ಶಿಕ್ಷೆ ಇಲ್ಲದೆ ಶಿಕ್ಷಣ ಕಲಿಸುವುದು ಹೇಗೆ? ನಿಟ್ಟುಸಿರು ಬಿಟ್ಟ ಆತನ ಮುಖ ಮಸ್ತಕದಲ್ಲಿ ಇನ್ನೂ ಹಸಿರು
ಸೆಪ್ಟೆಂಬರ್ ಐದು ಬಂತೆಂದರೆ ಸಾಕು , ಶಾಲೆ , ಬಾಲ್ಯ ಮತ್ತು ಆಗಿನ ಕಲಿಕೆಯಲ್ಲಿ ಸಹಾಯ ಮಾಡುತ್ತಿದ್ದ ಶಿಕ್ಷಕ ವರ್ಗ ಎಲ್ಲವೂ ಮನಸ್ಸಿನಲ್ಲಿ ಮೂಡುತ್ತವೆ. ಗುರುಗಳು ಎಂದರೆ ಅಂದಿನ ದಿನಗಳಲ್ಲಿ ಅದೊಂತರ ಭಯ ! ದಾನಪ್ಪ ಮೇಷ್ಟ್ರು ಬಳಿ ಇರುತ್ತಿದ್ದ ಸಣ್ಣನೆಯ ಬಿದುರಿನ ಕಡ್ಡಿಯ ಏಟು ತಿಂದವರು ದಾನಪ್ಪ ಮೇಷ್ಟ್ರಿಗೆ ಹೆದರದೆ ಇರಲು ಹೇಗೆ ತಾನೇ ಸಾಧ್ಯ ? ಅವತ್ತಿನ ದಿನದಲ್ಲಿ ಮುಲಾಜಿಲ್ಲದೆ ಕಪಾಳಕ್ಕೆ ಮೇಷ್ಟ್ರು ಹೊಡೆಯುತ್ತಿದ್ದರು.
ಕೈ ಮೇಲೆ ಮತ್ತು ಅಂಡಿನ ಮೇಲೆ ಬಾರಿಸುವುದು ಉಸಿರಾಡಿದಷ್ಟೇ ಸಹಜವಾಗಿತ್ತು. ಶಿಕ್ಷಕ ವೃತ್ತಿಗೆ ಒಂದಷ್ಟು ಗೌರವವಿದ್ದ ದಿನಗಳವು. ಪೋಷಕರು ಕೂಡ ನಮ್ಮ ಮಕ್ಕಳಿಗೆ ಹೊಡೆಯಲು ನೀನ್ಯಾರು ಎಂದು ಯಾವತ್ತೂ ಶಿಕ್ಷಕರ ಕೊರಳಿನ ಪಟ್ಟಿ ಹಿಡದದ್ದು ನಾನಂತೂ ನೋಡಲಿಲ್ಲ. ಅಷ್ಟರ ಮಟ್ಟಿಗೆ ಪೋಷಕರು ಕೂಡ ಗುರುಗಳು ಹೇಳುವುದು ನಮ್ಮ ಮಗುವಿನ ಒಳಿತಿಗೆ ಎನ್ನುವ ಭಾವನೆಯನ್ನ ಇಟ್ಟು ಕೊಂಡಿದ್ದರು. ಇವತ್ತಿಗೆ ಎಲ್ಲವೂ ಉಲ್ಟಾ !!
ಶಿಕ್ಷಕರು ಮಕ್ಕಳನ್ನ ಹೊಡೆಯುವುದು ದೂರದ ಮಾತು ಅವರನ್ನ ಮುಟ್ಟವಂತೆ ಕೂಡ ಇಲ್ಲ. ನಾವು ವಿದ್ಯಾರ್ಥಿಗಳಾಗಿದ್ದಾಗ ಶಿಕ್ಷಕರ ಕಂಡರೆ ಇದ್ದ ಭಯ ಈಗಿನ ವಿದ್ಯಾರ್ಥಿಗಳಲ್ಲಿ ಇಲ್ಲ . ಬದಲಿಗೆ ಹೇಗೂ ಹುಡುಗರು ಶಾಲೆಗೆ ಬಂದರೆ ಸಾಕು , ತರಗತಿಯಲ್ಲಿ ಕುಳಿತರೆ ಸಾಕು ಎನ್ನುವ ಮಟ್ಟಕ್ಕೆ ಶಿಕ್ಷಣ ವ್ಯವಸ್ಥೆ ಬಂದು ನಿಂತಿದೆ. ಸ್ಪೇನ್ ಗೆ ಬಂದ ಮೊದಲ ದಿನಗಳಲ್ಲಿ ಇಲ್ಲಿನ ಮಕ್ಕಳು ತಮ್ಮ ಗುರುಗಳನ್ನ ' ಒಯ್ಯೇ ಪ್ರೊಫೆ ' ಎಂದು ಕರೆಯುವುದು ಕಂಡೆ , ಅರೆರೆ ಇದೇನಿದು ಪ್ರೊಫೆ ಎಂದು ಅಚ್ಚರಿಯಿಂದ ಸಹದ್ಯೋಗಿ ಮಿತ್ರರನ್ನ ಕೇಳಿದ್ದೆ .

ಇಲ್ಲಿ ಕಿಂಡರ್ ಗಾರ್ಡನ್ ನಲ್ಲಿ ಕಲಿಸುವ ಶಿಕ್ಷಕನನ್ನ ಸಹ ಪ್ರೊಫೆಸರ್ ಎನ್ನುವುದು ವಾಡಿಕೆ. ಅದನ್ನ ತುಂಡು ಮಾಡಿ ವಿದ್ಯಾರ್ಥಿಗಳು ಪ್ರೊಫೆ ಮಾಡಿದ್ದಾರೆ . ಇಲ್ಲಿನ ಟೀಚರ್ ಗಳು ಕೂಡ ವ್ಯವಸ್ಥೆಯನ್ನ ಒಪ್ಪಿಕೊಂಡಿದ್ದಾರೆ. ಹೆಸರು ಹಿಡಿದು ಕರೆಯುವುದು ಇಲ್ಲವೇ ಪ್ರೊಫೆ ಎನ್ನುವುದು ತೀರಾ ಕಾಮನ್. ಪಕ್ಕದ ಇಂಗ್ಲೆಂಡ್ ನಲ್ಲಿ ದೂರದ ಅಮೇರಿಕಾದಲ್ಲಿ ಶಾಲೆಯ ಶಿಕ್ಷಕ ವೃತ್ತಿ ಎಂದರೆ ಅದೊಂದು ಟಾರ್ಚರ್ ಎನ್ನುವ ಮಟ್ಟಕೆ ಹೋಗಿದೆ. ಎಲ್ಲೆಡೆ ಎಂದಲ್ಲ ಬಹಳ ಪ್ರದೇಶದಲ್ಲಿ ಈ ಮಾತು ಸತ್ಯ.
ಇದಕ್ಕೆ ಕಾರಣ ಮಕ್ಕಳ ನಡವಳಿಕೆ. ಅವರದ್ದು ಗೊಂಡಗಾರಿಕೆ. ಶಿಕ್ಷಕರು ನಿತ್ಯವೂ ಅಪ್ಡೇಟ್ ಆಗಿ ಹೋಗಿದ್ದರೂ ಕೂಡ ಸ್ವಲ್ಪ ಹೆಚ್ಚು ಕಡಿಮೆಯಾದರೆ ಸಾಕು ಅವರನ್ನ ಟ್ರೋಲ್ ಮಾಡುವುದು ಸಾಮಾನ್ಯವಾಗಿದೆ. ಸ್ಪೇನ್ ನಲ್ಲಿ ಈ ಮಟ್ಟಿಗೆ ಇಲ್ಲದಿದ್ದರೂ ಇತ್ತೀಚೆಗೆ ಶಿಕ್ಷಕ ವೃತ್ತಿ ಎಂದರೆ ಉಸ್ಸಪ್ಪಾ ಎನ್ನುವಂತಾಗಿದೆ. ಸ್ಪೇನ್ ನಲ್ಲಿ ಸ್ವೀಡೆನ್ ಮತ್ತಿತರ ನಾರ್ದಿಕ್ ಯೂರೋಪಿಯನ್ ದೇಶಗಳಲ್ಲಿ ನೀಡುವಂತೆ ಶಿಕ್ಷಕರಿಗೆ ಹೆಚ್ಚಿನ ಅಥವಾ ಉತ್ತಮ ಭತ್ಯೆ ಕೂಡ ಇಲ್ಲ.
ಇಲ್ಲಿನ ಶಾಲೆಯ ಶಿಕ್ಷಕರಿಗೆ ಬೇರೆಯ ವೃತ್ತಿಗಳಲ್ಲಿ ಸಿಗುವಷ್ಟು ಅಥವಾ ಅದಕ್ಕಿಂತ ಒಂದಷ್ಟು ಕಡಿಮೆ ವೇತನವಿದೆ. ಇವರ ಆಯ್ಕೆಗೆ ಕೂಡ ವಿಶೇಷ ಮಾನದಂಡಗಳು ಕೂಡ ಇಲ್ಲ. ಹೀಗಾಗಿ ಶಿಕ್ಷಣ ವ್ಯವಸ್ಥೆ ನಮ್ಮ ಭಾರತಕ್ಕಿಂತ ಬಹಳ ಚನ್ನಾಗಿದೆ ಎಂದು ಹೇಳಲು ಬಾರದು. ಇಲ್ಲಿನ ಜನರ , ಶಿಕ್ಷಕರ ಅಥವಾ ಶಿಕ್ಷಣ ವ್ಯವಸ್ಥೆಯ ಮಹಾನ್ ನೂನ್ಯತೆಯೆಂದರೆ ಮಕ್ಕಳನ್ನ ' ತೇ ಗುಸ್ತಾ ಸ್ಥೂದಿಯಾರ್ ' ಎಂದು ಕೇಳುವುದು . ಅಂದರೆ ಮಕ್ಕಳನ್ನ ಕುರಿತು ' ನಿನಗೆ ಓದಲು ಇಷ್ಟವೇ ?' ಎಂದು ಪ್ರಶ್ನಿಸುವುದು.
ಯಾವ ಮಗು ಅಥವಾ ಮಕ್ಕಳು ಹೌದು ನನಗೆ ಓದಲು ಇಷ್ಟ ಎಂದು ಹೇಳುತ್ತವೆ ?? . ಮಕ್ಕಳನ್ನ ಬಲವಂತ ಮಾಡಬಾರದು , ಅವರ ಇಚ್ಚೆಯಂತೆ ಬಿಡಬೇಕು ಎನ್ನುವ ಸಿದ್ದಾಂತಕ್ಕೆ ಸ್ಪೇನ್ ಬೆಲೆ ತೆರುತ್ತಿದೆ. ಪಕ್ಕದ ಜರ್ಮನಿ ಮತ್ತು ಫ್ರಾನ್ಸ್ ಗಳಲ್ಲಿ ಇರುವಷ್ಟು ಪದವೀಧರರು ಸ್ಪೇನ್ ನಲ್ಲಿ ತಯಾರಾಗುತ್ತಿಲ್ಲ. ತಯಾರಾದವರು ಕೂಡ ಆರ್ಟ್ಸ್ , ಸೋಶಿಯಲ್ , ಪೊಲಿಟಿಕಲ್ ಸೈನ್ಸ್ , ಎನ್ವಿರಾನ್ಮೆಂಟಲ್ ಹೀಗೆ ಪಟ್ಟಿ ಸಾಗುತ್ತದೆ.
ಇಂಜಿನಿಯರಿಂಗ್ ಮತ್ತು ಮೆಡಿಸಿನ್ ಓದುವವರ ಸಂಖ್ಯೆ ಮತ್ತು ಪಿಹೆಚ್ಡಿ ಮಾಡಿ ಸಂಶೋಧನೆಗೆ ಹೋಗುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಹೀಗೆ ಸ್ಪ್ಯಾನಿಶರು ತುಂಬಲಾಗದ ಜಾಗವನ್ನ ವಿಶ್ವವಿದ್ಯಾಲಯದಲ್ಲಿ ಭಾರತೀಯರು , ಸೌತ್ ಅಮೆರಿಕನ್ನರು , ಚೀನಿಯರು ತುಂಬುತ್ತಿದ್ದಾರೆ. ಕೆಲವೊಮ್ಮೆ ದೇಶವನ್ನ ಕುಸಿಯುವಂತೆ ಮಾಡಲು ಬೇರೆ ಹೊರಗಿನ ಯಾರ ಸಹಾಯವೂ ಬೇಡವಾಗುತ್ತದೆ. ನಮ್ಮ ಆಂತರಿಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಲ್ಲಿ ಸ್ವಲ್ಪ ನಿಧಾನ ಮಾಡಿದರೂ ಅಷ್ಟು ಸಾಕು.
ಇದರ ನಡುವೆ ವಿದ್ಯಾವಂತ ಸ್ಪ್ಯಾನಿಶರು ಉತ್ತಮ ಬದುಕನ್ನ ಅರಸಿ ಜರ್ಮನಿ , ಫ್ರಾನ್ಸ್ , ಅಮೇರಿಕಾ ಮತ್ತಿತರ ದೇಶಗಳಿಗೆ ಗುಳೆ ಹೋಗುವುದು ಕೂಡ ಕಳೆದ ಒಂದು ದಶಕದಿಂದ ಸಾಮಾನ್ಯವಾಗಿದೆ. 2010ರ ನಂತರದ ಆರ್ಥಿಕ ಕುಸಿತ ಇಂತಹ ಒಂದು ವಲಸೆಗೆ ನಾಂದಿ ಹಾಡಿತು ಎನ್ನಬಹುದು. ಕೆಲಸದಲ್ಲಿ ಕೂಡ ಸಿಗುವ ಮುಕ್ಕಾಲು ಪಾಲು ಜನ ಸಹೋದ್ಯೋಗಿಗಳು ಪದವೀಧರರಲ್ಲ, ನಮ್ಮಲ್ಲಿ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡಲು ಕೂಡ ಡಿಗ್ರಿ ಬೇಕು ಎನ್ನುತ್ತಾರೆ.
ಆದರೆ ಇಲ್ಲಿ ತೀರಾ ಉನ್ನತ ವೃತ್ತಿ ಪರತೆಯನ್ನ ಬೇಡುವ ಹುದ್ದೆಯನ್ನ ಬಿಟ್ಟು , ಡೇಟಾ ಎಂಟ್ರಿ , ಅಡ್ಮಿನಿಸ್ಟ್ರೇಷನ್ , ಸೇಲ್ಸ್ ಇತ್ಯಾದಿ ಕೆಲಸಗಳಿಗೆ ಡಿಗ್ರಿ ಕಡ್ಡಾಯವಲ್ಲ. ಇದೆಲ್ಲಕ್ಕಿಂತ ಹೆಚ್ಚಿನ ಆಶ್ಚರ್ಯ ತಂದ ವಿಷಯ ನನ್ನ ಮಟ್ಟಿಗೆ ಅಂದಿನ ದಿನಕ್ಕೆ ಉನ್ನತ ವಿದ್ಯಾಭ್ಯಾಸ ಮಾಡಿದ ಹೆಣ್ಣು ಮಕ್ಕಳು ಕಾರ್ಪೆಂಟರ್ , ವೆಲ್ಡರ್ , ಪೈಂಟರ್ ವೃತ್ತಿಯವರನ್ನ ಬಾಳಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವುದು ! ಇಂತಹ ವಿಷಯವನ್ನ ನಾವು ಭಾರತದಲ್ಲಿ ಊಹೆ ಮಾಡಿಕೊಳ್ಳಲು ಅಸಾಧ್ಯ .
ಅಲ್ಲೊಂದು ಇಲ್ಲೊಂದು ಅಪವಾದವಿರಬಹದು , ಆದರೆ ಇಲ್ಲಿನ ಸಮಾಜ ಒಪ್ಪಿಕೊಂಡಂತೆ ನಮ್ಮ ಸಮಾಜ ಯಾವುದೇ ಪೂರ್ವಾಗ್ರಹವಿಲ್ಲದೆ ಹೀಗೆ ಒಪ್ಪಿಕೊಳ್ಳುವುದೇ ? ಎನ್ನುವುದು ಇಂದಿಗೂ ನನಗೆ ಸಂಶಯ. ಇದು ಶಿಕ್ಷಣ ವ್ಯವಸ್ಥೆಯಲ್ಲಿ ಮತ್ತು ಶಿಕ್ಷಣ ಕುರಿತು ಸಾಮಾಜಿಕ ವ್ಯವಸ್ಥೆಯಲ್ಲಿ ಭಾರತೀಯರಿಗೂ ಮತ್ತು ಸ್ಪ್ಯಾನಿಷ್ ಜನರಿಗೂ ಇರುವ ಮೂಲಭೂತ ವ್ಯತ್ಯಾಸ. ಉಳಿದಂತೆ ಇಂತಹ ಅನೇಕ ವಿಷಯಗಳು ಅಂದಿನ ದಿನದಲ್ಲಿ ನನ್ನನ್ನ ಅಚ್ಚರಿಯ ಕೂಪಕ್ಕೆ ತಳ್ಳಿದ್ದವು .
ಅದು 2002ರ ಸೆಪ್ಟೆಂಬರ್ ತಿಂಗಳ ಒಂದು ದಿನ. ನಾನು ಬಾರ್ಸಿಲೋನಾ ಮೆಟ್ರೋ ದಲ್ಲಿ ಪ್ರಯಾಣಿಸುತ್ತಿದ್ದೆ. ಸುಮಾರು ಐದಾರು ವರ್ಷದ ಹೆಣ್ಣು ಮಗುವೊಂದು ಜೀಕುತ್ತಾ , ಕುಣಿಯುತ್ತಾ ಆಸನದ ಮೇಲೇರಿ ನಂತರ ಕೈಗೆ ಸಿಕ್ಕ ಸ್ಟೀಲ್ ಸಲಾಕೆಯನ್ನ ಹಿಡಿದು ಅದರ ಸಹಾಯದಿಂದ ಮೆಟ್ರೋ ರೈಲಿನ ಮೇಲ್ಚಾವಣಿಯನ್ನ ಮುಟ್ಟಿ ಬಿಟ್ಟಿತು ! ಆ ಪುಟಾಣಿಯ ಹೆತ್ತವರು ಮಗಳಾಡುತ್ತಿದ್ದ ಕ್ರೀಡೆಯನ್ನ ಆಸ್ವಾದಿಸುತ್ತಿದ್ದರು. ಅರೆರೆ ಇದೇನಿದು ಈ ಯುವ ಜೋಡಿಗೆ ಸ್ವಲ್ಪವೂ ಬುದ್ಧಿಯಿಲ್ಲ , ಮಗು ಬಿದ್ದರೇನು ಗತಿ ಎನ್ನುವ ಧಾವಂತ ನನ್ನದು.
ಅದನ್ನ ಪಕ್ಕದಲ್ಲಿ ಕುಳಿತ್ತಿದ್ದ ಗೆಳೆಯ ಸಹೋದ್ಯೋಗಿ ಫ್ರಾನ್ಸಿ ಯ ಕಿವಿಯಲ್ಲಿ ಉಸಿರಿದ್ದೆ. ಅವನು ಮೆಲ್ಲಗೆ ಇದೆಲ್ಲಾ ಇಲ್ಲಿ ಸಾಮಾನ್ಯ ಎನ್ನುವ ಲುಕ್ ಒಂದನ್ನ ಕೊಟ್ಟ . ನಾವು ಸ್ಪ್ಯಾನಿಶರು ಇರುವುದು ಹೀಗೆ ಎಂದ . ಮಗು ಹುಟ್ಟಿದ ಎರಡು ತಿಂಗಳ ನಂತರ ಅದನ್ನ ಬೇರೆಡೆ ಮಲಗಿಸಲು ಶುರು ಮಾಡುತ್ತಾರೆ. ಮಗು ಐದು ವರ್ಷದ ವೇಳೆಗೆ ಬಹುತೇಕೆ ಇಂಡಿಪೆಂಡೆಂಟ್ ಆಗಿರುತ್ತದೆ. ತನ್ನ ಬೇಕು ಬೇಡಗಳ ಬಗ್ಗೆ ಅಷ್ಟೊಂದು ಸ್ಪಷ್ಟತೆ ಇರುವುದನ್ನ ಕಂಡಾಗ ಬೇಗ ಈ ಮಕ್ಕಳ ಬಾಲ್ಯವನ್ನ ಕಸಿದು ಕೊಂಡರೇನೂ ಅನ್ನಿಸುತ್ತದೆ. ಆದರೆ ಈ ಸಮಾಜ ಇರುವುದು ಹೀಗೆ .
ಮೆಟ್ರೋ ಮೇಲ್ಚಾವಣಿಯನ್ನ ಸಲೀಸಾಗಿ ಏರಿದ ಆ ಮುದ್ದು ಮಗುವ ಕೆನ್ನೆಯನ್ನ ಹಿಂಡಿ ಒಂದು ಮುತ್ತು ಕೊಡಬೇಕು ಎನ್ನುವ ಮನಸ್ಸಿನ ಭಾವನೆಗೆ ಕೂಡ ಇಲ್ಲಿ ಬೆಲೆಯಿಲ್ಲ. ಭಾರತದಲ್ಲಿ ಇಂದಿಗೂ ಮುದ್ದಾದ ಮಕ್ಕಳು ರಸ್ತೆಯಲ್ಲಿ ಕಂಡರೆ ಧೈರ್ಯವಾಗಿ ಅವುಗಳ ಗಲ್ಲ ಸವರಿ ' ಏನು ಪುಟ್ಟ ನಿನ್ನ ಹೆಸರು ?' ಎನ್ನಬಹುದು . ಆದರೆ ಇದು ಸ್ಪೇನ್ ನಲ್ಲಿ ಸಾಧ್ಯವಿಲ್ಲ. ನಮಗೆ ತೀರಾ ಪರಿಚಿತರಲ್ಲದ ಹೊರತು ಹೀಗೆ ಬೇರೆ ಯಾವುದೇ ಮಗುವ ಮುಟ್ಟುವುದು ಇಲ್ಲಿ ಸಮಾಜ ಒಪ್ಪುವುದಿಲ್ಲ. ಹೀಗಾಗಿ ಮುದ್ದಾದ ಆ ಮುಗುವನ್ನ ಮುಟ್ಟುವ ತವಕವನ್ನ ಕೂಡ ಅದುಮಿಟ್ಟು ಕೊಳ್ಳಬೇಕಾಯಿತು.
ನನ್ನೆಲ್ಲ ಪ್ರಶ್ನೆಗೆ ಉತ್ತರಿಸಿದ್ದ ಫ್ರಾನ್ಸಿ ನಾನು ನಿನಗೊಂದು ಪ್ರಶ್ನೆ ಕೇಳಲೇ ಎಂದಾಗ ಇಲ್ಲ ಎನ್ನಲಾದೀತೆ ? ಕೇಳಪ್ಪ ಎಂದಿದ್ದೆ. ಅವನು ' ನಿಮ್ಮಲ್ಲಿ ಹೀಗೆ ಮಕ್ಕಳಿಗೆ ಸ್ವತಂತ್ರವಾಗಿ ಬಿಡುವುದಿಲ್ಲವೇ ಎಂದ . ಅವನಿಗೇನು ಉತ್ತರ ಹೇಳುವುದು ? ಸಾಮನ್ಯವಾಗಿ ' ಏಯ್ ಇಳಿಬೇಗ ಬಿದ್ದು ತಲೆಗೆ ತಂದಿಯ ' ಎಂದೂ ಅಥವಾ 'ಹುಷಾರು ಬಿದ್ದೀಯ ' ಎನ್ನುವುದು ನಮ್ಮಲ್ಲಿ ಕಾಮನ್ ಎಂದಿದ್ದೆ. ಸ್ಪ್ಯಾನಿಷ್ ಸಮಾಜದಂತೆ ನಮಗೆ ನಮ್ಮ ಮಕ್ಕಳು ಬೇಗ ಇಂಡಿಪೆಂಡೆಂಟ್ ಆಗಲಿ ಎನ್ನುವ ಧಾವಂತ ಇಲ್ಲ ಎನ್ನುವುದನ್ನ ಕೂಡ ಹೇಳಿದೆ.
ಫ್ರಾನ್ಸಿ ಅಲ್ಲದೆ ಅವನ ಕುಟುಂಬದ ಇತರ ಸದಸ್ಯರ ಪರಿಚಯ ಕೂಡ ನನಗಿತ್ತು. ಫ್ರಾನ್ಸಿ ತನ್ನ ಪ್ರೀತಿಯ ಹುಡುಗಿಯ ಜೊತೆಗೆ ಲಿವಿನ್ ರಿಲೇಷನ್ಶಿಪ್ ನಲ್ಲಿದ್ದ. ಹಾಗೊಮ್ಮೆ ಹೀಗೊಮ್ಮೆ ಹೆತ್ತವರ ನೋಡಲು ಹೋಗುತ್ತಿದ್ದ. ಇದು ಈ ಸಮಾಜದಲ್ಲಿ ಅತ್ಯಂತ ಸಹಜ ಮತ್ತು ಸಾಮಾನ್ಯ. ವಯಸ್ಸಿಗೆ ಬಂದ ಮಗ ಅಥವಾ ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ ಸಂಗಾತಿಯಿಲ್ಲ ಎನ್ನುವುದನ್ನ ಈ ಸಮಾಜದಲ್ಲಿ ಕೊರತೆ ಎನ್ನುವಂತೆ ನೋಡಲಾಗುತ್ತದೆ.
ಹೀಗೆ ಒಮ್ಮೆ ಫ್ರಾನ್ಸಿಯ ತಾತ ಮಾತಿಗೆ ಸಿಕ್ಕಿದ್ದರು . ಅವರೊಂದಿಗೆ ಮಾತನಾಡುವುದು ಎಂದರೆ ನನಗೆ ಅತ್ಯಂತ ಖುಷಿಯ ವಿಷಯ. ಫ್ರಾನ್ಸಿ ಮಾತ್ರ ಅದೇನು ಅಷ್ಟೊಂದು ನನ್ನ ತಾತನ ಹತ್ತಿರ ಮಾತನಾಡುತ್ತೀಯ ? ಆತನ ಮಾತುಗಳು ಬರಿ ಬೋರಿಂಗ್ ಎನ್ನುತ್ತಿದ್ದ. ಹೌದಪ್ಪ ನಿನಗೆ ಬೋರಿಂಗ್ ನನಗೆ ಅವರೊಂದು ಇತಿಹಾಸದ ತುಣುಕು ಎನ್ನುತ್ತಿದ್ದೆ. ಅವನಿಗೆ ಅದು ಅರ್ಥವಾಗುತ್ತಿರಲಿಲ್ಲ ' ಕೊಮೊ ತು ಕಿಯರೆಸ್ (ನಿನ್ನಿಷ್ಟ ಎನ್ನುವ ಅರ್ಥ ) ಎಂದು ನಮ್ಮಿಬ್ಬರನ್ನ ಬಿಟ್ಟು ಹೊರಟು ಬಿಡುತ್ತಿದ್ದ.
ಫ್ರಾನ್ಸಿಯ ತಾತ 1930ರ 40ರ ಸ್ಪ್ಯಾನಿಷ್ ಬದುಕು , ಶಿಕ್ಷಣದ ಬಗ್ಗೆ ಬಹಳ ಹೇಳುತ್ತಿದ್ದರು. ಅಲ್ಲಿನ ಶಾಲೆಯಲ್ಲೂ ತಪ್ಪು ಮಾಡಿದ ಮಕ್ಕಳಿಗೆ ಬಸ್ಕಿ ಹೊಡೆಸುವುದು , ಕಪ್ಪೆ ಕೂಡಿಸುವುದು , ಮಂಡಿಯ ಮೇಲೆ, ಗೆಣ್ಣ ಮೇಲೆ ಹೊಡೆಯುವುದು , ತರಗತಿಯಿಂದ ಹೊರಗಡೆ ನಿಲ್ಲಿಸುವುದು , ಬೇರೆ ಮಕ್ಕಳ ಕೈಯಲ್ಲಿ ಮೂಗು ಹಿಡಿಸಿ ಕೆನ್ನಗೆ ಬಾರಿಸುವುದು ಎಲ್ಲವೂ ಇತ್ತಂತೆ !! ಕಾಲ ಬದಲಾಯಿತೋ ಅಥವಾ ನಾವು ಬದಲಾದೆವೋ ಗೊತ್ತಿಲ್ಲ ರಂಗ , ಇವತ್ತು ಮಕ್ಕಳನ್ನ ಮುಟ್ಟುವಂತೆಯೂ ಇಲ್ಲ ಹೊಡೆಯುವುದು ದೊಡ್ಡ ಮಾತು , ಶಿಕ್ಷೆ ಇಲ್ಲದೆ ಶಿಕ್ಷಣ ಕಲಿಸುವುದಾದರೂ ಹೇಗೆ ಎಂದು ನಿಟ್ಟಿಸುರು ಬಿಟ್ಟ ಆತನ ಮುಖ ಇನ್ನೂ ಮಸ್ತಕದಲ್ಲಿ ಹಸಿರಾಗಿದೆ.
ಭಾರತದಲ್ಲಿ ಕೂಡ ವ್ಯವಸ್ಥೆಯಲ್ಲಿ ಬಹಳ ವ್ಯತ್ಯಾಸವೇನೂ ಉಳಿದುಕೊಂಡಿಲ್ಲ. ಬೇಡವಾದದ್ದು ಜಾಗತಿಕವಾಗಿ ಅದೆಷ್ಟು ವೇಗವಾಗಿ ಹಬ್ಬಿ ಬಿಡುತ್ತದೆ ಎನ್ನುವುದನ್ನ ಕಂಡಾಗೆಲ್ಲ ಫ್ರಾನ್ಸಿಯ ತಾತನ ನಿಟ್ಟಿಸುರು ನನ್ನದು ಕೂಡ ! .












Click it and Unblock the Notifications