ಇಲ್ಲಿ 'ಕತ್ತೆ'ಗಳು ಮಾತ್ರ ಉಚ್ಚೆ ಹೊಯ್ಯುತ್ತವೆ, ಛೀ!

Posted By:
Subscribe to Oneindia Kannada

ತೀನಂಶ್ರೀ ವೃತ್ತ ಎಲ್ಲಿದೆ ಗೊತ್ತಾ? ತೀನಂಶ್ರೀ ಹೆಸರೇನೋ ಕೇಳಿದ್ದೇನೆ, ಆದರೆ ಆ ವೃತ್ತ ಎಲ್ಲಿದೆಯೋ ಗೊತ್ತಿಲ್ಲ ಎಂದು ಬೆಂಗಳೂರಿನ ಹಳಬರು ಕೂಡ ತಲೆ ಕೆರೆದುಕೊಳ್ಳಲು ಆರಂಭಿಸುತ್ತಾರೆ. ಅದು ಮತ್ತಾವುದೂ ಅಲ್ಲ, ಸೌತ್ ಎಂಡ್ ಸರ್ಕಲ್ ಎಂಬ ಆಂಗ್ಲ ಹೆಸರಿನ ವೃತ್ತ.

ತೀನಂಶ್ರೀ ವೃತ್ತ ಅಂತ ಹಳದಿ ಬಣ್ಣದ ಬೋರ್ಡ್ ಬರೆದಿದ್ದರೂ ಅದು ಅಳಿಸಿಹೋಗಿದ್ದು, ಅದ್ಹೇಗೋ ಸೌತ್ ಎಂಡ್ ಸರ್ಕಲ್ ಎಂಬ ಹೆಸರೇ ಉಳಿದುಕೊಂಡಿದೆ. ಬೆಂಗಳೂರಿನ ಮಹಾವೃತ್ತಗಳಲ್ಲಿ ಇದೂ ಒಂದು. ಎನ್ಆರ್ ಕಾಲೋನಿ, ಕೃಷ್ಣರಾವ್ ಪಾರ್ಕ್, ಲಾಲ್ ಬಾಗ್, ಮಾಧವನ್ ಪಾರ್ಕ್, ಉಪಾಹಾರ ದರ್ಶಿನಿ, ಬನಶಂಕರಿ ಕಡೆಯಿಂದ ಆರು ರಸ್ತೆಗಳು ಬಂದು ಸೇರುವ ಸ್ಥಳ.

ನಗರದ ಹೃದಯ ಭಾಗದಲ್ಲಿರುವ ಈ ಸ್ಥಳಕ್ಕೆ ಒಂದು ಕಳೆಯಿದೆ. ಅಂಬರ ಚುಂಬನ ಗಡಿಯಾರ ಗಂಟೆಗೊಮ್ಮೆ ಢಣ್ ಢಣ್ ಹೊಡೆದುಕೊಳ್ಳುತ್ತಿರುತ್ತದೆ. ಅಲ್ಲೇ ಇರುವ ರಾಜ್ ಪುತ್ಥಳಿ ಅಡ್ಡಾಡುವವರನ್ನು ಆಕರ್ಷಿಸುತ್ತಿರುತ್ತದೆ. ಪಕ್ಕದಲ್ಲೇ ನಮ್ಮ ಮೆಟ್ರೋ ಕಾಮಗಾರಿ ಸದ್ಯಕ್ಕೆ ನಿಂತುಹೋಗಿದೆ. ಅದರಾಚೆ ತೀನಂಶ್ರೀ ಪುತ್ಥಳಿ ದಿವ್ಯನಿರ್ಲಕ್ಷ್ಯಕ್ಕೆ ಎಡೆಯಾಗಿ ಸ್ಥಿತಪ್ರಜ್ಞತೆಯಿಂದ ಕುಳಿತಿದೆ.

ಇಲ್ಲಿ ಪ್ರಸ್ತಾಪಿಸಬೇಕಾಗಿರುವ ವಿಷಯ ಇದಾವುದಕ್ಕೂ ಸಂಬಂಧಿಸಿದ್ದು ಅಲ್ಲವೇ ಅಲ್ಲ. ಯಾವಾಗಲೂ ಗಿಜಿಗುಡುತ್ತಿರುವ ಬೆಂಗಳೂರು ದಕ್ಷಿಣ ವಿಭಾಗ ಡೆಪ್ಯೂಟಿ ಕಮಿಷನರ್ ಕಚೇರಿ ಎದುರಿಗೆ ಒಂದು ವಿದ್ಯುತ್ ವಿತರಣಾ ಗ್ರಿಡ್ ಇದೆ. ಅದರ ಹಿಂದಿನ ಜಾಗವೇ, ಸದ್ಯಕ್ಕೆ ಮಾನವ ಜನ್ಮ ಎತ್ತಿ ಪುರುಷರಾಗಿ 'ಸಾರ್ಥಕ ಬದುಕು' ಬಾಳುತ್ತಿರುವ ಕೆಲ ಪ್ರಾಣಿಗಳಿಗೆ ಅದೇ ಮೂತ್ರವಿಸರ್ಜನಾ ಸ್ಥಳವಾಗಿದೆ. [ಬಸವನಗುಡಿಯಲ್ಲಿ ಮೊದಲ ಇ ಟಾಯ್ಲೆಟ್]

Only human donkeys urinate here at South End Circle

ಕಮಿಷನರ್ ಕಚೇರಿಯ ಪಕ್ಕದಲ್ಲೇ ಸುರಾನಾ ಕಾಲೇಜು. ದಿನನಿತ್ಯ ಜೀನ್ಸ್ ಟೀಶರ್ಟ್, ಮಿಡಿ, ಚೂಡಿದಾರ್ ಧರಿಸಿರುವ ಹಲವಾರು ವಿದ್ಯಾರ್ಥಿನಿಯರು ಮೂಗು ಮುಚ್ಚಿಕೊಂಡು ಆ ಗ್ರಿಡ್ ಪಕ್ಕದಲ್ಲೇ ಅಡ್ಡಾಡುತ್ತಿರುತ್ತಾರೆ. ಅದಾವುದೂ ಲೆಕ್ಕವಿಲ್ಲದಂತೆ ಲಜ್ಜೆಗೆಟ್ಟ ಕೆಲ ಜನರು ಪ್ಯಾಂಟಿನ ಜಿಪ್ ಜರ್ರನೆ ಎಳೆದು ತಮ್ಮ ಕೆಲಸ ಮುಗಿಸಿ, ನಡೆಯುತ್ತಲೇ ಜಿಪ್ ಎಳೆದುಕೊಂಡು ಹೋಗುತ್ತಿರುತ್ತಾರೆ.

ಒಬ್ಬೇ ಒಬ್ಬ ಕೂಡ 'ಇಲ್ಯಾಕಯ್ಯ ಮೂತ್ರ ವಿಸರ್ಜನೆ ಮಾಡುತ್ತಿದ್ದೀಯಾ, ನಾಚಿಕೆಯಾಗಲ್ವಾ?' ಎಂದು ಧೈರ್ಯವಾಗಿ ಕೇಳುವುದಿಲ್ಲ. ಅಂಥವರಿಗೆ ಬುದ್ಧಿವಾದ ಹೇಳಿ ಪ್ರಯೋಜನವೂ ಇಲ್ಲ ಎಂಬುದು ಕೂಡ ಎಲ್ಲರಿಗೂ ತಿಳಿದಿರುವ ಸಂಗತಿ. ಅಲ್ಲಿ, ಮೋದಿ ಜಗತ್ತಿನಾದ್ಯಂತ ಸ್ವಚ್ಛತೆಯ ಬಗ್ಗೆ ಭಾಷಣ ಮಾಡುತ್ತಿರುವಾಗ, ಜನರು ಕೊಳಕನ್ನು ತಲೆಯಲ್ಲಿ ತುಂಬಿರುವಾಗ ಸ್ವಚ್ಛತೆಯ ಕನಸು ಸಾಕಾರವಾಗುವುದಾದರೂ ಹೇಗೆ?

ಇಂಥ ಮೋಹಕ ದೃಶ್ಯಗಳನ್ನು ಸೌತ್ ಎಂಡ್ ಸರ್ಕಲ್ ನಲ್ಲಿ ಮಾತ್ರವಲ್ಲ ಬೆಂಗಳೂರಿನ ಎಲ್ಲೆಂದರಲ್ಲಿ ಕಾಣಬಹುದು. ಬಸ್ ಸ್ಟಾಪ್ ಪಕ್ಕದ ಗೋಡೆಗಳು ವರ್ಷಪೂರ್ತಿ ಒದ್ದೆಯಾಗಿಯೇ ಇರುತ್ತವೆ. ಸಾಲದೆಂಬಂತೆ, ಹರಿದುಬಂದ ಮೂತ್ರ ಅದರ ಹತ್ತಿರ ಕೂಡ ಅಡ್ಡಾಡದಂತಹ ಪರಿಸ್ಥಿತಿ ನಿರ್ಮಾಣ ಮಾಡಿರುತ್ತದೆ. [ಎರಡು ಗುರಿ ಬೆನ್ನತ್ತಿದ ದಿವ್ಯ ಸ್ಪಂದನ]

ಇಂಥ ಪ್ರದೇಶಗಳಲ್ಲಿ 'ಇಲ್ಲಿ ಕತ್ತೆಗಳು ಉಚ್ಚೆ ಹೊಯ್ಯುತ್ತವೆ' ಎಂದು ಬೋರ್ಡ್ ತಗುಲಿ ಹಾಕಿದರೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ, ಬೋರ್ಗಲ್ಲ ಮೇಲೆ ಮಳೆ ಸುರಿಸಿದಂತೆ. ನಗರದ ಹಲವಾರು ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದರೂ, ಅಲ್ಲಿರುವ ಸ್ವಚ್ಛತೆ ಗಮನಿಸಿದರೆ ಬಳಸುವವರು ಕಡಿಮೆಯೇ. ಬಿಬಿಎಂಪಿಗೆ ಮೂತ್ರದ ವಾಸನೆ ಬಡಿಯುತ್ತಿದೆಯಾ?

ಇನ್ನು, ಗಾರ್ಡನ್ ಸಿಟಿ, ಐಟಿ ಸಿಟಿ ಎಂದೆಲ್ಲ ಖ್ಯಾತಿ ಗಳಿಸಿರುವ ಬೆಂಗಳೂರು ದೇಶದ ನಾಲ್ಕನೇ ಅತೀಹೊಲಸು ನಗರ ಎಂಬ ಕುಖ್ಯಾತಿಗೆ ಕಾರಣವಾಗಿದ್ದರಲ್ಲಿ ಅಚ್ಚರಿಯೇ ಇಲ್ಲ. ಕೋಲ್ಕತಾ, ಮುಂಬೈ ಮತ್ತು ಚೆನ್ನೈ ನಂತರ ನಾಲ್ಕನೇ ಸ್ಥಾನವನ್ನು ಗಳಿಸಲು ಬೆಂಗಳೂರು ಯಶಸ್ವಿಯಾಗಿದೆ. ಇದಕ್ಕೆ ಕಾರಣರಾರು? ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾ ಅಥವಾ ಹೊಲಸುಗೆಡವುತ್ತಿರುವ ಜನರಾ?

ಚಿತ್ರಗಳನ್ನು ಕಳಿಸಿ : ಓದುಗರೆ, ಕಂಡಕಂಡಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಕಂಡಲ್ಲಿ ಉಗಿಯುವುದು, ಬೇಕಾಬಿಟ್ಟಿ ಕಸ ಚೆಲ್ಲುವುದು... ಮುಂತಾದ ಬೆಂಗಳೂರನ್ನು ಅಂದಗೆಡಿಸುವ ದೃಶ್ಯ ನಿಮಗೆ ಎಲ್ಲಿಯಾದರೂ ಕಂಡರೆ ಅದರ ಫೋಟೋ ಕ್ಲಿಕ್ಕಿಸಿ, ನಾಲ್ಕು ಸಾಲು ವಿವರ ಬರೆದು ಈ ವಿಳಾಸಕ್ಕೆ ಕಳಿಸಿ. ಬೆಂಗಳೂರು ನಗರವನ್ನು ಇನ್ನಷ್ಟು ಸುಂದರವಾಗಿಸೋಣ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Only donkeys urinate here at South End Circle, Bengaluru. A space behind transformer, opposite Rajkumar statue, has turned public urinal for many males. Everywhere in Bengaluru we can see such ugly scene. BBMP is not smelling the stink.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ