ಮೈಸೂರು ದಸರಾ-ಬಾರ್ಸಿಲೋನಾದ ಕ್ರಿಸ್ಮಸ್; ದೀಪದ ಜಾತಿ ಒಂದೇ !!

ನಿನ್ನೆ ಕಟ್ಟಿದ ಮೂಗಿಗೆ ಬಿಡುಗಡೆ ಕೊಡಿಸಲು ಮಾತ್ರೆ ತರಲು ಮೆಡಿಕಲ್ ಶಾಪಿಗೆ ಹೋಗಿದ್ದೆ , ಆ ಮೆಡಿಕಲ್ ಶಾಪಿನ ಓನರ್ ರಾಜಸ್ಥಾನಿ , ಮಾರ್ವಾಡಿ ಜನ , ಇಬ್ಬರು ದೊಡ್ಡವರು ಇಬ್ಬರು 18 ವರ್ಷಕ್ಕೂ ಕಡಿಮೆ ವಯಸ್ಸಿನ ಹುಡುಗರು ಸದಾ ಅಂಗಡಿಯಲ್ಲಿ ಇರುತ್ತಾರೆ . ನಾಲ್ಕನೆ ಕ್ಲಾಸು ಪಾಸಾಗದ ಅವರು ಯಾರದೋ ಸರ್ಟಿಫಿಕೇಟ್ ಎರವಲು ಪಡೆದು ಅಂಗಡಿ ತೆಗೆದು ವ್ಯಾಪಾರ ನಡೆಸುತ್ತಾರೆ , ಸಾವಿರಕ್ಕೋ ಎರಡು ಸಾವಿರಕ್ಕೂ ತಮ್ಮ ಸರ್ಟಿಫಿಕೇಟ್ ಎರವಲು ನೀಡುವ ಜನರಿರುವವರಗೆ ಕೊಳ್ಳುವರು ಇರುತ್ತಾರೆ .

ಇದು ಭಾರತದ ಎಲ್ಲಾ ನಗರದ ಕಥೆ. ಈ ವಿಷಯ ಕೂಡ ಹೊಸತಲ್ಲ , ಎಲ್ಲರಿಗೂ ಗೊತ್ತಿದೆ. ಇದರರ್ಥ ಸಮಾಜ ಪೂರ್ತಿ ಒಂದಾಗಿ ಈ ಕುಕೃತ್ಯದಲ್ಲಿ ಭಾಗಿಯಾಗಿದೆ ಎಂದಲ್ಲವೇ ? ನಮ್ಮದು ಎಲ್ಲಕ್ಕೂ ಜಡ್ಡುಗಟ್ಟಿದ ಮನಸ್ಥಿತಿ. ನಮಗೇನು ಎನ್ನುವ ಮನೋಭಾವ. ಮನೆಯ ಮುಂದಿನ ಕಸವನ್ನ ತೆಗೆದು ಪಕ್ಕದ ಮನೆಯವನ ಮುಂದೆ ದೂಡಿಬಿಟ್ಟರೆ ಅಲ್ಲಿಗೆ ಗೆದ್ದ ಭಾವ ! ಕಸ ನಮ್ಮ ಮನೆಯ ಮುಂದಿಲ್ಲವಲ್ಲ !!

ಸ್ವಲ್ಪ ನಿಧಾನಿಸಿ ನನ್ನ ಉದ್ದೇಶ ನನ್ನ ದೇಶವನ್ನ ತೆಗಳುವುದಲ್ಲ , ಅಲ್ಲದೆ ಮೆಡಿಕಲ್ ವಲಯದ ಕುರಿತು ಅಸಮಾಧಾನ ಹೊರಹಾಕುವುದು ಅಲ್ಲ. ಏಕೆಂದರೆ ಇದು ಕೇವಲ ಮೆಡಿಕಲ್ ಅಂತಲ್ಲ , ಯಾವುದೇ ಕಾರ್ಯ ಕ್ಷೇತ್ರವನ್ನ ನೀವು ತೆಗೆದುಕೊಳ್ಳಿ ಅಲ್ಲೆಲ್ಲ ಇಂತಹ ದೃಶ್ಯಗಳು , ಸನ್ನಿವೇಶಗಳು ಸಾಮಾನ್ಯ. ಇದು ಬೇಸರದ ವಿಷಯ , ಅದೆಷ್ಟು ಬೇಸರದ ವಿಷಯವೆಂದರೆ ಅದರ ಕುರಿತು ಮಾತನಾಡಲು ಕೂಡ ಬೇಸರಿಸಿಕೊಳ್ಳುವಷ್ಟು , ಇರಲಿ .

Barcelona Memories Column By Rangaswamy Mookanahalli Part 52

ಸ್ಪೇನ್ ದೇಶದಲ್ಲಿ ಭ್ರಷ್ಟಾಚಾರ ಇಲ್ಲವೆಂದಲ್ಲ , ಅಲ್ಲಿನ ಜನರು , ರಾಜಕಾರಿಣಿಗಳು ಎಲ್ಲರೂ ನಮ್ಮಂತೆ ಮನುಷ್ಯರೇ ಅಲ್ಲವೇ ? ಅವರಲ್ಲೂ ಕಾಮ ಕ್ರೋಧ , ಮದ , ಮತ್ಸರ ಎಲ್ಲವೂ ತುಂಬಿದೆ. ಆದರೆ ಭಾರತದಲ್ಲಿ ಭ್ರಷ್ಟಾಚಾರ ಎನ್ನುವುದು ಸಾಮಾನ್ಯ ಕೊನೆಯ ಪ್ರಜೆಯನ್ನ ಕೂಡ ಬಿಡುವುದಿಲ್ಲ. ಅದು ಆತನನ್ನ ಕೂಡ ಬೆಸೆಯುತ್ತದೆ . ಸ್ಪೇನ್ ನಲ್ಲಿ ಹೀಗಿಲ್ಲ. ಜನ ಸಾಮಾನ್ಯರ ಮಟ್ಟದಲ್ಲಿ ಭ್ರಷ್ಟಾಚಾರ ಕಾಣುವುದು ತೀರಾ ಅಪರೂಪ , ಇಲ್ಲವೆಂದೇ ಹೇಳಬಹುದು.

ಇಲ್ಲೇನಿದ್ದರೂ ಇದು ದೊಡ್ಡ ಮಟ್ಟದಲ್ಲಿ , ರಾಜಕಾರಿಣಿಗಳ ಮಟ್ಟದಲ್ಲಿ ಸದ್ದುಗದ್ದಲವಿಲ್ಲದೆ ನಡೆದು ಹೋಗುತ್ತದೆ. ನಮ್ಮಲ್ಲಿ ಎಡ , ಬಲ ಹೇಗೆ ಸೆಣೆಸಾಡುತ್ತದೆ ಥೇಟ್ ಅದೇ ರೀತಿಯಲ್ಲಿ ಸೋಷಿಯಲಿಸ್ಟ್ ಮತ್ತು ಡೆಮೊಕ್ರಟಿಕ್ಸ್ ನಡುವೆ ಕಿತ್ತಾಟವಾಗುತ್ತದೆ. ಇವುಗಳ ಮಧ್ಯೆ ಪ್ರಾದೇಶಿಕತೆಗೆ ಒತ್ತು ಕೊಡುವ ಅಲ್ಟ್ರಾ ಎಕ್ಸ್ಟ್ರೀಮ್ ವಿಂಗ್ ಗಳು ಕೂಡ ಬಹಳಷ್ಟಿವೆ. ಒಟ್ಟಿನಲ್ಲಿ ಭಾರತ ಎಂದಲ್ಲ ಜಗತ್ತು ಒಡೆದ ಮನೆ.

ಭಾರತದಲ್ಲಿ ಔಷಧಿಯಂತಹ ಅತ್ಯಂತ ಸೂಕ್ಷ್ಮ ವಸ್ತುವನ್ನ ಅದರ ಬಗ್ಗೆ ವ್ಯಾಸಂಗ ಮಾಡಿರದ ಜನ ಮಾರಬಹುದು , ಅದು ಸಾಮಾನ್ಯ ಎನ್ನುವಂತಾಗಿದೆ . ನಿಮಗೆಲ್ಲಾ ಆಶ್ಚರ್ಯ ಎನ್ನಿಸಬಹುದು ಇಲ್ಲಿ ಕಸ ಗುಡಿಸಲು ಕೂಡ ಒಂದು ತರಬೇತಿ , ಒಂದು ಸರ್ಟಿಫಿಕೇಟ್ ನೀಡಲಾಗುತ್ತದೆ. ಅದಕ್ಕೆ ಕುರ್ಸೊ ದೆ ಲಿಂಪಿಯೆಸ ಎನ್ನುತ್ತಾರೆ. ಇನ್ನು ಇಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಅತ್ಯಂತ ಕಷ್ಟದ ಕೆಲಸ. ಸ್ವಲ್ಪ ಜನ 3/6 ತಿಂಗಳಲ್ಲಿ ಮುಗಿಸಿದರೆ , ಬಹಳಷ್ಟು ಜನ ಎರಡು ಮೂರು ಅಥವಾ ಅದಕ್ಕೂ ಹೆಚ್ಚು ಬಾರಿ ಪರೀಕ್ಷೆ ತೆಗೆದುಕೊಂಡು ನಂತರ ಅದರಲ್ಲಿ ಉತ್ತೀರ್ಣ ರಾಗುತ್ತಾರೆ.

ಕೆಲವೊಬ್ಬರು ಎರಡು ವರ್ಷ ಕೂಡ ವ್ಯಯಿಸಿದ ಉದಾಹರಣೆ ನಾನೇ ಕಣ್ಣಾರೆ ಕಂಡಿದ್ದೇನೆ. ಎಲ್ಲಕ್ಕೂ ಹೆಚ್ಚು ನನಗೆ ಕಿರಿಕಿರಿ ಎನ್ನಿಸಿದ್ದು ಕಾರಿನ ಬಾಗಿಲು ಹೇಗೆ ನಿಂತು ತೆಗೆಯಬೇಕು ಎನ್ನುವುದನ್ನ ಕೂಡ ಮಾಡಿ ತೋರಿಸಿ ಮತ್ತೆ ಅದನ್ನ ನಮಗೆ ಮಾಡಲು ಹೇಳುವುದು. ಇಲ್ಲಿನ ಜನರದ್ದು ತೀರಾ ಮೆಥಾಡಿಕಲ್ ಮನಸ್ಥಿತಿ , ತಮಗೆ ವಹಿಸಿದ ಕೆಲಸವನ್ನ ಒಂದು ಚೂರು ಕೂಡ ಡೀವಿಯೇಟ್ ಮಾಡಲು ಹೋಗುವುದಿಲ್ಲ.

Barcelona Memories Column By Rangaswamy Mookanahalli Part 52

ಅದು ಕೆಲವೊಮ್ಮೆ ನಮ್ಮಂತವರಿಗೆ ಕಿರಿ ಕಿರಿ ಎನ್ನಿಸುವುದು ಸಹಜ, ಆದರೆ ಅವರು ಒಮ್ಮೆ ಹಾಕಿಕೊಟ್ಟ ಪ್ರೋಸೆಸ್ ಯಾವುದೇ ಕಾರಣಕ್ಕೂ ಮುರಿಯುವುದಿಲ್ಲ. ಅಲ್ಲಿದ್ದಾಗ ಇದು ಇರಿಸುಮುರಿಸು ಉಂಟುಮಾಡಿದ್ದು ಸತ್ಯ. ಆದರೆ ಭಾರತಕ್ಕೆ ಬಂದ ನಂತರ ಇಲ್ಲಿನ ವ್ಯವಸ್ಥೆ ಕಂಡಾಗ ಸ್ಪ್ಯಾನಿಷ್ ಕೆಲಸದ ರೀತಿ ನೀತಿಗಳು ಇಷ್ಟವಾಗುತ್ತಿದೆ. ನಮ್ಮಲ್ಲಿ ಮಾರ್ಜಿನ್ ಆಫ್ ಎರರ್ 96 ಪ್ರತಿಶತ ಎಂದರೆ ನೀವು ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತೀರಿ , ಆದರೆ ಇದು ನಿಜ.

ಇಷ್ಟೊಂದು ದೊಡ್ಡ ದೇಶ , ಇಷ್ಟು ದೊಡ್ಡ ಜನಸಂಖ್ಯೆಯನ್ನ ಇಟ್ಟು ಕೊಂಡು ಕೂಡ ನಾವು ವಿಶ್ವ ಮಟ್ಟದಲ್ಲಿ ಇಂದಿಗೂ ಎಮೆರ್ಜಿಂಗ್ ಮಾರ್ಕೆಟ್ ಎನ್ನುವ ಹಣೆಪಟ್ಟಿ ಹೊತ್ತುಕೊಂಡಿರಲು ಪ್ರಮುಖ ಕಾರಣ ನಮ್ಮಲ್ಲಿರುವ ' ಚಲ್ತಾ ಹೈ ' ಎನ್ನುವ ಉಡಾಫೆ ಮನೋಭಾವ. ಈ ವಿಷಯದಲ್ಲಿ ಸ್ಪ್ಯಾನಿಷ್ ಜನರು ಬಹಳ ಶಿಸ್ತು. ತಮಗೆ ಒಪ್ಪಿತವಲ್ಲದ ಕಾನೂನು ಅಥವಾ ಇನ್ಯಾವುದೇ ವಿಧೇಯಕವಿದ್ದರೆ ಮುಲಾಜಿಲ್ಲದೆ ಅದನ್ನ ವಿರೋಧಿಸಿ ಬೀದಿಗೆ ಇಳಿಯುತ್ತಾರೆ. ಸರಕಾರದ ಬೆವರು ಇಳಿಸುತ್ತಾರೆ. ಅಷ್ಟರಮಟ್ಟಿಗೆ ತಮ್ಮ ಬೇಕುಬೇಡಗಳನ್ನ ಕಾಪಾಡಿಕೊಳ್ಳುವ ಜಾಣತನ ಇವರಲ್ಲಿದೆ. ಯುವ ಜನತೆ ಕೂಡ ಇಂತಹ ಧರಣಿಗಳಲ್ಲಿ ಭಾಗವಹಿಸುತ್ತಾರೆ.

ಇಸವಿ ಸರಿಯಾಗಿ ನೆನಪಿಲ್ಲ , ಅದು ಮುಖ್ಯವೂ ಅಲ್ಲ ಬಿಡಿ , ಸ್ಪೇನ್ ನ ಅಂದಿನ ರಾಜನ ಮಗಳು ಮತ್ತು ಅಳಿಯ ಭ್ರಷ್ಟಾಚಾರದ ಕೇಸಿನಲ್ಲಿ ತಪ್ಪಿತಸ್ಥರು ಎಂದು ಹೇಳಲಾಗಿತ್ತು. ರಾಜ ಮುಲಾಜಿಲ್ಲದೆ ಮಗಳನ್ನ ತನ್ನ ಅರಮನೆಯಿಂದ ಹೊರಹಾಕಿದ್ದ. ಆಕೆ ಬಾರ್ಸಿಲೋನಾ ಬಿಟ್ಟು ಸ್ವಿಟ್ಸರ್ಲ್ಯಾಂಡ್ ಗೆ ವಲಸೆ ಹೋದರು. ಗಂಡ ಮಾತು ಮಕ್ಕಳ ಜೊತೆಯಲ್ಲಿ ಆಕೆ ಇಂದಿಗೂ ಅಲ್ಲಿಯೇ ನೆಲೆ ನಿಂತಿದ್ದಾರೆ. ರಾಜ ಮನೆತನದವರು ಎನ್ನುವ ಕಾರಣಕ್ಕೆ ಅಲ್ಲಿನ ಯಾವುದೋ ಒಂದು ಬ್ಯಾಂಕು ಕೆಲಸ ಕೊಟ್ಟಿದೆ.

ಹೀಗಾಗಿ ಅವರ ಐಷಾರಾಮಿ ಜೀವನಕ್ಕೆ ಕಡಿವಾಣವೇನೂ ಬೀಳಲಿಲ್ಲ , ಆದರೆ ಆಕೆ ದೇಶವನ್ನ ಬಿಡುವ ಮಟ್ಟಿನ ಜನಾಗ್ರಹವಂತೂ ಇತ್ತು. ನಮ್ಮಲ್ಲಿ ಅಂದರೆ ಭಾರತೀಯರಲ್ಲಿ ಇದರ ಕೊರತೆ ಬಹಳ ಹೆಚ್ಚು. ನಮಗೆ ಭಗತ್ ಸಿಂಗ ಬೇಕು , ಸುಭಾಷ್ ಚಂದ್ರ ಭೋಸರು ಬೇಕು , ಸಾವರ್ಕರ್ ಬೇಕು ಆದರೆ ಅದು ನಾವಾಗಲು ಅಥವಾ ನಮ್ಮ ಮನೆ ಮಕ್ಕಳು ಆಗಲು ಮಾತ್ರ ಬಯಸುವುದಿಲ್ಲ. ಎಲ್ಲಿಯವರೆಗೆ ನಮ್ಮಲ್ಲಿ ಈ ಸೋಗಲಾಡಿತನ ಹೋಗುವುದಿಲ್ಲ ಅಲ್ಲಿಯ ವರೆಗೆ ನಾವು ಜಾಗತಿಕ ಮಟ್ಟದಲ್ಲಿ ನಾಯಕನ ಸ್ಥಾನ ಪಡೆಯಲು ಸಾಧ್ಯವಿಲ್ಲ.

ನಮ್ಮ ನಡುವಿನ ಅಂತರಗಳ ಪಟ್ಟಿ ಜಾಸ್ತಿ ಆಯ್ತು , ಹೀಗಾಗಿ ಲೇಖನವನ್ನ ಧನಾತ್ಮಕವಾಗೆ ಮುಗಿಸೋಣ. ನಮ್ಮನ್ನ ಒಡೆಯುವ ಶಕ್ತಿಗಳು ನೂರಿದ್ದರೆ , ನಮ್ಮನ್ನ ಬೆಸೆಯುವ ಶಕ್ತಿಗಳು ಸಾವಿರವಿರುತ್ತವೆ. ಮೈಸೂರು ದಸರಾ ವಿಶ್ವವಿಖ್ಯಾತಿ. ಇಲ್ಲಿನ ನಗರದ ಎಲ್ಲಾ ಪ್ರಮುಖ ರಸ್ತೆಗಳನ್ನ ಕೂಡ ದೀಪದಿಂದ ಅಲಂಕಾರ ಮಾಡಲಾಗಿದೆ. ಅದಕ್ಕೆ ಇರಬೇಕು ಮೈಸೂರು ದಸರಾ ಎಷ್ಟೊಂದು ಸುಂದರ ಎಂದಿರಬೇಕು. ನಗರದ ವಿವಿಧ ಭಾಗಗಳಲ್ಲಿ ಬಹಳ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಸಾಯಂಕಾಲ ಆಗುವುದನ್ನ ಜನತೆ ಕಾಯುತ್ತಿರುತ್ತಾರೆ.

ಇಡೀ ನಗರ ನವವಧುವಿನಂತೆ ಶೃಂಗಾರಗೊಂಡು ನಿಂತಿರುತ್ತದೆ. ಕೇವಲ ಮೈಸೂರು ಮಾತ್ರವಲ್ಲ , ಕರ್ನಾಟಕ ಮಾತ್ರವಲ್ಲ , ಭಾರತದ ವಿವಿಧ ರಾಜ್ಯಗಳಿಂದ , ಜಗತ್ತಿನ ಬಹಳಷ್ಟು ದೇಶಗಳಿಂದ ಮೈಸೂರು ದಸರಾ ನೋಡಲು ಜನರು ಬರುತ್ತಾರೆ. ಮೈಸೂರು ವರ್ಷದ ಇತರ ದಿನಗಳಲ್ಲಿ ಕಾಣದ ಸಡಗರದ ಜೊತೆಗೆ ಜನಸಾಗರವನ್ನ ಕೂಡ ಕಾಣುತ್ತದೆ. ಈ ವರ್ಷ ಕೂಡ ಕಳೆದೆರೆಡು ವರ್ಷದಂತೆ ಕೊರೊನಾ ಕಾರಣ ಸರಳ ದಸರಾ ಆಚರಣೆಯನ್ನ ಘೋಷಿಸಲಾಗಿದೆ. ಆದರೂ ಇದು ಸರಳ ಎಂದರೆ ವಿಜೃಂಭಣೆ ಎಂದರೆ ಹೇಗಿರಬಹುದು ಎಂದು ಮೈಸೂರಿಗೆ ಹೊಸಬನಾದ ನನ್ನಂತಹ ಹಲವರು ಪ್ರಶ್ನಿಸುವಂತೆ ದಸರಾ ಮಹೋತ್ಸವ ನಡೆಯುತ್ತಿದೆ .

ಬಾರ್ಸಿಲೋನಾ ದಲ್ಲಿ ಒಂದೂವರೆ ದಶಕಕ್ಕೂ ಹೆಚ್ಚಿನ ವರ್ಷದ ಬದುಕಿನಲ್ಲಿ ಥೇಟ್ ಇದೆ ಸಂಭ್ರವನ್ನ ನಾನು ಕ್ರಿಸ್ಮಸ್ ಹಬ್ಬದಲ್ಲಿ ಕಂಡಿದ್ದೇನೆ. ಬಾರ್ಸಿಲೋನಾ ನಗರದ ಎಲ್ಲಾ ಪ್ರಮುಖ ರಸ್ತೆಗಳನ್ನೂ ದೀಪದಿಂದ ಅಲಂಕಾರ ಮಾಡಲಾಗುತ್ತದೆ. ಕ್ರಿಸ್ಮಸ್ ಹಬ್ಬಕ್ಕೆ ಒಂದೆರೆಡು ತಿಂಗಳು ಮುಂಚಿನಿಂದಲೇ ರಸ್ತೆಗೆ ಎಲೆಕ್ಟ್ರಿಕ್ ದೀಪವನ್ನ ಕಟ್ಟುವ ಕೆಲಸದಲ್ಲಿ ಇಲ್ಲಿನ ಮುನಿಸಿಪಾಲಿಟಿ ಜನ ಶುರು ಮಾಡಿರುತ್ತಾರೆ.

ಹಾಗೆ ನೋಡಲು ಹೋದರೆ ಬಾರ್ಸಿಲೋನಾ ಒಂದು ನಗರವಲ್ಲ , ಸ್ಪೇನ್ ನ ಎಲ್ಲಾ ನಗರಗಳೂ ಕೂಡ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಹೀಗೆ ಇರುತ್ತದೆ. ಸತ್ಯ ಹೇಳಬೇಕಂದರೆ ಪೂರ್ಣ ಯೂರೋಪು ಹಬ್ಬದ ವಾತಾವರಣದಲ್ಲಿ ಮಿಂದೇಳುತ್ತದೆ. ಎಲ್ಲೆಡೆಯೂ ದೀಪದ್ದೆ ಅಬ್ಬರ. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ದೇಶಗಳಲ್ಲಿ ಕೂಡ ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ದೀಪಾಲಂಕಾರ ಮಾಡುವುದು ಸಾಮಾನ್ಯವಾಗಿದೆ.

ಹಬ್ಬದ ಸಮಯದಲ್ಲಿ ವ್ಯಾಪಾರ ಕೂಡ ಎಲ್ಲೆಡೆ ಜೋರು. ಮನುಷ್ಯ ಮೂಲದಲ್ಲಿ ಉಂಡುಟ್ಟು ಖುಷಿಯಾಗಿರಬೇಕು , ಅದು ಬಾರ್ಸಿಲೋನಾ ದಲ್ಲಿ ಜೀವಿಸುವ ವ್ಯಕ್ತಿಯಿರಬಹದು ಅಥವಾ ಮೈಸೂರಿನಲ್ಲಿ , ಅಥವಾ ಸೌದಿ ಅರೇಬಿಯಾದಲ್ಲಿ , ಹೀಗಾಗಿ ಹಬ್ಬ ಎನ್ನುವುದು ಖುಷಿ ಪಡಲು ಒಂದು ನೆಪ ಮಾತ್ರ. ಕುಟುಂಬದ ಜನರ ಜೊತೆಗೆ ಬೆಳಕಿನ ಮಧ್ಯೆ ವಿವಿಧ ಭಂಗಿಯಲ್ಲಿ ಫೋಟೋಗಳನ್ನ ಕ್ಲಿಕ್ಕಿಸುತ್ತಾ , ತನ್ನ ಬದುಕಿನ ಖುಷಿಯ ಕ್ಷಣಗಳನ್ನ ತಮ್ಮ ಮೊಬೈಲ್ ನಲ್ಲಿ ಕೈದು ಮಾಡಿಕೊಳುತ್ತ ಸಾಗುತ್ತಾರೆ.

ಮೈಸೂರು ದಸರಾ ಸಮಯದಲ್ಲಿ ಇಲ್ಲಿನ ಜನ , ಗುಂಪು ಯಾವ ಕೆಲಸವನ್ನ ಮಾಡಿತು , ಬಾರ್ಸಿಲೋನಾ ದ ಜನ , ಗುಂಪು ಅದೇ ಕೆಲಸವನ್ನ ಮಾಡಿದ್ದು ನಾನು ಕಂಡಿದ್ದೇನೆ. ನಮ್ಮೆಲ್ಲಾ ಭಿನ್ನತೆಗಳ ನಡುವೆ ನಾವು ಖುಷಿಯನ್ನ ಹುಡಕುತ್ತೇವೆ , ನಮ್ಮ ಕುಟುಂಬ , ನಮ್ಮ ಪರಿವಾರ ಸುಖಿಯಾಗಿರಬೇಕು ಎಂದು ಬಯಸುತ್ತೇವೆ. ನಮ್ಮವರ ಸುಖ ಶಾಂತಿಗೆ ನಾವು ದುಡಿಯುತ್ತೇವೆ. ಒಟ್ಟಿನಲ್ಲಿ ಬದುಕಿನಲ್ಲಿ ನಾನು ಕಂಡುಕೊಂಡ ಸಾರ ಬಹಳ ಸರಳ. ಕ್ರಿಸ್ಮಸ್ ಅಥವಾ ದಸರಾ , ಈದ್ ಅಥವಾ ಹೋಳಿ , ದೀಪಾವಳಿ ಅಥವಾ ಮೆರ್ಸೆ ಹಬ್ಬ ಯಾವುದೇ ಇರಲಿ ಮನುಷ್ಯನಿಗೆ ಬೇಕಿರುವುದು ಉತ್ತಮ ಆಹಾರ , ಬಟ್ಟೆ ಮತ್ತು ಖುಷಿಯಾದ ವಾತಾವರಣ ಮಾತ್ರ.

ಇದು ಜಗತ್ತಿನ ಬಹು ಪಾಲು ಜನರ ಆಶಯ, ಮನಸ್ಸಿನ ಮಾತು. ಆದರೆ ಜಗತ್ತಿನೆಲ್ಲೆಡೆ ಒಂದೆರೆಡು ಪ್ರತಿಶತ ಜನರಿಗೆ ಹೀಗೆ ಉಂಡುಟ್ಟು ನಲಿಯುವುದು ಸಹ್ಯವಾಗುವುದಿಲ್ಲ . ಈ ಒಂದೆರೆಡು ಪ್ರತಿಶತ ಜನರ ಮನೋವಿಕೃತಿಗೆ ಉಳಿದ 98 ಪ್ರತಿಶತವೇಕೆ ನೋವು ತಿನ್ನಬೇಕು ? ಇದರ ಅರಿವು ಬಹುಪಾಲು ಜನರಿಗೆ ಆದ ದಿನ ವಿಶ್ವದಲ್ಲಿ ಶಾಂತಿ ನೆಲಸುತ್ತದೆ. ಎಲ್ಲಾ ಓದುಗ ಬಂಧುಗಳಿಗೆ ನವರಾತ್ರಿ ಹಬ್ಬದ ಶುಭಾಶಯಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+