು ತುಂಬ ಎಚ್ಚರದಿಂದ ಅರ್ಥ ಮಾಡಿಕೊಂಡ ಪಕ್ವ ಮನಸ್ಸು ರಾಜಕುಮಾರ್‌ ಅವರದು. ಅಂಥದೊಂದು ಮನೋಸಿದ್ಧತೆ ಅವರ ಪ್ರತಿ ನಡೆ ನುಡಿಯಲ್ಲಿ ಕಾಣಿಸುತ್ತದೆ. ಇವತ್ತಿಗೂ ‘ಭಕ್ತ ಅಂಬರೀಷ' ಮಾಡುತ್ತೇನೆ ಅನ್ನುತ್ತಾರೆ. ಯಾರನ್ನೋ ಚರ್ಚೆಗೆ ಕರೆಯುತ್ತಾರೆ. ಹಾಡಲು ಅನುವಾಗುತ್ತಾರೆ. ಆದರೆ ಅದು ವೃತ್ತಿಯಲ್ಲ. ನಿವೃತ್ತಿಯ ನಂತರದ ಕೇವಲ ತಮ್ಮ ಮನಸ್ಸಂತೋಷಕ್ಕೆಂದೇ ತೆರೆದುಕೊಂಡ ಎರಡನೇ ಆವೃತ್ತಿಯ ಬದುಕು ! ಅಲ್ಲಿ ದುಡಿದು ದುಡ್ಡು ಮಾಡಬೇಕೆಂಬ ಹಂಬಲ ಇರುವುದಿಲ್ಲ. ಖ್ಯಾತಿಗಾಗಿ ಹಂಬಲಿಸುವ ಮನಸ್ಸಿರುವುದಿಲ್ಲ. ತಮ್ಮದೇ ಯಾವುದೋ ದಾಖಲೆ ಮುರಿದು ಹೊಸ ಸಾಧನೆ ಮಾಡಿದೆನೆಂದು ಹೇಳಿ ಕೊಳ್ಳುವ ಹಂಬಲವೂ ಇರುವುದಿಲ್ಲ. ಅದು ಕೇವಲ ಆತ್ಮ ಸಂತೋಷಕ್ಕಾಗಿ, ಕಾಲ ವ್ಯರ್ಥ ಮಾಡಬಾರದೆನ್ನುವ ಕಾರಣಕ್ಕಾಗಿ, ಕೆಲವೊಮ್ಮೆ ಇನ್ಯಾರಿಗೋ ಉಪಯೋಗ- ಉಪಕಾರ ಮಾಡಲಿಕ್ಕಾಗಿ ಆಯ್ದುಕೊಳ್ಳುವ ಮರು ವೃತ್ತಿ !

ಅದು ನಿವೃತ್ತರನ್ನು ತುಂಬ ಆರೋಗ್ಯವಾಗಿಡುತ್ತದೆ. ಆದರೆ ಅಂಥದೊಂದು ಮರುವೃತ್ತಿಗೆ ಕಡೇ ಪಕ್ಷ ಎಂಟು ಹತ್ತು ವರ್ಷಗಳಿಗೆ ಮುಂಚೆಯೇ ಸಿದ್ಧತೆ ಪ್ರಾರಂಭಿಸಬೇಕು. ರಿಟೈರಾಗಿ, ಯಾರಿಗೋ ಚಾರ್ಜು ಕೊಟ್ಟು , ಶಾಲು ಹೊದೆಸಿಕೊಂಡು ಮನೆಗೆ ಬಂದ ಮಾರನೆಯ ದಿನ, ‘ಎಲ್ಲಾದರೂ ಕೆಲಸ ಖಾಲಿ ಇದೆಯಾ ' ಅಂತ ಹೊರಡುವುದು ಸೂಕ್ತವಲ್ಲ. ರಿಟೈರಾದ ಆಫೀಸಿನಿಂದ ಹೊಸ ಆಫೀಸಿಗೆ ತಲುಪಿಕೊಳ್ಳುವುದು ಜಾಣತನ. ಸಿನೆಮಾ ರಂಗ ಬಿಟ್ಟು ಮರುದಿನ ತರಕಾರಿ ಅಂಗಡಿ ಆರಂಭಿಸಿದವಳು ಚಿತ್ರ ನಟಿ ನೀತೂ ಸಿಂಗ್‌ ! ಅಂಥದೊಂದು ಬದಲಿ ಹುಡುಕಿಟ್ಟುಕೊಂಡಿರಬೇಕು. ಮಕ್ಕಳು ಪ್ರಯೋಜಕರಾಗಿದ್ದರೆ ಅವರಿಗೆ ಕೊಡೋದು ಕೊಟ್ಟು ನಿರ್ದಯವಾಗಿ ದೂರವಿಡಬೇಕು. ಪುಟ್ಟ ಗೂಡಾದರೂ ಸರಿಯೇ, ನಮ್ಮದು ಅಂತ ಒಂದು ಮನೆ ಮಾಡಿಕೊಂಡಿರಬೇಕು. ಅದರ ಮೇಲಿನ ಸಾಲ ಮುಗಿದಿರಬೇಕು. ನಿವೃತ್ತಿಗೆ ಹತ್ತಿರಾಗುತ್ತಾ ಆಗುತ್ತಾ ವೃತ್ತಿಯೆಡೆಗೆ, ಅದರ ಗತ್ತು- ದವಲತ್ತಿನೆಡೆಗೆ ಒಂದು ಚಿಕ್ಕ ನಿರಾಸಕ್ತಿ ಬೆಳೆಸಿಕೊಳ್ಳುತ್ತಾ ಬರಬೇಕು. ನಿವೃತ್ತಿಯ ನಂತರ ಅಂತಲೇ ಒಂದಷ್ಟು ಗೆಳೆಯರನ್ನು ಆರಿಸಿಟ್ಟುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮೊಂದಿಗಿರುವವರಿಗೂ ‘ಈ ಸಂತೆ ಇಷ್ಟರಲ್ಲೇ ಮುಗಿಯಲಿದೆ' ಎಂಬುದನ್ನು ಮನವರಿಕೆ ಮಾಡಿಕೊಟ್ಟಿರಬೇಕು.

ಇದು ಕೇವಲ ನಿವೃತ್ತಿಗೆ ಕಾಲವಲ್ಲ. ಗೋಲ್ಡನ್‌ ಹ್ಯಾಂಡ್‌ ಷೇಕ್‌ ಮಾಡಿ ವಿ. ಆರ್‌. ಎಸ್‌. ತೆಗೆದುಕೊಳ್ಳುವ ಕಾಲ. ಐವತ್ತು ದಾಟಿದ ಪ್ರತಿಯಾಬ್ಬನಿಗೂ ಇನ್ನೊಂದು ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿರುವಂಥ ಸಮೃದ್ಧ ಕಾಲ. ಆಯ್ಕೆಯಲ್ಲಿ ಇಂಟೆಲಿಜೆಂಟ್‌ ಆಗಿರದೆ ಹೋದರೆ ಮಾತ್ರ, ನೌಕರಿ ಸಿಗದ ಮಗನಿಗಾಗಿ ಕೈಲಿದ್ದ ಪ್ರಾವಿಡೆಂಟ್‌ ಫಂಡಿನ ಹಣವನ್ನೆಲ್ಲ ಸುರಿದು ಅವನಿಗೊಂದು ಮೆಟಡಾರೋ, ಮ್ಯಾಕ್ಸಿ ಕ್ಯಾಬೋ ಕೊಡಿಸಿ ಅದರಲ್ಲಿ ನಷ್ಟವಾಗಿ ಬದುಕಿನ ಸಂಜೆ ದಿನಗಳನ್ನು ದುರ್ಭರ ಮಾಡಿಕೊಳ್ಳುತ್ತಾನೆ ಮನುಷ್ಯ. ಇದ್ದೊಂದು ಮನೆಯನ್ನು ಹೆಣ್ಣು ಮಕ್ಕಳ ಮದುವೆಗೆ ಅಂತ ಮಾರಿ ಅಳಿಯಂದಿರ ಮರ್ಜಿಗೆ ಬೀಳುತ್ತಾನೆ.

ಇದು ನೌಕರಸ್ಥರನ್ನು ಮಾತ್ರ ಕಾಡುವ ಸಮಸ್ಯೆ. ಉಳಿದಂತೆ ರೈತರನ್ನು ನೋಡಿ ? ಪ್ರಾವಿಷನ್‌ ಸ್ಟೋರ್‌ ಇಟ್ಟುಕೊಂಡ ವೃದ್ಧ ಶೆಟ್ಟರನ್ನು ನೋಡಿ ? ಅವರ ಕೈಗಳಲ್ಲಿ ಕಡೆ ತನಕ ನೊಗ, ಬೀಗದ ಕೈ ಇದ್ದೇ ಇರುತ್ತವೆ. ಸಿದ್ಧತೆ ಮಾಡಿಕೊಳ್ಳಬೇಕಾದವರು ನಾವೇ. ತಿಂಗಳ ಕೂಲಿಯ ಜನ, ವಾರಗೂಲಿ, ದಿನಗೂಲಿಯ ಜನ. ಏಕೆಂದರೆ, ನಮ್ಮ ಕೈಗಳಲ್ಲಿ ನೊಗವಿಲ್ಲ. ಬೀಗದ ಕೈ ಇದ್ದರೂ, ತೆಗೆಯೋಣವೆಂದರೆ ಬೀಗ ಹಾಕಿಟ್ಟ ಬೀರುವಾದಲ್ಲಿ ಅಡಗಿಸಿಟ್ಟ ನಿಧಿಯಿಲ್ಲ.

ಎರಡನೇ ವೃತ್ತಿಗೆ ಸಿದ್ಧರಾಗದೇ ದಾರಿ ಎಲ್ಲಿದೆ ?

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Soorya Shikari - Ravi Belagere reader. A Monday column by Ravi, Editor, Hai Bangalore. Editorial note about launching Ravi Belageres column Soorya Shikari
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more