ದೇಹಕ್ಕೆ ಎಂಬತ್ತು, ಮನಸ್ಸಿಗೆ ಇನ್ನೂ ಇಪ್ಪತ್ತು!
(ಮಾಸ್ಟರ್ ಹಿರಣ್ಣಯ್ಯ ಸಂದರ್ಶನದ 5ನೇ ಭಾಗ)
ಒನ್ಇಂಡಿಯಾ : ಇಂದಿನ ರಂಗಭೂಮಿ ಹೇಗಿದೆ? ಇಂದಿನ ನಾಟಕಗಳನ್ನು ನೋಡ್ತೀರಾ? ವೃತ್ತಿರಂಗಭೂಮಿ ಸ್ಥಿತಿಗತಿ ಹೇಗಿದೆ?
ಹಿರಣ್ಣಯ್ಯ : ಇಂದಿನ ರಂಗಭೂಮಿಯನ್ನು ಉಳಿಸಿ, ಬೆಳೆಸಿ, ಗೌರವ ತಂದುಕೊಟ್ಟಿದ್ದೇ ವಿಲಾಸಿ ರಂಗಭೂಮಿ. ಅಂದು ಹಲವಾರು ವೃತ್ತಿ ಕಂಪನಿಗಳಿದ್ದವು, ಗೌರವ ಇದ್ದಿದ್ದಿಲ್ಲ. ರಂಗಭೂಮಿಗೆ ಕಳೆದುಹೋಗಿರುವ ಮರ್ಯಾದೆಯನ್ನು ತಂದುಕೊಟ್ಟಿದ್ದು ವಿಲಾಸಿ ರಂಗಭೂಮಿ. ವೃತ್ತಿ ಕಂಪನಿಗಳು ಸುತ್ತಾಡಬೇಕು, ಜನರ ಅಭಿರುಚಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಬೇಕು. ಉತ್ತರ ಕರ್ನಾಟಕ, ಮೈಸೂರು, ಮಂಗಳೂರು ಭಾಷೆ ಬೇರೆ, ಅಲ್ಲಿನ ಗ್ರಾಮಾಂತರ ಭಾಷೆಯೂ ಬೇರೆ.
ಅವರಿಗೆ ಹಿತವಾಗುವ ನಾಟಕ ಆಡಬೇಕು. ವೃತ್ತಿ ರಂಗಭೂಮಿಯಲ್ಲಿ ವಿಲಾಸಿಯಲ್ಲಿರುವ ವೃತ್ತಿಪರತೆ ಬರಬೇಕು. ವೃತ್ತಿಯಲ್ಲಿ ವಿಲಾಸಿಪರತೆ ಬರಬೇಕು. ವಿಲಾಸಿ ಅಂದ್ರೇನು? ದುಡ್ಡಿನ ನಿರೀಕ್ಷೆ ಮಾಡದೆ ಸೇವಾಮನೋಭಾವ, ಅರ್ಪಣಾ ಮನೋಭಾವದಿಂದ ಚೆನ್ನಾಗಿ ಅಭ್ಯಾಸ ಮಾಡಬೇಕು. ಇಂಥ ಮನೋಭಾವ ವಿಲಾಸಿಯಲ್ಲಿದೆ ನಮ್ಮಲ್ಲಿಲ್ಲ. ಎರಡೂ ಎಕ್ಸ್ ಚೇಂಜ್ ಆದಾಗ ಮಾತ್ರ ರಂಗಭೂಮಿ ಬೆಳೆಯಲು ಸಾಧ್ಯ.

ಒನ್ಇಂಡಿಯಾ : ಇಂಥ ವೃತ್ತಿಪರ ವಿಲಾಸಿ ರಂಗಭೂಮಿ ಬೆಂಗಳೂರು ಮತ್ತು ಮೈಸೂರಿನಂಥ ನಗರಗಳಲ್ಲಿ ಮಾತ್ರವಿದೆಯಾ?
ಹಿರಣ್ಣಯ್ಯ : ಇಲ್ಲ, ರಂಗಭೂಮಿ ಹುಟ್ಟಿಬೆಳೆದಿದ್ದೇ ಗ್ರಾಮಾಂತರದಲ್ಲಿ. ಗ್ರಾಮದ ಜನರಿಗೆ ಚೆನ್ನಾಗಿ ಮಾತಾಡಲು, ಹಾಡಲು ಬರಲಿಕ್ಕಿಲ್ಲ. ಅಲ್ಲಿ ಮಾಂಸ ಮಡ್ಡಿ ಎರಡೂ ಇರಬಹುದು. ಆದರೆ, ಅವರಲ್ಲಿ ನಿಷ್ಕಲ್ಮಶ ಭಕ್ತಿಯಿದೆ.
ಒನ್ಇಂಡಿಯಾ : ಇದು ಇಂಟರ್ನೆಟ್ ಜಮಾನಾ. ಕಾಲಕ್ಕೆ ತಕ್ಕಂತೆ ನಿಮ್ಮಲ್ಲಿ ನೀವು ಹೇಗೆ ಬದಲಾವಣೆ ಮಾಡಿಕೊಂಡಿದ್ದೀರಿ?
ಹಿರಣ್ಣಯ್ಯ : ಮೊದಲು ಚೌರ ಮಾಡಿಸಿಕೊಳ್ಳಲು ಕಸಬುದಾರರ ಬಳಿ ಹೋಗುತ್ತಿದ್ದೆವು, ನಂತರ ರೇಜರ್ ಸೃಷ್ಟಿಯಾಯಿತು, ನಂತರ ಡಬಲ್ ಬ್ಲೇಡ್ ರೇಜರ್ ಬಂದಿದೆ, ಈಗ ಎಲೆಕ್ಟ್ರಾನಿಕ್ ರೇಜರ್ ಬಂದಿದೆ. ಹಿಂದಿನದನ್ನೂ ಉಳಿಸಿಕೊಳ್ಳಬೇಕು, ಇಂದಿನದನ್ನೂ ಕಳೆದುಕೊಳ್ಳಬಾರದು. ಈಗ ನೋಡಿ ನಾಟಕ ಬರೆಯಲು, ನಾಟಕದ ಫೋಟೋ ಸ್ಕ್ಯಾನ್ ಮಾಡಲು ಕಂಪ್ಯೂಟರನ್ನೇ ಬಳಸುತ್ತಿದ್ದೇನೆ.
ಒನ್ಇಂಡಿಯಾ : ಇಂದಿನ ಯುವಪೀಳಿಗೆಯೊಂದಿಗೆ ಹೇಗೆ ಕನೆಕ್ಟ್ ಆಗುತ್ತಿದ್ದೀರಿ?
ಹಿರಣ್ಣಯ್ಯ : ನನಗೆ ಎಂಬತ್ತರ ಮುದುಕನಾಗಿರಬಹುದು. ಆದರೆ, ಮನಸ್ಸಿಗೆ ಇನ್ನೂ ಇಪ್ಪತ್ತೇ ವಯಸ್ಸು. ತಿಂಗಳ ಹದಿನೈದು ದಿನ ಯುವಕರು, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತೇನೆ. ಅವರಲ್ಲಿ ದೇಶಭಕ್ತಿ ಮೂಡುವಂತೆ ಚರ್ಚೆ ನಡೆಸುತ್ತೇನೆ. ಜೊತೆಗೆ, ನಮ್ಮ ಇಷ್ಟು ವರ್ಷಗಳ ಸೇವೆಯನ್ನು ಇಂದಿನ ಜನರಿಗೆ ತಿಳಿಸುವ ಉದ್ದೇಶದಿಂದ ನಮ್ಮದೇ ವೆಬ್ ಸೈಟ್ ಕೂಡ ತಯಾರಾಗುತ್ತಿದೆ. ವೆಬ್ ಸೈಟಿಗೆ ಫೋಟೋ, ಹಾಡು, ಡೈಲಾಗು, ವಿಡಿಯೋಗಳನ್ನು ಸೇರಿಸುವ ಕೆಲಸವನ್ನು ನನ್ನ ಮಕ್ಕಳು ಮತ್ತು ಮೊಮ್ಮಕ್ಕಳೇ ಮಾಡುತ್ತಿದ್ದಾರೆ.












Click it and Unblock the Notifications