• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಯಿ ಸಾಕುವುದು ಶೋಕಿಯಲ್ಲ ! ಅದರ ಕಕ್ಕವನ್ನ ಎತ್ತುವುದು ಇಲ್ಲಿ ಶಿಷ್ಟಾಚಾರ !!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಮೈಸೂರಿಗೆ ಬಂದು ನೆಲಸಿ ಎರಡು ತಿಂಗಳಾಗುತ್ತಾ ಬಂದಿತು. ಬೆಂಗಳೂರಿಗರಲ್ಲಿ ಮತ್ತು ಮೈಸೂರಿಗರಲ್ಲಿ ಒಂದು ಸಾಮ್ಯತೆಯನ್ನ ಕಂಡು ಹಿಡಿಯುವಲ್ಲಿ ಸಫಲನಾಗಿದ್ದೇನೆ. ಕೋಟಿ ಕೋಟಿ ಬೆಲೆ ಬಾಳುವ ಮನೆಯ ಮಾಲೀಕರು ಬೆಳಿಗ್ಗೆ ಮತ್ತು ಸಾಯಂಕಾಲ ಕೈಯಲ್ಲಿ ತಾವು ಸಾಕಿರುವ ವಿದೇಶಿ ತಳಿಯ ನಾಯಿಯನ್ನ ಹಿಡಿದು ಕೊಂಡು ಬೀದಿಗೆ ಬರುತ್ತಾರೆ. ಹಾಗೆ ಅವರು ಬೀದಿಗೆ ಬರುವುದು ಏಕೆ ಗೊತ್ತೇ ? ಆ ನಾಯಿಯ ಮಲ ಮೂತ್ರ ವಿಸರ್ಜನೆಗೆ ಅನುವು ಮಾಡಿಕೊಡುವುದಕ್ಕೆ !

ರಸ್ತೆಯಲ್ಲಿ ಆ ನಾಯಿ ವಿಸರ್ಜಿಸಿದ ನಂತರ ಆ ನಾಯಿಯ ಮಾಲೀಕರು ಕೆಲಸ ಮುಗಿಯಿತು ಎನ್ನುವಂತೆ ಹೊರಟು ಹೋಗುತ್ತಾರೆ. ಈ ಖಾಯಿಲೆ ಬೆಂಗಳೂರಿಗೆ ಮಾತ್ರ ಎಂದುಕೊಂಡಿದ್ದ ನನಗೆ ನಿನ್ನೆ ಆಘಾತವಾಯ್ತು . ಮೈಸೂರಿಗರು ಕೂಡ ಈ ವಿಷಯದಲ್ಲಿ ಬೆಂಗಳೂರಿಗರಿಗಿಂತ ಕಡಿಮೆಯೇನಿಲ್ಲ . ನಮ್ಮ ಮನೆಯ ಮುಂದಿನ ಮನೆಯವರು ರಾಕಿಯನ್ನ ಸಾಕಿದ್ದಾರೆ. ಆ ನಾಯಿಯ ಹೆಸರು ರಾಕಿ ಎನ್ನುವುದು ನಮ್ಮ ರೋಡ್ನಲ್ಲಿರುವ ಎಲ್ಲರಿಗೂ ಗೊತ್ತು . ಇಂತಿಪ್ಪ ರಾಕಿಯ ಅವರು ಹೊರಗೆ ಕರೆದುಕೊಂಡು ಬರುವುದು ಮಲ ಅಥವಾ ಮೂತ್ರ ವಿಸರ್ಜನೆಗೆ ಮಾತ್ರ .

ಕಲ್ಸೊಟ್ಸ್ ! ಸುಟ್ಟ ಈರುಳ್ಳಿ ತಿನ್ನುವುದೂ ಇಲ್ಲಿ ಸಡಗರ !!ಕಲ್ಸೊಟ್ಸ್ ! ಸುಟ್ಟ ಈರುಳ್ಳಿ ತಿನ್ನುವುದೂ ಇಲ್ಲಿ ಸಡಗರ !!

ಆಮೇಲೆ ಕೆಲಸವಾಯ್ತು ಎಂದು ಅದನ್ನ ಕಟ್ಟಿ ಹಾಕುತ್ತಾರೆ . ಹೀಗಾಗಿ ರಸ್ತೆಯ ತುಂಬಾ ರಾಕಿಯ ಮಲ , ಮೂತ್ರದ್ದೇ ಸಾಮ್ರಾಜ್ಯ . ಅತ್ಯಂತ ಸಂಭಾವಿತರೂ , ಸಂಸ್ಕೃತವಂತರಂತೆ ಕಾಣುವ ಎಲ್ಲಾ ವಿದೇಶಿ ತಳಿಯ ಮಾಲೀಕರ ಈ ವರ್ತನೆ ಬೇಡವೆಂದರೂ ನನ್ನ ಬಾರ್ಸಿಲೋನಾ ದಿನಗಳ ನೆನಪನ್ನ ಕೆದಕುತ್ತದೆ.

ಇಲ್ಲಿನ ಜನರು ಬಹಳ ಶ್ವಾನ ಪ್ರಿಯರು. ಮುಕ್ಕಾಲು ಪಾಲು ಜನ ನಾಯಿಯನ್ನ ಸಾಕುತ್ತಾರೆ. ಕೆಲವರಂತೂ ಐದು , ಆರು ನಾಯಿಗಳನ್ನ ಹಿಡಿದು ರಸ್ತೆಯಲ್ಲಿ ಶೀಘ್ರ ನಡಿಗೆ ಅಥವಾ ಓಟದಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಇಲ್ಲಿ ಸಾಮಾನ್ಯ. ಇಲ್ಲಿನ ಜನ ಸದಾ ತಮ್ಮ ಬ್ಯಾಗಿನಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನ ಮತ್ತು ಪ್ಲಾಸ್ಟಿಕ್ ಕೈಚೀಲವನ್ನ ಇಟ್ಟು ಕೊಂಡಿರುತ್ತಾರೆ. ತಮ್ಮ ನಾಯಿ ವಿಸರ್ಜಿಸಿದ ಮಲವನ್ನ ಎತ್ತಿ ಅದನ್ನ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸಿ ಮತ್ತೆ ಅದನ್ನ ಹತ್ತಿರವಿರುವ ಕಸದ ಬುಟ್ಟಿಗೆ ಬಿಸಾಡಿ ಬರುತ್ತಾರೆ.

ನಿಮಗೆಲ್ಲಾ ನೆನಪಿರಲಿ ಇಲ್ಲಿ ಇದನ್ನ ಕುರಿತು ಯಾವುದೇ ಕಾನೂನು ಇಲ್ಲ . ನಾಯಿಯ ಮಲವನ್ನ ಎತ್ತುವುದು ಕಡ್ಡಾಯವಲ್ಲ. ಆದರೂ ಇಲ್ಲಿನ ಜನ ಮಾತ್ರ ಚಾಚೂ ತಪ್ಪದೆ ಶಿಷ್ಟಾಚಾರವನ್ನ ಪಾಲಿಸುತ್ತಾರೆ. ಕತಲೂನ್ಯ ರಾಜ್ಯದ ಜನ ಈ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಹೀಗಾಗಿ ಇಲ್ಲಿ ನಾಯಿ ಸಾಕುವುದು ಶೋಕಿಗಾಗಿ ಅಲ್ಲ , ಅದೊಂದು ಬದ್ಧತೆಯನ್ನ ಬೇಡುತ್ತದೆ. ನಿಮ್ಮ ನಾಯಿ ಮಾಡುವ ಮಲದಿಂದ ಮತ್ಯಾವುದೇ ವಿಷಯವಿರಲಿ ಸಮಾಜಕ್ಕೆ ನೀವು ಜವಾಬ್ದಾರರು.

ಇದೆ ಮಾತನ್ನ ಸ್ಪೇನ್ ದೇಶದ ರಾಜಧಾನಿ ಮ್ಯಾಡ್ರಿಡ್ ನಲ್ಲಿ ಹೇಳಲು ಬರುವುದಿಲ್ಲ. ಇದರರ್ಥ ಇಲ್ಲಿ ನಾಯಿಯ ಹೊಲಸನ್ನ ರಸ್ತೆಯಲ್ಲಿ ಬಿಟ್ಟು ಹೋಗಬಹದು ಎಂದಲ್ಲ . ಒಬ್ಬರೋ ಇಬ್ಬರೋ ಅದನ್ನ ಎತ್ತಿ ಕಸದ ಬುಟ್ಟಿಗೆ ಹಾಕದೆ ಹೋಗುತ್ತಾರೆ. ಕೆಲವರಂತೂ ಬೆಳಿಗ್ಗೆ ಬೇಗ ನಾಯಿಯನ್ನ ಕರೆದುಕೊಂಡು ಅದರ ಕ್ರಿಯೆ ಮುಗಿಸಿಕೊಂಡು ಹೋಗುತ್ತಾರೆ. ಜನರಿಲ್ಲದ ವೇಳೆಯಲ್ಲಿ ಬಂದರೆ ಅದರ ಹೊಲಸನ್ನ ಎತ್ತುವ ಕೆಲಸವಿರುವುದಿಲ್ಲ ಎನ್ನುವುದು ಇವರ ಭಾವನೆ. ಹೀಗಾಗಿ ಒಂದೆರಡು ಪ್ರತಿಶತ ಜನ ಶಿಷ್ಟಾಚಾರವನ್ನ ಮರೆಯುತ್ತಾರೆ.

ಮ್ಯಾಡ್ರಿಡ್ ನಗರದಿಂದ 27ಕಿಲೋಮೀಟರ್ ದೂರದಲ್ಲಿರುವ ಬ್ರುನೆತ್ತೆ ಎನ್ನುವ ಪುಟ್ಟ ನಗರದಲ್ಲಿ ಹೀಗೆ ನಾಯಿಯ ಮಲವನ್ನ ಎತ್ತದೆ ರಸ್ತೆಯಲ್ಲಿ ಬಿಟ್ಟು ಹೋಗುವರ ಸಂಖ್ಯೆ ಹೆಚ್ಚಾಯ್ತು. ಇದು ಅಲ್ಲಿನ ನಗರಸಭೆಗೆ ತಲೆನೋವು ತರುವ ವಿಷಯವಾಯ್ತು. ಅದಕ್ಕೆ ಅವರು ಹೀಗೆ ನಾಯಿಯ ಮಲವನ್ನ ಎತ್ತದೆ ಬಿಟ್ಟು ಹೋದವರನ್ನ ಸಿಸಿ ಟಿವಿ ಕ್ಯಾಮೆರಾಗಳ ಮೂಲಕ ಪತ್ತೆ ಹಚ್ಚಿ ನಾಯಿಯ ಮಲವನ್ನ ಅವರ ಮನೆಗೆ ಕೋರಿಯರ್ ಮಾಡುವ ಹೊಸ ಪರಿಪಾಠ ಶುರು ಮಾಡಿದರು. ಅದು ಅವರಿಗೆ ಎಚ್ಚರಿಕೆಯ ನೋಟಿಸ್ .

ಎರಡನೇ ಬಾರಿ ಅದೇ ವ್ಯಕ್ತಿ ಮತ್ತೆ ಅದೇ ತಪ್ಪನ್ನ ಮಾಡಿದ್ದರೆ ಮತ್ತೆ ಕೋರಿಯರ್ ಕಳಿಸುತ್ತಾರೆ. ಜೊತೆಗೆ ಜೇಬಿಗೆ ಕತ್ತರಿಹಾಕುವ ದಂಡವನ್ನ ಕೂಡ ವಿಧಿಸಲು ಶುರು ಮಾಡಿದ್ದರು. ಎರಡು ವಾರದಲ್ಲಿ ಬ್ರುನೆತ್ತೆ ರಸ್ತೆಗಳಲ್ಲಿ ಕುಳಿತು ಊಟ ಮಾಡುವಷ್ಟು ಸ್ವಚ್ಛವಾಗಿದ್ದವು. ರೆಪ್ಸೊಲ್ ಸಂಸ್ಥೆಯ ಸೆಂಟ್ರೋ ದೆ ಟೆಕ್ನಾಲಜಿ ಯಲ್ಲಿ ಕೆಲಸ ಮಾಡುತ್ತಿದ್ದ ತಮ್ಮ ಲಕ್ಷ್ಮೀಕಾಂತ ಅಂದಿನ ದಿನದಲ್ಲಿ ಬ್ರುನೆತ್ತೆ ನಗರದ ನಿವಾಸಿಯಾಗಿದ್ದ. ಅವನನ್ನ ನೋಡಲು ಆಗತಾನೆ ಹೊಸದಾಗಿ ಶುರುವಾಗಿದ್ದ ಬುಲೆಟ್ ಟ್ರೈನ್ ನಲ್ಲಿ ಬಾರ್ಸಿಲೋನಾ ದಿಂದ ಮ್ಯಾಡ್ರಿಡ್ ಗೆ ಪ್ರಯಾಣ ಮಾಡಿದ ಅನುಭವವನ್ನ ಮತ್ತೊಮ್ಮೆ ಹಂಚಿಕೊಳ್ಳುವೆ.

 ಗಲಿಬಿಲಿ ಮನಸ್ಸಿನಿಂದಲೇ ಸ್ಥಿರತೆ, ಸಾವಿನ ನೆರಳಲ್ಲೇ ಬದುಕಿನ ಚಿಗುರು ಕೊನರುತ್ತದೆ!! ಗಲಿಬಿಲಿ ಮನಸ್ಸಿನಿಂದಲೇ ಸ್ಥಿರತೆ, ಸಾವಿನ ನೆರಳಲ್ಲೇ ಬದುಕಿನ ಚಿಗುರು ಕೊನರುತ್ತದೆ!!

ನಮ್ಮಲ್ಲಿ ಮಾತ್ರ ರಸ್ತೆಯಿರುವದೇ ಇಂತಹ ಕ್ರಿಯೆಗೆ ಎನ್ನುವಂತೆ ಹಕ್ಕಿನಿಂದ ಬಂದು ನಾಯಿಯ ಸಕಲ ಕ್ರಿಯೆಗಳನ್ನೂ ಅಲ್ಲಿ ತೀರಿಸಿಕೊಂಡು ಹೋಗುವ ನಾಯಿಯ ಮಾಲೀಕರಿಗೆ ಇದು ಸ್ವಲ್ಪವಾದರೂ ಅರ್ಥವಾದರೆ ಅಷ್ಟು ಸಾಕು. ಆಶ್ಚರ್ಯವೆಂದರೆ ಇಲ್ಲಿನ ಬಹುತೇಕ ನಾಯಿಯ ಮಾಲೀಕರಿಗೆ ಇದು ತಪ್ಪು ಎನ್ನುವ ಅರಿವು ಕೂಡ ಇಲ್ಲದಿರುವುದು ! ಭೂಮಿಯ ಈ ಭಾಗದಲ್ಲಿ ಇದೊಂದು ಸಹಜ ಕ್ರಿಯೆ . ಯಾರಿಗೂ ಅಪರಾಧಿ ಭಾವ ಅಥವಾ ತಪ್ಪಾಯಿತು ಎನ್ನುವ ಭಾವನೆ ಕಾಡದಿರುವುದು ಸೋಜಿಗ ಮತ್ತು ನಮ್ಮ ಸಮಾಜದ ದುರಂತ .

ನಾವೇಕೆ ಹೀಗೆ ಎನ್ನುವುದನ್ನ ನಾನು ಹಲವು ಬಾರಿ ಚಿಂತಿಸುತ್ತಿರುತ್ತೇನೆ. ಇಂತಹ ಘಟನೆಗಳನ್ನ ಇಲ್ಲಿ ಬರೆಯುವ ಮತ್ತು ಹಂಚಿಕೊಳ್ಳುವ ಉದ್ದೇಶ ಯಾರು ಸರಿ ಅಥವಾ ಯಾರು ತಪ್ಪು ಎನ್ನುವುದಕ್ಕಲ್ಲ , ಅಥವಾ ಶ್ರೇಷ್ಠ , ನಿಕೃಷ್ಟದ ತೀರ್ಮಾನಕ್ಕೂ ಅಲ್ಲ . ಅವರೇಕೆ ಹಾಗೆ ? ನಾವೇಕೆ ಹೀಗೆ ? ಎನ್ನುವ ಸಹಜ ಕುತೂಹಲ , ಜೊತೆಗೆ ಒಳ್ಳೆಯ ವಿಷಯವಿದ್ದಲ್ಲಿ , ಸಾಧ್ಯವಾದಲ್ಲಿ ನಾವು ಸ್ವಲ್ಪ ಕಲಿಯಬಹದುದಲ್ಲ ಎನ್ನುವುದು ಉದ್ದೇಶ. ಇದಕ್ಕೆ ಪೂರಕವಾಗಿ ಇನ್ನೊಂದು ಘಟೆನಯನ್ನ ನಿಮ್ಮೊಂದಿಗೆ ಹಂಚಿಕೊಳ್ಳುವೆ.

ಸ್ಪೇನ್ ನಲ್ಲಿ ಪಾಯಿಸ್ ಬಾಸ್ಕೋ ( ಬಾಸ್ಕೊ ದೇಶ ) ಎನ್ನುವ ರಾಜ್ಯವಿದೆ. ಈ ರಾಜ್ಯ ಕೂಡ ಸ್ಪೇನ್ ನಿಂದ ಹೊರಹೋಗಿ ಸ್ವಾತಂತ್ರ್ಯ ದೇಶವಾಗಿ ಗುರುತಿಸಿಕೊಳ್ಳಬೇಕು ಎಂದು ಬಹಳ ವರ್ಷಗಳಿಂದ ಸೆಣಸಾಡುತ್ತಾ ಬಂದಿದೆ. ಕತಲಾನಾರು ಮಾತುಕತೆ ಮತ್ತು ಶಾಂತಿಯ ದಾರಿಯಲ್ಲಿ ನಡೆದರೆ ವಾಸ್ಕೋ ಜನರಲ್ಲಿ ಕೆಲವರು 'ಏತಾ' ಎನ್ನುವ ಒಂದು ಸಂಘಟನೆಯನ್ನ ಹುಟ್ಟಿಹಾಕಿಕೊಂಡು ಆ ಮೂಲಕ ರಕ್ತದ ಹಾದಿಯನ್ನ ತುಳಿದಿದ್ದರು.

ಹೀಗೆ ಈ ಸಂಘಟನೆಯ ಸದಸ್ಯರನ್ನೂ ಅಥವಾ ಇನ್ಯಾವುದೇ ಕ್ರಿಮಿನಲ್ ಗಳನ್ನ ಹಿಡಿದರೆ ಅವರ ಮುಖವನ್ನ ಪೂರ್ಣವಾಗಿ ಜನರಿಗೆ ಮತ್ತು ಕ್ಯಾಮೆರಾ ಕಣ್ಣಿಗೆ ತೆರೆದು ಹಿಡುತ್ತಾರೆ. ಅವರ ಅಕ್ಕಪಕ್ಕ ನಿಂತ ಪೋಲೀಸರ ಮುಖವನ್ನ ಮಾತ್ರ ಪೂರ್ಣವಾಗಿ ಮುಚ್ಚಿರುತ್ತಾರೆ. ಕಣ್ಣಿನ ಬಳಿ ಸಣ್ಣ ರಂಧ್ರ ಬಿಟ್ಟರೆ ಬೇರೇನೂ ಕಾಣಿಸದ ಹಾಗೆ ಟೋಪಿಯಿಂದ ಪೋಲೀಸರ ಮುಖವನ್ನ ಮುಚ್ಚುತ್ತಾರೆ. ನಿರ್ಭಯ ಕೇಸು ವಿಶ್ವದಾದ್ಯಂತ ಸುದ್ದಿ ಮಾಡಿತು.

ಆಗೆಲ್ಲಾ ನನ್ನ ಸ್ಪ್ಯಾನಿಷ್ ಗೆಳೆಯರು ಅದೇಕೆ ನಿಮ್ಮ ದೇಶದಲ್ಲಿ ಅಪರಾಧಿಯ ಮುಖ ಮುಚ್ಚುತ್ತಿರ ? ಅಪರಾಧಿ ಯಾರು ಎನ್ನುವುದು ಜನಕ್ಕೆ ತಿಳಿಯಬೇಕು. ನೀವು ಮುಖ ಮುಚ್ಚುವುದಿದ್ದರೆ ಪೋಲೀಸರ ಮುಖ ಮುಚ್ಚಿ ಏಕೆಂದರೆ ಇಂದಲ್ಲ ನಾಳೆ ಆ ಪೊಲೀಸರಿಗೆ ಕಿಡಿಗೇಡಿಗಳು ಅಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ ಎನ್ನುವ ಮಾತುಗಳನ್ನ ಆಡುತ್ತಿದ್ದರು. ಅದೆಷ್ಟು ನಿಜವಲ್ಲವೇ ? ಮುಖ ಕಾಣದ ಅಪರಾಧಿ ನಂತರ ವಶೀಲಿಬಾಜಿಯ ಪರಿಣಾಮವಾಗಿ ಹೊರಗೆ ಬಂದು ಅಡ್ಡಾಡುತ್ತಿದ್ದರು ಜನ ಸಾಮಾನ್ಯನಿಗೆ ತಿಳಿಯುವುದಿಲ್ಲ ಅಲ್ಲವೇ ?

ಇನ್ನು ಭ್ರಷ್ಟಾಚಾರದ ವಿಷಯದಲ್ಲೂ ಅಷ್ಟೇ , ಸಾಮಾನ್ಯ ಜನರಿಗೆ ಯಾವುದೇ ರೀತಿಯ ನೋವು ತಟ್ಟುವುದಿಲ್ಲ. ಅಂದರೆ ಬರ್ತ್ ಸರ್ಟಿಫಿಕೇಟ್ ಇರಲಿ ಅಥವಾ ಡೆತ್ , ಹೊಸದಾಗಿ ಅಂಗಡಿಯನ್ನ ತೆಗೆಯಲು ಪರವಾನಿಗೆ , ಹೀಗೆ ವಿಷಯ ಯಾವುದೇ ಇರಲಿ , ಎಲ್ಲಾ ಕೆಲಸಗಳೂ ಯಾವುದೇ ತೊಂದರೆಯಿಲ್ಲದೆ ತಕ್ಷಣ ಆಗಿ ಹೋಗುತ್ತದೆ. ಅಂದ ಮಾತ್ರಕ್ಕೆ ಇಲ್ಲಿ ಭ್ರಷ್ಟಾಚಾರ ಇಲ್ಲವೆಂದಲ್ಲ , ಇಲ್ಲಿ ರಾಜನ ಮಗಳು ಮತ್ತು ಅಳಿಯನನ್ನ ದೇಶದಿಂದ ಉಚ್ಚಾಟನೆ ಮಾಡುವ ಆದೇಶವನ್ನ ಕೂಡ ಇಲ್ಲಿನ ಕೋರ್ಟ್ ಹೊರಡಿಸಿತ್ತು.

ಕಾರಣ ರಾಜನ ಮಗಳು ಮತ್ತು ಅಳಿಯ ಬ್ಯಾಂಕಿನ ಅವ್ಯವಹಾರದಲ್ಲಿ ಪಾಲುದಾರರು ಎನ್ನುವುದಾಗಿತ್ತು. ಜನ ಸಾಮಾನ್ಯ ಇತರ ನಾಗರಿಕನ ನೋವಿಗೆ ಸ್ಪಂದಿಸುತ್ತಾನೆ. ಸಾಮಾನ್ಯ ಮಟ್ಟದಲ್ಲಿ ಇಲ್ಲಿ ಭ್ರಷ್ಟಾಚಾರ ಇಲ್ಲವೆನ್ನಿಸುವಷ್ಟು ಕಡಿಮೆ. ನಾವು ಮಾತ್ರ ಹಾಗಲ್ಲ , ನಮ್ಮದು ಅತಿ ಸಣ್ಣ ಮಟ್ಟದಿಂದ ಕೂಡ ಭ್ರಷ್ಟಾಚಾರದ ಮನಸ್ಥಿತಿ . ಅಲ್ಲಿ ಮ್ಯಾಕ್ರೋ ಲೆವೆಲ್ ನಲ್ಲಿರುವುದು ಇಲ್ಲಿ ಎಲ್ಲಾ ದರ್ಜೆಗಳಲ್ಲೂ ಉಂಟು . ಕೂತರು , ನಿಂತರೂ ಭ್ರಷ್ಟಾಚಾರದ ನಾವು ಅವರ ದೇಶದಂತೆ ಮುಂದುವರೆದ ದೇಶವಾಗುವುದು ಯಾವಾಗ ?

ಸ್ಪ್ಯಾನಿಷ್ ಸಮಾಜದ ಹಲವು ರೀತಿ ರಿವಾಜುಗಳಿಗೆ ತದ್ವಿರುದ್ಧವಾಗಿ ನಮ್ಮ ಸಮಾಜದ ನಡವಳಿಕೆಯಿದೆ. ಗಮನಿಸಿ ನೋಡಿ ನಮ್ಮಲ್ಲಿ ಮದುವೆಯಾದ ಮೇಲೆ ಹೆಣ್ಣು ಮಕ್ಕಳು ಗಂಡನ ಮನೆಗೆ ಹೋಗುತ್ತಾರೆ, ಇದು ಇಲ್ಲಿ ಅತ್ಯಂತ ಸಹಜವಾದ ಕ್ರಿಯೆ. ಸ್ಪೇನ್ ದೇಶದಲ್ಲಿ ಹೆಣ್ಣು ಮಕ್ಕಾಳಾಗಲಿ ಅಥವಾ ಗಂಡು , ಅವರ ಸಂಗತಿಯನ್ನ ಅವರೇ ಹುಡಕಿಕೊಳ್ಳಬೇಕು. ನಮ್ಮಲ್ಲಿರುವಂತೆ ಇಲ್ಲಿ ಕುಟುಂಬದ ಅನುಮತಿಯೊಂದಿಗೆ ವ್ಯವಸ್ಥಿತ (ಅರೆಂಜ್ಡ್ ) ಮದುವೆಯ ಪದ್ಧತಿ ಇಲ್ಲ. ಹೀಗೆ ಮದುವೆಯಾದ ನಂತರ ಇಬ್ಬರೂ ಸೇರಿ ತಮ್ಮದೇ ಆದ ಹೊಸ ಮನೆಯನ್ನ ಮಾಡಿಕೊಳ್ಳುತ್ತಾರೆ.

ಇದು ಸಾಮಾನ್ಯವಾಗಿ ಹುಡುಗಿಯ ಪೋಷಕರ ಮನೆಗೆ ಅತ್ಯಂತ ಸನಿಹದಲ್ಲಿರುತ್ತದೆ. ಕಾರಣ ಮುಂದೆ ಮಕ್ಕಳಾದಾಗ ಅವರನ್ನ ಹುಡುಗಿಯ ಪೋಷಕರ ಬಳಿ ಪೋಷಣೆಗೆ ಬಿಡುವುದು ಇಲ್ಲಿ ಸಾಮಾನ್ಯ. ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ಬಿಟ್ಟು , ಕೆಲಸದ ನಂತರ ಅಮ್ಮನ ಮನೆಯಿಂದ ಮಕ್ಕಳನ್ನ ಕರೆದುಕೊಂಡು ಹೋಗುವುದು ಇಲ್ಲಿ ವಾಡಿಕೆ.

 ಜಗತ್ತಿನಲ್ಲಿ ಕೆಟ್ಟದ್ದು ಎಷ್ಟಿದೆಯೋ ಅದರ 100 ಪಟ್ಟು ಒಳ್ಳೆಯದೂ ಇದೆ! ಜಗತ್ತಿನಲ್ಲಿ ಕೆಟ್ಟದ್ದು ಎಷ್ಟಿದೆಯೋ ಅದರ 100 ಪಟ್ಟು ಒಳ್ಳೆಯದೂ ಇದೆ!

18 ಅಥವಾ 20 ವರ್ಷದ ಹುಡುಗ ಅಥವಾ ಹುಡುಗಿ ಇನ್ನೂ ಸಂಗತಿಯನ್ನ ಹುಡಕಿಕೊಂಡಿಲ್ಲ ಎನ್ನುವುದು ಇಲ್ಲಿನ ಹೆತ್ತವರಿಗೆ ಚಿಂತೆಯ ವಿಷಯವಾಗುತ್ತದೆ. ಮದುವೆ ಎನ್ನುವುದು ಬಹಳ ವೈಯಕ್ತಿಕ ವಿಚಾರ. ಮದುವೆಯಾಗುವುದು ಬಿಡುವುದು ಇಲ್ಲಿ ಮುಖ್ಯವಾಗುವುದಿಲ್ಲ. ಸಂಗಾತಿಯನ್ನ ಹೊಂದುವುದು ಮಾತ್ರ ಇಲ್ಲಿ ಅತಿ ಮುಖ್ಯ. ಇಲ್ಲಿ ಒಂಟಿಯಾಗಿರುವ ಹುಡುಗನನ್ನ ' ನೋ ತಿಯನೆಸ್ ನೋವಿಯ ?' ( ನಿನಗೆ ಗರ್ಲ್ ಫ್ರೆಂಡ್ ಇಲ್ಲವೇ ? ) ಎಂದು ಕೇಳುವುದು ಸಾಮಾನ್ಯ.

ಹಾಗೆಯೇ ಹುಡುಗಿಯನ್ನ ' ನೋ ತಿಯನೆಸ್ ನೋವಿಯೋ ?' ( ಬಾಯ್ ಫ್ರೆಂಡ್ ಇಲ್ಲವೇ ) ಎಂದು ಪ್ರಶ್ನಿಸುವುದು ಕೂಡ ಅಷ್ಟೇ ಸಾಮಾನ್ಯ. ೨೦೦೫ ರಲ್ಲಿ ರಮ್ಯ ನನ್ನ ಬಾಳಿಗೆ ಬರುವವರೆಗೆ ನೂರಾರು ಬಾರಿ ನಿನಗೆ ಸಂಗಾತಿಯಿಲ್ಲವೇ ಎನ್ನುವ ಪ್ರಶ್ನೆಯನ್ನ ಕೇಳಿಸಿಕೊಂಡಿದ್ದೇನೆ. ಐದಾರು ವರ್ಷದ ಬ್ಯಾಚುಲರ್ ಜೀವನದಲ್ಲಿ ಗರ್ಲ್ ಫ್ರೆಂಡ್ ಇಲ್ಲದೆ ಇವನು ಇಷ್ಟು ವರ್ಷ ಹೇಗಿದ್ದಾನೆ ? ಎನ್ನುವುದು ನನ್ನ ಹಲವಾರು ಸ್ಪ್ಯಾನಿಷ್ ಮಿತ್ರರಿಗೆ ಅರಗಿಸಿಕೊಳ್ಳಗಾದ , ಮತ್ತು ಅವರ ಅರಿವಿಗೆ ಮೀರಿದ ವಿಷಯವಾಗಿತ್ತು. ಎಷ್ಟೋ ಜನ ನೀನು ' ಗೇ' ಇರಬಹದು ಅಂದುಕೊಂಡಿದ್ದೆವು ಎಂದಿದ್ದಾರೆ, ಇನ್ನು ಕೆಲವರು ನೀನು ಅಸೆಕ್ಸುಯಲ್ ಇರಬಹದುದೆಂದು ಭಾವಿಸೆದ್ದೆವು ಎನ್ನುವ ಮಾತನ್ನ ಕೂಡ ಆಡಿದ್ದಾರೆ.

ಒಂದೊಂದು ನೆಲದ ಭಾವನೆ , ರೀತಿ ನೀತಿಗಳು ಬದಲಾಗುತ್ತ ಹೋಗುತ್ತವೆ. ನಮ್ಮ ಜೀವನ ಶೈಲಿಗೆ ಹೊಂದುವ , ಸಮಾಜಕ್ಕೆ ಮತ್ತು ಇತರ ಸಹಜೀವಿಗಳಿಗೆ ಅನುಕೊಲವಾವುಗ ಒಳ್ಳೆಯ ವಿಷಯಗಳಿದ್ದರೆ ಅದನ್ನ ನಾವು ಕೂಡ ಅಳವಡಿಸಿಕೊಳ್ಳುವುದರಲ್ಲಿ ಸುಖವಿದೆ. ಉಳಿದದ್ದು ಅನುಭವದ ಮೊತ್ತವನ್ನ ಹೆಚ್ಚಿಸುತ್ತವೆ.

English summary
Barcelona Memories Column By Rangaswamy Mookanahalli Part 33
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X