ತುಂಬಿದ ಹೊಟ್ಟೆ , ತಿನ್ನುವ ಊಟ ಮನಸ್ಸಿಗೆ ಮುದ ನೀಡಬೇಕೇ ವಿನಃ ನೋವಾಗಬಾರದು

ಈಗ ನಾನು ಹೇಳಲು ಹೋಗುವ ಮಾತನ್ನ ನೀವು ಪೂರ್ಣವಾಗಿ ಒಪ್ಪದೇ ಇದ್ದರೂ ಪರವಾಗಿಲ್ಲ , ನಾನಂತೂ ಹೇಳುತ್ತೇನೆ. ದೇಶ ಯಾವುದಾದರೂ ಆಗಿರಲಿ , ಭಾಷೆ ಯಾವುದಾದರೂ ಆಗಿರಲಿ , ಮನುಷ್ಯ ಪ್ರಾಣಿ ಇದ್ದಾನಲ್ಲ ಆತನಿಗೆ ಊಟ , ತಿಂಡಿ ಅರ್ಥಾತ್ ತಿನ್ನುವುದರಲ್ಲಿ ಮಾತ್ರ ಎಲ್ಲಿಲ್ಲದ ಆಸಕ್ತಿ. ಈ ಜಗತ್ತಿನಲ್ಲಿ ಕೆಲವೇ ಕೆಲವು ಜನರು ಮಾತ್ರ ನಾನು ಬದುಕಿರುವುದಕ್ಕಾಗಿ ತಿನ್ನುತ್ತೇನೆ ಎಂದು ಹೇಳಬಹುದು !

ಉಳಿದ ಮೆಜಾರಿಟಿ ಜನ ತಿನ್ನುವುದನ್ನ ಆಸ್ವಾದಿಸುತ್ತಾರೆ. ತಿನ್ನುವುದೇ ಬದುಕು ಎನ್ನುವ ಹೇಳಿಕೆಯನ್ನ ಅವರು ಜಗತ್ತಿನ ಮುಂದೆ ನೀಡದೆ ಹೋದರೂ , ತಿನ್ನುವುದು ಬದುಕಿನ ಅವಿಭಾಜ್ಯ ಕಾರ್ಯ ಎನ್ನುವುದನ್ನ ಮಾತ್ರ ನಿರ್ಭಿಡೆಯಿಂದ ಒಪ್ಪಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನ್ನದು. ಸುಮ್ಮನೆ ಒಮ್ಮೆ ಯೋಚಿಸಿ ನೋಡಿ , ಆಕಸ್ಮಾತ್ ಈ ಹೊಟ್ಟೆ ಎನ್ನುವುದು ಇರದೇ ಇದ್ದಿದ್ದರೆ ? ದಿನದಲ್ಲಿ ಮೂರು ಕೆಲವೊಮ್ಮೆ ನಾಲ್ಕು ಬಾರಿ ತಿನ್ನುವುದು ಇರದೇ ಇದ್ದಿದ್ದರೆ ?

ನಾವು ಬದುಕಲು ಮಾತ್ರ ಅಥವಾ ಹೊಟ್ಟೆ ತುಂಬಿಸಿ ಕೊಳ್ಳಲು ಮಾತ್ರ ರುಚಿಗೆ ಹೆಚ್ಚು ಪ್ರಾಶಸ್ತ್ಯವಿಲ್ಲದ ಯಾವುದೋ ಒಂದು ಆಹಾರ ತಿಂದು ಮುಗಿಸುವಂತಿದ್ದರೆ ? ಇವುಗಳಲ್ಲಿ ಒಂದು ಜನತೆ ಒಪ್ಪಿಕೊಂಡು ಪಾಲಿಸಿಕೊಂಡು ಬಂದಿದ್ದರೂ ಇವತ್ತು ನಾವು ನೋಡುತ್ತಿರುವ ಸಮಾಜ ಹೀಗೆ ಇರುತ್ತಿರಲಿಲ್ಲ . ಅದರ ಚಿತ್ರಣವೇ ಬೇರೆ ಇರುತ್ತಿತ್ತು. ಹೌದು ಇದೇನಿದು , ಇದ್ದಕ್ಕಿದ್ದ ಹಾಗೆ ಊಟ , ತಿಂಡಿ , ತಿನ್ನುವಿಕೆ ಬಗ್ಗೆ ಮಾತು ಶುರುವಾಗಿದೆ ಎಂದು ನಿಮ್ಮ ಮಸ್ತಕದಲ್ಲಿ ಉತ್ಪನ್ನವಾಗುತ್ತಿರುವ ಪ್ರಶ್ನೆಗೆ ಉತ್ತರ ಇಗೂ ಇಲ್ಲಿದೆ.

Barcelona Memories Column By Rangaswamy Mookanahalli Part 48

ಸ್ಪೇನ್ ಗೆ ಬಂದ ಮೊದಲ ದಿನಗಳಲ್ಲಿ ಇದೇನಿದು ಇಲ್ಲಿನ ಜನರಿಗೆ ತಿನ್ನುವ ಬಗ್ಗೆ ವ್ಯಾಮೋಹ ಇಲ್ಲ , ಅಲ್ಲದೆ ನಮ್ಮಲ್ಲಿ ಇರುವಂತೆ ರುಚಿಕರವಾದ ಆಹಾರವೂ ಇವರ ಬಳಿ ಇಲ್ಲ , ಇದೇನಿದು ಇವರ ಜೀವನ ಬಹಳ ನೀರಸ ಎಂದು ಕೊಂಡಿದ್ದೆ. ವರುಷಗಳು ಕಳೆಯುತ್ತಾ ಹೊಂದಂತೆ , ಇದೇನಿದು ಇವರಲ್ಲೂ ಇಷ್ಟೊಂದು ವೆರೈಟಿ ತಿನಿಸುಗಳಿವೆ ಎನ್ನಿಸಿತು. ನನ್ನ ಮೊದಲ ಬರಹಗಳಲ್ಲಿ ಬರೆದಂತೆ ಇಲ್ಲಿಯೂ ಕೂಡ ಭಾರತದಲ್ಲಿ ಇರುವಂತೆ ಬಹಳಷ್ಟು ಹಬ್ಬಗಳಿವೆ.

ಪ್ರತಿ ಹಬ್ಬಕ್ಕೂ ಅದರದೇ ಆದ ತಿನಿಸುಗಳನ್ನ ಜನ ಮಾಡಿಕೊಂಡು ತಿನ್ನುತ್ತಾರೆ. ನಿತ್ಯ ಜೀವನದಲ್ಲಿ ಅಡುಗೆ ಮಾಡಲು ಹೊಸ ಪೀಳಿಗೆ ಅಷ್ಟೊಂದು ಒಲವು ತೋರುತ್ತಿಲ್ಲ ಎನ್ನುವುದು ನಿಜವಾದರೂ ಹಬ್ಬದ ದಿನಗಳಲ್ಲಿ ಇಲ್ಲಿನ ಖದರ್ ಬೇರೆಯದೇ ! . ಜಗತ್ತಿನ ಬಹುಪಾಲು ದೇಶಗಳು ಬದಲಾವಣೆಯ ಗಾಳಿಗೆ ಸಿಲುಕಿವೆ. ಸ್ಪೇನ್ ಕೂಡ ಇದಕ್ಕೆ ಹೊರತಲ್ಲ. ಸಾಮಾನ್ಯವಾಗಿ ಸ್ಪೇನ್ ಜನರು ಬೇಳೆ ಮತ್ತು ಕಾಳುಗಳ ಜೊತೆಗೆ ಮಾಂಸವನ್ನ ಸೇವಿಸುತ್ತಾರೆ. ನಿಧಾನಕ್ಕೆ ಫಾಸ್ಟ್ ಫುಡ್ ಇಲ್ಲಿನ ಸಮಾಜದಲ್ಲಿ ಜಾಗ ಕಂಡು ಕೊಂಡಿದೆ.

ಭಾರತದಲ್ಲಿ ಇರುವಂತೆ ಇಲ್ಲಿ ಕೂಡ ಎರಡು ತಲೆ ಮಾರುಗಳ ಘರ್ಷಣೆಯನ್ನ ಕಾಣಬಹುದು. ಹಳೆಯ ತಲೆಮಾರಿಗೆ ಇಂದಿನ ಪಿಜ್ಜಾ , ಬರ್ಗರ್ ಅಲರ್ಜಿ. ಅವರೇನಿದ್ದರೂ ಹೊಟ್ಟೆ ತುಂಬಾ ಮನೆಯಲ್ಲಿ ಬೇಯಿಸಿದ ಆಹಾರವನ್ನ ತಿನ್ನಲು ಬಯಸುತ್ತಾರೆ. ಅವರದು ' ಬಾರಿಗ ಯೇನ , ಕರಸೊನ್ ಕೊಂತೆಂತೋ ' ಎನ್ನುವ ಫಿಲಾಸಫಿ . ಬಾರಿಗ ಯೇನ ಎಂದರೆ ತುಂಬಿದ ಹೊಟ್ಟೆ ಎಂದರ್ಥ . ಕರಸೊನ್ ಕೊಂತೆಂತೋ ಎಂದರೆ ಮನಸ್ಸು ಖುಷಿಯಾಗಿರುತ್ತದೆ ಎನ್ನುವ ಅರ್ಥ.

ಅಂದರೆ ಹೊಟ್ಟೆ ತುಂಬಿದ್ದರೆ ಮನಸ್ಸು ಆಹ್ಲಾದಕರವಾಗಿ , ಖುಷಿಯಾಗಿ ಇರುತ್ತದೆ ಎನ್ನುವುದು ಇವರ ನಂಬಿಕೆ. ಇತ್ತೀಚಿನ ಜನತೆಗೆ ವೇಳೆ ಎನ್ನುವುದು ಇಲ್ಲ , ಪಿಜ್ಜಾ , ಬರ್ಗರ್ ಜೊತೆಗೆ ಸಕ್ಕರೆ ಹೆಚ್ಚಾಗಿರುವ ಸಾಫ್ಟ್ ಡ್ರಿಂಕ್ , ಆಲ್ಕೋಹಾಲ್ ಎಲ್ಲವೂ ಖುಷಿ ನೀಡುತ್ತದೆ. ಆಲ್ಕೋಹಾಲ್ ಎನ್ನುವುದು ಇವತ್ತಿನದೇನಲ್ಲ ಆದರೂ ಅದರ ಬಳಕೆಯಲ್ಲಿ ಆಗಿರುವ ವ್ಯತ್ಯಾಸ ಮಾತ್ರ ಸ್ವಲ್ಪ ಯೋಚನೆಗೆ ಹಚ್ಚುವ ವಿಷಯವಾಗಿದೆ.

ಸ್ಪ್ಯಾನಿಷ್ ಜನತೆ ಒಬ್ಬರೇ ಅಲ್ಲ , ಪೂರ್ಣ ಯೂರೋಪಿನಲ್ಲಿ ಖಾರ ತಿನ್ನುವುದು ಬಹಳ ಕಡಿಮೆ. ಮಾಂಸವನ್ನ ಬೇಯಿಸಿ ಅದರ ಮೇಲೆ ರುಚಿಗೆ ಬೇಕಾದಷ್ಟು ಉಪ್ಪು ಮತ್ತು ಒಂದಷ್ಟು ಕಾಲು ಮೆಣಸಿನ ಪುಡಿಯನ್ನ ಹಾಕಿಕೊಂಡರೆ ಅಲ್ಲಿಗೆ ಕಥೆ ಮುಗಿಯಿತು. ಇಲ್ಲಿ ಮೆಣಸಿನಕಾಯಿಯನ್ನ ಚನ್ನಾಗಿ ಎಣ್ಣೆಯಲ್ಲಿ ಬಾಡಿಸಿ ಅದಕ್ಕೆ ಉಪ್ಪು ಬೆರೆಸಿ ಬಿಯರ್ ಜೊತೆಗೆ ತಿನ್ನುತ್ತಾರೆ. ಖಾರ ತಿನ್ನದ ಇವರ ಈ ಖಾದ್ಯವನ್ನ ನೋಡಿ ನನಗೆ ಅತ್ಯಂತ ಆಶ್ಚರ್ಯವಾಗಿತ್ತು. ಇದರ ಹೆಸರು ಪಿಮಿಯಂತೋಸ್ ದೆ ಪಾದ್ರರೊನ್ !

ನಮ್ಮ ಗುಣಗಳು ಅಥವಾ ನಮ್ಮತನ ಎನ್ನುವುದು ಬಹಳ ದಿನ ಮುಚ್ಚಿಡಲು ಆಗುವುದಿಲ್ಲ. ಒಂದೆರೆಡು ವಾರಕ್ಕೂ , ತಿಂಗಳಿಗೂ ನಾವು ನಾಟಕ ಮಾಡಿಕೊಂಡು ಬದುಕ ಬಹುದು , ಆದರೆ ಜೀವನ ಪೂರ್ತಿ ನಾಟಕವಾಡಲು ಹೇಗೆ ಸಾಧ್ಯ ? ನನ್ನ ಮೆಣಸಿನಕಾಯಿ ಪ್ರೀತಿ ಕೂಡ ಸ್ನೇಹಿತರಿಗೆ ಮತ್ತು ಸಹೋದ್ಯೋಗಿಗಳಿಗೆ ಬೇಗ ಗೊತ್ತಾಯಿತು. ನಿನಗೆ ಬಹಳ ಇಷ್ಟವಾಗುತ್ತದೆ ಎಂದು ಈ ಪಿಮಿಯಂತೋಸ್ ಹೆಸರಾಂಕಿತ ಖಾದ್ಯವನ್ನ ಆರ್ಡರ್ ಮಾಡಿದ್ದರು. ನನಗೂ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ .

ಅದನ್ನ ತಿಂದ ಮೇಲೆ ಒಮ್ಮೆಲೇ ಭ್ರಮನಿರಸನವಾಯಿತು. ನಾನು ಖಾರವನ್ನ ಮನಸ್ಸಿನಲ್ಲಿ ಕಲ್ಪನೆ ಮಾಡಿಕೊಳ್ಳುತ್ತಿದ್ದೆ. ಆದರೆ ಅದು ಸ್ವಲ್ಪವೂ ಖಾರವಿರಲಿಲ್ಲ. ಬದಲಿಗೆ ಬಾಯಿಗೆ ಹಿತವಾಗಿ ರುಚಿಯಾಗಿತ್ತು. ಇದು ಮೊದಲ ಅನುಭವ. ಇದಾದ ಮೇಲೆ ನೂರಾರು ಬಾರಿ ಪಿಮಿಯಂತೋಸ್ ತಿಂದಿದ್ದೇನೆ . ಅದರ ರುಚಿಗೆ ತಲೆಬಾಗಿದ್ದೇನೆ. ನೀವು ಬಾರ್ಸಿಲೋನಾ ಗೆ ಹೋಗುವರಿದ್ದರೆ ಇದನ್ನ ತಿನ್ನಲು ಮರೆಯದಿರಿ.

ರಂಗನಿಗೆ ಎಂತಹ ಮೆಣಸಿನಕಾಯಿ ಕೊಟ್ಟರೂ ಅದು ಅವನಿಗೆ ಖಾರ ಎನ್ನಿಸುವುದೇ ಇಲ್ಲ ಎಂದು ನನ್ನ ಸುತ್ತಲಿನ ಬಳಗ ಮಾತ್ನಾಡಿಕೊಳ್ಳುತಿತ್ತು. ಭಾರತದಲ್ಲಿ ಇದ್ದಾಗ ಕೂಡ ರಾಮನ , ಕಾಂತನ ತಟ್ಟೆಯಲ್ಲಿ ಇದ್ದ ಎಲ್ಲಾ ಮೆಣಸಿನಕಾಯಿ ನನ್ನ ತಟ್ಟೆಗೆ ವರ್ಗಾವಣೆ ಆಗುತ್ತಿತ್ತು . ನಿಧಾನಕ್ಕೆ ಅದು ಸ್ನೇಹಿತರ ಬಳಗಕ್ಕೂ ಹಬ್ಬಿ , ಅವರ ತಟ್ಟೆಯಲ್ಲಿನ ಮೆಣಸಿನಕಾಯಿ ಕೂಡ ನನ್ನ ತಟ್ಟೆಗೆ ಬಂದು ಬಿಳುತಿತ್ತು. ಬಾರ್ಸಿಲೋನಾ ಮಿತ್ರರಿಗೂ ಎಲ್ಲವೂ ತಿಳಿದಿತ್ತು. ಆದರೆ ಇವರ ತಟ್ಟೆಯಿಂದ ನನ್ನ ತಟ್ಟೆಗೆ ವರ್ಗಾವಣೆ ಆಗುವಂತಹುದು ಏನಿದ್ದಿತ್ತು ?

ನಾನು ಖಾರ ತಿನ್ನುವುದು ನೋಡಿ ನನ್ನ ಗೆಳೆಯ ಸ್ವಾಲ್ವನ ಮಗ ಜೂನಿಯರ್ ಸಾಲ್ವ ಬಹಳಷ್ಟು ಪ್ರೇರಿತನಾಗಿದ್ದ. ಅವನಿಗೆ ತಕ್ಕ ಮಟ್ಟಿಗೆ ಖಾರ ಇಷ್ಟವಿತ್ತು. ಅದನ್ನ ಅವನೇ ಬಾಯಿಬಿಟ್ಟು ಹೇಳಿದ್ದ. ಇತರೆ ಸ್ಪ್ಯಾನಿಷ್ ಜನರಿಗೆ ಹೋಲಿಸಿದರೆ ಅವನ ಖಾರ ತಡೆದುಕೊಳ್ಳುವ ತಾಕತ್ತು ಸ್ವಲ್ಪ ಹೆಚ್ಚು ಎಂದು ಹೇಳಬಹುದು. ನೂರಾರು ಸ್ಪ್ಯಾನಿಷ್ ಗೆಳೆಯರ ಜೊತೆಗೆ ಭಾರತೀಯ ರೆಸ್ಟುರೆಂಟ್ ಗೆ ಊಟಕ್ಕೆ ಹೋಗಿದ್ದೇನೆ.

ಆಗೆಲ್ಲಾ ಸ್ವಲ್ಪ ಖಾರ ಹೆಚ್ಚಾದರೂ ಮುಖವೆಲ್ಲಾ ಕೆಂಪಿಟ್ಟು ಕೊಂಡು , ಕೆಮ್ಮುತ್ತ ಕುಳಿತು ಬಿಡುತ್ತಿದ್ದರು. ಇದನ್ನ ನೋಡಿ ಅನುಭವದ ಮೇಲೆ ಆರ್ಡರ್ ಮಾಡುವಾಗ ಖಾರ ಸೊನ್ನೆ ಎನ್ನುವುದನ್ನ ಹೇಳಿಬಿಡುತ್ತಿದ್ದೆ. ನನಗೆ ಖಾರ ಬೇಕು , ಹೀಗಾಗಿ ಹಸಿರು ಮೆಣಸಿನಕಾಯಿಯನ್ನ ತರಿಸಿಕೊಂಡು ತಿನ್ನುತ್ತಿದ್ದೆ. ಹೀಗೆ ಹಸಿರು ಮೆಣಸಿನಕಾಯಿ ತಿನ್ನುವ ನಾನು ಸ್ಪ್ಯಾನಿಶರ ಕಣ್ಣಿನಲ್ಲಿ 'ಅಬ್ಬಾ' ಎನ್ನಿಸಿಕೊಳ್ಳುತ್ತಿದೆ. ಜೂನಿಯರ್ ಸಾಲ್ವಾ ಕೂಡ ಬಹಳ ಬಾರಿ ನನ್ನೊಂದಿಗೆ ಭಾರತೀಯ ರೆಸ್ಟುರೆಂಟ್ ಗೆ ಬಂದಿದ್ದ.

ಹೀಗೆ ಒಂದು ದಿನ ಮಾತುಕತೆಯಲ್ಲಿ ಮುಂದಿನ ಬಾರಿ ಹೋದಾಗ ನೀನು ತಿಂದಂತೆ ತಿನ್ನುತ್ತೇನೆ ಎನ್ನುವ ಸವಾಲು ಹಾಕಿದ. ನಾನು ಮೆಕ್ಸಿಕೋ ದೇಶದ ಕಾಲಪಿನ್ಯೋ ಮೆಣಸಿನಕಾಯಿ ತಿಂದವನು ಗೊತ್ತ ? ಎನ್ನುವ ಬಿಲ್ಡಪ್ ಬೇರೆ ಕೊಟ್ಟ. ಸರಿ ಹೋಗೋಣ ಬಾ ಎಂದಾಗ ಜೂನಿಯರ್ ಜೊತೆಗೆ ಜೊತೆಯಾದವನು ಶ್ರೀನಿ. ಹೀಗೆ ನಾನು ಶ್ರೀನಿ ಮಾತು ಜೂನಿಯರ್ ಸಲ್ವಾ ಮಹಾರಾಜಾ ಎನ್ನುವ ಒಂದು ಪಾಕಿಸ್ತಾನಿ ನಡೆಸುವ ಭಾರತೀಯ ಹೋಟೆಲ್ ಹೊಕ್ಕೆವು. ಇಲ್ಲಿನ ಬಹುತೇಕ ಇಂಡಿಯನ್ ರೆಸ್ಟುರೆಂಟ್ ಗಳ ಕಥೆಯಿದು. ನಮ್ಮ ಹೆಸರಲ್ಲಿ ಬಾಂಗ್ಲಾ , ಮತ್ತು ಪಾಕಿಸ್ತಾನಿಗಳು ಹೋಟೆಲ್ ನಡೆಸುತ್ತಾರೆ. ಇರಲಿ .

ಮೆಕ್ಸಿಕೋ ಕಾಲಪಿನ್ಯೋ ಎಲ್ಲವೂ ಖಾರವಿರುವುದಿಲ್ಲ. ನನ್ನ ಮಟ್ಟಿಗೆ ಅದು ತಡೆದುಕೊಳ್ಳಲಾಗದ ಖಾರವಲ್ಲ. ಖಾರ ಎಂದರೇನು ಗೊತ್ತ ? ತಿಂದವನು ಖಾರಕ್ಕೆ ನೆಲದಲ್ಲಿ ಬಿದ್ದು ಒದ್ದಾಡಬೇಕು. ಮೂಗು ಮಾತು ಬಾಯಿಂದ ಗೊತ್ತಿಲ್ಲದೇ ನೀರು ಸುರಿಯಬೇಕು. ಕಣ್ಣಿನಿಂದ ನೀರು ಒಸರಬೇಕು , ಕಣ್ಣು ಕತ್ತಲಿಡಬೇಕು. ಹೃದಯ ಬಡಿತ ಹೆಚ್ಚಾಗಬೇಕು. ಇಷ್ಟೆಲ್ಲಾ ಆದಾಗ ತಿಂದದ್ದು ಖಾರವಿದೆ ಎಂದಂತೆ !! ಇದೆಲ್ಲ ಆಗದಿದ್ದರೆ ? ಅದು ಖಾರವಲ್ಲವೇ ?? ಅಲ್ಲ ಎಂದು ನಾನು ಬಹಳ ವರ್ಷ ನಂಬಿದ್ದೆ . ಒಬ್ಬಬ್ಬರಿಗೆ ಒಂದೊಂದು ಖಾರ ತಡೆದು ಕೊಳ್ಳುವ ಶಕ್ತಿ ಇರುತ್ತದೆ. ಒಬ್ಬರನ್ನ ನೋಡಿ ಇನ್ನೊಬ್ಬರು ಖಾರ ತಿನ್ನಲು ಹೋಗಬಾರದು.

ಪೀಣ್ಯದಲ್ಲಿ ಒಂದು ದಿನ ರಸ್ತೆ ಬದಿಯಲ್ಲಿ ಮೆಣಸಿನಕಾಯಿ ಬಜ್ಜಿ ಮಾರುತ್ತಿದ್ದರು. ಅದನ್ನ ಅವರು ಅದ್ಯಾವುದೂ ಬಾರ್ ಮುಂದೆ ಕುಳಿತು ಮಾರುತ್ತಿದ್ದರು. ನನ್ನ ಖಾರದ ಕಥೆ ಕೇಳಿದ ಸ್ನೇಹಿತನೊಬ್ಬ ಇಲ್ಲಿ ತಿಂದು ನೋಡು ಎಂದು ಕರೆದುಕೊಂಡು ಹೋಗಿ ಕೊಡಿಸಿದ್ದ. ಮೇಲೆ ಹೇಳಿದ ಎಲ್ಲಾ ಲಕ್ಷಣಗಳು ಅಂದರೆ ಹೃದಯ ಬಡಿತ ಹೆಚ್ಚಾಗುವುದು , ಕಣ್ಣು ಕಪ್ಪಿಡುವುದು ಹೀಗೆ ಎಲ್ಲವೂ ಆಯ್ತು . ಅವತ್ತಿನ ನಂತರ ಅಷ್ಟು ಖಾರ ಈವರೆಗೆ ಮತ್ತೆ ನನಗೆ ಸಿಕ್ಕಿಲ್ಲ .

ಜೂನಿಯರ್ ಸಾಲ್ವ ವೀರನಂತೆ ನೀನು ಯಾವ ಮಟ್ಟಿನ ಖಾರ ಹೇಳುತ್ತೀಯಾ ಅದೇ ನನಗೂ ಇರಲಿ ಎಂದ. ಜೊತೆಯಲ್ಲಿದ್ದ ಶ್ರೀನಿ ನನ್ನ ಮೂರು ದಶಕದ ಗೆಳೆಯ ಅವನಿಗೆ ನನ್ನ ಖಾರದ ಲೆವೆಲ್ ಗೊತ್ತಿತ್ತು. ಸುಮ್ಮನೆ ತೊಂದರೆ ಬೇಡ ಎಂದು ಅವನಿಗೆ ಮೀಡಿಯಂ ಆರ್ಡರ್ ಮಾಡಿದ. ಜೂನಿಯರ್ ನನ್ನ ಆಹಾರವನ್ನ ಶೇರ್ ಮಾಡಿಕೊಳ್ಳುವುದಾಗಿ ಹೇಳಿದ್ದ , ಹೀಗಾಗಿ ನನ್ನ ಲೆವೆಲ್ ಸ್ಪೈಸಿ ಮಾಡು ಎಂದಿದ್ದೆ. ನನ್ನಿಂದ ಪ್ರಮಾದ ಆಗಿತ್ತು. ನಾನು ಜೂನಿಯರ್ ಅದನ್ನ ತಡೆಯುಕೊಳ್ಳಬಹುದು ಎಂದು ಕೊಂಡಿದ್ದೆ.

ಮೊದಲೆರೆಡು ತುತ್ತು ತಿಂದವನ ಮುಖ ಕೆಂಪಿಟ್ಟಿತು. ಆದರೆ ಅವನು ಅವಮಾನವಾಗುತ್ತದೆ , ಇಷ್ಟೆಲ್ಲಾ ಮಾತನಾಡಿ ಬಂದವನು ಎರಡು ತುತ್ತಿಗೆ ಕುಸಿದ ಎನ್ನುವ ಪಟ್ಟವನ್ನ ಪಡೆಯಲು ಸಿದ್ಧನಿರಲಿಲ್ಲ. ಅವನಲ್ಲಿ ಆಗುತ್ತಿರುವುದು ನಮಗೆ ತಿಳಿಯುವುದಾದರೂ ಹೇಗೆ ? ಮುಂದಿನ ಐದಾರು ತುತ್ತು ಅವನ ದೇಹ ಸೇರಿ ಕರಾಮತ್ತು ತೋರಿಸ ತೊಡಗಿತು. ಮೊದಲೇ ಕೆಂಪಗಿದ್ದ ಜೂನಿಯರ್ ಮತ್ತಷ್ಟು ಕೆಂಪಾಗಿಬಿಟ್ಟ . ಮೂಗಿನಿಂದ , ಬಾಯಿಂದ ನೀರು ಹರಿಯತೊಡಗಿತು. ಕಣ್ಣು ತುಂಬಾ ಕಣ್ಣೀರು !

ತಕ್ಷಣ ನೀರು ಕುಡಿಸಿದೆವು , ಅದು ಪ್ರಯೋಜನಕ್ಕೆ ಬರಲಿಲ್ಲ. ಸ್ವೀಟ್ ಲಸ್ಸಿ ಮಾಡಲು ಹೇಳಿದೆವು. ಅದಕ್ಕಿಂತ ಮುಂಚೆ ಗುಲಾಬ್ ಜಾಮೂನ್ ತರಿಸಿ ತಿನ್ನಿಸದೆವು. ಈ ಮಧ್ಯೆ ಶ್ರೀನಿ ಕೆಂಗೆಟ್ಟು ಆಂಬುಲೆನ್ಸ್ ಗೆ ಕರೆ ಮಾಡಿದ್ದ. ಐದಾರು ನಿಮಿಷದಲ್ಲಿ ಆಂಬುಲೆನ್ಸ್ ಬಂತು. ಅಷ್ಟರಲ್ಲಿ ಜೂನಿಯರ್ ಸ್ವಲ್ಪ ಸುಧಾರಿಸಿಕೊಂಡಿದ್ದ. ಗುಲ್ಲಾ ಜಾಮೂನ್ ಸಹಾಯ ಮಾಡಿತ್ತು. ನಂತರ ಸ್ವೀಟ್ ಲಸ್ಸಿ ಕೂಡ ಸುಧಾರಿಸಿಕೊಳ್ಳಲು ಸಹಾಯ ಮಾಡಿತು. ಒಂದೈದು ನಿಮಿಷ ನಿಂತು ಅವನು ಓಕೆ ಎಂದು ಖಾತ್ರಿ ಮಾಡಿಕೊಂಡು ಪ್ಯಾರಾಮೆಡಿಕ್ ಟೀಮ್ ಅಲ್ಲಿಂದ ಹೋಗುವ ಮುನ್ನ 'ಕುಯ್ದಾದೋ ಅಮಿಗೊಸ್' (ಬಿ ಕೇರ್ ಫುಲ್ , ಫ್ರೆಂಡ್ಸ್ ) ಎಂದು ಕೈ ಬೀಸಿ ಹೊರಟರು.

ಅದೇ ಕೊನೆಯ ದಿನ , ಅಂದಿನಿಂದ ಇಂದಿನವರೆಗೆ ಯಾರಿಗೂ ,ಕೇವಲ ಊಟ ಅಂತಲ್ಲ ,ಯಾವುದಕ್ಕೂ ಚಾಲೆಂಜ್ ಮಾಡಲು ಹೋಗಿಲ್ಲ. ಹೋಗುವುದೂ ಇಲ್ಲ. ತುಂಬಿದ ಹೊಟ್ಟೆ , ತಿನ್ನುವ ಊಟ ಮನಸ್ಸಿಗೆ ಮುದ ನೀಡುವಂತಿರಬೇಕು ವಿನಃ ಅದು ನೋವಾಗಬಾರದು. ಹೌದು ' ಬಾರಿಗ ಯೇನ , ಕರಸೊನ್ ಕೊಂತೆಂತೋ ' ಎನ್ನುವ ಮಾತು ನಿತ್ಯ ಸತ್ಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+