ಬುಗುರಿ , ಕುಂಟೆಬಿಲ್ಲೆ ಬಿಟ್ಟು ಕೊಡದ ಯೂರೋಪು ಎನ್ನುವ ಹಳ್ಳಿ!

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನ ಬಹಳವಾಗಿ ಪ್ರೀತಿಸುತ್ತಾರೆ. ಜಗತ್ತಿನ ಸಕಲ ಒಳ್ಳೆಯದು ನಮ್ಮ ಮಕ್ಕಳಿಗೆ ಸಿಕ್ಕಲಿ ಎನ್ನುವ ಹಂಬಲ ಅವರದು. ಇನ್ನು ಮಕ್ಕಳನ್ನ ಅವರು ಸಂಬೋಧಿಸುವ ರೀತಿಯೂ ಅನನ್ಯ. ಮಕ್ಕಳನ್ನ ಅಕ್ಕರೆಯಿಂದ ಆಸ್ಥೆಯಿಂದ ಬೆಳೆಸುತ್ತಾರೆ. ಕೆಲವರಿಗೆ ಮುಂದಿನ ಹತ್ತು ಅಥವಾ ಇಪ್ಪತ್ತು ವರ್ಷದಲ್ಲಿ ಮಕ್ಕಳೇನಾಗಬೇಕು ಎನ್ನುವ ಪ್ಲಾನಿಂಗ್ ಕೂಡ ಇರುತ್ತದೆ. ಯಾವುದು ಸರಿ? ಯಾವುದು ತಪ್ಪು? ಎನ್ನುವುದನ್ನ ವಿಶ್ಲೇಷಿಸುವುದು ಈ ಬರಹದ ಉದ್ದೇಶವಲ್ಲ.

ಇಪ್ಪತ್ತು ಅಥವಾ ಮೂವತ್ತು ವರ್ಷದ ಹಿಂದಿನ ಭಾರತದಲ್ಲಿ ಅಂದರೆ ನನ್ನ ಬಾಲ್ಯದಲ್ಲಿದ್ದ ಪೋಷಕರ ನಡವಳಿಕೆ ಅದೆಷ್ಟು ಭಿನ್ನವಾಗಿತ್ತು ಎನ್ನುವುದನ್ನ ಮೆಲುಕು ಹಾಕುವುದು. ಬಾರ್ಸಿಲೋನಾ ತಲುಪಿದಾಗ ಅಲ್ಲಿನ ಮಕ್ಕಳ ಲಾಲನೆ , ಪೋಷಣೆಯನ್ನ ಕಂಡಿದ್ದೇನೆ , ಅಲ್ಲಿನ ಪೋಷಕರ ನಡವಳಿಕೆ ಬಗ್ಗೆ ಒಂದಷ್ಟು ಮಾಹಿತಿಯನ್ನ ಹಂಚಿಕೊಳ್ಳುವುದು ಉದ್ದೇಶ. ಬಾರ್ಸಿಲೋನಾ ತಲುಪಿದ ಮೊದಲ ದಿನಗಳ ಬವಣೆಯನ್ನ ಗೆದ್ದು ಆ ನಂತರ ಅಲ್ಲಿನ ಸಮಾಜಕ್ಕೆ ಹೊಂದಿಕೊಂಡಾಗ ಬಹಳಷ್ಟು ವಿಷಯಗಳು ಅಚ್ಚರಿಗೊಳಿಸಿದ್ದವು.

ಅವುಗಳಲ್ಲಿ ಇಲ್ಲಿನ ಜನ ಅವರ ಮಕ್ಕಳನ್ನ ಸಾಕುವ ರೀತಿ ಕೂಡ ಒಂದು. ಇಲ್ಲಿ ಮಕ್ಕಳನ್ನ ಮನೆಯ ಇತರೆ ಸದಸ್ಯರಂತೆ ಕಾಣಲಾಗುತ್ತದೆ . ಅಂದರೆ ಅವರಿಗೆ ಯಾವುದೇ ರೀತಿಯ ವಿಶೇಷ ಸವಲತ್ತು ಇರುವುದಿಲ್ಲ. ಆದರೆ ಭಾರತದಲ್ಲಿ ಮಾತ್ರ ಇಂದಿಗೂ ಮಕ್ಕಳನ್ನ ಮನೆಯ ಇತರೆ ಸದಸ್ಯರಿಗಿಂತ ಹೆಚ್ಚಿನ ಪ್ರೀತಿ ,ಗೌರವ ಮತ್ತು ಸವಲತ್ತು ನೀಡಿ ನಡೆಸಿಕೊಳ್ಳಲಾಗುತ್ತದೆ. ಸಾಲಿನಲ್ಲಿ ಒಬ್ಬ ಎಂದು ನಾವು ನಿಲ್ಲಿಸುವುದಿಲ್ಲ , ಮಗುವನ್ನ ನಾವು ಮನೆಯ ಕೇಂದ್ರ ಬಿಂದು ಮಾಡಿ ನಮ್ಮ ಬದುಕನ್ನ ಅದರ ಸುತ್ತ ಮುತ್ತ ಕಟ್ಟಿಕೊಳ್ಳುತ್ತೇವೆ. ಯೂರೋಪಿಯನ್ನರು ಹಾಗಲ್ಲ ಅವರು ಎಂದಿಗೂ ಸ್ವಸುಖವನ್ನ ಯಾವುದೇ ಕಾರಣಕ್ಕೂ ತ್ಯಾಗ ಮಾಡುವುದಿಲ್ಲ.

Barcelona Memories Column By Rangaswamy Mookanahalli Part 60

ಇಲ್ಲಿ ಮಕ್ಕಳನ್ನ ಆದಷ್ಟು ಬೇಗ ಅಂದರೆ ಐದು ಅಥವಾ ಆರನೇ ವಯಸ್ಸಿನಿಂದ ಸ್ವತಂತ್ರವಾಗಿ ಬದುಕಲು ಬಿಡುತ್ತಾರೆ. ಮೂರು ಅಥವಾ ನಾಲ್ಕನೇ ವಯಸ್ಸಿಗೆ ಅವರನ್ನ ಸ್ವಂತಂತ್ರವಾಗಿ ಮಲಗಲು ಬಿಡುತ್ತಾರೆ. ಅವರಿಗೆ ಪ್ರತ್ಯೇಕ ಕೋಣೆ ಹೊಂದುವುದು ಅವಶ್ಯಕ ಜೊತೆಗೆ ಕಡ್ಡಾಯ ಕೂಡ. ಭಾರತ ಈ ವಿಷಯದಲ್ಲಿ ಬದಲಾಗುತ್ತಿದೆ ಅದ ಕಾರಣ ಇದಮಿತ್ತಂ ಎಂದು ಹೇಳಲು ಬಾರದು ಆದರೂ ಹೆಚ್ಚಿನ ಮನೆಗಳಲ್ಲಿ ಇಂದಿಗೂ ಮಕ್ಕಳು ಹತ್ತು , ಹನ್ನೆರೆಡು ವಯಸ್ಸಿನ ವರೆಗೆ ಪೋಷಕರ ಜೊತೆ ಮಲಗುವುದು ಸಾಮಾನ್ಯ.

ಇತ್ತೀಚಿನ ಭಾರತೀಯ ಪೋಷಕರಲ್ಲಿ ಬಹಳಷ್ಟು ಬದಲಾವಣೆ ಕಂಡು ಬರುತ್ತಿದೆ. ಆದರೆ ಹಿಂದಿನ ಕಾಲದಲ್ಲಿ ಮಕ್ಕಳಿಗೆ ಎಂದು ವಿಶೇಷ ಕೊಠಡಿ ಇರುತ್ತಿದ್ದದು ಅತಿ ವಿರಳ. ಇನ್ನು ಮಕ್ಕಳನ್ನ ಸ್ಲೀಪ್ ಓವರ್ ಅಂದರೆ ಸ್ನೇಹಿತರ ಮನೆಯಲ್ಲಿ ಮಲಗಲು ಕಳಿಸುವುದು ಕೂಡ ಇಲ್ಲಿ ಸಾಮಾನ್ಯ. ಐದಾರು ವಯಸ್ಸಿನ ಮಕ್ಕಳು ಗೆಳೆಯರ ಮನೆಗೆ ಹೋಗುವುದು ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಬದುಕುವುದು ಸಹಜ. ಭಾರತದ ದೊಡ್ಡ ನಗರಗಳಲ್ಲಿ ಮಕ್ಕಳನ್ನ ಕಂಪೌಂಡ್ ನಿಂದ ಹೊರಗೆ ಬಿಡುವುದು ದುಸ್ಸರ ಎನ್ನುವ ಸ್ಥಿತಿ ತಲುಪಿದೆ ಹೀಗಾಗಿ ಇದರ ಬಗ್ಗೆ ಹೆಚ್ಚು ಮಾತನಾಡದಿರುವುದು ಉತ್ತಮ.

ಇದಕ್ಕೆ ಪೂರಕವಾಗಿ ಇನ್ನೊಂದು ವಿಷಯವನ್ನ ಕೂಡ ಪ್ರಸ್ತಾಪಿಸಿಬಿಡುತ್ತೇನೆ , ಇಲ್ಲಿನ ಮಕ್ಕಳು ಇಂದಿಗೂ ಬುಗುರಿ , ಕುಂಟೆಬಿಲ್ಲೆಯಂತಹ ಆಟವನ್ನ ಆಡುತ್ತಾರೆ . ಹೌದು ಬಾರ್ಸಿಲೋನಾ ದಂತಹ ನಗರದಲ್ಲಿ ಕೂಡ ಮಕ್ಕಳು ಇಂದಿಗೂ ಇಂತಹ ಆಟಗಳನ್ನ ಆಡುತ್ತಾರೆ. ಆದರೆ ಭಾರತದಲ್ಲಿ ಅದರಲ್ಲೂ ನಗರ ಪ್ರದೇಶಗಳಲ್ಲಿ ಇಂತಹ ಆಟಗಳ ಸಮಯವನ್ನ ಓದು ಅಥವಾ ಗೆಜೆಟ್ ಗಳು ಕಸಿದು ಬಿಟ್ಟಿವೆ.

ಇಲ್ಲಿ ಆಹಾರ ಪದಾರ್ಥಗಳು ಅತ್ಯಂತ ದುಬಾರಿ ಇರುವ ಕಾರಣ ಮಕ್ಕಳು ಕೊಟ್ಟದ್ದನ್ನ ಬಿಸಾಡದೆ ತಿನ್ನುವ ತಿಳುವಳಿಕೆಯನ್ನ ಎಳವೆಯಿಂದಲೇ ಕಲಿಸುತ್ತಾರೆ. ನಮ್ಮಲ್ಲಿ ಮಾತ್ರ ಆಹಾರ ಪದಾರ್ಥಗಳ ವಿಷಯದಲ್ಲಿ ಅದರಲ್ಲೂ ಮಕ್ಕಳ ವಿಷಯದಲ್ಲಿ ಬಹಳಷ್ಟು ಸಲೀಸಾಗಿ ವರ್ತಿಸುತ್ತೇವೆ. ಅದರಲ್ಲೂ ಕೆಲವರು ಸಭೆ , ಸಮಾರಂಭದಲ್ಲಿ ಮಕ್ಕಳನ್ನ ಊಟಕ್ಕೆ ಕೂರಿಸುತ್ತಾರೆ. ಎಲೆಯಲ್ಲಿ ಬಡಿಸಿದ ತೊಂಬತ್ತು ಪ್ರತಿಶತ ಆಹಾರ ಪೋಲಾಗುತ್ತದೆ. ಇಂತಹ ವಿಷಯದಲ್ಲಿ ಯೂರೋಪಿಯನ್ನರು ಬಹಳ ನಾಜೂಕು. ಸ್ವಲ್ಪ ಆಹಾರ ಕೂಡ ಪೋಲಾಗದಂತೆ ಬಹಳ ಎಚ್ಚರ ವಹಿಸುತ್ತಾರೆ.

ಇದಕ್ಕೆಇಲ್ಲಿನ ಕಾಸ್ಟ್ ಆಫ್ ಲಿವಿಂಗ್ ಬಹಳ ದುಬಾರಿ ಇರುವುದು ಒಂದು ಕಾರಣ. ಒಟ್ಟಿನಲ್ಲಿ ಮಕ್ಕಳಿಗೆ ಚಿಕ್ಕಂದಿಂದ ಊಟದ ಬೆಲೆ ತಿಳಿದಿರುತ್ತದೆ. ನಾವು ಮಕ್ಕಳನ್ನ ತರಹಾವರಿ ಹೆಸರುಗಳಿಂದ ಕರೆದು ಮುದ್ದಿಸುತ್ತೇವೆ ಅಲ್ಲವೇ ? ಇದೆ ರೀತಿ ಯೂರೋಪಿಯನ್ನರಲ್ಲೂ ಮಕ್ಕಳನ್ನ ಮೂಲ ಹೆಸರು ಬಿಟ್ಟು ಇತರೆ ಪ್ರೀತಿಯ ಹೆಸರುಗಳಿಂದ ಕರೆಯುವ ಪರಿಪಾಠವಿದೆ. 'ಮಗಳೇ ' ಎಂದು ನಾವು ಪ್ರೀತಿಯಿಂದ ಕರೆಯುವಂತೆ ಇಲ್ಲಿ ' ಹಿಹಾ ' ಎನ್ನುತ್ತಾರೆ. ಅಂದರೆ ಮಗಳ ಹೆಸರಿಡಿದು ಹೇಗಿದ್ದೀಯ ಎನ್ನುವುದಕ್ಕಿಂತ ಮಗಳೇ ಹೇಗಿದ್ದೀಯ ಎನ್ನುವಂತೆ ಇಲ್ಲಿಯೂ ಯಥಾವತ್ತು ಬಳಕೆಯಲ್ಲಿದೆ.

ಮಗಳನ್ನ ಅಥವಾ ಮಗನ್ನ ' ಬಂಗಾರಿ , ಬಂಗಾರ ' ಎಂದು ಕರೆಯುತ್ತೇವೆ ಅಲ್ಲವೇ ? ಇಲ್ಲಿಯೂ ' ಓರೋ ' ಎಂದು ಕರೆಯುತ್ತಾರೆ. ಮಗಳೇ ನೀನು ನನ್ನ ಪ್ರಾಣ , ಜೀವ ಎನ್ನುವ ಮಾತುಗಳನ್ನ ಕೂಡ ನಾವು ಬಹಳಷ್ಟು ಬಾರಿ ಬಳಸುತ್ತೇವೆ , ಸ್ಪೇನ್ ನಲ್ಲಿ ಕೂಡ ಇದು ಯಥಾರೂಪದಲ್ಲಿ ಬಳಕೆಯಲ್ಲಿದೆ. ' ಹಿಹಾ ತು ಎರೇಸ್ ಮೀ ವಿದಾ ' ಎನ್ನುವ ವಾಕ್ಯವನ್ನ ಬಳಸಲಾಗುತ್ತದೆ. ಭಾಷೆ ಬದಲಾಯಿತು ಆದರೆ ಮಗಳ, ಮಗನ ಮೇಲಿನ ಮಮಕಾರ ಮಾತ್ರ ಇಂಚೂ ಬದಲಾಗಲಿಲ್ಲ. ನಮ್ಮ ಬಂಗಾರ ಇಲ್ಲಿ ಓರೋ ಆಯಿತು , ನನ್ನ ಪ್ರಾಣ , ಜೀವ ಎನ್ನುವುದು ವಿದಾ ಆಯ್ತು.

Barcelona Memories Column By Rangaswamy Mookanahalli Part 60

ಆದರೆ ಮೋಹ , ಪ್ರೀತಿ ಮಾತ್ರ ಸೇಮ್ . ಇದೆಲ್ಲ ಇತ್ತೀಚಿನ ಪೋಷಕರ ಕಥೆಯಾಯ್ತು , ಹಿಂದಿನ ಪೋಷಕರ ಅಂದರೆ ಇಂದಿಗೆ ಮೂವತ್ತು ಅಥವಾ ನಲವತ್ತು ವರ್ಷದ ಹಿಂದಿನ ಪೋಷಕರ ಕಥೆಯೇನು ? ನಿಮಗೆಲ್ಲ ತಿಳಿದಿರಲಿ , ಯೂರೋಪು ಎಂದ ಮಾತ್ರಕ್ಕೆ ಅಲ್ಲಿನ ದೇಶಗಳು ಸದಾ ಇಂದಿನ ನಯ , ನಾಜೋಕು , ಸಿರಿತನವನ್ನ ಹೊಂದಿರಲಿಲ್ಲ . ಅಲ್ಲಿಯೂ ಬವಣೆಯ ಸಾವಿರ , ಲಕ್ಷಗಟ್ಟಲೆ ಕಥೆಯಿದೆ. ಹತ್ತು ಹನ್ನೆರೆಡು ವರ್ಷದ ಬಾಲಕರು ಹೊಟ್ಟೆ ಪಾಡಿಗಾಗಿ ದುಡಿತಕ್ಕೆ ಇಳಿದಿದ್ದ ನಿದರ್ಶನಗಳಿವೆ, ಆದರೆ ಅವೆಲ್ಲವನ್ನ ಮೀರಿ ಅವರು ಸಮಾಜವಾಗಿ ಒಂದು ಹಂತವನ್ನ ತಲುಪಿದ್ದಾರೆ.

ಹಿಂದಿನ ಯೂರೋಪಿನ ಪೋಷಕರ ಸ್ಥಿತಿ , ಭಾರತೀಯ ಪೋಷಕರ ಸ್ಥಿತಿಗಿಂತ ಅತ್ಯಂತ ಉನ್ನತವಾಗೇನೂ ಇರಲಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೆ ದುಡಿತದಲ್ಲಿ ಇರುತ್ತಿದ್ದ ಪೋಷಕರಿಗೆ ಮಕ್ಕಳ ಜೊತೆಗೆ ಸಮಯ ಕಳೆಯುವುದು ಕಷ್ಟವಾಗುತ್ತಿತ್ತು. ಅಜ್ಜನಾದ ಮೇಲೆ ನಾನು ಹೆಚ್ಚಿನ ಆನಂದವನ್ನ ಪಡುತ್ತಿದ್ದೇನೆ ಎನ್ನುವ ಮಾತನ್ನ ನಾನು ಹಲವಾರು ಸ್ಪ್ಯಾನಿಶರ ಬಾಯಲ್ಲಿ ಕೇಳಿದ್ದೇನೆ. ಸಮಾಜ ಬದಲಾಗುತ್ತಿರುತ್ತದೆ , ಸಮಾಜದ ಬದಲಾವಣೆ ಆಗುವುದು ಜನರ ಒಟ್ಟು ಮನಸ್ಥಿತಿಯಿಂದ , ಸಮಾಜದಲ್ಲಿ ಶುರುವಾಗುವ ಹುಚ್ಚು ಓಟದಲ್ಲಿ ಒಮ್ಮೆ ಸಿಕ್ಕಿಕೊಂಡರೆ ಅಲ್ಲಿಗೆ ಮುಗಿಯಿತು , ಅದರಿಂದ ಮುಕ್ತಿಯಿಲ್ಲ .

ಒಂದರ ನಂತರ ಒಂದು ಬೇಕುಗಳ ಗುಡ್ಡ ಬೆಟ್ಟವಾಗುತ್ತ ಸಾಗುತ್ತದೆ. ಇವುಗಳ ಮಧ್ಯ ಬದುಕು ಮಂಕಾಗಿ ಕರಗಿ ಹೋಗುತ್ತದೆ. ಬಾರ್ಸಿಲೋನಾ ನಗರದಲ್ಲಿ ಎರಡು ದಶಕದ ಹಿಂದೆಯೇ ಪೋಷಕರು ಮಕ್ಕಳನ್ನ ನಡೆಸಿಕೊಳ್ಳುತ್ತಿದ್ದ ರೀತಿ ನೋಡಿ ಬೇಡವೆಂದರೂ ನಮ್ಮ ಬಾಲ್ಯ ನೆನಪಾಗುತ್ತಿತ್ತು . ಒಮ್ಮೆ ನನ್ನ ಹಿರಿಯ ಸಹೋದರ ರಾಮ , ಅಪ್ಪನ ಬಳಿ ಹೋಗಿ ಕಾಲಿಗೆ ಶೂಸ್ ಕೊಳ್ಳಬೇಕು ಎಂದು ಹಣವನ್ನ ಕೇಳಿದ್ದಾನೆ , ಅಪ್ಪ ಹಣವನ್ನ ನೀಡಿದ್ದಾರೆ. ರಾಮ ತನ್ನ ಎಲ್ಲಾ ಕೆಲಸವನ್ನ ಮುಗಿಸಿಕೊಂಡು ಸಂಜೆಯ ವೇಳೆಗೆ ಖುಷಿಯಿಂದ ಮನೆಗೆ ಬಂದವನೇ , ಶೂಸ್ ಹಾಕಿಕೊಂಡು ಎಲ್ಲರಿಗೂ ತೋರಿಸುತ್ತಿದ್ದ.

ಅಪ್ಪ ಕೂಡ ಕೆಲಸದಿಂದ ಬಂದಿದ್ದರು , ಇದೇನೋ ರಾಮ , ಶೂಸ್ ಕೊಳ್ಳುತ್ತೇನೆ ಎಂದಿದ್ದೆ , ಇದರ ಜೊತೆಗೆ ಸಾಕ್ಸ್ ಕೂಡ ತಂದಿದ್ದೀಯ ಎಂದರು . ರಾಮ ಜೋಬಿನಿಂದ ಹತ್ತು ರೂಪಾಯಿ ಅಪ್ಪನಿಗೆ ವಾಪಸ್ಸು ನೀಡಿ , ನೀವು ನೂರು ರೂಪಾಯಿ ನೀಡಿದ್ದೀರಿ , ಇದರಲ್ಲಿ ಶೂಸ್ ಜೊತೆಗೆ ಎರಡು ಜೊತೆ ಸಾಕ್ಸ್ ಕೂಡ ತಗೆದುಕೊಂಡು ಹತ್ತು ರೂಪಾಯಿ ಮಿಕ್ಕಿತು ಎಂದ. ಅಪ್ಪ ಕೂಪದಿಂದ ನೀನು ಶೂಸ್ ತೆಗೆದುಕೊಳ್ಳುತ್ತೇನೆ ಎಂದಿದ್ದೆ , ಆದರೆ ಸಾಕ್ಸ್ ಬಗ್ಗೆ ನನಗೆ ಹೇಳಿರಲಿಲ್ಲ ಎಂದರು. ರಾಮನ ಖುಷಿಯೆಲ್ಲಾ ಕ್ಷಣದಲ್ಲಿ ಜರ್ರನೆ ಇಳಿದು ಹೋಗಿತ್ತು .

ಅಪ್ಪನಿಗೆ ಅಂದು ಅದ್ಯಾವ ಸೋಲಾಗಿತ್ತು ? ಬದುಕು ಅವರಿಗೇನು ಪ್ರಶ್ನೆಯಾಕಿತ್ತು ? ಆತನಿಗೆ ಅದ್ಯಾವ ದುಃಖವಿತ್ತು ? ಗೊತ್ತಿಲ್ಲ . ಆದರೆ ನೆನಪಲ್ಲಿ ಉಳಿದಿರುವುದು ಮಾತ್ರ ಅಪ್ಪನ ಲಾಜಿಕ್ ಇಲ್ಲದ ಪ್ರಶ್ನೆ . ಸಾಕ್ಸ್ ಏಕೆ ತೆಗೆದುಕೊಂಡೆ ? ನೀನು ಶೂಸ್ ಕೊಳ್ಳಲು ಮಾತ್ರ ಒಪ್ಪಿಗೆ ಪಡೆದಿದ್ದೆ ಎನ್ನುವುದು . ಸಾಕ್ಸ್ ಇಲ್ಲದೆ ಶೂಸ್ ಹಾಕಿಕೊಳ್ಳುವುದು ಹೇಗೆ ? ಅಪ್ಪ ಎಂದರೆ ಎಂದಿಗೂ ಕಾಂತ ಮತ್ತು ರಾಮನಿಗೆ ಒಂಥರಾ ಭಯ. ಅಪ್ಪನಿಗೆ ಕೊಡಬೇಕಾದ ಗೌರವ ಕೊಟ್ಟು ಎದ್ದು ಹೋದರೆ ಸಾಕು ಎನ್ನುವ ಸಂಬಂಧ.

ನನ್ನದು ಮಾತ್ರ ಅಪ್ಪನೊಂದಿಗೆ ಬೇರೆಯ ಕಥೆ , ಅಪ್ಪ ಬೇಡವೆಂದರೂ ಬಿಡದೆ ಜಗ್ಗಿ ಅವರ ಕಥೆಗಳನ್ನ ಕೇಳುತಿದ್ದೆ , ಇಷ್ಟವಿಲ್ಲದಾಗ ಮುಲಾಜಿಲ್ಲದೆ ಕಿತ್ತಾಡುತ್ತಿದೆ . ನಾನು ಸತ್ತ ಮೇಲೆ ನನ್ನ ಹೆಸರಲ್ಲಿ ತಿಥಿ ಮಾಡಿಕೊಂಡು ವಡೆ ತಿನ್ನುತ್ತೀರಿ , ಇದ್ದಾಗ ನನಗೇಕೆ ಶುಗರ್ ಹೆಸರಿನಲ್ಲಿ ಇಷ್ಟು ಕಟ್ಟುನಿಟ್ಟು ಎಂದಿದ್ದ ಅಪ್ಪನಿಗೆ ಸಾಯುವ ವರೆಗೂ ಪ್ರತಿ ವಾರಾಂತ್ಯ ವಡೆ ತಂದು ಕೊಡುತ್ತಿದೆ. ಪದಗಳಲ್ಲಿ ವರ್ಣಿಸಲಾಗದ ಸಂಬಂಧವದು . ಆದರೆ ಮುಕ್ಕಾಲು ಪಾಲು ಮನೆಗಳಲ್ಲಿ ಅಂದಿನ ದಿನಗಳಲ್ಲಿ ಅಪ್ಪ ಎಂದರೆ ಅವನೊಬ್ಬ ಗುಮ್ಮ.

ಅಮ್ಮ, ಮಕ್ಕಳು ಅವಳ ಮಾತಿಗೆ ಬೆದರದೆ ಇದ್ದಾಗ ' ಅಪ್ಪನಿಗೆ ಹೇಳ್ತಿನಿ ತಾಳು ' ಎಂದು ಹೆದರಿಸಲು ಬೇಕಾದ ಬೆತ್ತಪ್ಪ. ಅವಶ್ಯಕತೆಗಳ ಪೂರೈಸುವ ವ್ಯಕ್ತಿ , ಹಣ ಬೇಕಾದಾಗ ಸಂಪರ್ಕಿಸಬೇಕಾದ ಕೇಂದ್ರ !! ಇವತ್ತಿಗೂ ಭಾರತದ ಹಲವು ಮನೆಗಳಲ್ಲಿ ಈ ಕಥೆ ರಿಪೀಟ್ ಆಗುತ್ತಲೇ ಇರುತ್ತದೆ. ಮಕ್ಕಳನ್ನ ಇನ್ನಿಲ್ಲದೆ ಪ್ರೀತಿಸುವ ಯೂರೋಪಿಯನ್ನರು , ಶಿಸ್ತು ಕೂಡ ಕಲಿಸುತ್ತಾರೆ.ಅವರನ್ನ ಕುಟುಂಬದ ಒಬ್ಬ ಸಾಮಾನ್ಯ ಸದಸ್ಯನಂತೆ ಕಾಣುತ್ತಾರೆ. ಮಕ್ಕಳು ಒಂದು ವಯಸ್ಸನ್ನ ದಾಟಿದ ನಂತರ ಅವರ ಹುಚ್ಚಾಟಗಳಿಗೆ ಹಣವನ್ನ ನೀಡುವುದಿಲ್ಲ.

ಅವರ ಹಣವನ್ನ ಅವರು ಗಳಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತಾರೆ. ಹೆಚ್ಚಿನ ವ್ಯಾಸಂಗಕ್ಕೆ ಕೂಡ ಮನೆ ಒತ್ತೆ ಇಟ್ಟು ಹಣ ಕಳಿಸುವ ಪರಿಪಾಠ ಇಲ್ಲಿಲ್ಲ. ಭಾರತದಲ್ಲಿ ಪೋಷಕರ ಕರ್ತವ್ಯದ ಹೆಸರಿನಲ್ಲಿ ಬಹಳಷ್ಟು ಹಣವನ್ನ ಮಕ್ಕಳಿಗಾಗಿ ವ್ಯಯಿಸುತ್ತಾರೆ. ಕುಟುಂಬ ವ್ಯವಸ್ಥೆಯ ಒಂದು ಕೊಂಡಿ ನಮ್ಮಲ್ಲಿ ಭದ್ರವಾಗಿ ಕಂಡರೆ ಇನ್ನೊಂದರಲ್ಲಿ ಅವರ ರೀತಿ ಸರಿಯೆನಿಸುತ್ತದೆ. ಸರಿ ತಪ್ಪುಗಳ ಮೀರಿ ಅವಲೋಕಿಸಿ ನೋಡಿದರೆ ಬದುಕಿಗೆ ಬ್ಯಾಲೆನ್ಸ್ಡ್ ಅಪ್ಪ್ರೋಚ್ ಬಹಳ ಮುಖ್ಯ ಎನ್ನಿಸುತ್ತದೆ.

ಆದರೆ ಇದೆ ಸಮತೋಲಿತ ರೀತಿ ಎಂದು ಗುರುತಿಸುವ ಬಗೆ ಹೇಗೆ ? ಎನ್ನುವ ಪ್ರಶ್ನೆಗೆ ಉತ್ತರವನ್ನ ಪ್ರತಿ ಕುಟುಂಬವೂ ತಾನೇ ಕಂಡುಕೊಳ್ಳಬೇಕಾದ ಅವಶ್ಯಕೆತೆ ಇದೆ. ಇಷ್ಟೇ ಸರಿ ಎಂದು ಜಗತ್ತಿನ ಎಲ್ಲಾ ಕುಟುಂಬಗಳಿಗೆ ಒಂದು ರೀತಿ ಸೃಷ್ಟಿಸುವುದು ಸಾಧ್ಯವಿಲ್ಲ , ಸಾಧುವೂ ಅಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+