• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಗವಿಕಲನ ನಾಗಾಲೋಟಕ್ಕೆ ಅಧಿಕಾರಿಗಳ ಅಡ್ಡಗಾಲು

By Staff
|

ಆಸ್ಕರ್ ಪಿಸ್ಟೋರಿಯಸ್ ಎಂದೂ ತನ್ನ ಅಸಹಾಯಕತೆಯ ಬಗ್ಗೆ ಕೊರಗುವುದಿಲ್ಲ, ಇತರರನ್ನು ಶಪಿಸುವುದಿಲ್ಲ. ನನಗೇಕೆ ಇಂತಹ ಸ್ಥಿತಿಯನ್ನು ಕೊಟ್ಟೆ ಅಂತ ದೇವರನ್ನೂ ದೂರುವುದಿಲ್ಲ. ಇಂಥ ಮಹಾನ್ ಸಾಧಕನಿಗೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನೇ ನಿರಾಕರಿಸಲಾಗುತ್ತಿದೆಯೆಂದರೆ ಏನರ್ಥ? ಕೈ-ಕಾಲು, ಕಣ್ಣು-ಕಿವಿ, ಮೂಗು-ಬಾಯಿ ಎಲ್ಲವನ್ನೂ ಹೊಂದಿದ್ದರೂ ನಮ್ಮ ನಾಗರಿಕ ಸಮಾಜದ ಮನಸ್ಸೇ ಊನಗೊಂಡಿದೆ ಎಂದನಿಸುವುದಿಲ್ಲವೆ?

The Leg less sprinterಅದೊಂದು ನೀತಿ ಕಥೆ. ಒಬ್ಬ ಅಂಧ ಹುಡುಗನಿರುತ್ತಾನೆ. ಆತನಿಗೆ ಎರಡೂ ಕಣ್ಣು ಕಾಣುವುದಿಲ್ಲ. ಭಿಕ್ಷೆ ಬೇಡುವುದೇ ನಿತ್ಯ ಕಾಯಕ. ದಿನಬೆಳಗಾದ ಕೂಡಲೇ ರಸ್ತೆ ಬದಿಗೆ ಬಂದು ಕುಳಿತುಕೊಳ್ಳುವ ಆತ ಆಗಸದತ್ತ ಬಾಯಿ ತೆರೆದುಕೊಂಡಿರುವ ಹ್ಯಾಟನ್ನು ಮುಂದೆ ಇಟ್ಟುಕೊಳ್ಳು ತ್ತಾನೆ. ಅದರ ಪಕ್ಕದಲ್ಲಿ "I am blind, please help ' ಎಂಬ ಪುಟ್ಟ ಬೋರ್ಡನ್ನೂ ನಿಲ್ಲಿಸುತ್ತಾನೆ. ಅದನ್ನು ನೋಡುವ ದಾರಿಹೋಕರಲ್ಲಿ ಕೆಲವರು ಹ್ಯಾಟ್‌ಗೆ ಚಿಲ್ಲರೆ ಹಾಕಿ ಮುಂದೆ ಹೋಗುತ್ತಾರೆ. ಆದರೆ ಯಾರೂ ಅಷ್ಟಾಗಿ ಸಹಾಯ ಮಾಡುವ ಮನಸ್ಸು ತೋರುತ್ತಿರಲಿಲ್ಲ. ಹೀಗಿರುವಾಗ, ಒಂದು ದಿನ ಅದೇ ಮಾರ್ಗವಾಗಿ ಸಾಗುತ್ತಿದ್ದ ಅಪರಿಚಿತ ಅಧಿಕಾರಿಯೊಬ್ಬ ಭಿಕ್ಷೆ ಬೇಡುತ್ತಿದ್ದ ಈ ಹುಡುಗನನ್ನು ಗಮನಿಸುತ್ತಾನೆ. ಬಳಿಗೆ ಬಂದ ಆತ ತನ್ನ ಪಾಕೆಟ್‌ನಿಂದ ಚಿಲ್ಲರೆ ತೆಗೆದು ಹ್ಯಾಟ್‌ಗೆ ಹಾಕುತ್ತಾನೆ. ಆದರೆ ಮುಂದೆ ಹೋಗುವ ಮೊದಲು ಅಂಧ ಹುಡುಗ ತನ್ನ ಮುಂದೆ ಇಟ್ಟುಕೊಂಡಿದ್ದ ಬೋರ್ಡ್‌ನ್ನು ಕೈಗೆತ್ತಿಕೊಂಡು ಅದರ ಹಿಂಭಾಗದ ಮೇಲೆ ಏನನ್ನೋ ಬರೆದು ಬೋರ್ಡನ್ನು ತಿರುಗಿಸಿಟ್ಟು ಮುಂದೆ ಸಾಗುತ್ತಾನೆ.

ಆಶ್ಚರ್ಯವೆಂದರೆ ಇದ್ದಕ್ಕಿದ್ದಂತೆ ಹ್ಯಾಟ್‌ನೊಳಕ್ಕೆ ನಾಣ್ಯಗಳು ಬೀಳಲಾರಂಭಿಸುತ್ತವೆ. ಸದಾ ಅದೇ ದಾರಿಯಲ್ಲಿ ಸಾಗುತ್ತಿದ್ದರೂ ಅದುವರೆಗೆ ಎಂದೂ ಸಹಾಯ ಮಾಡದ ದಾರಿಹೋಕರೂ ಚಿಲ್ಲರೆ ಹಾಕಲಾರಂಭಿಸುತ್ತಾರೆ! ಒಂದೆಡೆ ಹುಡುಗನ ಸಂತಸಕ್ಕೆ ಪಾರವೇ ಇಲ್ಲ. ಇನ್ನೊಂದೆಡೆ ಕುತೂಹಲ. ಒಮ್ಮಿಂದೊಮ್ಮೆಲೆ ಇಂತಹ ಬದಲಾವಣೆ ಹೇಗೆ ಎಂಬ ಪ್ರಶ್ನೆ. ಹೀಗೆ ಚಿಂತಿಸುತ್ತಿರುವಾಗಲೇ ಸಮಯ ಉರುಳಿ ಸಂಜೆಯಾಗುತ್ತದೆ. ಇನ್ನೇನು ಮನೆಯತ್ತ ತೆರಳಬೇಕು. ಅಷ್ಟರಲ್ಲಿ ಹೆಜ್ಜೆ ಸಪ್ಪಳ ಕೇಳಲಾರಂಭಿಸುತ್ತದೆ. ಅದು ಬೆಳಗ್ಗೆ ಬೋರ್ಡ್ ಹಿಂಬದಿ ಮೇಲೆ ಏನನ್ನೋ ಬರೆದು ತಿರುಗಿಸಿಟ್ಟ ವ್ಯಕ್ತಿಯದ್ದೇ ಎಂಬುದು ಹುಡುಗನಿಗೆ ಗೊತ್ತಾಗುತ್ತದೆ. “ಬೆಳಗ್ಗೆ ಬೋರ್ಡ್ ಬದಲಿಸಿದ್ದು ನೀವೇ ಅಲ್ಲವೆ?" ಎಂದು ಪ್ರಶ್ನಿಸುತ್ತಾನೆ. 'ಹೌದು" ಎಂಬ ಉತ್ತರ ಬರುತ್ತದೆ. ಹಾಗಂತ ಆ ಹುಡುಗ ಸುಮ್ಮನಾಗುವುದಿಲ್ಲ. 'ಅದರ ಮೇಲೆ ನೀವು ಬರೆದಿದ್ದಾದರೂ ಏನು?" ಎಂದು ಮರು ಪ್ರಶ್ನೆ ಹಾಕುತ್ತಾನೆ. 'I only wrote the truth." ಎಂದು ಉತ್ತರಿಸುತ್ತಾನೆ ಆ ಅಧಿಕಾರಿ. 'ನಾನು ಕುರುಡ, ದಯವಿಟ್ಟು ಸಹಾಯ ಮಾಡಿ" ಅಂತ ನಾನು ಬರೆದಿದ್ದೂ ಸತ್ಯವನ್ನೇ ಅಲ್ಲವೆ? ಎಂದು ಹುಡುಗ ಮತ್ತೆ ಪ್ರಶ್ನಿಸುತ್ತಾನೆ. ಅದಕ್ಕೆ, “ನೀನು ಬರೆದಿದ್ದೂ ಸತ್ಯವೇ. ಆದರೆ ಆ ಸತ್ಯವನ್ನು ನಾನು ಸ್ವಲ್ಪ ಭಿನ್ನವಾಗಿ ಬರೆದೆನಷ್ಟೇ" ಎನ್ನುತ್ತಾನೆ ಅಧಿಕಾರಿ.

ಆತ 'today is a beautiful day but I cannot see it " ಎಂದು ಬರೆದು ಹೋಗಿರುತ್ತಾನೆ. ಅದನ್ನು ನೋಡಿದ ದಾರಿಹೋಕರು “ನಮಗೆ ದೇವರು ಈ ಸುಂದರ ಪ್ರಪಂಚವನ್ನು ನೋಡುವ ಭಾಗ್ಯವನ್ನಾದರೂ ಕೊಟ್ಟಿದ್ದಾನೆ. ಪಾಪ... ಆ ಹುಡುಗನಿಗೆ ಆ ಭಾಗ್ಯವೂ ಇಲ್ಲ" ಎಂದು ಅನುಕಂಪದಿಂದ ಚಿಲ್ಲರೆ ಹಾಕಲಾರಂಭಿಸಿರುತ್ತಾರೆ. ಆದರೆ....

ಇಲ್ಲೊಬ್ಬ ವ್ಯಕ್ತಿಯಿದ್ದಾನೆ. ಆತನಿಗೆ ನಿಮ್ಮ ಅನುಕಂಪವಾಗಲಿ, ಮರುಕವಾಗಲಿ ಬೇಕಾಗಿಲ್ಲ. ಆತ ಚಿಲ್ಲರೆ ಹಾಕುತ್ತೀರೆಂಬ ನಿರೀಕ್ಷೆಯಿಂದ ನಿಮ್ಮ ಕೈಯನ್ನೂ ನೋಡುತ್ತಿಲ್ಲ. ಸಹಾಯಕ್ಕಾಗಿ ಮೊರೆಯಿಡುತ್ತಲೂ ಇಲ್ಲ. ಆದರೆ ಕೈ-ಕಾಲು, ಕಣ್ಣು, ಕಿವಿ ಹೊಂದಿರುವ ಶಕ್ತ ಅಥ್ಲೀಟ್‌ಗಳ ಜತೆ ಸೆಣಸಲು ಸಮಾನ ಅವಕಾಶವನ್ನು ಕೇಳುತ್ತಿದ್ದಾನಷ್ಟೇ. ಆತನ ಹೆಸರು-ಆಸ್ಕರ್ ಪಿಸ್ಟೋರಿಯಸ್.

ಯಾರಾದರೂ ಆತನನ್ನು 'the fastet thing on no legs" ಅಂತ ಇತರರಿಗೆ ಪರಿಚಯ ಮಾಡಿ ಕೊಟ್ಟರೆ ಕೂಡಲೇ ಆತನ ಮುಖ ಅರಳುತ್ತದೆ. ನಮ್ಮಲ್ಲಿ ಸ್ವಲ್ಪ ಊನವಿದ್ದರೂ ವಿಕಲಚೇತನರೆಂದು ಹೇಳಿಕೊಂಡು ಸರಕಾರಿ ಸೌಲಭ್ಯ ಪಡೆದುಕೊಳ್ಳುವವರೇ ತುಂಬಿದ್ದರೆ, ಎರಡೂ ಕಾಲಿಲ್ಲದ ಪಿಸ್ಟೋರಿಯಸ್ ತನ್ನನ್ನು ವಿಕಲಚೇತನ ಎಂದು ಕರೆಯುವುದನ್ನೇ ಇಷ್ಟಪಡುವುದಿಲ್ಲ. I am not disabled I just dont have legs ಎನ್ನುತ್ತಾನೆ! ಅಂತಹ ಆತ್ಮವಿಶ್ವಾಸ, ಗಟ್ಟಿತನ ಆತನಲ್ಲಿ ಕಾಣುತ್ತದೆ.

ಆಸ್ಕರ್ ಪಿಸ್ಟೋರಿಯಸ್‌ನ ಜೀವನದಲ್ಲಿ ದೇವರೇ ವಿಲನ್!:

1986, ನವೆಂಬರ್ 22ರಂದು ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ ಪಿಸ್ಟೋರಿಯಸ್ ನಿಜಕ್ಕೂ ನತದೃಷ್ಟ. ಹುಟ್ಟಿದಾಗಲೇ ಆತನ ಎರಡು ಕಾಲುಗಳಲ್ಲೂ ಮಂಡಿ ಕೆಳಗಿನ ಒಂದು ಮೂಳೆಯೇ (Fibula ಅಥವಾ calf bone) ಇರಲಿಲ್ಲ! ಚಿಂತಿತರಾದ ಅಪ್ಪ-ಅಮ್ಮ ಹತ್ತಾರು ವೈದ್ಯರನ್ನು ಭೇಟಿಯಾದರು. ಸಲಹೆ ಕೇಳಿದರು. ಯಾವ ಪ್ರಯತ್ನಗಳೂ ಫಲ ಕಾಣಲಿಲ್ಲ. ವಿಧಿಯಿಲ್ಲದೆ ಮಗನ ಕಾಲುಗಳನ್ನು ಮಂಡಿ ಹಾಗೂ ಹಿಮ್ಮಡಿ (ankle) ಮಧ್ಯೆ ಕತ್ತರಿಸಬೇಕಾಗಿ ಬಂತು. ಆಗ ಪಿಸ್ಟೋರಿಯಸ್‌ಗೆ ಕೇವಲ 11 ತಿಂಗಳು. ಆತನ ಗೋಳು ಅಷ್ಟಕ್ಕೇ ಮುಗಿಯುವುದಿಲ್ಲ. ಹದಿನೈದು ವರ್ಷ ತುಂಬುವಷ್ಟರಲ್ಲಿ ಪ್ರೀತಿಯ ಅಮ್ಮನನ್ನೂ ಕಳೆದುಕೊಳ್ಳಬೇಕಾಗಿ ಬಂತು. ಅನಾರೋಗ್ಯಕ್ಕೊಳಗಾಗಿದ್ದ ಅಮ್ಮನಿಗೆ ಔಷಧವೇ ವಿಷವಾಯಿತು. ಆದರೂ ಆತ ಧೃತಿಗೆಡಲಿಲ್ಲ. ಇತ್ತ ರಗ್ಬಿ ಆತನ ನೆಚ್ಚಿನ ಆಟ. ಒಮ್ಮೆ ಕೃತಕ ಕಾಲುಗಳಲ್ಲಿ ರಗ್ಬಿ ಆಡುತ್ತಿರುವಾಗ ಕೆಳಗೆ ಬಿದ್ದ ಪಿಸ್ಟೋರಿಯಸ್ ಗಂಭೀರವಾದ ಮಂಡಿನೋವಿಗೆ ಒಳಗಾದ. ಅಲ್ಲಿಗೆ ರಗ್ಬಿ ಮೋಹ ಬಿಡಬೇಕಾಗಿ ಬಂತು. ಆದರೇನಂತೆ ಕಾಲಿಗೆ ಒ ಆಕಾರದ ಕಾರ್ಬನ್ ಫೈಬರ್ ಬ್ಲೇಡ್‌ಗಳನ್ನು ಹಾಕಿಸಿಕೊಂಡ ಆತ ರನ್ನಿಂಗ್‌ನತ್ತ ಗಮನಹರಿಸಿದ.

ಆತ ಎಂತಹ ಪರಿಶ್ರಮಿ ಎಂದರೆ 2004ರಲ್ಲಿ ನಡೆದ ಅಥೆನ್ಸ್ ಪ್ಯಾರಾಲಿಂಪಿಕ್ಸ್‌ನಲ್ಲಿ(ವಿಕಲಚೇತನರಿಗಾಗಿ ನಡೆಯುವ ಒಲಿಂಪಿಕ್ಸ್) ಭಾಗವಹಿಸಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಆಯ್ಕೆಯಾದ. ಅಷ್ಟೇ ಅಲ್ಲ, 17 ವರ್ಷದ ಪಿಸ್ಟೋರಿಯಸ್ 200 ಮೀಟರ್ ಓಟದಲ್ಲಿ ಚಿನ್ನ, 100 ಮೀಟರ್‌ನಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದ. ಮರು ವರ್ಷವೇ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕೈ-ಕಾಲುಗಳಿರುವ ಶಕ್ತ ಅಥ್ಲೀಟ್‌ಗಳ(able-bodied) ಜತೆ ಸೆಣಸಿದ ಆತ 6ನೆಯವನಾಗಿ ಗುರಿಮುಟ್ಟಿದ. ಅದು ಆತನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು. 2007ರ ನ್ಯಾಷನಲ್ ಚಾಂಪಿಯನ್‌ಶಿಪ್‌ನ 400 ಮೀಟರ್ ಓಟದಲ್ಲಿ ಎರಡನೆಯವನಾಗಿ ಗುರಿಮುಟ್ಟಿದ ಪಿಸ್ಟೋರಿಯಸ್‌ಗೆ ಆತ್ಮವಿಶ್ವಾಸದ ಮುಂದೆ ಯಾವ ತಡೆಯೂ ನಿಲ್ಲುವುದಿಲ್ಲ ಎಂಬುದು ಅರಿವಾಯಿತು. ಆನಂತರ ರೋಮ್ ಮತ್ತು ಶೆಫೀಲ್ಡ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಕೂಟದಲ್ಲಿಯೂ ಪಾಲ್ಗೊಂಡ ಆತ, 2008 ರಲ್ಲಿ ನಡೆಯಲಿರುವ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ able-bodies ಅಥ್ಲೀಟ್‌ಗಳ ಜತೆ ಸೆಣಸುವ ಆಸೆ ಇಟ್ಟುಕೊಂಡಿದ್ದಾನೆ.

ಆದರೆ ಕಳೆದ ಭಾನುವಾರ(ಜನವರಿ 14) ಇಂಟರ್‌ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ಸ್ ಫೆಡರೇಷನ್(IAAF) ಆತನ ಆಸೆಗೆ ತಣ್ಣೀರು ಎರಚಿದೆ! ಆತನ ಮಂಡಿಗಳಿಗೆ ಅಳವಡಿಸಲಾಗಿರುವ ಕಾರ್ಬನ್ ಫೈಬರ್ ಬ್ಲೇಡ್‌ಗಳಿಂದ ದೊರೆಯುವ 'ಸ್ಪ್ರಿಂಗ್ ಆಕ್ಷನ್" ಪಿಸ್ಟೋರಿಯಸ್‌ಗೆ ತಾಂತ್ರಿಕ ಅನುಕೂಲಗಳನ್ನು ಕಲ್ಪಿಸಿದೆ. ಹಾಗಾಗಿ ಶಕ್ತ ಅಥ್ಲೀಟ್‌ಗಳ ಜತೆ ಸೆಣಸಲು ಆತನಿಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ!! ಎಂತಹ ಕ್ರೂರ ಜಗತ್ತು?

ಕಾಲಿಲ್ಲವಲ್ಲಾ ಎಂಬ ಕೊರಗನ್ನು ಬಿಟ್ಟು ತಾನು ಯಾರಿಗೂ ಕಡಿಮೆಯಲ್ಲ ಎಂಬ ಆತ್ಮವಿಶ್ವಾಸದ ಜತೆಗೆ ಕೃತಿಯಲ್ಲೂ ತನ್ನ ಸಾಮರ್ಥ್ಯವನ್ನು ತೋರಿರುವ ಸಾಧಕನಿಗೆ ಅವಕಾಶವನ್ನೇ ನಿರಾಕರಿಸಲು ಆತ ಮಾಡಿರುವ ತಪ್ಪಾದರೂ ಏನು? ವಿಕಲಚೇತನನಾಗಿ ಹುಟ್ಟಿದ್ದೇ ತಪ್ಪಾ? ಕಾರ್ಬನ್ ಫೈಬರ್ ಬ್ಲೇಡ್‌ಗಳು ಹೆಚ್ಚುವರಿ ಅನುಕೂಲ ಕಲ್ಪಿಸಿದೆ ಎಂಬ ವಾದದಲ್ಲಿ ಯಾವ ಹುರುಳಿದೆ? ಒಂದು ವೇಳೆ, ಬ್ಲೇಡ್‌ಗಳಿಂದ ಒಂದಿಷ್ಟು ಅನುಕೂಲಗಳಿದ್ದರೂ ಶಕ್ತ ಮನುಷ್ಯನಿಗಿರುವಷ್ಟು ಅನುಕೂಲಗಳು ಸಿಕ್ಕಿಯಾವೆ? ಕಾರ್ಬನ್ ಬ್ಲೇಡ್‌ಗಳು ಎಷ್ಟೇ ಅನುಕೂಲ ಕಲ್ಪಿಸಿದರೂ ದೇಹದ ಅಂಗವಾಗಿರುವ ಕಾಲುಗಳಂತೆ ಬ್ಯಾಲೆನ್ಸ್ ಮಾಡಲು ಸಾಧ್ಯವಿದೆಯೇ? ಶಕ್ತ ಕಾಲುಗಳಲ್ಲಿ ದೊರೆಯುವ ಆರಂಭಿಕ ವೇಗ ಕೃತಕ ಕಾಲುಗಳಲ್ಲಿ ಸಿಗಲು ಸಾಧ್ಯವೆ? ಅನುಕೂಲದ ಬಗ್ಗೆ ಮಾತನಾಡುತ್ತಿರುವವರಿಗೆ ಇಂತಹ ಅನಾನುಕೂಲಗಳೇಕೆ ಕಾಣುತ್ತಿಲ್ಲ?

2004ರಿಂದೀಚೆಗೆ transgender(ಹಿಜಡಾ) ಅಥ್ಲೀಟ್‌ಗಳಿಗೂ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗಿದೆ. ಹಾಗಿರುವಾಗ ದೈಹಿಕ ಊನತೆಯನ್ನು ಮೀರಿ ಶಕ್ತ ಅಥ್ಲೀಟ್‌ಗಳ ಜತೆ ಸೆಣಸಲು ಮುಂದಾಗಿರುವ ವ್ಯಕ್ತಿಗೆ ಸ್ಪರ್ಧಿಸುವ ಅವಕಾಶ ನೀಡಿದ ಮಾತ್ರಕ್ಕೆ ಅಂತಾರಾಷ್ಟ್ರೀಯ ಅಮೆಚೂರ್ ಅಥ್ಲೆಟಿಕ್ ಒಕ್ಕೂಟಕ್ಕೆ ಆಗುವ ನಷ್ಟವಾದರೂ ಏನು? ಉದ್ದೀಪನಾ ಮದ್ದು ಸೇವಿಸಿ ಗೆದ್ದ ಮಾರಿಯನ್ ಜೋನ್ಸ್ ಅವರಂತಹ ಕಳ್ಳಿಯರಿಂದ ಆಟದ 'Purity" ಹಾಳಾಗುತ್ತದೆಯೇ ಹೊರತು ಒಲಿಂಪಿಕ್ಸ್‌ನಲ್ಲಿ ಪಾಲ್ಗೊ ಳ್ಳಲು ಬೇಕಾದ ಎಲ್ಲ ಅರ್ಹತೆ ಹೊಂದಿರುವ ವಿಕಲಚೇತನ ಸಾಧಕನೊಬ್ಬನಿಗೆ ಅವಕಾಶ ನೀಡಿದರೆ ಯಾವ ನಷ್ಟವೂ ಆಗುವುದಿಲ್ಲ. ಅನುಕಂಪದ ಬದಲು ಸಮಾನ ಅವಕಾಶ ನೀಡಿ ಅಂತ ಕೇಳುತ್ತಿರುವ ಪಿಸ್ಟೋರಿಯಸ್‌ನ ಅಂತರಂಗದ ತುಡಿತ ನಮ್ಮ ನಾಗರಿಕ ಸಮಾಜಕ್ಕೇಕೆ ಅರ್ಥವಾಗುವುದಿಲ್ಲ?

ಅಷ್ಟಕ್ಕೂ ಪಿಸ್ಟೋರಿಯಸ್ ಸಾಮಾನ್ಯ ಸಾಧಕನೇನಲ್ಲ. 100 ಮೀಟರನ್ನು 10.91 ನಿಮಿಷಗಳಲ್ಲಿ, 200 ಮೀಟರನ್ನು 21.58 ನಿಮಿಷ ಹಾಗೂ 400ಮೀಟರನ್ನು 46.34 ನಿಮಿಷಗಳಲ್ಲಿ ಕ್ರಮಿಸಿ ಪ್ಯಾರಾಲಿಂಪಿಕ್ಸ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾನೆ. ಇಂತಹ ಸಾಧನೆಯನ್ನು ಮಾಡಲು ನೂರು ಕೋಟಿ ಜನಸಂಖ್ಯೆ ಹೊಂದಿರುವ ಭಾರತದ ಶಕ್ತ ಅಥ್ಲೀಟ್‌ಗಳಿಂದಲೂ ಸಾಧ್ಯವಾಗಿಲ್ಲ. 1960ರ ರೋಮ್ ಒಲಿಂಪಿಕ್ಸ್‌ನಲ್ಲಿ ಕೂದಲೆಳೆಯಂತರದಲ್ಲಿ 400 ಮೀಟರ್‌ನಲ್ಲಿ ಕಂಚನ್ನು ಕಳೆದುಕೊಂಡ ಭಾರತದ ಖ್ಯಾತ ಅಥ್ಲೀಟ್ ಮಿಲ್ಕಾ ಸಿಂಗ್ ಅವರು ಮೊದಲ ಯತ್ನದಲ್ಲಿ ತೆಗೆದುಕೊಂಡ ಸಮಯ 47.6 ನಿಮಿಷ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದಕ್ಕೂ ಹೆಣಗುತ್ತಿರುವ ನಮ್ಮ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್‌ಗಳಾದ ಅನಿಲ್ ಕುಮಾರ್, ಕೆ.ಎಂ. ಬಿನು ಇವರಿಗೆ ಹೋಲಿಸಿದರೆ ಕಾಲಿಲ್ಲದ ಪಿಸ್ಟೋರಿಯಸ್‌ನೇ ಮೇಲು ಅಂತ ಅನಿಸುವುದಿಲ್ಲವೆ? ಇಂತಹ ಪಿಸ್ಟೋರಿಯಸ್‌ಗೆ ಓಡುವ ಅವಕಾಶವನ್ನೇ ನಿರಾಕರಿಸುವುದು ಎಷ್ಟರಮಟ್ಟಿಗೆ ಸರಿ?

ಇದು ಒಬ್ಬ ವಿಕಲಚೇತನ ಓಟಗಾರನ ಪ್ರಶ್ನೆಯಲ್ಲ. ವಿಕಲಚೇತನರ ಬಗ್ಗೆ ಸಮಾಜ ಹೊಂದಿರುವ ಮನಸ್ಥಿತಿ ಎಂಥದ್ದೆಂಬುದನ್ನು ತೋರಿಸುತ್ತದಷ್ಟೇ. ನಾವು ತಾರತಮ್ಯರಹಿತ ಹಾಗೂ ಐಕ್ಯ ಸಮಾಜ ನಿರ್ಮಾಣದ ಬಗ್ಗೆ ಮಾತನಾಡುತ್ತೇವೆ. ಆದರೆ ಅಂಗಾಂಗಗಳು ಊನಗೊಂಡಿವೆ ಎಂಬ ಕಾರಣಕ್ಕೆ ಕೆಲವರನ್ನು ದೂರವಿಡುವುದು, ಅವರಿಗಾಗಿಯೇ ಪ್ರತ್ಯೇಕ ಆಟೋಟ ನಡೆಸುವುದು, ಅಂಗಲಾಚಿದರೂ ಅವಕಾಶ ನೀಡದೇ ಇರುವುದೂ ಕೂಡ ತಾರತಮ್ಯವೇ ಅಲ್ಲವೆ? ಅಷ್ಟಕ್ಕೂ disablity ಅಂದರೆ ಏನು? ಒಂದೆರಡು ದೈಹಿಕ ಊನಗಳಿವೆ ಎಂಬ ಮಾತ್ರಕ್ಕೆ ಅವರನ್ನು ಬಲಹೀನರು ಎನ್ನಲಾದೀತೆ? “ಕೃತಕ ಕಾಲುಗಳನ್ನು ಹೊಂದುವುದರ ಅನುಭವ ಹೇಗಿರುತ್ತದೆ ಎಂದು ಜನ ನನ್ನನ್ನು ಕೇಳುತ್ತಾರೆ. ಆದರೆ ನನಗೇನೂ ಗೊತ್ತಿಲ್ಲ ಎನ್ನುತ್ತೇನೆ. ಅಷ್ಟಕ್ಕೂ, ನಿಜವಾದ ಕಾಲುಗಳನ್ನು ಹೊಂದಿರುವುದರ ಅನುಭವ ಹೇಗಿರುತ್ತದೆ ಅಂತ ಹೇಳಿ ನೋಡೋಣ? ನಾನು ಹುಟ್ಟುವಾಗಲೇ ಹೀಗಿದ್ದೆ ಮತ್ತು ನನಗೆ ಗೊತ್ತಿರುವುದೂ ಅಷ್ಟೇ" ಎನ್ನುತ್ತಾನೆ ಪಿಸ್ಟೋರಿಯಸ್.

ಅವನೆಂದೂ ತನ್ನ ಅಸಹಾಯಕತೆಯ ಬಗ್ಗೆ ಕೊರಗುವುದಿಲ್ಲ, ಇತರರನ್ನು ಶಪಿಸುವುದಿಲ್ಲ. ನನಗೇಕೆ ಇಂತಹ ಸ್ಥಿತಿಯನ್ನು ಕೊಟ್ಟೆ ಅಂತ ದೇವರನ್ನೂ ದೂರುವುದಿಲ್ಲ. “ನನ್ನ ಅಪ್ಪ-ಅಮ್ಮನಿಗಿಂತ ಒಳ್ಳೆಯ ಪೋಷಕರು ಬೇಕಿತ್ತು ಅಂತ ಖಂಡಿತ ನಾನು ಅಂದುಕೊಳ್ಳುವುದಿಲ್ಲ. ನನ್ನ ಹಿರಿಯ ಸಹೋದರ ಕಾರ್ಲ್ ಹಾಗೂ ಸೋದರಿ ಏಮಿಯನ್ನು ಹೇಗೆ ಬೆಳೆಸಿದರೋ ಅಷ್ಟೇ ಪ್ರೀತಿ, ಆದರಗಳನ್ನು ನನಗೂ ಕೊಟ್ಟಿದ್ದಾರೆ. ಒಂದು ವೇಳೆ ನನಗೂ ವಿಕಲಚೇತನ ಮಗು ಜನಿಸಿದರೆ ನನ್ನ ಅಪ್ಪ-ಅಮ್ಮನನ್ನೇ ಮಾದರಿಯಾಗಿಟ್ಟುಕೊಳ್ಳುತ್ತೇನೆ. ನನಗೆ ಅವರು ಕೊಟ್ಟಷ್ಟೇ ಪ್ರೀತಿಯನ್ನು ನನ್ನ ಮಗುವಿಗೂ ಧಾರೆಯೆರೆಯುತ್ತೇನೆ" ಎನ್ನುವ ಪಿಸ್ಟೋರಿಯಸ್‌ನಂತಹ ಮಹಾನ್ ಸಾಧಕನಿಗೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನೇ ನಿರಾಕರಿಸಲಾಗುತ್ತಿದೆಯೆಂದರೆ ಏನರ್ಥ? ಕೈ-ಕಾಲು, ಕಣ್ಣು-ಕಿವಿ, ಮೂಗು-ಬಾಯಿ ಎಲ್ಲವನ್ನೂ ಹೊಂದಿದ್ದರೂ ನಮ್ಮ ನಾಗರಿಕ ಸಮಾಜದ ಮನಸ್ಸೇ ಊನಗೊಂಡಿದೆ ಎಂದನಿಸುವುದಿಲ್ಲವೆ?

(ಸ್ನೇಹಸೇತು :ವಿಜಯ ಕರ್ನಾಟಕ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more