ಕರ್ನಾಟಕದ ಈ ಹಳ್ಳಿ ಹುಡುಗಿಯ ಬ್ಯಾಂಕ್ ಬ್ಯಾಲೆನ್ಸ್ ಕೇಳಿದ್ರೆ ತಿಂಗಳಿಗೆ ಇಷ್ಟೊಂದು ಸಂಪಾದನೆಯಾ ಅಂತೀರಾ
ಗ್ರಾಮೀಣ ಭಾರತದ ಮಹಿಳೆಯರು ಮನಸ್ಸು ಮಾಡಿದರೆ ಎಂತಹ ಅದ್ಭುತ ಸೃಷ್ಟಿಸಬಹುದು ಎಂಬುದಕ್ಕೆ ಆಂಧ್ರಪ್ರದೇಶದ 'ಶ್ರೀಜಾ ಮಹಿಳಾ ಹಾಲಿನ ಸಂಸ್ಥೆ'ಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಕೇವಲ ಒಂದು ದಶಕದ ಹಿಂದೆ ಅತ್ಯಂತ ಸಣ್ಣ ಮಟ್ಟದಲ್ಲಿ ಆರಂಭವಾದ ಈ ಡೈರಿ ಉದ್ಯಮ, ಇಂದು ಸಾವಿರಾರು ಹಳ್ಳಿಗಳ ಹೆಣ್ಣುಮಕ್ಕಳನ್ನು 'ಲಕ್ಷಾಧಿಪತಿ'ಗಳನ್ನಾಗಿ ಮಾಡಿದೆ. ಹೈನುಗಾರಿಕೆಯಲ್ಲಿ ಕ್ರಾಂತಿ ಸೃಷ್ಟಿಸಿ, ಕಾರ್ಪೊರೇಟ್ ಜಗತ್ತೇ ಬೆರಗಾಗುವಂತೆ ಬೆಳೆದು ನಿಂತಿರುವ ಈ ಮಹಿಳಾ ಸಾಮ್ರಾಜ್ಯದ ರೋಚಕ ಕಥೆ ಇಲ್ಲಿದೆ.
ವಿಶ್ವದ ಅತಿ ದೊಡ್ಡ ಮಹಿಳಾ ಸ್ವಾಮ್ಯದ ಡೈರಿ ಸಂಸ್ಥೆಯಾದ 'ಶ್ರೀಜಾ ಮಹಿಳಾ ಹಾಲು ಉತ್ಪಾದಕರ ಕಂಪನಿ' ಗ್ರಾಮೀಣ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯಾದ 'ಲಖ್ಪತಿ ದೀದಿ' (ವರ್ಷಕ್ಕೆ 1 ಲಕ್ಷ ರೂ.ಗಿಂತ ಅಧಿಕ ಆದಾಯ ಗಳಿಸುವ ಗ್ರಾಮೀಣ ಮಹಿಳೆಯರು) ಯೋಜನೆಯಡಿ, ಈ ಸಂಸ್ಥೆಯು ಈಗಾಗಲೇ ತನ್ನ 29,000 ಮಹಿಳಾ ಸದಸ್ಯರನ್ನು ಲಕ್ಷಾದಿಪತಿಗಳನ್ನಾಗಿ ಮಾಡಿದೆ. ಈಗ ಇವರ ಮುಂದಿನ ಗುರಿ ಕೋಟ್ಯಾಧಿಪತಿಗಳನ್ನು ಸೃಷ್ಟಿಸುವುದಾಗಿದೆ.

ಯಶೋಗಾಥೆಯ ಪ್ರಮುಖ ನಾಯಕಿಯರು
ಜಿ.ಚರಿತಾ (ಕರ್ನಾಟಕ): ದಕ್ಷಿಣ ಕರ್ನಾಟಕದ ಡೆಬ್ಬನಹಳ್ಳಿ ಗ್ರಾಮದ ಚರಿತಾ ಅವರು ಶ್ರೀಜಾ ಸಂಸ್ಥೆಯಲ್ಲೇ ಅತ್ಯಧಿಕ ಆದಾಯ ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಬಳಿ 70 ಹಸುಗಳಿದ್ದು, ಇವರ ಅಡಿಯಲ್ಲಿ 15 ಜನ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಹಾಲಿನ ಮಾರಾಟದಿಂದಲೇ ಇವರು ಬರೋಬ್ಬರಿ 48 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ.
ಜೆ. ನಾಗ ಜ್ಯೋತಿ (ಆಂಧ್ರಪ್ರದೇಶ): ಚಿತ್ತೂರು ಜಿಲ್ಲೆಯ ಗರಿಗಚಿನ್ನೆಪಲ್ಲಿಯ ನಾಗ ಜ್ಯೋತಿ ಅವರು 23 ಹಸುಗಳನ್ನು ಸಾಕುತ್ತಿದ್ದಾರೆ. ಕಳೆದ ವರ್ಷ ಇವರ ಹಾಲಿನ ಬಿಲ್ 28.3 ಲಕ್ಷ ರೂಪಾಯಿ ದಾಟಿದೆ. ಇವರ ಸಾಧನೆಯನ್ನು ಗುರುತಿಸಿ ಇಂಡಿಯನ್ ಡೈರಿ ಅಸೋಸಿಯೇಷನ್ (ಐಡಿಎ) ಆಂಧ್ರಪ್ರದೇಶ ಘಟಕವು ಇವರಿಗೆ "ಬೆಸ್ಟ್ ವುಮನ್ ಡೈರಿ ಫಾರ್ಮರ್ 2025" ಪ್ರಶಸ್ತಿ ನೀಡಿ ಗೌರವಿಸಿದೆ.
27 ಮಹಿಳೆಯರಿಂದ 1.4 ಲಕ್ಷ ಸದಸ್ಯರು
ತಿರುಮಲ ಬೆಟ್ಟದ ತಪ್ಪಲಿನಲ್ಲಿ 2014ರಲ್ಲಿ ಕೇವಲ 27 ಮಹಿಳೆಯರು ಒಟ್ಟಾಗಿ ಹಾಲು ಸಂಗ್ರಹಿಸುವ ಮೂಲಕ ಈ ಸಹಕಾರಿ ಸಂಸ್ಥೆಯನ್ನು ಆರಂಭಿಸಿದ್ದರು. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ ಬೆಂಬಲದೊಂದಿಗೆ ಆರಂಭವಾದ ಈ ಸಂಸ್ಥೆ ಇಂದು ದಕ್ಷಿಣ ಭಾರತದ 4 ರಾಜ್ಯಗಳ 5,000 ಹಳ್ಳಿಗಳಿಗೆ ವ್ಯಾಪಿಸಿದೆ. ಪ್ರಸ್ತುತ 1.4 ಲಕ್ಷಕ್ಕೂ ಹೆಚ್ಚು ಮಹಿಳಾ ಹೈನುಗಾರರು ಇದರ ಸಕ್ರಿಯ ಸದಸ್ಯರಾಗಿದ್ದಾರೆ. ಸಾಮಾನ್ಯವಾಗಿ ಡೈರಿ ಉದ್ಯಮದಲ್ಲಿ ಲಾಭದ ಪ್ರಮಾಣ ಕಡಿಮೆ ಇರುತ್ತದೆ ಎನ್ನಲಾಗುತ್ತದೆ. ಆದರೆ ಶ್ರೀಜಾ ಸಂಸ್ಥೆಯ ಈ 29,000 ಲಕ್ಷಾದಿಪತಿ ಮಹಿಳೆಯರು ಕಳೆದ ಹಣಕಾಸು ವರ್ಷದಲ್ಲಿ ಒಟ್ಟಾರೆಯಾಗಿ 694 ಕೋಟಿ ರೂಪಾಯಿ ಆದಾಯವನ್ನು ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಇವರ ಈ ಸಾಧನೆಯನ್ನು ಕೇಂದ್ರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಎಸ್.ಪಿ.ಸಿಂಗ್ ಬಘೇಲ್ ಕೂಡ ರಾಷ್ಟ್ರಮಟ್ಟದಲ್ಲಿ ಶ್ಲಾಘಿಸಿದ್ದಾರೆ.
₹280 ಕೋಟಿ ವೆಚ್ಚದ ಬೃಹತ್ ಪ್ಲಾಂಟ್
ತನ್ನ ಉದ್ಯಮವನ್ನು ಮತ್ತಷ್ಟು ವಿಸ್ತರಿಸಲು ಶ್ರೀಜಾ ಸಂಸ್ಥೆಯು ಆಂಧ್ರಪ್ರದೇಶದ ಕುಪ್ಪಂ ಕ್ಷೇತ್ರದಲ್ಲಿ ಹೊಸ ಇಂಟಿಗ್ರೇಟೆಡ್ ಡೈರಿ ಮತ್ತು ಜಾನುವಾರು ಆಹಾರ ಉತ್ಪಾದನಾ ಘಟಕವನ್ನು ಸ್ಥಾಪಿಸುತ್ತಿದೆ. ಆಂಧ್ರ ಸರ್ಕಾರ ನೀಡಿರುವ 47 ಎಕರೆ ಜಾಗದಲ್ಲಿ 280 ಕೋಟಿ ರೂಪಾಯಿ ಬೃಹತ್ ಹೂಡಿಕೆಯೊಂದಿಗೆ ಈ ಪ್ಲಾಂಟ್ ತಲೆಯೆತ್ತುತ್ತಿದ್ದು, ಎನ್‌ಡಿಡಿಬಿ ಇದರ ಉಸ್ತುವಾರಿ ವಹಿಸಿಕೊಂಡಿದೆ.
ಶ್ರೀಜಾ ಸಂಸ್ಥೆಯು ಸದ್ಯಕ್ಕೆ ಪ್ರತಿದಿನ ಸುಮಾರು 6 ಲಕ್ಷ ಲೀಟರ್ ಹಾಲನ್ನು ನವದೆಹಲಿಯ 'ಮದರ್ ಡೈರಿ'ಗೆ ಪೂರೈಸುತ್ತಿದೆ. ಕುಪ್ಪಂನಲ್ಲಿ ಹೊಸ ಪ್ಲಾಂಟ್ ಕಾರ್ಯಾರಂಭ ಮಾಡಿದ ನಂತರ, ನಾವು ಸ್ವತಃ ಹಾಲಿನ ಪುಡಿ, ಬೆಣ್ಣೆ ಮತ್ತು ತುಪ್ಪವನ್ನು ತಯಾರಿಸಲಿದ್ದೇವೆ. ಇದರೊಂದಿಗೆ ಪ್ರತಿದಿನ 200 ಮೆಟ್ರಿಕ್ ಟನ್ ಜಾನುವಾರು ಆಹಾರವನ್ನು ಉತ್ಪಾದಿಸುವ ಗುರಿ ಹೊಂದಿದ್ದೇವೆ ಎಂದು ಶ್ರೀಜಾ ಸಂಸ್ಥೆಯ ಸಿಇಒ ಎಸ್.ಆರ್.ತಿಮ್ಮಪ್ಪ ಹೇಳಿದ್ದಾರೆ.
ಮುಂದಿನ ಎರಡು ವರ್ಷಗಳಲ್ಲಿ ಮತ್ತೊಂದು ಲಕ್ಷ ಮಹಿಳೆಯರನ್ನು 'ಲಖ್ಪತಿ ದಿದಿ' ವ್ಯಾಪ್ತಿಗೆ ತರಲು ಸಂಸ್ಥೆ ಶ್ರಮಿಸುತ್ತಿದೆ. ಇದರ ಜೊತೆಗೆ, ಹಾಲಿನ ಸಂಗ್ರಹಣೆಯ ಮಾರುಕಟ್ಟೆಯನ್ನು ವೈವಿಧ್ಯಗೊಳಿಸುವ ಮೂಲಕ ಮತ್ತು ಮಹಿಳೆಯರಿಗೆ ಸುಲಭ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮೀಣ ಭಾಗದಲ್ಲೇ 'ಕೋಟ್ಯಾಧಿಪತಿ ಮಹಿಳಾ ಹೈನುಗಾರರನ್ನು' ಸೃಷ್ಟಿಸುವುದು ಶ್ರೀಜಾ ಸಂಸ್ಥೆಯ ಮುಂದಿನ ಗುರಿಯಾಗಿದೆ.













Click it and Unblock the Notifications