• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಣದ ಮೌಲ್ಯ ತಿಳಿಯಬೇಕಾದರೆ ಪರಿಶ್ರಮ ಮೀರಿದ ಸವಲತ್ತು ನೀಡಬಾರದು !

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಬಾರ್ಸಿಲೋನಾಗೆ ಬಂದ ಹೊಸತರಲ್ಲಿ ನನಗೆ ಅಚ್ಚರಿ ಗೊಳಿಸಿದ ಅನೇಕ ವಿಷಯಗಳಲ್ಲಿ ಇಲ್ಲಿನವರು ಮದುವೆ ಎನ್ನುವ ಕಾರ್ಯಕ್ರಮವನ್ನು ಮಾಡುವ ರೀತಿಯೂ ಒಂದು. ಈ ಮಾತನ್ನ ಹೇಳಲು ಕಾರಣ ಬಹುತೇಕ ಇಲ್ಲಿನ ಮದುವೆಗಳು ನೂರು ಜನರಿಗಿಂತ ಕಡಿಮೆ ಸಂಖ್ಯೆಯಲ್ಲಿ ಸಂಪನ್ನಗೊಳ್ಳುತ್ತವೆ. ಮದುವೆ ಎನ್ನುವುದು ತೀರಾ ಖಾಸಗಿ ವಿಷಯ ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.

ಇಲ್ಲಿನ ಮದುವೆಗಳ ವಿಶೇಷತೆ ಏನೆಂದರೆ ನಮ್ಮ ಬೇಕು ಬೇಡಗಳನ್ನ ನಾವು ಮೊದಲೇ ತಿಳಿಸಬಹುದು , ಅಂದರೆ ನಮಗೆ ಶುಂಠಿ ಅಲರ್ಜಿ ಇದ್ದರೆ , ಅಥವಾ ನಟ್ಸ್ ಹಾಕಿದ ಪದಾರ್ಥ ಇಷ್ಟವಿರದಿದ್ದರೆ , ಪೂರ್ಣ ಸಸ್ಯಾಹಾರಿಯಾಗಿದ್ದರೆ , ಹೀಗೆ ನಮ್ಮ ಊಟದ ವಿಷಯದಲ್ಲಿ ಬೇಕು ಬೇಡಗಳ ಪಟ್ಟಿಯನ್ನ ಸಲ್ಲಿಸಬಹುದು. ಮದುವೆಗೆ ಹೋದಾಗ ನಿಮ್ಮ ಟೇಬಲ್ ನಂಬರ್ ನಿಮಗೆ ತಿಳಿಸಲಾಗುತ್ತದೆ. ಟೇಬಲ್ ಬಳಿಗೆ ಹೋದರೆ ಅಲ್ಲಿ ಹೆಸರು ಸಮೇತ ಒಂದು ಮೆನು ಕಾರ್ಡ್ ಇಟ್ಟಿರುತ್ತಾರೆ.

ಸಮೂಹ ಸನ್ನಿಗೆ ಸಿಲುಕುವುದು ಜನ ಸಾಮಾನ್ಯನ ಸಾಮಾನ್ಯ ಗುಣ! ಸಮೂಹ ಸನ್ನಿಗೆ ಸಿಲುಕುವುದು ಜನ ಸಾಮಾನ್ಯನ ಸಾಮಾನ್ಯ ಗುಣ!

ಅಲ್ಲಿ ನಾವು ಹೇಳಿದ ಬೇಕುಬೇಡಗಳನ್ನ ಗಮನದಲ್ಲಿರಿಸಿ ಕೊಂಡು ತಯಾರಿಸಲಾಗದ ಖಾದ್ಯಗಳ ಆಯ್ಕೆಯನ್ನು ನೀಡಲಾಗಿರುತ್ತದೆ. ಇದು ನನಗೆ ಬಹಳ ಇಷ್ಟವಾದ ವಿಷಯ. ಅಂತೆಯೇ ಮದುಮಕ್ಕಳಿಗೆ ನವಜೀವನಕ್ಕೆ ಬೇಕಾಗುವ ವಸ್ತುಗಳ ಪಟ್ಟಿಯನ್ನ ತಯಾರಿಸಿ ಇಟ್ಟಿರುತ್ತಾರೆ. ಕೈಲಾದ ಮಟ್ಟಿಗೆ ಅವುಗಳನ್ನ ಕೊಳ್ಳಲು ನಾವು ದೇಣಿಗೆಯನ್ನ ಉಡುಗೊರೆ ರೂಪದಲ್ಲಿ ನೀಡಬಹುದು. ಇಲ್ಲವೇ ಯಾವುದೇ ದೊಡ್ಡ ಸೂಪರ್ ಮಾರ್ಕೆಟ್ ನಲ್ಲಿ ರಿಡೀಮ್ ಮಾಡಿಕೊಳ್ಳಬಹುದಾದ ಗಿಫ್ಟ್ ವೊಚರ್ ಕೂಡ ಉಡುಗೊರೆಯಾಗಿ ನೀಡಬಹುದು.

ಎಲ್ಲಕ್ಕಿಂತ ಆಶ್ಚರ್ಯ ಅನ್ನಿಸುವುದು ಇವರು ಮದುವೆಗೆ ಕರೆಯುವ ಜನರ ಪಟ್ಟಿಯನ್ನ ಹೇಗೆ ಅಷ್ಟು ಕಡಿಮೆ ಸಂಖ್ಯೆಗೆ ಇಳಿಸುತ್ತಾರೆ ಎನ್ನುವುದು. ನಮ್ಮಲ್ಲಿ ನೋಡಿ ಮದುವೆ ಎನ್ನುವುದು ಖಾಸಗಿ ವಿಷಯವಲ್ಲ , ಅದು ಎಲ್ಲರಿಗೂ ಸೇರಿದ್ದು. ಮನೆಗೆ ನಿತ್ಯವೂ ಹೂವು , ಪೇಪರ್ ಹಾಕುವ ಹಡುಗನಿಂದ ಹಿಡಿದು , ರಸ್ತೆ ಬದಿಯ ತರಕಾರಿ ವ್ಯಾಪಾರಿಯನ್ನ ಕೂಡ ನಾವು ಬಿಡದೆ ಮದುವೆಗೆ ಕರೆಯುತ್ತೇವೆ. ಸಮಾಜದಲ್ಲಿ ಒಂದಷ್ಟು ಗುರುತಿಸಿ ಕೊಂಡ ವ್ಯಕ್ತಿತ್ವ ನಿಮ್ಮದಾಗಿದ್ದರೆ ಇದರ ಕಥೆ ಇನ್ನೂ ಹೆಚ್ಚು !

ಮದುವೆ ಎಂದರೆ ಸಾವಿರಾರು ಜನರು ಸೇರುತ್ತಾರೆ. ಅಪ್ಪಿತಪ್ಪಿ ಯಾರನ್ನಾದರೂ ಕರೆಯುವುದು ಮರೆತು ಹೋದರೆ ಅದು ದೊಡ್ಡ ರಾದ್ದಂತವಾಗುತ್ತದೆ. ತೀರಾ ಇತ್ತೀಚಿನವರೆಗೆ ಅಂದರೆ ಈ ಕೊರೊನಾ ವೈರಸ್ ಬಂದು ನಾವು ಬದುಕುವ ರೀತಿಯನ್ನ ಬದಲಿಸುವವರೆಗೆ ಮದುವೆ ಮುಂತಾದ ಶುಭ ಸಮಾರಂಭಗಳಿಗೆ ಬಂಧು ಮತ್ತು ಮಿತ್ರರನ್ನ ಕರೆಯುವ ಕೆಲಸ ವಿದೆಯಲ್ಲ ಅದಕ್ಕಿಂತ ಕಷ್ಟದ ಕೆಲಸ ಏನಿರಲು ಸಾಧ್ಯವಿತ್ತು ನೀವೇ ಹೇಳಿ ?

ಬೆಂಗಳೂರು ನಗರದ ಟ್ರಾಫಿಕ್ ನಲ್ಲಿ ಸರ್ಕಸ್ ಮಾಡುತ್ತಾ , ದಿನದಲ್ಲಿ ಐದಾರು ಮನೆಯನ್ನ ಕರೆದು ಅದನ್ನ ದೊಡ್ಡ ಸಾಧನೆ ಎನ್ನುವಂತೆ ಬಿಂಬಿಸಿ ಕೊಳ್ಳುತ್ತಿದೆವು ನೆನಪಿದೆಯೇ ? ಅಂತೂ ಇಂತೂ ಕೊರೊನಾ ವೈರಸ್ ಇಂತಹ ಹುಚ್ಚಾಟಗಳಿಗೆ ಒಂದಷ್ಟು ಕಡಿವಾಣ ಹಾಕಿದೆ. ವಾಟ್ಸಪ್ ನಲ್ಲಿ ಸಂದೇಶ ಕಳುಹಿಸಿ ಫೋನ್ ಮಾಡಿದರೆ , ಅವನೇನು ಮನೆಗೆ ಬಂದು ಕರೆದಿದ್ದಾನೆಯೇ ? ಎಂದು ಮೂಗು ಮುರಿಯುತ್ತಿದ್ದ ಒಂದು ತಲೆಮಾರಿನ ಜನ ಕೂಡ ಈಗ ವಾಟ್ಸಪ್ ಸಂದೇಶವನ್ನೇ ಒಪ್ಪಿಕೊಳ್ಳುವ ಮಟ್ಟಕ್ಕೆ ಬದಲಾಗಿದ್ದಾರೆ. ಅಂದಹಾಗೆ ಜನರ ಸಂಖ್ಯೆಯ ದೃಷ್ಟಿಯಿಂದಲೂ ಸಮಾರಂಭಗಳಲ್ಲಿ ಜನರ ಸಂಖ್ಯೆ ಕಡಿಮೆಯಾಗಿದೆ.

ಸ್ಪ್ಯಾನಿಷ್ ಜನತೆಯ ಬದುಕನ್ನೇ ಬದಲಾಯಿಸಿದ ಆ ಒಂದು ಗಂಟೆ !ಸ್ಪ್ಯಾನಿಷ್ ಜನತೆಯ ಬದುಕನ್ನೇ ಬದಲಾಯಿಸಿದ ಆ ಒಂದು ಗಂಟೆ !

ಯೂರೋಪಿನ ಯುವ ಜನತೆಯಲ್ಲಿ ತಮ್ಮ ಮದುವೆಯ ಬಗ್ಗೆ ಸ್ಪಷ್ಟ ಕಲ್ಪನೆಯಿದೆ. ಏಕೆಂದರೆ ಮುಕ್ಕಾಲು ಪಾಲು ನವ ಜೋಡಿಗಳು ತಮ್ಮ ಮದುವೆಯ ಖರ್ಚನ್ನ ತಾವೇ ಭರಿಸುತ್ತಾರೆ. ಹುಡುಗ ಮತ್ತು ಹುಡುಗಿಯ ಅಪ್ಪ/ಅಮ್ಮ ಒಂದಷ್ಟು ಹಣ ಸಹಾಯ ಮಾಡಿದರೆ ಅದು ಬಹುದೊಡ್ಡ ಉಪಕಾರ ಎನ್ನುವಂತೆ ಮಕ್ಕಳು ಭಾವಿಸುತ್ತಾರೆ. ಹೀಗಾಗಿ ಅವರ ಮದುವೆಗೆ ಯಾರು ಬರೆಬೇಕು ಎನ್ನುವ ನಿರ್ಧಾರವನ್ನ ಕೂಡ ಅವರೇ ಮಾಡುತ್ತಾರೆ.

ಮುಕ್ಕಾಲು ಪಾಲು ತೀರಾ ಫಸ್ಟ್ ಸರ್ಕಲ್ ಬಂಧುಗಳನ್ನ ಮಾತ್ರ ಮದುವೆಗೆ ಕರೆಯುತ್ತಾರೆ, ಉಳಿದಂತೆ ತಮ್ಮ ಸದ್ಯದ ದೈನಂದಿನ ಜೀವನದಲ್ಲಿ ಯಾರು ಹಾಸುಹೊಕ್ಕಿರುತ್ತಾರೆ ಅವರನ್ನ ಮಾತ್ರ ಆಹ್ವಾನಿಸಿಸುತ್ತಾರೆ. ಹೀಗಾಗಿ ಇವರ ಆಹ್ವಾನಿತರ ಸಂಖ್ಯೆ ಕಡಿಮೆಯಿರುತ್ತದೆ. ಹೆಣ್ಣು ಹೆತ್ತವರು ಎಲ್ಲಾ ಖರ್ಚನ್ನ ಹೊರುವ ನಮ್ಮ ಸಂಪ್ರದಾಯ ನನ್ನ ಮಟ್ಟಿಗೆ ಸರಿಕಾಣದ ವಿಷಯ.

ಇಲ್ಲಿ ಮಕ್ಕಳನ್ನ ಕೂಡ ಚಿಕ್ಕಂದಿನಿಂದ ಬಹಳ ಇಂಡಿಪೆಂಡೆಂಟ್ ಆಗಿ ಸಾಕುತ್ತಾರೆ. ಪೋಷಕರು ಯಾವುದೇ ಮುಲಾಜಿಲ್ಲದೆ ಇದು ನಾವು ಕಷ್ಟ ಪಟ್ಟ ಹಣ , ನಾವು ಗಳಿಸಿದ್ದು ಹೀಗಾಗಿ ಬದುಕಲು ಬೇಕಾಗುವ ಬೇಸಿಕ್ ಸವಲತ್ತು ನೀಡುತ್ತೇವೆ , ಐಷಾರಾಮ ಬೇಕಿದ್ದರೆ ದುಡಿಯಲು ಶುರು ಮಾಡು ಎನ್ನುವ ಮಾತನ್ನ ಮುಲಾಜಿಲ್ಲದೆ ಹೇಳುತ್ತಾರೆ. ಪೋಷಕರು ಏನಾದರೂ ಹೆಚ್ಚಿನ ಹಣ ಅಥವಾ ಉಡುಗೊರೆ ಕೊಟ್ಟರೆ ಅದನ್ನ ಸೌಭಾಗ್ಯವೆಂದು ಮಕ್ಕಳು ಭಾವಿಸುತ್ತಾರೆ.

ಮೈಸೂರು ದಸರಾ-ಬಾರ್ಸಿಲೋನಾದ ಕ್ರಿಸ್ಮಸ್; ದೀಪದ ಜಾತಿ ಒಂದೇ !!ಮೈಸೂರು ದಸರಾ-ಬಾರ್ಸಿಲೋನಾದ ಕ್ರಿಸ್ಮಸ್; ದೀಪದ ಜಾತಿ ಒಂದೇ !!

ನನ್ನ ಗ್ರಾಹಕರೊಬ್ಬರು ಅವರ ಮಗನನ್ನ ಬೇಸಿಗೆ ರಜಾ ಸಮಯದಲ್ಲಿ ಅಲ್ಮೇಸೇನ್ (ಗೋಡೌನ್ ) ನಲ್ಲಿ ವಸ್ತುಗಳನ್ನ ಲೋಡ್ ಮತ್ತು ಆನ್ ಲೋಡ್ ಮಾಡುವ ಕೆಲಸಕ್ಕೆ ಹಾಕಿದ್ದರು. ನನಗೆ ಅವರ ಮಗನ ಪರಿಚಯವಿತ್ತು. ಅಲ್ಲದೆ ಬೆಳಿಗ್ಗೆ ಮಗನನ್ನ ಅವರೇ ಕರೆದುಕೊಂಡು ಬಂದು ಡ್ರಾಪ್ ಮಾಡಿ ಮುಂದಿನ ಅವರ ಕೆಲಸಕ್ಕೆ ಹೋಗುತ್ತಿದ್ದರು. ಅತ್ಯಂತ ಐಷಾರಾಮಿ ಕಾರಿನಲ್ಲಿ ಬರುತ್ತಿದ್ದ ಅವರು ಹೇಳುತ್ತಿದ್ದ ಮಾತು ನನ್ನ ಕಿವಿಯಲ್ಲಿ ಇಂದಿಗೂ ಗುಯ್ ಗುಡುತ್ತಿದೆ. ' ಅವರದಲ್ಲದ ಪರಿಶ್ರಮಕ್ಕೆ ಅವರಿಗೆ ಅತಿ ಹೆಚ್ಚು ಸವಲತ್ತು ಸಿಕ್ಕರೆ ಅವರಿಗೆ ಅದರ ಮೌಲ್ಯ ತಿಳಿಯುವುದಿಲ್ಲ ' ಎನ್ನುವುದು ಆ ಮಾತು.

ನಿಮಗೆಲ್ಲ ನೆನಪಿರಲಿ ನಾವು ಸಾಮಾನ್ಯವಾಗಿ ಸಮಾಜ ಸರಿಯಿಲ್ಲ ಜನರು ಸರಿಯಿಲ್ಲ ಎನ್ನುವ ಮಾತುಗಳನ್ನ ಆಡುತ್ತೇವೆ . ಆದರೆ ಈ ಸಮಾಜ ಎಂದರೆ ಯಾರು ? ಜನ ಎಂದರೆ ಯಾರು ? ನಾವೇ ಅಲ್ಲವೇ ? ಈ ಸಾಮಾನ್ಯ ಜ್ಞಾನವನ್ನ ಮರೆತು ಬಿಡುತ್ತವೆ. ಸಮಾಜದಲ್ಲಿ ಒಳಿತೂ ಅಥವಾ ಕೆಡುಕೋ ಒಮ್ಮೆ ಚಾಲನೆ ಸಿಕ್ಕರೆ ಜನ ಅದನ್ನ ಕಣ್ಣುಮುಚ್ಚಿ ಅನುಸರಿಸುತ್ತಾರೆ.ಇಲ್ಲಿನ ಮುಕ್ಕಾಲು ಪಾಲು ಪೋಷಕರು ತಮ್ಮ ಮಕ್ಕಳ ಬಗ್ಗೆ , ಹಣದ ಬಗ್ಗೆ , ನೀಡುವ ಸೌಕರ್ಯಗಳ ಬಗ್ಗೆ ಇದೆ ನಿಲುವನ್ನ ಹೊಂದಿದ್ದಾರೆ. ಒಟ್ಟಿನಲ್ಲಿ ಸಮಾಜ ಅಥವಾ ದೇಶ ಎಂದರೆ ಒಟ್ಟು ಆ ದೇಶದ ಜನರ ಕಲೆಕ್ಟಿವ್ ಮನಸ್ಥಿತಿ ಅಲ್ಲವೇ ?

ಇದು ಕೇವಲ ಮದುವೆಯ ವಿಚಾರಕ್ಕೆ ಮಾತ್ರ ಸೀಮಿತವಲ್ಲ , ಹೆಚ್ಚಿನ ವ್ಯಾಸಂಗದ ವಿಷಯ ಬಂದಾಗ ಮತ್ತು ಅದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇದ್ದರೆ ಅಲ್ಲಿಯೂ ಈ ನಿಯಮ ಚಾಲೂ ಆಗುತ್ತದೆ. ಮದುವೆಗೆ ಮುನ್ನ ಒಂದಾಗಿ ಬಾಳುವ ಲಕ್ಷಾಂತರ ಜೋಡಿಗಳಲ್ಲೂ ಇದೆ ರೀತಿಯ ಹೊಂದಾವಣಿಕೆಯನ್ನ ನಾವು ಕಾಣಬಹುದು. ಅಂದರೆ ಊಟಕ್ಕೆ ಒಟ್ಟಾಗಿ ಹೋದರೆ ಒಮ್ಮೆ ಹುಡುಗ ಕೊಟ್ಟರೆ , ಒಮ್ಮೆ ಹುಡುಗಿ ಬಿಲ್ ಪಾವತಿ ಮಾಡುತ್ತಾರೆ. ಬಹಳಷ್ಟು ವೇಳೆ ಅವತ್ತಿನ ವಿಷಯ ಅವತ್ತಿಗೆ ಮುಗಿಯಲಿ ಎನ್ನುವ ಮನೋಭಾವದವರನ್ನ ಇಲ್ಲಿನ ಸಮಾಜದಲ್ಲಿ ಕಾಣಬಹುದು.

ಅಂದರೆ ಒಟ್ಟು ಎಷ್ಟು ಬಿಲ್ ಆಗಿರುತ್ತದೆ ಅದನ್ನ ಸಮವಾಗಿ ಹಂಚಿಕೊಳ್ಳುವುದು. ಇದು ಕೇವಲ ಲಿವಿಂಗ್ ಟುಗೆದರ್ ನಲ್ಲಿರುವ ಜೋಡಿಗಳು ಪಾಲಿಸುವ ರೀತಿ ಎಂದು ಕೊಂಡರೆ ಅದು ತಪ್ಪು , ಸ್ಪೇನ್ ಮತ್ತು ಬಹುಪಾಲು ಯೂರೋಪಿನಲ್ಲಿ ಇದೆ ವ್ಯವಸ್ಥೆ , ಸ್ನೇಹಿತರು , ಬಂಧುಗಳು ಮತ್ತು ಮಿತ್ರರು ಜೊತೆಯಲ್ಲಿ ತಿನ್ನಲು ಹೋದರೆ ಆಗ ಬಿಲ್ ಸಮವಾಗಿ ಎಷ್ಟು ಜನರಿರುತ್ತಾರೆ ಅವರಿಗೆ ಡಿವೈಡ್ ಮಾಡಲಾಗುತ್ತದೆ. ಇಲ್ಲಿ ನಾಳೆಗೆ ಮನಸ್ಸಿನಲ್ಲಿ ಯಾವುದೇ ಕಹಿಯನ್ನ ಉಳಿಸಿಕೊಳ್ಳುವುದಿಲ್ಲ. ಮದುವೆಗೂ ಅಷ್ಟೇ ಇಷ್ಟವಿಲ್ಲದ ಬಂಧುವನ್ನ ಕರೆಯುವ ಬಾಬತ್ತು ಇಲ್ಲಿಲ್ಲ.

ನಮ್ಮಲ್ಲಿ ಮಾತ್ರ ಈ ವಿಷಯದಲ್ಲಿ ನಾವಿನ್ನು ಮಾಗಬೇಕಿದೆ. ಅವರನ್ನ ಕರೆದು ಇವರನ್ನ ಬಿಟ್ಟರೆ ಹೇಗೆ ? ಅವರು ಏನೆಂದು ಕೊಂಡಾರು ? ಈ ಎಲ್ಲ ವಿಷಯಗಳಲ್ಲಿ ನಮ್ಮ ಚಿಂತನೆಯಿನ್ನೂ ಪಕ್ವವಾಗಬೇಕಿದೆ. ಬರುವ ದಿನಗಳಲ್ಲಿ ನಾವು ಕೂಡ ಯೂರೋಪಿಯನ್ನರಂತೆ ಆಗುತ್ತೇವೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಏಕೆಂದರೆ ಇಂದು ನಾವೆಲ್ಲಾ ಬದುಕನ್ನ ಕಟ್ಟಿಕೊಳ್ಳುವ ಭರದಲ್ಲಿ ಬಹಳಷ್ಟು ದೂರದ ಜಾಗಗಳಿಗೆ ವಲಸೆ ಹೋಗಿದ್ದೇವೆ.

ಹೀಗಾಗಿ ಸಮಾರಂಭಗಳಿಗೆ ಕರೆದರೂ ಬರುವ ವ್ಯವಧಾನ ಬಂಧುಗಳಿಗೆ ಉಳಿದಿಲ್ಲ. ಅಲ್ಲದೆ ಭಾರತ ಈ ಹಿಂದಿನಂತೆ ಕಡಿಮೆ ಖರ್ಚಿನ ದೇಶವಾಗಿ ಉಳಿದಿಲ್ಲ. ಈಗ ಇಲ್ಲಿಯೂ ಕೂಡ ತಲೆ ಅಥವಾ ಪ್ಲೇಟ್ ಲೆಕ್ಕಾಚಾರದ ಮೇಲೆ ಊಟದ ಲೆಕ್ಕ ಹಾಕುತ್ತಾರೆ. ಹೀಗಾಗಿ ರಸ್ತೆ ಬದಿಯ ಹೂವು ಮಾರುವ ಪರಿಚಯದ ಮಹಿಳೆಯನ್ನ ಕರೆಯುವ ಮುನ್ನ ಜನ ಚಿಂತಿಸುವಂತಾಗಿದೆ. ಕರೆದ ಮಾತ್ರಕ್ಕೆ ಸೈ ಎಂದು ಹೋಗುವರ ಸಂಖ್ಯೆ ಕೂಡ ಗಣನೀಯವಾಗಿ ಕುಸಿತ ಕಂಡಿದೆ. ಐನೂರು ರೂಪಾಯಿ ಎನ್ನುವುದು ನೂರು ರೂಪಾಯಿ ಮೌಲ್ಯಕ್ಕೆ ಕುಸಿದಿರುವುದು ಇದಕ್ಕೆ ಕಾರಣವಿರಬಹುದು.

ಬಹಳಷ್ಟು ಜನ ಕರೋನವನ್ನ ಗುರಾಣಿಯಂತೆ ಬಳಸಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಸಮಾರಂಭವನ್ನ ಮುಗಿಸುತ್ತಿದ್ದಾರೆ. ಎಲ್ಲರನ್ನೂ ಕರೆದು ವಾಹ್ ಎನ್ನಿಸಿಕೊಳ್ಳಬೇಕು ಎನ್ನುವ ಹಂಬಲ ಮತ್ತು ಹಣದ ಬೆಂಬಲ ವಿರುವ ಕೆಲವರಿಗೆ ಮಾತ್ರ ಇದರಿಂದ ಬೇಸರವಾಗಿರುವುದು ಕೂಡ ಸತ್ಯ. ಯೂರೋಪಿನ ಜನರಂತೆ ಭಾರತದ ಜನರೂ ಕೂಡ ಈ ವಿಷಯದಲ್ಲಿ ಇನ್ನೊಂದು ಐದಾರು ವರ್ಷದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರೆ. ಕೇವಲ ಹೆಣ್ಣು ಹೆತ್ತವರ ತಲೆಯ ಮೇಲೆ ಖರ್ಚಿನ ಭಾರ ಹಾಕುವ ಪರಿಪಾಠ ಹೋಗಲಿ ನೋಡಿ ಆಗ ಬದಲಾವಣೆ ತಾನಾಗೇ ಆಗುತ್ತದೆ.

ಅಲ್ಲದೆ ಹೊಸ ತಲೆಮಾರಿನ ಹುಡುಗರು ತಾವು ನೋಡಿರದ , ಮುಂದಿನ ಬದುಕಿನಲ್ಲಿ ಎಂದೂ ವ್ಯವಹರಿಸದ , ಮಾತುಕತೆಯನ್ನ ಕೂಡ ಇಟ್ಟುಕೊಳ್ಳಲಾಗದ ಜನರನ್ನ ಸುಮ್ಮನೆ ಕರೆಯುವುದನ್ನ ಕಡಿಮೆ ಮಾಡುತ್ತಾ ಹೋಗುತ್ತಾರೆ. ತಮ್ಮ ಅಂದಿನ ಜೀವನದಲ್ಲಿ ಪ್ರಸ್ತುತರಾದವರನ್ನ ಮಾತ್ರ ಕರೆಯುವ ಹೊಸ ಪದ್ಧತಿ ಶುರುವಾಗುತ್ತದೆ. ಅಲ್ಲದೆ ಇನ್ನೊಂದು ಮುಖ್ಯವಾದ ವಿಷಯವನ್ನ ಕೂಡ ನಾವು ಗಮನದಲ್ಲಿ ಇರಿಸಿಕೊಳ್ಳಬೇಕು , ಮದುವೆಗೆ ಅಥವಾ ಸಮಾರಂಭಕ್ಕೆ ಕರೆಯಲಿಲ್ಲ ಎಂದ ಮಾತ್ರಕ್ಕೆ ಅವರು ನಮ್ಮ ಜೀವನಕ್ಕೆ ಬೇಡವೆಂದಲ್ಲ, ಆ ಸಮಾರಂಭಕ್ಕೆ ಅವರ ಹಾಜರಾತಿ ಮುಖ್ಯವಲ್ಲ ಎನ್ನುವುದಷ್ಟೆ ಅರ್ಥ.

ಇದೊಂದು ಸೂಕ್ಷ್ಮ ವಿಷಯ. ಈ ವಿಷಯದಲ್ಲಿ ಅಮೆರಿಕನ್ನರು , ಯೂರೋಪಿಯನ್ನರು ಒಂದು ಸುತ್ತು ಬಂದಿದ್ದಾರೆ. ಭಾರತೀಯರಾದ ನಾವು ಮಾತ್ರ ಈ ಸೂಕ್ಷ್ಮಗಳನ್ನ ಅರ್ಥ ಮಾಡಿಕೊಳ್ಳುವುದು ಬಾಕಿಯಿದೆ. ಎಲ್ಲವನ್ನೂ ಭಾವಾವೇಶದಿಂದ ನೋಡುವ ನಾವು ಸಮಾರಂಭಕ್ಕೆ ಕರೆಯಲಿಲ್ಲ ಎನ್ನುವುದನ್ನ ಅಷ್ಟೊಂದು ಈಸಿ ಯಾಗಿ ಹೇಗೆ ತೆಗೆದುಕೊಂಡೆವು ಅಲ್ಲವೇ ? ಆಹಾರ ಪದ್ದತಿಗಳು ಹೇಗೆ ಜಾಗತೀಕರಣಕ್ಕೆ ಸಿಕ್ಕಿ ಬದಲಾಯಿತೋ ಹಾಗೆಯೇ ವಿಚಾರಗಳು ಕೂಡ ಬದಲಾವಣೆ ಕಾಣುತ್ತವೆ.

ಕೆಲವೊಮ್ಮೆ ಬದಲಾವಣೆ ಒಳಿತಿಗೋ ಅಥವಾ ಕೆಡುಕಿಗೂ ಎನ್ನುವ ಪ್ರಶ್ನೆ ಉದ್ಭವಾಗುತ್ತದೆ. ಇವೆಲ್ಲವನ್ನ ಮೀರಿ ಸಮಾಜ ತನ್ನ ದಾರಿಯನ್ನ ಹುಡುಕಿಕೊಳ್ಳುತ್ತದೆ. ಸಮಯ ಕಳೆದಂತೆ ಬಾರ್ಸಿಲೋನಾ -ಬೆಂಗಳೂರು ಕೇವಲ ಭೌಗೋಳಿಕ ವ್ಯತ್ಯಾಸಗಳು ಮಾತ್ರ ಉಳಿದುಕೊಳ್ಳುತ್ತದೆ.

English summary
Barcelona Memories Column By Rangaswamy Mookanahalli Part 55,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X